ನಾನೂ ಬೇಲಿ ಹಾರಿದೆ..

ಬೆಟ್ಟದೂರಿನ ಆ ದೇವರ ಹಣ್ಣೆಂಬ ಅಮೃತ!

ಆಗ ದೆಹಲಿಗೆ ಬಂದ ಹೊಸದು.

ಲಜಪತ್‌ ನಗರದ ಮಾರ್ಕೆಟ್ಟಿನಲ್ಲಿ ಕೇಸರಿ ಬಣ್ಣದ ಚೆಂದನೆಯ ಹಣ್ಣೊಂದು ಕಣ್ಣಿಗೆ ಬಿತ್ತು.

ಹೊಸ ಪರಿಸರದ ಹೊಸ ಹಣ್ಣು, ತರಕಾರಿ, ತಿನಿಸು ಏನೇ ಇರಲಿ, ಅದರ ಬಗ್ಗೆ ನನಗೆ ಸದಾ ಕುತೂಹಲ.

ಆ ಸಹಜ ಕುತೂಹಲದಿಂದಲೇ ನಾನು ಆತನಲ್ಲಿ ಹಣ್ಣಿನ ಪೂರ್ವಾಪರ ವಿಚಾರಿಸಲಾಗಿ, ರೇಟು ಆಕಾಶದಲ್ಲಿದೆ ಎನಿಸಿದರೂ, ಆಗಸಕ್ಕೆ ಏಣಿಯಿಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಮಾಧಾನ ಮಾಡಿಕೊಳ್ಳುತ್ತಾ ಎರಡೇ ಎರಡು ಹಣ್ಣು ಕೊಂಡು ತಂದಿದ್ದೆ. ʻಬಣ್ಣ ನೋಡಿ, ಹಣ್ಣು ಅಂತ ಈಗ್ಲೇ ತಿನ್ಬೇಡಿ ಮತ್ತೆ, ಸ್ವಲ್ಪ ಮೆತ್ತಗಾದ ಮೇಲೆ ತಿನ್ನಿ ಎಂದು ಪುಣ್ಯಕ್ಕೆ ಎಚ್ಚರಿಕೆ ಕೊಟಿದ್ದ. ಎರಡು ದಿನದಲ್ಲಿ ತಿಂದರೆ ಆಹಾ… ಆಹಾ..!

ʻಭಾರೀ ರುಚಿ, ಸಿಹಿಯೆಂದರೆ ಸಿಹಿ, ಅಮೃತ ಇದು! ನೀವು ಒಮ್ಮೆ ತಿಂದರೆ ಆಮೇಲೆ ಮತ್ತೆ ಈ ಹಣ್ಣು ಹುಡುಕಿ ಬರದಿದ್ದರೆ ಕೇಳಿʼ ಅಂತ ಬಿಲ್ಡಪ್ಪೆಲ್ಲಾ ಕೊಟ್ಟಿದ್ದ. ಇಂಥ ಬಿಲ್ಡಪ್ಪಿಗೆ ಸೋತು, ತಿಂದ ಹಣ್ಣುಗಳು ಬಹುತೇಕ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಮಾತ್ರ ನಾ ಸೋತಿದ್ದೆ.

ಇಂಥದ್ದೊಂದು ಅದ್ಭುತ ರುಚಿಯ ಹಣ್ಣೇಕೆ ಈವರೆಗೆ ಗೊತ್ತೇ ಆಗಲಿಲ್ಲ? ಕೊನೇಪಕ್ಷ, ಕೇಳಿ ಓದಿಯೂ ಗೊತ್ತಿಲ್ಲವಲ್ಲ ಎಂದು ಅಂದುಕೊಳ್ಳುತ್ತಾ, ಸೃಷ್ಟಿಯ ಮಾಯೆಗೆ ಅಚ್ಚರಿಪಡುತ್ತಾ ಹಣ್ಣು ಚಪ್ಪರಿಸಿ ತಿಂದಿದ್ದಾಯ್ತು. ಹಿಮಾಲಯದ ಹಣ್ಣಿದು, ರಾಮಫಲ ಎಂದಿದ್ದನಲ್ಲ, ಇದ್ಯಾವ ಸೀಮೆ ರಾಮಫಲವಪ್ಪಾ ಅಂದುಕೊಂಡು, ಛೇ ಒಂದೆರಡು ಕೆಜಿನೇ ತರಬಹುದಿತ್ತಲ್ಲ ಅಂತ ನನ್ನನ್ನೇ ಶಪಿಸಿಯೂ ಆಯಿತು.

ಆ ಮಾರ್ಕೆಟ್ಟು ಬಹಳ ದೂರವಿದ್ದರಿಂದ ಹತ್ತಿರದ ಮಾರ್ಕೆಟ್ಟುಗಳಲ್ಲೆಲ್ಲ ಕಣ್ಣು ಇದನ್ನೇ ಹುಡುಕುತ್ತಿತ್ತು. ಅಂಥದ್ದೊಂದು ಹಣ್ಣು ಮತ್ತೆಲ್ಲೂ ನನ್ನ ಕಣ್ಣಿಗೆ ಬೀಳಲಿಲ್ಲ. ಆಶ್ಚರ್ಯವೆಂದರೆ ಅಕ್ಕಪಕ್ಕದ ಮನೆಯ ದೆಹಲಿ ನಿವಾಸಿಗಳಿಗೂ ಈ ಹಣ್ಣಿನ ಪರಿಚಯವಿರಲಿಲ್ಲ.

ಇಷ್ಟೆಲ್ಲ ಆಗಿ ವರುಷವೊಂದು ಕಳೆದು, ಇದೆಲ್ಲ ಮರೆತುಹೋಗಿ ಒಂದು ದಿನ ಅಚಾನಕ್ಕಾಗಿ, ಈ ಹಣ್ಣಿನ ಮರಗಳೇ  ನಿಮ್ಮ ಮುಂದೆ ಪ್ರತ್ಯಕ್ಷವಾಗಿಬಿಟ್ಟರೆ! ಹಂಗೇ ಆಯಿತು ನನ್ನ ಕಥೆಯೂ.

ಅದೊಂದು ದಿನ ಕುಲ್ಲು ಕಣಿವೆಯೊಳಗಿನ ದಿ ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕಿಗೆ ಪ್ರವೇಶದ್ವಾರದಂತಿರುವ ತೀರ್ಥನ್‌ ಕಣಿವೆಯೊಳಗೆ ಹೊಕ್ಕುತ್ತಿದ್ದೆವಷ್ಟೇ. ಅರೆ, ಅದೇನು ಮರದ ತುಂಬ ಟೊಮೇಟೋ ಹಣ್ಣಿನಂತೆ ನೇತಾಡುತ್ತಿವೆಯಲ್ಲ, ಏನದು ಅಂತ ನೋಡುತ್ತಿರುವಾಗಲೇ ಈ ರಾಧಿಕಾ, ʻಯುರೇಕಾʼವೇ ಆಗಿ, ʻಮಹೇಶಾ, ಕಾರು ನಿಲ್ಸೋ, ಇದು ಅದೇ ಹಣ್ಣುʼ ಅಂದೆ. ʻಯಾವುದೇ, ಎಲ್ಲಿ?ʼ ಅನ್ನುತ್ತಾ ಅವ ಕಾರು ಸೈಡಿಗೆ ಹಾಕಿದ್ದೇ ನಾ ಕಾರಿಳಿದು ಓಡಿಯಾಗಿತ್ತು.

ದೊಡ್ಡ ಬೇಲಿ, ಎತ್ತರೆತ್ತರದ ಮರಗಳು! ಮರದ ತುಂಬ ಕೇಸರಿ ಹಣ್ಣುಗಳು! ಕಣ್ಣಮುಂದಿದೆ, ಆದರೆ ಕೈಗೆಟಕುತ್ತಿಲ್ಲ.

ಈಗ ನನಗೆ ಎಟುಕದ ದ್ರಾಕ್ಷಿಹಣ್ಣು ನೋಡಿದ ನರಿಯ ಪಾಡು ಹೇಗಿದ್ದೀತೆಂಬ ಅರಿವಾಗಹತ್ತಿತು. ಹತ್ತಿರವೇನಾದರೂ ಮನೆ ಇದೆಯಾ ನೋಡಿದೆ. ದೂರದಲ್ಲೊಂದು ಕಾಣಿಸಿತು. ʻಇರು ಮಹೇಶಾʼ ಬಂದೆ ಅನ್ನುತ್ತಾ ಆ ಮನೆಯ ಕಡೆ ಓಡಿದೆ. ನಾಯಿ ಗೀಯಿ ಏನಾದಾರೂ ಇದ್ದರೆ ಅಂತ ಡೌಟು ಬಂದರೂ ಧೈರ್ಯ ಮಾಡಿ ಮನೆಯ ಕಾಂಪೌಂಡು ಹೊಕ್ಕುವಾಗ, ಬೇಕಂತಲೇ ಗೇಟು ಸೌಂಡು ಮಾಡಿದ್ದಾಯಿತು, ಕೆಮ್ಮಿದ್ದಾಯ್ತು, ಯಾರೂ ಕಾಣದೆ ಕೊನೆಗೆ  ʻಯಾರಿದ್ದೀರಿ ಮನೇಲಿ?ʼ ಅಂತ ಅಂತ ದೊಡ್ಡ ಸ್ವರದಲ್ಲಿ ಕರೆದೂ ಆಯ್ತು, ಅತ್ತಲಿಂದ ಸೌಂಡಿಲ್ಲ. ಮನೆ ಬಾಗಿಲು ತೆರೆದೇ ಇತ್ತು.

ಒಂದೈದು ನಿಮಿಷ ಅತ್ತಿತ್ತ ನೋಡಿ, ಬೇರೆ ಉಪಾಯ ಕಾಣದೆ ಮರಳಿದೆ. ಛೇ, ಮನೆಯಲ್ಲಿ ಯಾರಾದರಿದ್ದರೆ ನಾಲ್ಕು ಹಣ್ಣು ತೆಗೆದುಕೊಳ್ಳಲೇ ಅಂತ ಕೇಳಬಹುದಿತ್ತಲ್ಲ ಅಂತ ನಿರಾಸೆಯ ಪೆಚ್ಚುಮೋರೆ. ಕಾರು ಪಾರ್ಕು ಮಾಡಿ ನಿಂತಿದ್ದ ಮಹೇಶ, ʻಏನು ಮಾಡುವ ಈಗ?ʼ ಎಂದ. ʻಇಷ್ಟು ಹತ್ತಿರದಿಂದ ಮರ ನೋಡಿ, ಮರದ ತುಂಬ ಹಣ್ಣು ನೋಡಿ, ಖಾಲಿ ಕೈಲಿ ಹಿಂತಿರುಗುವ ಪ್ರಶ್ನೆಯೇ ಇಲ್ಲ ಮಾರಾಯ, ಬಾ ಏನಾದರೂ ಮಾಡುವʼ ಎಂದೆ. ಬೇಲಿ ಹಾರಿದರೆ ಸೊಂಟ ಮುರೀಬಹುದಾ ಅಂತ ಆಳ ನೋಡಿ ಡೌಟಾಯಿತು. ಹುಲ್ಲು ಹಾಸಿತ್ತು, ಮಳೆ ಬಂದು ಬಿಟ್ಟಿದ್ದ ತೇವ. ಬಿದ್ದರೆ ಏನಾಗಲಿಕ್ಕಿಲ್ಲ ಎಂದು ಹಿಂದೆ ಮುಂದೆ ನೋಡದೆ ಬೇಲಿ ಹಾರಿದೆ. ಕಾಲು ಉಳುಕಿತು.

ಕಾಲು ಉಳುಕಿದರೇನು, ಆ ಮರದ ಅಡಿಯಲ್ಲಿ ನಾನಿದ್ದೆ. ಸಣ್ಣವಳಿದ್ದಾಗ ಮಧ್ಯಾಹ್ನದ ಬಿಸಿಲಿನ ಗಾಳಿಗೆ ಉದುರುತ್ತಿದ್ದ ನೆಕ್ಕರೆ ಮಾವನ್ನು ಹೆಕ್ಕಲು ಕದ್ದು ಕದ್ದು ಬರುತ್ತಿದ್ದ ಮಕ್ಕಳೆಲ್ಲ ನೆನಪಾಗಿ, ಅವರನ್ನು ಓಡಿಸುವುದರಲ್ಲಿ ಮಜಾ ತೆಗೆದುಕೊಳ್ಳುತ್ತಿದ್ದ ನನ್ನ ನೆನಪಾಗಿ, ಥ್ರಿಲ್ಲಾಯಿತು. ಆದರೆ ಈಗ ಸೀನ್‌ ಮಾತ್ರ ಉಲ್ಟಾ!

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂದರೆ ಇದಪ್ಪಾ! ಆದರೆ ಮಜಾ ಎಂದರೆ ಇದು ಕೈಗೆಟಕುವ ದ್ರಾಕ್ಷಿಯಾಗಿರಲಿಲ್ಲ. ಹುಳಿಯೆನ್ನಲು ಮನಸ್ಸು ಬಾರದು. ಮರವನ್ನಿಡೀ ಒಂದು ಎಲೆಯೂ ಹೊರಹೋಗದಂತೆ ಬಲೆಯೊಳಗಿಟ್ಟು ಹೊಲಿದಿದ್ದರು. ಪಾಪ, ಈ ಪರ್ವತದ ಒಂದು ಗುಬ್ಬಚ್ಚಿಯೂ ಹಣ್ಣು ತಿನ್ನುವ ಕನಸು ಕಾಣುವಂತಿರಲಿಲ್ಲ. ಇನ್ನು ನನ್ನ ಕೈ ಯಾವ ಲೆಕ್ಕ!

ಸರಿ, ಬೇಲಿ ಹಾರಿ ಕಾಲು ಉಳುಕಿಸಿಕೊಂಡದ್ದಕ್ಕೆ ಸಾರ್ಥಕವಾಗಬೇಕಲ್ಲಾ, ಅಲ್ಲಿದ್ದ ಎರಡು ಮೂರು ಮರದಡಿಯಲ್ಲಿ ತಿರುಗಾಡಿದರೆ, ಹೆಂಗೋ ಎರಡು ಹಣ್ಣುಗಳು ನೆಲದಲ್ಲಿ ಬಿದ್ದು ಸಿಕ್ಕಿದವು. ಆಗಷ್ಟೇ ಬಿದ್ದ ಹಣ್ಣುಗಳವು, ಬಲೆಯಿಂದ ತಪ್ಪಿಸಿಕೊಂಡು ಹೆಂಗಪ್ಪಾ ಬಿತ್ತು ಅಂತೆಲ್ಲಾ ಯೋಚಿಸಲು ಸಮಯವಿರಲಿಲ್ಲ. ಸಿಕ್ಕಿದ್ದೇ ಚಾನ್ಸು ಎಂದು ಓಡಿ, ಮಹೇಶ ಕೊಟ್ಟ ಕೈಹಿಡಿದು ಹತ್ತಿದ್ದಾಯ್ತು. ಹೀಗೆ ಬೇಲಿ ಹಾರಿದ್ದರಿಂದ ಸ್ವಲ್ಪ ಭಯವೂ ಇತ್ತೆನ್ನಿ.

ʻಮೊದಲ ಬಾರಿ ಬೇಲಿ ಹಾರಿ ಕಳ್ಳತನ ಮಾಡಿದ್ದೇನೆ ನೋಡು, ಹೆಂಡತಿ ಮಾಡಿದ ಈ ಪಾಪದಲ್ಲಿ ಅರ್ಧ ಪಾಲು ತೆಗೋತಿ ತಾನೇ?ʼ ಎಂದು ಮಾನಿಷಾಧ ಯಕ್ಷಗಾನದ ಧಾಟಿಯಲ್ಲಿ ಹೇಳಿದರೆ, ʻಅರ್ಧ ಯಾಕೆ ಮಾರಾಯ್ತಿ ಇಂಥ ಪಾಪಗಳಲ್ಲಿ ಫುಲ್ಲು ಪಾಲು ನಂಗೇ ಕೊಟ್ರೂ ತೆಗೋತೇನೆ. ಹಣ್ಣು ಪೂರ್ತಿ ನಂದುʼ ಎಂದ. ಕಾರು ಸ್ಟಾರ್ಟಾಗಿ ಮುಂದೆ ಹೋದರೂ ನನ್ನ ಕಾಲು ನಡುಗುವುದು ನಿಂತಿರಲಿಲ್ಲ.

ʻಅಲ್ವೋ ಮಾರಾಯ, ಈ ಹಣ್ಣಿನ ಮರ ಇಲ್ಲಿರಬೇಕಾದರೆ, ಈ ಊರಿನ ಮಾರ್ಕೆಟ್ಟಿನಲ್ಲಿ ಖಂಡಿತ ಹಣ್ಣು ಸಿಕ್ಕೇ ಸಿಗ್ಬೇಕು ತಾನೇ, ಬಾ ಹೋಗುವ, ಮಾರ್ಕೇಟಿನಲ್ಲಿ ಇರತ್ತೆʼ ಅಂದೆ. ʻಅಲ್ವಾ, ಏನ್‌ ಮಂಡೆ ಮಾರಾಯ್ತಿ ನಿಂದು! ಮೊದ್ಲೇ ಇದು ಹೊಳ್ಯಕ್ಕೇನೇ!ʼ ಎಂದು ಛೇಡಿಸುತ್ತಾ ಗೂಗಲ್‌ ಮ್ಯಾಪಮ್ಮ ತೋರಿದ ದಾರಿಯತ್ತ ಕಾರು ತಿರುಗಿತು.

ಆದರೆ ನಮ್ಮ ನಸೀಬು ಎಂದರೆ, ʻಓಹ್‌ ಅದಾ, ಅದು ರಾಮಫಲ ಅಲ್ಲ. ಅದು ಜಪಾನಿ. ಮಾರ್ಕೆಟ್ಟಿನಲ್ಲಿ ಎಲ್ಲಿ ಹುಡುಕಿದ್ರೂ ಸಿಗೋದು ಡೌಟು. ಈ ಹಣ್ಣಿನ ಮರವನ್ನೇ ಲೀಸಿಗೆ ಪಟ್ಟಣದ ಮಧ್ಯವರ್ತಿಗಳಿಗೆ ಕೊಟ್ಟುಬಿಟ್ಟಾಗಿರುತ್ತದೆ. ಹಾಗಾಗಿ ಬಲೆಯೊಳಗಿನ ಹಣ್ಣುಗಳೆಲ್ಲ ಡಬ್ಬಿಗಳಲ್ಲಿ ಫಳಫಳ ಹೊಳೆಹೊಳೆದು ಪ್ಯಾಕ್‌ ಆಗಿ ರಫ್ತಾಗುತ್ತದೆ. ವಿದೇಶಗಳಿಗೆ ಹೋಗುತ್ತದೆ. ಇಲ್ಲಿ ಸಿಗೋದು ಭಾರೀ ಕಡಿಮೆ, ನಾವೇ ತಿನ್ನಲ್ಲʼ ಅಂದು ಬಿಟ್ಟರು ಉಡಾಫೆಯಿಂದ.

ನಮ್ಮ ನಿಟ್ಟುಸಿರಿನೊಂದಿಗೆ ಆ ಸೀನ್‌ ಕಟ್.‌ ಆಮೇಲೆ ನಮ್ಮ ಕಾರ್‌ ಅಲ್ಲಿಂದ ಹೊರಟು ಹೋಂಸ್ಟೇಗೆ ಹೋಗಿ ತಲುಪಿದ್ದು, ಅಲ್ಲಿಯ ವಿಪರೀತ ಚಳಿ, ರಾತ್ರಿಯಿಡೀ ಅಗ್ಗಿಷ್ಟಿಕೆ ಮುಂದೆ ಕೂತು ಚಳಿ ಕಾಯಿಸಿದ್ದು, ಆಮೇಲೆ ಅಲ್ಲೊಂದು ಚಾರಣ ಮಾಡಿದ್ದು ಇದೆಲ್ಲವನ್ನು ʻಔಟ್‌ ಆಫ್‌ ಸಿಲೆಬಸ್‌ʼ ಎಂದು ಕೈ ಬಿಟ್ಟಿದ್ದೇನೆ. ಇನ್ನೊಂದು ಕೊನೇ ಸೀನ್‌ ತೋರಿಸಿ ಅಲ್ಲಿಗೆ ಶುಭಂ ಹೇಳುವೆ.

ಕ್ಲೈಮಾಕ್ಸ್:‌

ಕಷ್ಟ ಪಟ್ಟರೆ ಫಲ ಸಿಗುತ್ತದಂತೆ! ಹಾಗೆಯೇ, ನಮಗೂ ಕೊನೆಗೆ ʻಫಲʼವೇ ಸಿಕ್ಕಿತು. ಈ ಬಾರಿ ಒಂದೆರಡಲ್ಲ. ಭರ್ಜರಿ ಹತ್ತು ಕೆಜಿ ಫಲ! ಆಗ ತಾನೇ ಬಿಸಿ ಬಿಸಿ ಶುಂಠಿ ಚಹಾ ಕುಡಿದು ಚಿಟಪಟ ಮಳೆಯ ಹನಿಯಲ್ಲಿ ಥರಥರ ನಡುಗುವ ಚಳಿಯಲ್ಲಿ ತೀರ್ಥನ್‌ ನದಿಯ ತೀರದುದ್ದಕ್ಕೂ ನಡೆದು ಬರುವಾಗ ಈ ಪರ್ವತ ದೇವತೆ ಕೊನೆಗೂ ಕಣ್ಬಿಟ್ಟಳು.

ನಮ್ಮ ದಾರಿಗೆದುರಾಗಿ ಆ ಹುಲು ಮಾನವನೊಬ್ಬನನ್ನು ಕಳಿಸಿಕೊಟ್ಟಳೆಂದು ಕಾಣುತ್ತದೆ. ನಮಗೂ ದೈವ ಪ್ರೇರಣೆಯಾಗಿ ಅವನನ್ನೇ ಈ ಹಣ್ಣಿನ ಬಗ್ಗೆ ಕೇಳಲಾಗಿ, ಆತ ʻಬನ್ನಿ ಬನ್ನಿ, ಈ ಹಣ್ಣು ನಮ್ಮ ಮನೆಯಲ್ಲಿ ಯಥೇಚ್ಛವಾಗಿವೆ, ಮನಸೋ ಇಚ್ಛೆ ನೀವು ನನ್ನ ತೋಟದಲ್ಲೇ ತಿಂದು ತೇಗಿʼ ಎಂದಾಗ ನಮಗೆ ಸ್ವರ್ಗಕ್ಕೆ ಗೇಣಿರುವುದು ಮೂರಲ್ಲ, ಇದು ಸ್ವರ್ಗವೇ ಎನಿಸಿ ಅವನ ತೋಟದಲ್ಲೇ ಹೊಟ್ಟೆತುಂಬ ಹಣ್ಣು ತಿಂದು, ಹತ್ತು ಕೆಜಿ ಪ್ಯಾಕ್‌ ಮಾಡಿಸಿ ಕಾರಿಗೇರಿಸಿ (ದುಡ್ಡು ಕೊಟ್ಟಿದ್ದೇವೆ), ಮನೆಗೆ ತಂದು ಬುಟ್ಟಿಯಲ್ಲಿಟ್ಟು ಒಂದಿಡೀ ತಿಂಗಳು ತಿನ್ನಲಾಯಿತು ಎನ್ನುವಲ್ಲಿಗೆ ʻಮಂಗಳಂʼ.

ಬೋನಸ್ ಮಾಹಿತಿ:

ಅಂದ ಹಾಗೆ ಈ ಹಣ್ಣು ಪರ್ಸಿಮಾನ್‌! ಜಪಾನ್‌ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಬೆಳೆಯುತ್ತದೆ. ಡಿವೈನ್‌ ಫ್ರುಟ್‌ ಎಂಬ ಹೆಸರೂ ಇದೆ. ಆದರೆ ಈ ತೀರ್ಥನ್‌ ಕಣಿವೆಯ ಮಂದಿಗೆ ಇದರ ಹಿನ್ನೆಲೆಯೆಲ್ಲ ತಿಳಿದಿಲ್ಲ. ಹೆಸ್ರೇನೆಂದರೆ, ಪಕ್ಕಾ ಲೋಕಲ್‌ ಸ್ಲ್ಯಾಂಗಿನಲ್ಲಿ ಜಪಾನೀ ಅಂತಾರೆ. ಊರಿಗೆ ಊರೇ ಈ ಹಣ್ಣು ಬೆಳೆದರೂ ಆ ಊರಿನ ಮಾರ್ಕೆಟ್ಟಿನಲ್ಲಿ ಈ ಹಣ್ಣಿಗೆ ಜಾಗ ಇಲ್ಲ. ಹೂ ಬಿಡುವಾಗಲೇ ಮರಗಳೆಲ್ಲ ಅಕ್ಷರಶಃ ಪ್ಯಾಕ್‌ ಆಗಿ ಬಿಡುತ್ತದೆ. ಹೂವರಳಿ ಕಾಯಾಗಿ ಹಣ್ಣಾಗಿ ಡಬ್ಬಿಗಳಲ್ಲಿ ತುಂತುಂಬಿ ವಿದೇಶಗಳಿಗೆ ರವಾನೆಯಾಗುವವರೆಗೆ ಇದು ಲೀಸಿಗೆ ತೆಗೆದುಕೊಂಡವರ ಜವಾಬ್ದಾರಿ. ಊರಿನ ಮಂದಿಗೆ ಇಂಥದ್ದೊಂದು ಮರ ಅವರ ನೆಲದ ಮೇಲಿದೆಯಷ್ಟೆ, ಅಷ್ಟೇ ಸಂಬಂಧ!

ಸೇಬು ಹಣ್ಣಿನ ವ್ಯವಹಾರವೂ ನಡೆಯುವುದು ಹೀಗೆಯೇ ಆದಾರೂ ಸೇಬಿಗೂ ಇದಕ್ಕೂ ವ್ಯತ್ಯಾಸವಿದೆ. ಈ ಹಣ್ಣಿಗೆ ನಮ್ಮ ದೇಶದೊಳಗೆ ಮಾರುಕಟ್ಟೆಯಿಲ್ಲ. ತೀರಾ ಇತ್ತೀಚೆಗೆ ಇದು ನಿಧಾನವಾಗಿ ಎಂಟ್ರಿ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಆನ್ಲೈನಿನಲ್ಲಿ ಲಭ್ಯವಿದ್ದರೂ ಈ ಹೊಸ ರುಚಿಯನ್ನು ದುಬಾರಿ ಬೆಲೆ ತೆತ್ತು ಎಷ್ಟು ಜನ ತರಿಸಿಕೊಂಡು ತಿಂದಿರುವರೆಂದು ತಿಳಿದಿಲ್ಲ. ರಾಂಬುಟನ್, ಮ್ಯಾಂಗೋಸ್ಟೀನಿನಿಂದ ಹಿಡಿದು ಡ್ರ್ಯಾಗನ್‌ ಫ್ರುಟ್ ವರೆಗೆ ಝಗಮಗ ಹೊಳೆವ ಅಂಗಡಿಗಳಲ್ಲೂ ಇದೇಕೆ ಇನ್ನೂ ತನ್ನ ಜಾಗ ಕಂಡುಕೊಂಡಿಲ್ಲ ಎಂಬುದು ನನಗೆ ಬಿಡಿಸಲಾಗದ ಕಗ್ಗಂಟು. ಬೆಂಗಳೂರು, ಚೆನ್ನೈಗಳಲ್ಲೂ ನಾ ಇದುವರೆಗೆ ನೋಡಿಲ್ಲ.

ಅಂದಹಾಗೆ, ಜಪಾನಿನ ಪರಿಚಿತರೊಬ್ಬರು ಕಳೆದ ವರ್ಷ ಈ ಹಣ್ಣಿನ ಬಗ್ಗೆ ಇನ್ನೂ ಸ್ವಾರಸ್ಯಕರ ಮಾಹಿತಿ ಕೊಟ್ಟರು. ಅಲ್ಲಿ ಇದು ಕಾಕಿ, ತೀರಾ ಸಾಮಾನ್ಯ ಹಣ್ಣು. ಇದು ಒಣ ಹಣ್ಣಾಗಿ ಜನಪ್ರಿಯತೆ ಜಾಸ್ತಿ. ಜಪಾನೀಯರ ಮನೆಯಂಗಳದ ಬಿಸಿಲಲ್ಲಿ ಒಣಗಿ, ದಿನಗಟ್ಟಲೆ ಮದ್ಯದಲ್ಲಿ ಅದ್ದಿಟ್ಟು, ಮಂಜು ಸುರಿವ ಚಳಿಗಾಲದ ʻಮದ್ಯʼರಾತ್ರಿಗಳಲ್ಲಿ ಇದರ ರಸ ಹೀರುತ್ತಿದ್ದರದೇ ಸ್ವರ್ಗ ಎಂದರವರು. ಇದಷ್ಟೇ ಅಲ್ಲದೆ, ಥರಹೇವಾರಿ ರೆಸಿಪಿಗಳೂ ಅವರ ಮಾತಿನಲ್ಲಿ ಬಂದು ಹೋಯಿತು. ಇದರಿಂದ ಪ್ರೇರಣೆಯಾಗಿ, ಮನೆಯಲ್ಲಿ ಜ್ಯಾಮ್‌ ಪ್ರಯೋಗವೊಂದು ನಡೆದು ಪರ್ವಾಗಿಲ್ಲ ಅನಿಸಿದೆ.

ಇನ್ನಿತರ ಪ್ರಯೋಗಗಳು ನಡೆಯಲು ಹಣ್ಣಿನ ಸೀಸನ್ನಿಗಾಗಿ ಅಕ್ಟೋಬರ್‌ ವರೆಗೆ ಕಾಯಬೇಕು. ಅದಕ್ಕೂ ಮೊದಲು ಈ ಕೊರೋನಾ ತೊಳೆದು ಹೋದರೆ, ಬೆಟ್ಟದ ತಪ್ಪಲಲ್ಲಿ ಕೂತು ಈ ಹಣ್ಣು ತಿನ್ನುವ ಕನಸು ಮತ್ತೆ ಕಾಣಬಹುದು.

‍ಲೇಖಕರು ರಾಧಿಕ ವಿಟ್ಲ

August 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: