‘ಟಿಕ್ ಟಾಕ್’ ಹುಟ್ಟಿಸಿದ ಕ್ರೇಜ್

ದಿನೇಶ್ ಕುಮಾರ್ ಎಸ್ ಸಿ

ಇಂಡಿಯಾದಲ್ಲಿ ಯಾರಿಗೆ ಸ್ಟಾರ್ ಆಗಲು, ಫೇಮಸ್ ಆಗಲು ಇಷ್ಟ ಇಲ್ಲ ಹೇಳಿ? ಮನುಷ್ಯ ಹಾಗೇನೇ, ತನ್ನನ್ನು ಎಲ್ಲರೂ ಅಥವಾ ಯಾರಾದರೂ ಗಮನಿಸಬೇಕು, ಗುರುತಿಸಬೇಕು ಎಂದು ಬಯಸುತ್ತಾನೆ. ಇಂಟರ್ ನೆಟ್ ಶುರುವಾದ ಹೊಸದರಲ್ಲಿ ಬ್ಲಾಗ್ ಗಳು ಬಂದವು. ಒಂದು ಚಂದನೆಯ ಚೌಕಟ್ಟು ಹಾಕಿ, ಮನಸಿಗೆ ಬಂದ ಹೆಸರು ಇಟ್ಟು ಬರೆದೆವು, ಸೊಗಸಾದ ಫೊಟೋಗಳನ್ನು ಹಾಕಿದೆವು. ಅಲ್ಲಿ ಶುರುವಾಯಿತು ವ್ಯೂಸ್ ಹುಚ್ಚು.

ಯಾವ ಪೋಸ್ಟು ಎಷ್ಟು ಜನ ನೋಡಿದರು? ಯಾವ ಯಾವ ದೇಶಗಳಿಂದ ನೋಡಿದರು ಎಂಬುದೆಲ್ಲ ಯಾವಾಗ ಗೊತ್ತಾಗತೊಡಗಿತೋ, ಸಣ್ಣಗೆ ರೋಮಾಂಚನ ಶುರುವಾಯಿತು.ಆಮೇಲೆ ಆರ್ಕುಟ್, ಟ್ಯಾಗ್ಡ್ ಇತ್ಯಾದಿ ಏನೇನೋ ಬಂದವು. ಪಟ್ಟಾಗಿ ಕುಳಿತಿದ್ದು ಮಾತ್ರ ಫೇಸ್ ಬುಕ್. ಈ ಫೇಸ್ ಬುಕ್ಕನ್ನು ಹೊರಜಗತ್ತಿನಲ್ಲಿ ಕರೆಯೋದು ಅಮ್ಮಂದಿರ ಅಪ್ಲಿಕೇಷನ್ ಎಂದೇ. ಇಂಡಿಯಾದ ಮಟ್ಟಿಗೆ ಅದು ಅಮ್ಮಂದಿರನ್ನು ದಾಟಿ ಮಕ್ಕಳು, ಮರಿ, ಮುದುಕರವರೆಗೆ ಹರಡಿಕೊಂಡಿತು. ಟ್ವಿಟರ್ ಶುರುವಾಯಿತು. ಅದು ಪೊಲಿಟಿಕಲಿ ಓರಿಯೆಂಟೆಡ್ ಆಗಿ ಮುಂದುವರೆಯಿತು.

ಫೇಸ್ ಬುಕ್ಕನ್ನು ಬೈಕೊಂಡು ತಿರುಗಾಡೋ ಎಲೈಟುಗಳು ಇನ್ಸ್ಟಾಗ್ರಾಂ ಹೊಕ್ಕು ಕುಳಿತರು. ಫೇಸ್ ಬುಕ್ಕಾ, ಶೀ… ನಾನು ಅಕೌಂಟೇ ಇಟ್ಕೊಂಡಿಲ್ಲ. ನಾನು ಇನ್ಸ್ಟಾ ದಲ್ಲಿ ಇದ್ದೀನಪ್ಪ ಎಂದು ಫೋಜು ಕೊಟ್ಟರು. ಬಿಜಿನೆಸ್ ದೊರೆಗಳು ಅದೇನೋ ಲಿಂಕ್ ಡೆನ್ ಹುಡುಕಿಕೊಂಡರು. ಇದೆಲ್ಲ ಬರೆಯಲು ಇಷ್ಟಪಡುವ, ಓದಲು ಇಷ್ಟಪಡುವ ಜನರ ಅಪ್ಲಿಕೇಷನ್ ಗಳು.

ಈ ಕೆಟಗರಿಗೆ ಒಳಪಡದ ದೊಡ್ಡ ಸಮೂಹವೊಂದು ಹಾಗೇ ಉಳಿದುಕೊಂಡಿತ್ತು. ಅದು ಫೇಸ್ ಬುಕ್ಕಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು ಹಾಕೊಂಡು, ಸುಖಸಂಸಾರಕ್ಕೆ ಯಾರೋ ಬರೆದ ಇಪ್ಪತ್ನಾಲ್ಕು ಸೂತ್ರಗಳ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು ಮಿಕಮಿಕ ನೋಡುತ್ತಿತ್ತು. ಇವರ ಪೈಕಿ ಬಹುತೇಕರಿಗೆ ಡ್ಯಾನ್ಸ್ ಮಾಡುವುದು ಗೊತ್ತು, ಲಿಪ್ ಸಿಂಕ್ ಮಾಡುವ ಕಲೆ ಸಿದ್ಧಿಸಿದೆ, ಕಾಮಿಡಿ ಮಾಡುವುದು ಬರುತ್ತೆ, ಜಿಮ್ನಾಶಿಯಂ, ಮಿಮಿಕ್ರಿ, ಹಾಳುಮೂಳು ಏನೇನೋ ಗೊತ್ತು. ಆದರೆ ತೋರಿಸೋದು ಎಲ್ಲಿ? ತಮ್ಮ ಪ್ರತಿಭೆ ಅನಾವರಣ ಮಾಡಿ ಫೇಮಸ್ಸಾಗುವುದು ಹೇಗೆ? ಇವರ ಹಸಿವೆ ನೀಗಿಸಲು ಬಂದಿದ್ದೇ ಟಿಕ್ ಟಾಕ್.‌

ಈ ದೊಡ್ಡ ಸಮೂಹಕ್ಕೆ ಬೇಕಾಗಿದ್ದ exposures, stardom, identityಯನ್ನು ಟಿಕ್ ಟಾಕ್ ಅನಾಮತ್ತಾಗಿ ತಂದುಕೊಟ್ಟುಬಿಟ್ಟಿತು. ಟಿಕ್ ಟಾಕ್ ಹದಿನೈದು ಸೆಕೆಂಡುಗಳ ವಿಡಿಯೋ ಆಪ್. ನಾವು ಬರೆಯುವ, ಓದುವ ಮಂದಿ ಅದನ್ನು ನೋಡಿ ಮೂಗುಮುರಿದೆವು. ಏನೋ ಅಂಥದ್ದು ಇಂಥದ್ದು ಕಂಡಾಗ ಫಸ್ಟು ಬ್ಯಾನ್ ಮಾಡ್ರೀ ಎಂದು ಮುಖ ಸಿಂಡರಿಸಿದೆವು. ಆದರೆ ನಮಗೆ ಆಗ ಗೊತ್ತಾಗದ ವಿಷಯವೇನೆಂದರೆ ಟಿಕ್ ಟಾಕ್ ಕೋಟಿಗಟ್ಟಲೆ ಜನರ ಬದುಕಿನ ಭಾಗವೇ ಆಗಿ ಹೋಗಿತ್ತು.

ಜನ ಹಾಡಿದರು, ಕುಣಿದರು, ತಮಾಶೆ ಮಾಡಿ ನಕ್ಕರು, ಇದ್ದಕ್ಕಿದ್ದಂತೆ ಫೇಮಸ್ ಆದರು.‌ ಇವನೇ ಕಣೇ ಆ ಟಿಕ್ ಟಾಕ್ ಮಾಡಿದವನು ಎಂದೋ, ಇವಳು ಟಿಕ್ ಟಾಕಲ್ಲಿ ಫೇಮಸ್ಸಲ್ವಾ ಎಂದೋ ರಸ್ತೆರಸ್ತೆಯಲ್ಲಿ ಟಾಕ್ ಹುಟ್ಟುವಷ್ಟು ಇದೆಲ್ಲ ಬೆಳೆದುಹೋಯಿತು. ಡ್ಯಾನ್ಸ್, ಕಾಮಿಡಿ ಮಾಡುವವರಿಗೆ ಹೊಸಹೊಸ ಥೀಮ್ ಗಳು ಸಿದ್ಧವಾದವು. ಜನ ಕುಣಿದೇ ಕುಣಿದರು.

ಹದಿನೈದು ಸೆಕೆಂಡಿನ‌ ವಿಡಿಯೋ ಮಾಡಲು ದೊಡ್ಡ ಬುದ್ಧಿವಂತಿಕೆಯೇನೂ ಬೇಕಾಗಿರಲಿಲ್ಲ, ಟ್ಯೂನ್ ಸೆಲೆಕ್ಟ್ ಮಾಡಿ, ಕ್ಯಾಮೆರಾ ಆನ್ ಮಾಡುವುದಕ್ಕೆ ಯಾವ ಟ್ರೈನಿಂಗು ಬೇಕು ಹೇಳಿ. ಟಿಕ್ ಟಾಕ್ ಎಲ್ಲವನ್ನು ಸುಲಭ ಮಾಡಿಕೊಟ್ಟಿತ್ತು. ಜನರು ಹದಿನೈದು ಸೆಕೆಂಡುಗಳ ಈ ವಿಡಿಯೋದ ಪ್ರತಿ ಸೆಕೆಂಡನ್ನೂ ಜೀವಿಸಿಬಿಟ್ಟರು. ಇದು ಪೋರ್ನ್ ಪ್ರಮೋಟ್ ಮಾಡ್ತಾ ಇದೆ ಎಂದು ಅಬ್ಬರಿಸಿದೆವು ನಾವು. ತಮಾಶೆ ಎಂದರೆ ಪೋರ್ನ್ ಎಲ್ಲಿ ಇರಲಿಲ್ಲ? ಯೂಟ್ಯೂಬ್? ಫೇಸ್ ಬುಕ್? ಎಲ್ಲ ಕಡೆಯೂ ಇತ್ತು. ಅದನ್ನು ನಾವು ಗಮನಿಸಿರಲಿಲ್ಲವಷ್ಟೆ.

ಟಿಕ್ ಟಾಕ್ ಗೆ ಬಂದ ಒಂದು ದೊಡ್ಡ ಜನವರ್ಗದ ಕುರಿತು ನಮಗೆ ಒಳಗೊಳಗೆ ಅಸಹನೆಯಿತ್ತಾ? ಅವರ ಖುಷಿ, ಸಂಭ್ರಮವನ್ನು ನೋಡಿ ನಾವು ಒಳಗಿಂದೊಳಗೆ ಕರುಬಿದೆವಾ? ನಮ್ಮನ್ನು ನಾವು ಕೇಳಿಕೊಳ್ಳಬೇಕು. ಬಣ್ಣ ಹೋಗಲಿ, ಪ್ಲಾಸ್ಟರಿಂಗ್ ಕೂಡ ಕಾಣದ ಗೋಡೆಯ ಹಿನ್ನೆಲೆಯಿಂದ ಹಿಡಿದು, ಮಸಿ ಹಿಡಿದ ಕುಕ್ಕರು, ತುಕ್ಕುಹಿಡಿದ ಗ್ಯಾಸ್ ಸ್ಟವ್, ಮುರುಕಲು ಪಾತ್ರೆಗಳು, ಪುಟಾಣಿ ಹಾಲ್ ನಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಬಟ್ಟೆಗಳು… ಅವುಗಳ ಮುಂದೆ ಖುಷಿಯಿಂದ ಕುಣಿಯುವ ಟಿಕ್ ಟಾಕರ್ ಗಳು. ಅದು ಮಿಡ್ಲ್ ಕ್ಲಾಸ್, ಲೋಯರ್ ಮಿಡ್ಲ್ ಕ್ಲಾಸ್ ಜನರ ವೇದಿಕೆಯಾಗಿತ್ತಾ? ಯಾರಾದರೂ ಒಂದು ರಿಸರ್ಚ್ ಮಾಡಿ ಹೇಳಬೇಕು. ಅಂದಹಾಗೆ ಟಿಕ್ ಟಾಕು ಖರ್ಚಿನ ಬಾಬತ್ತೇನೂ ಆಗಿರಲಿಲ್ಲ.

ಜಿಯೋ ಪುಕ್ಕಟೆ ಡೇಡಾ ಕೊಡುತ್ತಿತ್ತು. ಚೀಪ್ ರೇಟಿನ ಒಂದು ಆಂಡ್ರಾಯ್ಡ್ ಇದ್ದರೂ ಸಾಕಲ್ಲವೇ? ಟಿಕ್ ಟಾಕ್ ಗರಿಗೆದರಿ ನಿಲ್ಲೋದಕ್ಕೆ ಇನ್ನೇನು ಬೇಕಿತ್ತು? ಟಿಕ್ ಟಾಕ್ ಈಗ ಬ್ಯಾನ್ ಆಗಿದೆ. ನಾವು ಬೈಟ್ ಡ್ಯಾನ್ಸ್ ಗೆ ಆಗಿರಬಹುದಾದ ನಷ್ಟದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ಆದರೆ ಟಿಕ್ ಟಾಕರ್ ಗಳು ತಮ್ಮ ಪ್ರೊಫೈಲ್ ಕೂಡ ಕಾಣಿಸದೆ ಕಂಗಾಲಾಗಿದ್ದಾರೆ. ಅದೆಷ್ಟು ಲೈಕ್ ಇದ್ವು? ಅದೆಷ್ಟು ಫಾಲೋಯರ್ಸ್ ಇದ್ರು? ಅದೆಷ್ಟು ಶೇರ್ ಆಗಿದ್ವು? ಒಂದು ದೊಡ್ಡ ವರ್ಚುಯಲ್ ಸೌಧ ಅವರ ಪಾಲಿಗೆ ಕುಸಿದೇ ಹೋಯಿತು. ಸುಮ್ನೆ ಒಮ್ಮೆ ಫೇಸ್ ಬುಕ್ ಬ್ಯಾನ್ ಆಯಿತು ಎಂದಿಟ್ಟುಕೊಳ್ಳಿ.

ನಮ್ಮ ಬಳಿ ಯಾವ ಬ್ಯಾಕ್ ಅಪ್ ಇರಲು ಸಾಧ್ಯ? ನಿಮ್ಮ ಫೊಟೋಗಳಿಂದ ಹಿಡಿದು ಬರೆಹಗಳವರೆಗೆ ಎಲ್ಲವೂ ಒಂದೇ ಸೆಕೆಂಡಿಗೆ ಸರ್ವನಾಶವಾದರೆ ಹೇಗಿರುತ್ತೆ ಯೋಚನೆ ಮಾಡಿ. ಟಿಕ್ ಟಾಕರ್ ಗಳಿಗೆ ಆಗಿರುವುದು ಹೀಗೇನೆ. ನಾಳೆಯಿಂದ ಯಾರು ಅವರ ವಿಡಿಯೋ ನೋಡುತ್ತಾರೆ? ಯಾರು ಅವರನ್ನು ಗುರುತಿಸುತ್ತಾರೆ? ಯಾರು ಅವರ ಪ್ರತಿಭೆಯನ್ನು ಇಷ್ಟಪಡುತ್ತಾರೆ? ಈ ದಿಢೀರ್ ಖಾಲಿತನವನ್ನು ಅವರು ಹೇಗೆ ಎದುರಿಸುತ್ತಾರೆ? ನಿಜ, ಟಿಕ್ ಟಾಕ್ ಇಲ್ಲದ ಹೊತ್ತಲ್ಲಿ, ಅದರ ಡ್ಯೂಪ್ಲಿಕೇಟ್ ಗಳು ಬಂದೇ ಬರುತ್ತವೆ. ಅಂಥದ್ದೇ ಅಪ್ಲಿಕೇಷನ್ ಭಾರತದವರೇ ತಯಾರಿಸಿ ಮಾರುಕಟ್ಟೆಗೆ ಬಿಡಬಹುದು, ಅಥವಾ ಅಮೆರಿಕವೇ ಮಾಡಿ ಈ ಯಶಸ್ವಿ ಮಾಡೆಲ್ ಅನುಪಸ್ಥಿತಿಯನ್ನು ಬಳಸಿಕೊಳ್ಳಬಹುದು.

ಟಿಕ್ ಟಾಕರ್ ಗಳು ಹೊಸ ವಿಡಿಯೋ ಆಪ್ ಗಳಿಗೆ ಒಗ್ಗಿಕೊಳ್ಳಬಹುದು, ಹೊಸದಾಗಿ ಜೀರೋದಿಂದ ತಮ್ಮ ಪ್ರೊಫೈಲ್ ಕಟ್ಟಿಕೊಳ್ಳಬಹುದು.ಆದರೆ ಕೇವಲ ಮೂರು, ಮೂರೂವರೆ ವರ್ಷಗಳಲ್ಲಿ ಟಿಕ್ ಟಾಕ್ ಹುಟ್ಟಿಸಿದ ಕ್ರೇಜ್ ಊಹೆಗೆ ಮೀರಿದ್ದು. ತಮಾಶೆ ಏನು ಗೊತ್ತಾ? ನಾನು ಟಿಕ್ ಟಾಕ್ ಇನ್ಸ್ಟಾಲ್ ಮಾಡಿದ್ದು, ಒಂದು ತಿಂಗಳ ಹಿಂದೆ. ಕುತೂಹಲಕ್ಕೆ, ಇಲ್ಲೇನು ನಡೀತಾ ಇದೆ ಎಂದು ತಿಳಿದುಕೊಳ್ಳೋದಕ್ಕೆ.

ಟಿಕ್ ಟಾಕ್ ನೋಡಿದ ಮೇಲೆ ನನ್ನಂಥ ಡಿಜಿಟಲ್ ಅನಕ್ಷರಸ್ಥ ಇನ್ನೊಬ್ಬನಿಲ್ಲ ಎಂದು ಅನಿಸಿಬಿಟ್ಟಿತು. ಅಷ್ಟು ದೊಡ್ಡ ಜಗತ್ತನ್ನು ನಾನು ಮೊದಲ ಬಾರಿ ಪಿಳಿಪಿಳಿ ಕಣ್ಣು ಬಿಟ್ಟು ನೋಡಿದ್ದೆ. ಈಗ ಅದು ಬ್ಯಾನ್ ಆಗಿದೆ. ಮನುಷ್ಯನ ಸ್ಟಾರ್ ಆಗುವ, ಫೇಮಸ್ಸಾಗುವ, ತನ್ನನ್ನು ಹೆಚ್ಚು ಜನರು ಗುರುತಿಸಲಿ, ಇಷ್ಟಪಡಲಿ ಎಂದು ಬಯಸುವ ಮೂಲಸ್ವಭಾವ ಯಾವತ್ತಿಗೂ ಬ್ಯಾನ್ ಆಗಲು ಸಾಧ್ಯವಿಲ್ಲವಲ್ಲವೇ? ಟಿಕ್ ಟಾಕರ್ ಗಳು ಒಂದಲ್ಲ ಒಂದು ದಾರಿ ಹುಡುಕಿಕೊಳ್ಳುತ್ತಾರೆ. ಮತ್ತೆ ತಮ್ಮ ಪಾಡಿಗೆ ತಾವು ಕುಣೀತಾರೆ, ಹಾಡ್ತಾರೆ, ಮಿಮಿಕ್, ಲಿಪ್ ಸಿಂಕ್, ಜಿಮ್ನಾಷಿಯಂ, ಕಾಮಿಡಿ ಇತ್ಯಾದಿ ಎಲ್ಲವೂ ಮಾಡ್ತಾರೆ.

ವರ್ಚುಯಲ್ ಯುಗಕ್ಕೆ ನಾವು ಕಾಲಿಟ್ಟಾಗಿದೆ, ವಾಪಾಸು ಹೋಗೋದಕ್ಕೆ ಸಾಧ್ಯವೇ ಇಲ್ಲ. ಹಾರರ್ ಪಿಕ್ಚರ್ ಗಳಲ್ಲಿ ಹೀರೋಯಿನ್, ಹೀರೋ ಭೂತಬಂಗಲೆ ಪ್ರವೇಶಿಸಿದ ನಂತರ ಮೇನ್ ಡೋರ್ ತನ್ನಿಂತಾನೇ ಮುಚ್ಚಿಕೊಳ್ಳುವುದಿಲ್ಲವೇ? ಹಾಗೆ ಎಲ್ಲ ಬಾಗಿಲು ಮುಚ್ಚಿದೆ. ನಾವು ಒಳಗೆ ಬಂಧಿಯಾಗಿದ್ದೇವೆ. ಹೊಸ ಹೊಸ ವರ್ಚುಯಲ್ ಶೋಗಳು ಇನ್ನಷ್ಟೇ ಶುರುವಾಗಬೇಕಿದೆ. ಅದಕ್ಕೆ ತಳಪಾಯವಾಗಿ 5G ಆಗಲೇ ಬಾಗಿಲಬಳಿ ಬಂದಾಗಿದೆ!

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: