-ಸುಧಾ ಹಡಿನಬಾಳ
ಓ ತಾಯಿ ಕನ್ನಡ
ಓ ತಾಯಿ ಕನ್ನಡ
ನೀ ಎಂದು ಕೊರಗದಿರು
ನಾವು ನಿನ್ನ ಮಕ್ಕಳು
ಕನ್ನಡವೆಂದರೆ ಬರಿ ನುಡಿಯಲ್ಲ
ಕರುಳು ಬಳ್ಳಿಯ ಒಸುಗೆ
ನಮ್ಮ ನಡುವಿನ ಬೆಸುಗೆ
ತಾಯ್ನುಡಿಯಲಿ ಅಡಗಿದೆ
ನಮ್ಮೊಳಗಿನ ಹಿರಿಮೆ
ನಾಡೊಲವಿನ ಗರಿಮೆ
ತಾಯ್ನುಡಿಗಿದೆ ಸಹಸ್ರ
ಸಹಸ್ರ ವರ್ಷಗಳ ಚರಿತೆ
ಮತ್ತೇಕೆ ಅಳಿವಿನ ಚಿಂತೆ?
ಇರುವುದೊಂದೆ ನೋವು
ತಾಯ್ನುಡಿಯ ಬಗೆಗಿನ ಕೀಳರಿಮೆ
ಕಾಡುವ ಹೊಟ್ಟೆ ತುಂಬುವ ಪ್ರಶ್ನೆ
ಕಾಡುವುದೊಂದೆ ಕೊರಗು
ಹಡೆದವ್ವಳಿಗಿಂತ ಚಿಕ್ಕಮ್ಮನ
ಮೇಲಿನ ಕುರುಡು ಮೋಹ!
ಇರಲಿ ಬಿಡಿ ಈ ಹುಚ್ಚುತನ
ಹೆಚ್ಚು ಕಾಲ ನಡೆಯದು
ಕಾಲವೆ ಪಾಠ ಕಲಿಸುವುದು
ಹೆತ್ತ ತಾಯಿ ಹೊತ್ತ ನೆಲ
ತಾಯಿ ನುಡಿ ಎಂಬುದೇ
ಶ್ರೇಷ್ಠವೆಂಬ ನಿತ್ಯ ಸತ್ಯ
ಓ ತಾಯಿ ಕನ್ನಡ
ನೀ ಎಂದು ಕೊರಗದಿರು
ನಾವು ನಿನ್ನ ಮಕ್ಕಳು






0 Comments