ರಿಲಾಯನ್ಸ್ ಇಮಾರತಿನ ಅಂಗಳದಲ್ಲಿ ನೋವಿನ ಎಳೆಯೊಂದು ಹಾದು ಹೋಗುತ್ತದೆ!  

ಅಮ್ಚಿ ಮುಂಬಯಿ ಭಾರತದ ಆರ್ಥಿಕ ರಾಜಧಾನಿ ಎನಿಸಿದರೂ ಹೇಳಿಕೇಳಿ ಕತೆಗಾರನಾದ ನಾನು ನನ್ನ ಅರಿವಿಗೆ ಮೀರಿದ ಆರ್ಥಿಕ ಸಂಗತಿಗಳ ಬರೆಯುವುದು ಅಷ್ಟು ಸಮಂಜಸವಲ್ಲ.

ಆದರೆ ಈಗ ಬೀಗ ಜಡಿದಿರುವ ರಿಲಾಯನ್ಸ್ ಸೆಂಟರ್ ಇಮಾರತಿನ ಅಂಗಳದಲ್ಲಿ ದಿನವೂ ಹಾದು ಹೋಗುವಾಗ ಅಲ್ಲಿ ಕೆಲಸಕ್ಕಿದ್ದ ನೂರಾರು ನೌಕರ ವರ್ಗದವರು ಅವರ ಕುಟುಂಬದವರ ಕತೆಗಳು ಏನಿರಬಹುದು ಎಂದು ಕಲ್ಪಿಸಿಕೊಂಡರೆ ನೋವಿನ ಎಳೆಯೊಂದು ಹಾದು ಹೋಗುತ್ತದೆ!

ಅದೇ ಈ ಲೇಖನವನ್ನು ಬರೆಯುವಂತೆ ಪ್ರೇರೇಪಿಸಿದೆ.

 

ಭಾರತದ  ಔದ್ಯಮಿಕ ವಿಕಾಸದ ಇತಿಹಾಸದಲ್ಲಿ ಟಾಟಾ ಬಿರ್ಲಾಗಳಂತೆ ಅಂಬಾನಿಗಳ ಕೊಡುಗೆಯೂ ಬಹಳ ಮಹತ್ವದ್ದಾಗಿದೆ. ಸಾಮಾನ್ಯ ಬಟ್ಟೆ ವ್ಯಾಪಾರಿಯಾಗಿದ್ದ ಧೀರುಭಾಯ್ ಅಂಬಾನಿ ಹತ್ತು ಸಾವಿರ ಲಕ್ಷ ಕೋಟಿ ಮೌಲ್ಯದ ಇಂಡಸ್ಟ್ರಿಯಲಿಸ್ಟ್ ಆಗಿ ಏರಿದ ಎತ್ತರವು ಒಂದು ದಂತಕತೆಯೇ ಸರಿ! ಅವರು ಸ್ಥಾಪಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ಟೆಕ್ಸ್‌ಟೈಲ್ಸ್, ಪೆಟ್ರೋಲಿಯಮ್, ಪೆಟ್ರೋಕೆಮಿಕಲ್ಸ್ರ್, ಟೆಲಿಕಾಮ್ ಹೀಗೆ ಹತ್ತು ಹಲವು ಉದ್ದಿಮೆಗಳಲ್ಲಿ ವಿಸ್ತರಿಸಿಕೊಂಡು ಹೆಮ್ಮರವಾಗಿ ಬೆಳೆದಿದೆ.

ಧೀರುಭಾಯ್ ಮರಣದ ನಂತರ ಅವರ ಮಕ್ಕಳಾದ ಮುಖೇಶ್ ಮತ್ತು ಅನಿಲ್ ಅಂಬಾನಿ ತಂದೆ ಸ್ಥಾಪಿಸಿದ ಆರ್ಥಿಕ ಸಾಮ್ರಾಜ್ಯವನ್ನು ಒಡೆದುಕೊಂಡರೂ ಅದನ್ನು ಇನ್ನಷ್ಟು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯ ಮಗನಾದ ಮುಖೇಶ್ ತಂದೆಯ ಹಾಗೆ “ಉತ್ಪಾದನೆ ಹೆಚ್ಚಿಸು ಲಾಭ ಗಳಿಸು” ಎನ್ನುವ ತತ್ವವನ್ನು ಅನುಸರಿಸಿ ಎಲ್ಲವನ್ನೂ ಬ್ರಹತ್ ಸ್ವರೂಪದಲ್ಲಿ ಕೈಗೊಂಡು ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.

ತಮ್ಮನಾದ ಅನಿಲ್ ಅಣ್ಣನಿಂದ ಬೇರೆಯಾಗಿ “ಅನಿಲ್ ಧೀರುಭಾಯ್ ಅಂಬಾನಿ ಗ್ರುಪ್” ಹೆಸರಿನಲ್ಲಿ  ಕೆಲವು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಹೊಸ ಕಾಲದ ಅವಕಾಶಗಳನ್ನು ಬಳಸಿಕೊಂಡು ಉದ್ಯಮ ಜಗತ್ತಿನ ನವೀನ ಸಾಧ್ಯತೆಗಳಲ್ಲಿ ತಮ್ಮ ಛಾಪು ಮೂಡಿಸಲು ಅವರು ಪ್ರಯತ್ನಿಸಿದ್ದೇನೋ ನಿಜ. ಆದರೆ ಅಣ್ಣನಷ್ಟು ಯಶಸ್ಸನ್ನು ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.  ಅವರ ಪಾಲಿಗೆ ಬಂದ ರಿಲಾಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಮ್) ಅಂತೂ ತೀರಾ ಹದಗೆಟ್ಟ ಸ್ಥಿತಿಯಲ್ಲಿದೆಯೆಂದು ಹೇಳಲಾಗುತ್ತಿದೆ.

ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಪವರ್ ಐಪಿಓ ನೀಡಿಕೆಯ ಸಂದರ್ಭದಲ್ಲೇ ಅನಿಲ್‌ಗೆ ಅಪಶಕುನವಾಗಿತ್ತು. ನಾನೂರಾ ಐವತ್ತು ರೂಪಾಯಿಯಲ್ಲಿ ನೀಡಿದ ಪಬ್ಲಿಕ್ ಇಶ್ಯೂಗೆ ಐವತ್ತು ಲಕ್ಷ ಜನರು ಅರ್ಜಿ ಗುಜರಾಯಿಸಿದ್ದರು. ಅದರ ಮೌಲ್ಯ ಒಟ್ಟೂ ಏಳೂವರೆ ಲಕ್ಷ ಕೋಟಿ ರೂಪಾಯಿಗಳು! ಆದರೆ ಆ ಶೇರು ಲಿಸ್ಟಿಂಗ್ ಆದ ನಂತರ ಬೆಲೆ ಕುಸಿಯುತ್ತಾ ಹೋಗಿ ಅದರ ಕತೆ ಬೇರೆಯಾಯಿತು. ಈ ಹತ್ತು ವರ್ಷಗಳಲ್ಲಿ ಅದು ಇಶ್ಯೂ ಬೆಲೆಗಿಂತ ಮೇಲೆ ಹೋಗಲೇ ಇಲ್ಲ. ರಿಲಾಯನ್ಸ್ ಮೇಲೆ ವಿಶ್ವಾಸವಿಟ್ಟು ಖರೀದಿಸಿದ ಲಕ್ಷಾಂತರ ಮಧ್ಯಮಮ ವರ್ಗದವರ ಕೋಟ್ಯಾಂತರ ರೂಪಾಯಿ ನೀರಿನಲ್ಲಿ ಹೋಮವಾಯಿತು.

ಉದಾಹರಣೆಗೆ ಹತ್ತು ಸಾವಿರ ರೂಪಾಯಿಯ ಶೇರ್ ಕೊಂಡಿದ್ದವರು ಅದನ್ನು ಇನ್ನೂ ಇಟ್ಟುಕೊಂಡಿದ್ದರೆ ಅದರ ಬೆಲೆ ಇಂದು ಕೇವಲ ಒಂದು ಸಾವಿರದ ಆರು ನೂರು ಮಾತ್ರ! ಜಗತ್ತನ್ನೇ ಅಂಗೈಯಲ್ಲಿ ಹಿಡಿಸಲು ಹೋದ ರಿಲಾಯನ್ಸ್‌ನ ಈ ಉಪಕತೆಯನ್ನು ಜೀರ್ಣಿಸಿಕೊಳ್ಳುವುದು ಎಂಥ ಆರ್ಥಿಕ ತಜ್ನರಿಗೂ ಕಷ್ಟವೇ! ಭಾರತೀಯ ಬಿಸಿನೆಸ್ ಕ್ಷೇತ್ರದ ಸ್ಟಾರ್ ಉದ್ಯಮಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದ ಅನಿಲ್ ಇಂದು ಮಂಕಾದಂತೆ ಕಾಣುತ್ತಿದ್ದಾರೆ.

ಮುಂಬೈಗೆ ಬಂದ ಹೊಸತರಲ್ಲಿ ದೊಡ್ದ ದೊಡ್ದ ಸ್ಟಾರ್‌ಗಳನ್ನು ಹತ್ತಿರದಿಂದ ಕಂಡರೆ ನನಗೆ ಥ್ರಿಲ್ ಆಗುತ್ತಿದ್ದದುಂಟು. ಹಲವಾರು ಶೋಗಳಲ್ಲಿ, ಸ್ಪೋರ್ಟ್ಸ್‌ಮೀಟ್‌ಗಳಲ್ಲಿ, ಪ್ರಸಿದ್ಧ ಫುಡ್ ಕೋರ್ಟ್ ಗಳಲ್ಲಿ ಸೆಲೆಬ್ರಿಟಿಗಳನ್ನು ಕಾಣುವುದು ಅಂಥ ಕಷ್ಟವೇನಲ್ಲ. ಮುಂಬೈನಲ್ಲಿ ಪ್ರತಿ ವರ್ಷ ನಡೆಯುವ ಮೆರಾಥಾನ್‌ಗೆ ಅಂತಾರಾಷ್ಟ್ರೀಯ ಮಟ್ಟದ ಓಟಗಾರರು ಬರುವುದರ ಜೊತೆಗೆ ಸಿನಿಮಾ ಸ್ಟಾರ್‌ಗಳು, ಸ್ಪೋರ್ಟ್ಸ್ ಪರ್ಸಾನಿಲಿಟಿಗಳು, ಬಿಸಿನೆಸ್ ಕುಳಗಳು ಪಾಲ್ಗೊಂಡು ಅದಕ್ಕೆ ಸಂಭ್ರಮದ ಕಳೆಕಟ್ಟುತ್ತಾರೆ. ಪ್ರಾರಂಭದಲ್ಲಿ ನಾನು ಆ ಕಾರಣಕ್ಕೇ ಮೆರಾಥಾನ್ ತಪ್ಪಿಸುತ್ತಿರಲಿಲ್ಲ. ಕನ್ನಡ ಚಿತ್ರರಂಗದ ಆರಾಧ್ಯದೈವ ಡಾ. ರಾಜಕುಮಾರ್ ನಂತರದ ನನ್ನ ನೆಚ್ಚಿನ ಹೀರೋ ಆಗಿದ್ದ ಅಮಿತಾಭ್‌ರನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು ಈ ಮೆರಾಥಾನ್ ಸಂದರ್ಭದಲ್ಲೇ !

ಫಿಟ್‌‌ನೆಸ್ ಬಗ್ಗೆ ಅಪಾರ ಕಾಳಜಿಯಿರುವ ಅನಿಲ್ ಅಂಬಾನಿ ಕೂಡ ಮೆರಾಥಾನ್‌ನಲ್ಲಿ ತಪ್ಪದೇ ಭಾಗವಹಿಸಿ ಅರ್ಧ ಮೆರಾಥಾನ್ ಪೂರ್ತಿ ಮಾಡುತ್ತಾರೆ. ಮೆರಾಥಾನ್ ಪ್ರಾರಂಭವಾದ ಶುರುವಾತಿನಲ್ಲಿ ಒಮ್ಮೆ ಇದೇ ಅನಿಲ್ ಅಂಬಾನಿ, ಅಭಿಷೇಕ ಬಚ್ಚನ್‌ರಂಥವರ ಸನಿಹದಲ್ಲೇ ಓಡುವ ಅವಕಾಶ ಸಿಕ್ಕಾಗ ನಾನು ಖುಶಿಪಟ್ಟಿದ್ದು ಸುಳ್ಳಲ್ಲ. ಆಗ ಅದು ಸೆಲ್ಫೀ ಜಮಾನಾ ಆಗಿರಲಿಲ್ಲ!

ದಕ್ಷಿಣ ಮುಂಬೈನ ವಿಟಿ ಸ್ಟೇಶನ್ ಪಕ್ಕದಲ್ಲಿಯ ಬಲ್ಲಾರ್ಡ್ ಎಸ್ಟೇಟಿನಲ್ಲಿದ್ದ ಅನಿಲ್ ಅಂಬಾನಿಯ ಭವ್ಯ ಕಾರ್ಯಾಲಯವು ನಮ್ಮ ಆಫೀಸಿನ ಪಕ್ಕದಲ್ಲೇ ಇತ್ತಾದ್ದರಿಂದ ಅವರು ಆಗಾಗ ಕಣ್ಣಿಗೆ ಬೀಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಅವರು ಕಾಣಲು ಸರಳವಾಗಿಯೇ ಇದ್ದರು. ಮುಖೇಶ ಅಂಬಾನಿಗೆ ಸಾಮಾನ್ಯ ಗುಜ್ಜುಗಳಂತೆ ಬೊಜ್ಜು ದೇಹ ಇದ್ದರೂ ತಮ್ಮ ಅನಿಲ ಅಂಬಾನಿಯದು ಸಪೂರ ಎತ್ತರದ ನಿಲುವು. ಟೀನಾ ಮುನಿಮ್ ಎಂಬ ಬಾಲಿವುಡ್ ತಾರೆಯೊಂದಿಗೆ ವಿವಾಹವಾಗಿರುವ ಈತನದು ಸ್ವಲ್ಪ ಶೋಕಿ ಲೈಫ್‌ಸ್ಟೈಲ್ ಎಂಬ ಸುದ್ದಿಯಿದೆ, ಇರಲಿ!

ಇತ್ತೀಚೆಗೆ ಅನಿಲ್ ಅಂಬಾನಿ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಹೆಡ್‌ಕ್ವಾರ್ಟರ್ಸ್ ರಿಲಾಯನ್ಸ್ ಸೆಂಟರ್‌ಗೆ ಬರುತ್ತಿಲ್ಲ. ಕಂಪನಿಯ ಸಿಇಓಗಳು, ಮೆನೇಜರ್‌ಗಳು, ನೂರಾರು ಸಿಬ್ಬಂದಿಗಳಿಂದ ತುಂಬಿರುತ್ತಿದ್ದ ಆ ಇಮಾರತು ಈಗ ಖಾಲಿ ಖಾಲಿಯಾಗಿದೆ. ಅಷ್ಟೆ ಅಲ್ಲ ಭವ್ಯವಾಗಿದ್ದ ಮುಂಬಾಗಿಲಿಗೆ ತುಕ್ಕು ಹಿಡಿದ ಹಳೆಯ ಗೋದ್ರೇಜ್ ಬೀಗವೊಂದು ವಿಲಕ್ಷಣವಾಗಿ ಜೋತಾಡುತ್ತಿದೆ.

ಅನಿಲ್ ಹಟ ಹಿಡಿದು ತನ್ನ ಪಾಲಿಗೆ ಬರುವಂತೆ ಮಾಡಿಕೊಂಡ ಮಹತ್ವಾಕಾಂಕ್ಷೆಯ ರಿಲಾಯನ್ಸ್ ಕಾಮ್ಯುನಿಕೇಶನ್ಸ್ ಈಗ 4500 ಕೋಟಿ ಸಾಲದಲ್ಲಿ ಮುಳುಗುವ ಹಡಗಿನಂತಾಗಿದೆಯಂತೆ. “ಕರಲೋ ದುನಿಯಾ ಮುಟ್ಠಿಮೇ” ಎಂಬ ಘೋಷವಾಕ್ಯದೊಂದಿಗೆ ಜನಸಾಮಾನ್ಯರ ಕೈಗಳಲ್ಲೂ ಮೊಬೈಲ್ ಎಂಬ ಮಾಂತ್ರಿಕ ವಸ್ತು ಬರಲು ಕಾರಣವಾದ ರಿಲಾಯನ್ಸ್ ಕಾಮ್ಯುನಿಕೇಶನ್ಸ್‌ನ ಇತಿಹಾಸವೆಲ್ಲ ವರ್ತಮಾನದ ತಾಪತ್ರಯಗಳಲ್ಲಿ ಮಣ್ಣುಪಾಲಾಗುತ್ತಿದೆ.

90 ರ ದಶಕದಲ್ಲಿ ಸ್ಯಾಮ್ ಪಿತ್ರೋಡಾ ಕೃಪೆಯಿಂದ ಚಿಕ್ಕ ಚಿಕ್ಕ ಪಟ್ಟಣಗಳಿಗೂ ಎಸ್ ಟಿಡಿ ಐಎಸ್ ಡಿ ಬಂದು ದೂರವಾಣಿ ಕ್ಷೇತ್ರದಲ್ಲಿ ಮೊದಲ ಹಂತದ ಕ್ರಾಂತಿಯಾಗಿತ್ತು. 1995 ರಲ್ಲಿ ಭಾರತದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ಅವತರಿಸಿದಾಗ ಅದು ಇನ್ನೊಂದು ಕ್ರಾಂತಿ ಎನಿಸಿತು. ಮೊಬೈಲ್ ಫೋನ್ ಬಂದ ಹೊಸತರಲ್ಲಿ ಇನಕಮಿಂಗ್ ಮತ್ತು ಔಟಗೋಯಿಂಗ್ ಕರೆಗಳೆರಡಕ್ಕೂ ಶುಲ್ಕ ವಿಧಿಸಲಾಗುತ್ತಿತ್ತು.

2003 ರಲ್ಲಿ ರಿಲಾಯನ್ಸ್ ಎಂಬತ್ತು ಸಾವಿರ ಕಿಮೀಟರ್ ನಷ್ಟು ಕೇಬಲ್ ಜಾಲವನ್ನು ಭಾರತಾದ್ಯಂತ ಜೋಡಿಸಿ ಸಿಡಿಎಮ್ಎ ಟೆಕ್ನಾಲಜಿಯನ್ನು ತಂದಿತು. ಮೊಬೈಲ್ ಕರೆಯ ದರವನ್ನು ಪೋಸ್ಟ್ ಕಾರ್ಡನ ಬೆಲೆಯಷ್ಟು ಕಡಿಮೆ ಮಾಡುವುದು ತನ್ನ ಕನಸು ಎಂದು ಧೀರುಭಾಯ್ ಅಂಬಾನಿ ಘೋಷಿಸಿದ್ದರು. ಅದು ನಿಜವೂ ಆಯಿತು ಕೂಡ!

ಕೇವಲ ಐನೂರು ರೂಪಾಯಿಯಲ್ಲಿ ಮೊಬೈಲ್  ಹ್ಯಾಂಡ್‌ಸೆಟ್ ತಂದಾಗ ಆ ವರೆಗೆ ಶ್ರೀಮಂತರ ಸ್ಟೇಟಸ್ ಸಿಂಬಲ್ ಆಗಿದ್ದ ಮೊಬೈಲ್, ಜನಸಾಮಾನ್ಯರ ಕೈಗಳಲ್ಲೂ ರಿಂಗುಣಿಸಿತು. ಕಾಲ್ ರೇಟ್ ಪ್ರತಿ ಸೆಕೆಂಡುಗಳ ಲೆಕ್ಕಕ್ಕಿಳಿಯಿತು. ಇನಕಮಿಂಗ್ ಫ್ರೀ ಆಯಿತು. ಒಂದು ರೂಪೈ ಇದ್ದ ಎಸ್ಸೆಮ್ಮೆಸ್ಸು ಹತ್ತು ಪೈಸೆಗೆ ಬಂತು, ಮುಂದೆ ಫ್ರೀ ಕೂಡ ಆಯಿತು. ಭಾರತೀಯರ ಎಲ್ಲ ಮಾತುಗಳೂ ಭಾವನೆಗಳೂ ಧ್ವನಿ ತರಂಗಗಳ ರೂಪದಲ್ಲಿ ಅಲೆದಾಡುವಂತಾಯಿತು. “ಬೋಲ್ ಇಂಡಿಯಾ ಬೋಲ್’ ಒಂದು ಚಳುವಳಿಯ ಸ್ವರೂಪ ಪಡೆಯಿತು!

ಬರೀ ಮಾತಿನಿಂದ ಭಾರತೀಯರ ಮನಸ್ಸು ತುಂಬಲಿಲ್ಲ. ಸೆಲ್ಫೀಗಳೂ, ಚಿತ್ರಗಳೂ, ವಿಡಿಯೋಗಳೂ ಕ್ಷಣಾರ್ಧದಲ್ಲಿ ಕೈಬದಲಾಗುವ ತಂತ್ರಜ್ನಾನ ಬಂತು. ಇದೇ ಸಮಯದಲ್ಲಿ  ಮುಖೇಶ್ ಅಂಬಾನಿ ಜಿಯೋ ಅವತಾರವೆತ್ತಿ ದುನಿಯಾವನ್ನು ನಿಜಕ್ಕೂ ಅಂಗೈನಲ್ಲಿ ಹಿಡಿಸಿದ. ಮಾಹಿತಿ ಭಂಡಾರದ ಜೊತೆಗೆ ಖುಶಿ, ನೋವು, ವಾದ, ವಿವಾದ ಪ್ರೀತಿ ದ್ವೇಷ ಎಲ್ಲವೂ ಡಿಜಿಟಲ್ ಸ್ವರೂಪತಾಳಿ ಕ್ಷಣಾರ್ಧದಲ್ಲಿ ನಮ್ಮೆದುರು ಪ್ರತ್ಯಕ್ಷಗೊಳ್ಳುವಂತಾಯಿತು.

ಈ ನಡುವೆ ಅನಿಲನ ಅಂಬಾನಿಯ ರಿಲಾಯನ್ಸ್ ಕಾಮ್ಯುನಿಕೇಶನ್ಸ್ ದುಬಾರಿಯಾದ ಸ್ಪೆಕ್ಟ್ರಮ್, ಏರಿದ ತೆರಿಗೆ, ಮತ್ತು ನೆಲಕಚ್ಚಿದ ಟ್ಯಾರಿಫ್ ದರಗಳಿಂದಾಗಿ ಏಳುಗತಿ ಕಾಣಲೇ ಇಲ್ಲ. ಅಣ್ಣ ಮುಖೇಶ್ ಪ್ರಾರಂಭಿಸಿದ ಹೊಸ ಕಂಪನಿ ರಿಲಾಯನ್ಸ್ ಜಿಯೋ ನೀಡಿದ ಪುಕ್ಕಟೆ ಕರೆಗಳು ಮತ್ತು ಜುಜುಬಿ ಬೆಲೆಯಲ್ಲಿ ಸಿಗುವ ಡಾಟಾ ಸೇವೆಯಿಂದಾಗಿ ಅನಿಲ್ ಅಂಬಾನಿಯ ಈ ಕಂಪನಿ ಪೂರ್ತಿಯಾಗಿ ಹಳ್ಳ ಹಿಡಿದಿದೆಯಂತೆ.

ಸಾಲ ವಸೂಲಿಗಾಗಿ ಮನೆ ಬಾಗಿಲಿಗೆ ಬರುವ ಹಂತಕ್ಕೆ ಬಂದದ್ದರಿಂದ ಅನಿಲ್ ತನ್ನ ಸ್ಥಿರಾಸ್ತಿಗಳನ್ನು ಮಾರಿ ಸಾಲಪಾವತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿಯೇ ಬಲ್ಲಾರ್ಡ್ ಎಸ್ಟೇಟಿನಲ್ಲಿರುವ ರಿಲಾಯನ್ಸ್ ಸೆಂಟರ್ ಇಮಾರತನ್ನೂ ಮಾರಿದ್ದಾರೆ. ಇಲ್ಲಿ ಕಾರ್ಯವಹಿಸುತ್ತಿದ್ದ 3000 ಸಾವಿರಕ್ಕೂ ಹೆಚ್ಚು ನೌಕರರನ್ನು ಮನೆಗೆ ಕಳುಹಿಸಿ ಕಾರ್ಯಭಾರವನ್ನು ಸಂತಾಕ್ರೂಜ್‌ನಲ್ಲಿರುವ ಆಫೀಸಿಗೆ ಸ್ಥಳಾಂತರಿಸಿದ್ದಾರೆ. ಹತ್ತೇ ನಿಮಿಷದಲ್ಲಿ ಆಫೀಸ್ ತಲುಪುತ್ತಿದ್ದವರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಪ್ರಯಾಣಿಸಬೇಕಾಗಿದೆ.

ತಮ್ಮನ ಕಂಪನಿ ಮುಳುಗಲು ಪರೋಕ್ಷವಾಗಿ ಅಣ್ಣನೇ ಕಾರಣನಾದರೂ ಈಗ ಅಣ್ಣನೇ ಯಾವುದೋ ಒಪ್ಪಂದಕ್ಕೆ ಬಂದು ಕಂಪನಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಯೊಂದು ನಡೆಯುತ್ತಿದೆಯಂತೆ. ರಿಲಾಯನ್ಸ್ ಮಾಡಿಟ್ಟ ಸ್ಥಿರಾಸ್ಥಿಗಳನ್ನು ನೋಡಿದರೆ ಅನಿಲ್ ಪೂರ್ತಿ ಮುಳುಗಿಹೋಗಲಿಕ್ಕಿಲ್ಲ. ಆದರೆ ತನ್ನದೇ ಸಾಮ್ರಾಜ್ಯದ ಕನಸು ಕಂಡಿದ್ದ ಈತನು ಈಗ ಅಣ್ಣನ ಆಶ್ರಯದಲ್ಲಿ ಸಾಮಂತರಾಜನಾಗಿ ಇರಬೇಕಾದೀತು, ಅಷ್ಟೆ!

ಅಮ್ಚಿ ಮುಂಬಯಿ ಭಾರತದ ಆರ್ಥಿಕ ರಾಜಧಾನಿ ಎನಿಸಿದರೂ ಹೇಳಿಕೇಳಿ ಕತೆಗಾರನಾದ ನಾನು ನನ್ನ ಅರಿವಿಗೆ ಮೀರಿದ ಆರ್ಥಿಕ ಸಂಗತಿಗಳ ಬರೆಯುವುದು ಅಷ್ಟು ಸಮಂಜಸವಲ್ಲ. ಆದರೆ ಈಗ ಬೀಗ ಜಡಿದಿರುವ ರಿಲಾಯನ್ಸ್ ಸೆಂಟರ್ ಇಮಾರತಿನ ಅಂಗಳದಲ್ಲಿ ದಿನವೂ ಹಾದು ಹೋಗುವಾಗ ಅಲ್ಲಿ ಕೆಲಸಕ್ಕಿದ್ದ ನೂರಾರು ನೌಕರ ವರ್ಗದವರು ಅವರ ಕುಟುಂಬದವರ ಕತೆಗಳು ಏನಿರಬಹುದು ಎಂದು ಕಲ್ಪಿಸಿಕೊಂಡರೆ ನೋವಿನ ಎಳೆಯೊಂದು ಹಾದು ಹೋಗುತ್ತದೆ! ಅದೇ ಈ ಲೇಖನವನ್ನು ಬರೆಯುವಂತೆ ಪ್ರೇರೇಪಿಸಿದೆ.

‍ಲೇಖಕರು Avadhi GK

March 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: