ಕನ್ನಡ ವಿಕಿ ಲೋಕದಲ್ಲೊಂದು ಸುತ್ತು

ಕನ್ನಡ ವಿಕಿಪೀಡಿಯ ಸಮುದಾಯ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ

ಕನ್ನಡದ ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ ಜೂನ್ ೨೦೦೩ರಲ್ಲಿ ಪ್ರಾರಂಭವಾಯಿತು. ಅಂದರೆ ಇದು ಕನ್ನಡ ವಿಕಿಪೀಡಿಯದ ೧೩ನೆಯ ವರ್ಷ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆಯನ್ನು ಮಾಡುತ್ತಿದೆ.

wikipedia2

ಕನ್ನಡ ವಿಕಿಪೀಡಿಯ ಬಗ್ಗೆ

Kannada Wikipedia 13th Anniversary Invitationಎಲ್ಲ ವಿಕಿಪೀಡಿಯಗಳಂತೆ ಕನ್ನಡ ವಿಕಿಪೀಡಿಯವೂ ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು.

ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ. ನೀವು ಲೇಖನ ಬರೆದು “ಪುಟವನ್ನು ಉಳಿಸಿ” ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಲೇಖನ ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾಗುತ್ತದೆ. ಪ್ರಪಂಚಾದ್ಯಂತ ಹಬ್ಬಿರುವ ಕನ್ನಡಿಗರಿಗೆ ಅದು ಕ್ಷಣಮಾತ್ರದಲ್ಲಿ ದೊರೆಯುವಂತಾಗುತ್ತದೆ.

ವಿಕಿಪೀಡಿಯ ನಾನ್ ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.

ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.

wikipedia2

ಹದಿಮೂರನೆಯ ವರ್ಷಾಚರಣೆ – ಸಂಪಾದನೋತ್ಸವಗಳು

ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆಯನ್ನು ಕೇವಲ ಒಂದು ದಿನದ ಕಾರ್ಯಕ್ರಮವನ್ನಾಗಿಸದೆ ವರ್ಷ ಪೂರ್ತಿ ನಡೆಯುವ ಕಾರ್ಯಕ್ರಮವಾಗಿ ಆಚರಿಸಲು ಕನ್ನಡ ವಿಕಿಪೀಡಿಯ ಸಮುದಾಯ ನಿರ್ಧರಿಸಿ ಅದರಂತೆ ಚಟುವಟಿಕೆಗಳನ್ನು ನಡೆಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ ವಿಷಯಾಧಾರಿತ ಸಂಪಾದನೋತ್ಸವಗಳನ್ನು ಆಯೋಜಿಸಿ ನಡೆಸಲಾಗಿತ್ತು. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:-

wikipedia3೧. ಮಂಗಳೂರು: ಡಿಸೆಂಬರ್ ೧೧,೧೨ ಮತ್ತು ೧೩, ೨೦೧೫ರಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಮಹಿಳೆಯರಿಂದ ಕರಾವಳಿ ಕರ್ನಾಟಕದ ಮಹಿಳಾ ಸಾಧಕಿಯರು ಮತ್ತು ಲೇಖಕಿಯರು ಎಂಬ ವಿಷಯದ ಬಗ್ಗೆ ಲೇಖನಗಳನ್ನು ಸೇರಿಸಲಾಗಿತ್ತು. ಒಟ್ಟು ೨೨ ಮಂದಿ ಈ ಸಂಪಾದನೋತ್ಸವದಲ್ಲಿ ಭಾಗವಹಿಸಿ ಸುಮಾರು ೪೦ ಲೇಖನಗಳನ್ನು ಸೇರಿಸಿದ್ದರು. ಈ ಸಂಪಾದನೋತ್ಸವದ ನೇತೃತ್ವವನ್ನು ಸೈಂಟ್ ಆಗ್ನೆಸ್ ಕಾಲೇಜಿನ ಡಾ. ಸಂಪೂರ್ಣಾನಣದ ಬಳ್ಕೂರು ಮತ್ತು ಡಾ. ಶೈಲಜ ಅವರು ವಹಿಸಿದ್ದರು. ಹೆಚ್ಚಿನ ವಿವರಗಳಿಗೆ ಈ ಪುಟ ನೋಡಬಹುದು – https://kn.wikipedia.org/s/1e9n

೨. ಬೆಂಗಳೂರು:  ಡಿಸೆಂಬರ್ ೧೯ ಮತ್ತು ೨೦, ೨೦೧೫ ರಂದು ಬೆಂಗಳೂರಿನ ಟೆಕ್ಸಾಸ್  ಇನ್‌ಸ್ಟ್ರುಮೆಂಟ್ಸ್ ಕಂಪೆನಿಯಲ್ಲಿ ವಿಜ್ಞಾನ ವಿಷಯಗಳ ಬಗೆಗೆ ಸಂಪಾದನೋತ್ಸವ ನಡೆಸಲಾಗಿತ್ತು. ಎರಡು ದಿನಗಳಲ್ಲಿ ೯ ಜನರಿಂದ ೩೦ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾದವು. ಈ ಸಂಪಾದನೋತ್ಸವದ ನೇತೃತ್ವವನ್ನು ಟೆಕ್ಸಾಸ್  ಇನ್‌ಸ್ಟ್ರುಮೆಂಟ್ಸ್ ಕಂಪೆನಿಯ ಡಾ. ಸಿ.ಪಿ. ರವಿ ಕುಮಾರ್ ಅವರು ವಹಿಸಿದ್ದರು. ಹೆಚ್ಚಿನ ವಿವರಗಳಿಗೆ ಈ ಪುಟವನ್ನು ನೋಡಬಹುದು – https://kn.wikipedia.org/s/1e9s

೩. ಮೈಸೂರು: ಜನವರಿ ೧೧, ೧೨ ಮತ್ತು ೧೩, ೨೦೧೬ ರಂದು ಮೈಸೂರು ವಿಶ್ವವಿದ್ಯಾಲಯದ ಪ್ರಾವೀಣ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದಲ್ಲಿ ಕನ್ನಡ ನಾಡು, ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳನ್ನೊಳಗೊಂಡ ಕನ್ನಡ ಸಾಹಿತ್ಯ ಚರಿತ್ರೆಗೆ u b pavanajaಸಂಬಂಧಿಸಿದ ಲೇಖನಗಳನ್ನು ಹಾಕುವ ಕಾರ್ಯ ನಡೆಯಿತು. ಇದಕ್ಕೆ ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೆ. ಸೌಭಾಗ್ಯವತಿ ನೇತೃತ್ವ ವಹಿಸಿದ್ದು, ೧೩ ಸಂಶೋಧನಾ ವಿದ್ಯಾರ್ಥಿಗಳು ವಿವಿಧ ಲೇಖನಗಳನ್ನು ಸೇರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಈ ಪುಟ ನೋಡಬಹುದು – https://kn.wikipedia.org/s/1eqn

೪. ಸಾಗರ: ೨೬ ಮತ್ತು ೨೭, ಜನವರಿ ೨೦೧೬ ರಂದು ಸಾಗರದಲ್ಲಿ ವಿದ್ಯಾಧರ ಚಿಪ್ಲಿ ಮತ್ತು ವಿಕಾಸ ಹೆಗಡೆಯವರ ನೇತೃತ್ವದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳ ಬಗೆಗೆ ಲೇಖನ ಸೇರಿಸುವ ಸಂಪಾದನೋತ್ಸವ ನಡೆಯಿತು. ಇದರಲ್ಲಿ ಒಟ್ಟು ೧೨ ಮಂದಿ ಭಾಗವಹಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೊಮ ಮಾಡುತ್ತಿರುವವರಿಗೆ ಉಪಯುಕ್ತವಾಗುವಂತಹ ಲೇಖನಗಳನ್ನು ಸೇರಿಸಿದರು. ಹೆಚ್ಚಿನ ವಿವರಗಳಿಗೆ ಈ ಪುಟ ನೋಡಬಹುದು – https://kn.wikipedia.org/s/1h7z

ಈ ಎಲ್ಲ ಸಂಪಾದನೋತ್ಸವಗಳಲ್ಲಿ ಹೊಸತಾಗಿ ಸಂಪಾದಕರಾದವರು ಕನ್ನಡ ವಿಕಿಪೀಡಿಯಕ್ಕೆ ಉತ್ತಮ ಅಗತ್ಯ ಲೇಖನಗಳನ್ನು ಸೇರಿಸುವ ಕೆಲಸವನ್ನು ಮುಂದುವರಿಸಿದ್ದಾರೆ.

ಜನವರಿ ೨೫ರಂದು ಸಾಗರ ಸುತ್ತಮುತ್ತ ಫೋಟೋನಡಿಗೆಯನ್ನೂ ಆಯೋಜಿಸಲಾಗಿತ್ತು. ಇದರ ನೇತೃತ್ವವನ್ನು ಪ್ರಶಸ್ತಿ ಅವರು ವಹಿಸಿದ್ದರು. ಈ ಫೋಟೋನಡಿಗೆಯಲ್ಲಿ ಸಾಗರ ಸುತ್ತಮುತ್ತ ಕೆಳದಿ, ಇಕ್ಕೇರಿ, ಕಲ್ಸಂಕ, ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ಫೋಟೋ ತೆಗೆದು ವಿಕಿಪೀಡಿಯಕ್ಕೆ ಸೇರಿಸಲಾಗಿತ್ತು. ನಂತರ ಅವುಗಳ ಬಗ್ಗೆ ಲೇಖನಗಳನ್ನೂ ಸೇರಿಸಲಾಗಿತ್ತು ಅಥವಾ ಈಗಾಗಲೇ ಇರುವ ಲೇಖನಗಳನ್ನು ಉತ್ತಮ ಪಡಿಸಲಾಗಿತ್ತು.

wikipedia2

ಹದಿಮೂರನೆಯ ವರ್ಷಾಚರಣೆ ಕಾರ್ಯಕ್ರಮ

 ಈ ಎಲ್ಲ ಕಾರ್ಯಕ್ರಮಗಳಿಗೆ ಕಳಶಪ್ರಾಯದಂತೆ ಫೆಬ್ರವರಿ ೧೪ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ವಿಕಿಪಿಡಿಯದ ಹದಿಮೂರನೆಯ ವರ್ಷಾಚರಣೆಯ ಕಾರ್ಯಕ್ರಮವಿದೆ. ಆ ದಿನ ಎಂದಿನಂತೆ ಸಭಾ ಕಾರ್ಯಕ್ರಮವಿದ್ದು ತದನಂತರ ಕನ್ನಡ ವಿಕಿಪೀಡಿಯದ ಬಗ್ಗೆ ಪ್ರಾತ್ಯಕ್ಷಿಕೆ, ಕನ್ನಡ ವಿಕಿಪೀಡಿಯನ್ನುರುಗಳ ಅನಿಸಿಕೆಗಳು, ಎಲ್ಲ ಇದ್ದು ಕೊನೆಯಲ್ಲಿ ಚಿಕ್ಕ ಸಂಪಾದನೋತ್ಸವವೂ ಇದೆ. ಇದಕ್ಕೆ ಪೂರ್ವಭಾವಿಯಾಗಿ ೧೩ರಂದು ಮಂಗಳೂರಿನ ಸಮೀಪದ ಪಿಲಿಕುಳದಲ್ಲಿರುವ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಫೋಟೋನಡಿಗೆ ನಡೆಸಿ ಅಲ್ಲಿರುವ ಕಲಾಕೃತಿ, ಪ್ರದರ್ಶನಗಳ ಫೋಟೋ ತೆಗೆದು ಮರುದಿನದ ಸಂಪಾದನೋತ್ಸವದಲ್ಲಿ ಅವುಗಳ ಬಗೆಗೆ ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಲಾಗುವುದು.

‍ಲೇಖಕರು Admin

February 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪ್ರೊ. ಬಸವರಾಜ ಪುರಾಣಿಕ

    ಕನ್ನಡ ವಿಕಿಪೀಡಿಯಾ 13ನೆಯ ವರ್ಷಾಚರಣೆಗೆ ಹಾರ್ದಕ ಶುಭಾಶಯಗಳು. ನಡೆದ ದಾರಿ ಆದರ್ಶಪ್ರಾಯ ಮಾಡಿದ ಸಾಧನೆ ಶ್ಲಾಘನೀಯ ಆಶೋತ್ತರಗಳು ಗಗನದೆತ್ತರ. ಕನ್ನಡ ವಿಕಿಪೇಡಿಯಾವನ್ನು ಕನಸಿಸಿದವರು, ನನಸಿಸಿದವರು, ಕಲಿಸುತಿರುವವರು. ಹಿಗ್ಗಿಸುತ್ತಿರುವವರು, -ಎಲ್ಲರುಗೂ ಅಭಿನಾದನೆಗಳು. ಸರೀಕರೊಂದಿಗೆ ತಲೆ ಎತ್ತಿ ನಿಂತು ತನ್ನ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಂಬಿಸುತ್ತಿರುವ “ವಿಕಿ”ಗೆ ಸಂತಸದ ದಿನಗಳು ನಿರಣತರ ಬರಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: