ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾಸಾರಥಿಯ ಜೀವನ ಕಥನ..

ಪ್ರಭಾಕರ ಎಸ್ ದೇವಾಡಿಗ ಅವರ ‘ಲಲಿತರಂಗ ಗುಣನಾಯಕ’

ಈ ಕೃತಿಯನ್ನು ‘ಅಭಿಜಿತ್ ಪ್ರಕಾಶನ’ ಪ್ರಕಟಿಸಿದೆ.

ಈ ಕೃತಿಯ ಕುರಿತು ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ.

ಲಲಿತರಂಗ ಗುಣನಾಯಕ ಇದು ಹಿರಿಯ ಕಲಾವಿದ ಗುಣಪಾಲ ಉಡುಪಿ ಅವರ ಜೀವನಯಾನವನ್ನು, ಯಶೋಗಾಥೆಯನ್ನು ಆಪ್ತನೆಲೆಯಲ್ಲಿ ಅನಾವರಣ ಗೊಳಿಸಿರುವ ಕೃತಿ.ಐದು ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ಹರಡಿಕೊಂಡಿದ್ದು ಬಹುಮುಖ ಪ್ರತಿಭೆಯ ಗುಣಪಾಲ ಅವರು ವಿವಿಧ ಕ್ಷೇತ್ರಗಳಲ್ಲಿ ಮಿಂಚಿ ಮಾಡಿದ ಸಾಂಸ್ಕೃತಿಕ ಪರಿಚಾರಿಕೆಯನ್ನು ಇಲ್ಲಿ ಪ್ರಭಾಕರ ದೇವಾಡಿಗ ಅವರು ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ.

ಕವಿ, ಕಲಾವಿದರು ನಾಡಿನ ಆಸ್ತಿ. ದೇಶವನ್ನು ಕಟ್ಟುವಲ್ಲಿ ಮನಸ್ಸುಗಳನ್ನು ಬೆಸೆಯುವಲ್ಲಿ ಇವರ ಪಾತ್ರ ಗುರುತರವಾದುದು.ಯಕ್ಷಗಾನ ಕಲಾವಿದರಾಗಿ,ರಂಗನಟರಾಗಿ,ಕನ್ನಡ ಸಿನಿಮಾ ನಟರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಸಾಂಸ್ಕೃತಿಕ ನೇತಾರರಾಗಿ, ಕರಾಟೆ ಪಟುವಾಗಿ ನಾನಾ ನೆಲೆಗಳಲ್ಲಿ ದೂರದ ಮುಂಬೈಯಲ್ಲಿ ಮಿಂಚಿದ ಗಣ್ಯ ಸಾಧಕರು ಗುಣಪಾಲ ಉಡುಪಿ.ಅವರದು ನಾನಾ ಬಗೆಯ ವ್ಯಕ್ತಿತ್ವ ಹಾಗೂ ಬಹುಭಾಷಿಕ ಸಂವೇದನೆ. ಅವರು ಪಟ್ಟಪಾಡನ್ನು ಹುಟ್ಟುಹಾಡಾಗಿಸಿದ ಅಪೂರ್ವ ಚೇತನ. ಸದ್ದುಗದ್ದಲವಿಲ್ಲದೇ ಗುಣಪಾಲ ಅವರು ಮಾಡಿದ ಕಲಾ ಕೈಂಕರ್ಯವನ್ನು ಇಲ್ಲಿ ಲೋಕಸಮ್ಮುಖ ಗೊಳಿಸಲಾಗಿದೆ.

ಗುಣಪಾಲ ಅವರದು ಹೋರಾಟದ ಬದುಕು. ಏಕಲವ್ಯನಂತೆ ಅವರು ಯಕ್ಷಗಾನ ಕಲೆಯಲ್ಲಿ ಹಿಡಿತ ಸಾಧಿಸಿ ಸೈ ಎನಿಸಿಕೊಂಡ ಧೀಮಂತ ಕಲಾವಿದ. ಮನಸಿದ್ದರೆ ಮಾರ್ಗ ಎಂಬ ಮಾತನ್ನು ರುಜುವಾತುಗೊಳಿಸಿದ ಧೀರ ಚೇತನ ಅವರು. ಬಡತನದ ಕಾರಣದಿಂದ ಸಣ್ಣಪ್ರಾಯದಲ್ಲೇ ಮುಂಬೈಗೆ ಬಂದು ಇಲ್ಲಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಲೇ ಕಲಾವಿದನಾಗಿ ವಿಕಾಸಗೊಂಡ ಪರಿ, ಆ ಬಳಿಕ ಅವರು ಗೈದ ರಂಗ ಪರಿಚಾರಿಕೆ, ಅವರ ಜೀವನಯಾನ ಯಾರನ್ನೂ ಬೆರಗುಗೊಳಿಸುವಂತಿದೆ.ಕಂಪನಿ ನಾಟಕ, ವಿವಿಧ ಯಕ್ಷಗಾನ ಮೇಳಗಳಲ್ಲಿ ಅವರು ಬಹು ಬೇಡಿಕೆಯ ಕಲಾವಿದರಾಗಿ ಜನಪ್ರಿಯರಾದವರು.

 ಗೌರಿ ಸುಂದರ್ ನಿರ್ದೇಶನದ ಸಂದರ್ಭ, ಪ್ರೊ.ಬರಗೂರು ನಿರ್ದೇಶನದ ಒಂದು ಊರಿನ ಕಥೆ, ಎ.ವಿ.ಶೇಷಗಿರಿ ರಾವ್ ನಿರ್ದೇಶನದ ಪ್ರೇಮವೇ ಬಾಳಿನ ಬೆಳಕು, ಮಧುಸೂದನ್ ನಿರ್ದೇಶನದ ಮಾಟಗಾರ್ತಿ ಮೊದಲಾದ ಸಿನಿಮಾಗಳಲ್ಲಿ ಅವರು ಮಿಂಚಿ ಹೆಸರು ಮಾಡಿದ್ದರು. ಮುಂಬೈ ಹಾಗೂ ಕನ್ನಡ ದೂರದರ್ಶನಗಳಲ್ಲಿ ಅವರ ಕಲಾವಿದರಾಗಿ ನಟಿಸಿದವರು. ಮುಂಬೈಯಲ್ಲಿ ತುಳು ಕನ್ನಡ ಹಿಂದಿ ರಂಗಭೂಮಿಯಲ್ಲಿಯು ಕಲಾವಿದನಾಗಿ ಅವರು ಮೆರೆದವರು. ಕಳೆದ ಐದು ದಶಕಗಳಲ್ಲಿ ಅವರು ಗೈದ ಸಾಂಸ್ಕೃತಿಕ ಯಾನ ಇಲ್ಲಿ  ಸರಳವಾಗಿ ಸುಂದರವಾಗಿ ದಾಖಲಾಗಿದೆ .ಗುಣಪಾಲ ಅವರದು ಸತ್ಯಶುದ್ಧ ರಂಗಕಾಯಕ. ಸ್ವತಹ ತಾವೇ ಕೆಲವು ನಾಟಕಗಳನ್ನು ಬರೆದು ಆಡಿಸಿ ಹೊಸ ಕಲಾವಿದರನ್ನು ಬೆಳಕಿಗೆ ತಂದರು.ಅವರು ತಮ್ಮ ಮಾತು ಕೃತಿಗಳ ಮೂಲಕ ಘನ ವ್ಯಕ್ತಿತ್ವವನ್ನು ಗಳಿಸಿಕೊಂಡ ವಿರಳ ಕಲಾವಿದ. 

 ಗುಣಪಾಲ ಅವರ ಸುದೀರ್ಘ ಸಂದರ್ಶನ ಈ ಕೃತಿಯ ಧನಾತ್ಮಕ ಅಂಶ. ಕಳೆದ ಐದಾರು ದಶಕಗಳ ಸಾಂಸ್ಕೃತಿಕ ಪಲ್ಲಟಗಳ ವಿಚಾರ ವಿಮರ್ಶೆಯೂ ಇಲ್ಲಿದೆ. ಕಲೆಯ ಕುರಿತಾದ ಅವರ ಕಾಳಜಿಗೆ ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖ ಮಾಡುವುದು ಸೂಕ್ತ. ಅದು ಬರಗೂರು ಅವರ ಸಿನಿಮಾದ ಕುರಿತಾದುದು.”ಶ್ರೇಷ್ಠ ಕನ್ನಡ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಸಿನಿಮಾ ನಿರ್ಮಾಪಕರಾಗಿದ್ದರು. ನನಗೆ ಅವರ ಪರಿಚಯವಾಯಿತು. ಅವರ ಸಿನೇಮಾಕ್ಕೆ ಕ್ಯಾಮರಾಮ್ಯಾನ್ ಆಗಿ ಕೂಡಾ ಸುಂದರ್‌ನಾಥ ಸುವರ್ಣರು ಕೆಲಸ ಮಾಡುತ್ತಿದ್ದರು.ಬರಗೂರು ರಾಮಚಂದ್ರಪ್ಪನವರ “ಒಂದು ಊರಿನ ಕಥೆ” ಕಾದಂಬರಿ ಬಹಳ ಪ್ರಸಿದ್ಧವಾಗಿತ್ತು. ಆ ಕಾದಂಬರಿಯನ್ನು ಆಧರಿಸಿ ‘ಒಂದು ಊರಿನ ಕಥೆ’ ಸಿನೆಮಾ ಮಾಡಬೇಕಾಗಿತ್ತು. ಪ್ರಾರಂಭದಲ್ಲಿ, ಚಿತ್ರ ನಿರ್ಮಾಣಕ್ಕೆ ಅವರ ಬಳಿ ಸಾಕಷ್ಟು ಹಣ ಇರಲಿಲ್ಲ. ಬಂಡವಾಳ ಹೂಡಿಕೆಯವರು ಬೇಕಿತ್ತು. ಅವರ ಈ ಸಿನಿಮಾಕ್ಕೆ ಫೈನಾನ್ಸ್ ಮಾಡಲು ಸಿಂಡಿಕೇಟ್ ಬ್ಯಾಂಕ್ ಉಡುಪಿ ಹೆಡ್ ಆಫೀಸಲ್ಲಿ ಲೋನ್ ಕೊಡಿಸುವಂತೆ ಅರ್ಜಿ ಹಾಕಿದ್ದರು. ಆದರೆ ಅವರ ಲೋನ್ ಅರ್ಜಿಯನ್ನು ಬ್ಯಾಂಕ್‌ನವರು ರಿಜೆಕ್ಟ್ ಮಾಡಿದ್ದರು. ನಾನು ಉಡುಪಿಯವನಾದುದರಿಂದ ನನ್ನ ಪರಿಚಯ ಬ್ಯಾಂಕಿನವರಿಗೆ ಇರಬಹುದೆಂದು ಅಭಿಪ್ರಾಯಪಟ್ಟು ಬರಗೂರು ಅವರು ನನ್ನನ್ನು ಸಂಪರ್ಕಿಸಿದರು. ವಿಷಯವೆಲ್ಲ ತಿಳಿಸಿ, ತನ್ನ ಸಿನಿಮಾಕ್ಕೆ ಲೋನ್ ಸ್ಯಾಂಕ್ಷನ್ ಮಾಡಿಸಲು ನನ್ನ ಸಹಾಯ ಕೇಳಿದರು. ಆ ಸಮಯದಲ್ಲಿ ನನ್ನ ಅಣ್ಣ ಉಡುಪಿ ಯಲ್ಲಿಯೇ ಇದ್ದುದರಿಂದ ಮತ್ತು ಬ್ಯಾಂಕ್ ಅಧಿಕಾರಿಗಳ ಪರಿಚಯ ನನಗಿಂತಲೂ ಅವರಿಗೆ ಹೆಚ್ಚು ಇದ್ದುದರಿಂದ ನಾನು ಬರಗೂರುರವರ ಲೋನ್ ವಿಷಯ ಚರ್ಚಿಸಿ ಕೂಡಲೇ ಲೋನ್ ಕೊಡಿಸುವಂತೆ ವಿನಂತಿಸಿಕೊಂಡೆ. ಅದಕ್ಕೆ ಅವನು ಒಪ್ಪಿ ನಮ್ಮನ್ನು ಉಡುಪಿಗೆ ಬರಮಾಡಿ

ಕೊಂಡನು. ಆ ಸಮಯದಲ್ಲಿ ಬರಗೂರರವರು ಉಡುಪಿಯ ಇಂದ್ರಾಳಿಯಲ್ಲಿರುವ ನನ್ನ ಅಣ್ಣನ ಮನೆಯಲ್ಲಿ ಸುಮಾರು ಒಂದು ವಾರ ವಾಸವಾಗಿದ್ದರು. ಆಗ ಬ್ಯಾಂಕಿನ ಡಿವಿಜಿನಲ್ ಮ್ಯಾನೇಜರ್ ವಿ.ವಿ. ನಾಯಕ್ ಎಂಬವರಿದ್ದರು. ನನ್ನ ಅಣ್ಣ ಊರಿನಲ್ಲಿ ಒಳ್ಳೆ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದರು. ವಿ. ವಿ. ನಾಯಕ್ ಮತ್ತು ಇತರರೊಡನೆ ಚರ್ಚಿಸಿ ರಿಜೆಕ್ಟ್ ಆಗಿದ್ದ ಲೋನ್ ಪಾಸ್ ಮಾಡಿಸಿ ಬಳಿಕ ಬರಗೂರುರವರನ್ನು ಬೆಂಗಳೂರಿಗೆ ಕಳುಹಿಸಿದೆವು. ಬರಗೂರು ಅವರಿಗೆ ಬಹಳ ಸಂತೋಷವಾಯಿತು.

ಬರಗೂರು ಅವರು ಬೆಂಗಳೂರಿಗೆ ಮರಳಿದ ಬಳಿಕ, ನಾನು ಪುನಃ ಮುಂಬಯಿಗೆ ಬಂದೆ. ಕೆಲವೇ ದಿನಗಳಲ್ಲಿ ಬರಗೂರುರವರ ಟೆಲಿಗ್ರಾಂ ಬಂತು. “ಶೂಟಿಂಗ್ ಸ್ಟಾರ್ಟೆಡ್, ಸ್ಪಾರ್ಟ್ ಇಮ್ಮಿಡಿಯಲ್ಲೇ” ಎಂದು ಸಂದೇಶವಿತ್ತು. ಆ ದಿನಗಳಲ್ಲಿ ಈಗಿನ ಹಾಗೆ ಮೊಬೈಲ್ ಫೋನ್, ಇಮೇಲ್ ಎಲ್ಲಾ ಇರಲಿಲ್ಲ. “ಒಂದು ಊರಿನ ಕಥೆ” ಸಿನೆಮಾದಲ್ಲಿ ನಟಿಸಲು ಮಾಡಿದ ಕರೆ ಅದಾಗಿತ್ತು. ನಾನು ಮುಂಬಯಿಯಿಂದ ಹೊರಟು ಬೆಂಗಳೂರು ತಲುಪಿದೆ. ಬರಗೂರು ಅವರ ಮನೆಯಲ್ಲಿ ನಾನು ಒಂದು ತಿಂಗಳು ವಾಸವಾಗಿದ್ದೆ. ಅವರ ಹುಟ್ಟೂರಾದ ಬರಗೂರುನಲ್ಲಿ ಶೂಟಿಂಗ್ ನಡೆಯಿತು. ಅದರಲ್ಲಿ ನನಗೆ  “ಪಾಪಣ್ಣ” ಎನ್ನುವ ಪಾತ್ರವಿತ್ತು. ಅದರಲ್ಲಿ “ಚೋಮನದುಡಿ” ಸಿನೆಮಾದ “ವಾಸುದೇವ್ ರಾವ್” ಇದ್ದರು. ಈ ಚಿತ್ರ ಬಹಳ ಯಶಸ್ವಿಯಾಯಿತು.ಇದು ನನಗೆ ವಿಶೇಷವಾದ ಸಮಾಧಾನವನ್ನು ತಂದುಕೊಟ್ಟಿತು”

 ಉತ್ಕಟ ಕಲೋಪಾಸಕರಾಗಿ ಕನ್ನಡ, ತುಳು, ಹಿಂದಿ ರಂಗಭೂಮಿಯ ಏಳಿಗೆಗೆ ಗುಣಪಾಲ ಅವರು ಕೊಟ್ಟ ಯೋಗದಾನ ದೊಡ್ಡದು. ಆರಕ್ಕೇರದ ಮೂರಕ್ಕಿಳಿಯದ ಸುಸಂಸ್ಕೃತ ಪ್ರತಿಭೆ, ವ್ಯಕ್ತಿ, ಶಕ್ತಿ ಗುಣಪಾಲರು. ಅವರ ಜೀವನ ಸಾಧನೆಯ ಪಕ್ಷಿನೋಟ ಈ ಕೃತಿಯ ಹೂರಣ. ಹೊರನಾಡಿನಲ್ಲಿದ್ದು ತನು ಶುದ್ಧ ಮನ ಶುದ್ಧ ಭಾವ ಶುದ್ಧವಾಗಿ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ ಈ ಕಲಾವಿದನಿಗೆ ಈಗ  76ರ ಹರೆಯ. ಈ ಹಿರಿಯ ಕಲಾವಿದನನ್ನು ಇನ್ನಾದರೂ ಕರ್ನಾಟಕ ಸರ್ಕಾರ ಗುರುತಿಸಿ ಗೌರವಿಸುವಂತಾಗಬೇಕು.

ಪ್ರಭಾಕರ ದೇವಾಡಿಗ ಅವರು ಗುಣಪಾಲ ಉಡುಪಿ ಅವರ ಯಶೋಗಾಥೆಯನ್ನು ಇಲ್ಲಿ ಯಾವುದೇ ವೈಭವೀಕರಣವಿಲ್ಲದೆ  ಕಟ್ಟಿಕೊಟ್ಟಿದ್ದಾರೆ. ಇದು ಪ್ರಭಾಕರ ಅವರ ಚೊಚ್ಚಲ ಕೃತಿ. ಅವರು ತಮ್ಮ ಸ್ನಾತಕೋತ್ತರ ಅಧ್ಯಯನದ ಸಂದರ್ಭದಲ್ಲಿ ಸಿದ್ಧಪಡಿಸಿದ ಈ ಸಂಪ್ರಬಂಧ ಇದೀಗ ಕೃತಿರೂಪದಲ್ಲಿ ಬೆಳಕು ಕಂಡಿದೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿ, ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾಕರ ದೇವಾಡಿಗ ಅವರು ಒಳ್ಳೆಯ ಸಾಹಿತ್ಯಾಸಕ್ತರು. ಇತ್ತೀಚಿಗೆ ಅವರು ಯಕ್ಷಗಾನ ಭಾಗವತಿಕೆಯನ್ನು ಕಲಿತು ತಮ್ಮ ಪ್ರತಿಭೆಯನ್ನು ಶ್ರುತಪಡಿಸಿದ್ದಾರೆ. ಇದು ಮುಂಬೈನ ಅಭಿಜಿತ್ ಪ್ರಕಾಶನದ 135ನೆಯ ಕೃತಿ ಪುಷ್ಪ. ನಾಡಿನ ಹಿರಿಯ ಕಲಾಸಾರಥಿ ಗುಣಪಾಲ ಉಡುಪಿ ಅವರ ಬದುಕು ಹಾಗೂ ಸಾಂಸ್ಕೃತಿಕ ಸಾಧನೆಯನ್ನು ಲೋಕಮುಖಕ್ಕೆ ಪರಿಚಯಿಸುವ ಈ ಕೃತಿಗಾಗಿ ಪ್ರಭಾಕರ ದೇವಾಡಿಗ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು Admin

9 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading