ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಮೈಲಿಗಲ್ಲು: ಕಾಂತಾರ

ಡಾ ಜ್ಯೋತಿ

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕಾಂತಾರ’ ಸಿನೆಮಾ ವೀಕ್ಷಣೆ ಒಂದು ಮೈಜುಮ್ಮೆನಿಸುವ ವಿಶಿಷ್ಟ ಅನುಭವವೆನ್ನಬಹುದು. ವಿಶೇಷವಾಗಿ, ಭೂತದ ಕೋಲವನ್ನು ಇಲ್ಲಿಯವರೆಗೆ ನೋಡದ ಮಂದಿಗೆ, ಒಂದು ಹೊಸ ಲೋಕ ನೋಡಿದ ಅನುಭವ ಕೊಡುವ ಚಿತ್ರವಿದು. ಇದು, ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಸಂಸ್ಕ್ರತಿ, ಜೀವನ ಶೈಲಿ, ಆಚರಣೆಗಳು, ನಂಬಿಕೆಗಳು, ದೈವಗಳು, ಭೂತಾರಾಧನೆ, ಭೂತದ ಕೋಲ, ದರ್ಶನ (ಮೈಮೇಲೆ ಬರುವುದು), ಕಂಬಳ, ಕೋಳಿಪಡೆ ಇತ್ಯಾದಿಗಳನ್ನು ಒಳಗೊಂಡ ಗ್ರಾಮೀಣ ಬದುಕನ್ನು ಪ್ರೇಕ್ಷಕರಿಗೆ ಬಹಳ ಆಪ್ತವಾಗಿ ತೆರೆದಿಡುತ್ತದೆ.

ಅದೇ ರೀತಿ, ಪೃಕ್ರತಿ ಮತ್ತು ಮನುಷ್ಯನ ನಡುವಿನ ಸಂಬಂಧ, ನಾಡಿನ ಮನುಷ್ಯನ ದುರಾಸೆಯಿಂದಾಗಿ ಅಲ್ಪಸ್ವಲ್ಪವೇ ಉಳಿದಿರುವ ಕಾಡು, ಅದನ್ನು ಆಶ್ರಯಿಸಿರುವ ಜೀವಸಂಕುಲವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಡನ್ನು ಅಭಯಾರಣ್ಯವೆಂದು ಘೋಷಿಸಬೇಕಾದ ಅನಿವಾರ್ಯತೆ ಮತ್ತು ಅದನ್ನೇ ಆಶ್ರಯಿಸಿ ತಲತಲಾಂತರದಿಂದ ಕಾಡಿನ ಸರಹದ್ದಿನಲ್ಲಿ ಬದುಕುತ್ತಿರುವ ಜನಸಾಮಾನ್ಯರ ಅತಂತ್ರವಾಗುತ್ತಿರುವ ಬದುಕು, ಜಾತಿ ಪದ್ಧತಿ, ವರ್ಗ ಸಂಘರ್ಷ, ಮತ್ತು ಇವುಗಳ ನಡುವೆ ಭೂಮಾಲೀಕತ್ವಕ್ಕಾಗಿ ಉಳ್ಳವರು ಮಾಡುವ ಪಿತೂರಿಗಳನ್ನು ನಾವಿಲ್ಲಿ ಕಾಣಬಹುದು.

ಕಾಂತಾರದಲ್ಲಿ, ತುಳುನಾಡಿನ ಮಣ್ಣಿನ ಆಚರಣೆಗಳಾದ ಕಂಬಳ ಮತ್ತು ಕೋಳಿಪಡೆಗಳನ್ನು ಹೊರಪ್ರಪಂಚಕ್ಕೆ ಬಹಳ ಸಾದೃಶವಾಗಿ ಪರಿಚಯಿಸುವುದರೊಂದಿಗೆ, ಅಲ್ಲಿನ ಭೂತದ ಕೋಲ ಮತ್ತು ದರ್ಶನವನ್ನೂ ಬಹಳ ಅಪ್ಯಾಯಮಾನವಾಗಿ ಇಲ್ಲಿ ತೋರಿಸಲಾಗಿದೆ. ಸಾಮಾನ್ಯವಾಗಿ, ಕರಾವಳಿಯೆಂದರೆ ಯಕ್ಷಗಾನದ ನಾಡೆಂದು ಮಾತ್ರ ಹೊರಜಗತ್ತಿಗೆ ಪರಿಚಯವಿದೆ. ಅಲ್ಲಿನ ಸಂಸ್ಕ್ರತಿಯಲ್ಲಿ, ದೈವಾರಾಧನೆ, ನೇಮ, ಭೂತದ ಕೋಲ, ದರ್ಶನ, ಹೋಳಿಹಬ್ಬ, ಕೋಳಿಪಡೆ, ಕಂಬಳ, ಮಾರಿ ಹಬ್ಬ, ಸಿರಿ, ಪಾಡ್ದನ, ತಂಬಿಲ, ಹೊಸಅಕ್ಕಿ ಊಟ(ಹೊಸತು), ಶ್ರಾವಣದಲ್ಲಿ ಹೊಸ್ತಿಲಿಗೆ ಹೂವು ಹಾಕುವುದು, ನಾಗ ದರ್ಶನ, ನಾಗ ಮಂಡಲ ಇತ್ಯಾದಿಗಳು ಹೊರಜಗತ್ತಿಗೆ ಇನ್ನೂ ಸರಿಯಾಗಿ ಪರಿಚಯವಾಗಿಲ್ಲ.

ಈ ಹಿನ್ನೆಲೆಯಲ್ಲಿ, ರಾಜ್ ಶೆಟ್ಟಿಯವರ, ‘ಗರುಡ ಗಮನ ವೃಷಭ ವಾಹನ’ ಅಲ್ಲಿನ ‘ಪಿಲಿ ನಲಿಕೆ’ (ಹುಲಿ ಕುಣಿತ)ಯನ್ನು ಜನಪ್ರಿಯಗೊಳಿಸಿದರೆ, ಈಗ ‘ಕಾಂತಾರ’, ಅಲ್ಲಿನ ಕಂಬಳ, ಕೋಳಿಪಡೆ, ಭೂತದ ದರ್ಶನ ಮತ್ತು ಭೂತದ ಕೋಲವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯದಿದೆ ಎನ್ನಬಹುದು.

ಅದೇ ರೀತಿ, ಬಹಳ ಹಿಂದೆ, ಕರಾವಳಿ ಕನ್ನಡವನ್ನು ಹಾಸ್ಯ ಪಾತ್ರಗಳಷ್ಟೇ ಮಾತನಾಡುವ ಕಾಲವೊಂದಿತ್ತು. ಆದರೆ, ಈಗ ಅದನ್ನು ಮುಖ್ಯ ಪಾತ್ರಗಳು ನಿರಾಳವಾಗಿ ಮಾತನಾಡುವ ಮತ್ತು ಅದಕ್ಕೆ ಮಧ್ಯದಲ್ಲಿ ತುಳು ಸಂಭಾಷಣೆಯನ್ನು ಸಹ ಅಲ್ಪ ಸ್ವಲ್ಪ ಸೇರಿಸುವ ಮಟ್ಟಕ್ಕೆ ಬೆಳೆದಿರುವುದರ ಹಿಂದೆ, ಈ ಭಾಗದ ಸಾಕಷ್ಟು ಯಶಸ್ವೀ ನಿರ್ದೇಶಕರು ಮತ್ತು ನಟರಾದ, ಅನೂಪ್ ಭಂಡಾರಿ, ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂತಾದವರ ಕೊಡುಗೆಯಿದೆಯೆನ್ನಬಹುದು. ಬುದ್ದಿವಂತರ ನಾಡೆನ್ನುವ ಪಟ್ಟ ಬಿಟ್ಟರೆ, ಈ ಭಾಗದ ಸಮೃದ್ಧ ಸಂಸ್ಕ್ರತಿಯನ್ನು ಸಹಜವಾಗಿ ಪರಿಚಯಿಸುವ ಪ್ರಯತ್ನಗಳು ಕನ್ನಡ ಸಿನಿಮಾದಲ್ಲಿ ಬಹಳ ವಿರಳವೆನ್ನಬಹುದು. ಈ ನಿಟ್ಟಿನಲ್ಲಿ, ಇದೊಂದು ವಿಶಿಷ್ಟ ಪ್ರಯತ್ನ.

ಈ ಚಿತ್ರದ ಸಂಪೂರ್ಣ ಪರಿಕಲ್ಪನೆ, ಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತ ರಿಷಬ್ ಶೆಟ್ಟಿ ಯವರಿಗೆ ಅಷ್ಟೇ ಬೆಂಬಲ ಕೊಟ್ಟ ಒಂದು ನುರಿತ ತಂಡವಿದೆ. ಕರಾವಳಿಯ ಸಂಸ್ಕ್ರತಿಗೆ ಅನುಗುಣವಾಗಿ ಸಂಗೀತ ನೀಡುವ ಜವಾಬ್ದಾರಿ ಹೊತ್ತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಅತ್ಯುತ್ತಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಶೇಷವಾಗಿ, ಭೂತದ ಕೋಲದ ಹಾಡು ಜನಮನದಲ್ಲಿ ಸಾಕಷ್ಟು ಸಮಯ ಉಳಿಯಲಿದೆ. ಹಾಗೆಯೇ, ಛಾಯಾಗ್ರಹಣವಂತೂ ಅದ್ಭುತವಾಗಿದೆ. ಇಡೀ ಸಿನೆಮಾದ ಹೆಚ್ಚಿನ ದೃಶ್ಯಗಳು ಕಾಡಿನಲ್ಲಿ ಮತ್ತು ರಾತ್ರಿಯ ಸಮಯದಲ್ಲಿ ನಡೆದರೂ ಒಂದಿಷ್ಟೂ ಅಭಾಸವಾಗದಂತೆ, ಮನಮೋಹಕವಾಗಿ ಚಿತ್ರಿಕರಿಸಿದ ಶ್ರೇಯಸ್ಸು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರಿಗೆ ಸಿಗಬೇಕು. ಅದರಂತೆಯೇ, ಆಕ್ಷನ್ ದೃಶ್ಯಗಳನ್ನು ಇಷ್ಟಪಡದವರೂ ನಿಬ್ಬೆರಗಾಗಿ ಆಸ್ವಾದಿಸುವಂತೆ ಸಾಹಸ ದೃಶ್ಯಗಳನ್ನು ರೂಪಿಸಿದ ಆಕ್ಷನ್ ಡೈರೆಕ್ಟರ್ ವಿಕ್ರಂ, ಸಾಕಷ್ಟು ಪರಿಶ್ರಮವಹಿಸಿರುವುದನ್ನು ನಾವಿಲ್ಲಿ ಕಾಣಬಹುದು.

ಇನ್ನು ಪಾತ್ರಗಳ ಕುರಿತು ಹೇಳುವುದಾದರೆ, ಬಹುತೇಕ ಎಲ್ಲಾ ಪಾತ್ರಗಳು ಕಥೆಗೆ ಜೀವ ತುಂಬಿವೆ. ನಾಯಕಿ ಪಾತ್ರದಲ್ಲಿ ಸಪ್ತಮಿ ಗೌಡ, ಸಂಘರ್ಷದ ಎರಡು ಗುಂಪುಗಳ ನಡುವೆ ತನ್ನ ಆಯ್ಕೆಯನ್ನು ಮಾಡಬೇಕಾದ ಸಂದಿಗ್ದತೆಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ, ತಮ್ಮ ನೈಜ್ಯ ನಟನೆಯ ಆಧಾರದಿಂದ ಕನ್ನಡಿಗರ ಮನಗೆದ್ದಿರುವ ಅಚ್ಯುತ್ ಕುಮಾರ್ ಮತ್ತು ಕಿಶೋರ್, ಎಂದಿನಂತೆ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಹಾಗೆಯೆ, ತುಳು ರಂಗಭೂಮಿ ಕಲಾವಿದರೂ ತಮ್ಮ ಪಾತ್ರಗಳಿಗೆ ಕಳೆತಂದಿದ್ದಾರೆ. ಇಲ್ಲಿ ವಿಶೇಷವಾಗಿ ಹೆಸರಿಸಬೇಕಾದುದು, ಈ ಚಿತ್ರಕ್ಕೆ ನಿರ್ದೇಶಕ ರಾಜ್ ಶೆಟ್ಟಿಯವರ ಕೊಡುಗೆ. ಅವರು, ಚಿತ್ರ ಹೈಲೈಟ್ ಆಗಿರುವ ಕ್ಲೈಮಾಕ್ಸ್ ನ ಭೂತದ ಕೋಲದ ದೃಶ್ಯವನ್ನು ನಿರ್ದೇಶಿಸಿ ಚಿತ್ರೀಕರಿಸಿದ್ದಾರೆ. ಆದರೆ, ಅದರ ಕ್ರೆಡಿಟ್ ನ್ನು ಎಲ್ಲಿಯೂ ತೆಗೆದುಕೊಳ್ಳಲು ಹೋಗದೆ, ಎಲ್ಲಾ ಶ್ರೇಯಸ್ಸನ್ನು ರಿಷಬ್ ಶೆಟ್ಟಿಯವರಿಗೆ ಬಿಟ್ಟುಕೊಟ್ಟಿದ್ದಾರೆ. ಇದು ಅವರ ಔದಾರ್ಯವನ್ನು ಸೂಚಿಸುತ್ತದೆ.

‘ಕಾಂತಾರ: ಒಂದು ದಂತಕಥೆ’, ಎಂಬ ಶೀರ್ಷಿಕೆಯಂತೆ ಸಿನೆಮಾ, ದಂತಕಥೆಯೊಂದನ್ನು ಹೇಳುತ್ತಾ, ರಾಜನೊಬ್ಬ ಕಾಂತರಾದ ಆ ಪ್ರದೇಶವನ್ನು ಅಲ್ಲಿನ ಜನರಿಗೆ ಬಳುವಳಿಯಾಗಿ ಕೊಟ್ಟಲ್ಲಿಂದ ಕಥೆ ಆರಂಭವಾಗುತ್ತದೆ. ಮುಂದೆ ಸುಮಾರು ವರ್ಷಗಳ ನಂತರ ಆ ಜಾಗದ ಒಡೆಯನೆಂದು ಹೇಳಿಕೊಂಡವನು, ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿ ದೈವವನ್ನು ಮೈಮೇಲೆ ಆಹ್ವಾನಿಸಿಕೊಂಡ ದೈವ ನರ್ತಕನನ್ನು ಪ್ರಶ್ನಿಸಿ, ಈ ಭೂಮಿ ನನಗೆ ಸೇರಿದ್ದು ಎಂದು ವಾದಿಸಿ ಇದನ್ನು ಕೋರ್ಟಿನ ಮೂಲಕ ತಾನು ವಶಪಡಿಸಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. ಇದರಿಂದ ಕ್ರೋಧಗೊಂಡ ಆ ದೈವ ಆವೇಶದಲ್ಲಿ ಕಾಡಿಗೆ ಓಡಿ ಹೋಗಿ ಕಣ್ಮರೆಯಾಗುತ್ತದೆ ಮತ್ತು ಕೋರ್ಟಿನ ಮುಂದೆ ಆ ಒಡೆಯನ ಪ್ರಾಣತ್ಯಾಗವಾಗುತ್ತದೆ.

ಅನಂತರ, ಈ ಕಾಂತಾರದ ಕಥೆ ಮುಂದಿನ ಪೀಳಿಗೆಯಲ್ಲಿ ಮುಂದುವರಿಯುತ್ತದೆ. ಆ ದೈವ ನರ್ತಕನ ಮಗನಾದ ಶಿವ (ರಿಷಬ್ ಶೆಟ್ಟಿ), ಫಾರೆಸ್ಟ್ ಆಫೀಸರ್ (ಕಿಶೋರ್) ಮತ್ತು ಒಡೆಯನ ಮಗ(ಅಚ್ಯುತ್ ಕುಮಾರ್) ಇವರ ನಡುವೆ ಆ ಜಾಗದ ಒಡೆತನಕ್ಕಾಗಿ ನಡೆಯುವ ಸೆಣೆಸಾಟವೇ ಈ ಸಿನೆಮಾದ ತಿರುಳು. ಈ ಸಿನೆಮಾದ ಕಥೆಯನ್ನು ಇದಕ್ಕಿಂತ ಹೆಚ್ಚು ಹೇಳುವುದು ಸೂಕ್ತವಲ್ಲ. ಒಂದು ಉತ್ತಮ ಸಿನೆಮಾವನ್ನು ಥಿಯೇಟರ್ ನಲ್ಲಿಯೇ ಹೋಗಿ ನೋಡುವುದರಿಂದ ಕಲಾವಿದರಿಗೆ ಇನ್ನಷ್ಟು ಒಳ್ಳೆಯ ಸಿನೆಮಾ ಮಾಡಲು ಉತ್ತೇಜನ ಕೊಟ್ಟಂತಾಗುತ್ತದೆ. ಹಾಗೆಯೆ, ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಮೂಲಕ, ಕನ್ನಡದಲ್ಲಿ ಸದಭಿರುಚಿ ಸಿನೆಮಾಗಳನ್ನು ನಿರ್ಮಿಸಬೇಕೆಂಬ ಅವರ ಮಹದಾಸೆಯನ್ನು ಸಾಬೀತುಮಾಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಯವರ ಕ್ಲೈಮಾಕ್ಸ್ ದೃಶ್ಯವಂತೂ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗುವಷ್ಟು ಶ್ರೇಷ್ಠ ಮಟ್ಟದಲ್ಲಿದೆ.

ಇದು ಒಂದು ನಿಟ್ಟಿನಲ್ಲಿ ಕನ್ನಡಿಗರಿಗೆ ಹೆಮ್ಮೆಯ ಚಿತ್ರ. ಯಾಕೆಂದರೆ, ಹಿಂದೆ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನೆಮಾಗಳಂತೆ ಇದು ಬೇರೆ ರಾಜ್ಯಗಳಲ್ಲಿ ಆಯಾಯ ಭಾಷೆಗಳಿಗೆ ಡಬ್ ಆಗದೆ ಕನ್ನಡ ಭಾಷೆಯಲ್ಲಿಯೇ ವಿಶ್ವದಾದ್ಯಂತ ಬಿಡುಗಡೆಯಾಗಿದೆ(ಇಂಗ್ಲಿಷ್ ಸಬ್ ಟೈಟಲ್ ನೊಂದಿಗೆ). ಆದರೂ ತಮಿಳು ನಾಡು, ಆಂಧ್ರ, ಕೇರಳ, ಉತ್ತರ ಭಾರತ ಮತ್ತು ಹೊರ ದೇಶಗಳಲ್ಲಿ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ. ಇದನ್ನು ನೋಡಿದ ಬೇರೆ ಭಾಷಿಗರು ಬಹಳ ಮೆಚ್ಚಿಕೊಂಡು ತಮ್ಮದೇ ವಿಮರ್ಶೆಯನ್ನು ಮತ್ತು ಚಿತ್ರ ವೀಕ್ಷಣೆ ಅನುಭವವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿ ಕೊಳ್ಳುತ್ತಿದ್ದಾರೆ. ಇದೊಂದು ಭಾಷೆಯನ್ನು ಮೀರಿದ ಕಲಾ ದೃಶ್ಯ ಅನುಭವವೆಂದು ಚಿತ್ರ ರಸಿಕರು ಹೇಳುತ್ತಿದ್ದಾರೆ. ಇದು ಕನ್ನಡ ಸಿನೆಮಾ ಜಗತ್ತಿಗೊಂದು ಹೆಮ್ಮೆಯ ಕ್ಷಣ. ಕರಾವಳಿಯವರಿಗಂತೂ, ನಮ್ಮೂರಿನ ಕಂಬಳ, ಕೋಳಿಪಡೆ, ಜೀವನ ಶೈಲಿ ಮತ್ತು ನಾವು ನಂಬಿಕೊಂಡು ಬಂದಿರುವ ದೈವದ ಭೂತದ ಕೋಲವನ್ನು ತೆರೆಯ ಮೇಲೆ ನೋಡುವ ಮತ್ತು ಉಳಿದವರೊಂದಿಗೆ ಹಂಚಿಕೊಳ್ಳುವ ಹೆಮ್ಮೆ. ಒಟ್ಟಿನಲ್ಲಿ, ಇದೊಂದು ಈ ಮಣ್ಣಿನ ಸಂಸ್ಕ್ರತಿಯ ಬೃಹತ್ ದೃಶ್ಯ ವೈಭವ ಮತ್ತು ತೆರೆಯ ಮೇಲೆ ನೋಡಲೇಬೇಕಾದ ಸಿನೆಮಾ.

‍ಲೇಖಕರು Admin

October 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: