ಆತ್ಮಹತ್ಯೆಯ ಆಲೋಚನೆ ನನ್ನೊಳಗೆ ಮೂಡಿತ್ತು..

ಸ್ವಂತ ಕಾಲಮೇಲೆ ನಿಲ್ಲಬೇಕೆಂಬ ಛಲದಿಂದ ನಾನೇ ಸ್ವಂತ ಮುದ್ರಣಾಲಯ ಸ್ಥಾಪಿಸಲು ಲಕ್ಷ್ಮೀ ಮುದ್ರಣಾಲಯದಿಂದ ಹೊರಬಂದೆ. ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ನನ್ನ ಬಳಿ ಇದ್ದವಾದರೂ ಅವಕ್ಕೆ ಬೇಕಾದ ಮೂಲ ಬಂಡವಾಳ ನನ್ನ ಬಳಿ ಸ್ವಲ್ಪವೂ ಇರಲೇ ಇಲ್ಲ..! ನಮ್ಮ ಅತ್ಯಂತ ಆತ್ಮೀಯರೊಬ್ಬರು ದೊಡ್ಡ ಮೊತ್ತದ ನೆರವು ಕೊಡುವುದಾಗಿ ಭರವಸೆ ಕೊಟ್ಟಿದ್ದರು.

ಬೇರೆಬೇರೆ ಆತ್ಮೀಯರು ಸಹಾಯಹಸ್ತ ಚಾಚುತ್ತಾರೆ, ಜೊತೆಗೆ ಸ್ವಲ್ಪ ಸಾಲಸೋಲ ಮಾಡಬಹುದು ಎಂಬ ಭಂಡ ಧೈರ್ಯವೇ ನನ್ನ ಜೊತೆ ಇದ್ದ ಬಂಡವಾಳ. ಆಗ ಮಾತುಗಳಲ್ಲಿ ಮೂಡಿದ ಅನೇಕ ಸಲಹೆ-ಸೂಚನೆಗಳ ಯೋಜನೆಗಳಿಂದ ಮುದ್ರಣಾಲಯ ಪ್ರಾರಂಭಿಸುವುದು ಬಹಳ ಸುಲಭವೆನಿಸಿತ್ತು. ಆದರೆ ನೀರಿಗೆ ಇಳಿದ ಮೇಲೇ ಗೊತ್ತಾಗಿದ್ದು ಅದರ ಆಳ ಮತ್ತು ಅದರಲ್ಲಿ ಈಜುವುದು ಎಷ್ಟು ಕಷ್ಟವೆಂದು..!

ಯೋಜನೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುವಾಗ ಅನೇಕ ಸಮಸ್ಯೆಗಳು ಉದ್ಭವವಾಗತೊಡಗಿದವು. ಮೊದಲು ಒಂದು ಒಳ್ಳೆ ಜಾಗ ನೋಡಿದ್ದೆವು. ಜಾಗ ನೋಡಿದ ಆತ್ಮೀಯರೆಲ್ಲರೂ ತುಂಬಾ ಚೆನ್ನಾಗಿದೆ. ಬಾಡಿಗೆ ಜಾಸ್ತಿ ಆದರೂ ಪರವಾಗಿಲ್ಲ, ಜಾಗ ಮುಖ್ಯರಸ್ತೆಯ ಸರ್ಕಲ್ ನಲ್ಲಿ ಇದೆ, ಇನ್ನು ಒಳ ಆವರಣ ಮುದ್ರಣಾಲಯಕ್ಕೆ ಹೇಳಿಮಾಡಿಸಿದಂತಿದೆ, ಯಾವ ಕಾರಣಕ್ಕೂ ತಡಮಾಡಬೇಡ ಎಂದರು.

ಅದರಂತೆ ಬಸವಕುಮಾರ ಸ್ವಾಮೀಜಿ ಮತ್ತು ಪ್ರಕಾಶ್ ಕಂಬತ್ತಳ್ಳಿ ಅವರೇ ಮುಂಗಡ ಹಣವನ್ನು ಕೊಟ್ಟು ಜಾಗವನ್ನು ಅಂತಿಮಗೊಳಿಸಿದ್ದರು. ನನ್ನ ಅಮ್ಮ ಮತ್ತು ಹೆಂಡತಿ ಕೊಟ್ಟ ಬಂಗಾರದಿಂದ ಬಂದ ಹಣ ಮತ್ತು ಕುಟುಂಬಸ್ಥರು ಕೊಟ್ಟ ಹಣದಿಂದ ಸಣ್ಣ ಪುಟ್ಟ ಯಂತ್ರಗಳು, ವಿದ್ಯುಚ್ಛಕ್ತಿಗಾಗಿ ವೈರ್, ಕಂಪ್ಯೂಟರ್ ಕಛೇರಿಗೆ ಮೇಜು ಕುರ್ಚಿಗಳನ್ನು ಕೊಂಡೆವು. ಮುಂದೆ ಮುದ್ರಣ ಕಾರ್ಯಕ್ಕೆ ಬೇಕಾದ ಯಂತ್ರಗಳು..?

ಮುದ್ರಣ ಯಂತ್ರಗಳಿಗೆ ಚೆನ್ನೈನಲ್ಲಿ ಒಂದು ಒಳ್ಳೆಯ ದೊಡ್ಡ ಮಾರುಕಟ್ಟೆಯಿದೆ. ಜರ್ಮನಿಯಲ್ಲಿ ತಯಾರಿಸಿದ ಮುದ್ರಣ ಯಂತ್ರಗಳನ್ನು ಒಂದು ಹತ್ತು ವರ್ಷ ಅಲ್ಲಿಯೇ ಬಳಸಿದ ಮೇಲೆ ದಲ್ಲಾಳಿಗಳು ಕೊಂಡು, ಹಡಗಿನ ಮುಖಾಂತರ ತಂದು, ಚೆನ್ನೈನ ಶೋರೂಂಗಳಲ್ಲಿ ವಸ್ತುಗಳನ್ನು ಜೋಡಿಸಿಡುವ ಹಾಗೆ ಗೋಡೌನ್ ಗಳಲ್ಲಿ ಜೋಡಿಸಿಟ್ಟಿರುತ್ತಾರೆ.

ಗ್ರಾಹಕರು ಅವರ ಮನಸೋ ಇಚ್ಛೆ ಅವರವರ ಆಯ್ಕೆಗೆ ತಕ್ಕನಾದ ವಿಧವಿಧವಾದ ಯಂತ್ರಗಳನ್ನು ಅಲ್ಲಿ ನೋಡಬಹುದು. ದೊಡ್ಡ ಗೋಡೌನ್ ಗಳಲ್ಲಿ ಒಳ್ಳೆ ಸಮುದ್ರದ ಮುಂದೆ ನಿಂತು ನೋಡಿದರೆ ಕಣ್ಣುಹಾಯಿಸಿದಷ್ಟೂ ದೂರ ನೀರು ಕಾಣುವ ಹಾಗೆ ಯಂತ್ರಗಳು ಕಾಣುತ್ತಿರುತ್ತವೆ.

ಇಂತಹ ಕಡೆ ಅನುಭವ ಇಲ್ಲದೆ ಹೋದರೆ ಯಂತ್ರ ಖರೀದಿಗೆ ಹೋದ ಗ್ರಾಹಕರನ್ನು ಹುರಿದು ಮುಕ್ಕಿ ಬಿಡುತ್ತಾರೆ. ನನಗಂತೂ ಯಂತ್ರ ಖರೀದಿಯ ವ್ಯವಹಾರದ ಬಗ್ಗೆ ಅಲ್ಪವೂ ಜ್ಞಾನವಿರಲಿಲ್ಲ. ಹಾಗಾಗಿ ಈ ವ್ಯವಹಾರದಲ್ಲಿ ಅಪಾರ ಅನುಭವವಿದ್ದ ಆತ್ಮೀಯ ಸ್ನೇಹಿತರಾಗಿದ್ದ, ‘ರವಿ ಗ್ರಾಫಿಕ್ಸ್’ ನ ನಾರಾಯಣ ಅವರು ನನ್ನ ಜೊತೆ ಇದ್ದು ಪೂರ್ಣ ಮಾರ್ಗದರ್ಶನ ಮಾಡಿದ್ದರು.

ನಾರಾಯಣ ಮತ್ತು ಗಣೇಶಣ್ಣ ಅವರ ಜೊತೆ ಸಾಗರದಂತೆ ಇದ್ದ ಯಂತ್ರಗಳ ಹಲವು ಗೋಡೌನ್ ಗಳಲ್ಲಿ ಎರಡು ದಿನಗಳ ಕಾಲ ಅಲೆದು ನಮಗೆ ಬೇಕಾದಂತಹ ಮುದ್ರಣ ಸಂಬಂಧಿ ಯಂತ್ರಗಳನ್ನು ಹುಡುಕಿ ಆಯ್ಕೆಮಾಡಿಟ್ಟಿದ್ದೆವು. ನನಗೆ ಆತ್ಮೀಯರೊಬ್ಬರು ಕೊಡಲೊಪ್ಪಿದ್ದ ದೊಡ್ಡಮೊತ್ತದ ಜೊತೆ ಇನ್ನು ಸ್ವಲ್ಪ ಸಾಲ ಮಾಡಿ ಜೋಡಿಸಬಹುದು ಎಂದು ಎರಡು ಯಂತ್ರಗಳನ್ನು ಚೌಕಾಸಿ ಮಾಡಿ, ಮುಂಗಡ ಹಣ ಕೊಟ್ಟು ಯಂತ್ರಗಳನ್ನು ಕಾಯ್ದಿರಿಸಿದ್ದೆವು.

ಇನ್ನೂ ಹಲವು ಯಂತ್ರಗಳನ್ನು ನೋಡಬೇಕಾಗಿತ್ತು, ಆದರೆ ನಾವು ಯಂತ್ರಗಳನ್ನು ಕೊಳ್ಳಲು ಮಾಡಿದ್ದ ಬಜೆಟ್ ಗಿಂತ ಆಗಲೇ ನಾಲ್ಕು ಪಟ್ಟು ಜಾಸ್ತಿಯಾಗಿ ಬಿಟ್ಟಿತ್ತು. ಹಾಗಾಗಿ ಮುಂದೆ ನೋಡಿಕೊಂಡರಾಯ್ತು ಎಂದು ಹಣ ಹೊಂದಿಸಿಕೊಂಡು ಬರಲು ಬೆಂಗಳೂರಿಗೆ ಹಿಂತಿರುಗಿದೆವು.

ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆ ಸಿಡಿಲಬ್ಬರದಂಥ ಒಂದು ಸುದ್ದಿ ಬಂದು ಅಪ್ಪಳಿಸಿತ್ತು..!

ನನಗೆ ದೊಡ್ಡ ಮೊತ್ತದ ಧನಸಹಾಯ ಮಾಡಲು ಭರವಸೆ ಕೊಟ್ಟವರೇ ಒಂದು ದೊಡ್ಡ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದರು..! ಅವರು, ನಾನು ಹಣದ ವಿಚಾರ ಚರ್ಚೆ ಮಾಡಿದ ದಿನವೇ ನಾಳೆ ಬಂದು ಹಣ ತೆಗೆದುಕೊಂಡು ಹೋಗು ಎಂದಿದ್ದರು. ನಾನೇ, “ಬೇಡ ಬೇಡ, ನನ್ನ ಬಳಿ ಇದ್ದರೆ ಬೇರೆ ಯಾವುದಕ್ಕಾದರೂ ಖರ್ಚು ಮಾಡಿಬಿಡುವೆ, ಆದ್ದರಿಂದ ಮೊದಲು ಚೆನ್ನೈಗೆ ಹೋಗಿ ಯಂತ್ರಗಳನ್ನು ನೋಡಿಕೊಂಡು ಬಂದು, ಆಮೇಲೆ ನಿಮ್ಮ ಬಳಿ ಹಣ ಪಡೆಯುವೆ” ಎಂದಿದ್ದೆ.

ನಮ್ಮೆಲ್ಲರ ಎದುರೇ ದೊಡ್ಡ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದ್ದ ಅವರ ಬಳಿ ಹಣ ಸಹಾಯ ಕೇಳಲು ಮನಸ್ಸು ಒಪ್ಪಲೇ ಇಲ್ಲ. ಏನು ಮಾಡುವುದೆಂದು ದಾರಿ ತೋಚದಂತಾಗಿ ಚಿಂತಾಗ್ರಸ್ತನಾದೆ… ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು.

ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಹಿಡಿದು ಹೋದೆ. ಅವರು ನಿಮ್ಮ ಕಂಪನಿಯ ವಹಿವಾಟಿನ ಮೇಲೆ ಲೋನ್ ಕೊಡಬಹುದು ಅಥವಾ ಯಾವುದಾದರೂ ಚಿರಾಸ್ತಿ ಅಡವಿಟ್ಟರೆ ಲೋನ್ ಕೊಡಬಹುದು ಎಂದುಬಿಟ್ಟರು. ಈಗ ನಾನು ಮುದ್ರಣ ಕಾರ್ಯಕ್ಕೆ ಯಂತ್ರಗಳೇ ಇಲ್ಲದೆ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅಂತದ್ದರಲ್ಲಿ ವಹಿವಾಟು ತೋರಿಸುವುದು ಹೇಗೆ..? ಇನ್ನು ಚಿರಾಸ್ತಿ, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಿಕೊಂಡು ಸಂಸಾರ ಸಾಗಿಸುವುದೇ ಕಷ್ಟ, ಅಂತದ್ರಲ್ಲಿ ಚಿರಾಸ್ತಿ ಮಾಡುವ ಮಾತು ಎಲ್ಲಿಂದ..!

ಹೀಗೆ ಬ್ಯಾಂಕ್ ಮತ್ತು ಖಾಸಗಿಯಾಗಿ ಸಾಲ ಕೊಡುವವರ ಬಳಿ ಅಲೆಯುತ್ತ ಮೂರು ತಿಂಗಳು ಕಳೆದೆ. ನನ್ನ ಕಷ್ಟ ನೋಡಲಾರದೆ ಮನೆಯಲ್ಲಿ ಅಮ್ಮ ಜಮೀನು ಮಾರಿಬಿಡು ಎಂದರಾದರೂ ಆಗ ಎರಡು ಮೂರು ವರ್ಷಗಳು ಮಳೆ ಇಲ್ಲದೆ ಬರಗಾಲ..! ಹಾಗಾಗಿ ಜಮೀನು ಕೊಳ್ಳುವವರಿಲ್ಲ. ಒಬ್ಬರು-ಇಬ್ಬರು ಕೊಳ್ಳಲು ಮುಂದೆ ಬಂದರೂ, ಹೇಗೂ ಕಷ್ಟದಲ್ಲಿದ್ದಾರೆ… ತುರ್ತಾಗಿ ಹಣ ಬೇಕಾಗಿದೆ ಎಂದು ಮನಗಂಡು ಬಾಯಿಗೆ ಬಂದ ಹಾಗೆ ಬಹಳ ಕಮ್ಮಿ ಬೆಲೆಗೆ ಜಮೀನು ಕೇಳುತ್ತಿದ್ದರು.

ಹೀಗೆ ಬ್ಯಾಂಕ್, ಜಮೀನು ಎನ್ನುತ್ತಾ ಸಮಯ ದೂಡುತ್ತಿದ್ದ ನನ್ನನ್ನು ನೋಡಿ, ನನ್ನ ಬೆನ್ನ ಹಿಂದೆ ಜನ ಮಾತಾಡಲು ಶುರು ಮಾಡಿದ್ದರು… ನನ್ನ ಕೈಯಲ್ಲಿ ಮುದ್ರಣಾಲಯ ಪ್ರಾರಂಭ ಮಾಡಲು ಆಗುವುದಿಲ್ಲ. ನಾಲ್ಕು ತಿಂಗಳು ಕಳೆದರೂ ಇನ್ನೂ ಒಂದು ಯಂತ್ರವನ್ನು ಕೊಂಡುಕೊಳ್ಳಲಾಗಲಿಲ್ಲ.. ಇನ್ನೇನು ಎರಡು ಮೂರು ತಿಂಗಳಲ್ಲಿ ಪ್ರಾರಂಭ ಮಾಡಿರುವ ಮುದ್ರಣಾಲಯವನ್ನು ಮುಚ್ಚೇ ಬಿಡುತ್ತಾನೆ. ಈಗಾಗಲೇ ಸಾಕಷ್ಟು ಸಾಲ ಮಾಡಿಬಿಟ್ಟಿದ್ದಾನೆ… ಹೀಗೆ ಥರಾವರಿ ಮಾತುಗಳು ಹರಿದು ಬರತೊಡಗಿದ್ದವು.

ಚೆನ್ನೈನಲ್ಲಿ ಯಂತ್ರಗಳಿಗೆ ಮುಂಗಡ ಹಣ ಕೊಟ್ಟು ಬಂದಿದ್ದೆವಲ್ಲಾ, ಅವರಿಂದಲೂ ಪದೇಪದೇ ಕರೆ..! “ನೀವು ಮುಂಗಡ ಕೊಟ್ಟು ಕಾಯ್ದಿರಿಸಿರುವ ಯಂತ್ರಗಳನ್ನು ಕೂಡಲೇ ಪೂರ್ಣ ಹಣಕೊಟ್ಟು ತೆಗೆದುಕೊಂಡು ಹೋಗದಿದ್ದರೆ, ನಾವು ಹೆಚ್ಚು ಸಮಯ ಕಾಯಲು ಆಗುವುದಿಲ್ಲ, ಆದ್ದರಿಂದ ಬೇರೆಯವರಿಗೆ ಮಾರಿ ಬಿಡುತ್ತೇವೆ. ನಿಮ್ಮ ಮುಂಗಡ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿ ಕೊಡುವುದಿಲ್ಲ” ಎನ್ನತೊಡಗಿದ್ದರು. ಈ ರೀತಿಯ ಮಾತುಗಳು ನನ್ನನ್ನು ಇನ್ನಷ್ಟು ಘಾಸಿಗೊಳಿಸಿದ್ದವು.

ಮೇಲಿನ ಮಾತುಗಳನ್ನು ಅವರಿವರಿಂದ ಕೇಳಿ ಹಣದ ಸಹಾಯ ಮಾಡಲು ಒಪ್ಪಿದ್ದ ಕೆಲವರು ನನ್ನನ್ನು ಅನುಮಾನಿಸಲು ಪ್ರಾರಂಭಿಸಿದರು, ನನ್ನಲ್ಲಿ ಏನೋ ಒಂದು ರೀತಿ ಭಯ ಮತ್ತು ಆತಂಕ..! ನನ್ನನ್ನು ನಂಬಿ ಪ್ರೋತ್ಸಾಹಿಸಲು ಮುಂದೆ ಬಂದ ಆತ್ಮೀಯರ ವಿಶ್ವಾಸವನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ಅನುಮಾನ ಹುಟ್ಟಿಬಿಟ್ಟಿತ್ತು..!

ಈ ಅವಧಿ ನನಗೆ ತುಂಬಾ ಕಠಿಣವಾಗತೊಡಗಿತ್ತು. ಅನೇಕ ರಾತ್ರಿಗಳು ನಿದ್ದೆ ಬರದೆ ಒದ್ದಾಡಿದ್ದೆ. ಈ ಸಮಯದಲ್ಲಿ ಅನೇಕ ಸಲ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಆಲೋಚನೆಯೂ ನನ್ನ ಮನದೊಳಗೆ ಮೂಡಿತ್ತು.

ನಾನು ಮಾಡಿದ ದೊಡ್ಡ ತಪ್ಪು ಎಂದರೆ ಆಗ ನನಗೆ ಬಂದ ಕಷ್ಟಗಳನ್ನು ಕುಟುಂಬದವರ ಅಥವಾ ಆತ್ಮೀಯರ ಬಳಿ ಹೇಳಿಕೊಳ್ಳಲೇ ಇಲ್ಲ..! ನನ್ನ ಮುಖದಲ್ಲಿ ಮೂಡಿದ್ದ ಆತಂಕ ಹಾಗೂ ಧ್ವನಿಯಲ್ಲಿನ ಏರುಪೇರುಗಳನ್ನು ಗುರುತಿಸಿದ ಬಸವಕುಮಾರ ಸ್ವಾಮೀಜಿ ಮತ್ತು ಪ್ರಕಾಶ್ ಕಂಬತ್ತಳ್ಳಿಯವರು ಕರೆದು “ಯಾಕೆ ಏನಾಗಿದೆ, ಏನು ಕಷ್ಟ” ಎಂದು ವಿಚಾರಿಸಿ, ನಿಧಾನಕ್ಕೆ ನನ್ನ ಬಾಯಿ ಬಿಡಿಸಿದರು.

“ಮೊದಲೇ ನಮ್ಮ ಬಳಿ ಹೇಳಲು ಏನಾಗಿತ್ತು ನಿನಗೆ..!” ಎಂದು ಬೈದು, ಇಬ್ಬರೂ ಒಂದೊಂದು ಯಂತ್ರಗಳಿಗೆ ಆಗುವಷ್ಟು ಹಣ ಕೊಟ್ಟಿದ್ದರಿಂದ ಮೊದಲು ಯಂತ್ರಗಳು ಮುದ್ರಣಾಲಯವನ್ನು ಪ್ರವೇಶಿಸಿದವು. ನಂತರ ದ್ವಾರಕಾನಾಥ್ ಅವರ ಹತ್ತಿರ ಸ್ವಲ್ಪ ಹಣ ಸಾಲ ಪಡೆದು, ‘ಮಾರುತಿ ಪೇಪರ್ಸ್’ ನ ಲಾಲಾರಾಮ್ ಅವರ ಸಹಕಾರದಿಂದ ಇನ್ನೊಂದು ಯಂತ್ರ ಕೊಂಡೆವು.

ನಂತರ ಅನೇಕ ಆತ್ಮೀಯರ ಸಹಕಾರದಿಂದ ಬೇರೆಬೇರೆ ಯಂತ್ರಗಳನ್ನು ತಂದೆವು. ಮುದ್ರಣಾಲಯಕ್ಕೆ ಯಂತ್ರಗಳು ಬಂದು ಕೆಲಸ ಆರಂಭ ಮಾಡುವಷ್ಟರಲ್ಲಿ ಆರು ತಿಂಗಳು ಕಳೆದೇ ಹೋಗಿದ್ದವು… ಈ ಅವಧಿ ನನಗೆ ನಿಜಕ್ಕೂ ಅತ್ಯಂತ ಕಠಿಣವಾಗಿದ್ದ ಸತ್ವಪರೀಕ್ಷೆಯ ದಿನಗಳು.

August 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: