ʼದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲʼ

ಪ್ರಿಯದರ್ಶಿನಿ​ ಶೆಟ್ಟರ್  

ʼದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎಂದೂ ನಿಜವಲ್ಲ ಗೆಳೆಯ
ಎಂದು ನಿಜವಲ್ಲ…ʼ

ಚಿಕ್ಕವಳಿದ್ದಾಗ ಈ ಹಾಡು ಅದರ ಧಾಟಿಯಿಂದಲೋ ಅಥವಾ ಪ್ರಾಸದಿಂದಲೋ ಬಹಳ ಇಷ್ಟವಾಗುತ್ತಿತ್ತು. ಈಗ ಈ ಹಾಡು ಅದರ ಅಂತರಾರ್ಥ ಮತ್ತು ಸರಳತೆಯ ಕಾರಣಕ್ಕೆ ಇಷ್ಟವಾಗುತ್ತದೆ. ಯಾಕೆಂದರೆ …

ಘಟನೆ 1: ನಾನು ಎಂ.ಎಸ್ಸಿ. ಇದ್ದಾಗ ಜ್ಯೂನಿಯರ್​ ಒಬ್ಬಳು ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದುದು ನನ್ನ ಕಿವಿಗೆ ಬಿತ್ತು: “ನಮ್ಮೂರಿಗೆ ಹೋಗಿದ್ದೆ. ಪಕ್ಕದ ಮನೆಯ ಆಂಟಿ – ನೀನೂ ನಮ್ಮ ಮಗನ ಹಾಗೆ ಇಂಜಿನಿಯರಿಂಗ್​ ಓದಿದ್ದರೆ ಬೇಗನೇ ಉದ್ಯೋಗಕ್ಕೆ ಸೇರಿ, ಗಳಿಸಲು ಶುರು ಮಾಡಬಹುದಿತ್ತು. ನಿನ್ನ ಎಂ.ಎಸ್ಸಿ. ಮುಗಿಯುವುದು ಯಾವಾಗ? ನಿನಗೆ ಕೆಲಸ ಸಿಗುವುದು ಯಾವಾಗ? – ಅಂತೆಲ್ಲ ಏನೇನೋ ಕೇಳಿ ಕಿರಿಕಿರಿ ಮಾಡಿಬಿಟ್ಟರು” ಎಂದು ಬೇಸರದಿಂದ ಹೇಳುತ್ತಿದ್ದಳು. ಆಗ ಅವಳ ಸ್ನೇಹಿತೆ – “ನೀನ್ಯಾಕೆ ಎದುರು ಮಾತಾಡಲಿಲ್ಲ?” ಎಂದಳು. “ದೊಡ್ಡವರಲ್ಲವೇ ಹಾಗಾಗಿ ಏನೂ ಮಾತಾಡಲಿಲ್ಲ” ಎಂದು ಈಕೆ ಹೇಳಿದಳು. ಅದಕ್ಕೆ ಅವಳ ಪ್ರತಿಕ್ರಿಯೆ ಕೇಳಿಬಂತು – “ದೊಡ್ಡವರು ದೊಡ್ಡವರ ತರಹ ವರ್ತಿಸಬೇಕಿತ್ತು!”

ಘಟನೆ 2: ಪಿಎಚ್.ಡಿ. ಮಾಡುತ್ತಿರುವ ನನ್ನ ಗೆಳತಿಯೊಬ್ಬಳಿಗೆ ಪರಿಚಯದ ಮಹಿಳೆ ಕೇಳಿದರಂತೆ: “ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರಾ? ಮದುವೆ ಯಾವಾಗ?” ಇವಳ ಉತ್ತರ ಹೀಗಿತ್ತಂತೆ: “ಆಂಟಿ ಮೊದಲು ಈ ವರ್ಷ ಪಿಎಚ್.ಡಿ. ಮುಗಿಸಬೇಕು! ನಂತರ ಅದೆಲ್ಲ” ಆಗ ಆ ಮಹಿಳೆ ನನ್ನ ಗೆಳತಿಯನ್ನು ವಿಚಿತ್ರವಾಗಿ ನೋಡಿದರಂತೆ.

ಘಟನೆ 3: ಎಂ.ಎಸ್ಸಿ. ಕೊನೆ ವರ್ಷದ ವಿದ್ಯಾರ್ಥಿನಿಯೊಬ್ಬಳು ನಮ್ಮ ಲ್ಯಾಬೊರೆಟರಿಗೆ ಬಂದಿದ್ದಳು. ಇಂಟರ್ನ್​ಶಿಪ್ ಮತ್ತು ಪಿಎಚ್.ಡಿ. ಬಗ್ಗೆ ಅದೂ ಇದೂ ಕೇಳುತ್ತಿದ್ದಳು. ನಾನು, ನನ್ನ ಸೀನಿಯರ್​ ಆಕೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆವು. “ಪಿಎಚ್.ಡಿ. ಮಾಡಲು ಅಷ್ಟೊಂದು ಆಸಕ್ತಿನಾ?” ಎಂದು ಅವರು ಕೇಳಿದರು. ಅವಳ ಉತ್ತರ ಹೀಗಿತ್ತು: “ಮುಂದೆ ಓದದೇ ಇದ್ದರೆ ಮನೆಯಲ್ಲಿ ಮದುವೆ ಮಾಡಿಬಿಡಬಹುದು ಮೇಡಂ! ಅದಕ್ಕಾದರೂ…”

ಮೇಲಿನ ಘಟನೆಗಳನ್ನು ಗಮನಿಸಿದರೆ ಒಂದಂಶ ಸಾಮಾನ್ಯವಾಗಿದೆ. ಅದೇನೆಂದರೆ: ದೊಡ್ಡವರು ತಮ್ಮ ಅಪೇಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದು. ತಮ್ಮ ಮಕ್ಕಳ ಮೇಲಷ್ಟೇ ಅಲ್ಲ, ಅವರು ಸಂಬಂಧಿಕರ, ಪರಿಚಿತರ, ನೆರೆಹೊರೆಯವರ ಅಥವಾ ಕೆಲವೊಮ್ಮೆ ಸಂಬಂಧಪಡದವರ – ಹೀಗೆ ಯಾರ ಮಕ್ಕಳೂ ಆಗಿರಬಹುದು! “ನಾವಂತೂ ಇಂತಿಂತ ಕೋರ್ಸ್​ಗೆ/ ಕೆಲಸಕ್ಕೆ ಸೇರಲಿಕ್ಕೆ ಆಗಲಿಲ್ಲ, ಇಂತಹ ವಿಷಯ ಕಲಿಯಲಿಲ್ಲ, ನೀನಾದರೂ ಓದು, ಇಂತಹ ಕೆಲಸಕ್ಕೇ ಸೇರಿಕೋ” ಅಥವಾ “ನಾನೂ ಈ ವೃತ್ತಿಯನ್ನು ಮಾಡುತ್ತಿದ್ದೇನೆ, ಹಾಗಾಗಿ ನೀನೂ ಇದನ್ನೇ ಮುಂದುವರೆಸು…” ಈ ಎರಡೂ ಮನಸ್ಥಿತಿಗಳು ಸಮಂಜಸವಲ್ಲ. ಯಾರಿಗೆ ಗೊತ್ತು? ತಾವು ಬಯಸಿ ಆರಿಸಿಕೊಂಡ ವಿಷಯವಾಗಲೀ, ವೃತ್ತಿಯಾಗಲೀ ಅವರಿಗೆ ಮತ್ತಷ್ಟು ಹಣ ಹಾಗೂ ಹೆಸರು ತಂದುಕೊಡಬಹುದು. ಯಾಕೆಂದರೆ ಅದು ಅವರು ಇಷ್ಟಪಟ್ಟು ಮಾಡಿದ್ದಲ್ಲವೇ? ಅಕಸ್ಮಾತ್​ ನಿರೀಕ್ಷಿತ ಯಶಸ್ಸು ಸಿಗದೇಹೋದರೆ ಅದರ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುತ್ತದೆ.

ಮೊದಲನೆಯದಾಗಿ ೧೦ ಅಥವಾ ೧೨ನೇ ತರಗತಿ ಮುಗಿಸಿದ ಮಕ್ಕಳು ಸಿಕ್ಕಾಗ ಕುತೂಹಲ ಹೆಚ್ಚಾದ ಅನೇಕರು – ಆ ಮಕ್ಕಳಿಗೆ ಕೇಳುವ ಪ್ರಶ್ನೆಗಳು: “ನಿನ್ನ ರಿಸಲ್ಟ್​ ಎಷ್ಟಾಯ್ತು? ಮುಂದೆ ಮೆಡಿಕಲ್​ ಅಥವಾ ಇಂಜಿನಿಯರಿಂಗ್?​”. ೧೦ನೇ ತರಗತಿ ಪಾಸಾದವರು ಆರ್ಟ್ಸ್ ಅಥವಾ ಕಾಮರ್ಸ್​ ಎಂದಾಕ್ಷಣ, “ಸೈನ್ಸ್​ ಯಾಕೆ ಬೇಡ?”- ಇಲ್ಲಿಗೆ ಪ್ರಶ್ನೆ ಮುಗಿಯುತ್ತದೆ. ಪಿ.ಯು.ಸಿ.ಯಲ್ಲಿ ಸೈನ್ಸ್​ ಆಯ್ಕೆ ಮಾಡಿ ಮುಂದೆ ತಮ್ಮಿಷ್ಟದಂತೆ ಅಥವಾ ಮತ್ತೊಬ್ಬರ ಆಶಯದಂತೆ ಇಂಜಿನಿಯರಿಂಗ್ ಆಯ್ಕೆ ಮಾಡಿದರೆ ಅವರು ಇಂತಹ ಸ್ಟುಪಿಡ್​ ಪ್ರಶ್ನೆಗಳಿಂದ ಬಚಾವ್!!​ಅದರ ಬದಲಾಗಿ ಏನಾದರೂ ಆ ಮಗು ಡೆಂಟಲ್​, ಫಾರ್ಮಸಿ ಎಂದು ಹೇಳಿತೋ, “ಮೆಡಿಕಲ್​ ಸೀಟು ಸಿಗಲಿಲ್ವಾ? ನೀಟ್​ gÁåAಕಿಂಗ್​ ದೂರ ಹೋಯ್ತಾ? ಪಿ.ಯು. ರಿಸಲ್ಟ್​ ಕಡಿಮೆ ಆಯ್ತಾ?” – ಇಂತಹ ಮತ್ತಷ್ಟು ಸ್ಟುಪಿಡ್​ ಪ್ರಶ್ನೆಗಳು ಎದುರಾಗುವವು! ಪಾಪ ಆ ವಿದ್ಯಾರ್ಥಿ ಏನು ಹೇಳಬೇಕು? ಹಲ್ಲು ನೋವು ಬಂದರೆ ದಂತವೈದ್ಯರೇ ಬೇಕಲ್ಲ? ಉಳಿದವರೇನು ಮಾಡಬಲ್ಲರು!

ಒಂದು ವೇಳೆ ಎಂ.ಬಿ.ಬಿ.ಎಸ್.​ ವಿದ್ಯಾರ್ಥಿ ಸಿಕ್ಕಿದರೆ, ಅವರಿಗೂ ಪ್ರಶ್ನೆಗಳಿರುತ್ತವೆ: “ಗೌರ್ಮೆಂಟ್​ ಸೀಟಾ, ಇಲ್ಲ ಪ್ರೈವೆಟ್?​ ಮುಂದೆ ಪಿ.ಜಿ. ಮಾಡಬೇಕಲ್ಲಾ? ಇಲ್ಲದಿದ್ದರೆ ಏನು ಉಪಯೋಗ? ಪ್ರೈವೆಟ್ ಸೀಟ್​ ಆದರೆ ಎಷ್ಟು ಲಕ್ಷ ಖರ್ಚಾಯ್ತು?” ಅಕಸ್ಮಾತ್​ ಬಿ.ಎ.ಎಮ್.ಎಸ್., ಬಿ.ಎಚ್​.ಎಮ್.ಎಸ್. ಅಂದರಂತೂ… ʼಹೋಗಲಿ ಬಿಡಿ, ಪಾಪʼ ಎಂಬಂತೆ ನೋಟ ಬೀರುವವರೂ ಕಡಿಮೆ ಇಲ್ಲ ನಮ್ಮಲ್ಲಿ!! ಇನ್ನು ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ವಿದ್ಯಾರ್ಥಿಗಳು ಕಂಡರಂತೂ ಮುಗಿದೇಹೋಯಿತು! ಕರಿಯರ್​ ಗೈಡೆನ್ಸ್​ ಮಾಡುವ ಎಕ್ಸಪರ್ಟ್​ಗಳಾಗಿ ಬಿಡುತ್ತಾರೆ ಕೆಲವರು! ಲೈಫ್​ಸೈನ್ಸ್​ ವಿಷಯವನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರೆಂದು ಹೇಳಿದರೆ ಸಾಕು, “ಯಾಕೆ ಕೆಮಿಸ್ಟ್ರಿಯಲ್ಲಿ ಆಸಕ್ತಿ ಇಲ್ವಾ? ಅಥವಾ ಸೀಟ್​ ಸಿಗಲಿಲ್ವಾ?”, “ಪಿ.ಯು.ಸಿ. ನಂತರ ಬಿ.ಇ./ ಎಂ.ಬಿ.ಬಿ.ಎಸ್.​ನಲ್ಲಿ ಆಸಕ್ತಿ ಇರ್ಲಿಲ್ವಾ?”, “ಈ ಸಬ್ಜೆಕ್ಟ್​ ಆರಿಸಿಕೊಳ್ಳಲು ಕಾರಣವೇನು?”, “ಮುಂದೆ ಪಿಎಚ್.ಡಿ. ಮಾಡ್ತೀಯಾ, ಇಲ್ಲ ಟೀಚಿಂಗ್​ ಅಥವಾ ಇಂಡಸ್ಟ್ರೀ ಯಾವುದು ಇಷ್ಟ?” ಹೀಗೆ ಪ್ರಶ್ನೆಗಳ ಸರಮಾಲೆಯೊಂದು ವಿದ್ಯಾರ್ಥಿ/ ವಿದ್ಯಾರ್ಥಿನಿಯ ಕೊರಳಿಗೆ ಬೀಳುವುದು ಗ್ಯಾರಂಟಿ! ಇಷ್ಟೆಲ್ಲ ಕೇಳಿಸಿಕೊಂಡ ಮೇಲೆ ವಿದ್ಯಾರ್ಥಿಗಳು ʼಇಂಥವರ ಬಾಯಿ ಹೇಗೆ ಮುಚ್ಚಿಸಬಹುದು?ʼ ಎಂದು ಯೋಚಿಸಲಾರಂಭಿಸುತ್ತಾರೆ! ಮೊದಮೊದಲು ಇವೆಲ್ಲ ಹೊಸದು, ಕೊಸರಿಕೊಳ್ಳುವ ಪ್ರಯತ್ನ ನಡೆದೇ ಇರುತ್ತದೆ. ಆದರೆ ಪದೇ ಪದೇ ಇಂತಹ ಸನ್ನಿವೇಶಗಳು ಎದುರಾಗಿ ಎಲ್ಲ ತರಹದ ಜನರ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿ ಕೇಳಿ ಕೊನೆಕೊನೆಗೆ, “ಆ ವಿಷಯದಲ್ಲಿ/ ಬಿ.ಇ./ ಎಂ.ಬಿ.ಬಿ.ಎಸ್.​ನಲ್ಲಿ ಇಂಟ್ರೆಸ್ಟ್​ ಇರ್ಲಿಲ್ಲ” ಎಂದೋ, ಇಲ್ಲಾ ಈಗ ತಗೊಂಡಿರುವ ಕೋರ್ಸ್/ ವಿಷಯಕ್ಕೆ ಇಂತಿಂತಹ ಅವಕಾಶಗಳಿವೆ ಎಂದೋ ಅಥವಾ ಪ್ರಸ್ತುತ ಕೋರ್ಸ್ ಅನ್ನು ಇಷ್ಟಪಟ್ಟು, ಒಳ್ಳೆಯ ರ್ಯಾಂಕಿಂಗ್​ ಬಂದು ಪಡೆದೆ ಎಂದೋ ನೇರವಾಗಿ ಹೇಳುವಂತಹ ಧೈರ್ಯ ಅವರಿಗೆ ಬಂದಿರುತ್ತದೆ. ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ, ಹಲವು ಪಾಲಕರಲ್ಲಿಯೂ ಇಂತಹ ಸಿದ್ಧಮಾದರಿಯ ಉತ್ತರಗಳು ಆ ಸಮಯದಲ್ಲಿ ಬಂದುಬಿಡುತ್ತವೆ. ಈ ತರಹದ ಪ್ರಶ್ನೆಗಳು ಕನಿಕರ ಅಥವಾ ಕುತೂಹಲದಿಂದ ಕೂಡಿದ್ದರೂ ಸಹ ವಿದ್ಯಾರ್ಥಿಗಳಿಗೆ ಇವನ್ನೆಲ್ಲ ಕೇಳಿ ಕಿರಿಕಿರಿಯಾಗುವ ಸಂಭವವೇ ಹೆಚ್ಚು.

ಕೆಲ ಕುಟುಂಬಗಳಲ್ಲಿ ಸಂಬಂಧಿಕರ ಮಕ್ಕಳಲ್ಲಿ ಕಲಿಕೆಯ ವಿಷಯ ಅಂತ ಬಂದಾಗ ಆಗಾಗ ಪೈಪೋಟಿ ನಡೆಯುವುದು ಹೊಸದೇನಲ್ಲ. ಆದರೆ ಅಂತಹ ಮಕ್ಕಳು, ಪಾಲಕರು, ಅನಾವಶ್ಯಕವಾಗಿ ಒಣಪ್ರತಿಷ್ಠೆಯ ಬಲೆಯಲ್ಲಿ ಸಿಲುಕಿ ಮುಜುಗರಕ್ಕೀಡಾಗುವುದಂತೂ ಸುಳ್ಳಲ್ಲ. ಜೊತೆಗೆ ಸಹಪಾಠಿಗಳ ಅಥವಾ ಓರಗೆಯವರ ಉದಾಹರಣೆ ಕೊಟ್ಟು ಅವರ ತಲೆ ಚಿಟ್ಟುಹಿಡಿಸಿಬಿಡುತ್ತಾರೆ. ನಾವು ಎಷ್ಟೇ ರ‍್ಯಾಟ್​ರೇಸ್​ಗೆ ಬೀಳಬಾರದೆಂದರೂ ಸಹ ಇಂತಹ ಜನರಿಂದ ತಪ್ಪಿಸಿಕೊಳ್ಳುವುದು ಕಷ್ಟ. ನನ್ನ ಸ್ನೇಹಿತೆಯೊಬ್ಬರ ಅನುಭವ ಕೇಳಿ ʼಇಂತಹ ಜನರೂ ಇರುತ್ತಾರಾ?ʼ ಅಂತ ಆಶ್ಚರ್ಯವಾಯ್ತು. “ಹುಟ್ಟುಹಬ್ಬದ ದಿನ ನೆನಪಿಸಿಕೊಂಡು ಫೋನ್​ ಮಾಡಿ ವಿಶ್​ ಮಾಡದ ಸಂಬಂಧಿಕರು, ಎಸ್.ಎಸ್.​ಎಲ್.​ಸಿ./ ಪಿ.ಯು.ಸಿ./ ಯು.ಜಿ./ ಪಿ.ಜಿ. ರಿಸಲ್ಟ್​ ಬಂದಾಗ ಫೋನ್​ ಮಾಡಿ ರಿಸಲ್ಟ್​ ಕೇಳುವುದು ವಿಚಿತ್ರ ಅನ್ನಿಸುತ್ತದೆ” – ಅಂತ ಅವರು ಹೇಳಿದಾಗ ಅಚ್ಚರಿಯಾಗುವ ಸರದಿ ನನ್ನದಾಗಿತ್ತು!

ಒಂದೇ ಕುಟುಂಬದ ಮಕ್ಕಳು ಬೇರೆ ಬೇರೆ ಕರಿಯರ್​ ಆಯ್ಕೆ ಮಾಡಿಕೊಂಡು, ಅವರಲ್ಲಿ ಯಾರಾದರೂ ವಿಜ್ಞಾನೇತರ ವಿಷಯ ಆರಿಸಿಕೊಂಡಿದ್ದರೆ, ಅಂತಹವರ ಬಗ್ಗೆ ಒಂದು ಬಗೆಯ ತಾತ್ಸಾರ ಅಥವಾ ಬೇಜಾರು ಆ ಕುಟುಂಬದಲ್ಲಿರುತ್ತದೆ. ಸಂಬಂಧಿಕರ ಮಕ್ಕಳೇ ಆಗಲಿ ಅಥವಾ ಸ್ವಂತ ಸಹೋದರ – ಸಹೋದರಿಯರೇ ಇರಲಿ ಅವರಿಗೆ ಅವರದೇ ಆದ ಆಸಕ್ತಿಗಳಿರುತ್ತವೆ. ಹಾಗಾಗಿ ತಾರತಮ್ಯ ಸರಿಯಲ್ಲ. ಈ ತರಹ ಮತ್ತೊಬ್ಬರ ವಿದ್ಯಾಭ್ಯಾಸ/ ವೃತ್ತಿ ಸಂಬಂಧಿ ಆಯ್ಕೆಯ ಬಗ್ಗೆ ಕನಿಕರ ತೋರುವ ಮುಗ್ಧರ ಬಗ್ಗೆ ನನಗೆ ಪಾಪ ಅನಿಸುತ್ತದೆ. ಒಂದು ಅಚ್ಚರಿಯ ಸಂಗತಿಯೆಂದರೆ ಇತ್ತೀಚೆಗೆ ಬಿ.ಇ. / ಎಂ.ಬಿ.ಬಿ.ಎಸ್.​ ಓದಿದವರೂ ಸಹ ಯು.ಪಿ.ಎಸ್.​ಸಿ. / ಕೆ.ಪಿ.ಎಸ್.​ಸಿ. ಮೇನ್ಸ್​ಪರೀಕ್ಷೆಗಳಲ್ಲಿ ಕನ್ನಡ ಸಾಹಿತ್ಯ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಮಾನವಶಾಸ್ತ್ರ, ರಾಜ್ಯಶಾಸ್ತ್ರದಂತಹ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವುದು ಗಮನಾರ್ಹ. ಹಣ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಹಣವನ್ನು ಹೇಗೆ ಹೂಡಿಕೆ ಮಾಡಬೇಕೆಂಬುದನ್ನು ತಿಳಿಯುವುದು, ಬ್ಯಾಂಕ್​ ಸಂಬಂಧಿ ಕೆಲಸಗಳನ್ನು ಅರಿತುಕೊಳ್ಳುವುದೂ ಸಹ ಅತ್ಯವಶ್ಯಕ. ಇಂತಹ ತಿಳುವಳಿಕೆ ನಮ್ಮನ್ನು ಸ್ವತಂತ್ರವಾಗಿ ವ್ಯವಹರಿಸಲು ಪ್ರೋತ್ಸಾಹಿಸುತ್ತದೆ.

ನಾವು ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ, ಕೆಲವೊಮ್ಮೆ ಪಾಲಕರ ಒತ್ತಾಯವೋ ಇಲ್ಲಾ ಅಂಧಾನುಕರಣೆಯೋ ವಿದ್ಯಾರ್ಥಿಗಳು ಬಹಳ ಬೇಡಿಕೆಯಿರುವ ಆದರೆ ತಮಗಿಷ್ಟವಿಲ್ಲದ ಕೋರ್ಸ್​ಗೆ ಸೇರಿ, ಅದನ್ನು ಅರೆಮನಸ್ಸಿನಿಂದ ಪೂರೈಸಿ, ಒಂದೆರಡು ವರ್ಷ ಕೆಲಸ ಮಾಡಿ ಮುಂದುವರೆಸಲಾಗದೆ, ಬೇರೆ ಉದ್ಯೋಗ ಮಾಡಲು ಸಮರ್ಥರಾಗದೇ ತ್ರಿಶಂಕು ಸ್ಥಿತಿ ತಲುಪುತ್ತಾರೆ. ಅಂಥವರು ಮುಂದೆ ತಮಗಿಷ್ಟದ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಬಹುದು. ಹಾಗೆಯೇ ಕಲೆ, ರಂಗಭೂಮಿ, ಸಾಹಿತ್ಯ, ಕ್ರೀಡೆಯಂತಹ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಬಯಸುವವರು ಆರ್ಥಿಕ ಸಬಲತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ. ಯಾಕೆಂದರೆ ಈ ಕ್ಷೇತ್ರಗಳು ನಿರಂತರ ಆದಾಯ ತಂದುಕೊಡುವುದು ಅಪರೂಪವೆಂಬ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ಹೊಟ್ಟೆಪಾಡಿಗಾಗಿ ವೃತ್ತಿಯೊಂದರಲ್ಲಿರುವುದು ಅನಿವಾರ್ಯ.

ಇವೆಲ್ಲ ಒಂದು ಕಡೆಯಾದರೆ ಪಿಎಚ್.ಡಿ. ಮಾಡುತ್ತಿರುವವರದಂತೂ ಮತ್ತೊಂದು ಕಥೆ. ಮದುವೆ, ಮಕ್ಕಳು, ಉದ್ಯೋಗ ಎಲ್ಲ ಇದ್ದು ಪಿಎಚ್.ಡಿ. ಮಾಡುವವರ ಸ್ಥಿತಿ ದೇವರಿಗೇ ಪ್ರೀತಿ! ಎಲ್ಲ ಕಡೆಯಿಂದ ಒತ್ತಡಕ್ಕೊಳಗಾಗಿ ಕೊನೆಗೆ ತಮಗೆ ಪಿಎಚ್.ಡಿ. ಬೇಕಿತ್ತಾ? ಅಂದುಕೊಳ್ಳಬಹುದು. ಎರಡು ಡಿಗ್ರಿ ಪಡೆದದ್ದು ಸಾಲದೆಂಬಂತೆ ಮತ್ತೆ ಓದು ಮುಂದುವರೆಸಿ, ಸಂಶೋಧನೆ ಕೈಗೊಂಡು, ಹೆಸರಿನ ಹಿಂದೆ ʼಡಾ.ʼ ಎಂದು ಬರೆಯುವ ಕನಸು ಕಾಣುತ್ತಾ, ಹಲವಾರು ರೀತಿಯ ಕಿರಿಕಿರಿಗಳ ನಡುವೆ ತಾಳ್ಮೆಯಿಂದಿರುವುದನ್ನು ಕಲಿಯುತ್ತಾ, ನಾಲ್ಕೈದು ವರ್ಷಗಳಲ್ಲಿ ರಿಸರ್ಚ್ ಮಾಡಿ ಮುಗಿಸುವಷ್ಟರಲ್ಲಿ ಸಾಕಾಗಿಹೋಗಿರುತ್ತದೆ. ಅಂತಹದರಲ್ಲಿ ಸಣ್ಣ ವಯಸ್ಸಿನಲ್ಲಿ ಬೇಗನೇ ಪಿಎಚ್.ಡಿ. ಸೀಟ್​ ಪಡೆದು ʼನಮ್ಮಷ್ಟಕ್ಕೆ ನಾವುʼ ನಮ್ಮ ಕೆಲಸದಲ್ಲಿ ತೊಡಗಿದಾಗ, ಮದುವೆಯ ವಿಷಯವೇ ಎಲ್ಲಕ್ಕಿಂತ ಪ್ರಮುಖವಾಗಿ ಅನೇಕರ ಪ್ರಶ್ನೆಗಳಿಗೆ ಗುರಿಯಾಗುವ, ಸಲಹೆಗಳಿಗೆ ಕಿವಿಯಾಗುವ ಸನ್ನಿವೇಶಗಳು ಅಸಂಖ್ಯ. ಅಚ್ಚರಿಯ ಸಂಗತಿಯೆಂದರೆ, ನಮ್ಮ ಅಜ್ಜಿಯೂ ಸೇರಿದಂತೆ ನಾಲ್ಕೈದು ಜನ ಹಿರಿಯ ಮಹಿಳೆಯರನ್ನು ನಾನು ಗಮನಿಸಿದಂತೆ – “ಮುಂದೆ ಸಂಸಾರ ಎನ್ನುವುದು ಇದ್ದಿದ್ದೇ. ಈಗಿನ ಹುಡುಗಿಯರು ಓದುವಷ್ಟು ಓದಿಬಿಡಲಿ” – ಎಂಬ ಅವರ ಮನಸ್ಥಿತಿ ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಜೊತೆಗೆ ಕೆಲ ʼಆಂಟಿಯರುʼ ಕೇಳುವ ಪ್ರಶ್ನೆಗಳನ್ನು ಕೇಳಿಸಿಕೊಂಡರೆ ಕಿರಿಕಿರಿಯೂ ಆಗುತ್ತದೆ. “ಮದುವೆಯಾದ ಮೇಲೂ ಓದುತ್ತೀಯಾ? ಸುಮ್ಮನೇ ಯಾಕೆ ವಯಸ್ಸು/ ಸಮಯ ಹಾಳು ಮಾಡುತ್ತೀ? ಪಿಎಚ್.ಡಿ. ಮುಗಿದ ಬಳಿಕ ಕೆಲಸ ಮಾಡುತ್ತೀಯಾ?!” – ಇಂತಹ ಮಾತುಗಳು ಎದುರಾದಾಗ ಒಮ್ಮೆ ತಿರುಗಿ ನಿಂತು “ನನ್ನ ಕರಿಯರ್​, ನನ್ನ ಆಯ್ಕೆ, ಯಾವಾಗ ಬೇಕಾದರೂ ಮದುವೆಯಾಗುತ್ತೇನೆ, ಮನೆ, ಕೆಲಸ ಎರಡನ್ನೂ ನಿಭಾಯಿಸುತ್ತೇನೆ, ನನ್ನಿಷ್ಟ” ಎಂದು ಹೇಳಿಬಿಡಬೇಕೆನಿಸುತ್ತದೆ. ಆದರೆ “ದೊಡ್ಡವರಲ್ಲವೇ? ಹೀಗೆ ಮಾತಾಡುವುದು ಸಭ್ಯತೆಯಲ್ಲ” ಅಂದುಕೊಂಡು ಸುಮ್ಮನಾಗುತ್ತೇನೆ. ನನ್ನಂತಹ ಅನೇಕ ಹುಡುಗಿಯರ ಅನಿಸಿಕೆಯೂ ಇದೇ ಆಗಿರಬಹುದೆಂದುಕೊಳ್ಳುತ್ತೇನೆ.

ದೊಡ್ಡ ಹುದ್ದೆ, ವಿದೇಶ ಪ್ರಯಾಣ, ಹಣ ಗಳಿಕೆಯೇ ಪರಮ ಸಾಧನೆ ಎಂಬ ಮನಸ್ಥಿತಿ ಅನೇಕರಲ್ಲಿದೆ, ಅದು ಯಾವಾಗಲೂ ಇರುತ್ತದೆ ಕೂಡಾ. ಅಂದಮಾತ್ರಕ್ಕೆ ಇತರೆ ಕ್ಷೇತ್ರಗಳಾದ ಕ್ರೀಡೆ, ಕಲೆ, ಬರವಣಿಗೆ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಸೃಜನಶೀಲರನ್ನು ಕಡೆಗಣಿಸುವುದು, ತಮ್ಮ ಮೂಗಿನ ನೇರಕ್ಕೆ ಮಾತಾಡುವುದು, ಫೇಲ್​ ಆಗಿ ನಂತರ ಮತ್ತೆ ಪಾಸಾಗಿ ತಡವಾಗಿ ಕಾಲೇಜಿಗೆ ಸೇರಿಕೊಂಡವರನ್ನು ʼಪಾಪ…ʼ ಎಂಬಂತೆ ನೋಡುವುದು, ಕಡಿಮೆ ಅಂಕ ಪಡೆದವರಿಗೆ ತಮ್ಮ ಪುಕ್ಕಟೆ ಸಲಹೆ ಕೊಡುವುದು, ಅಂತಹ ಮಕ್ಕಳಿಗೆ ಏನೇನೋ ಉಪದೇಶ ಮಾಡುವುದು…- ಇದನ್ನೆಲ್ಲ ಮಾತಾಡುವ ಮುನ್ನ “ನಮ್ಮ ಮಾರ್ಗದರ್ಶನ ಅವರಿಗೆ ಅಗತ್ಯವೇ?” ಎಂದು ಒಮ್ಮೆ ನಮಗೆ ನಾವೇ ಯಾಕೆ ಕೇಳಿಕೊಳ್ಳಬಾರದು? ತಮ್ಮ ಕಲ್ಪನೆಯ ಯಶಸ್ಸಿನ ಮಾನದಂಡದಿಂದ ಮತ್ತೊಬ್ಬರ ಕೊರತೆಯನ್ನು ಎತ್ತಿ ಹೇಳುವುದು ಎಷ್ಟು ಸಮಂಜಸ? ಅದು ಅವರಿಗೆ ನಿರಾಶೆಯನ್ನುಂಟು ಮಾಡಬಹುದೆಂಬ ಸೂಕ್ಷ್ಮತೆ ನಮಗೆ ಬರುವುದು ಯಾವಾಗ? ಮುಂದೊಂದು ದಿನ ನಿಮ್ಮ ನಿರೀಕ್ಷೆ/ ಕಲ್ಪನೆಗೂ ಮೀರಿ ಅಂತಹ ವಿದ್ಯಾರ್ಥಿಗಳೇನಾದರೂ ನೀವಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದರೆ, ಆಗೇನು ಹೇಳುವಿರಿ? ಇನ್ನೇನು ಹೇಳಬಹುದು? “ನಾನು ಆವತ್ತೇ ಹೇಳಿದ್ದೆ, ನೀನು ಅಂದುಕೊಂಡದ್ದನ್ನು ಮಾಡಿಯೇಬಿಡುತ್ತೀಯಾ ಎಂದು!” ಹೆಚ್ಚೆಂದರೆ ಇಂಥದ್ದೇ ಒಂದು ವಾಕ್ಯ ನಿಮ್ಮ ನಾಲಿಗೆಯ ಮೇಲಿರುತ್ತದೆ! ಅಷ್ಟೇ ಅಲ್ಲವೇ?

ಒಂದು ವ್ಯವಸ್ಥೆ ಎಂದರೆ ಎಲ್ಲ ವೃತ್ತಿಯವರೂ, ಎಲ್ಲ ತರಹದ ಕೆಲಸ ಮಾಡುವವರೂ ತಮ್ಮ ತಮ್ಮ ಕೊಡುಗೆ ನೀಡುವುದರ ಜೊತೆಗೆ ಎಲ್ಲರ ಶ್ರಮದ ಘನತೆಯನ್ನು ಎತ್ತಿಹಿಡಿಯುವುದೂ ಅಷ್ಟೇ ಮುಖ್ಯ. ಕೈಲಾಸಕ್ಕೆ ಹೋಲಿಸಲಾಗುವ ಕಾಯಕಗಳಲ್ಲಿ ಮೇಲುಕೀಳೆಂಬುದೆಲ್ಲಿದೆ? ನಮ್ಮ ವೃತ್ತಿಯನ್ನು ಪ್ರೀತಿಸೋಣ, ಜೊತೆಗೆ ಇತರರ ಆಯ್ಕೆಯನ್ನು ಗೌರವಿಸೋಣ. ಅದಕ್ಕಿಂತ ಮುಖ್ಯವಾಗಿ ಸಾಧ್ಯವಾದರೆ ವಿದ್ಯಾರ್ಥಿಗಳೊಡನೆ ಮಾತಾಡುವಾಗ ಸಕಾರಾತ್ಮಕವಾದದ್ದನ್ನೇ ಹೆಚ್ಚು ಮಾತಾಡಬಹುದಲ್ಲವೇ? ನಕಾರಾತ್ಮಕ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಬೇಡವಾದುದನ್ನು ಬಿಟ್ಟು, ಬೇಕಾದದ್ದನ್ನು ಮಾತ್ರ – ಅಂದರೆ ಪ್ರೋತ್ಸಾಹದಾಯಕವಾದ ಹಾಗೂ ನಾವು ಆರಿಸಿಕೊಂಡ ಕ್ಷೇತ್ರದ ಬಗ್ಗೆ ಮಾಹಿತಿ ನೀಡಬಲ್ಲವರ ಹಿತನುಡಿಗಳನ್ನು ಕೇಳಿ ಅದನ್ನೇ ಪ್ರೇರಣೆ ಎಂದು ತಿಳಿದು ಕಾರ್ಯಪ್ರವೃತ್ತರಾಗುವುದಷ್ಟೇ ನಮ್ಮ ಕೆಲಸ.

‍ಲೇಖಕರು Admin

October 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: