ಇಲ್ಲಿ ಒಂದಷ್ಟು ಪುರಾವೆಗಳಿವೆ, ಓದಿದರೆ ಬೆಚ್ಚಿ ಬೀಳುತ್ತೀರಿ..

ಮೊನ್ನೆ ಬೆಂಗಳೂರು ಪೊಲೀಸರು ಬೃಹತ್ ಜಾಲವೊಂದನ್ನು ಬೇಧಿಸಿದ್ದಾರೆ.

ದೇಶದ ನಾನಾ ಮೂಲೆಗಳಿಂದ ಮಕ್ಕಳನ್ನು ಕರೆದುಕೊಂಡು ಬಂದು ಬೆಂಗಳೂರು ವಿಮಾನ ನಿಲ್ದಾದ ಮೂಲಕ ಅಮೆರಿಕಾಕ್ಕೆ ರವಾನಿಸುತ್ತಿದ್ದ ಜಾಲ ಅದು.

ಆ ಮಕ್ಕಳಿಗೆ ಪಾಸ್ ಪೋರ್ಟ್ ಮಾಡಿಸುವಾಗ, ವೀಸಾ ಸಂಪಾದಿಸುವಾಗ ನಕಲಿ ಅಪ್ಪ ಅಮ್ಮಂದಿರನ್ನು ಸೃಷ್ಟಿಸಲಾಗುತ್ತಿತ್ತು. ಹಾಗೆ ಸೃಷ್ಟಿಯಾದ ಅಪ್ಪ ಅಮ್ಮಂದಿರು ಈ ಮಕ್ಕಳನ್ನು ಕರೆದುಕೊಂಡು ಅಮೆರಿಕಾಗೆ ದಾಟಿಕೊಂಡುಬಿಡುತ್ತಿದ್ದರು. ಅಲ್ಲಿ ಹೋದ ಮಾರನೆಯ ದಿನ ಇವರು ಮಾತ್ರ ವಾಪಸ್.

ಹಾಗಾದರೆ ಮಕ್ಕಳೇನಾದರು? ಅಮೆರಿಕಾಗೆ ಯಾಕೆ ರವಾನಿಸಲಾಯಿತು? ಪೊಲೀಸರು ಈ ಪ್ರಶ್ನೆಗಳನ್ನು ಶೋಧಿಸುತ್ತಿದ್ದಾರೆ.

ಆದರೆ ಏನಾಗಿರಬಹುದು? ಎನ್ನುವುದಕ್ಕೆ ಇಲ್ಲಿ ಒಂದಷ್ಟು ಪುರಾವೆಗಳಿವೆ

ಓದಿದರೆ ಬೆಚ್ಚಿ ಬೀಳುತ್ತೀರಿ

 

GNM caricature

 

 

 

 

 

 

 

 

ದೇಹವು ಮೂಳೆ ಮಾಂಸದ ತಡಿಕೆ..                                                          ಜಿ ಎನ್ ಮೋಹನ್

 

‘ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?’- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ.

ಮಾತೆತ್ತಿದರೆ ಸಾಕು ‘ನನ್ನ ಬೆಲೆ ಏನೂ ಅಂತ ನಿಂಗೇನೋ ಗೊತ್ತು?’ ಎನ್ನುವ ಡೈಲಾಗ್ ಗಳನ್ನು ಕನ್ನಡ ಸಿನೆಮಾಗಳಲ್ಲಿ ಬೇಕಾದಷ್ಟು ಸಲ ಕೇಳಿದ್ದ ನನಗೆ ಕಾರ್ನೆ ಸಹಾ ಹಾಗೆಯೇ ಹತ್ತರಲ್ಲಿ ಹನ್ನೊಂದನೆಯವರಾಗಿಬಿಡುತ್ತಿದ್ದರೇನೋ?.

ಆದರೆ ಹಾಗೆ ಕೇಳುತ್ತಾ ಇರುವ ವ್ಯಕ್ತಿ ಕ್ಯಾಲಿಫೋರ್ನಿಯಾದವ. ಕನ್ನಡ ಸಿನೆಮಾ ನೋಡಿಯಂತೂ ಈ ಡೈಲಾಗ್ ಕಲಿತಿರುವ ಸಾಧ್ಯತೆ ಇಲ್ಲ. ಹಾಗಾಗಿ ನನ್ನ ಕುತೂಹಲ ಹೆಚ್ಚುತ್ತಾ ಹೋಯಿತು.

ಆತ ಹೇಳಿದ- ‘ನೋಡಿ ನನ್ನ ತೂಕ ಸರಿಸುಮಾರು 90 ಕೆ ಜಿ. ಕೆಂಚನೆಯ ಕೂದಲಿದೆ. ನೀಲಿ ಕಣ್ಣುಗಳಿವೆ. ಒಂದು ಹಲ್ಲೂ ಉದುರಿಲ್ಲ. ನನ್ನ ಥೈರಾಯ್ಡ್ ಗ್ರಂಥಿಗಳು ಅದು ಯಾವ ಕೆಲಸವನ್ನು ಮಾಡಬೇಕೋ ಅದನ್ನು ಸರಿಯಾಗಿ ಮಾಡುತ್ತಿದೆ. 6 ಅಡಿ 2 ಇಂಚು ಎತ್ತರ ಇರುವ ನನ್ನ ಮೈನ ಚರ್ಮ ಹೊಳಪು ಕಳೆದುಕೊಂಡಿಲ್ಲ. ನನ್ನ ಎರಡೂ ಕಿಡ್ನಿಗಳೂ ಸರಿಯಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ನನ್ನ ಬೆಲೆ 2,50,000 ಡಾಲರ್’ ಎಂದ. ಆರ್ಥಾತ್ 1.36 ಕೋಟಿ ರೂಪಾಯಿ.

red market2ಇದೇನಪ್ಪಾ ಹೊಸ ಲೆಕ್ಕಾಚಾರ? ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಇದು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮನುಷ್ಯನ ಒಂದೊಂದು ಅಂಗಕ್ಕೆ ಇರುವ ರೇಟು. ನನ್ನ ದೇಹದ ಎಲ್ಲಾ ಅಂಗಗಳನ್ನೂ ಒಟ್ಟು ಮಾಡಿದರೆ ಈಗಿಂದೀಗ ಈ ರೇಟು ಗಿಟ್ಟುತ್ತದೆ ಎಂದ.

ಹಾಗೆ ನಾನು ಆತನ ಪರಿಚಯ ಮಾಡಿಕೊಂಡದ್ದು ಆತ ಬರೆದ ‘ದಿ ರೆಡ್ ಮಾರ್ಕೆಟ್’ ಪುಸ್ತಕದಲ್ಲಿ. ಒಂದು ಕಾಲಕ್ಕೆ ಆತ ಬೋಧಕನಾಗಿದ್ದ. ವಿದೇಶದ ವಿದ್ಯಾರ್ಥಿಗಳನ್ನು ಕರೆದುಕೊಂಡು ಭಾರತ ಸುತ್ತುತ್ತಾ ಇದ್ದಾಗ ಒಂದು ಅವಘಡ ನಡೆದು ಹೋಯಿತು. ಆತನ ವಿದ್ಯಾರ್ಥಿನಿಯೊಬ್ಬಳು ಸತ್ತು ಹೋದಳು. ಆ ಅವಘಡ ಅವನ ಲೋಕವನ್ನೇ ಬದಲಿಸಿಹಾಕಿತು. ಮನುಷ್ಯ ಎನ್ನುವವನು ಒಂದು ದೇಹ ಮಾತ್ರ. ಅದಕ್ಕೆ ಮಾರುಕಟ್ಟೆಯಲ್ಲಿ ಇಷ್ಟು ಬೆಲೆ ಇದೆ ಎಂದು ಗೊತ್ತಾಗಿಹೋಯಿತ್ತು. ಪರಿಣಾಮವಾಗಿ ಆತ ಜಗತ್ತಿನ ಎಲ್ಲೆಡೆ ಮಾನವನ ದೇಹದ ಅಂಗಾಂಗಗಳ ಬಗ್ಗೆ ಇರುವ ಮಾರಾಟ ಜಾಲವನ್ನು ಬೆನ್ನಟ್ಟಿ ಹೋದ.

ಭಾರತ, ಶ್ರೀಲಂಕಾ, ನೇಪಾಳ, ಭೂತಾನ್, ಮಲೇಶಿಯಾ, ಚೀನಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೇರಿಕಾ ಹೀಗೆ ಸುತ್ತುತ್ತಾ ಆತ ಕಂಡುಕೊಂಡಿದ್ದು ವಿಚಿತ್ರ ಲೋಕವನ್ನು. ದೇಹದ ಇಂಚಿಂಚನ್ನೂ ಕೊಳ್ಳೆ ಹೊಡೆಯಲು ಕಾದು ಕುಳಿತಿರುವವರ ಲೋಕವನ್ನು. ‘ಮಾನವಾ ದೇಹವು ಮೂಳೆ ಮಾಂಸದ ತಡಿಕೆ’ ಅಂದರಲ್ಲಾ ಹಾಗೆ ಮನುಷ್ಯನನ್ನು ಕೇವಲ ಮೂಳೆ, ಮಾಂಸ ಎಂದುಕೊಂಡವರ ಕರಾಳ ಲೋಕವನ್ನು.

ತರಕಾರಿ ಮಾರ್ಕೆಟ್, ಹಣ್ಣಿನ ಮಾರ್ಕೆಟ್, ಸೊಪ್ಪಿನ ಮಾರ್ಕೆಟ್, ಹೂವಿನ ಮಾರ್ಕೆಟ್ ಇರುವಂತೆಯೇ ಇನ್ನೊಂದು ಮಾರ್ಕೆಟ್ ಸಹಾ ಇದೆ. ಅದು ಈ ‘ರೆಡ್ ಮಾರ್ಕೆಟ್’. ಇಲ್ಲಿ ಮಾರಾಟಕ್ಕಿರುವುದು ಮೂಳೆ, ತಲೆಬುರುಡೆ, ಕಿಡ್ನಿ, ಕೂದಲು, ಇಡೀ ಮನುಷ್ಯ..

ಕಾರ್ ಗಳನ್ನ, ಸ್ಕೂಟರ್ ಗಳನ್ನ, ಜೆ ಸಿ ಬಿ ಯಂತ್ರಗಳನ್ನ, ಇನ್ನೂ ಬೇಕಾದರೆ ಚಿಪ್ಸ್, ಕೋಲಾಗಳನ್ನ, ಫ್ರಿಡ್ಜ್, ವಾಶಿಂಗ್ ಮೆಷಿನ್ ಗಳನ್ನ ಕಾರ್ಖಾನೆಗಳಲ್ಲಿ ಉತ್ಪಾದಿಸಬಹುದು. ಆದರೆ ಮನುಷ್ಯನನ್ನು ಉತ್ಪಾದಿಸಲು ಸಾಧ್ಯವೇ? ಅಥವಾ ಮನುಷ್ಯನ ಯಾವುದಾದರೂ ಅಂಗಾಂಗ ವಿಫಲವಾದರೆ ಸ್ಪೇರ್ ಪಾರ್ಟ್ ಗಳನ್ನ ಉತ್ಪಾದಿಸಲು ಸಾಧ್ಯವೇ? ಹಾಗಾಗಿಯೇ ಮಾನವ ದೇಹ ಎನ್ನುವುದನ್ನೇ ದಂಧೆ ಮಾಡಿಕೊಂಡ ಒಂದು ಭೂಗತ ಲೋಕ ತಲೆ ಎತ್ತಿದೆ.

ಆ ಲೋಕಕ್ಕೆ ಒಬ್ಬ ಮನುಷ್ಯ ಒಬ್ಬ ಮನುಷ್ಯನಾಗಿ ಕಾಣುವುದಿಲ್ಲ. ಬದಲಿಗೆ ಹಲವು ಸ್ಪೇರ್ ಪಾರ್ಟ್ ಗಳನ್ನು ಹೊಂದಿಸಿ ತಯಾರು ಮಾಡಿದ ಒಂದು ರಚನೆಯಾಗಿ ಮಾತ್ರ ಕಾಣುತ್ತಾನೆ. ಯಾವುದೇ ಗ್ಯಾರೇಜ್ ನಲ್ಲಿ ಒಂದು ಸ್ಕೂಟರ್ ಅನ್ನು ಸಂಪೂರ್ಣವಾಗಿ ಬಿಚ್ಚಿ ಬೇಕಾದದ್ದನ್ನು ರಿಪೇರಿ ಮಾಡಿ ಓವರ್ ಆಯ್ಲಿಂಗ್ ಮಾಡಿ ಹೊಚ್ಚಹೊಸದಾಗಿ ಆಚೆ ಕಳಿಸಿಕೊಡುತ್ತಾರಲ್ಲಾ ಹಾಗೆಯೇ ಮಾನವ ದೇಹವನ್ನು ಸಹಾ ರಿಪೇರಿ ಮಾಡುವ, ಓವರ್ ಆಯ್ಲಿಂಗ್ ಮಾಡುವ ಕರಾಳ ಗ್ಯಾರೇಜ್ ಗಳು ತಲೆ ಎತ್ತಿವೆ.

red market3

ನಿಮ್ಮ ಮನೆಯ ಮಗುವೊಂದು ನಾಪತ್ತೆಯಾಗಿದ್ದರೆ ಹುಷಾರು ಅದನ್ನು ಇದೇ ಕಳ್ಳರು ಕದ್ದೊಯ್ದಿರುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಹಿರಿಯರು ಸತ್ತಿದ್ದರೆ ಅವರನ್ನು ಮಣ್ಣು ಮಾಡಿ ಬಂದು ನೀವು ಸುಸ್ತು ಕಳೆದುಕೊಳ್ಳುವ ಮೊದಲೇ ಸಮಾಧಿಯಿಂದ ಆ ಹೆಣವನ್ನೇ ಎಗರಿಸಿರುತ್ತಾರೆ. ಆರೋಗ್ಯ ತಪಾಸಣೆಗೆ ಆಸ್ಪತ್ರೆ ಸೇರಿದ್ದೀರಿ ಕತ್ತರಿ ನಿಮ್ಮ ಜೋಬಿಗೆ ಮಾತ್ರವಲ್ಲ, ನಿಮ್ಮ ದೇಹದ ಇನ್ನೂ ಕೆಲವು ಅಂಗಾಂಗಗಳಿಗೂ ಬಿದ್ದಿದೆ. ಇದು ಕಟ್ಟು ಕಥೆಯಲ್ಲ. ಜಗತ್ತಿನ ನಾನಾ ದೇಶಗಳಲ್ಲಿ ನಡೆಯುತ್ತಿರುವ ಕಳ್ಳತನ ಎನ್ನುತ್ತದೆ ಈ ‘ದಿ ರೆಡ್ ಮಾರ್ಕೆಟ್’

ಇವತ್ತು ಅಮೆರಿಕಾದಲ್ಲಿ ಯಾವುದೋ ಒಂದು ಸಂಸಾರದಲ್ಲಿರುವ ಕೊರತೆಯನ್ನು ಪೂರ್ಣ ಮಾಡಲು ಇಲ್ಲಿನ ಮಗುವನ್ನು ದತ್ತು ನೀಡಲಾಗುತ್ತಿದೆ. ಆ ಮನೆಯನ್ನು ತಲುಪುವ ಮಗು ಎಷ್ಟೋ ಬಾರಿ ಆಶ್ಚರ್ಯ ಆದರೂ ನಿಜ, ಅದು ಯಾವುದೋ ಊರಿನ ಯಾವುದೋ ಗಲ್ಲಿಯಲ್ಲಿ ಆಟ ಆಡಿಕೊಂಡಿದ್ದ ಮಗು. ಬೇರೆಯವರ ಕಣ್ಣು ತಪ್ಪಿಸಿ ಕ್ಷಣ ಮಾತ್ರದಲ್ಲಿ ಆ ಮಗುವನ್ನು ಕದ್ದೊಯ್ದು ತನ್ನ ಕರಾಳ ಜಾಲಕ್ಕೆ ದಬ್ಬಿ ಅಮೇರಿಕಾ ತಲುಪಿಸಲಾಗುತ್ತದೆ. ಒಳ್ಳೆಯ ತಲೆಬುರುಡೆ, ಒಳ್ಳೆಯ ಅಸ್ತಿ ಪಂಜರ, ಒಳ್ಳೆಯ ಮೂಳೆ ಇವುಗಳಿಗಾಗಿ ಸ್ಮಶಾನವನ್ನು ಲೂಟಿ ಮಾಡುವ ಗುಂಪುಗಳೇ ಸೃಷ್ಟಿಯಾಗಿದೆ. ಹೆಣವನ್ನು ಊಳಿದ ಮರುನಿಮಿಷವೇ ಅಲ್ಲಿಂದ ಕಾಣೆಯಾಗುತ್ತದೆ. ನಿಮ್ಮ ಕಣ್ಣೆದುರಿಗೆ ಚಿತೆಗೆ ಅಗ್ನಿ ಸ್ಪರ್ಶವಾಗಿದ್ದರೂ ನೀವು ಆ ಕಡೆ ತಿರುಗಿದ ತಕ್ಷಣವೇ ಹೆಣವನ್ನು ಚಿತೆಯಿಂದ ಎಳೆದು ಹಾಕುವ ಕೂಟಗಳಿವೆ.

red market4ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ಬರುವವರನ್ನು ಒಂದಿಷ್ಟು ಹಣದ ಆಸೆ ತೋರಿಸಿ, ಬರಲಾರದವರನ್ನು ಬಲವಂತವಾಗಿ ಎಳೆದೊಯ್ದು ತಿಂಗಳುಗಟ್ಟಲೆ ಕತ್ತಲ ಕೋಣೆಗಳಲ್ಲಿ ರಕ್ತ ಹೀರುವ ಜಾಲವಿದೆ. ಮನೆಯಲ್ಲಿನ ಬಡತನ, ಕೊಡಬೇಕಾದ ವರದಕ್ಷಿಣೆ ಬಾಕಿ ಕಿಡ್ನಿಗಳನ್ನೇ ಮಾಯವಾಗುವಂತೆ ಮಾಡುತ್ತಿವೆ. ನಾಳೆಯ ಜನಾಂಗಕ್ಕೆ ಬೇಕಾದ ಸೂಪರ್ ಔಷಧಿಗಳನ್ನು ತಯಾರಿಸಲು ಮನುಷ್ಯರನ್ನೇ ಪ್ರಯೋಗ ಪಶುವಾಗಿಸುವ ದಂಧೆಯೂ ಇದೆ.

ಇಲಿಗಳ ಮೇಲೆ ಪ್ರಯೋಗ ನಡೆಸಿದ ಕಾಲವನ್ನೂ ದಾಟಿ ಮನುಷ್ಯರ ಮೇಲೂ ಪ್ರಯೋಗ ನಡೆಯುವ, ಅದಕ್ಕಾಗಿ ಜನರನ್ನು ಸರಬರಾಜು ಮಾಡುವ ಕರಾಳ ಜಾಲವಿದೆ. ಆಸ್ಪತ್ರೆಗೆ ಹೋದ ಗರ್ಬಿಣಿ ಹೆಂಗಸಿಗೆ ಬೇಕಾದ ಚುಚ್ಚ್ಚುಮದ್ದುಗಳ ಜೊತೆ ಈ ರೀತಿಯಲ್ಲಿ ಪ್ರಯೋಗಿಸಬಾರದ ಚುಚ್ಚುಮದ್ದುಗಳನ್ನೂ ಚುಚ್ಚಿ ಕಳಿಸುವ ದುಷ್ಟ ಕೂಟವಿದೆ. ಸೌಂದರ್ಯ ಉದ್ಯಮ ಎಷ್ಟು ಅಗಾಧವಾಗಿ ಬೆಳೆಯುತ್ತಿದೆಯೆಂದರೆ ಅವರನ್ನು ಇನ್ನಷ್ಟು ಕೊಬ್ಬಿ ಬೆಳೆಸಲು ತಿರುಪತಿಯಿಂದಲೂ ಬಿಲಿಯನ್ ಡಾಲರ್ ಮೌಲ್ಯದ ಕೂದಲು ಹೋಗಿ ಬೀಳುತ್ತಿದೆ.

ಸರ್ಕಾರ-ಆಸ್ಪತ್ರೆಗಳು- ಮಧ್ಯವರ್ತಿಗಳು- ಸರಬರಾಜುದಾರರ ಜಾಲ ಎಷ್ಟು ನಿಕಟವಾಗಿ ಹಾಗೂ ಎಷ್ಟು ಅಗಾಧವಾಗಿ ಬೆಳೆಯುತ್ತಿದೆ ಎಂದರೆ ಮನುಷ್ಯನ ದೇಹ ಎನ್ನುವುದು ಚಿನ್ನ ಅಗೆಯುವ ಕಾರ್ಖಾನೆಯಂತೆ ಕಾಣುತ್ತಿದೆ. ಇವತ್ತು ಊರಿಗೆ ಊರೇ ಕಿಡ್ನಿ ಮಾರುವ, ಊರಿಗೆ ಊರೇ ಗರ್ಭದಾನ ಮಾಡುವ, ಊರಿಗೆ ಊರೇ ದೇಹದ ಹಕ್ಕನ್ನು ಬೇರೆಯವರಿಗೆ ಬರೆದು ಕೊಡುವ ಪರಿಸ್ಥಿತಿ ಎದುರಾಗಿದೆ.

ದುರಂತ ಎನ್ನುವುದು ಈ ರೆಡ್ ಮಾರ್ಕೆಟ್ ಗೆ ಹೇಗೆ ಆಹಾರ ಒದಗಿಸುತ್ತದೆ ಎನ್ನುವುದೇ ಮನಮಿಡಿಯುವ ಕಥೆ. ಕಿಡ್ನಿವಾಕ್ಕಂ ಎಂದೇ ಹೆಸರಾದ ಒಂದು ಹಳ್ಳಿಯಿದೆ. ತಮಿಳುನಾಡಿಗೆ ಸುನಾಮಿ ಅಪ್ಪಳಿಸಿದಾಗ ನೆಲೆ ಕಳೆದುಕೊಂಡ ಅಲ್ಲಿನ ಪ್ರತಿಯೊಬ್ಬರ ಕಣ್ಣಲ್ಲೂ ಕಣ್ಣೀರಿದೆ. ಹಾಗಿದೆ ಎಂದು ಗೊತ್ತಾದದ್ದೇ ತಡ ಈ ರೆಡ್ ಮಾರ್ಕೆಟ್ ಕಳ್ಳರು ರಾಜಾರೋಷವಾಗಿಯೇ ಹೆಜ್ಜೆ ಹಾಕಿದರು.

scott carney2

ಇಂತಹ ಕಿಡ್ನಿವಾಕ್ಕಂನಿಂದ ಹಿಡಿದು ನೆರೆಯ ಭೂತಾನದಲ್ಲಿ ರಾಶಿಗಟ್ಟಲೆ ಅಸ್ತಿಪಂಜರ ಸಿಕ್ಕ ಸ್ಥಳಕ್ಕೆ, ಇಡೀ ಜಗತ್ತಿನ ತಲೆಬುರುಡೆ ಕಾರ್ಖಾನೆ ಎಂದು ಕುಖ್ಯಾತಿ ಪಡೆದಿರುವ ಕೊಲ್ಕೊತ್ತಾಗೆ, ರಕ್ತವನ್ನು ಬಲವಂತವಾಗಿ ಕಕ್ಕಿಸಿಕೊಳ್ಳುವ ಗೋರಖಪುರಕ್ಕೆ, ತಪಾಸಣೆಗೆ ಬಂದ ಹೆಂಗಸಿಗೆ ಗೊತ್ತಿಲ್ಲದಂತೆ ಇನ್ನೂ ಪ್ರಯೋಗ ನಡೆಸಲಾಗುತ್ತಿರುವ ಔಷಧಿ ಚುಚ್ಚಿ ಹಣೆಯಲ್ಲಿ ಕಣ್ಣು ಉಳ್ಳ ಮಗು ಹುಟ್ಟುವಂತೆ ಮಾಡಿದ ಚೆನ್ನೈ ವರೆಗೆ, ಈ ಎಲ್ಲಾ ಅಂಗಾಂಗಗಳ ಲಾಭ ಪಡೆದ ದೇಶಗಳನ್ನೂ ಸ್ಕಾಟ್ ಕಾರ್ನೆ ಬೆನ್ನತ್ತಿ ಹೋಗಿದ್ದಾರೆ. ಈ ದಂಧೆಯ ಕರಾಳ ಕೈಗಳು ಎಲ್ಲೆಲ್ಲಿ ಚಾಚಿದೆಯೋ ಅಲ್ಲೆಲ್ಲಾ ಅಲೆದಾಡಿದ್ದಾರೆ. ದಾಖಲೆಗಳನ್ನು ಕೂಡಿಸಿದ್ದಾರೆ. ಪೊಲೀಸರನ್ನೂ ಅಂತೆಯೇ ದಂಧೆಕೋರರನ್ನೂ ಮಾತನಾಡಿಸಿದ್ದಾರೆ.

ಈ ಮಾನವ ಅಂಗಾಂಗದ ವಾರಸುದಾರರು ಯಾರು ಎನ್ನುವುದು ಅದರ ಪ್ರಯೋಜನ ಪಡೆಯುವ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ಅಂಗಾಂಗ ವಿನಿಮಯದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಈ ದಂಧೆಗೆ ಲಗಾಮು ಹಾಕಲು ಸಾಧ್ಯ. ಪ್ರತಿಯೊಂದು ಬಾಟಲಿ ರಕ್ತ ಇದು ಯಾರದ್ದು ಎಂದು ಸೂಚಿಸಬೇಕು. ದತ್ತು ಪಡೆಯುವ ಮಗುವಿನ ತಾಯಿ ತಂದೆ ಯಾರು ಎಂದು ಗೊತ್ತಿರಬೇಕು. ಕಿಡ್ನಿ ಇಂತಹವರದ್ದು ಎಂದು ನಮೂದಿಸಿರಬೇಕು. ಅಸ್ತಿಪಂಜರ ಇಂತಹ ಮನೆಯವರದ್ದು ಎನ್ನುವ ದಾಖಲೆ ಇರಬೇಕು. ಹಾಗಾಗದೆ ಹೋದಲ್ಲಿ ದಿನ ನಿತ್ಯ ಮಕ್ಕಳು ಕಾಣೆಯಾಗುತ್ತಾರೆ. ಪ್ರತಿ ನಿತ್ಯ ಕಿಡ್ನಿಗಳನ್ನು ಬಲವಂತವಾಗಿ ಕತ್ತರಿಸಲಾಗುತ್ತದೆ. ಚಿತ್ರ ವಿಚಿತ್ರ ಮಾರ್ಗಗಳನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸ್ಕಾಟ್ ನಿಟ್ಟುಸಿರಿಡುತ್ತಾರೆ.

ಒಮ್ಮ್ಮೆ ಪ್ರವಾಸಕ್ಕೆ ಹೋದಾಗ ದಾರಿಯಲ್ಲಿ ಕುರಿ ಮಂದೆಯೊಂದು ಹಾದುಹೋಗುತ್ತಿತ್ತು. ನನ್ನ ಜೊತೆಯಲ್ಲಿದ್ದವರೊಬ್ಬರು ‘ಅಯ್ಯಯ್ಯೋ ಎಷ್ಟೊಂದು ಮಟನ್ ಹೋಗುತ್ತಿದೆ ನೋಡಿ’ ಎಂದು ಉದ್ಘಾರ ತೆಗೆದರು. ಆ ಮಾತಿನಿಂದ ಆದ ಶಾಕ್ ಇನ್ನೂ ಆರಿಲ್ಲ. ಆಗಲೇ ಸ್ಕಾಟ್ ಕಾರ್ನೆ ಈ ಪುಸ್ತಕ ಮುಂದಿಟ್ಟಿದ್ದಾರೆ. ಮನುಷ್ಯರೂ ಈಗ ಮಾಂಸವಾಗಿ ಹೋದ ಕಥೆ ಹೇಳಿದ್ದಾರೆ.

‍ಲೇಖಕರು Admin

February 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Guruprasad

    No Need to Go to America ,visit the Villages of Magadi taluk , there you will find dozens of Stories of Kidney Sold Poor People at a rate for the need of Rich Patients in Bengaluru Hitech Hospitals .

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಹೌದು. ದೂರ ಬೇಡ ನಮ್ಮ ನಡುವೆಯೇ ಕಿಡ್ನಿ ಕದಿಯುವ ಆಸ್ಪತ್ರೆಗಳಿವೆ. ರೋಗಿಗೆ ಪತ್ತೆಯೇ ಆಗದಂತೆ ಚಿಕಿತ್ಸೆಯ ಭಾಗ ಎಂದು ನಂಬಿಸಿ ಕಿಡ್ನಿ ತೆಗೆದುಬಿಡುವ ಒಂದು ಗುಂಪೇ ಇದೆ. ಇದೇ ದಂಧೆ ಮಾಡಿ ಮೆಡಿಕಲ್ ಕಾಲೇಜು ಕಟ್ಟಿದವರೂ ಇದ್ದಾರೆ. ವಿದ್ಯಾವಂತರನ್ನೂ ಏಮಾರಿಸಿದ ಉದಾಹರಣೆಯೂ ಇದೆ.

    ಪ್ರತಿಕ್ರಿಯೆ
  3. ಬಸವರಾಜ ಪುರಾಣಿಕ

    ಬಸವರಾಜ ಪುರಾಣಿಕ

    “What a wild beast the heart of man is!” ಎಂದು ಕನಲಿದ ಗ್ರೀಕ ಸಾಹಿತಿ ಮತ್ತು ಚಿಂತಕ Nikos Kazantzakis. Eric Eromm ಮನುಷ್ಯನ ಹೃದಯದ ಆಮೂಲಾದಗ್ರ ಅಧ್ಯಯನ ಮಾಟಿದ. ಸ್ವಾರ್ಥಿ ಮನುಷ್ಯನಲ್ಲಿ ಕರುಣೆಯ ನಿರೀಕ್ಷೆ? ಛೆ. ತೌಬ ತೌಬಾ. ಕರುಣೆಯ ಸಿಂಧು,recommends persistent,umresisting love as the secret of happiness and as the best revolution; fot “if the soul withinus does not change,the world outside us will never change”,
    ಈಗ ಹೇಳಿ, ದಾಖಿಲೆಗಳು …. ಯೋಚಿಸಿ.

    ಪ್ರತಿಕ್ರಿಯೆ
  4. Mallappa

    ಮನುಷ್ಯ ಮಟನ್ ಆಗಿ ಕೆಲವರಿಗೆ ಅಲ್ಲ ಈಗ ಅನೇಕರಿಗೆ ಕಾಣಿಸುತ್ತಿರುವುದು ನಮ್ಮ ಸಮಾಜದ ಕಳಂಕ

    ಪ್ರತಿಕ್ರಿಯೆ
  5. ರೇಣುಕಾ

    ಮನೇಲಿ ರೆಡ್ ಮಾರ್ಕೆಟ್ ಬುಕ್ ಇದೆ. ಓದಲು ಶುರು ಮಾಡ್ಬೇಕು. ಲೇಖನ ಓದಲು ಪ್ರೇರೇಪಿಸಿದೆ. ಥ್ಯಾಂಕ್ಯು

    ಪ್ರತಿಕ್ರಿಯೆ
  6. Lingaraju BS

    ಯಾರನ್ನೂ ಯೂಸ್ಲೆಸ್ ಅನ್ನೋ ಹಾಗಿಲ್ಲ

    ಪ್ರತಿಕ್ರಿಯೆ
  7. H. S. Eswara

    “There are more things in heaven and earth, Horatio
    Than are dreamt in your philosophy.” I had read these lines from Shakespeare in my young age. But I had not imagined that there are so many disgusting things on earth as documented in this book.

    ಪ್ರತಿಕ್ರಿಯೆ
  8. Umasekhar

    Devara manusyanannu enthamarana kupakke talluthiddare Ee naradhamaru. Beleyuva makkalannu kayodu hege. Yellammadasappa hospital nalli bahala hinde heege maduthiddarantha keliddene. Hage vasanthanagarnalli vondu ganged ithu kidney tegeyuvavaru. Bheemana.

    ಪ್ರತಿಕ್ರಿಯೆ
  9. RAJKUMAR

    ಸರ್, ಮಕ್ಕಳ ಸಾಗಾಣಿಕೆಯ ಬಗ್ಗೆ ಓದಿದ್ದೆ. ಭಾರತದ ಬಡಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ದರ್ದು ಅಮೆರಿಕದವರಿಗಿಲ್ಲ ಎನಿಸಿತ್ತು. ದುರ್ದೈವಕ್ಕೆ ಮಕ್ಕಳು ಗುಲಾಮರಾಗಿ ಹೋಗುತ್ತಾರಲ್ಲ ಎನಿಸಿ ದುಃಖವಾಗಿತ್ತು. ನಿಮ್ಮ ಲೇಖನವನ್ನು ವಿಚಿತ್ರ ಮನಸ್ಥಿತಿಯಲ್ಲಿ ಓದಿದೆ. ಒಂದು ಗಂಟೆಯ ಹಿಂದೆ ಲೀವರ್ ನ ಹತ್ತಿರವಿರುವ ಗಡ್ಡೆಯ ಆಪರೇಷನ್ ಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರಿಂದ ಬಂದ ಪೋನ್ ಕಾಲ್ ನಿಂದ ತಲೆಕೆಟ್ಟು ಏನೂ ಮಾಡಲು ತೋಚದೆ ಅವಧಿ ತೆಗೆದು ನೋಡುತ್ತಾ ಕುಳಿತಾಗ ಈ ನಿಮ್ಮ ಲೇಖನ ಕಣ್ಣಿಗೆ ಬಿತ್ತು. ಈಗ ಹೇಳಿದ ರೋಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದರಿಯವರಿಗೆ ಸರ್ಕಾರದ ಕಡೆಯಿಂದ ರೂ. 80000 ಧನ ಸಹಾಯ ಮಂಜೂರಾಗಿದೆ. ಇಲ್ಲಿವರೆಗೂ ಪೇಷೆಂಟ್ಗೆ ಒಂದು ಟ್ಯಾಬ್ಲೆಟ್ ಕೂಡ ಕೊಟ್ಟಿಲ್ಲ. (16-05-2016 ) ಇವತ್ತು ಬೆಳಿಗ್ಗೆಯಿಂದ 60000 ರೂಗಳ ಔಷಧಿ ಬರೆದು ಕೊಟ್ಟಿದ್ದಾರೆ. ಏಕೆಂದು ಕೇಳಿದರೆ ಆಪರೇಷನ್ ಗಿಂತ ಮುಂಚೆ ಮತ್ತು ಆ ಸಮಯದಲ್ಲಿ ರೋಗಿಗೆ ಬೇಕಾಗುವ ಔಷಧಿಗಳು ಎಂದು ಹೇಳಿದರು. ನಗಬೇಕೋ ಅಥವಾ ಅಟ್ಟಹಾಸಗೈಯಬೇಕೋ ತಿಳಿಯುತ್ತಿಲ್ಲ. ಸದರಿ ರೋಗಿ ಆಕೆಯ ಜನ್ಮವಿಡೀ ಈವತ್ತಿನ ಔಷಧಿಯ ಮೌಲ್ಯದ ನಾಲ್ಕನೇ ಒಂದು ಭಾಗದಷ್ಟು ಕೂಡ ಸೇವಿಸಿಲ್ಲ. ಆಪರೇಷನ್ ಗಿಂತ ಮುಂಚೆ ಈ ಪ್ರಮಾಣದ ಔಷಧಿಗಳು ಬೇಕಾಗುತ್ತವೆಯೇ? ಹಾಗಾದರೆ ಸರ್ಕಾರ ನೀಡಿದ 80000 ರೂ ಯಾವುದಕ್ಕೆ ? ಬರಿ ಕತ್ತರಿಸಿ ಹೊಲಿಗೆ ಹಾಕುವುದಕ್ಕೆ? ರೆಡ್ ಮಾರ್ಕೆಟ್ ಬಹಳ ಭಯಾನಕವಾಗಿದೆ. ನಿಮ್ಮ ಲೇಖನ ಮತ್ತು ಫೋನ್ ಕಾಲ್ ನಿಂದ ಬೆಚ್ಚಿ ಬಿದ್ದು ಹೌಹಾರಿದ್ದೇನೆ. ಮಕ್ಕಳ ಗತಿ …….?!$#^&*^@!??!!!????

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: