ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಿಗೆ ಮಸಿ ಬಳಿಯುವುದು!

-ಎಂ ವಿ ಶಶಿಭೂಷಣ ರಾಜು

ಅವ್ಯಕ್ತ ಒಳಸುಳಿ

ಅತೃಪ್ತಿಯ ನೆರಳಲಿ, ತೃಪ್ತಿಯ ಸೋಗಿನಲಿ
ಹುಡುಕುತ್ತಲೇ ಇರುವುದು,
ಆ ಒಂದು ಸುಖವ;
ಅಂತರಾಳದಲ್ಲೆಲ್ಲೋ ಅಡಗಿರುವ ಅವ್ಯಕ್ತ
ಒಳಸುಳಿಯ.

ಮುಖಕ್ಕೆ ಹಿಡಿದ ಕನ್ನಡಿ ಹಲವು ರೂಪಗಳ
ಒಂದೇ ಕಡೆ ತೋರಿಸಿ,
ಗಹಗಹಿಸಿ ನಗುತ್ತಿರುವಾಗ;
ಪೆಚ್ಚು ನಗೆಯೊಂದನು ಜಗಕ್ಕೆ ಬೀರುತ್ತಾ,
ಕನ್ನಡಿಗೆ ಮಸಿ ಬಳಿಯುವುದು!

ಆಸೆಗಳ ನಡುವೆ ನಿರಾಸೆಗಳ ಎಣಿಸುತ್ತಾ,
ಕನಸಿನ ಗತಕಾಲದ ವೈಭವವೊಂದನು
ಜಪಿಸುತ್ತಾ; ಇದೇ ನಿತ್ಯಸುಖವೆಂಬಂತೆ
ತೃಪ್ತಿಯ ಸುಖದಿ ತೇಗುವುದು.

ಬುದ್ಧ, ಗಾಂಧಿ, ಯೇಸುವನ್ನೆಲ್ಲ
ಮಾತಿನ ನಡುವೆ ಎಳೆತಂದು;
ವ್ಯಾಸ, ವಾಲ್ಮೀಕಿ, ಡಾಂಟೆ, ಹೋಮರರ
ಜಾಗಟೆ ಬಡಿದು,
ತನ್ನ ಸುತ್ತಲೂ ಜಗವ ಸುತ್ತಿಸುವುದು.

ಕಾಲವಾದ ಮೇಲೂ, ನಕ್ಷತ್ರವಾಗುವ
ಬಯಕೆ ಮನದಲಿ ಹೊತ್ತು;
ಅದೊಂದು ಅನುಭೂತಿಯ ಜಗಕೆ ಹಚ್ಚಿಸಿ,
ಜಗದೊಡೆಯನೆಂಬಂತೆ ಬಿಂಬಿಸುವುದು.

ಅದು ಅಲ್ಲಿಗೆ ಮುಗಿಯದೆ,
ತೀಕ್ಷ್ಣ ತಿಕ್ಕಾಟ ಶುರುವಾಗಿ, ಸ್ಪರ್ಧೆಯ ಭಯ
ಭಯಾನಕವಾಗಿ; ತನ್ನ ಸಿಂಹಾಸನದ ಉತ್ತರಾಧಿಕಾರಿ
ತನ್ನ ರಕ್ತವೇ ಆಗಬೇಕೆಂಬ ಆಸೆಯಲಿ
ಬಸವಳಿಯುವುದು.

ಭ್ರಮೆಯಲೇ ಕಾಲ ಆವರಿಸುತ್ತಿರುವಾಗ,
ಅತೃಪ್ತಿಯನ್ನು ತೃಪ್ತಿಯಾಗಿ ಬದಲಿಸಲು
ತಿಳಿಯದೆ, ಹಾಗೆ ನೆಲಕ್ಕೊರಗುವುದು!

‍ಲೇಖಕರು Admin

23 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading