ಕನ್ನಡಿಯೊಳಗೆ…

ಶಿಲೋಕ್ ಮುಕ್ಕಾಟಿ

ಕವಿ ಪರಿಚಯ:

ಶಿಲೋಕ್ ಮುಕ್ಕಾಟಿ, ಕನ್ನಡದ ಯುವ ಲಿಂಗತ್ವ ಅಲ್ಪಸಂಖ್ಯಾತ ಕವಿ. ಇವರು ಕೊಡಗಿನ ಕುಶಾಲನಗರದವರು. ನೃತ್ಯಗಾರ್ತಿ, ಹೋರಾಟಗಾರ್ತಿ, ಲೇಖಕರೂ ಆದ ಇವರು ಬಹುಮುಖ ಪ್ರತಿಭೆಯುಳ್ಳವರು.

ತಮ್ಮ ಕವಿತೆ ಮತ್ತು ಲೇಖನಗಳ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಬದುಕು ಮತ್ತು ಅಸ್ಮಿತೆಯ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಇವರು ಇಂಗ್ಲಿಷ್ ನಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. “ಲೆಸ್ಬಿಯನ್ ಇನ್ ದ ಶಾಡೋ” ರೇಡಿಯೋ ಕಾರ್ಯಕ್ರಮಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ನೃತ್ಯ ಮತ್ತು ಹೋರಾಟಗಳ ಜೊತೆಗೆ ಪ್ರಸ್ತುತ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಮತ್ತು ಸಂವಹನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಇವರ ಪ್ರಸ್ತುತ ಕವಿತೆ “ಕಬಳಿಸುವ ಕ್ರಾಂತಿ ಕಾಡು” ಕುವೆಂಪು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಅಳವಡಿಸಲಾಗಿದೆ.

ಕಬಳಿಸುವ ಕ್ರಾಂತಿ ಕಾಡು

ಬೆತ್ತಲಾಗಿ ಕನ್ನಡಿಯ ಮುಂದೆ ನಿಂತ್ತಿಹೆನು,
ಪ್ರತಿಬಿಂಬದೊಳು ಕಂಡಿಹೆ ಅವಳನ್ನು
ಪುಂಗವನಾಗಿ ಚರ್ಮದೊಳಗೆ ಮುಚ್ಚಿಕೊಂಡಿದ್ದೆ…
ಅಲ್ಲಿ ಅಂಗನೆಯಾಗಿ ಪುಂಗಿಗೆ ಹೆಡೆಯೆತ್ತಿದ
ಹಾವಾಗಿ ಚಕ್ಕಳದಿಂದ ಬಿಚ್ಚಿಕೊಂಡಿದ್ದೆ…


ಯಾರವಳು ದರ್ಪಣದೊಳ್ ನನ್ನ ನೋಡಿ ಅಳುತಿರುವಾಕೆ?
ಎದೆಯು ವರ್ಜಿಸಿ ಮೊಲೆಗಳು ಉಬ್ಬಿಕೊಂಡಿದೆ…
ರೇಶ್ಮೆ ಕೂದಲು ಸೊಂಟದಿಂದ ಕೆಳಕ್ಕೆ ಜಾರಿಕೊಂಡಿದೆ,
ಚರ್ಮವು ಮೆದುವಾಗಿ ಕೋಮಲತೆಯಿಂದ ಮೋಹಕವಾಗಿದೆ…
ಆದರೆ ಕಂಗಳು ದುಮ್ಮನದ ನೀರನ್ನು ತುಂಬಿಕೊಂಡಿದೆ..!
ಸಮಾಜದ ಅವಹೇಳನೆ, ಕೊಟ್ಟ ಉರಿವ ಅಭಿದಾನವು
ಅವಳನ್ನು ಕಿತ್ತು ತಿಂದುಕೊಂಡಿದೆ, ಲೈಂಗಿಕ ಅವಾಚ್ಯಗಳ

ಕೇಳಲಾಗದೆ, ಸಹಿಸಲಾಗದೆ, ಧಿಕ್ಕರಿಸಲಾಗದೆ…
ರಕ್ತದ ಅಷೃವಿನಿಂದ ಮೈಯನ್ನು ವದ್ದೆಮಾಡಿಕೊಂಡಿದ್ದಾಳೆ
ಅವಳು, ಆ ಕನ್ನಡಿಯೊಳಗಿನ ದುಗ್ಧ ಕನ್ಯೆ.
ಯಾರು ನೀನು? ನನ್ನ ಅಂಕಣದಲ್ಲಿ ನೀನ್ಯಾರು?
ನನ್ನ ರೂಪವೆಲ್ಲಿ! ನೀನೇಕೆ ಬಂದಿರುವೆ ಇಲ್ಲಿ?
ನನ್ನ ಪ್ರಶ್ನೆಗಳಿಗೆ ಉಮ್ಮಡಿಸಿದ ಧ್ವನಿಯಿಂದ
ಒರಲುತ್ತ ಅಳಲುತ್ತ ಉದ್ಗರಿಸಿದಳು ಆಕೆ…


ನಾನು ನೀನು…. ನೀನೇ ನಾನು…
ನಿನ್ನ ಜೈವಿಕದ ಪಂಜರದೊಳಗೆ ವರುಷಗಳಿಂದ
ಬಳಲಿದ ಹೆಣ್ಣತನವು ನಾನು, ಎಲ್ಲರಿಂದ ಧೂಷಿತಳಾದ ಸ್ತ್ರಿತ್ವ ನಾನು,
ಪುಲ್ಲಿಂಗದೊಳ್ ಕೈದಿಯಾದ ಸ್ತ್ರೀಲಿಂಗ ನಾನು…
ಕಿರುಚಿದಳು ಅತ್ತಳು ‘ಗಂಡಲ್ಲ ನಾನು ಹೆಣ್ಣೆಂದು…’
ಆ ಕನ್ನಡಿಯೊಳಗೆ ಅಳುತಿರುವ ಕನ್ಯೆಯೊಂದು…

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಸ್ಪರ್ಶಗಳ ನಿರ್ಬಂಧದಿಂದ ಬಳಲಿದವಳು ನಾನು
ಹೆಣ್ತನದ ದೌರ್ಬಲ್ಯದಲ್ಲಿ ದ್ವಂಸವಾದವಳು ನಾನು
ಕಣ್ಣೀರಿನ ಅನುಕಂಪದಲ್ಲಿ ಕೊಚ್ಚಿಹೋದವಳು ನಾನು

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಅಮ್ಮ ನನ್ನನ್ನು ಪ್ರೀತಿಸುತ್ತಾಳೆ, ಆದರೆ
ನನ್ನನ್ನೆಂದು ಅರಿಯುವ ಗೋಜಿಗೆ ಹೋಗಲಿಲ್ಲ
ಅಪ್ಪನಿಗೆ ನನ್ನ ಹುಟ್ಟು ಇಷ್ಟವಿಲ್ಲ
ಒಡಹುಟ್ಟಿದವರಿಗೆ ನಾನು ಭಯಂಕರ ಭಾಷಣ
ಸಂಬಂಧಿಗಳಿಗೆ ನಾನು ದೂರದ ಪಿಸುಮಾತು

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಬಾಲ್ಯ ಹಿಂಸೆಯ ಮಳೆಯಲ್ಲಿ ತೊಯ್ದುಹೋಗಿತು
ನನ್ನ ಬಾಯಿಯ ಕದಗಳು ಮುಚ್ಚಿಹೋದವು
ನನ್ನೊಳಗಿನ ಚೇತನ ಅಪಹರಣವಾಯಿತು
ಅವನೊಬ್ಬ ಬಂದನಲ್ಲ ನನ್ನ ಹದಿನಾರರಲ್ಲಿ
ಆತ್ಮ ಸಂಗಾತಿಯಂತವನು, ಭಾವಬಂಧು
ಆದರೆ, ಅವನಿಗೆ ಕೇವಲ ನನ್ನ ದೇಹಬೇಕಿತ್ತು
ಮೋಹದ ತಿಮಿರದಲ್ಲಿ ಅವನು ತೇಲಬೇಕಿತ್ತು

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಶೋಷಣೆಯ, ಪೀಡನೆಯ
ಸತ್ಯಘಟನೆಗಳನ್ನು ನಾನಿನ್ನು ಹೇಳಿಕೊಂಡಿಲ್ಲ
ನಾಚಿಕೆಯ ಭ್ರಮೆಯಲ್ಲಿ ಮುಳುಗಿರುವ ನನ್ನ
ಹಾಸಿಗೆ ರಕ್ತ ಮತ್ತು ಕಣ್ಣೀರಿನಿಂದ ಒದ್ದೆಯಾಗಿದೆ

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ದಿನಗಳು ಉರುಳಿದಂತೆ ಕುಣಿಕೆ, ನಿದ್ರಾ ಮಾತ್ರೆಗಳು
ವಿಷದ ಬಾಟಲಿಗಳು, ಕೆರೆ ಬಾವಿಗಳು ಸ್ವಾಗತಿಸುತ್ತವೆ
ಆದರೆ, ಹೃದಯದಲ್ಲಿ ಸ್ತ್ರೀತತ್ವದ ಬೆಂಕಿ ಉರಿಯುತ್ತಲೇ ಇದೆ
ಯಾವುದೇ ತಪ್ಪು ಮಾಡಿ ಜನಿಸದ ನಾನೇಕೆ ಸಾಯಬೇಕು?

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಪುರುಷ ಮೂಳೆಗಳ ಸುಡುವ ಬಂದಿಖಾನೆಯಲ್ಲಿ
ಪ್ರಜ್ವಲಿಸುವ ಸ್ತ್ರೀಸಹಜ ಆತ್ಮ ನಾನು
ಕತ್ತಲ ಸಾಮ್ರಾಜ್ಯದ ಮಿನುಗುವ ಕಣ್ಣೀರ ಸಿಂಹಾಸನದಲ್ಲಿ
ಕುಳಿತು ಮುಸ್ಸಂಜೆಯ ನಿಯಮ ಪಾಲಿಸುವವಳು ನಾನು

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಬೀಳಿಸಿದ ಬೀಜಗಳ ಪುಲ್ಲಿಂಗ ಸಮುದ್ರ ನನ್ನದಲ್ಲ
ಸ್ತ್ರೀಸಹಜ ಗುಣದ ಉಸಿರು ಕೂಡ ನನ್ನದಲ್ಲ
ನಾನು ಇವೆರಡರ ನಡುವಿನ ನೆಮ್ಮದಿಯ ತಾಣ
ನಾನು ಲಿಂಗ ಮತ್ತು ನಿರ್ಲಿಂಗಗಳ ನಡುವಿನ ದೇವತೆ

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ನಿಮ್ಮೆಲ್ಲರ ತಪ್ಪು ಸಮರ್ಥನೆಯಲ್ಲಿ
ಬೆಂದಿರುವ ಆತ್ಮ ನಾನು
ಪಿತೃಪ್ರಭುತ್ವದ ಮೂಡ ರಕ್ತದಲ್ಲಿ
ಮಾನವತೆ ಬೆರೆಸಲು ಬಂದಿರುವವಳು ನಾನು

ಲಿಂಗಹೀನಳಾಗಿ ಹುಟ್ಟಿದ ನನ್ನನ್ನು ನೋಡಿ

ಸಾಕ್ಷಾತ್ಕಾರ ಮತ್ತು ಅಸ್ತಿತ್ವದ ಘನತೆ ಸಾರುವ ನೆಲೆಯಲ್ಲಿ
ಕಾಣಿಸಿಕೊಂಡಿರುವ ನಾನು ಕತ್ತಲ ಜಗತ್ತಿನ ಕಿನ್ನರಿ

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: