ನಾನು ನನ್ನ ಸುತ್ತಲಿನ ಗ್ರಾಮೀಣ ಪರಿಸರ, ಅಲ್ಲಿನ ಅನುಭವಗಳಿಗೆ ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ. ನಾನು ಯಾವುದೇ ತಾಂತ್ರಿಕ ಕಸರತ್ತುಗಳಿಗೆ ಪ್ರಯತ್ನಿಸಲಿಲ್ಲ. ನನ್ನ ಕಥೆಗಳು ನನ್ನ ಜನರ ಕಥೆಗಳು. ನನ್ನ ಕಥೆಗಳಲ್ಲಿ ಕೇಡು ಒಳಿತು ಎರಡೂ ಇವೆ. ಕೇಡನ್ನು ಹಿಂದಕ್ಕೆ ಹಾಕಿ ಒಳಿತನ್ನು ಮುಂದೆ ಮಾಡುತ್ತೇನೆ. ’70 ಎಕರೆ ಹೊಲ ಇದ್ದರೂ ಒಪ್ಪತ್ತು ಊಟಕ್ಕಿಲ್ಲ’ ಎನ್ನುವ ಮಾತು ಹೈದರಾಬಾದ್ ಕರ್ನಾಟಕಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ. ಆರ್ಥಿಕವಾಗಿ ಈ ಭಾಗ ಬಡತನದಿಂದ ಕೂಡಿದ್ದರೂ ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾಗಿದೆ. ಮೌಖಿಕ ಸಾಹಿತ್ಯ ಪರಂಪರೆ ಮತ್ತು ನೂರಾರು ಮೌಖಿಕ ಕಥೆಗಳು ಈ ಭಾಗದಲ್ಲಿವೆ” ಹೀಗೆಂದು, ಈ ಹೊತ್ತಿಗೆಯ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಡಾ. ಅಮರೇಶ್ ನುಗಡೋಣಿ ನುಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಸವರಾಜ ಕಲ್ಗುಡಿ ಅವರು ಮಾತನಾಡುತ್ತ, “ಹೈದರಾಬಾದ್ ಕರ್ನಾಟಕ ರೂಕ್ಷ ಪರಿಸ್ಥಿತಿಯನ್ನು, ತಮ್ಮದೇ ಆದ ಮುಗ್ಧ ಕಣ್ಣುಗಳಿಂದ ಹಿಡಿದಿದ್ದಾರೆ ಕಥೆಗಾರ ನುಗುಡೋಣಿಯವರು. ಅಲ್ಲಿನ ಧರ್ಮ ಸಮನ್ವಯ ತಾತ್ವಿಕತೆ ಅಮರೇಶ್ ಅವರ ಕಥೆಗಳಲ್ಲಿ ಎದ್ದು ಕಾಣುತ್ತದೆ. ಇವರ ಕಥೆಗಳಲ್ಲಿ ಕೇಡು ಬಹಳ ಕಡಿಮೆ. ಕನ್ನಡ ಭಾಷೆಗೆ ಹೊಸ ಸೃಜನಾತ್ಮಕ ಶಕ್ತಿಯನ್ನು ತುಂಬಿದಂಥ ಕಥೆಗಳು ‘ದಡ ಸೇರಿಸು ತಂದೆ’ ಕಥಾಸಂಕಲನದಲ್ಲಿವೆ. ಇವರ ಕಥೆಗಳ ಅಂತ್ಯ ವಿಶಿಷ್ಟವಾಗಿವೆ ಜ್ಞಾನದ ತಿರುಗು ಅನುಭವವಾಗಿ ಪರಿವರ್ತನೆಯಾಗುತ್ತದೆ.
ಅಮರೇಶ್ ಅವರ ‘ಮೀರುವ ಘನ’ ಅತ್ಯಂತ ಚಿಂತನಾರ್ಹವಾದ ಕಥೆಯಾಗಿದೆ. ಅನೇಕ ಸೂಕ್ಷ್ಮ ಅವಲೋಕನಗಳೊಂದಿಗೆ ಓದುಗರ ಕುತೂಹಲವನ್ನು ಹೆಚ್ಚಿಸುತ್ತದೆ. ಸಮಾನತೆಯ ಸಾಮುದಾಯಕ ಪ್ರಜ್ಞೆ ಅವರ ಕಥೆಗಳಲ್ಲಿ ಎದ್ದು ಕಾಣುತ್ತದೆ. ಜೀವನದ ನಿರಂತರ ಹೋರಾಟ ಇವರ ಎಲ್ಲ ಕಥೆಗಳಲ್ಲಿ ಜೀವಜಲದಂತೆ ಬರುತ್ತದೆ.” ಎಂದು ಅಮರೇಶ್ ನುಗುಡೋಣಿಯವರ ಕಥೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಓದುಗರು, ಕಥಾಸಂಕಲದಲ್ಲಿನ ಕತೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ನುಗಡೋಣಿ ಮತ್ತು ಕಲ್ಗುಡಿ ಅವರೊಂದಿಗೆ ಸಂವಾದ ನಡೆಸಿದರು.
ಈ ಹೊತ್ತಿಗೆಯು, ವಿಜಯನಗರದಲ್ಲಿರುವ ಬೀಟಲ್ ಬುಕ್ ಶಾಪ್ ನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೀಟಲ್ ಬುಕ್ ಶಾಪ್ ನ ಸಹಯೋಗದಲ್ಲಿ, ದಿನಾಂಕ 25 ಏಪ್ರಿಲ್ 2026ರಂದು, ಸಂಜೆ ನಾಲ್ಕು ಗಂಟೆಗೆ, ಈ ಹೊತ್ತಿಗೆಯ ತಿಂಗಳ 81ನೆಯ ಪುಸ್ತಕವಾಗಿ ಡಾ. ಅಮರೇಶ್ ನುಗಡೋಣಿ ಅವರ, 2025ನೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ‘ದಡ ಸೇರಿಸು ತಂದೆ’ ಕಥಾಸಂಕಲನದ ಚರ್ಚೆಯ ಕಾರ್ಯಕ್ರಮ ನಡೆಯಿತು.
ಈ ಹೊತ್ತಿಗೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಬೀಟಲ್ ಬುಕ್ ಶಾಪ್ ನ ಧನಂಜಯ ಎನ್ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ, ಈ ಹೊತ್ತಿಗೆಯ ಶ್ರೀಮತಿ ಇಂದಿರಾ ಶರಣ್ ಎಲ್ಲರಿಗೂ ಸ್ವಾಗತ ಕೋರಿದರು. ಕಥೆಗಾರ್ತಿ ಗೀತಾ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಮೀರಾ ಕುಲಕರ್ಣಿಯವರು ವಂದನಾರ್ಪಣೆ ಮಾಡಿದರು.






0 Comments