ಚಂಬಲ್‌ನಲ್ಲಿ ಮಹಮ್ಮದ್‌ ಕೈಲರಳಿದ ದೇಗುಲಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ʻಅದು ೨೦೦೫. ನಾನು ಆ ಜಾಗಕ್ಕೆ  ಹೋದಾಗ ಒಂದೇ ಒಂದು ದೇವಾಲಯ ಅಲ್ಲಿ ಇರಲಿಲ್ಲ. ಸುಮಾರು ೨೫ ಎಕರೆ ಪ್ರದೇಶದಲ್ಲಿ ಎಲ್ಲವೂ ಮುರಿದು ಬಿದ್ದು ಚದುರಿಹೋದ ಕಲ್ಲುಗಳ ರಾಶಿ. ಕೈ ಕಾಲುಗಳಿಲ್ಲದ ಶಿಲ್ಪಗಳು, ತುಂಡಾದ ಸ್ತಂಭಗಳು, ಗೋಪುರಗಳು.

ನಾನು ನನ್ನ ಕೆಲಸದ ನಿಮಿತ್ತ ನೂರಾರು ಜಾಗಗಳಿಗೆ ಹೋಗಿದ್ದಿದೆ. ಆದರೆ ಇಂತಹ ಅವಶೇಷವನ್ನು ನನ್ನ ಜೀವಮಾನದಲ್ಲಿ ಹಿಂದೆಂದೂ ನೋಡಿರಲಿಲ್ಲ. ಅಲ್ಲಿ ಆ ಕ್ಷಣ ನಿಂತಾಗ ಮಾತ್ರ ನನಗೆ ಅಲ್ಲಿನ ಪ್ರತಿಯೊಂದು ಕಲ್ಲೂ ಕೂಡಾ ತನ್ನ ದಾರುಣ ಕಥೆಯನ್ನು ತನ್ನ ಮೌನದಲ್ಲೇ ನನಗೆ ಹೇಳುತ್ತಿರುವಂತೆ ಭಾಸವಾಯಿತು. ಏನೇ ಆಗಲಿ, ಈ ದೇವಾಲಯ ಸಮುಚ್ಛಯವನ್ನು ಮಾತ್ರ ಮತ್ತೆ ಕಟ್ಟಿಯೇ ಕಟ್ಟುವೆ ಅಂತ ನಾನು ದೃಢ ನಿಶ್ಚಯ ಮಾಡಿಯೇ ಅಲ್ಲಿಂದ ಮರಳಿದ್ದೆ.ʼ

ಹೀಗೆ ಹೇಳಿದ್ದು ನಮ್ಮ ದೇಶ ಕಂಡ ದಕ್ಷ ಪುರಾತತ್ವ ಸರ್ವೇಕ್ಷಣಾಧಿಕಾರಿ ಕೆ.ಕೆ ಮಹಮ್ಮದ್.‌ ಹೇಳಹೆಸರಿಲ್ಲದೆ ನೆಲಸಮವಾಗಿದ್ದ, ನಾಗರಿಕ ಜಗತ್ತಿನಿಂದಲೇ ಕಣ್ಮರೆಯಾಗಿ ೫೦೦ ವರ್ಷಗಳೇ ಆಗಿದ್ದ ೨೦೦ ದೇವಾಲಯಗಳ ಸಮುಚ್ಛಯವೊಂದು ಮತ್ತೆ ತನ್ನದೇ ಕಲ್ಲುಗಳಿಂದ ಜೋಡಿಕೊಂಡು ಜೀವತಳೆದ ರೋಚಕ ಕಥೆಯಿದು.

ಅದು ಬಟೇಶ್ವರ. ಇರುವುದು ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಮೂಲೆಯ ಬೆಂಗಾಡಿನಲ್ಲಿ. ಅದೂ ಚಂಬಲ್‌ ಕಣಿವೆಯ ಸರಹದ್ದಿನೊಳಗೆ ಎಂದರೆ ಪರಿಸ್ಥಿತಿ ಹೆಚ್ಚು ಅರ್ಥವಾದೀತು. ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳ ಪೋಲೀಸರಲ್ಲೂ ನಡುಕ ಹುಟ್ಟಿಸಿ ತಮ್ಮದೇ ಪಾತಕ ಜಗತ್ತನ್ನು ಸೃಷ್ಟಿಸಿಕೊಂಡು ಮರೆಯುತ್ತಿದ್ದ ಈ ಚಂಬಲ್‌ ಕಣಿವೆಯ ಡಕಾಯಿತರ ರಕ್ತಸಿಕ್ತ ಚರಿತ್ರೆಯ ಕರಿನೆರಳಿನಲ್ಲಿ ಜಗತ್ತಿನ ಕಣ್ಣಿಗೆ ಕಾಣದೇ ಹೋಗಿದ್ದು ಗುರ್ಜರ ಪ್ರತೀಹಾರರ ಅಧ್ಭುತ ನಾನ್ನೂರು ವರ್ಷಗಳ ಶ್ರೀಮಂತ ಚರಿತ್ರೆಯ ಭಾಗವಾದ ಬಟೇಶ್ವರ ದೇಗುಲಗಳು.

ಸುಮಾರು ೨೫ ಎಕರೆ ಪ್ರದೇಶದಲ್ಲಿ ನಾಮಾವಶೇಷವಾಗಿದ್ದ ಸುಮಾರು ೨೦೦ ದೇಗುಲಗಳು, ಶಿಲ್ಪಗಳು ಕೂಡಿಕೊಂಡು ಮತ್ತೆ ಜೀವ ತಳೆಯುವುದು ಕನಸಿನ ಮಾತೇ ಆಗಿತ್ತು. ಆ ಜಾಗವನ್ನು ಊಹನೆಗೂ ನಿಲುಕದಂತೆ ಮತ್ತೆ ಅದರದೇ ಅವಶೇಷಗಳಿಂದಲೇ ನಿರ್ಮಾಣ ಮಾಡಿದ ಪರಿಶ್ರಮ ಭೂಪಾಲ್‌ಗೆ ಪುರಾತತ್ವ ಸರ್ವೇಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿದ್ದ ಇದೇ ಕೆ.ಕೆ. ಮಹಮ್ಮದ್ ಅವರಿಗೆ ಸಲ್ಲಬೇಕು.

ಕೆ.ಕೆ.ಮಹಮ್ಮದ್‌ ಅವರು, ಗುಂಡಿನ ಸದ್ದೇ ಮೊಳಗುತ್ತಿದ್ದ ಚಂಬಲ್‌ ಕಣಿವೆಯಲ್ಲಿದ್ದ ಈ ಜಾಗಕ್ಕೆ ಭೇಟಿಕೊಟ್ಟು, ಶತಾಯಗತಾಯ ಈ ದೇವಾಲಯ ಸಮುಚ್ಛಯವನ್ನು ಮರಳಿ ಕಟ್ಟಿಯೇ ಕಟ್ಟುತ್ತೇನೆ ಎಂಬ ನಿರ್ಣಯದೊಂದಿಗೆ ಮರಳಿದ್ದೇನೋ ಆಗಿತ್ತು. ಅದಕ್ಕೆ ಸರ್ಕಾರದಿಂದ ಹಸಿರು ನಿಶಾನೆಯೂ ಸಿಕ್ಕಿದ್ದಾಗಿತ್ತು. ಆದರೆ, ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಡಕಾಯಿತಿಯ ಸಾಮ್ರಾಜ್ಯವೇ ಆಗಿಹೋಗಿದ್ದ, ನಾಗರಿಕ ಜಗತ್ತಿನಿಂದ ಕಣ್ಮರೆಯಾಗಿ ಶತಮಾನಗಳೇ ಕಳೆದಿದ್ದ ಸಂಪೂರ್ಣ ನೆಲಕಚ್ಚಿದ್ದ ಆ ದೇವಾಲಯವನ್ನು ಮರುಸ್ಥಾಪಿಸಲು, ಕೇವಲ ಸರ್ಕಾರದ ಹಸಿರು ನಿಶಾನೆ ಕೆಲಸ ಮಾಡುವುದಿಲ್ಲವೆಂಬುದು ಅರಿವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಮುಖ್ಯವಾಗಿ ಆ ಪ್ರದೇಶದ ಅಧಿಪತಿಗಳಂತೆ ಮೆರೆಯುತ್ತಿದ್ದ ಡಕಾಯಿತರ ಬೆಂಬಲವಷ್ಟೆ ಬೇಕಾಗಿತ್ತು.

ವಿಚಿತ್ರವೆಂದರೆ, ಆಗ ಚಂಬಲ್‌ನ ಚಕ್ರಾಧಿಪತಿಯಾಗಿ ಮೆರೆಯುತ್ತಿದ್ದ ನಿರ್ಭಯ್‌ ಸಿಂಗ್‌ ಗುರ್ಜರ್‌ ಮತ್ತವನ ಗುಂಪು, ತಾವು ಡಕಾಯಿತಿ ಮಾಡಿ ತರುವ ವಸ್ತುಗಳನ್ನು ಸಮಭಾಗ ಮಾಡಿಕೊಳ್ಳುವ ಕೆಲಸ ನಡೆಯುತ್ತಿದ್ದುದು ಇದೇ ಜಾಗದಲ್ಲಿ. ಇಲ್ಲಿದ್ದ ಹನುಮಂತನ ವಿಗ್ರಹವೊಂದಕ್ಕೆ ನಿತ್ಯವೂ ಕೈಮುಗಿದೇ ಅವರ ಡಕಾಯಿತಿ ಕೆಲಸ ಆರಂಭವಾಗುತ್ತಿದ್ದುದು. ಪರಿಸ್ಥಿತಿ ಹೀಗಿರುವಾಗ ಮಹಮ್ಮದ್‌ ಅವರು ಸರ್ಕಾರದ ಪತ್ರ ಹಿಡಿದು ಕೆಲಸಕ್ಕೆ ಹೊರಟರೆ, ಹೋದಷ್ಟೇ ವೇಗದಲ್ಲಿ ಉಳಿದರೆ, ಜೀವ ಕೈಯಲ್ಲಿ ಹಿಡಿದು ಮರಳಬೇಕಾಗಿತ್ತು.

ಹಾಗಾಗಿ ಪರಿಸ್ಥಿತಿಯ ಸೂಕ್ಷದ ಅರಿವಿದ್ದ ಮಹಮ್ಮದ್‌, ನಿಧಾನವಾಗಿ ಇದೇ ಡಕಾಯಿತರ ಸಹಮತದೊಂದಿಗೆ ಕಾರ್ಯಕ್ಕೆ ಕೈಹಾಕಿದರು. ಚದುರಿಬಿದ್ದ ಕಲ್ಲುಗಳು ಒಂದೊಂದೇ ಜೋಡಿಕೊಂಡು, ದೇವಾಲಯವೇ ಎದ್ದು ನಿಂತದ್ದು ನೋಡಿ, ಸ್ವತಃ ಆಗಿನ ಡಕಾಯಿತ ಮುಖಂಡ, ನಿರ್ಭಯ್‌ ಸಿಂಗ್‌ ಗುರ್ಜರ್‌ ಆಶ್ಚರ್ಯಚಕಿತನಾಗಿಬಿಟ್ಟಿದ್ದ. ದೇವಾಲಯವನ್ನೊಮ್ಮೆ ನೋಡಿ, ʻಯೇ ತೋ ಕಮಾಲ್‌ ಕಾ ಕಾಮ್‌ ಕರ್‌ ದಿಯಾ ಆಪ್‌ ನೇʼ ಎಂದು ಉದ್ಗರಿಸಿದ್ದನಂತೆ.

ಈ ಮಾತನ್ನು ಮಹಮ್ಮದ್‌ ಅವರ ಭಾಷಣದ ತುಣುಕಿನಲ್ಲಿ ಅವರ ಮಾತುಗಳಲ್ಲೇ ಕೇಳಬೇಕು. ಅವರು ಹೇಳುತ್ತಾರೆ, ʻನಿರ್ಭಯ್‌ ಸಿಂಗ್‌ ಬಂದು ದೇವಾಲಯವನ್ನೊಮ್ಮೆ, ನನ್ನನ್ನೊಮ್ಮೆ ನೋಡಿ ಆಶ್ಚರ್ಯದಿಂದ ಈ ಮಾತನ್ನೇನೋ ಹೇಳಿದ. ಈ ಮಾತಿನ ಜೊತೆಗೆ ಆತ ನಗಲು ಪ್ರಯತ್ನಿಸಿದ, ಆದರವನಿಗೆ ನಗು ಬರಲಿಲ್ಲ. ಯಾಕೆಂದರೆ ಆತ ನೂರಾರು ಜನರನ್ನು ಕೊಂದಿದ್ದ.

ಕೊಂದವನ ಮುಖದಲ್ಲಿ ನಗು ಹೇಗೆ ಅರಳೀತು! ಆದರೂ ಆತನಿಗಿದು ಬಹಳ ಕೌತುಕದ ವಿಷಯವಾಗಿತ್ತು ಎಂಬುದು ಆತ ನಗಲು ಪ್ರಯತ್ನಿಸಿದ್ದರಲ್ಲೇ ನನಗರಿವಾಗಿತ್ತು. ಆತನ ಈ ಒಂದು ಮಾತು ನಮ್ಮ ಕೆಲಸಕ್ಕೆ ಮುಂದೆಂದೂ ಅವರಿಂದ ಅಡ್ಡಿ ಬರಲಿಲ್ಲ. ಇದೇ ನಮಗೊಂದು ಅನುಮತಿ ಹಾಗೆ ಕೆಲಸ ಮಾಡಿತುʼ ಎನ್ನುತ್ತಾರೆ. ಇದರ ಪರಿಣಾಮ ೨೦೦ರಲ್ಲಿ ಸುಮಾರು ೮೦ ಮಂದಿರಗಳಾದರೂ ಮಹಮ್ಮದ್‌ ಅವರ ಕೈಯಿಂದ ಜೀವ ಬಂತು!

****

ವರುಷದ ಹಿಂದೆ, ಅದೊಂದು ಚಳಿಗಾಲದ ಬೆಳಗು. ಹಿತವೆನಿಸುವ ತಂಪಿದ್ದರೂ, ಮಧ್ಯಪ್ರದೇಶದ ಚುರುಕು ಬಿಸಿಲೂ ಇತ್ತು. ಮರದ ಮೇಲೆ ಎರಡು ಗಿಳಿಗಳು ಪ್ರೀತಿಯಲ್ಲಿ ಮುಳುಗಿದ್ದವು. ಆ ಕಹಿಬೇವಿನ ಮರದ ಹಸಿರೆಲೆಗಳೆಲ್ಲ ಆ ಗಿಳಿಗಳನ್ನು ಕ್ಯಾಮಫ್ಲಾಜ್‌ ಮಾಡಿ, ಅವುಗಳಿಗೆ ಏಕಾಂತ ಒದಗಿಸಿದ ಹಾಗೆ ಕಾಣುತ್ತಿತ್ತು. ಆದರೂ ಕ್ಯಾಮರಾ ಕಣ್ಣಿಗೆ ಸಿಗುತ್ತಿದ್ದರೆ, ಎಷ್ಟು ಚಂದವಿತ್ತಲ್ಲ ಅಂತ ಒಮ್ಮೆ ಅನಿಸಿದರೂ, ಎಲೆಗಳೆಡೆಯಲ್ಲಿ ಮರೆಯಾಗಿದ್ದ ಅವುಗಳ ತಂಟೆಗೆ ಹೋಗದೆ, ಅತ್ತ ತಿರುಗಿದರೆ, ಪುಷ್ಕರಣಿಯ ಬಳಿ ಬಿಳಿ ಧೋತಿ, ಬಿಳಿ ಅಂಗಿಯ ಇಳಿ ವಯಸ್ಸಿನಾತನ ಶಾಂತ ಮುಖಭಾವ ಒಮ್ಮೆಲೆ ಆಕರ್ಷಿಸಿತು. ಅದ್ಯಾವುದೋ ಹತ್ತಿರದೂರಿನ ಶಾಲೆಯ ಮಕ್ಕಳೋ, ಊರ ಮಂದಿಯೋ ಕಾಣೆ, ಒಂದ್ರಾಶಿ ಮಂದಿ ಬಂದವರೆಲ್ಲರೂ ಈತನಿಗೆ ಕೈಮುಗಿದೋ, ಕಾಲು ಮುಟ್ಟಿಯೋ, ನಮಸ್ಕರಿಸಿಯೋ ಮುಂದೆ ಸಾಗುತ್ತಿದ್ದರು.

ಅರೆ, ಯಾರೀತ. ಈ ಜನರಿಗೆಲ್ಲ ಗೊತ್ತಿರಬೇಕಾದರೆ, ಬಹುಶಃ ಇಲ್ಲಿಯವರೇ ಇರಬೇಕಲ್ಲ ಎಂದುಕೊಂಡು ಸುಮ್ಮನೆ ನೋಡುತ್ತಿದ್ದೆ. ಆತ, ಪುಷ್ಕರಣಿಗಿಳಿದು, ಒಂದೆರಡು ಹನಿ ನೀರನ್ನು ತಲೆಗೆ ಪ್ರೋಕ್ಷಣ್ಯ ಮಾಡಿಕೊಂಡು, ಒಂದೊಂದೇ ಗುಡಿಗೂ ನಮಸ್ಕರಿಸಲು ಶುರುಮಾಡಿದರು.

ಕಣ್ಣು ಹಾಯಿಸಿದಲ್ಲೆಲ್ಲ ಸುತ್ತಲೂ ತಲೆಯೆತ್ತಿ ನಿಂತಿರುವ ದೇಗುಲಗಳು, ನಡುವೆ ಬೆಳ್ಳಗಿನ ವಸ್ತ್ರಧಾರಿಯೊಬ್ಬ ಭಕ್ತಿಯಿಂದ ಕೈಮುಗಿಯುತ್ತಾ ನಿಂತಿರುವ ಚೆಂದನೆಯ ಫೋಟೋ ಕಲ್ಪಿಸಿಕೊಳ್ಳುತ್ತಾ ನಾನು ನನ್ನ ಕ್ಯಾಮರಾ ಸಮೇತ ಈತನ ಹಿಂದೆ ಬಿದ್ದೆ. ಕ್ಯಾಂಡಿಡ್‌ ಫೋಟೋ ದಕ್ಕಬೇಕೆಂಬ ಉದ್ದೇಶದಿಂದ, ಆತನಿಗೆ ನಾನು ಫೋಟೋ ತೆಗೆಯುವುದು ಆದಷ್ಟೂ ಗೊತ್ತಾಗದಿರಲಿ ಎಂದು ಮರೆಯಾಗಿ ಕ್ಲಿಕ್ಕಿಸುತ್ತಾ ಸಾಗಿದ್ದೆ.

ಅದ್ಯಾವ ಗಳಿಗೆಯಲ್ಲಿ ಆ ಒಬ್ಬರು ನನ್ನ ಈ ಸರ್ಕಸ್ಸು ನೋಡಿದರೋ ಏನೋ, ಅವರನ್ನು ಕರೆದು, ʻನೋಡಿ ನಿಮ್ಮ ಫೋಟೋ ತೆಗೆಯಲು ಆವಾಗಿನಿಂದ ಈ ಹೆಣ್ಣುಮಗಳೊಬ್ಬಳು ಒದ್ದಾಡುತ್ತಿದ್ದಾರೆ. ನೀವೊಮ್ಮೆ ಪೋಸ್‌ ಕೊಟ್ಟುಬಿಡಿ, ಅವರ ಕೆಲಸ ಸುಲಭವಾಗಲಿʼ ಎಂದು ಹೇಳಿಬಿಟ್ಟರೋ, ಅವರು ನನ್ನತ್ತ ನೋಡಿ ಆಶೀರ್ವಾದ ನೀಡುವ ಭಂಗಿಯಲ್ಲಿ ನಿಂತುಬಿಟ್ಟರು. ʻಛೇ, ಇದು ನನಗೆ ಬೇಡವಾಗಿತ್ತಲ್ಲ ಅಂದುಕೊಳ್ಳುತ್ತಲೇ, ವೃಥಾ ಕ್ಲಿಕ್ಕಿಸುವ ನಾಟಕ ಮಾಡಬೇಕಾಯಿತು.

ʻಮಗೂ, ನಿಮ್ಮೂರುʼ ಅಂದರು ಪ್ರಶ್ನಾರ್ಥಕ ಧಾಟಿಯಲ್ಲಿ. ಕರ್ನಾಟಕದಲ್ಲಿ ಮಂಗಳೂರಿನ ಹತ್ತಿರ. ಆದರೆ, ಇರೋದು ದೆಹಲಿʼ ಅಂದೆ. ಮಂಗಳೂರಿನ ಹೆಸರು ಕೇಳುತ್ತಲೇ ಅವರ ಮುಖವರಳಿತು. ಧರ್ಮಸ್ಥಳದಲ್ಲಿ ಕೆಲಕಾಲ ನಾನಿದ್ದೆ. ನಿಮ್ಮ ಕರ್ನಾಟಕದ ತುಂಬ ತಿರುಗಾಡಿದ್ದೇನೆ. ಬಹಳ ಇಷ್ಟವಾದ ಊರುಗಳವು. ಆರನೇ ವಯಸ್ಸಿನಲ್ಲೇ ಮನೆ ಬಿಟ್ಟೆ. ಆಮೇಲೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರುಗಾಡಿದೆ. ನನಗೆ ಊರು ಅಂತ ಯಾವುದೂ ಇಲ್ಲ. ಹುಟ್ಟಿದ್ದು ರಾಮ ಜನ್ಮಭೂಮಿ ಅಯೋಧ್ಯೆ. ಅದಕ್ಕೆ ನನ್ನ ಹೆಸರು ರಾಮಪ್ರಿಯ ಶರಣ ಎಂದು ನಾನು ಕೇಳುವ ಮೊದಲೇ ತನ್ನ ಹೆಸರನ್ನೂ ಹೇಳಿ ಮುಗುಳ್ನಕ್ಕರು.

ʻಈ ಜಾಗ ಮೊದಲು ಹೀಗಿರಲಿಲ್ಲ ಗೊತ್ತಾ? ಈ ಜಾಗ ಮತ್ತೆ ಹೀಗೆ ಜೀವ ತಳೆಯುವ ಹಿಂದೆಯೂ ಕಥೆಯಿದೆ. ನನಗೆ ಬಹಳ ಪ್ರಿಯವೆನಿಸುವ ಶಾಂತಿ ಕೊಡುವ ಜಾಗವಿದು. ಅದಕ್ಕೇ ಸಧ್ಯಕ್ಕೆ ಸ್ವಲ್ಪ ಕಾಲ ಇಲ್ಲೇ ಇರುವೆ ಅಂತ ತೀರ್ಮಾನಿಸಿರುವೆʼ ಎಂದರು. ʻಹೌದು, ಆ ಕಥೆ ಕೇಳಿಯೇ ನೋಡಬೇಕೆಂದು ಬಂದೆʼ ಎಂದ ನನ್ನನ್ನೂ, ನನ್ನ ಕೈಲಿದ್ದ ಕ್ಯಾಮರಾವನ್ನೂ ಒಮ್ಮೆ ನೋಡಿ ನನ್ನ ತಲೆ ನೇವರಿಸಿ ಮತ್ತೆ ಪುಷ್ಕರಣಿಯತ್ತ ನಡೆದರು.

****

ಅಂದಾಜಿನ ಪ್ರಕಾರ ಸುಮಾರು ಎಂಟನೇ ಶತಮಾನದಿಂದ ಈ ದೇವಾಲಯಗಳ ನಿರ್ಮಾಣ ಕಾರ್ಯ ಶುರುವಾಯಿದೆಂದು ಇತಿಹಾಸ ಹೇಳುತ್ತದೆ. ಸುಮಾರು ೪೦೦ಕ್ಕೂ ಹೆಚ್ಚು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಗುರ್ಜರ ಪ್ರತೀಹಾರ, ಈ ದೇಶ ಕಂಡ ಅತ್ಯಂತ ಪ್ರಾಚೀನ ರಾಜಮನೆತನಗಳಲ್ಲಿ ಒಂದು. ಮಧ್ಯಪ್ರದೇಶದ ಉಜ್ಜಯಿನಿಯಿಂದ ಹಿಡಿದು ಉತ್ತರ ಪ್ರದೇಶದ ಕನೌಜ್‌ವರೆಗೆ ವ್ಯಾಪಿಸಿದ್ದ ಬೃಹತ್‌ ಸಾಮ್ರಾಜ್ಯವಿದು.

ಭಾರತಕ್ಕೆ ದಂಡೆತ್ತಿ ಬಂದ ಅರಬ್‌ ದೊರೆಗಳನ್ನು ಮೊದಲ ಬಾರಿಗೆ ಎದುರಿಸಿ ಸೋಲಿಸಿದ್ದೇ ಈ ಗುರ್ಜರ ರಾಜರು. ಇದರ ಪರಿಣಾಮ, ನಾಲ್ಕು ಶತಮಾನಗಳ ಕಾಲ ಅರಬ್ಬರು ಭಾರತದ ಕಡೆ ತಲೆ ಹಾಕಲಿಲ್ಲ. ಮಂಟಪ ಶೈಲಿಯಲ್ಲಿ ಕಟ್ಟಲಾಗಿರುವ ಬಟೇಶ್ವರ ದೇಗುಲಗಳು ಇವರ ಕಾಲದ ಅತ್ಯಂತ ಸಮೃದ್ಧ ಶ್ರೀಮಂತ ದೇಗುಲಗಳು. ಸುಮಾರು ೨೦೦ ವರ್ಷ ಕಾಲ ಈ ದೇಗುಲಗಳು ಇಲ್ಲಿ ನಿರ್ಮಾಣವಾಗುತ್ತಲೇ ಇದ್ದವು ಎಂಬುದಕ್ಕೆ ಆಧಾರಗಳಿವೆ.

ಸುಮಾರು, ೧೩ನೇ ಶತಮಾನದಲ್ಲಿ ನೆಲಸಮವಾಗಿರಬಹುದು ಎಂಬ ಅಂದಾಜು. ಹೇಗೆ ಈ ಇಡೀ ಸಮುಚ್ಛಯ ನಿರ್ನಾಮ ಹೊಂದಿತ್ತೆಂಬುದಕ್ಕೆ ನಿರ್ಧಿಷ್ಟ ಕಾರಣಗಳು ಸಿಗುವುದಿಲ್ಲ. ಯಥಾ ಪ್ರಕಾರ, ಎಲ್ಲವುಗಳಂತೆ ಇದೂ ಕೂಡಾ, ಬಹುಶಃ ಭೂಕಂಪ ಅಥವಾ ಮುಸ್ಲಿಂ ದಾಳಿಕೋರರಿಂದ ನಾಶ ಹೊಂದಿರಬಹುದೆಂಬ ಲೆಕ್ಕಾಚಾರ ಇದೆ.

ಇನ್ನೂ ಕೆಲವು ಅಂದಾಜುಗಳ ಪ್ರಕಾರ, ಇಂದಿಗೆ ಸಾವಿರ ವರ್ಷಗಳ ಹಿಂದೆ ಮಧ್ಯಪ್ರದೇಶದ ಮಿತಾವಳಿ, ಪದಾವಳಿ ಹಾಗೂ ಬಟೇಶ್ವರಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು. ಗಣಿತ, ಜ್ಯೋತಿಷ್ಯ ವಿದ್ಯೆ ಹಾಗೂ ಹಿಂದೂ ಧರ್ಮದ ಶಿಕ್ಷಣ ಇಲ್ಲಿ ದೊರೆಯುತ್ತಿತ್ತು. ಒಂದು ಕಾಲದಲ್ಲಿ ದೇಶದ ಮೂಲೆ ಮೂಲೆಗಳಿಂದಲೂ ವಿದ್ಯಾಕಾಂಕ್ಷಿಗಳಾಗಿ ಇಲ್ಲಿ ಬಂದು ಕಲಿತು ಹೋಗುವವರಿದ್ದರು. ಹೀಗೆ ಬಂದು ಹೋಗುವವರು ಗುರುದಕ್ಷಿಣೆಯಾಗಿ ಒಂದೊಂದು ದೇಗುಲಗಳನ್ನು ತಮ್ಮ ಹೆಸರಿನ ಗುರುತಾಗಿ ಇಲ್ಲಿ ನಿರ್ಮಿಸಿ ಹೋಗುತ್ತಿದ್ದರಿರಬಹುದು ಎಂಬ ಕಥೆಯೂ ಬೆನ್ನಿಗಿದೆ.

ಇಂಥದ್ದೊಂದು ಸಾಮ್ರಾಜ್ಯದ ಈ ಬೃಹತ್‌ ದೇವಾಲಯ ಸಮುಚ್ಛಯದ ಇರುವಿಕೆ ಮೊದಲು ಅರಿವಾಗಿದ್ದು ೧೮೮೨ರಲ್ಲಿ. ಆಗ ಪುರಾತತ್ವಶಾಸ್ತ್ರಜ್ಞರಾದ ಅಲೆಕ್ಸಾಂಡರ್‌ ಕನ್ನಿಂಗ್‌ಹ್ಯಾಂ ಎಂಬಾತ ಈ ಜಾಗಕ್ಕೆ ಭೇಟಿ ಕೊಟ್ಟು ಪದಾವಳಿ ಎಂಬಲ್ಲಿ ಬಹಳ ಹಳೆಯ ಕಾಲದ ಸುಂದರವಾದ ಸುಮಾರು ೧೦೦ ದೇವಾಲಯಗಳ ಸಮುಚ್ಛಯವೊಂದರ ಅವಶೇಷವಿದೆ ಎಂದು ದಾಖಲಿಸಿದ್ದರು ಎಂಬಲ್ಲಿಗೆ ಬಟೇಶ್ವರನ ಕಥೆ ತೆರೆದುಕೊಂಡಿತು.

ಇದಾದ ಮೇಲೆ ಬ್ರಿಟೀಷ್‌ ಕಾಲದಲ್ಲೇ ೧೯೨೦ರಲ್ಲಿ ಇದು ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟಿತೇನೋ ನಿಜವಾದರೂ, ಇದರ ಪುನರುಜ್ಜೀವನ ಅಷ್ಟು ಸುಲಭವಾಗಿ ಶುರುವಾಗಲಿಲ್ಲ. ಯಾರ್ಯಾರೋ ಆಗೊಮ್ಮೆ ಈಗೊಮ್ಮೆ ವಿದೇಶೀ ಪುರಾತತ್ವ ಶಾಸ್ತ್ರಜ್ಞರು ಭೇಟಿಕೊಟ್ಟು ಒಂದಿಷ್ಟು ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಿದ್ದು ಬಿಟ್ಟರೆ ಹೆಚ್ಚೇನೂ ಆಗಲಿಲ್ಲ. ಶತಮಾನದ ಕಾಲ ಮತ್ತೆ ತಣ್ಣಗೆ ಮಲಗಿಯೇ ಇತ್ತು. ಆಮೇಲೆ ಬಟೇಶ್ವರದ ಅದೃಷ್ಟ ಖುಲಾಯಿಸಿದ್ದು ೨೦೦೫ರ ವೇಳೆಗೆ. ಕೆ.ಕೆ. ಮಹಮ್ಮದ್‌ ಎಂಬ ಅತ್ಯುತ್ಸಾಹಿ ಪುರಾತತ್ವ ಶಾಸ್ತ್ರಜ್ಞ ಭೋಪಾಲ್‌ಗೆ ನಿಯುಕ್ತಿಯಾಗಿ ಸೇರಿದ್ದೇ ಸೇರಿದ್ದು, ಈ ಅಧ್ಯಾಯ ಮೆಲ್ಲನೆ ತನ್ನ ಪುಟ ತೆರೆಯಿತು.

ಕನ್ನಿಂಗ್‌ ಹ್ಯಾಂ ಅವರು ಆಗಲೇ ಬಹಳಷ್ಟು ವಿಷಯಗಳನ್ನು ಬರೆದುಕೊಂಡಿದ್ದರು. ಸಣ್ಣ ಸಣ್ಣ ಸುಮಾರು ನೂರು ದೇವಾಲಯಗಳು ಇಲ್ಲಿದ್ದಿರಬಹುದು. ಇದ್ದುದರಲ್ಲಿ ದೊಡ್ಡ ದೇವಾಲಯ ಶಿವನದ್ದು. ಸ್ಥಳೀಯರಿಗೆ ಇದು ಭೂತೇಶ್ವರನ ಗುಡಿ. ಇದೇ ಭೂತೇಶ್ವರನ ಕಾರಣವೇ ಇದು ಬಟೇಶ್ವರ ಎಂಬ ಹೆಸರಾಗಿ ಬದಲಾಯಿತು. ದೇವಾಲಯದ ಮೇಲೆ ಗರುಡನಿರುವುದರಿಂದ ಬಹುಶಃ ಇದು ವಿಷ್ಣು ದೇವಸ್ಥಾನವಿದ್ದು, ಆಮೇಲೆ ಇದು ಶಿವ ದೇವಾಲಯವಾಗಿ ಬದಲಾಯಿಸಿಕೊಂಡಿರುವ ಸಾಧ್ಯತೆಗಳೂ ಇವೆ. ಇಲ್ಲೇ ಸಿಕ್ಕಿದ ಶಾಸನಗಳು ೧೧ನೇ ಶತಮಾನದ್ದಾಗಿವೆ ಎಂಬ ವಿವರಗಳನ್ನೆಲ್ಲ ಮೊದಲು ತಿಳಿಸಿದ್ದು, ಇದೇ ಕನ್ನಿಂಗ್‌ ಹ್ಯಾಂ.

ಐದು ವರ್ಷ ಎಡೆಬಿಡದೆ ಸಾಗಿದ ಕೆಲಸಕ್ಕೆ ಮೊದಲು ಡಕಾಯಿತರೇ ಅಡ್ಡಿ ಅಂದುಕೊಂಡ ಮಹಮ್ಮದ್‌ ಅವರ ಎಣಿಕೆ ತಪ್ಪಾಗಿತ್ತು. ಡಕಾಯಿತರು ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಭೂತನಾಥನ ಮರುಸ್ಥಾಪನೆಗೆ ಕೈಜೋಡಿಸಿಬಿಟ್ಟರು. ಇದೇ ವೇಳೆಗೆ ಕೆಲಕಾಲದಲ್ಲಿ ನಿರ್ಭಯ್‌ ಸಿಂಗ್‌ನ ಹತ್ಯೆಯಾಗುವಲ್ಲಿಗೆ ಡಕಾಯಿತರ ಯುಗಕ್ಕೇನೋ ಕಡಿವಾಣವೂ ಬಿದ್ದಿತ್ತು. ಆದರೆ, ನಿಜವಾಗಿ ಈ ಕೆಲಸಕ್ಕೆ ಆತಂಕ ಹುಟ್ಟಿಸಿದ್ದು ಗಣಿ ಮಾಫಿಯಾ. ಡಕಾಯಿತರ ಅಂತ್ಯವಾಗುತ್ತಿದ್ದಂತೆ ತಲೆಯೆತ್ತಿದ ಗಣಿ ಮಾಫಿಯಾದಿಂದಾಗಿ, ಪರಿಶ್ರಮ ಪಟ್ಟು ಕಟ್ಟಿದ್ದ ದೇಗುಲಗಳ ಬುಡ ಮತ್ತೆ ಅಲ್ಲಾಡತೊಡಗಿತ್ತು.

ಮತ್ತೆ ಕೆ.ಕೆ. ಮಹಮ್ಮದ್‌ ಇದರ ಹಿಂದೆ ಬಿದ್ದು ಹೋರಾಡಿ, ಪತ್ರದ ಮೇಲೆ  ಪತ್ರ ಬರೆದು, ಕೊನೆಗೂ ಸರ್ಕಾರದ ಮೂಲಕವೇ ಈ ಪ್ರದೇಶದ ಗಣಿ ಮಾಫಿಯಾಕ್ಕೊಂದು ಫುಲ್‌ ಸ್ಟಾಪ್‌ ಹಾಕಿಸಿ, ಅಂದುಕೊಂಡ ಕೆಲಸವನ್ನು ಸಾಧಿಸಿಯೇಬಿಟ್ಟರು! ಬಹುಶಃ ಇಲ್ಲಿ ಡಕಾಯಿತರ ಭಯ ಇದ್ದಿದ್ದಕ್ಕೋ ಏನೋ ಚದುರಿಬಿದ್ದ ಶಿಲ್ಪಗಳೆಲ್ಲವೂ ಹಾಗೇ ಪುಣ್ಯವಶಾತ್‌ ಉಳಿದಿತ್ತೇನೋ, ಇಲ್ಲವಾದರೆ ಅದೂ ಇರುತ್ತಿರಲಿಲ್ಲವೇನೋ ಎಂದೂ ಅನಿಸದೆ ಇರದು.

ಕೇವಲ ಬಟೇಶ್ವರ ಸಮುಚ್ಛಯ ಮಾತ್ರವಲ್ಲ. ಫತ್ತೇಪುರ್‌ ಸಿಕ್ರಿಯ ಉತ್ಖನನ ಹಾಗೂ ಅಕ್ಬರನ ಇಬಾದತ್‌ ಖಾನಾವನ್ನು ಬೆಳಕಿಗೆ ತಂದಿದ್ದು, ಛತ್ತೀಸ್‌ಘಡದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ದೇವಾಲಯಗಳ (ದಾಂಟೆವಾಡ) ಪುನರುಜ್ಜೀವನ, ಚಕ್ರವರ್ತಿ ಅಶೋಕನ ಕಾಲದ ಬೌದ್ಧ ಸ್ತೂಪಗಳಾದ ಕೇಸರಿಯಾ, ರಾಜಗೀರ್‌, ಬುದ್ಧನ ವೈಶಾಲಿಯ ಉತ್ಖನನ ಎಲ್ಲವೂ ಮಹಮ್ಮದ್‌ ಅವರ ವೃತ್ತಿಬದುಕಿನ ಮೈಲುಗಲ್ಲುಗಳು.

ಬಹುಮುಖ್ಯವಾಗಿ ರಾಮಜನ್ಮಭೂಮಿ ಅಯೋಧ್ಯೆಯ ಉತ್ಖನನದಲ್ಲಿ ಭಾಗಿಯಾಗಿ ಕಂಡುಕೊಳ್ಳಲಾದ ಸತ್ಯಗಳು ಹಾಗೂ ಆ ಕುರಿತು ಕೆ.ಕೆ. ಮಹಮ್ಮದ್‌ ನೀಡಿದ ದಾಖಲೆಗಳು ಅವರ ವೃತ್ತಿಜೀವನದ ವಿವಾದಾತ್ಮಕ ತಿರುವು. ಪದ್ಮಶ್ರೀ ಪುರಸ್ಕೃತ ಕೆ.ಕೆ. ಮಹಮ್ಮದ್‌ ಅವರು ಮಲಯಾಳಂನಲ್ಲಿ ಬರೆದ ʻನಾನು ಭಾರತೀಯʼ ಎಂಬ ತಮ್ಮ ಜೀವನ ಚರಿತ್ರೆಯಲ್ಲಿ ಹಾಗೂ ಹಲವಾರು ಸಂದರ್ಶನಗಳಲ್ಲಿ ಹೊರಹಾಕಿದ ಮಾತುಗಳು ಅವರನ್ನು ವಿವಾದಗಳಲ್ಲಿ ಸಿಲುಕಿಸಿತ್ತು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಅವರೇ ಹೇಳುವ ಪ್ರಕಾರ, ವೃತ್ತಿಜೀವನದಲ್ಲಿ ಹೃದಯಕ್ಕೆ ಹತ್ತಿರವಾದ ಕೆಲಸ ಅಂದರೆ ಬಟೇಶ್ವರದ ಪುನರುಜ್ಜೀವನ. ತನುಮನ ಅರ್ಪಿಸಿ ಮಾಡಿದ ಕೆಲಸವದು. ಇಂದಿಗೂ ಆಗಾಗ ಬಟೇಶ್ವರಕ್ಕೊಮ್ಮೆ ಹೋಗಿ ಸುಮ್ಮನೆ ಕೂತು ಬಂದರೆ ನೆಮ್ಮದಿ ಕಾಣುತ್ತೇನೆ ಎನ್ನುತ್ತಾರವರು.

ಅಂದುಕೊಂಡದ್ದನ್ನು ಸಾಧಿಸಲು ಮಹಮ್ಮದ್‌ ಅವರು ಪಟ್ಟ ಶ್ರಮ ಬಹಳ. ಅದು ಅವರ ಬಾಯಿ ಮಾತಲ್ಲಿ ಕೇಳುವುದಕ್ಕಿಂತಲೂ ಹೋಗಿ ನೋಡುವುದರಿಂದ ಮನದಟ್ಟಾಗುತ್ತದೆ. ಅವರೇ ಹೇಳುವಂತೆ, ಇದಕ್ಕಾಗಿ, ಅವರು, ಹೊರಗೆ ನಡೆಸಿದ ಹೋರಾಟಗಳೆಷ್ಟೋ ಅಷ್ಟೇ ರಾತ್ರಿಗಳನ್ನೂ ಗುರ್ಜರ ಪ್ರತೀಹಾರರ ಚರಿತ್ರೆ, ಮಾನಸಾರ ಶಿಲ್ಪಶಾಸ್ತ್ರ, ಮಾಯಾವತ ವಾಸ್ತುಶಾಸ್ತ್ರ, ಭೋಜರಾಜನ ಸಮರಾಂಗಣ ಸೂತ್ರಧಾರಗಳನ್ನೆಲ್ಲ ಓದಿ ಮನದಟ್ಟು ಮಾಡಿಕೊಂಡ ವಿಚಾರಗಳೂ ಕೂಡಾ.

ಮಹಮ್ಮದ್‌ ಅವರ ಐದು ವರ್ಷದ ಅಕ್ಷರಶಃ ತಪಸ್ಸಿಂದಾಗಿಯೇ ಈಗ ಇಲ್ಲಿ ೮೦ ದೇಗುಲಗಳು ಮೈಕೊಡವಿಕೊಂಡು ಎದ್ದು ನಿಂತಿವೆ. ನಡುವಿನಲ್ಲೊಂದು ಚಂದದ ಪುಷ್ಕರಣಿ. ಇವಿಷ್ಟಲ್ಲದೆ, ಛಾವಣಿ ಸಿಗದೆಯೋ, ಕಂಬ ಸಿಗದೆಯೋ, ತಮ್ಮ ಭಾಗಗಳನ್ನು ಕಳೆದುಕೊಂಡಿರುವ ಎಷ್ಟೋ ಶಿಲ್ಪಗಳು ಚಲ್ಲಾಪಿಲ್ಲಿಯಾಗಿ ಇಂದಿಗೂ ಬಿದ್ದುಕೊಂಡಿವೆ. ಬಟೇಶ್ವರನೇನೋ ತಾನುಂಡ ಕಷ್ಟಗಳಲ್ಲಿ ಅಲ್ಪಸ್ವಲ್ಪ ಕೆ.ಕೆ ಮಹಮ್ಮದ್‌ ಬಳಿಯಲ್ಲಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾನೆ. ಆದರೆ, ಹೇಳದೆ ಉಳಿದ ಕಥೆಗಳಿನ್ನೆಷ್ಟೋ.

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: