ಯಡ್ಡಿ ಸಪೋರ್ಟಿನಿಂದ ಸಿಎಂ ಆಗಲು ಹೊರಟವರ ಕತೆ

ರಾಜ್ಯ ರಾಜಕೀಯದ ಅಂಗಳದಲ್ಲಿ ವಿಚಿತ್ರವೊಂದು ಘಟಿಸುತ್ತಿದೆ.

ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಯಡಿಯೂರಪ್ಪ ಅವರ ತನಕ ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಇಂತಹ ವಿಚಿತ್ರ ಸನ್ನಿವೇಶ ಉದ್ಭವಿಸಿರಲಿಲ್ಲ.

ಈ ವಿಚಿತ್ರವೆಂದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲದಿಂದಲೇ ಮುಂದಿನ ಮುಖ್ಯಮಂತ್ರಿಯಾಗುವ ಕನಸು ರಾಜ್ಯ ಬಿಜೆಪಿಯ ಹಲ ನಾಯಕರಲ್ಲಿ ಮಿದುಳಿಗೆ ಬಿದ್ದಿರುವುದು.

ಈ ಹಿಂದೆ ಮುಖ್ಯಮಂತ್ರಿಗಳಾದವರನ್ನು ಗದ್ದುಗೆಯಿಂದ ಇಳಿಸಿ ಆ ಜಾಗದಲ್ಲಿ ಕೂರುವ ಹಲವು ಯತ್ನಗಳು ನಡೆದಿವೆ. ಅದೇ ರೀತಿ ಸಿಎಂ ಆದವರು ಪದಚ್ಯುತರಾದಾಗ ಸನ್ನಿವೇಶದ ಲಾಭ ಪಡೆದು ರಪ್ಪಂತ ಗದ್ದುಗೆಯ ಮೇಲೆ ಕುಳಿತಿವರಿದ್ದಾರೆ.

ಆದರೆ ಒಬ್ಬ ಮುಖ್ಯಮಂತ್ರಿ ತನ್ನ ಖುರ್ಚಿಗೆ ಯಾವ ಧಕ್ಕೆಯಿಲ್ಲದೆ ಸುಭದ್ರವಾಗಿ ಕುಳಿತಿರುವ ಸಂದರ್ಭದಲ್ಲಿ ಅವರದೇ ಬೆಂಬಲ ಪಡೆದು ಸಿಎಂ ಹುದ್ದೆಗೇರಬೇಕು ಎಂದು ಕನಸು ಕಂಡವರ ಇತಿಹಾಸವೇ ಇಲ್ಲ.

ಆದರೆ ಈಗ ಅಂತಹ ವಿದ್ಯಮಾನ ಘಟಿಸುತ್ತಿದೆ. ಅರ್ಥಾತ್‌, ಮುಂದಿನ ಸಿಎಂ ಆಗಲು ಬಯಸಿರುವ ಹಲ ನಾಯಕರು ಆ ಬಯಕೆಗೆ ಯಡಿಯೂರಪ್ಪ ಅವರೇ ನೀರೆರೆಯಬೇಕು ಎಂದು ಹಂಬಲಿಸುತ್ತಿದ್ದಾರೆ.

ಹಾಗಂತ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ತಾವು ಸಿಎಂ ಆಗಬೇಕು ಎಂಬ ಕನಸು ಯಾರಿಗೂ ಇರಲೇ ಇಲ್ಲವೆಂದಲ್ಲ. ಕಳೆದ ಜುಲೈ ತಿಂಗಳ ಇಪ್ಪತ್ತಾರರಂದು ಯಡಿಯೂರಪ್ಪ ಸಿಎಂ ಆದ ದಿನದಿಂದಲೇ ಇಂತಹ ಕನಸಿನ ದಂಡೇ ಇದೆ.

ಹೇಗಿದ್ದರೂ ಯಡಿಯೂರಪ್ಪ ಅವರಿಗೆ ಎಪ್ಪತ್ತೈದು ವರ್ಷ ಭರ್ತಿಯಾಗಿದೆ. ಹೀಗಾಗಿ ಅವರು ಸಿಎಂ ಹುದ್ದೆಯಲ್ಲಿ ಬಹುಕಾಲ ಮುಂದುವರಿಯುವುದು ಪಕ್ಷದ ವರಿಷ್ಠರಿಗೆ ಇಷ್ಟವಿಲ್ಲ ಎಂಬುದು ಹಲ ನಾಯಕರ ಲೆಕ್ಕಾಚಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ಎರಡು ತಿಂಗಳಿಗೆ ಒಮ್ಮೆಯಾದರೂ ನಾಯಕತ್ವ ಬದಲಾವಣೆಯ ಕುರಿತು ರಾಜ್ಯ ಬಿಜೆಪಿಯಲ್ಲಿ ಗುಸು ಗುಸು ಏಳುತ್ತಿತ್ತು.

ಇನ್ನೇನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮುಗಿಯಲಿ. ಯಡಿಯೂರಪ್ಪ ಹೇಗೆ ಪತಕ್ಕಂತ ಉದುರುತ್ತಾರೆ ನೋಡ್ತಿರಿ ಎಂದು ಹೇಳುವವರ ಸಂಖ್ಯೆ ಕಡಿಮೆ ಏನೂ ಇರಲಿಲ್ಲ.

ಆದರೆ ಇಂತಹ ಗುಸು ಗುಸು ಎದ್ದಾಗ ಆ ಗುಸು, ಗುಸುವಿನ ರೆಕ್ಕೆ ಪುಕ್ಕಗಳು ತಾನಾಗೇ ಉದುರಿ ಹೋದವು. ಯಾಕೆಂದರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಅಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಹೀಗಾಗಿ ಅಲ್ಲೇ ಪರಿಸ್ಥಿತಿ ಕೆಟ್ಟಿದೆ. ಹೀಗಾಗಿ ಸಿಎಂ ಬದಲಾವಣೆಗೆ ಇನ್ನಷ್ಟು ಟೈಮು ಬೇಕಾಗುತ್ತದೆ ಎಂದು ಅದೇ ನಾಯಕರು ಮಾತನಾಡಿಕೊಂಡರು.

ಅದೇ ರೀತಿ ಬೇರೆ ಪಕ್ಷಗಳಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರು ಉಪಚುನಾವಣೆ ಎದುರಿಸಬೇಕಾದ ಸಂದರ್ಭದಲ್ಲೂ ಮತ್ತೆ ಈ ಗುಸು ಗುಸು ಶುರುವಾಯಿತು.

ಒಂದು ವೇಳೆ ಉಪಚುನಾವಣೆ ನಡೆಯಲಿರುವ ಹದಿನೈದು ಕ್ಷೇತ್ರಗಳ ಪೈಕಿ ಕನಿಷ್ಠ ಎಂಟರಲ್ಲಿ ಬಿಜೆಪಿ ಗೆಲ್ಲದಿದ್ದರೆ ಯಡಿಯೂರಪ್ಪ ತಲೆದಂಡ ನಿಶ್ಚಿತ ಎಂಬ ಮಾತು ಶುರುವಾಯಿತು. ಆದರೆ ಫಲಿತಾಂಶ ಬಂದಾಗ ಗುಸು ಗುಸುವಿನ ರೆಕ್ಕೆ ಪುಕ್ಕ ಕಳಚಿ ಬಿತ್ತು.

ಇನ್ನು ಅವರ ಪುತ್ರ ಎಂ.ಎನ್.ವಿಜಯೇಂದ್ರ ಅವರ ಕೆಂಗಣ್ಣಿಗೆ ಗುರಿಯಾಗಿ ಆಸ್ಥಾನ ವಿದ್ವಾನ್‌ ಒಬ್ಬರು ಸಿಎಂ ಮನೆಯ ಕಾಂಪೌಂಡಿನಿಂದ ಗೇಟ್‌ ಪಾಸ್‌ ಪಡೆದಾಗ ಇಂತಹ ಗುಸು ಗುಸು ಶುರುವಾಯಿತು.

ಅದಕ್ಕೆ ಕಾರಣ ಸ್ವತಃ ಈ ಆಸ್ಥಾನ ವಿದ್ವಾನ್‌ ಅವರೇ ಎಂಬುದು ಬಿಜೆಪಿಯ ಒಳವಲಯಗಳಿಗೆ ಗೊತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಎಂ.ಎನ್. ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಗೂಡಂಗಡಿಗಳು ಯಾವುವು? ಎಂಬ ಬಗ್ಗೆ ಈ ಆಸ್ಥಾನ ವಿದ್ವಾನ್‌ ರಂಪ ಎಬ್ಬಿಸಿದ್ದರು.

ನೋಡ್ರೀ, ಯಡಿಯೂರಪ್ಪ ಅವರ ಆಡಳಿತದಲ್ಲಿ ಮಗನ ಹಸ್ತಕ್ಷೇಪ ಎಷ್ಟು ಹೆಚ್ಚಾಗಿದೆ? ಇದು ಗೊತ್ತಿರುವುದಕ್ಕೆ ತಾನೇ ಆ ವಿದ್ವಾನ್‌ ಇಂತಹ ರಹಸ್ಯವನ್ನು ಬಹಿರಂಗಪಡಿಸಿರುವುದು?ಎಂಬ ಮಾತು ಬಿಜೆಪಿಯ ನಾಯಕರಿಂದಲೇ ರೋಚಕವಾಗಿ ಬಣ್ಣನೆಯಾಗತೊಡಗಿತು.

ಅದೇ ರೀತಿ, ಈ ಆಸ್ಥಾನ ವಿದ್ವಾನ್‌ ಬಹಿರಂಗಪಡಿಸಿದ ರಹಸ್ಯಗಳ ಬಗ್ಗೆ ಹೈಕಮಾಂಡ್‌ ಕೆಂಡಾಮಂಡಲವಾಗಿದೆ. ಹೀಗಾಗಿ ನೋಡುತ್ತಿರಿ. ಇನ್ನೇನು ಸ್ವಲ್ಪ ದಿನಗಳಲ್ಲೇ ಯಡಿಯೂರಪ್ಪ ಔಟ್‌ ಆಗುವುದು ಗ್ಯಾರಂಟಿ ಎಂದು ಈ ನಾಯಕರು ಆತ್ಮವಿಶ್ವಾಸದಿಂದ ಹೇಳತೊಡಗಿದರು.

ಆದರೆ ಇಂತಹ ಮಾತುಗಳ ಪಸೆ ಆರುವ ಮುನ್ನವೇ ಸಿಎಂ ಮನೆಯ ಕಾಂಪೌಂಡಿನಿಂದ ಹೊರಬಿದ್ದಿದ್ದ ಆ ಆಸ್ಥಾನ ವಿದ್ವಾನ್‌ ತಣ್ಣಗೆ ಸಿಎಂ ಮನೆಯ ಗೇಟಿನ ಒಳನುಗ್ಗಿದರು.

ಈ ಮಧ್ಯೆ ಸಂಘ ಪರಿವಾರದ ಪ್ರಮುಖರೊಬ್ಬರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ತರಲು ಪ್ರಯತ್ನ ನಡೆಸಿದ್ದಾರೆ ಎಂಬ ಕಲರವ ಶುರುವಾಯಿತು.

ಅದೇನಾಯಿತೋ? ಮೊನ್ನೆ ಅದೇ ಪ್ರಹ್ಲಾದ್‌ ಜೋಷಿ ಅವರು ಮಾತನಾಡಿ, ಯಾವ ಕಾರಣಕ್ಕೂ ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ನನಗೆ ದೆಹಲಿಯೇ ಸಾಕು ಎಂದು ಬಿಟ್ಟರು.

ಹೀಗೆ ನೋಡ ನೋಡುತ್ತಿದ್ದಂತೆಯೇ ಯಡಿಯೂರಪ್ಪ ಅವರ ಪದಚ್ಯುತಿಯ ಬಗೆಗಿನ ಸೌಂಡು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಆ ಜಾಗ ತುಂಬಬಲ್ಲ ನಾಯಕರು ಯಾರು? ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರಿಗೇ ಉತ್ತರ ಸಿಗುತ್ತಿಲ್ಲ.

ಹೀಗಾಗಿ ರಾಜ್ಯ ಬಿಜೆಪಿಯ ಯಾವ ನಾಯಕರೇ ಆಗಲಿ, ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಮುಂಚಿನಂತೆ ಸಾಧ್ಯವೇ ಆಗುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಂತವರ ಬಳಿ ಕೆಲವರು ಈ ಕುರಿತು ಪರೋಕ್ಷವಾಗಿ ಹೇಳಿದರೆ: ನೀವು ಹೇಳಿದ್ದು ನಿಜ. ಆದರೆ ಯಡಿಯೂರಪ್ಪ ಅವರಂತೆ ರಾಜ್ಯ ಬಿಜೆಪಿಯನ್ನು ಹೆಗಲ ಮೇಲಿಟ್ಟುಕೊಂಡು ಮುನ್ನಡೆಸುವ ಶಕ್ತಿ ಯಾರಿಗಿದೆ? ನೀವೇ ಹೇಳಿ ಎಂಬ ಆನ್ಸರು ಸಿಗುತ್ತಿದೆ.

ಹೀಗಾಗಿ ಯಡಿಯೂರಪ್ಪ ಅವರ ಜಾಗಕ್ಕೆ ನಾವು ಬಂದು ಕೂರಬೇಕು ಎಂದು ಕನಸು ಕಾಣುತ್ತಿದ್ದವರ ಪಡೆಯೂ ಸೇರಿದಂತೆ ರಾಜ್ಯ ಬಿಜೆಪಿಯಲ್ಲಿ ವಿಶೇಷ ಪಡೆಯೊಂದು ಹುಟ್ಟಿಕೊಂಡಿದೆ.

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ್‌, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಂತವರೆಲ್ಲ, ಯಡಿಯೂರಪ್ಪ ಅವರ ಬೆಂಬಲ ನಮಗೆ ದಕ್ಕಿದರೆ ನಾವೇ ಸಿಎಂ ಎಂದು ಲೆಕ್ಕ ಹಾಕುತ್ತಿದ್ದಾರೆ. ಹೀಗೆ ಕನಸು ಕಾಣುವವರ ರೇಸಿನಲ್ಲಿ ಅಶೋಕ್‌ ಹಾಗೂ ಗೋವಿಂದ ಕಾರಜೋಳ ಫ್ರಂಟ್‌ಲೈನಿನಲ್ಲಿ ಇದ್ದಾರೆ.

ಹಾಗೆ ನೋಡಿದರೆ ಅಧಿಕಾರದಲ್ಲಿರುವ ಮುಖ್ಯಮಂತ್ರಿಯ ಬೆಂಬಲ ಪಡೆದು ಆ ಹುದ್ದೆಗೆ ಬರಬೇಕು ಎಂದು ಬಯಸಿದವರ ಇತಿಹಾಸವೇ ಕರ್ನಾಟಕದಲ್ಲಿಲ್ಲ.

ಹಿಂದೆ ಯಡಿಯೂರಪ್ಪ ಅವರು ಈ ಹಿಂದೆ ಆಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೆಳಗಿಳಿಯುವ ಸನ್ನಿವೇಶ ಬಂದಾಗ ಅವರ ಬೆಂಬಲದಿಂದ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು. ಅವರ ನಂತರ ಜಗದೀಶ್‌ ಶೆಟ್ಟರ್‌ ಕೂಡಾ ಆ ಖುರ್ಚಿಯ ಮೇಲೆ ಬಂದು ಕೂತಿದ್ದರು.

ಆದರೆ ಅವತ್ತು ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವುದು ನಿಕ್ಕಿಯಾಗಿತ್ತು. ಇವತ್ತು ಅಂತಹ ಪರಿಸ್ಥಿತಿಯೇ ಇಲ್ಲ. ಬದಲಿಗೆ ದಿನಕಳೆದಂತೆ ಯಡಿಯೂರಪ್ಪ ಫೆವಿಕಾಲ್‌ ಅಂಟಿಸಿಕೊಂಡವರಂತೆ ತಮ್ಮ ಖುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ.

ಹೀಗೆ ಭದ್ರವಾಗಿ ಕುಳಿತವರ ಬೆಂಬಲ ಪಡೆದೇ ನಾವು ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಂಡವರ ಉದಾಹರಣೆಯೇ ಕರ್ನಾಟಕದಲ್ಲಿಲ್ಲ.

ರಾಜ್ಯ ಬಿಜೆಪಿ ನಾಯಕತ್ವದ ಕೊರತೆಯಿಂದ ಅದೆಷ್ಟು ಬಳಲುತ್ತಿದೆ? ಎಂಬುದಕ್ಕೆ ಇದೇ ಸಾಕ್ಷಿ.

August 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: