ಗುರುಗಳು ಹೇಳ್ತಿದ್ದುದು ನೆನಪಾಗ್ತದ..

ಚಿತ್ರಾ ಸಂತೋಷ್

‘ಹಾಡ್ತೀಪಾ ಖರೆ. ಆದ್ರ ಹಾಡಾಕ ಇಷ್ಟು ಲಗೂನ ಹೋಗ್ಬೇಡಾ. ಯಾಕಂದ್ರ ನಿನ್ನ ಅಭ್ಯಾಸಕ್ಕೆ ತ್ರಾಸ ಆಗ್ತದ. ಅದಕ್ಕ ನೀ ಏನು ಮಾಡು ಅಂದ್ರ ಎಂಟ್ಹತ್ತು ವರ್ಷ ಛೊಲೋ ಅಭ್ಯಾಸ ಮಾಡು. ಇದರ ಸಂಗಾತ ಶ್ರದ್ಧೆ, ವಿಧೇಯತೆ ಎರಡನ್ನೂ ಬೆಳೆಸಿಕೊಂಡು ಬಾ. ಮತ್ತ ಗುರುಗಳ ಸೇವಾನೂ ಮಾಡೋದು ಬಿಡಬೇಡ. ಆಮೇಲಿಂದ ಕಛೇರಿ ಕೊಡುವಿಯಂತೆ. ಅವಾಗ್ ನೋಡ್… ನೀನು ಇನ್ನೂ ಎಷ್ಟು ಛೊಲೋ ಹಾಡ್ತೀದಿ ಅಂತ ನಿನಗ ಗೊತ್ತಾಗ್ತದ… ಅಂತ ನಮ್ ಗುರುಗಳು ಹೇಳ್ತಿದ್ದುದು ನೆನಪಾಗ್ತದ…

ಮೂರ್ನಾಲ್ಕು ವರ್ಷಗಳ ಹಿಂದೆ ಪಂ. ವೆಂಕಟೇಶ್ ಕುಮಾರ್ ಅವರು ಬೆಂಗಳೂರಿನ ಎನ್ ಆರ್ ಕಾಲನಿಯ ರಾಮಮಂದಿರದಲ್ಲಿ ನಡೆದ ಕಛೇರಿಯಲ್ಲಿ ಹೇಳಿದ್ದರು. ಅಂಥ ಶಿಸ್ತಿನ ಸಂಗೀತಭ್ಯಾಸ ಮಾಡಿದವರು ಇವರು. ಎಲ್ಲರಿಗೆ ಗೊತ್ತೇ ಇದೆ ಇವರು ಬೆಳೆದಿದ್ದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ. ಅಪ್ಪ ಜನಪದ ಗಾಯಕರು. ತೀರಾ ಬಡತನದ ಬದುಕು.

ಊಟಕ್ಕೂ ಕಷ್ಟವಿದ್ದ ದಿನಗಳನ್ನು ವೆಂಕಟೇಶ್ ಕುಮಾರ್ ಹಲವಾರು ಕಡೆ ಹೇಳಿಕೊಂಡಿದ್ದಿದೆ. ಇರಲಿ, ಕಷ್ಟದ ದಿನಗಳು ಒಳ್ಳೆಯ ಪಾಠಗಳನ್ನು ಕಲಿಸುವುದು, ಬದುಕನ್ನು ಬೆಳಗುವುದು ದಿಟ!ಆದರೆ ವೆಂಕಟೇಶ್ ಕುಮಾರ್ ಅವರಿಗೆ ಸಂಗೀತದಷ್ಟು ಇಷ್ಟದ್ದು ಬೇರೇನೂ ಇರಲಿಲ್ಲ. ಹಾಗಾಗಿ ಶಾಲೆ 5ನೇ ತರಗತಿಗೆ ನಿಂತುಹೋಯಿತಂತೆ. ಅವರ ಮಾವ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದ್ದರು.

ಹುಡುಗ ಶಾಲೆ ಕಲಿಯದಿದ್ರೂ ಸಂಗೀತ ಕಲಿಯಲಿ ಎಂದು!ಒಂದೆಡೆ ಹೇಳಿಕೊಂಡಿದ್ದರು ವೆಂಕಟೇಶ್ ಕುಮಾರ್, ಬೆಳಗ್ಗೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಸಂಗೀತ ಯಜ್ಞ ಆರಂಭವಾಗುತ್ತಿತ್ತು. ಪ್ರಾರ್ಥನೆಗೆ ಹಾಜರಾಗದಿದ್ದರೆ ಅಂಥವರಿಗೆ ಊಟನೂ ಸಿಗುತ್ತಿರಲಿಲ್ಲ. ಪ್ರಾರ್ಥನೆ ನಂತರ ಮೂರು ಗಂಟೆಗಳ ರಿಯಾಜ್. ಬಳಿಕ ಸಂಜೆ ಗುರುಗಳ ಎದುರು ಎರಡು ಗಂಟೆ ಪಾಠ. ಮತ್ತೆ ರಾತ್ರಿ ಎರಡು ಗಂಟೆ ಪ್ರಾರ್ಥನೆ.

ಈ ಎಲ್ಲಾ ಕಟ್ಟುನಿಟ್ಟಾದ ನಿಯಮಗಳಿಗೆ ಬದ್ಧರಾಗಿರಬೇಕಿತ್ತು. ಇಂಥ ಶಿಸ್ತುಬದ್ಧ ವಾತಾವರಣದಲ್ಲಿ 12 ವರ್ಷ ಕಲಿತೆ’ ಎಂದು! ಒಂದು ಅವಕಾಶ ಒಬ್ಬ ಕಲಾವಿದನನ್ನು ಇಡೀ ಜಗತ್ತಿಗೆ ಹೇಗೆ ಪರಿಚಯಿಸುತ್ತದೆ ಎನ್ನುವುದಕ್ಕೆ ವೆಂಕಟೇಶ್ ಕುಮಾರ್ ಅವರೇ ನಿದರ್ಶನ. ಅವರೇ ಹೇಳಿಕೊಂಡಂತೆ; ಅದು 1993ನೇ ಇಸವಿ. ಆಗ ವೆಂಕಟೇಶ್ಕುಮಾರ್ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು, ಜೊತೆಗೆ ಆಗಾಗ ಸಿಕ್ಕ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಆ ವರ್ಷ ಪುಣೆಯಲ್ಲಿ ಸವಾಯಿ ಗಂಧರ್ವರ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೀಮಸೇನ ಜೋಷಿಯವರು ವೆಂಕಟೇಶ್ಕುಮಾರ್ ಅವರನ್ನು ಹಾಡಲು ಆಹ್ವಾನಿಸಿದ್ದರು. ದೇಶದ ನಾನಾ ಮೂಲೆಗಳಿಂದ ಬಂದ ಸಂಗೀತ ದಿಗ್ಗಜರು ಅಲ್ಲಿ ಬಂದಿದ್ದರು. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಶೋತೃಗಳು ನೆರೆದಿದ್ದರು. ಬೃಹತ್ ಜನಸ್ತೋಮದ ಎದುರು ಹಾಡಿ ಮುಗಿಸಿದಾಗ ನೆರೆದವರಿಂದ ಚಪ್ಪಾಳೆಗಳ ಸುರಿಮಳೆ.

ತದನಂತರ ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಯಂ ಗಾಯಕರಾದರಂತೆ!ಐದಾರು ವರ್ಷಗಳಿಂದ ವೆಂಕಟೇಶ್ ಕುಮಾರ್ ಅವರನ್ನು ನಿರಂತರವಾಗಿ ಕೇಳುತ್ತಾ, ನೋಡುತ್ತಾ ಬಂದ ನನಗನಿಸುವುದು ಇವರು ಹೃದಯದಿಂದ ಹಾಡುವ ಕಲಾವಿದ ಮಾತ್ರವಲ್ಲ ಹೃದಯದಿಂದ ಮಾತಾಡುವ ಅಪೂರ್ವ ವ್ಯಕ್ತಿ ಎಂದು! ಎಷ್ಟೇ ಎತ್ತರಕ್ಕೆ ಬೆಳೆದರೂ ಯಾವುದೇ ಹಮ್ಮು-ಬಿಮ್ಮುಗಳು ಅವರ ಬಳಿ ಸುಳಿಯಲೇ ಇಲ್ಲ.

ಅವರು ಕಛೇರಿಯಲ್ಲಿ ಕುಳಿತಾಗ ಮಧ್ಯೆ ಮಧ್ಯೆ ಮಾತಾಡುವುದುಂಟು. ಅದು ಪಕ್ಕಾ ಧಾರವಾಡದ ಭಾಷೆಯಲ್ಲೇ ಮಾತಾಡುವರು. ಎಂಥ ಅದ್ಭುತ ಕಛೇರಿನೇ ಕೊಡಲಿ ಅಲ್ಲಿ ವಿನಮ್ರತೆಯಿಂದ ಹೇಳಿಕೊಳ್ಳುತ್ತಾರೆ;ನಾನಿನ್ನೂ ಸಂಗೀತದ ವಿದ್ಯಾರ್ಥಿ. ಹಾಡುಗಾರಿಕೆ ಗುರುಗಳ ಸೇವೆ, ಇದೊಂದು ಭಕ್ತಿಯ ಪ್ರಯತ್ನ ಅಷ್ಟೇ! ಎಂದು.ಪಂಡಿತ್ ಜೀ…ನೀವು ಹಾಡಬೇಕು…ನಾವು ಕೇಳಬೇಕು…ಅಷ್ಟೇನೇ…!!

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: