ಜೋಗಿ ಅಂಕಣ– ಬರಹದ ಹಣೆಬರಹ

ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ ಎನ್ನುತ್ತಾನೆ ಕವಿ ಕುಮಾರ ವ್ಯಾಸ. ನನ್ನೊಳಗಿನ ಕವಿಗೆ ನಮಸ್ಕಾರ ಎಂದು ಬೇಂದ್ರೆ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ದೇವರು ರುಜು ಮಾಡಿದನು, ಕವಿ ಪರವಶನವಾಗುತ ಅದ ನೋಡಿದನು ಎನ್ನುತ್ತಾರೆ ಕುವೆಂಪು. ಇಲ್ಲಿ ನಾನು ನೋಡಿದೆ ಎನ್ನುವ ಬದಲು ಕವಿ ನೋಡಿದ ಎನ್ನುತ್ತಾರೆ ಕುವೆಂಪು. ನಾನು ನಾನಾಗಿರದೇ ಇದ್ದಾಗ ಬರೆಯುತ್ತೇನೆ. ನಾನು ನಾನಾದಾಗ ಒಂದಕ್ಷರವನ್ನೂ ಬರೆಯಲಾರೆ ಎನ್ನುತ್ತಾನೆ ಬೋದಿಲೇರ್.

ಅದು ನಿಜವಾ? ಪ್ರಜ್ಞಾಪೂರ್ವಕವಾಗಿ ಬರೆಯುತ್ತಿದ್ದ ಅಡಿಗರು, ಭಾವಸಮಾಧಿ ಯಲ್ಲಿದ್ದಂತೆ ಬರೆಯುತ್ತಿದ್ದ ಬೇಂದ್ರೆ, ಸಿಟ್ಟಿನಿಂದ ಬರೆಯುತ್ತಿದ್ದ ಸಿದ್ಧಲಿಂಗಯ್ಯ, ತನ್ನದು ಸತತವಾದ ಹೋರಾಟ ಎಂಬಂತೆ ಬರೆಯುತ್ತಿದ್ದ ಕುವೆಂಪು, ಅನುಮಾನದಿಂದ ಎಂಬಂತೆ ಬರೆಯುತ್ತಿದ್ದ ಲಂಕೇಶ್, ತನ್ನ ಪ್ರತಿಯೊಂದು ಪದವೂ ಅರ್ಥಪೂರ್ಣ ಎಂಬ ನಂಬಿಕೆಯಿಂದ ಬರೆಯುವ ಚಿತ್ತಾಲ, ಉಡಾಫೆಯಿಂದ ಬರೆಯುತ್ತಿದ್ದಂತೆ ಕಾಣಿಸುತ್ತಿದ್ದ ಆಲನಹಳ್ಳಿ, ಧ್ಯಾನಿಸಿ ಬರೆದಂತೆ ಬರೆಯುವ ಅನಂತಮೂರ್ತಿ, ಲಹರಿ ಯಿಂದ ಬರೆಯುವ ಜಯಂತ, ಲೀಲಾಜಾಲವಾಗಿ ಬರೆಯುವ ನಾಡಿಗ- ಇವರೆಲ್ಲರನ್ನೂ ನಾವು ನೋಡಿದವರೇ. ಇವರ ಜೊತೆಜೊತೆಗೇ ತಿಣುಕಿ ತಿಣುಕಿ ಬರೆಯುವವರು, ಸರಾಗವಾಗಿ ಬರೆಯುವವರೂ, ಲೆಕ್ಕಾಚಾರದಲ್ಲಿ ಬರೆಯುವವರು, ಪೂರ್ವನಿರ್ಧಾರ ರಿಂದ ಬರೆಯಹೊರಡುವವರು, ಒತ್ತಾಯಕ್ಕಾಗಿ ಬರೆಯುವವರು ಕೂಡ ಸಿಗುತ್ತಾರೆ. ಪ್ರಶ್ನೆ ಇದು: ಬರೆಯುವ ಹೊತ್ತಿಗೆ ಅವರು ಅವರೇ ಆಗಿರುತ್ತಾರಾ?

ಈ ಪ್ರಶ್ನೆ ಕೇಳಿಕೊಳ್ಳಲು ಕಾರಣವಿದೆ. ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯನ್ನು ಕೇಳಿಕೊಂಡ ಅನೇಕರು ಅದಕ್ಕೆ ಉತ್ತರ ಕೊಟ್ಟುಕೊಂಡ ರೀತಿ ಕುತೂಹಲಕರವಾಗಿತ್ತು. ಲೇಖಕಬರೆಯುವುದುಕೀರ್ತಿಗಾಗಿ, ಹಣಕ್ಕಾಗಿಮತ್ತು ತನ್ನಅಹಂಕಾರವನ್ನು ತೃಪ್ತಿಪಡಿಸು ವುದಕ್ಕಾಗಿ ಎಂಬ ಮಾತಿದೆ. ಕನ್ನಡದಲ್ಲಿ ಬರೆದು ಹಣ ಸಂಪಾದಿಸಬಹುದು ಎಂಬುದು ಮೂಢನಂಬಿಕೆ. ಕೀರ್ತಿಯ ಜೊತೆ ಅಪಕೀರ್ತಿಯನ್ನೂ ಸಂಪಾದಿಸಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳುವುದಕ್ಕೆ ಎಂಬುದು ಕೂಡ ಸುಳ್ಳು. ಬರೆದು ಪ್ರಸಿದ್ಧನಾಗುತ್ತಿದ್ದಂತೆ ಅಹಂಕಾರ ಹೆಚ್ಚುತ್ತಾ ಹೋಗುತ್ತದೆ.

ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯೇ ಕುತೂಹಲಕಾರಿ. ಯಾರಾದರೂ ಆ ಪ್ರಶ್ನೆಯನ್ನು ಕೇಳುವ ಮೊದಲು ಯಾವ ಲೇಖಕನೂ ಅಂಥ ಪ್ರಶ್ನೆಯನ್ನು ಹಾಕಿ ಕೊಂಡಿರುವುದಿಲ್ಲ. ಅಂಥ ಪ್ರಶ್ನೆಯನ್ನು ಮುಂದಿಟ್ಟ ತಕ್ಷಣ ಅದಕ್ಕೆ ಕುತೂಹಲಕಾರಿಯೂ ರೋಚಕವೂ ಆದ ಉತ್ತರವನ್ನು ಹುಡುಕತೊಡಗುತ್ತಾರೆ. ನಾನು ಅವಮಾನವನ್ನು ಮೀರಲು ಬರೆಯುತ್ತೇನೆ. ಏಕಾಂತದ ಜೊತೆ ನನ್ನ ಹೋರಾಟ ಅದು, ನನ್ನೊಳಗಿರುವ ಸತ್ವದ ಹುಡುಕಾಟ ನಡೆಸಿದ್ದೇನೆ, ಸತ್ಯದ ಹುಡುಕಾಟವಾಗಿದೆ ನನ್ನ ಬರವಣಿಗೆ, ನಾನು ಸುಮ್ಮನಿರಲಾರದೇ ಬರೆಯುತ್ತೇನೆ. ಅದು ನನ್ನ ಪಾಲಿಗೆ ಬಿಡುಗಡೆ ಎಂಬಿತ್ಯಾದಿ ಉತ್ತರಗಳನ್ನು ಅನೇಕರು ಕೊಟ್ಟಿದ್ದಾರೆ.

ಅದಕ್ಕಿಂತ ಮುಖ್ಯ ಪ್ರಶ್ನೆ ನಾನೇಕೆ ಓದುತ್ತೇನೆ ಎನ್ನುವುದು. ಓದುಗರು ಯಾಕೆ ಓದುತ್ತಾರೆ ಎಂಬುದು ಗೊತ್ತಾದರೆ, ಲೇಖಕರು ಯಾಕೆ ಬರೆಯುತ್ತಾರೆ ಎಂಬ ಪ್ರಶ್ನೆಗೂ ಉತ್ತರ ಸಿಗಬಹುದೇನೋ? ಯಾರು ಯಾವ ಸೋಪು ಕೊಳ್ಳುತ್ತಾರೆ, ಯಾವ ಶಾಂಪೂ ಬಳಸುತ್ತಾರೆ, ಯಾವ ಥರದ ಬಟ್ಟೆ ಇಷ್ಟ, ಸದ್ಯದಲ್ಲಿ ಚಾಲ್ತಿಯಲ್ಲಿರುವ ಫ್ಯಾಷನ್ ಏನು, ಯಾವ ಕತೆಗಳನ್ನು ಆಧರಿಸಿದ ಸಿನಿಮಾ ನೋಡುತ್ತಾರೆ, ಯಾವ ಹೀರೋ ಜನಪ್ರಿಯ ಎನ್ನುವುದನ್ನೆಲ್ಲ ಲೆಕ್ಕ ಹಾಕುವ ಮಂದಿ, ಸಾಹಿತ್ಯದ ಕುರಿತು ಅಂಥದ್ದೊಂದು ಸಮೀಕ್ಷೆ ಮಾಡಿಸಿದಂತಿಲ್ಲ.

ಸುಮ್ಮನೆ ಗಮನಿಸಿ : ಸಂಗೀತ, ಸಿನಿಮಾ, ನಾಟಕ ಕೂಡ ಕಲಾಪ್ರಕಾರಗಳೇ. ಒಬ್ಬ ಗಾಯಕನ ಗೀತೆಗಳು ಪ್ರಸಿದ್ಧವಾಗುತ್ತಿದ್ದಂತೆ ಕೆಸೆಟ್ ಸಂಸ್ಥೆಗಳು ಅವರನ್ನು ಕರೆದು ಹಾಡಿಸುತ್ತವೆ. ಅವರ ಕೆಸೆಟ್ಟುಗಳು ಪುಂಖಾನುಪುಂಖವಾಗಿ ಹೊರಬರುವಂತೆ ಮಾಡುತ್ತವೆ. ಒಂದು ಕಾಲದಲ್ಲಿ ವಿದ್ಯಾಭೂಷಣರಿಗೆ ಅಂಥ ಬೇಡಿಕೆಯಿತ್ತು. ಸಂಗೀತ ನಿರ್ದೇಶಕರಲ್ಲೂ ಬೇಡಿಕೆಗೆ ಬೆಲೆಯಿದೆ. ಒಬ್ಬ ನಾಟಕಕಾರನೋ ರಂಗನಟನೋ ಜನಪ್ರಿಯನಾದರೆ ಅವನಿಂದ ಹತ್ತಾರು ನಾಟಕಗಳನ್ನು ಬರೆಸುವುದಕ್ಕೆ, ಪಾತ್ರ ಮಾಡಿಸು ವುದಕ್ಕೆ ಮುಂದಾಗುತ್ತಾರೆ.

ಲೇಖಕನ ವಿಚಾರದಲ್ಲಿ ಅಂಥದ್ದೊಂದು ಕ್ರೇಜ್ ಇದೆಯಾ? ಹಿಂದೆ ಯಂಡಮೂರಿ ವೀರೇಂದ್ರನಾಥ್ ಬರೆಯುತ್ತಿದ್ದ ದಿನಗಳಲ್ಲಿ ಅಂಥ ಬೇಡಿಕೆ ಇತ್ತು. ಟಿಕೆ ರಾಮರಾವ್ ಅವರ ಮನೆಗೆ ಹೋಗಿ ಕೂತು ಕಾದಂಬರಿ ಬರೆಸಿಕೊಳ್ಳುತ್ತಿದ್ದರು ಎನ್ನುವುದೂ ನಿಜವೇ. ರಾಮಮೂರ್ತಿಯವರ ಕಾದಂಬರಿಯೊಂದು ಇಪ್ಪತ್ತೋ ಮೂವತ್ತೋ ಸಾವಿರ ಪ್ರತಿ ಮಾರಾಟವಾಗಿತ್ತು ಎಂದು ಕತೆ ಹೇಳುತ್ತಾರೆ.

ಅದನ್ನೆಲ್ಲ ಪಕ್ಕಕ್ಕಿಟ್ಟು ಕಾಲದಿಂದ ಕಾಲಕ್ಕೆ ಓದುಗ ಮತ್ತು ಲೇಖಕ ತಮ್ಮ ತಮ್ಮ ಅಭಿರುಚಿಯನ್ನೂ ಆಸಕ್ತಿಯನ್ನೂ ಬದಲಾಯಿಸಿಕೊಂಡು ಹೋದ ರೀತಿಯನ್ನೇ ಗಮನಿಸಿ. ಇವತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆಯುವವರು ಇಲ್ಲವೇ ಇಲ್ಲ. ಒಂದು ಕಾಲದಲ್ಲಿ ಎನ್ ನರಸಿಂಹಯ್ಯ, ರಾಮಮೂರ್ತಿ, ಜಿಂದೆ ನಂಜುಂಡಸ್ವಾಮಿ, ಟಿಕೆ ರಾಮರಾವ್ -ಹೀಗೆ ಎಂಟೋ ಹತ್ತೋ ಲೇಖಕರು ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಅವರೆಲ್ಲರೂ ಸಮಕಾಲೀನರೇ.

ಸಾಮಾಜಿಕ ಕಾದಂಬರಿಗಳನ್ನು ನೋಡಿದರೂ ಅಷ್ಟೇ ಮಂದಿ ಸಿಗುತ್ತಾರೆ. ಐತಿಹಾಸಿಕ ಕಾದಂಬರಿಗಳನ್ನು ಗಳಗನಾಥರೂ ಅವರ ಸಮಾಕಾಲೀನರೂ ಬರೆಯುತ್ತಿದ್ದರು. ಅವನ್ನು ಓದುವ ಓದುಗರ ಸಂಖ್ಯೆಯೂ ದೊಡ್ಡದಿತ್ತು. ಇತ್ತೀಚೆಗೆ ಗೆಳೆಯರ ಮನೆಗೆ ಹೋದಾಗ ಅವರು ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಧಾರಾವಾಹಿಯನ್ನು ಕತ್ತರಿಸಿ ಬೈಂಡ್ ಮಾಡಿಸಿ ಪುಸ್ತಕ ರೂಪದಲ್ಲಿ ಎತ್ತಿಟ್ಟು ಕೊಂಡಿದ್ದರು. ತೆರೆದು ನೋಡಿದರೆ ಟಿಕೆ ರಾಮರಾವ್ ಅವರ ಕೆಂಪುಮಣ್ಣು ಕಾದಂಬರಿ. ಹಾಗೇ ಶೇಷನಾರಾಯಣ, ದೊಡ್ಡೇರಿ ವೆಂಕಟಗಿರಿರಾವ್, ಭಾರತೀಸುತ ಮುಂತಾದವರ ಕಾದಂಬರಿಗಳನ್ನೂ ಅನೇಕರು ರಟ್ಟು ಹಾಕಿಸಿ ಸಂಗ್ರಹಿಸಿಡುತ್ತಿದ್ದರು. ಉಜಿರೆಯಲ್ಲಿರುವ ಮತ್ತೊಬ್ಬ ಜನಪ್ರಿಯ ಬರಹಗಾರ ಕೆ.ಟಿ. ಗಟ್ಟಿ ಕೂಡ ಅಂಥ ಮನ್ನಣೆಗೆ ಪಾತ್ರರಾದವರು.

ಆ ಕಾಲದಲ್ಲಿ ಓದುಗರು ಯಾಕೆ ಓದುತ್ತಿದ್ದರು ಎಂದು ಹುಡುಕುತ್ತಾ ಹೊರಟಾಗ ಸಿಕ್ಕ ಉತ್ತರವೇ ಬೇರೆ. ಪುಸ್ತಕದಂಗಡಿಗಳ ಮಾಲೀಕರ ಪ್ರಕಾರ, ಪ್ರಕಾಶಕರ ಪ್ರಕಾರ ಓದುಗರೆಲ್ಲ ವೀಕ್ಷಕರಾಗಿ ಬದಲಾಗಿದ್ದಾರೆ. ಹೀಗಾಗಿ ಅವರು ಓದುವುದನ್ನು ಕಡಿಮೆ ಮಾಡಿದ್ದಾರೆ. ಈ ವಾದ ಸುಳ್ಳು ಎನ್ನುವುದನ್ನು ಪತ್ರಿಕೆಗಳ ಮಾರಾಟ ಸಾಬೀತು ಮಾಡಿದೆ. ಕಳೆದ ಹತ್ತು ವರುಷಗಳಲ್ಲಿ ಕನ್ನಡ ಪತ್ರಿಕೆ ಓದುವವರ ಸಂಖ್ಯೆ ಕನಿಷ್ಟ ಹತ್ತು ಲಕ್ಷದಷ್ಟಾದರೂ ಏರಿದೆ. ಅದಕ್ಕೆ ಪತ್ರಿಕೆಗಳ ಮಾರಾಟ ಸಂಖ್ಯೆಯೇ ಸಾಕ್ಷಿ.

ಆದರೆ ಪತ್ರಿಕೆಯನ್ನು ಕತೆಗಾಗಿ ಓದುವವರು ಕಡಿಮೆಯಾಗಿದ್ದಾರೆ. ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಕನ್ನಡಕಾದಂಬರಿಗಳನ್ನುಎರವಲುಕೊಳ್ಳುವವರ ಸಂಖ್ಯೆ ಗಮನಾರ್ಹ ವಾಗಿ ಕ್ಷೀಣಿಸಿದೆ. ಇತ್ತೀಚೆಗೆ ಒಂದೆರಡು ಅಂಕಣಗಳಲ್ಲಿ ನಾನು ಹಿರಿಯ ಲೇಖಕರ ಪ್ರಸ್ತಾಪ ಮಾಡಿದಾಗ, ಮೈಸೂರಿನ ಓದುಗರೊಬ್ಬರು ಸಿಟ್ಟು ಮಾಡಿಕೊಂಡು ಫೋನಿಸಿ ದ್ದರು. ಅವರ ವಾದ ಇಷ್ಟು: ನೀವು ಹಿರಿಯ ಲೇಖಕರ ಬಗ್ಗೆ ಬರೆಯುತ್ತಿದ್ದೀರಿ. ಅವರನ್ನು ಓದುವವರು ಈಗ ಯಾರೂ ಇಲ್ಲ.

ಅಪರೂಪದ ಪ್ರತಿಭಾವಂತ ಲೇಖಕ ಎಂದು ನೀವು ಗೋವಿಂದಪೈ, ಪಂಜೆ ಮಂಗೇಶರಾಯರ ಕುರಿತು ಬರೆಯುತ್ತೀರಿ. ಆದರೆ ಯಾರಿಗೆ ಬೇಕು ಅದೆಲ್ಲ. ಅವರ ಪುಸ್ತಕ ಈಗ ಎಲ್ಲಿ ಸಿಗುತ್ತದೆ. ಸಿಕ್ಕಿದರೂ ಅದನ್ನು ಓದುವುದಕ್ಕೆ ಸಾಧ್ಯವಾ? ಚರಿತ್ರೆಯ ಪುಸ್ತಕ ಓದಿದಂತಿರುತ್ತದೆ. ಹೋಗಲಿ, ಹೊಸ ಬರಹಗಾರರ ಕುರಿತು ಬರೆಯುತ್ತೀರಿ ಅಂತಿಟ್ಟುಕೊಳ್ಳಿ.

ಅವರನ್ನು ಎಷ್ಟು ಮಂದಿ ಓದಿರುತ್ತಾರೆ? ಹಳಬರನ್ನೂ ಓದದ, ಹೊಸಬರನ್ನೂ ಓದದ ಎಡಬಿಡಂಗಿಗಳು ನಾವು.
ಹೀಗೆ ಅವರು ತಮ್ಮನ್ನೂ ಬೈದುಕೊಂಡು ನನ್ನನ್ನೂ ಬೈದಿದ್ದರಲ್ಲಿ ಸುಳ್ಳೇನೂ ಇರಲಿಲ್ಲ. ಓದುಗರಿಗೆ ಈಗಿನ ಸಾಹಿತ್ಯದಲ್ಲಿ ಏನು ಕೊರತೆಯಾಗಿದೆ ಎಂದು ನನ್ನ ಜೊತೆಗೆ ಓದುತ್ತಿದ್ದ ಮಿತ್ರರನ್ನು ಕೇಳಿದೆ. ಆಗ ಸಿಕ್ಕ ಉತ್ತರಗಳು ಇವು :

1. ಬರಹ ಕುತೂಹಲಕಾರಿ ಆಗಿರಬೇಕು.
2. ನಮಗೆ ಗೊತ್ತಿಲ್ಲದೇ ಇರುವುದನ್ನು ಹೇಳಬೇಕು.
3. ರೋಚಕವಾಗಿರಬೇಕು.
4. ನಮ್ಮ ಬೇಸರವನ್ನು ಹೋಗಲಾಡಿಸುವಂತಿರಬೇಕು.
5. ಮಾಹಿತಿಯನ್ನು ಕೊಡಬೇಕು.
6. ನಮ್ಮ ಅಂತರಾಳದ ಮಾತುಗಳಿಗೆ ಧ್ವನಿಯಾಗಬೇಕು. ಸಮಾನತೆಯನ್ನು ಪ್ರತಿ ಪಾದಿಸುವಂತಿರಬೇಕು.

ಇಲ್ಲಿ ಕೊನೆಯ ಹೇಳಿಕೆ ಲೇಖಕನೂ ಆಗಿರುವ ಓದುಗ ಮಿತ್ರನದ್ದು. ಅವನು ಯೋಚಿಸಿ ಕೊಟ್ಟ ಉತ್ತರ ಎಂದುಕೊಂಡು ಅದನ್ನು ತಳ್ಳಿ ಹಾಕಿದರೆ, ಉಳಿದ ಓದುಗರ ನೀರೀಕ್ಷೆ ಒಂದೇ.

ಅದು ನಿಜವಾ ಎಂದು ಯೋಚಿಸಿದಾಗ ಒಂದಷ್ಟು ವಿಚಾರಗಳು ಹೊಳೆದವು. ನಮ್ಮ ಬದುಕು ತೀರ ಪೂರ್ವನಿರ್ಧಾರಿತ. ಎಲ್ಲವೂ ನೀರೀಕ್ಷೆಯ ಪ್ರಕಾರವೇ ನಡೆಯುತ್ತದೆ, ನಡೆಯುತ್ತಿದೆ. ಹುಟ್ಟುತ್ತೇವೆ- ಬೆಳೆಯುತ್ತೇವೆ- ಸ್ಕೂಲು ಸೇರುತ್ತೇವೆ- ಕಾಲೇಜು ಓದುತ್ತೇವೆ- ಕೆಲಸಕ್ಕೆ ಸೇರುತ್ತೇವೆ- ಮದುವೆಯಾಗುತ್ತೇವೆ- ಮನೆ ಕಟ್ಟಿಸುತ್ತೇವೆ- ಮಕ್ಕಳಾಗುತ್ತವೆ- ಮುದುಕರಾಗುತ್ತೇವೆ- ಹಳೆಯದನ್ನು ನೆನಪಿಸಿಕೊಂಡು ಮರುಗುತ್ತೇವೆ- ಸಾಯುತ್ತೇವೆ. ಈ ಸೂತ್ರದಲ್ಲಿ ಮಹತ್ವದ ಬದಲಾವಣೆ ಏನೂ ಆಗುವುದಿಲ್ಲ. ಅವರವರ ಶಕ್ತ್ಯಾನುಸಾರ ಓದುವ ಸ್ಕೂಲು, ಕಾಲೇಜಿನ ಮೋಜು, ದೊರಕುವ ಸಂಗಾತಿ, ಕಟ್ಟುವ ಮನೆಯ ಉದ್ದಗಲ, ಹುಟ್ಟುವ ಮಕ್ಕಳ ಸಂಖ್ಯೆ ಬದಲಾಗಬಹುದೇ ಹೊರತು, ಸೂತ್ರ ಅದೇ. ಸಾಗುವ ದಾರಿ ಅದೇ.

ಆದರೆ ಮನುಷ್ಯನ ಆಸೆ ಇದನ್ನೆಲ್ಲ ಮೀರಿದ್ದು. ನಮ್ಮೊಳಗೊಬ್ಬ ಭುಜಂಗಯ್ಯ ನಿದ್ದಾನೆ. ಅವನ ದಶಾವತಾರಗಳಲ್ಲಿ ನಮಗೂ ಆಸಕ್ತಿಯಿದೆ. ಅವಕಾಶ ಸಿಕ್ಕರೆ ಇದನ್ನೆಲ್ಲ ಬಿಟ್ಟು ಬೇರೇನೋ ಮಾಡಬೇಕೆಂದು ಕಾಯುತ್ತಿರುತ್ತೇವೆ. ಒಂದೊಮ್ಮೆ ಕರ್ವಾಲೋ ಆಗುವುದಕ್ಕೆ, ಮತ್ತೊಮ್ಮೆ ಮಂದಣ್ಣನಾಗುವುದಕ್ಕೆ, ಕೃಷ್ಣೇಗೌಡನ ಆನೆಯ ಮಾವುತ ವೇಲಾಯುಧನಾಗುವುದಕ್ಕೆ, ಪಂಚರಂಗಿಯ ಸೋಮಾರಿ ನಾಯಕನಾಗುವುದಕ್ಕೆ, ಅಶ್ವಮೇಧದ ದಗಡೂಪರಬ, ಶಿಕಾರಿಯ ನಾಗಪ್ಪ, ಕಾನೂರಿನ ಹೂವಯ್ಯ, ಬಳೆಗಾರ ಚೆನ್ನಯ್ಯ- ಎಲ್ಲವೂ ಆಗುವ ಆಸೆ ನಮಗೆ. ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಕಟಗೊಳ್ಳುವ ನಮ್ಮ ಆಳದ ಹಂಬಲ ನಿಜವಾಗುವುದು ಕತೆಗಳನ್ನು ಕೇಳುವಲ್ಲಿ.

ಒಂದೊಂದು ಕತೆಯನ್ನು ಕೇಳುತ್ತಲೂ ನಾವು ಮರುಹುಟ್ಟು ಪಡಕೊಳ್ಳುತ್ತೇವೆ. ಅದೊಂದು ಹೊಸ ಸ್ನೇಹದ ಹಾಗೆ, ಹೊಸ ಪ್ರೇಮದ ಹಾಗೆ ನಮ್ಮನ್ನು ಪುಳಕಿತಗೊಳಿಸು ತ್ತದೆ. ಥ್ರೀ ಈಡಿಯಟ್ ಸಿನಿಮಾ ನೋಡಿದ ತಕ್ಷಣ ನಮ್ಮ ಕಾಲೇಜಿನ ದಿನಗಳ ವಾಸ್ತವ, ಸಾಧ್ಯತೆ ಮತ್ತು ಕಲ್ಪನೆ ಮೂರೂ ನಮ್ಮೊಳಗೆ ಮಿಶ್ರಗೊಂಡು ಇದ್ದಕ್ಕಿದ್ದ ಹಾಗೆ ಕಾಲದ ಹಾದಿಯಲ್ಲಿ ಹಿಂದಕ್ಕೆ ಹೋಗಿಬಿಡುತ್ತೇವೆ.

ನಮ್ಮ ಕಾಲ ನಮ್ಮ ಕಣ್ಮುಂದಿದೆ. ಆ ಕಾಲುವೆಯಲ್ಲಿ ಹಿಂದಕ್ಕೂ ಮುಂದಕ್ಕೂ ಜೀಕುವ ಅದಮ್ಯ ಆಸೆ ನಮಗೆ. ಹಿಂದಕ್ಕೆ ಹೋದಾಗ ನಮ್ಮ ಬಾಲ್ಯ, ಮುಂದಕ್ಕೆ ಹೋದಾಗ ನಮಗೆ ಗೊತ್ತಿಲ್ಲದ ನಾಳೆ ಎರಡರ ದರ್ಶನವೂ ನಮಗಾಗುತ್ತದೆ. ಹಾಗೆ ಹಿಂದಕ್ಕೂ ಮುಂದಕ್ಕೂ ಕರೆದೊಯ್ಯುವ ಶಕ್ತಿ ಇರುವುದು ಕಲೆಗೆ ಮಾತ್ರ. ಅದರಲ್ಲೂ ನಮ್ಮನ್ನು ಏಕಾಂಗಿಯಾಗಿ ಜೀಕಿಸುವುದು ಸಾಹಿತ್ಯವೆಂಬ ಜೋಕಾಲಿ ಒಂದೇ.

ನಾವು ಅದಕ್ಕಾಗಿಯೇ ಓದುತ್ತೇವಾ?
‘ನಿಮ್ಮ ದೊಡ್ಡ ಸಮಸ್ಯೆ ಇದೇ. ನಿಮಗೆ ಸ್ಪಷ್ಟತೆ ಇಲ್ಲ. ಕವಿತೆಯನ್ನೇ ಬರೀರಿ, ಕತೆಯನ್ನೇ ಬರೀರಿ, ಅದು ಒಟ್ಟಾರೆಯಾಗಿ ಏನನ್ನೋ ಧ್ವನಿಸುತ್ತಿರಬೇಕು. ಬೇಂದ್ರೆಯವರ ಗೀತೆಗಳನ್ನು ಓದಿದರೆ ಪ್ರೇಮ ಮತ್ತು ಆಧ್ಯಾತ್ಮ, ಕುವೆಂಪು ಕಾದಂಬರಿಗಳಲ್ಲಿ ದಟ್ಟವಾದ ಸಾಮಾಜಿಕ ಪ್ರಜ್ಞೆ, ತೇಜಸ್ವಿಯವರ ಕತೆಗಳನ್ನು ತಮಾಷೆ ಮತ್ತು ವಿಸ್ಮಯ, ಅಡಿಗರ ಕವಿತೆಗಳಲ್ಲಿ ಅವಿರತ ಬಂಡಾಯ ಮತ್ತು ಪುರುಷೋತ್ತಮನಾಗುವ ಆಸೆ, ಚಿತ್ತಾಲರ ಕತೆಗಳಲ್ಲಿ ಮನುಕುಲದ ಬಗ್ಗೆ ಪ್ರೀತಿ, ಕಾಯ್ಕಿಣಿಯ ಕತೆಗಳಲ್ಲಿ ಸುಳಿಮಿಂಚು, ವಿವೇಕ ಶಾನುಭಾಗರ ಬರಹಗಳಲ್ಲಿ ಗಾಂಭೀರ್ಯ, ಖಾಸನೀಸರ ಎಲ್ಲಾ ಕತೆಗಳಲ್ಲೂ ಅನೂಹ್ಯ ಯಾತನೆ’ ಹೀಗೆ ಒಬ್ಬೊಬ್ಬರಿಗೂ ಒಂದೊಂದು ಸ್ಥಾಯೀಭಾವ ಇರುತ್ತದೆ. ಅವರು ಅದನ್ನೇ ಉತ್ತಮಪಡಿಸುತ್ತಾ ಹೋಗುತ್ತಾರೆ.

ಒಬ್ಬನೊಳಗಿರುವುದು ಒಂದೇ ಕತೆ. ಅದನ್ನೇ ಅವರು ಬೇರೆ ಬೇರೆ ಥರ ಹೇಳುತ್ತಿರುತ್ತಾನೆ. ವಾಲ್ಮೀಕಿ ಏನು ಬರೆದರೂ ಅಲ್ಲಿ ಸ್ಥಾಯಿಯಾಗಿರುವುದು ವಿರಹ, ವೇದವ್ಯಾಸರನ್ನು ಕಾಡಿದ್ದು ಯಾದವೀ ಕಲಹ, ಕುಮಾರವ್ಯಾಸನನ್ನು ಆವರಿಸಿಕೊಂಡದ್ದು ಸಖ್ಯ, ಕೆ.ಎಸ್. ನರಸಿಂಹಸ್ವಾಮಿಯವರನ್ನು ತುಂಬಿಕೊಂಡಿದ್ದದ್ದು ಸೌಖ್ಯ. ನಿಮಗ್ಯಾರಿಗೂ ಅಂಥದ್ದೊಂದು ನಿರಂತರವಾದ ಸ್ಥಾಯಿ ಯಾದ ಭಾವವೇ ಇಲ್ಲ. ಇವತ್ತು ಬಂಡಾಯ ಅನ್ನುತ್ತೀರಿ, ನಾಳೆ ಮನುಷ್ಯಪ್ರೀತಿ ಅನ್ನುತ್ತೀರಿ, ನಾಡಿದ್ದು ಕ್ರಾಂತಿ ಎನ್ನುತ್ತೀರಿ, ಮತ್ತೊಂದು ದಿನ ಬಂದು ಪರಿಸರ ಪ್ರೇಮ ಎಂದು ಮಾತಾಡುತ್ತೀರಿ. ಅವೆಲ್ಲವೂ ಒಂದೇ ನಿಜ. ಆದರೆ ನೀವು ಅದನ್ನು ಬರೆಯುತ್ತಿರುವ ಕ್ರಮದಲ್ಲೇ ಏನೋ ತಪ್ಪಿದೆ.’

ಹಾಗಂತ ಮೂರು ವರ್ಷಗಳ ಹಿಂದೆ ಕವಿತೆ ತಂದುಕೊಟ್ಟ ಹುಡುಗನ ಮೇಲೆ ಕೂಗಾಡಿದ್ದೆ. ಅವನು ಕವಿತೆಗಳನ್ನು ಓದಿ ಅಂತ ಒಂದೇ ಸಮನೆ ಪೀಡಿಸತೊಡಗಿದ್ದ. ಅವನ ಕವಿತೆಗಳಲ್ಲಿ ಎಷ್ಟು ಹುಡುಕಾಡಿದರೂ ಖುಷಿಯಾಗುವಂಥದ್ದು ಏನೂ ಸಿಕ್ಕಿರಲಿಲ್ಲ. ಅವು ನವೋದಯ, ನವ್ಯ, ಬಂಡಾಯ ಮತ್ತು ದಲಿತ ಕವಿತೆಗಳ ಮಿಶ್ರಣದಂತಿದ್ದವು.

‘ಇದರಲ್ಲಿ ನಿನ್ನದು ಯಾವುದು ಹೇಳು’ ಎಂದು ರೇಗಿದ್ದೆ. ನಿನಗೆ ನಿಜಕ್ಕೂ ಸಾಮಾಜಿಕವಾಗಿ ಬದಲಾವಣೆ ಆಗಬೇಕು ಅನ್ನಿಸಿದೆಯಾ? ಎಂಥಾ ಬದಲಾವಣೆ ಬೇಕೆಂದು ನೀನು ಬಯಸುತ್ತಿದ್ದೀಯಾ? ಈ ದೇಶದಲ್ಲಿ ರಾಜಕೀಯವಾಗಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ನಿನಗೆ ಯಾವತ್ತಾದರೂ ಅನ್ನಿಸಿದ್ದುಂಟಾ? ರಾಜಕೀಯವನ್ನೇ ನಿರಾಕರಿಸಿದರೆ ಪ್ರಗತಿಗೆ ಪೂರಕವಾದ ಮತ್ತೊಂದು ವ್ಯವಸ್ಥೆ ನಮ್ಮಲ್ಲಿದೆಯಾ?

ಒಂದು ಕಾಲದಲ್ಲಿ ಇಂಥ ಪ್ರಶ್ನೆಗಳು ನಮಗೆಲ್ಲ ಮೂಡುತ್ತಿದ್ದವು. ಕೆಲಸ ಸಿಗುವ ಭರವಸೆ ನಮಗಂತೂ ಇರಲಿಲ್ಲ. ನಾವು ಓದುತ್ತಿದ್ದ ದಿನಗಳಲ್ಲಿ ಅನುಭವಿಸಿದ ತಲ್ಲಣ ಗಳನ್ನೋ ಆತಂಕಗಳನ್ನೋ ಈಗಿನ ವಿದ್ಯಾರ್ಥಿಗಳು ಅನುಭವಿಸುತ್ತಿಲ್ಲ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತಿತ್ತು. ಅವರ ಸಂತೋಷಗಳೇ ಬೇರೆ, ಸುಖಗಳೇ ಬೇರೆ, ರೋಚಕತೆಗಳೇ ಬೇರೆ.

ತೇಜಸ್ವಿಯವರ ‘ತುಕ್ಕೋಜಿ’ ಕತೆಯನ್ನು ಓದಿದಾಗ, ‘ಅವನತಿ’ ಕತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಗ ನಮಗೆ ಇಡೀ ಭಾರತದ ಚಿತ್ರವೇ ಕಣ್ಮುಂದೆ ಬಂದಂತಾಗುತ್ತಿತ್ತು. ಅದೇ ಹೊತ್ತಿಗೆ ಕೆ.ವಿ. ಸುಬ್ಬಣ್ಣ ಮುಂತಾದವರು ಲೋಹಿಯಾ ಬರೆದ ‘ರಾಜಕೀಯದ ನಡುವೆ ಬಿಡುವು’ ಸಂಕಲನದ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದರು. ಲಂಕೇಶರು ಅಳುವ ನಾಯಕನನ್ನು ನಂಬಬಾರದು ಎಂದಿ ದ್ದರು. ಕಾಫಿ ಬೆಳೆಯನ್ನು ಮುಂದಿಟ್ಟುಕೊಂಡು ತೇಜಸ್ವಿ ನಮಗೆಲ್ಲ ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ರೈತ ಹೇಗೆ ಎಲ್ಲಾ ಕಡೆಯಲ್ಲೂ ಸೋಲುತ್ತಿದ್ದಾನೆ ಎನ್ನುವುದನ್ನು ಅರ್ಥವಾಗುವಂತೆ ವಿವರಿಸಿದ್ದರು.

ಆ ಕಾಲವೇ ಹಾಗಿತ್ತು. ಯಾವುದನ್ನೂ ಕೂಡ ನಂಬಬೇಡ. ಎಲ್ಲವನ್ನೂ ಅನುಮಾನಿಸುಎಂಬುದನ್ನು ನಮಗೆಅರ್ಥಮಾಡಿಸಲುಹೊರಟವರ ದೊಡ್ಡ ಪಂಗಡವೇ ಜೊತೆಗಿತ್ತು. ಹೀಗಾಗಿ ಬರೆಯುವುದಕ್ಕೆ ನಾವು ಅಂಜುತ್ತಿದ್ದೆವು. ಎಲ್ಲರಿಗೂ ಲೇಖಕರಾಗ ಬೇಕು ಅಂತ ಅನ್ನಿಸುತ್ತಲೇ ಇರಲಿಲ್ಲ. ಓದುಗ ಕೂಡ ಬರಹಗಾರನಿಗೆ ಸಮಾನ ಎಂಬ ಗೌರವ ನಮ್ಮಲ್ಲಿ ಮೂಡುವಂತೆ ಬರಹಗಾರರೂ ನಮ್ಮ ಅರಿವನ್ನು ಹೆಚ್ಚಿಸುತ್ತಿದ್ದರು.

ಅಂಥ ಕೆಲಸವನ್ನು ಮಾಡಿದವರು ಮಾಸ್ತಿ. ಅವರ ಕತೆಗಳನ್ನು ಓದುತ್ತಾ ಇದ್ದಾಗ ನಮ್ಮ ಸುತ್ತಲ ಜಗತ್ತಿನ ವಿಕ್ಷಿಪ್ತ ಸಂಗತಿಗಳು ಅರ್ಥವಾಗುತ್ತಿದ್ದವು. ಯಾರೋ ಎಲ್ಲೋ ಸಿಕ್ಕಿ ಈ ಕತೆಯನ್ನು ಹೇಳಿದರು ಎಂದೇ ಶುರುವಾಗುತ್ತಿದ್ದ ಅವರ ಕತೆಗಳು, ಅವನು ಹಾಗೆ ಹೇಳಿದ. ನಿಜವಾಗಿ ನಡೆದದ್ದು ಏನೋ ನನಗೆ ಗೊತ್ತಿಲ್ಲ ಎಂಬ ವಿನಯದಲ್ಲಿ ಅಪನಂಬಿಕೆಯಲ್ಲಿ ಮತ್ತು ವಿಷಾದದಲ್ಲಿ ಕೊನೆಯಾಗುತ್ತಿತ್ತು. ಆ ವಿಷಾದ ಕೂಡ ನಮ್ಮನ್ನು ಅರಳಿಸುವ ಸಂಗತಿಯಾಗಿತ್ತಲ್ಲವೇ ಎಂದು ಒಮ್ಮೊಮ್ಮೆ ಖುಷಿಯಾಗುತ್ತದೆ.

‘ನನ್ನ ಮುಖೋದ್ಗತ ನಿಮ್ಮ ಹೃದ್ಗತವೇ ಆದ ದಿನ ಸುದಿನ’ ಹಾಗಂತ ಗಂಗಾಧರ ಚಿತ್ತಾಲರು ಬರೆದದ್ದನ್ನು ಓದಿ ಪುಳಕಿತರಾಗಿದ್ದೆವು. ಯಶವಂತ ಚಿತ್ತಾಲರ ಕತೆಯಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗುವ ಇನ್ನೂ ಓದಿರದ ಕಾಗದ, ಅದನ್ನು ಕೊನೆಯವರೆಗೂ ಓದದ ನಾಯಕ, ಬಾವಿಯ ಬಳಿ ಧುತ್ತೆಂದು ಪ್ರತ್ಯಕ್ಷವಾಗುವ ಪೊತ್ತೆಮೀಸೆಯ ಮನುಷ್ಯ, ಮುಚ್ಚಿದ ಬಾಗಿಲನ್ನು ಸರಿ ಮಾಡುವುದಕ್ಕೆ ಬಂದವನ ಕಾಮೋತ್ಕರ್ಷ, ಆ ಕತೆಗೆ ‘ಸೆರೆ’ ಎಂದು ಹೆಸರಿಡುವ ಸಾಂಕೇತಿಕತೆ, ಬುಡಾಣಸಾಬರು ಬಹಳ ಮುದುಕರು.. ಎಂದು ಹಾಡುತ್ತಾ ಭಯವನ್ನು ಮೀರಲೆತ್ನಿಸುವ ಹುಡುಗ, ಕತೆಯಲ್ಲಿ ಬಂದವನು ಮನೆಗೂ ಬಂದು ಕದತಟ್ಟುವ ಪರಿ ಇವೆಲ್ಲವನ್ನೂ ಓದಿಮುಗಿಸುತ್ತಿದ್ದ ಹಾಗೇ, ‘ನಿಗೂಢ ಮನುಷ್ಯರು’ ಎಂಬ ವಿಚಿತ್ರ ಭಯ ಹುಟ್ಟಿಸುವ ಕತೆಯೊಂದನ್ನು ತೇಜಸ್ವಿ ಬರೆದಿರುತ್ತಿದ್ದರು. ಅಲ್ಲಿ ಕಾಡಿಗೆ ಹಳೇ ಕಾರಲ್ಲಿ ಪ್ರಯಾಣ ಹೊರಟವರು, ಆ ಮಳೆಯ ರಾತ್ರಿ, ಹೂತು ಹೋದ ಕಾರು, ಕಾಡಿನ ನಡುವೆ ಒಂಟಿ ಮನೆ, ಅಲ್ಲೊಬ್ಬ ನಿಗೂಢ ಮನುಷ್ಯ.

ರಾತ್ರಿ ಯಾರೋ ಓಡಾಡಿದಂತೆ, ಕೆಮ್ಮಿದಂತೆ, ತನ್ನನ್ನು ಅಣಕಿಸಿದಂತೆ ಅನ್ನಿಸುವ ವಿಸ್ಮಯ, ಕುಸಿದುಬೀಳುವ ಉಗ್ರಗಿರಿ- ಹೀಗೆ ಅದು ಊಹೆಗೂ ನಿಲುಕದ ಮತ್ತೊಂದು ಜಗತ್ತು. ಕಾನೂರು ಹೆಗ್ಗಡಿತಿ ಕಾದಂಬರಿಯ ಹಂದಿಬೇಟೆಯೂ ಹಾಗೆಯೇ. ‘ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದ ನಂತರ ಇಡೀ ಮಲೆನಾಡು ಬೇರೆಯೇ ಆಗಿ ಕಾಣಿಸುತ್ತಿತ್ತು.

ದೇವರು ರುಜು ಮಾಡಿದನು, ಕವಿ ಪರವಶನಾಗುತ ಅದ ನೋಡಿದನು ಎಂಬ ಸಾಲನ್ನು ಓದಿ ಸಂತೋಷಪಡುತ್ತಿದ್ದ ಹಾಗೇ, ಅತ್ತಲಿಂದ ಕೀರ್ತಿನಾಥ ಕುರ್ತ ಕೋಟಿಯವರು ಆ ಕವಿತೆಯೇ ಸರಿಯಿಲ್ಲ. ದೇವರು ರುಜು ಮಾಡಿದನು ಅನ್ನುವುದು ಕವಿತೆ. ಅದ ಪರವಶನಾಗುತ ಕವಿ ನೋಡಿದನು ಎನ್ನುವುದು ಕವಿತೆ ಅಲ್ಲ. ಎಲ್ಲಿ ಕವಿ ಕಾಣುವಂತೆ ಹಾಜರಿರುತ್ತಾನೋ ಅದುಕವಿತೆಯಲ್ಲ ಎಂದು ನಮ್ಮ ಅರಿವನ್ನೂ ವಿಸ್ತರಿಸು ತ್ತಿದ್ದರು. ಹಾಗಂದ ಮಾತ್ರಕ್ಕೆ ಆ ಕವಿತೆಯನ್ನು ನಾವು ತಿರಸ್ಕರಿಸುತ್ತಲೂ ಇರಲಿಲ್ಲ.

ಅಪ್ಪಟ ನಾಸ್ತಿಕರಾಗಿದ್ದ ನಮ್ಮನ್ನು ಕೂಡ ಅಹುದಹುದೆನುವಂತೆ ಮಾಡಬಲ್ಲ ಶಕ್ತಿ ಕುವೆಂಪು ಕವಿತೆಗಳಿಗಿತ್ತು. ‘ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ’ ಎಂಬ ಸಾಲುದೇವರನ್ನೂ ಮೀರಿ,ಶಿವನನ್ನೂ ಮೀರಿ ಮತ್ತೇನನ್ನೋ ಧ್ವನಿಸಿ ಪುಳಕಿತಗೊಳಿಸುತ್ತಿತ್ತು. ಹಾಗೇ, ‘ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು’ ಎಂದು ಕೆ ಎಸ್ ನ ಬರೆದಾಗ ನಮ್ಮೂರ ಹೊಲದ ಮಾಲಿಕ ಇದ್ದಕ್ಕಿದ್ದ ಹಾಗೆ ಜೋಯಿಸನಂತೆ ಕಾಣಿಸುತ್ತಿದ್ದ. ಎಲ್ಲ ಕೆರೆಗಳೂ ಸಿರಿಗೆರೆಯಾಗುತ್ತಿದ್ದವು. ಹೀಗೆ ನಮ್ಮೂರನ್ನೂ ನಮ್ಮ ಮನಸ್ಸನ್ನೂ ನಮ್ಮ ಕಲ್ಪನೆಯನ್ನೂ ಕವಿಗೆ ಒಗ್ಗಿಸಿಕೊಂಡು ಕವಿತೆಗೆ ಒಗ್ಗಿಸಿಕೊಂಡು ಅದನ್ನು ನಾವು ಮೈದುಂಬಿಕೊಳ್ಳುವ ಖುಷಿಯನ್ನು ಅನುಭವಿಸು ತ್ತಿದ್ದೆವು.

‘ಅರಿವೆ ಇರಲಿಲ್ಲ, ಪರಿವೆ ಇರಲಿಲ್ಲ’ ಹಾಗಂತ ಪೇಜಾವರ ಸದಾಶಿವರಾಯರು ಬರೆದಾಗ ಮತ್ತೊಂದು ಜಗತ್ತು ತೆರೆದುಕೊಂಡಿತ್ತು. ಅದನ್ನು ವಿಸ್ತರಿಸಿದ್ದು ‘ಕ್ಲಿಪ್ ಜಾಯಿಂಟ್’ ಕತೆ.

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಒಬ್ಬೇ ಒಬ್ಬ ಲೇಖಕಿಯ ಹೆಸರೂ ಇಲ್ಲ!!! ಜೋಗಿ ನೀವೂ !!!!!

    ಪ್ರತಿಕ್ರಿಯೆ
  2. Jogi

    ನಮಸ್ಕಾರ ಲಲಿತಕ್ಕ
    ಕಾರಣ ಹೇಳಿರುವೆ ಕರೆ ಮಾಡಿ. ಕ್ಷಮಿಸಿರಿ ಈ ಸಲ ದಯಮಾಡಿ.

    ಪ್ರತಿಕ್ರಿಯೆ
  3. ರೇಣುಕಾರಾಧ್ಯ ಎಚ್ ಎಸ್

    ಜೋಗಿಯವರೆ ‘ ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ’ ಪೇಜಾವರ ಸದಾಶಿವರಾಯರ ಯಾವ ಕವಿತೆಯ ಸಾಲು ಹೇಳಿ? ನನಗೆ ತಿಳಿದಂತೆ ಗಂಗಾಧರ ಚಿತ್ತಾಲರ ‘ಕಾಮಸೂತ್ರ’ ಕವಿತೆಯ ಸಾಲುಗಳವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: