ಆಹ್ವಾನಿತ ಕವಿತೆ: ಜಿ ಎನ್ ರಂಗನಾಥರಾವ್ ಕವಿತೆಗಳು

ಕಾಲ ಪುರುಷನಿಗೆ

ಬಂದೆಯಾ, ಇಷ್ಟು ಬೇಗ, ಇಷ್ಟು ಹಠಾತ್ತನೆ.

ಮೊನ್ನೆಯಷ್ಟೆ ಕೈಹಿಡಿದು ನಡೆಸಿ ಕರೆತಂದುದಲ್ಲವೆ

ಭೂರಮೆಯ ಈ ರಮ್ಯದುದ್ಯಾನಕೆ?

ಜಾಜಿ, ಮಲ್ಲಿಗೆ ಸುರಗಿ ಸಂಪಿಗೆ

ಪುನ್ನಾಗರ ದವನ ಮರುಗ ಸಸ್ಯ ಶ್ಯಾಮಲೆ,

ಕೊಯ್ಯುವುದರಲ್ಲೇ ಕಾಲ ಕಳೆಯಿತು.

ಸೂತ್ರದಲಿ ಕೋದು ಇನ್ನೂ ಮಾಲೆ ಕಟ್ಟಿಲ್ಲ

ಸ್ವಯಂವರಕೆಲ್ಲಿ ಸಮಯ?

ಮಾವು ಹಲಸು ಕದಳಿ ಕರಭೂಜ ದ್ರಾಕ್ಷಿ ದಾಳಿಂಬೆ ಫಲಗರ್ಭಿಶ್ಯಾಮಲೆ,

ಅತಿಮಧುರ ಮಧು

ಹನಿಜೇನು ಸೇರಿಸಿ ರಸಾಯನ ಕಲಸುವುದಷ್ಟೆ ಬಾಕಿ.

ಘ್ರಾಣೇಂದ್ರಿಯ ಬಿರಿದು ನೆತ್ತಿಯಲಿ ವಿಜೃಂಭಿಸುವ ಧಾವಂತ

ಸವಿಯ ಬೇಕಿನ್ನೇನು…

ಪ್ರತ್ಯಕ್ಷ ಕಂಡದ್ದು ಕನ್ನಡಿಯೊಳಗಿನ ಗಂಟಿನ ಅಸಂಗತ.

ಪ್ರಾಯದ ತುಡಿತಗಳಿಗೆ ಪೃಷ್ಠ ತಿರುಗಿಸುವ ಅಹಂಕಾರ

ಕೆಂಪು ಸಿಗ್ನಲ್ ಬಿದ್ದರೂ ಧಾವಿಸುವ ರೈಲು.

       

ಷಡ್ರಸ ಮೃಷ್ಟಾನ್ನ, ಮದಿರೆ ಮಾನಿನಿಯರ

ಕನಸಿನ ಮನೆಯಾಚೆ,

ನಿತ್ಯ ಸತ್ಯ ಸಾಕಾರ ಸಹ್ಯಾದ್ರಿ ಹಿಮಾಲಯ-

“ಕರೆಯುತಿದೆ ಹಿಮಗಿರಿಯ ಕಂದರ

ಬಂದೆಯಾ ಮಗು ಬಂದೆಯಾ”

ಅಭಾವ ವೈರಾಗ್ಯದಲಿ ಒಣಗುವ ವೀರ್ಯಕ್ಕಿಂತ

ಧವಳಗಿರಿ ಹಿಮಗಿರಿಯ ಸಮ್ಮೋಹ ಲೇಸು.

ಯಜ್ಞೋಪವೀತದಲಿ ಗಾಯತ್ರಿ ಧರಿಸಿ

ಶಿಖೆ ಝಾಡಿಸಿ ಹಿಮಗಿರಿಯ ಕರೆಗೆ ಓಗೊಟ್ಟೆ

ದಕ್ಕಿದ್ದು ಸ್ವರತಿ ಸುಖದ ಅಹಂಕಾರವಷ್ಟೆ

ಬರಿದೆ ಬಿಟ್ಟದ್ದೆ ರೈಲು

ಹಿಮಗಿರಿಯೊಂದು ಗಗನ ಕುಸುಮ.

ಮಜಭೂತಾದ ಮೊಲೆತೊಡೆ ಯೋನಿಗಳಷ್ಟೆ ವಾಸ್ತವ

ಕಣ್ತೆರೆಸಿದ ವಾಸ್ತವ್ಯ ಎಂಥ ಸಾಂಗತ್ಯ!

ಮತ್ತೆ ಹೂಡಿದ ಮಳೆಬಿಲ್ಲು

ಉತ್ತಿಬಿತ್ತಿ ಹೊಮ್ಮಿಸುವ ಹುಮ್ಮಸ್ಸು.

       

ಪೂತಮಾನಸರ ಕುಡಿ ದಾಂಗುಡಿಯಿಡುವುದಕೂ ಮುನ್ನ.

ಅಷ್ಟರಲಿ ನೀ ಬಂದೆ ಕಳ್ಳ ಬೇಟೆಗಾರ

ಗೊತ್ತು

ನಾ ಸತ್ಯವಾನನೂ ಅಲ್ಲ

ಅವಳು ಸಾವಿತ್ರಿಯೂ ಅಲ್ಲ.

ಸ್ವಲ್ಪ ಸಾವಧಾನಿಸಯ್ಯ

ಮಾಡಬೇಕಾದ ಪಾತ್ರಗಳು

ಬರೆಯಬೇಕಾದ ಪ್ರಸಂಗಗಳು

ಕಾಯುತಿರುವಾಗ, ನಿನ್ನದೇನಯ್ಯ ಧಾವಂತ?

ಸ್ವಲ್ಪ ಸಾವಧಾನಿಸಯ್ಯ.

ಬಾಳ ಹೊತ್ತಿಗೆಯಲ್ಲಿ ಖಾಲಿ ಹಾಳೆಗಳು ನೂರಾರು

ಈಗಷ್ಟೆ ನಿಬ್ಬು ಚೂಪಾಗಿಸಿ

ಸಿಹಿಕಹಿ ಅರೆದು ಶಾಯಿ ತಯಾರಿಸಿ

ನಾಂದಿಗೀತೆಯ ಸ್ಫೂರ್ತಿಗೆ ಕಾಯುತಿರುವೆ….

ಅದ್ಭುತರಮ್ಯ ಕಲ್ಪನೆಗಳ ಉಚ್ಚ್ರೈವವನೇರಿ ಬರೆಯಬೇಕಿದೆ

ಮಹಾಕಾವ್ಯದ ಮಿಡಿಯ.

ಅಷ್ಟರಲಿ ನೀ ಬಂದೆಯಾ

ಸ್ವಲ್ಪ ತಡಿ ಮಾರಾಯ,

ಅಭಿವಾದಯೆ…

ಚೌಬೀನೆಗೆ ಹಿಡಿದು ಹದವಾಗಿ ಹತ್ತರಿ

ನಯವಾಗಿಸಿ

ಮಿರಿಮಿರಿ ಪಾಲೀಶು ಮಾಲೀಶು

ಮಧ್ಯೆ ಕನ್ನಡಿ ಬಾಗಿಲು

ಬಡಗಿ ಕೊಂಡಯ್ಯ

ಕಡೆದಿರಿಸಿದ ಹೊಸಬೀರು.

ಗೋಡೆ ಗೂಡಿನ ಸರಸ್ವತಿಗೊಂದು

ಚಂದದ ಮನೆ.

ಉತ್ತುಂಗದಲಿ

ಬಿಎಂಶ್ರೀ ಬಂದು ನಿಂತರು,

“ಆಳ್ ಕನ್ನಡ ತಾಯೆ ಬಾಳ್ ಕನಡ ತಾಯ್

ಕನ್ನಡಿಗರೊಡತಿ ರಾಜರಾಜೇಶ್ವರಿ”

ಒಂದಂಕಣದಲಿ

ಮಾಸ್ತಿ ನೀಟಾಗಿ ಕುಳಿತರು

ಇನ್ನೊಂದರಲಿ

ಕುವೆಂಪು ಪುತಿನ ಬೇಂದ್ರೆ ಕೆಎಸ್‍ನ ಮಧುರಚೆನ್ನ

ಮತ್ತೊಂದರಲಿ

ಅಡಿಗ ಅನಂತು ಅನಕೃ ಕಂಬಾರ ನಿಸಾರ ಚಿತ್ತಾಲ…

ಜಿಎಸ್ಸೆಸ್ ಕಣವಿ ಎಚ್ಚೆಸ್ವಿ ಕುಂವೀ

ಎದೆಗೆ ಬಿದ್ದ ಅಕ್ಷರ ದೇವನೂರ

ರಮ್ಯ ಪ್ರಗತಿ ನವ್ಯ ದಲಿತ ಬಂಡಾಯ

ಕವಿಕುಲಲಲಾಮಸಂಕುಲ.

ಕನ್ನಡ ಸಂಸ್ಕೃತಿಯ ಶೃಂಗ

ಏನು ಧನ್ಯಳೊ ಸರಸೋತಿ

ಎಂಥ ಮಾನ್ಯಳೋ!

ಮೈದುಂಬಿ ಕಂಗೊಳಿಸಿತು ಚೌಬೀನೆ

ಮೊದಲ ಬಸಿರಿನ ನವ ವಿವಾಹಿತೆ!

ಧನ್ಯ ಧನ್ಯೋಸ್ಮಿ

ಸಿಡಿದ ಸ್ಫೋಟ ಬ್ರಿಕ್ಸ ಘಟಸ್ಫೋಟ

ಲಾರೆನ್ಸ್ ಕಾಫ್ಕ ಕಮೂ ಸಾತ್ರ್ರರರಿಗಿಲ್ಲ ಜಾಗ

ಮಿದುಳಿಗಿಂತ ಮೈಯ್ಯೆ ಮುಖ್ಯವೆಂದ

ದಿವ್ಯಕಾಮದ ಲಾರೆನ್ಸ್

ಮಾನವಪ್ರಾಣಿ ಕಾಫ್ಕಕಮೂಸಾತ್ರ್ರೆ

ನವ್ಯದ ಅಭ್ಯಾಗತರ

ಎದೆಯಲ್ಲಿ ಹೊತ್ತು ತಿರುಗಿತ್ತದ್ದೇನೆ

ಮ್ಯೆಯ್ಯೆ ಭಾರ ಮನವೆ ಭಾರ

August 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಇಷ್ಟವಾಯ್ತು ವಿಭಿನ್ನ ಸಂವೇದನೆಯ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: