ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹತ್ತು ಹನ್ನೆರಡು ಮುರೀದ್‌ಗಳು, ಚೇಲಾಗಳು…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇಂದಿನಿಂದ ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

1

ನವಂಬರ್ ತಿಂಗಳಲ್ಲಿ ಬಹಳ ಚಳಿಯ ಸಂಜೆಯಲ್ಲಿ ಹಾಜಿ ಮುರಾದ್ ಕುದುರೆ ಏರಿಕೊಂಡು ಮಖೆಟ್‌ಗೆ ಬಂದ. ಮಖೆಟ್ ಶತ್ರುಗಳ ಪ್ರದೇಶ. ಚಚೆನ್‌ಗಳಿದ್ದ ಒಂದು ಔಲ್, ಅಂದರೆ ಹಳ್ಳಿ. ಗೊಬ್ಬರ, ಒಣ ಹುಲ್ಲು ಸೇರಿಸಿ ತಟ್ಟಿದ ಕಿಝ್ಯಾಕ್ ಬೆರಣಿಯ ಹೊಗೆಯ ವಾಸನೆ ಹಳ್ಳಿಯನ್ನು ಅಡರಿತ್ತು. ಆ ಹಳ್ಳಿ ರಶಿಯದ ಗಡಿಯಿಂದ ಸುಮಾರು ಹದಿನೈದು ಮೈಲು ಆಚೆ ಇತ್ತು. ಮಸೀದಿಯ ಮುಅಜ್ಝೀನನ ಲಯ ಬದ್ಧ ಕರೆ ಆಗ ತಾನೇ ಮುಗಿದಿತ್ತು. ಜೇನು ಗೂಡಿನ ಹಾಗೆ ಒತ್ತೊತ್ತಾಗಿ ಇಡಿಕಿರಿದ ತಮ್ಮ ತಮ್ಮ ಒಡೆಯರ ಕ್ಲ್ಯಾ ಮನೆಗಳಿಗೆ ಮರಳುತಿರುವ ದನಕರು, ಕುರಿ ಆಡುಗಳ ಹೆಜ್ಜೆ ಸಪ್ಪಳದ ಜೊತೆಗೆ ಜಗಳವಾಡುವ ಗಂಡಸರ ಗೊಗ್ಗರು ದನಿ, ಕೆಳಗೆ ಚಿಲುಮೆಯ ಹತ್ತಿರ ನೀರಿಗೆ ಬಂದಿದ್ದ ಹೆಂಗಸರು, ಮಕ್ಕಳ ದನಿ ಇವೆಲ್ಲವೂ ಕಿಝ್ಯಾಕ್ ಬೆರಣಿಯ ಹೊಗೆಯನ್ನು ಹೊತ್ತಿದ್ದ ಪರ್ವತದ ಗಾಳಿಯಲ್ಲಿ ಬೆರೆತು ತುಂಬಿದ್ದವು. 

ಈ ಹಾಜಿ ಮುರಾದ್ ಮೂರನೆಯ ಇಮಾಮ್ ಶಮೀಲ್‌ನ ನಾಯಿಬ್, ಮುಖ್ಯಸ್ಥ ಆಗಿದ್ದವನು, ತನ್ನ ಸಾಹಸಗಳಿಗಾಗಿ ಹೆಸರಾಗಿದ್ದವನು. ತನ್ನ ಧ್ವಜವಿಲ್ಲದೆ ಅವನು ಎಂದೂ ಹೊರಗೆ ಸವಾರಿ ಹೊರಟವನೇ ಅಲ್ಲ. ಜೊತೆಗೆ ಹತ್ತು ಹನ್ನೆರಡು ಮುರೀದ್‌ಗಳು, ಚೇಲಾಗಳು,  ಇರಬೇಕಾಗಿತ್ತು. ಕೆಲವರು ಅವನ ಕುದುರೆಯ ಎಡ ಬಲದಲ್ಲಿ,  ಕೆಲವರು ಕುದುರೆಯ ಮುಂದೆ ಹೆಜ್ಜೆ ಹಾಕುತ್ತ ಬರುತಿದ್ದರು. ಈಗ ತಲೆತಪ್ಪಿಸಿಕೊಂಡು ಬಂದಿರುವ ಅವನು ಜನರ ಗಮನ0 ಸೆಳೆಯಬಾರದೆಂದು ಒಬ್ಬನೇ ಮುರೀದ್‌ನನ್ನು ಕರೆದುಕೊಂಡು ಬಂದಿದ್ದ. ಹಾಜಿ ಮುರಾದ್ ಉದ್ದ ನಿಲುವಂಗಿ ತೊಟ್ಟು, ಮುಖಕ್ಕೆ ಮುಸುಕಿನ ಹಾಗೆ ಹಿಜಾಬ್ ಹೊದ್ದು, ಬಟ್ಟೆಯ ಮರೆಯಲ್ಲಿ ಬಂದೂಕು ಇಟ್ಟುಕೊಂಡಿದ್ದ. ಚುರುಕು ಕಪ್ಪು ಕಣ್ಣು ಅತ್ತ ಇತ್ತ ಹೊರಳಿಸುತ್ತ ಜನರ ಮುಖ ಹುಷಾರಾಗಿ ಗಮನಿಸುತಿದ್ದ. 

ಔಲ್‌ನೊಳಕ್ಕೆ ಪ್ರವೇಶ ಮಾಡಿದ ಹಾಜಿ ಮುರಾದ್ ಹಳ್ಳಿಯ ಚೌಕಕ್ಕೆ ಹೋಗುವ ರಸ್ತೆ ಹಿಡಿಯಲಿಲ್ಲ. ಎಡಕ್ಕೆ ತಿರುಗಿ, ಕಿರು ಬೀದಿಯಲ್ಲಿ ಸಾಗಿ ಎರಡನೆಯ ಶಕ್ಲ್ಯಾದ ಮುಂದೆ ನಿಂತ. ಆ ಶಕ್ಲ್ಯಾ ಮನೆಯನ್ನು ಬೆಟ್ಟದ ಬದಿಗೆ ಹೊಂದಿದ ಹಾಗೆ ಕಟ್ಟಿದ್ದರು. ಹಾಜಿ ಮುರಾದ್ ನಿಂತ, ಸುತ್ತಲೂ ನೋಡಿದ. ಮುಂದಿನ ಕೈಸಾಲೆಯಲ್ಲಿ ಯಾರೂ ಇರಲಿಲ್ಲ. ಶಕ್ಲ್ಯಾದ ಚಾವಣಿಯ ಮೇಲೆ, ಹೊಸದಾಗಿ ಗಿಲಾವು ಮಾಡಿದ್ದ ಮಣ್ಣಿನ ಚಿಮಣಿಯ ಹಿಂದೆ, ಕುರಿಯ ಚರ್ಮ ಹೊದ್ದವನೊಬ್ಬ ಮಲಗಿದ್ದ. ಚರ್ಮದ ಪಟ್ಟಿಗಳನ್ನು ಹೆಣೆದು ಮಾಡಿದ್ದ ಚಾವಟಿಯ ಹಿಡಿಯಿಂದ ಹಾಜಿ ಮುರಾದ್ ಅವನನ್ನು ಮೆಲ್ಲಗೆ ತಟ್ಟಿ, ಲೊಚಗುಟ್ಟಿ ಸದ್ದು ಮಾಡಿದ. ಕುರಿಯ ಚರ್ಮದ ಹೊದಿಕೆಯನ್ನು ಸರಿಸಿ ಎದ್ದವನೊಬ್ಬ ಮುದುಕ. ಜಿಡ್ಡು ಜಿಡ್ಡಾದ ಬೆಶ್ಮೆಟ್ ಬನೀನು, ರಾತ್ರಿಯ ಟೋಪಿ ತೊಟ್ಟು ಮಲಗಿದ್ದ ಮುದುಕ. ಕೂದಲಿರದ, ವದ್ದೆಯಾದ ಕೆಂಪು ರೆಪ್ಪೆ ಪಟಪಟನೆ ಬಡಿದು ಕಣ್ಣು ತೆರೆದ.  ’ಸಲಾಮ್ ಅಲೈಕುಮ್!’ ಅನ್ನುತ್ತಾ ಹಾಜಿ ಮುರಾದ್ ಮುಖಕ್ಕೆ ಮರೆಮಾಡಿಕೊಂಡಿದ್ದ ಬಟ್ಟೆಯನ್ನು ಸರಿಸಿದ. ಆ ಮುದುಕ ಹಾಜಿ ಮುರಾದ್‌ನನ್ನು ಗುರುತು ಹಿಡಿದ. ಹಲ್ಲಿಲ್ಲದ ಬಾಯಿ ತೆರೆದು ನಗುತ್ತಾ ’ಅಲೈಕುಮ್ ಸಲಾಮ್!’ ಅನ್ನುತ್ತ, ಬಡಕಲು ಕಾಲುಗಳನ್ನು ಸಾವಕಾಶವಾಗಿ ಚಿಮಿಣಿಯ ಪಕ್ಕದಲ್ಲಿದ್ದ ಮರದ ಹಾವುಗೆಗಳಿಗೆ ತೂರಿಸಿ, ಮುದುರಿದ್ದ ಕುರಿಯ ಚರ್ಮದ ಅಂಗಿಯ ತೋಳಿಗೆ ಸಾವಕಾಶವಾಗಿ ಕೈ ತೂರಿಸಿ, ಎದ್ದು, ಚಾವಣಿಗೆ ಒರಗಿಸಿ ನಿಲ್ಲಿಸಿದ್ದ ಏಣಿಯನ್ನು ಹಿಮ್ಮುಖನಾಗಿ ಇಳಿದ. ಅಂಗಿ ತೊಡುವಾಗ, ಕೆಳಕ್ಕೆ ಇಳಿಯುವಾಗ ಬಿಸಿಲಲ್ಲಿ ಬೆಂದಿದ್ದ ಮುದುಕನ ಬಡಕಲು ಕೊರಳು ಅಲುಗುತಿತ್ತು, ಮುದುಕನ ಬೊಚ್ಚು ಬಾಯಿ ಏನೋ ಗೊಣಗುತಿತ್ತು. ನೆಲಕ್ಕೆ ಕಾಲಿಟ್ಟ ತಕ್ಷಣ ಅವನು ಹಾಜಿ ಮುರಾದನ ಕುದುರೆಯ ಲಗಾಮು ಮುಟ್ಟಿದ, ಕಾಲು ಮುಟ್ಟಿ ನಮಸ್ಕಾರ ಮಾಡುವವನ ಹಾಗೆ ಬಲಗಾಲಿನ ಹಾಜಿ ಮುರಾದ್‌ನ ರಿಕಾಪು ಮುಟ್ಟಿದ. ತಕ್ಷಣವೇ ಹಾಜಿ ಮುರಾದ್‌ನೊಡನೆ ಬಂದಿದ್ದ ಸದೃಢನಾದ, ಚುರುಕಾದ ಮುರೀದ್ ತನ್ನ ಕುದುರೆ ಇಳಿದು, ಪಕ್ಕಕ್ಕೆ ಹೋಗುವಂತೆ ಮುದುಕನಿಗೆ ಸನ್ನೆ ಮಾಡುತ್ತಾ, ತಾನು ಬಂದು ಅವನ ಜಾಗದಲ್ಲಿ ನಿಂತ. ಹಾಜಿ ಮುರಾದ್ ಕೂಡ ಇಳಿದು, ಸ್ವಲ್ಪ ಕುಂಟು ಹೆಜ್ಜೆ ಹಾಕುತ್ತ ವೆರಾಂಡದೊಳಕ್ಕೆ ಕಾಲಿಟ್ಟ. ಒಳಗಿನಿಂದ ಬಾಗಿಲಿಗೆ ಬಂದ ಹದಿನೈದು ವರ್ಷದ ಬಾಲಕ ಸ್ಲೋ ಹಣ್ಣಿನಷ್ಟು ಕಪ್ಪನೆಯ ಮಿರುಗುವ ಕಣ್ಣನ್ನು ಅರಳಿಸಿ ಹೊಸಬರನ್ನು  ನೋಡಿದ. 

’ಮಸೀದಿಗೆ ಓಡಿ ಹೋಗಿ ನಿಮ್ಮಪ್ಪನನ್ನು ಕರೆದು ಬಾ,’ ಅನ್ನುತ್ತಾ ಮುದುಕ ಶಕ್ಲ್ಯಾದ ತೆಳ್ಳನೆ ಬಾಗಿಲನ್ನು ಇನ್ನಷ್ಟು ದೊಡ್ಡದಾಗಿ ತೆರೆದು ಹಾಜಿ ಮುರಾದ್‌ನನ್ನು ಸ್ವಾಗತಿಸಿದ. 

ಹಾಜಿ ಮುರಾದ್ ತಲೆಬಾಗಿಲು ದಾಟುತಿದ್ದ ಹಾಗೆ ಹಳದಿ ಬಣ್ಣದ ತುಂಬು ತೋಳಿನ ಉದ್ದ ಸ್ಮಾಕ್ ಅಂಗಿ, ಮೊಳಕಾಲು ಮುಟ್ಟುವ ಕೆಂಪು ಬೆಶ್ಮೆತ್, ಅಗಲವಾಗಿರುವ ನೀಲಿ ಪೈಜಾಮಾ ತೊಟ್ಟ ಮಧ್ಯ ವಯಸ್ಸಿನ, ತೆಳು ಮೈಕಟ್ಟಿನ ಹೆಂಗಸೊಬ್ಬಳು ದಿಂಬು ಹಿಡಿದು ಒಳಗಿನಿಂದ ಬಂದಳು.  

ಬಂದವಳೇ, ’ನಮ್ಮ ಮನೆಗೆ ಭಾಗ್ಯ ಬಂದ ಹಾಗೆ ಬಂದಿರಿ!’ ಅನ್ನುತ್ತ ನಡು ಬಾಗಿಸಿ ವಂದಿಸಿ, ಮೆತ್ತನೆ ದಿಂಬುಗಳನ್ನು ಕೂರುವುದಕ್ಕೆಂದು ಗೋಡೆಯ ಬಳಿ ಇರಿಸಿದಳು.

’ನಿನ್ನ ಮಕ್ಕಳು ನೂರು ಕಾಲ ಬದುಕಲಿ!’ ಎಂದು ಆ ಹೆಂಗಸನ್ನು ಹರಸುತ್ತಾ ಹಾಜಿ ಮುರಾದ್ ತನ್ನ ಬುರ್ಕಾ, ಬಂದೂಕು, ಕತ್ತಿಗಳನ್ನು ಕಳಚುತ್ತ, ಅವನ್ನೆಲ್ಲ ಮುದುಕನ ಕೈಗೆ ಕೊಟ್ಟ. ಆ ಮುದುಕ ಥಳಥಳಿಸುವ ಬಿಳಿಯ ಬಣ್ಣ ಬಳಿದ ಮಣ್ಣಿನ ಗೋಡೆಯ ಮೇಲೆ, ಎರಡು ದೊಡ್ಡ ಬೇಸಿನ್‌ಗಳ ನಡುವೆ ಇದ್ದ ಆಯುಧಗಳ ಜೊತೆಗೆ ಅವನ್ನೂ ಮೊಳಗೆ ನೇತು ಹಾಕಿದ. ಮನೆಯ ಒಡೆಯನ ಆಯುಧಗಳು ಅಲ್ಲಿದ್ದವು.  

ಹಾಜಿ ಮುರಾದ್ ಬೆನ್ನ ಹಿಂದೆ, ಸೊಂಟದ ಬಳಿ ಸಿಕ್ಕಿಸಿಕೊಂಡಿದ್ದ ಪಿಸ್ತೂಲನ್ನು ಅತ್ತಿತ್ತ ಸರಿಸಿ ಸರಿಮಾಡಿಕೊಂಡು, ತನ್ನ ಸಿರ್ಕಾಸಿಯನ್ ಕೋಟನ್ನು ಎರಡೂ ಕೈಯಲ್ಲಿ ಬಿಗಿಯಾಗಿ ಎಳೆದುಕೊಂಡು ದಿಂಬಿನ ಮೇಲೆ ಕೂತ. ಬರಿಗಾಲಿನ ಮುದುಕ ಅವನ ಪಕ್ಕದಲ್ಲೇ ಕುಕ್ಕುರುಗಾಲಲಲ್ಲಿ ಕೂತು. ಕಣ್ಣು ಮುಚ್ಚಿ, ಅಂಗೈಗಳನ್ನು ಬೇಡುವಂತೆ ಜೋಡಿಸಿ ಎತ್ತಿ ಹಿಡಿದ. ಹಾಜಿ ಮುರಾದನೂ ಹಾಗೇ ಕೈ ಜೋಡಿಸಿದ. ಪ್ರಾರ್ಥನೆ ಹೇಳಿ ಆದ ಮೇಲೆ ಇಬ್ಬರೂ ಹಣೆಯಿಂದ ಗಡ್ಡದ ತುದಿಯವರೆಗೂ ತಮ್ಮ ತಮ್ಮ ಮುಖಗಳನ್ನು ಅಂಗೈಯಲ್ಲಿ ಮೆಲುವಾಗಿ ಸವರಿಕೊಂಡರು.  

ನೆ ಹಬರ್, ಏನು ಹೊಸ ಸುದ್ದಿ?’ ಹಾಜಿ ಮುರಾದ್ ಕೇಳಿದ. 

ಹಬರ್ ಯೋಕ್, ಹೊಸತೇನಿಲ್ಲ. ಜೇನು ಕೀಳಲು ಹೋಗಿದ್ದೆ, ಮಗನನ್ನು ನೋಡಬೇಕು ಅಂತ ಇವತ್ತು ಬಂದೆ. ಸುದ್ದಿ ಏನಿದ್ದರೂ ನನ್ನ ಮಗನಿಗೆ ತಿಳಿದಿರಬೇಕು,’ ಮುದುಕ ತನ್ನ ಹೊಳಪಿರದ ಕಣ್ಣಿನಿಂದ ಹಾಜಿ ಮುರಾದನ ಮುಖವನ್ನಲ್ಲ ಎದೆಯನ್ನು ದಿಟ್ಟಿಸುತ್ತ ಹೇಳಿದ. 

ಸುದ್ದಿ ಹೇಳುವುದಕ್ಕೆ ಮುದುಕನಿಗೆ ಮನಸಿಲ್ಲ ಅನ್ನುವುದು ಹಾಜಿ ಮುರಾದನಿಗೆ ತಿಳಿದು, ಒಂದಿಷ್ಟೇ ತಲೆದೂಗಿ, ಮತ್ತೇನೂ ಕೇಳದೆ ಸುಮ್ಮನಾದ.

’ಒಳ್ಳೆಯ ಸುದ್ದಿ ಏನೂ ಇಲ್ಲ. ಒಂದೇ ಸುದ್ದಿ ಏನಂದರೆ, ಮೊಲಗಳೆಲ್ಲ ಸೇರಿ ಹದ್ದನ್ನು ಓಡಿಸುವುದು ಹೇಗೆ ಅಂತ ಮಾತಾಡತಾ ಇವೆ, ಹದ್ದುಗಳು ಒಂದೊಂದೇ ಮೊಲವನ್ನ ಕಬಳಿಸತಾ ಇವೆ. ಮೊನ್ನೆ ರಶಿಯದ ನಾಯಿಗಳು ಮಿತ್ಚಿತ್ ಔಲ್‌ನಲ್ಲಿ ಕಟಾವು ಮಾಡಿದ್ದ ಹುಲ್ಲಿಗೆ ಬೆಂಕಿ ಇಟ್ಟರು. ಅವರ ಬಾಯಿಗೆ ಮಣ್ಣು ಬೀಳಲಿ’ ಮುದುಕ ಸಿಟ್ಟಿನಿಂದ ಗೊಗ್ಗರು ದನಿಯಲ್ಲಿ ಹೇಳಿದ. 

ದೃಢವಾದ ಕಾಲನ್ನು ಮಣ್ಣಿನ ನೆಲದ ಮೇಲೆ ಮೃದುವಾಗಿ ಊರುತ್ತ ಹಾಜಿ ಮುರಾದ್‌ನ ಮುರೀದ್ ಒಳಕ್ಕೆ ಬಂದ. 

ತನ್ನ ಕಠಾರಿ ಜೊತೆಗೆ ಪಿಸ್ತೂಲು ಮಾತ್ರ ಉಳಿಸಿಕೊಂಡು ಹಾಜಿ ಮುರಾದ್‌ನ ಬುರ್ಕ, ಬಂದೂಕು, ಕತ್ತಿಗಳ ಹಾಗೆಯೇ ತನ್ನವನ್ನೂ ಗೋಡೆಗೆ ನೇತು ಹಾಕಿದ.

ಹೊಸಬನನ್ನು ತೋರುತ್ತ, ’ಯಾರವನು?’ ಎಂದು ಮುದುಕ ಕೇಳಿದ.

’ನನ್ನ ಮುರೀದ್, ಎಲ್ದಾರ್ ಅಂತ ಅವನ ಹೆಸರು,’ ಅಂದ ಹಾಜಿ ಮುರಾದ್.

’ಒಳ್ಳೆಯದು,’ ಅಂದು, ಹಾಜಿ ಮುರಾದ್‌ನ ಪಕ್ಕದಲ್ಲಿ ಕೂರುವಂತೆ ಅವನಿಗೆ ಸನ್ನೆ ಮಾಡಿದ ಮುದುಕ. ಎಲ್ದಾರ್ ಚಕ್ಕಂಬಕ್ಕಲು ಹಾಕಿ ಕೂತು ತನ್ನ ಟಗರು ಕಣ್ಣಿನ ನೋಟವನ್ನು ಮುದುಕನ ಮೇಲೇ ಇರಿಸಿದ್ದ. ಮುದುಕ ಈಗ ಮಾತು ಶುರು ಮಾಡಿದ್ದ. ಹದಿನೈದು ದಿನದ ಹಿಂದೆ ತಮ್ಮ ಕಡೆಯ ಧೈರ್ಯವಂತರು ಹೇಗೆ ಇಬ್ಬರು ರಶಿಯನ್ ಸೈನಿಕರ ಸೆರೆ ಹಿಡಿದರು, ಅವರಲ್ಲೊಬ್ಬನನ್ನು ಕೊಂದರು ಇನ್ನೊಬ್ಬನನ್ನು ವೆದೆನೋ ಊರಿನಲ್ಲಿರುವ ಶಮೀಲ್‌ಗೆ ಒಪ್ಪಿಸಿದರು ಅನ್ನುವುದನ್ನು ಹೇಳಿದ.

ಹಾಜಿ ಮುರಾದ್ ಮನಸನ್ನೆಲ್ಲೋ ಬಿಟ್ಟು ಅವನ ಮಾತು ಕೇಳುತಿದ್ದ. ಬಾಗಿಲತ್ತ ನೋಡುತ್ತ, ಹೊರಗಿನ ದನಿ ಕೇಳಿಸಿಕೊಳ್ಳುತಿದ್ದ. ವೆರಾಂಡದ ಮೆಟ್ಟಿಲ ಮೇಲೆ ಹೆಜ್ಜೆಯ ಸದ್ದು ಕೇಳಿಸಿತು. ಬಾಗಿಲು ಕಿರುಗುಡುತ್ತ ತೆರೆದುಕೊಂಡಿತು. ಮನೆಯ ಯಜಮಾನ, ಅವನ ಹೆಸರು ಸಾದೋ, ಒಳಕ್ಕೆ ಬಂದ. 

ಅವನು ಅಂದಾಜು ನಲವತ್ತರ ಪ್ರಾಯದವನು. ಸಣ್ಣ ಗಡ್ಡ, ಉದ್ದ ಮೂಗು, ಅವನ ಕಣ್ಣು ಕೂಡ ಕಪ್ಪಗಿದ್ದರೂ ಅವನನ್ನು ಮನೆಗೆ ಕರೆಯಲು ಹೋಗಿ ಈಗ ತಂದೆಯ ಜೊತೆಗೇ ಬಂದು ಬಾಗಿಲ ಹತ್ತಿರ ಕೂತ ಹುಡುಗನ ಕಣ್ಣಿನಷ್ಟು ಹೊಳಪಿರಲಿಲ್ಲ. ಮನೆಯ ದಣಿ ತನ್ನ ಮರದ ಚಪ್ಪಲಿಯನ್ನು ಬಾಗಿಲಲ್ಲೇ ಬಿಟ್ಟು ತಲೆಯ ಮೇಲಿದ್ದ ಹಳೆಯ ಟೊಪ್ಪಿಯನ್ನು ಇನ್ನಷ್ಟು ಹಿಂದೆ ಸರಿಸಿ (ಕ್ಷೌರ ಮಾಡಿಸಿ ಬಹಳ ದಿನಗಳಾಗಿದ್ದರಿಂದ ಆಗಲೇ ಕೂದಲು ಬೆಳೆದಿತ್ತು) ಹಾಜಿ ಮುರಾದ್‍ನ ಮುಂದೆ ಕುಳಿತ. 

ಅವನೂ ಬೊಗಸೆಮಾಡಿ, ಪ್ರಾರ್ಥನೆ ಸಲ್ಲಿಸಿ, ಮುದುಕ ಮಾಡಿದ್ದ ಹಾಗೆಯೇ ಕೈಯಲ್ಲಿ ಮುಖವನ್ನು ನೇವರಿಸಿಕೊಂಡು ಆಮೇಲೆ ಮಾತಿಗೆ ಶುರು ಮಾಡಿದ. ಶಮೀಲ್ ಆಜ್ಞೆ ಮಾಡಿದ್ದಾನೆ, ಹಾಜಿ ಮುರಾದ್‌ನನ್ನು ಜೀವಂತವಾಗಿಯಾದರೂ ಸರಿ, ಹೆಣವಾಗಿಯಾದರೂ ಸರಿ, ಹಿಡಿದು ತಂದೊಪ್ಪಿಸಬೇಕು ಅಂದಿದಾನೆ. ಶಮೀಲ್ ಕಳಿಸಿದ್ದ ದೂತ ನಿನ್ನೆ ತಾನೇ ವಾಪಸು ಹೋದ. ಜನಕ್ಕೆ ಶಮೀಲ್‌ನ ಆಜ್ಞೆ ಮೀರುವ ಧೈರ್ಯವಿಲ್ಲ, ಅದಕ್ಕೇ ಹುಷಾರಾಗಿರಬೇಕು ಎಂದು ಹೇಳಿದ. 

’ನಾನು ಜೀವಂತ ಇರುವವರೆಗೂ ನಮ್ಮ ಮನೆಯಲ್ಲಿ ನನ್ನ ಕುನ್ಯಾಕ್‌ನನ್ನು, ಪ್ರೀತಿಯ ಗೆಳೆಯನನ್ನು ಯಾರೂ ನೋಯಿಸಲು ಆಗುವುದಿಲ್ಲ. ಹೊರಗೆ, ಹೊಲ ಗದ್ದೆಗಳನ್ನು ದಾಟುವಾಗ ಏನು ಗತಿ, ಅದನ್ನ ಯೋಚನೆ ಮಾಡಿ ನೋಡಬೇಕು,’ ಅಂದ ಸಾದೊ.

ಹಾಜಿ ಮುರಾದ್ ಅವನ ಮಾತನ್ನು ಗಮನವಿಟ್ಟು ಕೇಳಿದ, ಒಪ್ಪಿಗೆ ತೋರುವ ಹಾಗೆ ತಲೆದೂಗಿದ.

’ಸರಿ. ನಾವೀಗ ರಶಿಯದವರಿಗೆ ಕಾಗದ ಕಳಿಸಬೇಕು. ನನ್ನ ಮುರೀದ್ ಹೋಗುತಾನೆ. ಅವನಿಗೆ ದಾರಿ ತೋರಿಸುವವರು ಯಾರಾದರೂ ಬೇಕು,’ ಅಂದ ಹಾಜಿ ಮುರಾದ್.

’ನನ್ನ ತಮ್ಮ ಬಾತಾನ ಕಳಿಸುತೇನೆ,’ ಅಂದ ಸಾದೋ. ಮಗನತ್ತ ತಿರುಗಿ, ’ಹೋಗು, ಬಾತಾನನ್ನ ಕರೆದುಕೊಂಡು ಬಾ,’ ಅಂದ.

ಸ್ಪ್ರಿಂಗಿನ ಮೇಲಿದ್ದನೋ ಅನ್ನುವ ಹಾಗೆ ಹುಡುಗ ತಟ್ಟನೆ ಚಿಮ್ಮಿ ಎದ್ದು, ಜೋರಾಗಿ ಕೈ ಬೀಸುತ್ತಾ ಹೊರಟುಬಿಟ್ಟ. ಹತ್ತು ನಿಮಿಷ ಕಳೆಯುವಷ್ಟರಲ್ಲಿ ವಾಪಸು ಬಂದ. ಜೊತೆಯಲ್ಲಿ ಸ್ವಲ್ಪ ಗಿಡ್ಡನಾದರೂ ಹುರಿಕಟ್ಟಿನ ಮೈಯಿದ್ದ, ಬಿಸಿಲಲ್ಲಿ ಬೆಂದು ಕಪ್ಪಾಗಿದ್ದ, ಹರಿದು ಚಿಂದಿಯಾದ ಸರ್ಕಾಸಿಯನ್ ಕೋಟು, ಮುದುರಿದ ಕಪ್ಪು ಪ್ಯಾಂಟು ತೊಟ್ಟಿದ್ದ ಚೆಚೆನ್ ಮನುಷ್ಯನನ್ನು ಕರೆದುಕೊಂಡು ಬಂದಿದ್ದ. 

ಹೊಸಬನನ್ನು ಸ್ವಾಗತಿಸಿದ ಹಾಜಿ ಮುರಾದ್, ಸುಮ್ಮನೆ ಮಾತು ವ್ಯರ್ಥ ಮಾಡದೆ- ‘ನನ್ನ ಮುರೀದನನ್ನು ರಶಿಯದವರ ಹತ್ತಿರ ಕರಕೊಂಡು ಹೋಗುತ್ತೀಯಾ?’ ಅಂತ ಕೇಳಿದ.

’ಆಗತ್ತೆ. ಖಂಡಿತ ಕರಕೊಂಡು ಹೋಗತೇನೆ. ಚೆಚೆನ್ಯಾದ ಬೇರೆಯವರನ್ನ ಕೇಳಿದರೆ ನಿಮಗೆ ಇಷ್ಟವಾಗುವ ಹಾಗೆ ಆಣೆ ಹಾಕುವವರು ಬೇಕಾದಷ್ಟು ಸಿಗುತಾರೆ. ಹಾಗೆ ಮಾಡುತೇನೆ, ಹೀಗೆ ಮಾಡುತೇನೆ ಅನ್ನುತಾರೆ, ಏನೂ ಮಾಡಲ್ಲ. ನಾನು ಹಾಗಲ್ಲ!’ ಅಂದ.

’ಸರಿ. ನಿನಗೆ ಮೂರು ಕೊಡುತ್ತೇನೆ,’ ಅನ್ನುತ್ತ ಮೂರು ಬೆರಳು ತೋರಿದ. ಅರ್ಥವಾಯಿತು ಅನ್ನುವ ಹಾಗೆ ಬಾತಾ ತಲೆದೂಗಿದ. ಅವನಿಗೆ ದುಡ್ಡು ಮುಖ್ಯವಾಗಿರಲಿಲ್ಲ, ಹಾಜಿ ಮುರಾದನಿಗೆ ಸೇವೆ ಸಲ್ಲಿಸುವುದೇ ಗೌರವ ಎಂದು ತಿಳಿದಿದ್ದವನು ಅವನು. ಬೆಟ್ಟಗಳಲ್ಲಿ ವಾಸ ಮಾಡುವ ಎಲ್ಲರಿಗೂ ಹಾಜಿ ಮುರಾದ್‌ನ ಪರಿಚಯವಿದೆ, ಅವನು ರಶಿಯನ್ ಹಂದಿಗಳನ್ನು ಹೇಗೆ ಕೊಂದ ಅನ್ನುವ ಕಥೆಗಳು ತಿಳಿದಿವೆ.

’ಸರಿ, ಹಗ್ಗ ಉದ್ದ ಇರಬೇಕು, ಮಾತು ಗಿಡ್ಡ ಇರಬೇಕು,’ ಅಂದ ಹಾಜಿ ಮುರಾದ್.

’ಸರಿ, ನಾಲಗೆ ಕಚ್ಚಿಕೊಂಡಿರತೇನೆ,’ ಅಂದ ಬಾತಾ.

’ಆರ್ಗನ್ ಹೊಳೆ ತಿರುಗುತ್ತಲ್ಲ, ಅದೇ…ಅಲ್ಲಿ… ಶಿಖರದ ಎದುರಿಗೆ, ಕಾಡಿನಲ್ಲಿ ಬ್ಯಾಣದಲ್ಲಿ ಎರಡು ಬಣವೆ ಇವೆ, ಆ ಜಾಗ-ಗೊತ್ತಾ ನಿನಗೆ?’

’ಗೊತ್ತು.’

’ಅಲ್ಲಿ ನಮ್ಮ ಕಡೆಯ ನಾಲ್ಕು ಜನ ಕುದುರೆ ಸವಾರರು ನನಗಾಗಿ ಕಾಯುತಾ ಇರತಾರೆ,’ ಅಂದ ಹಾಜಿ ಮುರಾದ್.

’ಹ್ಞೂಂ,’ ಅನ್ನುತ್ತ ತಲೆ ಹಾಕಿದ ಬಾತಾ. 

’ಖಾನ್ ಮಹಮ ಯಾರು ಅಂತ ಕೇಳು. ಏನು ಮಾಡಬೇಕು, ಏನು ಹೇಳಬೇಕು ಅವನಿಗೆ ಗೊತ್ತಿದೆ. ಅವನನ್ನ ರಶಿಯದ ಕಮಾಂಡರ್ ಪ್ರಿನ್ಸ್ ವರಾನ್ತಸೋವ್ ಹತ್ತಿರ ಕರಕೊಂಡು ಹೋಗುತ್ತೀಯಾ?’

’ಕರಕೊಂಡು ಹೋಗತೇನೆ.’

’ಕರಕೊಂಡು ಹೋಗಿ, ಮತ್ತೆ ಕಾಡಿಗೆ ವಾಪಸ್ಸು ಕರಕೊಂಡು ಬರಬೇಕು, ಆಗತ್ತಾ?’

’ಆಗತ್ತೆ.’

’ನಾನೂ ಆ ಹೊತ್ತಿಗೆ ಅಲ್ಲಿರತೇನೆ.’

ಬಾತಾ ಎದ್ದು, ಎದೆಯ ಮೇಲೆ ಕೈ ಇಟ್ಟು,  ‘ಮಾಡತೇನೆ ಈ ಕೆಲಸ,’ ಅಂದು, ಹೊರಟು ಹೋದ.

ಬಾತಾ ಹೋದ ಮೇಲೆ ಹಾಜಿ ಮುರಾದ್ ಮನೆಯ ದಣಿಯತ್ತ ತಿರುಗಿದ.

’ಒಬ್ಬ ಆಳನ್ನ ಚೆಖೀಗೆ ಕೂಡ ಕಳಿಸಬೇಕು,’ ಎಂದು ಮಾತು ಶುರು ಮಾಡಿ, ತನ್ನ ಸರ್ಕಾಸಿಯನ್ ಕೋಟಿನ ಜೇಬಿಗೆ ಕೈ ಹಾಕಿ ತೋಟಾಗಳಿದ್ದ ಚೀಲವನ್ನು ಎತ್ತಿಕೊಂಡ. ಮನೆಯ ಇಬ್ಬರು ಹೆಂಗಸರು ಬಂದದ್ದು ಕಂಡು ಅದನ್ನು ಹಾಗೇ ಜೇಬಿನೊಳಗೇ ಬಿಟ್ಟ.

ಬಂದಿದ್ದವರಲ್ಲಿ ಒಬ್ಬಳು ಮನೆಯ ದಣಿ ಸದೋನ ಹೆಂಡತಿ. ಮಧ್ಯ ವಯಸಿನ, ತೆಳ್ಳನೆ ಮೈಕಟ್ಟಿನ ಹೆಂಗಸು. ಹಾಜಿ ಮುರಾದ್ ಬಂದಾಗ ಅವನಿಗೆ ದಿಂಬು ತಂದುಕೊಟ್ಟಿದ್ದವಳು ಇವಳೇ. ಇನ್ನೊಬ್ಬಳು ಯುವತಿ. ಕೆಂಪು ಸಲ್ವಾರ್, ಹಸಿರು ಬೆಶ್ಮೆತ್ ತೊಟ್ಟಿದ್ದಳು, ಬೆಳ್ಳಿಯ ಕಾಸುಗಳ ಕುಸುರಿ ಕೆಲಸ ಅವಳ ಇಡೀ ಅಂಗಿಯನ್ನು ಆವರಿಸಿತ್ತು. ತಕ್ಕ ಮಟ್ಟಿಗೆ ಉದ್ದವಾಗಿದ್ದ ದಪ್ಪ ಕಪ್ಪು ಜಡೆ ತೆಳ್ಳನೆಯ ಬೆನ್ನಿನ ಮಧ್ಯದಲ್ಲಿ ಜೋಲುತಿತ್ತು. ಜಡೆಯ ತುದಿಗೆ ಬೆಳ್ಳಿಯ ರೂಬಲ್ ನಾಣ್ಯ ಕಟ್ಟಿದ್ದಳು. ಅಪ್ಪನ ಕಣ್ಣಿನ ಹಾಗೆ, ತಮ್ಮನ ಕಣ್ಣಿನ ಹಾಗೆ ಅವಳ ಕಣ್ಣೂ ಕಪ್ಪು. ಪ್ರಾಯದ ಮುಖದಲ್ಲಿ ಮಿನುಗುತಿದ್ದ ಕಣ್ಣು ನಿಖರವಾಗಿರಲು ಪ್ರಯತ್ನಪಡುತಿದ್ದವು. ಮನೆಗೆ ಬಂದಿದ್ದ ಅತಿಥಿಗಳತ್ತ ಅವಳು ನೋಡದಿದ್ದರೂ ಯಾರು ಎಲ್ಲಿದ್ದಾರೆ ಅನ್ನುವುದು ಅವಳ ಮನಸಿಗೆ ಬಂದಿತ್ತು. 

ಸಾದೋನ ಹೆಂಡತಿ ಗಿಡ್ಡನೆಯ ದುಂಡು ಮೇಜು ತಂದಿರಿಸಿ, ಅದರ ಮೇಲೆ ಚಹಾ, ಬೆಣ್ಣೆ ಬಳಿದ ರೊಟ್ಟಿ, ಗಿಣ್ಣ, ಜೇನಿನಲ್ಲಿ ಅದ್ದಿ ಸುರುಳಿ ಸುತಿದ್ದ ಚುರೆಕ್ ಬ್ರೆಡ್ಡು ಜೋಡಿಸಿದಳು. ಹುಡುಗಿ ಒಂದು ಬೋಗುಣಿ, ನೀರಿನ ಹೂಜಿ, ಟವೆಲು ತಂದಿದ್ದಳು. 

ಹೆಂಗಸರು ಆಭರಣಗಳನ್ನು ಕಿಣಿಕಿಣಿಸುತ್ತ, ಮೆತ್ತನೆ ಚಪ್ಪಲಿ ತೊಟ್ಟ ಕಾಲಿನಲ್ಲಿ ಮೃದುವಾಗಿ ಹೆಜ್ಜೆ ಇಡುತ್ತ, ತಾವು ತಂದ ಊಟವನ್ನು ಜೋಡಿಸಿ ಮುಗಿಸುವವರೆಗೂ ಹಾಜಿ ಮುರಾದ್ ಮೌನವಾಗಿ ಕೂತಿದ್ದ. ಚಕ್ಕಂಬಕ್ಕಲ ಹಾಕಿ ಕೂತಿದ್ದ. ಹೆಂಗಸರು ಇರುವಷ್ಟೂ ಹೊತ್ತು ಎಲ್ದಾರ್ ವಿಗ್ರಹದ ಹಾಗೆ ನಿಶ್ಚಲವಾಗಿ ಕೂತು ತನ್ನ ಕಾಲನ್ನೇ ನೋಡಿಕೊಳ್ಳುತಿದ್ದ. ಅವರು ಹೋಗಿ, ಅವರ ಹೆಜ್ಜೆ ಸದ್ದೂ ಬಾಗಿಲ ಹಿಂದೆ ಮರೆಯಾಗಿ ಕೇಳದ ಹಾಗಾದಮೇಲಷ್ಟೇ ನಿಟ್ಟುಸಿರು ಬಿಟ್ಟ. 

ಹಾಜಿ ಮುರಾದ್ ತನ್ನ ಸಿರ್ಕಾಸಿಯನ್ ಕೋಟಿನ ಜೇಬಿನಲ್ಲಿದ್ದ ಪುಟ್ಟ ಚೀಲದಿಂದ ಬುಲೆಟ್ಟನ್ನು ತೆಗೆದು, ಅದರ ಅಡಿಯಲ್ಲಿದ್ದ ಸುರುಳಿ ಸುತ್ತಿದ್ದ ಚೀಟಿಯನ್ನು ಎತ್ತಿಕೊಂಡು- ‘ನನ್ನ ಮಗನ ಕೈಗೆ ಕೊಡಬೇಕು,’ ಅಂದ. 

’ನಿಮ್ಮ ಮಗ ಯಾರಿಗೆ ಉತ್ತರ ತಲುಪಿಸಬೇಕು?’

’ನಿಮಗೆ, ನೀವು ಅದನ್ನ ನನಗೆ ತಿಳಿಸಬೇಕು.’

’ಸರಿ,’ ಅನ್ನುತ್ತ ಸಾದೋ ಚೀಟಿಯ ಸುರುಳಿಯನ್ನು ತನ್ನ ಕೋಟಿನ ಬುಲೆಟ್ ಜೇಬಿನಲ್ಲಿ ಇರಿಸಿಕೊಂಡ. ಆಮೇಲೆ ಹೂಜಿಯನ್ನೂ ಬೋಗುಣಿಯನ್ನೂ ಹಾಜಿ ಮುರಾದ್‌ನತ್ತ ಸರಿಸಿದ. 

ಹಾಜಿ ಮುರಾದ್ ತನ್ನ ಬೆಶ್ಮೆತ್‌ನ ತೋಳು ಮೇಲೆ ಮಡಿಸಿಕೊಂಡು ಮಾಂಸಲವಾದ ಕೈಗಳನ್ನು ಮುಂದೆ ಚಾಚಿ, ಸಾದೋ ಹೂಜಿಯಿಂದ ಬಗ್ಗಿಸಿದ ನೀರಿಗೆ ಒಡ್ಡಿದ. ಸ್ವಚ್ಛವಾದ ಟವೆಲಿನಲ್ಲಿ ಕೈ ಒರೆಸಿಕೊಂಡ. ಮೇಜಿನ ಮುಂದೆ ಕುಳಿತ. ಎಲ್ದಾರ್ ಕೂಡ ಹಾಗೇ ಮಾಡಿದ. ಮನೆಗೆ ಬಂದಿದ್ದ ಅತಿಥಿಗಳು ಊಟಮಾಡುತಿರುವಾಗ ಸಾದೋ ಅವರೆದುರು ಕುಳಿತು ಅವರು ಬಂದದ್ದಕ್ಕೆ ಕೃತಜ್ಞ ಎಂದು ಮತ್ತೆ ಮತ್ತೆ ಹೇಳಿದ. ಬಾಗಿಲಲ್ಲಿ ಕೂತಿದ್ದ ಹುಡುಗ ಹಾಜಿ ಮುರಾದನಿಂದ ತನ್ನ ದೃಷ್ಟಿ ಕದಲಿಸಿರಲೇ ಇಲ್ಲ. ಅಪ್ಪನ ಕೃತಜ್ಞತೆಯ ಮಾತಿಗೆ ತನ್ನ ಒಪ್ಪಿಗೆ ಸೇರಿಸುವವನ ಹಾಗೆ ನಗುತ್ತ ಕೂತಿದ್ದ. 

ಹಾಜಿ ಮುರಾದ್ ಇಡೀ ಒಂದು ದಿನ ಏನೂ ತಿಂದಿರದಿದ್ದರೂ ಈಗ ಸ್ವಲ್ಪ ಬ್ರೆಡ್ಡು, ಗಿಣ್ಣನ್ನು ಮಾತ್ರ ತಿಂದ. ಆಮೇಲೆ ಪುಟ್ಟ ಚಾಕುವಿನಿಂದ ಬ್ರೆಡ್ ತುಂಡಿನ ಮೇಲೆ ಜೇನು ತುಪ್ಪ ಸವರಿದ. 

ಹಾಜಿ ಮುರಾದ್ ಜೇನು ತೆಗೆದುಕೊಂಡದ್ದು ನೋಡಿ ಖುಷಿಪಟ್ಟ ಮುದುಕ,  ‘ನಮ್ಮ ಜೇನು ಬಹಳ ಚೆನ್ನಾಗಿದೆ. ಈ ವರ್ಷ ಒಳ್ಳೆಯ ಜೇನು ತುಂಬ ಸಿಕ್ಕಿದೆ,’ ಅಂದ. 

’ಥ್ಯಾಂಕ್ಸ್,’ ಎಂದು ಹೇಳಿದ ಹಾಜಿ ಮುರಾದ್ ಟೇಬಲ್ಲಿನಿಂದ ಎದ್ದ. ಇನ್ನೂ ಉಣ್ಣುವ ಮನಸಿದ್ದರೂ ಎಲ್ದಾರ್ ಕೂಡ ತನ್ನ ಒಡೆಯನ ಮಾದರಿ ಅನುಸರಿಸುತ್ತ ತಾನೂ ಎದ್ದ. ಕೈ ತೊಳೆಯಲು ಹಾಜಿ ಮುರಾದ್‌ನಿಗೆ ಬೋಗುಣಿ, ನೀರಿನ ಹೂಜಿ ತಂದುಕೊಟ್ಟ. 

ಹಾಜಿ ಮುರಾದ್‌ನನ್ನು ಮನೆಗೆ ಸೇರಿಸಿಕೊಂಡು ತನ್ನ ಜೀವ ಅಪಾಯಕ್ಕೆ ಒಡ್ಡಿದ್ದೇನೆ ಅನ್ನುವುದು ಸಾದೋನಿಗೆ ತಿಳಿದಿತ್ತು. ಶಮೀಲ್‌ನ ಜೊತೆಯಲ್ಲಿ ಜಗಳವಾಗಿತ್ತು. ಇಡೀ ಚೆಚೆನ್ಯಾದಲ್ಲಿ ಯಾರೇ ಆದರೂ ಹಾಜಿ ಮುರಾದನಿಗೆ ಆಶ್ರಯ ನೀಡಿದರೆ ಮರಣ ದಂಡನೆ ವಿಧಿಸುತ್ತೇನೆ ಎಂದು ಶಮೀಲ್ ಆಜ್ಞೆ ಮಾಡಿದ್ದ. ಹಾಜಿ ಮುರಾದ್ ತನ್ನ ಮನೆಯಲ್ಲಿರುವುದು ಯಾವುದೇ ಕ್ಷಣದಲ್ಲಿ ಔಲ್‌ನ ಜನಕ್ಕೆ ತಿಳಿದೀತು, ಅವನನ್ನು ತಕ್ಷಣವೇ ಹಿಡಿದು ಒಪ್ಪಿಸುವುದಕ್ಕೆ ಜನ ಬಲವಂತ ಮಾಡಿಯಾರು ಅನ್ನುವುದೂ ಗೊತ್ತಿತ್ತು. ಇದರಿಂದ ಸಾದೋಗೆ ಭಯವಾಗಿರಲಿಲ್ಲ, ಬದಲಾಗಿ ಪ್ರಾಣ ಕೊಟ್ಟಾದರೂ ಅತಿಥಿಯನ್ನು ಕಾಪಾಡುವುದು ನನ್ನ ಕರ್ತವ್ಯ, ನಾನು ನನ್ನ ಕರ್ತವ್ಯ ಮಾಡುತಿದ್ದೇನೆ ಎಂಬ ಹೆಮ್ಮೆಯೂ ಸಂತೋಷವೂ ಅವನಿಗಿದ್ದವು. 

’ನೀನು ನನ್ನ ಮನೆಯಲ್ಲಿರುವವರೆಗೆ, ನನ್ನ ತಲೆ ನನ್ನ ಕತ್ತಿನ ಮೇಲೆ ಇರುವವರೆಗೆ ಯಾರೂ ನಿನಗೇನೂ ಮಾಡಲಾರರು,’ ಎಂದು ಅವನು ಮತ್ತೊಂದು ಬಾರಿ ಹಾಜಿ ಮುರಾದನಿಗೆ ಹೇಳಿದ.

ಹಾಜಿ ಮುರಾದ್ ಅವನ ಹೊಳೆಯುವ ಕಣ್ಣು ನೋಡಿದ, ಅವನು ಹೇಳುವುದು ನಿಜವೆಂದು ಮನಸಿಗೆ ಅನ್ನಿಸಿತು.

ಅವನಿಗೆ ಕೃತಜ್ಞತೆ ಸಲ್ಲಿಸುವ ಹಾಗೆ ಎದೆಯ ಮೇಲೆ ಕೈ ಇರಿಸಿಕೊಂಡು, ’ಬಹಳ ಕಾಲ ಸಂತೋಷವಾಗಿ ಬದುಕಿ ನೀವು!’ ಎಂದು ಹರಸಿದ.  

ಅತಿಥಿಗಳಿದ್ದ ಕೋಣೆಯ ಕಿಟಕಿ, ಬಾಗಿಲುಗಳನ್ನು ಭದ್ರಮಾಡಿ, ಮೂಲೆಯಲ್ಲಿದ್ದ ಬೆಂಕಿಗೆ ಒಂದೆರಡು ಸೌದೆ ತುಂಡು ಹಾಕಿ, ಸಾದೋ ಬಹಳ ಉಜ್ವಲವಾದ ಸಂತೋಷದ ಮೂಡಿನಲ್ಲಿ ತನ್ನ ಮನೆಯವರಿದ್ದ ಕೋಣೆಗೆ ನಡೆದ. ಮನೆಯ ಹೆಂಗಸರು ಇನ್ನೂ ಮಲಗಿರಲಿಲ್ಲ. ಅತಿಥಿಗಳ ಕೋಣೆಯಲ್ಲಿ ವಸತಿ ಮಾಡಿದ್ದವರಿಂದ ಏನೇನು ಅಪಾಯ ಒದಗಬಹುದು ಎಂದು ಮಾತಾಡಿಕೊಳ್ಳುತ್ತಿದ್ದರು. 

| ಮುಂದುವರೆಯುವುದು |

‍ಲೇಖಕರು Admin

October 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: