ಕರದೂ ಕರದು ಕರದೊಡಿ ಕೊಡ್ಲಿಲ್ಲಂತ!!

ಹಬ್ಬಕ್ಕ ಕರದ್ರು. ಎಲ್ಲಾ ಕೊಟ್ರು ಕರದೊಡಿ ಕೊಡ್ಲಿಲ್ಲ ನೋಡು…

ಇರಲಿ ಬಿಡು ಮಾಡಿರಲಿಕ್ಕಿಲ್ಲ..

ಅಯ್ಯ.. ನಿನ್ನೆ ಸಂಜಿಯಿಂದ ತಯ್ಯಾರಿ ನಡದಿತ್ತು. ಅವರು ಮನಿಮುಂದ ತರಕಾರಿ ಮಾರೂವಕ್ಕಿಗೆ ನಿಲ್ಲಿಸಿ, ಎಳೀ ಕೊತ್ತಂಬರಿ, ಹಸಿಮೆಣಸಿನಕಾಯಿ ತೊಗೊಂಡಾಗೆ ನನಗ ವಾಸನಿ ಹತ್ತಿತ್ತು. ಮತ್ತ ಮನ್ನೆ ನಾಗರ ಅಮಾಸಿ ಹಿಂದಿನ ದಿನ ಕಡಲಿಬ್ಯಾಳಿ ಖಮ್ಮಗ ಹುರದ ವಾಸನಿ ಬಂದಿತ್ತು. ಬೇಸನ್‌ ಉಂಡಿ ಮಾಡಿರಬಹುದು. ಆದರ ಮೂರು ಕೆಜಿ ಒಮ್ಮೆ ಬೀಸಾಕ ಕಳಿಸಿದ್ರು. ಹಂಗಾರ ಕರದೊಡಿ ಮಾಡಿರಲಿಕ್ಕೇಬೇಕು. ಅಲ್ಲದೇ ಅವೊತ್ತು ಕಾಕಾನ ಅಂಗಡಿಯೊಳಗ ಮೈದಾ ಹಿಟ್ಟು ಸಹ ಬರಸಿದ್ರು. ಒಂದಿಷ್ಟು ಪದರ ಪೇಡೆ ಮಾಡಿದ್ರ ಖಾರದೊಡಿನೂ ಮಾಡಿರಬೇಕು.

ಇರಲಿ ಬಿಡ.. ಯಾಕಿಷ್ಟು ತೆಲಿ ಕೆಡಸ್ಕೊಂತಿ..ಮಾಡಿದ್ರ ಕೊಟ್ಟ ಕೊಡ್ತಾರ.. ಕೊಡ್ಲಿಕ್ಕರೆ ಏನಾಯ್ತೀಗ?

ಹಂಗಲ್ಲ.. ಮೊನ್ನೆಯರೆ ಘಮ್ಮಂತ ವಾಸ್ನಿ ತೇಲಿ ಬರಾತಿತ್ತು. ಖಾರದೊಡಿ ಕರದಿದ್ದು. ಹಿಂಗ ಕರಿಯೂದ್ರಿಂದನೇ ಖಾರದೊಡಿ ಹೋಗಿ ಕರದೊಡಿ ಆಯ್ತು. ಮೊದಲೆಲ್ಲ ಒಬ್ರೇ ಮಾಡಾಕ ಆಗ್ದೆ ಅಕ್ಕಪಕ್ಕ ಮನಿಯೋರು ಕುಂತು ಕರದೊಡಿ ಮಾಡ್ತಿದ್ವಿ. ಈಗ ಸೊಸ್ತ್ಯಾರು ಬಂದಾರ ತಾವೇ ಮಾಢ್ಕೊಳ್ಳಾತಾರ.. ಆದರೂ ಹಳೀಪ್ರೀತಿ ಇರಬೇಕಿಲ್ಲೊ.. ತಾಟಿನ ತುಂಬಾ ತಂಬಿಟ್ಟು, ಸೇಂಗಾದುಂಡಿ, ಎರಡರ ನಡುಕ ದೃಷ್ಟಿಯಾಗಬಾರದು ಅನ್ನೂಹಂಗ ಕರಿಯೆಳ್ಳಿನುಂಡಿ, ಶೇಡ್‌ ಕಾರ್ಡ್‌ ಇಟ್ಟಂಗ ಮೊದಲು ರವಾ ಉಂಡಿ ಇಟ್ಟು ಕಳಸೂಮುಂದ ಸೈಡಿಗೆ ಒಂದೆರಡು ಕರದೊಡಿ ಇರಬೇಕ ನಮ್ಮವ್ವ… ಇಲ್ಲಾಂದ್ರ ಆ ತಾಟೇ ಅಪೂರ್ಣ ನೋಡು..

ಹಿಂಗೆ ಹಬ್ಬದ ಚಕ್ಕುಲಿ, ಕೋಡುಬಳೆ ಸುತ್ತಿದ್ಹಂಗ ಮಾತು ಕರದೊಡಿ ಸುತ್ತ ಸುತ್ತತದ ಅಂದ್ರ ನೀವು ವಿಜಯಪುರ ಜಿಲ್ಲೆಯ ಓಣ್ಯಾಗದೇರಿ ಅಂತರ್ಥ. ಕರದೊಡಿ, ಖಾರದೊಡಿ ಇವೆರಡೂ ನಮ್ಮ ಗುಜರಾತಿ ಖಾದ್ಯ ಖಾಕ್ರಾವನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದ ಕರಿದ ತಿಂಡಿ.

ಮನ್ಯಾಗ ಖಮ್ಮಗ ಕಡಲಿಬ್ಯಾಳಿ ಹುರದು, ಬೀಸಿ ತರಬೇಕು. ಅದು ಬೀಸೂಮುಂದ ವಾಸನಿ ಹರಡಬೇಕು. ಆಮೇಲೆ ಖಾರಿಲ್ಲದ, ಎಳೀ ಹಸಿರು ಹಸಿಮೆಣಸಿನಕಾಯಿ, ದೇವರ ಹಿಪ್ಪರಗಿಯೊಳಗ ಬೆಳೀತಾರ… ಏನ ಚಂದ ಮೆಣಸಿನಕಾಯಿ.. ಹರೇದ ಹುಡುಗ್ಯಾರ ಕಿರಿಬೆರಳನಿಷ್ಟ ಮಾದಕವಾಗಿ ಕಾಣ್ತಾವು.

ಆ ಮೆಣಸಿನಕಾಯಿ, ಹಸಿಕೊತ್ತಂಬರಿ, ಅಜ್ವಾನ್, ಒಂದು ನಾಲ್ಕ ಮೆಂತ್ಯಕಾಳು, ಭಾಳಷ್ಟು ಜೀರಗಿ ಇವೆಲ್ಲ ಹಾಕಿ ಹುರೀತಿದ್ರ, ಮನ್ಯಾಗಿನ ಮಂದಿಯೆಲ್ಲ ಪಡಸಾಲಿಗೆ ಕೆಮ್ಕೊಂತ ಬರ್ತಾರ. ಅಂಥ ಘಾಟು.. ಅವನ್ನೆಲ್ಲ ಹುರದು, ಆರಸಿ, ಮಿಕ್ಸಿಯೊಳಗ ಗರಕ್‌ ಅನಿಸಿದ್ರ.. ಒಂದೆರಡು ನಿಮಿಷ ಬಿಟ್ಟ ಮುಚ್ಚಳಾ ತಗೀಬೇಕು. ಇಲ್ಲಾಂದ್ರ ಕಾಲ ಚಕ್ರದೊಳಗ ಗಿಮಿಗಿಮಿ ತಿರುಗಿಸಿ, ನಿಮಗ ಆಗದ ಸಂದರ್ಭಗಳ ಮುಂದ ನಿಲ್ಲಿಸಿದ್ಹಂಗ ಉಸಿರು ಕಟ್ತದ.. ಮತ್ತ ಹಂಗ ತಿರುಗಿಸುಮುಂದ ನಾ ಹೇಳಲಿಲ್ಲ ಅಂತ ಬೈಕೊಬ್ಯಾಡ್ರಿ. ಬೈಯ್ಯಾಕ ಬಾಯಿನೇ ತೆರಿಯಾಕ ಆಗೂದಿಲ್ಲ.. ಆ ಮಾತು ಬ್ಯಾರೆ…

ಇರಲಿ ಹೊಳ್ಳಿ ನಮ್ಮ ಮಸಾಲಿಗೆ ಬರೂನು. ಈ ಮಸಾಲಿಯನ್ನ ಕಡಲಿಹಿಟ್ಟಿನಾಗ ಗಟ್ಟಿ ಕಲಿಸಿ ಇಡಬೇಕು. ನೀರು ಮುಟ್ಸುಹಂಗಿಲ್ಲ. ಉಪ್ಪು, ಕೊತ್ತಂಬರಿ, ಮೆಣಸಿನಕಾಯಿ ಎಲ್ಲ ತಮ್ಮ ಕೆಲಸ ತಾವು ಮಾಡ್ತಾವ. ಒಂದು ನಾಲ್ಕು ತಾಸು ಬಿಟ್ಬಿಡ್ರಿ.. ತಮ್ಮ ಪಾಡಿಗೆ ತಾವು ಒಂದು ಹದಕ್ಕ ಬರ್ತಾವ.

ಥೇಟ್ ನಮ್ಮ ಜೀವನ ಇದ್ದಂಗ.. ಕಷ್ಟ ಬಂದಾಗ ಕಣ್ಣುರಿಯುವಷ್ಟು ಕಣ್ಣೀರು ಹಾಕಸ್ತಾವ. ಉಸಿರುಗಟ್ಟಿಸುವ ಹಂಗ ಕೆಮ್ಮು ತರ್ತಾವ. ಆದ್ರ ತಣ್ಣಗಾಗಾಕ ಬಿಡ್ರಿ.. ಅವು ತಾನೇ ತಮ್ಮ ಪರಿಸ್ಥಿತಿಗೆ ಹೊಂದ್ಕೊತಾವ. ಬೆರಳು ನೆಕ್ಕೆ ಆಸ್ವಾದಿಸುವಹಂಗ ನೆನಪು ಬಿಟ್ಟು ಹೋಗ್ತಾವ. ಇರಲಿ ಇದು ನಮ್ಮ ಕರದೊಡಿ ಮಾಡಿದಷ್ಟು ಸುಲಭ ಅಲ್ಲ ಜೀವನ.. ಜೀವನಾನೂ ಹಂಗೆ ಕರದೊಡಿಯಷ್ಟು ಕಷ್ಟನೂ ಅಲ್ಲ.

ಅಷ್ಟರೊಳಗ ಮೈದಾಹಿಟ್ಟು ಹದವಾಗಿ ನಾದಿಕೊಂಡು, ಬೇಕಾದ್ರ ನಮ್ಮ ಬೇಂದ್ರೆ ಅಜ್ಜಾರ ಹಾಡು ನಾದಬೇಕು, ನಾದಬೇಕು ಹೇಳ್ಕೊಂತ, ಹಾಡ್ಕೊಂತ ನಾದ್ರಿ. ಮೆತ್ತಗ ಆಗ್ತದ. ಇವೆರಡೂ ನೆನಸಿಟ್ಟು.. ಶ್ರಾವಣ ಮಾಸದ ದೇವರನ್ನ ನೆನಸ್ಕೊಂಡು ಬ್ಯಾರೆ ಕೆಲಸ ಶುರು ಮಾಡ್ರಿ. 

ಅವು ನೆನಸಿಟ್ಟಿದ್ದು ಮರತು ಹೋಗಿರಬೇಕು.. ಅಷ್ಟು ಹೊತ್ತು. ಅಂದ್ರ ರಾತ್ರಿ ನೆನೆಸಿಟ್ರ ಬೆಳಗಿನ ತಿಂಡಿ ನಂತರ ಈ ಕೆಲಸ ಮಾಡಬೇಕು. ಮುಂಜೇನೆ ನೆನಸಿಟ್ರ, ಸಂಜೀ ಚಾ ಕುಡದು, ಖಾರದೊಡಿ ಒತ್ತಾಕ ಕುಂದರಬೇಕು. 

ಈಗ ಮೂರು ಮಂದಿ ಬೇಕು. ಒಬ್ಬರು ಬೆಣ್ಣಿಯಂಥ ಮೈದಾ ಹಿಟ್ಟಿನುಂಡಿ ಮಾಡಬೇಕು. ಇನ್ನೊಬ್ಬರು ಕೈಗೆ ಎಣ್ಣಿ ಹಚ್ಕೊಂಡು, ಕಡಲಿಹಿಟ್ಟಿಗೆ ಕಲಿಸಿದ ಮಸಾಲಿಯನ್ನು ಹದವಾಗಿ ನಾದಬೇಕು. ಆಮೇಲೆ ಇದರ ಉಂಡಿ ಮಾಡಬೇಕು. ಮತ್ತೊಬ್ಬರು.. ಅಥವಾ ಈ ಇಬ್ಬರೊಳಗ ಯಾರರೆ ಒಬ್ಬರು, ಮೈದಾ ಹಿಟ್ಟಿನ ಕಣಕದೊಳಗ ಕಡಲಿಹಿಟ್ಟಿನುಂಡಿ ತುಂಬಿಡಬೇಕು. ಅದೆಷ್ಟು ಚಂದ ಕಾಣ್ತದಂದ್ರ, ಎಳೀಕೂಸಿನ ಅಂಗೈಯೊಳಗ ರಕ್ತ ಪರಿಚಲನೆ ಆದಾಗ ತಿಳಿಗುಲಾಬಿ ಬಣ್ಣ ಕಾಣ್ತದಲ್ಲ ಹಂಗ. ಬಿಳಿಹಿಟ್ಟಿನಾಗ, ತಿಳಿಹಳದಿ ಮತ್ತು ಹಸಿರು ಬಣ್ಣದ ಈ ಮಿಶ್ರಣ ಹೊಟ್ಟಿಯೊಡದು ಹೊರಗಬರ್ತೇನಿ ಅನ್ನೂಹಂಗ ಆಗಿರಬೇಕು.

ಅವಾಗ ಕರದೊಡಿಯ ಮುಖ್ಯ ಪಾತ್ರ ಎಂಟ್ರಿಯಾಗ್ತದ. ಎರಡೂ ಕೈಗಳ ಬಳಿ ಮ್ಯಾಲೇರಿಸಿಕೊಂಡು, ಬಳಿಗೆ ಪಿನ್ನಾಗಿನ್ನಾ ಸಿಗಸ್ಕೊಂಡಿದ್ರ ಅವನ್ನು ಮಂಗಳಸೂತ್ರಕ್ಕ ಜೋತಾಡಿಸಿಕೊಂಡು ತೀಡಾಕ ಕುಂದರ್ತಾರ. 

ಏನು ಕೌಶಲ, ಏನ್‌ಸುದ್ದಿ… ಅಂವಾ ಬಿದಿಗಿ ಚಂದ್ರನ್ನ ದೇವರು ಮಾಡೂಮುಂದ ಇವರು ಟ್ರೇನಿಂಗ್‌ ತೊಗೊಂಡಿರಬೇಕು. ಅಷ್ಟು ದುಂಡಕ ಮಾಡ್ತಾರ. ಹಂಗ ಚಂದ್ರನ್ಹಂಗ ನಮ್ಮುವು ಕರದೊಡಿ ಕಾಣ್ತಾವ. ಚಂದ್ರನೊಳಗ ಕಲಿ ಇದ್ಹಂಗ.. ಬಿಳೀ ದುಂಡಮುಖದಾಗ ಈ ಹಳದಿ, ಹಸಿರು ಕಾಣ್ತಿರ್ತಾವ. 

ಮನ್ಯಾಗಿನ ಫರಾತ, ಮೊರ, ಹರಿವಾಣ ಎಲ್ಲದರ ತುಂಬಾ ದುಂಡಗೆ ಚಪಾತಿ ಒತ್ತಿದ್ಹಂಗ ಒತ್ತಿ ಇವನ್ನ ಕೈಲಿ ಬೀಸಿ ಹಾಕಿದ್ರ ಅವು ಹುಣ್ಣಿವಿ ಚಂದ್ರನ್ಹಂಗ ಬಂದು ಕೂರ್ತಾವ. ಹಿಂಗ ಕರದೊಡಿಯ ಮೂಲಸ್ವರೂಪ ರೆಡಿ ಆದಾಗ, ಬಂದವರಿಗೆಲ್ಲ ಆಸಿ ಹತ್ತಿಸುವ, ಭಾಳ ತಿಂತಾರಂತ ಮುಚ್ಚಿಡುವ ಬುದ್ಧಿ ಕಲಿಸುವ, ಮುಟ್ಟಿದರೆ ಮುರೀತೇನಿ ಅಂತ ನಾಜೂಕಗೆ ರೆಡಿಯಾದ ಪಾಪಕ್ಕ.. ಕೊತಕೊತ ಎಣ್ಣೀ ಕುದಸ್ತಾರ. ಹಂಗ ಎಣ್ಣಿ ಕುದಿಯೂಮುಂದ ನರಕದೊಳಗ ಶಿಕ್ಷೆ ಕೊಡುವುದೆಲ್ಲ ನೆನಪಾಗಿಬಿಡ್ತದ. ಅಷ್ಟೆಲ್ಲ ಅಕ್ಕರಾಸ್ಥೆಯಿಂದ ನೇವರಿಸಿ, ನಾದಿ, ಉಂಡಿಮಾಡಿ, ಮುದ್ಮಾಡಿದ ಕೈಗಳೇ ಎಣ್ಣಿಯೊಳಗ ಹಗುರಕ ನೋವಾಗದ್ಹಂಗ ಬಿಡ್ತಾರ. 

ಹರೆಯದ ಹುಡುಗಿಯ ಮೊಗದ ಮೇಲಿನ ಮೊಡವೆ ಎದ್ದಂಗ ಸಣ್ಣ ಗುಳ್ಳಿಜೊತಿಗೆ ಈ ಕರದೊಡಿ ಹಪ್ಪಳದ್ಹಂಗ ಆಗ್ತಾವ.

ಆಗ ನೋಡ್ರಿ ನರಕದ ಎಣ್ಣಿಯಿಂದ ಸ್ವರ್ಗ ಸುಖದ ವಾಸನಿ ತೇಲಾಕ ಶುರು ಆಗ್ತದ. ಆ ಹಸಿಮೆಣಸು, ಕೊತ್ತಂಬರಿ, ಜೀರಗಿ ಎಲ್ಲಾ ಜಿದ್ದಿಗೆ ಬಿದ್ಹಂಗ ತಮ್ಮ ಘಮ ತೋರಿಸಾಕ ಶುರು ಮಾಡ್ತಾವ. ಇನ್ನೇನು ಕರದಿಟ್ಟ ಐದು, ಹನ್ನೊಂದು ಕರದೊಡಿಯನ್ನ ಒಂದು ಸ್ಟೀಲ್‌ ಡಬ್ಬಿಯೊಳಗ ನೈವೇದ್ಯಕ್ಕಂತ ಎತ್ತಿಟ್ರ ಮುಗೀತು.

ಮುಂದಿಂದು ಮಾಡಿದೋರಿಗೆ ಲೆಕ್ಕ ಹತ್ತೂದಿಲ್ಲ. ತಿನ್ನೋರಿಗೆ ಸಾಕಾಗೂದಿಲ್ಲ. ಜೊತಿಗೆ ಒಂದು ಜಾಂಬು (ಲೋಟಕ್ಕ ರಾಯಚೂರು ಜಿಲ್ಲೆಯೊಳಗ ಹಂಗಂತಾರ). ಚಾ ಇದ್ರಂತೂ ಮುಗೀತು. ಯಾರು ಕರೀಲಿ, ಬಿಡಲಿ, ಪಡಸಾಲಿಗೆ ಕರದೊಡಿ ತಿನ್ನಾಕ ಬರೋರನ್ನ ತಡಿಯೂದ ದೊಡ್ಡ ಕೆಲಸ ಆಗ್ತದ.

ಆಮೇಲೆ ಶುರು ನೋಡ್ರಿ, ಮುಚ್ಚಿಡುವ ಕೆಲಸ, ಊಟದ ಹೊತ್ತಿಗೆ ತಲಿ ಎಣಿಸಿ, ಕರದೊಡಿ ಹೊರಗ ಬರ್ತಾವ. ಯಾಕಂದ್ರ ಪಂಚಮಿಗೆ ಮಾಡಿದ್ರ ಐದು ದಿನಾನಾರೂ ತಿನ್ನೂದು ಬ್ಯಾಡ.. ಈ ಲೆಕ್ಕದೊಳಗ ಪ್ರತಿ ಮನಿಯೊಳಗೂ ನೂರಿನ್ನೂರು ಖಾರದೊಡಿ ಮಾಡ್ತಾರ.

ಮನಿಗೆ ಬರುವ ಬೀಗರಿಗೆ, ಬಿಜ್ಜರಿಗೆ ಕರದೊಡಿ ಕೊಟ್ರ ಅಗ್ದಿ ಮರ್ಯಾದಿ ಅದು. ಮಗಳಿಗೆ ಕಟ್ಟುಬುತ್ತಿಯೊಳಗ ಎಷ್ಟು ಕರದೊಡಿ ಇಟ್ಟಿದ್ರು ಅನ್ನೂದರ ಮ್ಯಾಲೆ ಅತ್ತಿ ಮನ್ಯಾಗಿನ ಬೈಗುಳ, ಚುಚ್ಚುಮಾತು ರೆಡಿ ಆಗಿರ್ತಾವ. ನಾಲ್ಕ ಕರದೊಡಿ ಇಟ್ಟು ಕಳಸ್ಯಾರ.. ಏನ ಬಂಗಾರ ಕೊಟ್ರ ಏನು, ಬೆಳ್ಳಿ ಕೊಟ್ರ ಏನು? ಎಣಿಸಿ ನಾಕ ಇಟ್ಟಾರ… ಅಂತಂದ್ರ ಮುಗೀತು, ಹೆಣ್ಮಕ್ಕಳ ಪಾಲಿನ ನಾಕ ನರಕ ಆಗಾಕ ಎಷ್ಟು ಹೊತ್ತು? ಅದಕ್ಕ ಕರದೊಡಿ ಕಟ್ಟೂಮುಂದ ಕೈಕಟ್ಟೂಹಂಗಿಲ್ಲ. ಬಾಯಿಕಟ್ಟಲೇಬೇಕು. 

ಇಂಥಾ ಗುಜರಾತಿ ಮೂಲದ ಖಾರದೊಡಿ, ಕರದೊಡಿ, ಗುಜರಾತಿನ ಮೂಲ ಗುಣ ವ್ಯಾಪಾರಿ ಬುದ್ಧಿ ಕಲಿಸೇಬಿಡ್ತದ. ಯಾರಿಗೆ ಎಷ್ಟು ಕೊಡಬೇಕು, ಯಾವಾಗ ಕೊಡಬೇಕು? ಮಾಡಿದೋರ ಪಾಲು, ನೋಡಿದೋರ ಪಾಲು ಎಷ್ಟಿರಬೇಕು? ಯಾರಿಗೆ ಕೊಡುವಾಗ ಏನೆಲ್ಲ ಕೊಡಬೇಕು? ಉಂಡಿ, ಅವಲಕ್ಕಿ ಕೊಡಬೇಕೊ, ಉಂಡಿ, ಅವಲಕ್ಕಿ, ಖಾರದೊಡಿ ಕೊಡಬೇಕೊ… ಅಥವಾ ಬರೇ ಖಾರದ ಒಡಿ ಚಾ ಕೊಟ್ಟು ಸಾಗಿಸಬೇಕೋ.. ಹಿಂಗ ಮುಖ ನೋಡಿ ಮಣಿ ಹಾಕೂದಲ್ಲ.. ತಟ್ಟಿಗೆ ಏನೇನು ಹಾಕಬೇಕು ಅನ್ನುವ ವ್ಯವಹಾರಿಕೆ ಕಲಿಸ್ತದ. 

ಕರದು ಕರದೊಡಿ ಕೊಟ್ರು ಅಂದ್ರ ನಿಮ್ಮಿಬ್ಬರದ್ದೂ ಪಕ್ಕಾ ಪ್ರೀತಿ. ಕರದೂ ಕೊಡ್ಲಿಕ್ಕರ… ಈ ಕೊರೊನಾ ಕಾಲದ ಐವತ್ತು ಮಂದಿಯೊಳಗ ನೀವಿಲ್ಲ ಅನ್ನುಹಂಗ. ಕರದು ತಿನ್ನಾಕ ಕೊಟ್ಟು, ಬುತ್ತಿನೂ ಕಟ್ಟಿಕೊಟ್ರಂದ್ರ ಖರೇನೆ ಕಳ್ಳುಬಳ್ಳಿ ಹಂಚ್ಕೊಂಡೋರು ಅಂತರ್ಥ. 

ಈಗಲೂ ಕರೊದೊಡಿಯ ಕಿಮ್ಮತ್ತು ಯಾಕಿಷ್ಟದ ಅಂದ್ರ ಉಳದ ಉಂಡಿ ಚಕ್ಲಿ ಸಿಕ್ಹಂಗ ಇವು ಅಂಗಡ್ಯಾಗ ಸಿಗೂದಿಲ್ಲ. ಗುಜರಾತಿನಿಂದ ವಿಜಯಪುರಕ್ಕ ಬಂದು, ವಿಜಯಪುರದ ಹೆಣ್ಮಕ್ಕಳು ಹೋದಲ್ಲಿ ಇವು ತಮ್ಮ ರುಚಿಹೆಜ್ಜಿ ಹಾಕ್ಯಾವ. ಇವುಗಳ ಗುಣಕ್ಕ ಮತ್ತ ಯಾರದ್ದಾದರೂ ದುಂಡನೆಯ ಮುಖ ನೆನಪಾದ್ರ ಖಾರದೊಡಿಯ ಆಣೆಗೂ ನಾ ಜವಾಬ್ದಾರಳಲ್ಲ…

‍ಲೇಖಕರು ಅನಾಮಿಕಾ

August 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: