ಕಮಲಾಕರ ಕಡವೆ ಮೆಚ್ಚಿದ ‘ಸುರಿದಾವೋ ತಾರೆಗಳು’

ಕಮಲಾಕರ ಕಡವೆ

ನಾನು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಭಾಷಾ ಕವನಗಳ ಸಂಗ್ರಹವನ್ನು ನಿಮಗೆಲ್ಲರಿಗೂ ಪರಿಚಯಿಸಲು ಸಂತೋಷವಾಗುತ್ತಿದೆ. ‘ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’ ಎಂಬ ಹೆಸರಿನ ಈ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಇದೇ ತಿಂಗಳು (ಏಪ್ರಿಲ್ ೨೦೨೨) ಹೊರತಂದಿದೆ. ಈ ಸಂಕಲನದಲ್ಲಿ ಹದಿನಾಲ್ಕು ಕವಿಗಳ ಐದು ಕವನಗಳಂತೆ ಒಟ್ಟು ಎಪ್ಪತ್ತು ಕವನಗಳ ಅನುವಾದಗಳಿವೆ. ವಿಶ್ವ ಸಾಹಿತ್ಯದಲ್ಲಿ ಪರಿಚಿತರಾಗಿರುವ ಪೋಲಂಡಿನ ಪ್ರಖ್ಯಾತ ಕವಿಗಳಾದ ಚೆಸ್‌ಲಾಫ್ಟ್ ಮೀಲೋಶ್, ವೀಸ್ಲಾವಾ
ಶಿಂಬೋರ್ಸ್ಕ, ಆಡಮ್ ಜ಼ಾಗಯೆವ್‍ಸ್ಕಿ, ತಾದೆಉಷ್ ರೂಜ಼ಾವೀಚ್, ಜೂಲಿಯಾ ಹಾರ್ಟ್‌ವಿಗ್-ರ ಕವನಗಳಲ್ಲದೇ ಎಲ್ಲರಿಗೂ ತಿಳಿಯಬೇಕಾದಂತಹ ಬೇರೆ ಉತ್ತಮ ಪೋಲಿಷ್ ಕವಿಗಳ ಕವನಗಳ ಅನುವಾದಗಳೂ ಇವೆ.

ಈ ಸಂಕಲನಕ್ಕೆ ಕನ್ನಡದ ಹಿರಿಯ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿಯವರು ಪ್ರೀತಿಯಿಂದ ‘ಬೆನ್ನುಡಿ’ ಬರೆದಿದ್ದಾರೆ.
ನನ್ನ ಬಹಳ ಕಾಲದ ಮಿತ್ರರು, ಕವಿ, ಅನುವಾದಕರು, ಹಾಗೂ ನನ್ನ ಕನ್ನಡ ಕಾವ್ಯಾನುವಾದ ಪಯಣದ ಮುಖ್ಯ
ಸ್ಫೂರ್ತಿಯಾದ ಡಾ. ಕಮಲಾಕರ ಕಡವೆಯವರು ವಿಸ್ತೃತವಾದ ವಿಮರ್ಶಾತ್ಮಕ ‘ಮುನ್ನುಡಿ’ಯನ್ನು ಬರೆದಿದ್ದಾರೆ.

ಇಲ್ಲಿ ಪ್ರಕಟವಾಗಿರುವ ಆಡಮ್ ಜ಼ಾಗಯೆವ್‍ಸ್ಕಿ, ತಾದೆಉಷ್ ರೂಜ಼ಾವೀಚ್, ಹಾಗೂ ಜೂಲಿಯಾ ಹಾರ್ಟ್‌ವಿಗ್-ರ ಕವನಗಳ ಅನುವಾದಗಳು ಮೊದಲು ಅವಧಿ ಮ್ಯಾಗ್ ಪತ್ರಿಕೆಯಲ್ಲಿ ಪ್ರಕಟವಾಯಿತು.  ನನ್ನ ಕನ್ನಡ ಕಾವ್ಯಾನುವಾದದ ಪ್ರಾರಂಭದ ದಿನಗಳಲ್ಲಿ ನನ್ನ ಅನುವಾದಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ, ಈಗಲೂ ಪ್ರೋತ್ಸಾಹಿಸುತ್ತಿರುವ ಅವಧಿ ಮ್ಯಾಗ್-ನ ಸಂಪಾದಕರಿಗೆ ಧನ್ಯವಾದಗಳು.     

ಸೃಜನಶೀಲ ಬರಹಗಳಿಗೆ ಇರುವ ವರ್ಚಸ್ಸು ಬಹುಶಃ ಅನುವಾದಿತ ಬರಹಗಳಿಗಿಲ್ಲ.  ಅಂತಹ ವರ್ಚಸ್ಸು ಇರಬೇಕೋ, ಬಾರದೋ ಅನ್ನುವುದು ಪ್ರಶ್ನೆ ಅಲ್ಲ.  ಸಂಸ್ಕೃತಿಯೊಂದರ ಸಂಧರ್ಭದಲ್ಲಿ ಅನುವಾದಕ್ಕಿರುವ ಪ್ರಾಮುಖ್ಯತೆ ಏನು ಅನ್ನೋದು  ಪ್ರಶ್ನೆ. ಯಾವುದೇ ಸಂಸ್ಕೃತಿಯೂ ತನ್ನ ಆಂತರಿಕ ಸೃಜನಶೀಲತೆಯೊಂದರಿಂದ ಮಾತ್ರ ತನ್ನೆಲ್ಲ ಊರ್ಜಾವನ್ನು ಪಡೆಯುತ್ತಲಿರುವುದಿಲ್ಲ.  ಸಂಸ್ಕೃತಿಯು ನಿಂತ ನೀರಾಗದಂತೆ, ಚಲನಹೀನ ಸ್ಥಾವರ ಆಗದಂತೆ, ಹೊಸ ನೆತ್ತರು ಜಿನುಗಿ, ಹೊಸ ಉಸಿರು ಹೊಕ್ಕಿ, ಹೊಸ ಒರತೆ ಒಸರುವುದಕ್ಕೆ ಬೇಕಾದ ಜೀವಂತಿಕೆ ಅನುವಾದಗಳಿಂದ ದೊರಕಬಹುದು. ಅನುವಾದ ಕೃತಿಯಿಂದ ಕೃತಿಗೆ ಮಾತ್ರ ಆಗುವ ಪ್ರಕ್ರಿಯೆ ಅಲ್ಲ. ಪ್ರತಿ ಅನುವಾದವೂ ಒಂದಿಡೀ ಲೋಕದೃಷ್ಟಿಯನ್ನು, ಜೀವನಮೌಲ್ಯಗಳನ್ನು, ಸಾಂಸ್ಕೃತಿಕ ರೂಢಿಗಳನ್ನು ಪರಿಚಯಿಸುವುದು ಸಾಧ್ಯ.  ನಾವು ತೊಡುವ ಬಟ್ಟೆ ಬರೆ, ಆಡುವ ಮಾತು, ಕಲಿವ ಕೌಶಲ, ಪಾಲಿಸುವ ಕಾನೂನುಗಳು, ಬಳಸುವ ಉಪಕರಣಗಳು, ಇತ್ಯಾದಿ ಸ್ತರಗಳಲ್ಲಿಯೂ ನಾವು ಅನುವಾದ-ಜೀವಿಗಳೇ ಅಲ್ಲವೇ? 

ಈ ವಿದ್ಯಮಾನವನ್ನ – ಇದೊಂದೇ ಅಲ್ಲ, ಇಂತಹ ಎಲ್ಲ ಅಂತರ-ರಾಷ್ಟ್ರ, ಅಂತರ-ಸಂಸ್ಕೃತಿ, ಅಂತರ-ಸಮುದಾಯಗಳ ಮಧ್ಯೆ ಸತತವಾಗಿ ನಡೆಯುವ ಕೊಡುಕೊಳ್ಳುವಿಕೆಗಳನ್ನು ನಾವು ಅನುಕರಣೆ, ಪ್ರಭಾವ ಅನ್ನುವ ಚೌಕಟ್ಟುಗಳ ಬದಲು ಅನುವಾದದ ಚೌಕಟ್ಟಿನಲ್ಲಿ ನೋಡಿದರೆ, ಅವುಗಳ ಅಪೇಕ್ಷಣೀಯತೆ ಗಮನಕ್ಕೆ ಬರುತ್ತದೆ. ಅನುಕರಣೆ ಅಂದಾಗ ನಮ್ಮಲ್ಲಿ ಏನೋ ಕೊರತೆಯಿದೆ ಎಂಬ ಭಾವ ಮುನ್ನೆಲೆಗೆ ಬರುವುದರಿಂದ ನಮಗೆ ಹಿಂಸೆಯಾಗುತ್ತದೆ, ಅಸೂಯೆಯಾಗುತ್ತದೆ. ನಮ್ಮ ಸಂಸ್ಕೃತಿಗೆ ಮೋಸವಾಗುತ್ತಿದೆ, ಅಪಚಾರ ಮಾಡಿದೆವು ಎಂಬ ಅಪರಾಧೀಪ್ರಜ್ನೆ ಕಾಡುತ್ತದೆ. ಹಾಗಾಗಿ ಸಂಸ್ಕೃತಿಯ ರಕ್ಷಣೆಯ ಮಾತು, ಪರಿಶುದ್ಧತೆಯ ಮಾತುಗಳು ಏಳುತ್ತವೆ. 

ಇದಕ್ಕೆ ಬದಲಾಗಿ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳನ್ನು ಅನುವಾದವೆನ್ನುವ ಗ್ರಹಿಕೆಯಲ್ಲಿ ನೋಡುವುದರಲ್ಲಿ ದೊಡ್ಡ ಫಾಯಿದೆ ಇದೆ.  ಅನುವಾದವೆಂದರೆ ಕೇವಲ “ಅನು” ಅಂದರೆ ಹಿಂಬಾಲಿಸುವ ಬಗೆಯಲ್ಲ. ಬದಲಿಗೆ, ಮೂಲದ ಆಶಯ-ಆಕಾರದಲ್ಲಿರುವ ಅಂಶವೊಂದು ನಮ್ಮ ಸಮಾಜ-ಸಂಸ್ಕೃತಿಯ ಸಂಧರ್ಭವನ್ನು ಹಿಗ್ಗಿಸಲು, ಅರಿವು-ತಿಳುವಳಿಕೆಯನ್ನು ಬೆಳಗಿಸಲು ಅನುವಾಗುವುದನ್ನು ಗುರುತಿಸಿ ಅದನ್ನು ಸ್ಥಳೀಯ ಅಗತ್ಯಗಳಿಗಾಗಿ ಪುನರ್-ಸೃಜಿಸುವುದು. ಹೀಗೆ ಆಗುವ ಪುನರ್-ಸೃಷ್ಟಿ ಯಾವುದೇ ಸಂಸ್ಕೃತಿಗೆ, ಸಮಾಜಕ್ಕೆ ಹೊಸ ಚೈತನ್ಯವನ್ನು ಕೊಡುವಂತದ್ದು. ಹೊಸ ಒರತೆ ಜಿನುಗಿ, ಹಸಿರು ನಳನಳಿಸುವಂತೆ ಮಾಡುವಂತದ್ದು. ಈ ವಾದದ ಶಕ್ತಿ ಅಂದರೆ, ಇಲ್ಲಿ ಅನುಕರಣೆ ಎಂಬ ಯಾತನೆಯ ಬದಲು, ಹೊಸ ಸೃಷ್ಟಿ ಎಂಬ ಭರವಸೆ ಇದೆ. ಅನ್ಯತ್ವದ ನಂಟಿದ್ದರೂ ಸಹ, ನಮಗೆ ಬೇಕಾದ ಹಾಗೆ ನಾವು ಅದನ್ನು ಮರುರೂಪಿಸಿಕೊಂಡಿದ್ದೇವೆ ಎನ್ನುವ ಸ್ಥೈರ್ಯವಿದೆ. ಹಾಗಾಗಿಯೇ ಅನುವಾದವೆಂದರೆ ಬಾಗಿಲಲ್ಲ, ಕಿಟಕಿಯಂತೆ.  ಬೆಳಕು, ಗಾಳಿ ಒಳಬಂದರೂ, ಬೇಡವಾದುದಕ್ಕೆ ತಡೆಯೂ ಇದೆ. ನಾವು ಕಿಟಕಿ ಬಂದು ಮಾಡಿ ಕುಳಿತರೆ, ಕತ್ತಲಲ್ಲಿ ಕುಳಿತಂತೆ.  ಗಾಳಿ-ಬೆಳಕು ಬೇಕೇ ಬೇಕು; ಆಗಲೇ ಚಿಗುರು ಹೊಮ್ಮುವುದು. ಬೀಜ ಮೊಳೆಯುವುದು, ಬೆಳೆಯುವುದು.

ನನ್ನ ನಿಡುಗಾಲದ ಸ್ನೇಹಿತರಾದ ಜಯಶ್ರೀನಿವಾಸ್ ರಾವ್ ಅವರ “ಸುರಿದಾವೋ ತಾರೆಗಳು: ಅನುವಾದಿತ ಪೋಲಿಶ್ ಕವನಗಳ” ಈ ಸಂಕಲನಕ್ಕೆ ಮುನ್ನುಡಿಯಾಗಿ ಮೇಲಿನ ಮಾತುಗಳನ್ನು ಹೇಳಲು ಕಾರಣ ಈ ಕೃತಿ ನಮ್ಮಿಂದ ಅಪೇಕ್ಷಿಸುವ ಓದಿನಕ್ರಮವನ್ನು ಸೂಚಿಸುವುದಾಗಿದೆ.  ಅನುವಾದದ ಕುರಿತಾಗಿ ಎರಡು ಗ್ರಹಿಕೆಗಳಿವೆ. ಮೊದಲನೆಯದು ಮೂಲಕೃತಿಯ ಕನ್ನಡೀಕರಣ – ಮೂಲ ಕೃತಿಯನ್ನು ಕನ್ನಡ ಜಾಯಮಾನಕ್ಕೆ ಒಗ್ಗುವ ಹಾಗೆ ಬಗ್ಗಿಸಿ, ಬಳಸಿಕೊಳ್ಳುವುದು. ಇದನ್ನು ನಾವು ಬಿ. ಎಂ. ಶ್ರೀಕಂಠಯ್ಯನವರ “ಇಂಗ್ಲೀಶ ಗೀತಗಳು” ಕೃತಿಯಲ್ಲಿ ಗುರುತಿಸಬಹುದು. ಈ ಬಗೆಯ ಅನುವಾದಗಳನ್ನು ಓದಿದಾಗ ಕನ್ನಡದ್ದೇ ಬರಹ ಅನ್ನುವಷ್ಟು ಸಹಜ ಸುಲಲಿತ ಸಂರಚನೆ ಇರುತ್ತದೆ. ಅನ್ಯಭಾಶೆ-ಸಂಸ್ಕೃತಿಗಳಿಂದ ಕನ್ನಡಕ್ಕೆ ತರ್ಜುಮೆಯಾದ ಬರಹಗಳು ತಮ್ಮ ಅನ್ಯತೆಯನ್ನು ಎತ್ತಿತೋರಿಸದೆಯೇ, ಕನ್ನಡದ ಅಸ್ಮಿತೆಯೊಳಗೆ ಲೀನವಾಗುವ ಬಗೆಯಿದು ಎನ್ನಬಹುದು. ಅನುವಾದದ ಕುರಿತಾಗಿರುವ ಎರಡನೆಯ ಗ್ರಹಿಕೆಯೆಂದರೆ ಅನುವಾದಿತ ಕೃತಿಯ ಭಾಶೆ-ಸಂಸ್ಕೃತಿಗಳ ಅನ್ಯತೆ ಕನ್ನಡೀಕರಣದಲ್ಲಿ ಕಳೆದುಹೋಗದಂತೆ ಭಾಶಾಂತರಿಸುವುದು.  ಜಯಶ್ರೀನಿವಾಸ್ ರಾವ್ ಅವರ ಅನುವಾದಕ್ರಮ ಈ ಬಗೆಯದು.

ಈ ಸಂಕಲನದಲ್ಲಿ ಸೇರಿರುವ ಅನೇಕ ಅನುವಾದಗಳನ್ನು ಜಯಶ್ರೀನಿವಾಸ್ ರಾವ್ ತಮ್ಮ ಫೇಸ್ಬುಕನಲ್ಲಿ ಹಂಚಿಕೊಂಡಿದ್ದಾರೆ.  ಹಲವು ಓದುಗರು ಈ ಅನುವಾದಗಳನ್ನು ಸಡಗರದಿಂದ ಓದುತ್ತ, ಪ್ರತಿಸ್ಪಂದಿಸುತ್ತ ಬಂದಿದ್ದಾರೆ. ಫೇಸ್ಬುಕನಲ್ಲಿಯೂ ಕೆಲವು ಓದುಗರಿಗೆ ಈ ಅನುವಾದಗಳು ಕನ್ನಡದಲ್ಲಿ ಸಂಪೂರ್ಣ ಲೀನವಾಗದ, ಕನ್ನಡ ಕಾವ್ಯಶೈಲಿಯಲ್ಲಿ ಸಂಲಗ್ನಗೊಳ್ಳದ ಅಂಶಗಳು ಗೋಚರಿಸಿವೆ. ನನ್ನ ಎಣಿಕೆಯಲ್ಲಿ ಈ ಅಂಶಗಳೇ ಜಯಶ್ರೀನಿವಾಸ್ ರಾವ್ ಅವರ ಅನುವಾದ ಪದ್ಧತಿಯ ಮುಖ್ಯ ಕೊಡುಗೆಗಳು. ಶಬ್ದ, ನುಡಿಗಟ್ಟುಗಳು, ವಾಕ್ಯರಚನೆಗಳು ಮತ್ತು ಕವನದ ಲಯದ ಸ್ತರದಲ್ಲಿ ಇಲ್ಲಿಯ ಅನುವಾದಗಳು ಓದುಗರನ್ನು ಮೆಚ್ಚುಗೆಯಲ್ಲಿ ತಲೆದೂಗುವಂತೆ ಮಾಡುವುದಿಲ್ಲ; ಬದಲಿಗೆ, ಎಚ್ಚರಿಸುತ್ತವೆ. ಈ ಎಚ್ಚರವೇ ನಮ್ಮನ್ನು ಅನುವಾದಗಳ ಮೂಲಕ ನಮಗೆ ದಕ್ಕುತ್ತಿರುವ ಹೊಸ ಶಬ್ದಗಳನ್ನು, ಸಂರಚನಾವಿಧಾನವನ್ನು, ಅಪರಿಚಿತ ಲಯವನ್ನು ಗ್ರಹಿಸುವಂತೆ ಮಾಡುತ್ತದೆ. ಹೊಸತನಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವಂತೆ ಒತ್ತಾಯಿಸುತ್ತದೆ.

ಜಯಶ್ರೀನಿವಾಸ್ ರಾವ್ ಅವರ ಸಂಕಲನ ನಮ್ಮ ಗಮನ ಸೆಳೆಯುವುದು ಅವರು ಕನ್ನಡಕ್ಕೆ ತರುತ್ತಿರುವ ಕವಿಗಳು ಈಗಾಗಲೇ ವಿಶ್ವಮಾನ್ಯರಾಗಿರುವ ಕವಿಗಳಾಗಿರುವುದರಿಂದ ಎನ್ನುವುದು ನಿಜವೇ ಆಗಿದ್ದರೂ ಸಹ, ಒಮ್ಮೆ ಓದಲು ತೊಡಗಿದರೆ, ನಮಗೆ ಈ ಅನುವಾದಿತ ಕಾವ್ಯ ಸಂಕಲನದಲ್ಲಿ ಹಲವು ಗುಣಗಳು ಕಾಣುತ್ತವೆ. ಉದಾಹರಣೆಗೆ, ನಾನು ಈ ಅನುವಾದಗಳ ಮೂಲಕ ಅನೇಕ ಹೊಸ ಶಬ್ದಗಳನ್ನು ಕಲಿತಿದ್ದೇನೆ: ಜನ್ನಲ, ನೆರಳ್‌ಚಿತ್ರ, ಚಿತ್ತಕ್ರೀಡೆ, ತನೀ, ನೀಲಕ. ಹಾಗೆಯೇ ಇಲ್ಲಿ ಹೊಸ ಹೊಸ ನುಡಿಗಟ್ಟುಗಳು ಕೂಡ ಕಾಣಬರುತ್ತವೆ: ಸವಿಭಯದ ಭಾಶೆ, ಗರಿಚಿಗುರಿದ ಕೈ, ….  ಇಂಗ್ಲೀಷಿನ ಪದಕ್ಕೆ ಕನ್ನಡದಲ್ಲಿ ಉಚಿತ ಪದವಿಲ್ಲದಿದ್ದರೆ ಇಂಗ್ಲೀಷಿನ ಪದವನ್ನೇ ಬಳಸಲು ಅವರು ಹಿಂದೇಟು ಹಾಕುವುದಿಲ್ಲ. ಉದಾಹರಣೆಗೆ, ಏಂಜೆಲ್, ರೆಡ್‍ವಿಂಗ್ ಹಕ್ಕಿ, ಚೆಸ್ಟ್‌ನಟ್, ಇತ್ಯಾದಿ ಪದಗಳನ್ನು ಕನ್ನಡಕ್ಕೆ ಹೇಗೆ ತಂದರೂ ಔಚಿತ್ಯವ್ಯತ್ಯಯವೇ ಆದೀತು. ಮೂಲಪದವನ್ನೇ ಬಳಸುವ ಮೂಲಕ ಕನ್ನಡದಲ್ಲಿ ಹೊಸ ಪದವೊಂದು ಬಳಕೆಗೆ ದೊರಕುತ್ತದೆ. ಕೆಲವು ಸಲ, ಕನ್ನಡದಲ್ಲಿ ಶಬ್ದ ದೊರಕಬಹುದಾದರೂ, ಜಯಶ್ರೀನಿವಾಸ್ ರಾವ್, ಇಂಗ್ಲೀಷಿನ ಪದವನ್ನು ಬಳಸುವುದೂ ಇದೆ. ಉದಾಹರಣೆಗೆ ಅವರು ಟ್ರೀಟಿಸ್, ಶೆಲ್ಫುಗಳಂತ ಜನರ ಬಳಕೆಯಲ್ಲಿ ಇರುವ ಶಬ್ದಗಳನ್ನು ಅನುವಾದಿಸದೇ ಬಳಸುತ್ತಾರೆ. ಹೀಗೆ ಬಳಸುವುದೇ ಉಚಿತವೂ ಹೌದು. ಭಾಷೆಗಳ ಭಂಡಾರ ಬೆಳೆಯುವುದು ಹೀಗೆಯೇ ಅಲ್ಲವೇ?

ಸಹಜವಾಗಿಯೇ, ಜಯಶ್ರೀನಿವಾಸ್ ರಾವ್ ಅವರ ಅನುವಾದಕ್ರಮ ತುಂಬಾ ರಿಸ್ಕಿ. ಯಾಕೆಂದರೆ, ಕಗ್ಗಾಡಿನಲ್ಲಿ ನಡೆದ ಹಾಗೆ ಇಲ್ಲಿಯೂ ಯಾವ ಹೆಜ್ಜೆ ಸೂಕ್ತ, ಯಾವುದು ಅಲ್ಲವೆಂಬ ಗ್ಯಾರಂಟಿ ಇಲ್ಲ. ಕೆಲವು ಬಳಕೆಗಳು ಓದುಗರಿಗೆ ಹೊಸತನವನ್ನು ಪರಿಚಯಿಸಿದರೆ, ಕೆಲವು ಇರಿಸುಮುರಿಸು ಉಂಟಾಗಿಸಬಹುದು. ಆದರೆ, ಈ ರಿಸ್ಕ್‌ಗಳ ಮೂಲಕವೇ ಕನ್ನಡಕ್ಕೆ ಹೊಸನೀರು ಬರುವುದು ಸಾಧ್ಯ. ಜಯಶ್ರೀನಿವಾಸ್ ರಾವ್ ಅನುವಾದಿಸಿರುವ ರಿಶಾರ್ಡ್ ಕ್ರಿನಿತ್‍ಸ್ಕಿ ಅವರ ಸಾಲು ಈ ಸಂಕಲನದ ಅನುವಾದಕ್ರಮಕ್ಕೆ ಬರೆದ ಭಾಶ್ಯದಂತಿದೆ: 

“ಬೇರೊಂದು ಲೋಕದಿಂದ ಬಂದ ನವಾಗಮನಿಯೇ

ನಾವಿಬ್ಬರೂ ಅದೇ ಗಾಳಿಯನ್ನು ಉಸಿರಾಡುತ್ತೇವೆ

ಆದರೆ ನಾನದನ್ನು ಬೇರೆ ರೀತಿ ಉಸಿರಾಡುತ್ತೇನೆ.”

ಪ್ರಭಾವೀ ಸ್ಥಾನಮಾನದಿಂದಾಗಿ ಅಥವಾ ವಿಪರೀತ ಬಿಕ್ಕಟ್ಟುಗಳಿಂದಾಗಿ ದೇಶವೊಂದರ ಸಾಹಿತ್ಯ ಜಾಗತಿಕ ಓದುಗರ ಗಮನಕ್ಕೆ ಬರುವುದು ಸಾಮಾನ್ಯ. ಇದಕ್ಕೆ ಇಪ್ಪತ್ತನೆಯ ಶತಮಾನದ ಪೋಲಿಷ್ ಕಾವ್ಯ ಅಪವಾದ. ವಿಶ್ವಯುದ್ಧ ಮತ್ತು ಶೀತಲ ಯುದ್ಧದ ಸಂಧರ್ಭಗಳಲ್ಲಿ ಪೋಲಂಡ್ ಸಂಕಷ್ಟವನ್ನೆದುರಿಸಬೇಕಾಯಿತು. ಆದರೂ, ಪೋಲಂಡ್ ದೇಶ ಜಾಗತಿಕ ರಾಜಕಾರಣದಲ್ಲಿ ಯಾವುದೇ ಕಾರಣಕ್ಕೂ ಆಸಕ್ತಿಯ ಕೇಂದ್ರವಾಗಿರಲಿಲ್ಲ. ಹೀಗಿರುವಾಗಲೂ, ತಮ್ಮ ವಸ್ತುವಿನ ಆಯ್ಕೆ, ಅಭಿವ್ಯಕ್ತಿಯ ತೀವೃತೆ, ಕಾವ್ಯಾತ್ಮಕತೆಯ ದಟ್ಟತೆ, ನಿರೂಪಣೆಯ ಅನನ್ಯತೆಗಳಿಂದಲೇ ಪೋಲಿಷ್ ಕವಿಗಳು ಓದುಗರ ಮೇಲೆ ಜಾದೂ ಮಾಡುತ್ತಾರೆ. ಆದುದರಿಂದಲೇ, ಮತ್ತೆ ಮತ್ತೆ ಅನುವಾದವಾಗುವ ಕಾವ್ಯ ಪೋಲಿಷ್ ಕಾವ್ಯವಾಗಿದೆ. ಕನ್ನಡದಲ್ಲಿಯೂ ಹಲವಾರು ಅನುವಾದಕರು ಪೋಲಿಷ್ ಕವಿಗಳನ್ನು ನಮಗೆ ಪರಿಚಯಿಸಿದ್ದಾರೆ. 

ಜಯಶ್ರೀನಿವಾಸ್ ರಾವ್ ಅವರ “ಸುರಿದಾವೋ ತಾರೆಗಳು” ಸಂಕಲನ ಹದಿನಾಲ್ಕು ಪೋಲಿಷ್ ಕವಿಗಳ ಐದೈದು ಕವನಗಳನ್ನು ನಮಗೆ ಪರಿಚಯಿಸುತ್ತದೆ. ಚೆಸ್‍ಲಾಫ಼್ ಮೀಲೋಶ್, ವೀಸ್ಲಾವಾ ಶಿಂಬೊರ್ಸ್ಕಾ, ಆಡಮ್ ಜ಼ಾಗಯೆವ್‍ಸ್ಕಿ, ಆನ್ನಾ ಶ್ವೆರ್‌ಚಿನ್ಸ್‌ಕಾರಂತಹ ವಿಶ್ವಮಾನ್ಯ ಕವಿಗಳನ್ನು ಈ ಸಂಕಲನ ನಮ್ಮೆದುರು ಇರಿಸಿದೆ. ಕಾವ್ಯ ಜಗತ್ತಿನಲ್ಲಿ ಒಂದು ಹೊಸ ಬಗೆಯ ಚೇತನ, ಲವಲವಿಕೆಗಳನ್ನು ತರುವ ಮೂಲಕ ಪೋಲಿಷ್ ಕವಿಗಳು ತಮ್ಮದೇ ಆದ ಸ್ಥಾನ ಕಲ್ಪಿಸಿಕೊಂಡಿದ್ದಾರೆ. ಬಹುಶಃ ಇದಕ್ಕೆ ಕಾರಣ ಚೆಸ್‍ಲಾಫ಼್ ಮೀಲೋಶ್ ಸೂಚಿಸುವಂತೆ ಕಾವ್ಯದ ಕುರಿತಾಗಿ ಇರುವ ಅತೀವ ವಿಶ್ವಾಸವೇ ಇರಬಹುದು: 

ಒಂದು ಇಡೀ ಗಾಡಿತುಂಬ ವಿಸ್ತೃತ ಗದ್ಯಕ್ಕಿಂತ 

ಒಂದು ತಿಳಿಯಾಗಿರುವ ಚರಣ ಹೆಚ್ಚು ಭಾರಹೊರಬಲ್ಲದು 

ಅನುವಾದಕ್ಕೆಂದು ಜಯಶ್ರೀನಿವಾಸ್ ರಾವ್ ಆಯ್ದುಕೊಂಡಿರುವ ಕವನಗಳು ತಮ್ಮ ಅನ್ಯತೆಯ ಹೊರತಾಗಿಯೂ ಕನ್ನಡದಲ್ಲಿ ನಿಸೂರಾಗಿ ಉಸಿರಾಡುತ್ತವೆ. ಜುಲಿಯಾ ಹಾರ್ಟ್‍ವಿಗ್ ಅವರ ಈ ಸಾಲನ್ನು ಕನ್ನಡವೇ ಸೃಜಿಸಿದಂತಿದೆ:  

ಗಾಳಿಯೊಂದು ಮಾತ್ರವೇ ಮತ್ತೊಂದು ಗಾಳಿಯನು ನೋಯಿಸದೇ ಬೆನ್ನಟ್ಟತ್ತುದೆ

ಮೃದುವಾಗಿ ತಬ್ಬುತ್ತಾ ಅವು ಪ್ರೇಮ, ಸಾವು, ವಿನಾಶವನ್ನು ಬಿತ್ತುತ್ತವೆ. 

ತಾದೆಉಷ್ ರೂಜ಼ಾವೀಚ್ ಹೇಳುವಂತೆ ಕವನವೆಂದರೆ “…ಅಳಿಯುತ್ತಿರುವ ಜಗತ್ತಿನ / ಶೂನ್ಯತೆಯಲ್ಲಿ / ಅಜ್ನಾತ ವಚನಗಳನ್ನು ತುಂಬುತ್ತದೆ.” ಅದಕ್ಕಾಗಿಯೇ ಕಾವ್ಯಕ್ಕೆ ಗಡಿಯಿಲ್ಲ, ಎಲ್ಲ ದೇಶಗಳ, ಭಾಷೆಗಳ ಕಾವ್ಯವೂ ಅಜ್ನಾತ ವಚನಗಳು.  ಅನ್ಯಲೋಕಗಳ ಉಸಿರಾಟವೂ ನಮ್ಮ ದೇಹದೊಳಗಿನ ಪ್ರಾಣವಾಯುವನ್ನು ವೃದ್ಧಿಸುತ್ತದೆ ಎನ್ನುವುದಕ್ಕೆ ಈ ಕವನಗಳೇ ಸಾಕ್ಷಿ. ಇದನ್ನು ಅನುವಾದಗಳ ಮೂಲಕ ಆಗಿಸುತ್ತಿರುವ ಜಯಶ್ರೀನಿವಾಸ್ ರಾವ್ ಹಾಗಾಗಿಯೇ ಅಭಿನಂದನೆಗೆ ಅರ್ಹರು.                    

“ಸುರಿದಾವೋ ತಾರೆಗಳು” ಹೆಸರಿನಲ್ಲಿ ಪ್ರಕಟವಾಗುತ್ತಿರುವ ಜಯಶ್ರೀನಿವಾಸ್ ರಾವ್ ಅವರ ಈ ಅನುವಾದಿತ ಕವನಗಳ ಸಂಕಲನ ಅವರ ಇನ್ನಿತರ ಅನುವಾದಗಳಿಗೂ ಸಹ ಪ್ರಕಾಶನದ ದಾರಿಯಾಗಲಿ. ಅವರು ಕೈಗೊಂಡಿರುವ ಪ್ರಯೋಗವನ್ನು ಕನ್ನಡ ಓದುಗರು ಹೃತ್ಪೂರ್ವಕ ಬೆಂಬಲಿಸುವಂತಾಗಲಿ ಮತ್ತು ತನ್ಮೂಲಕ ಹಲಹತ್ತು ದೇಶಗಳ ಕಾವ್ಯಝರಿ ಕನ್ನಡದೊಳಗೆ ಹರಿದು ಬರುವಂತಾಗಲಿ ಎಂದು ಆಶಿಸುತ್ತೇನೆ.    

‍ಲೇಖಕರು Admin

April 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: