ಶರೀಫ್ ಹಸಮಕಲ್ ಅವರ ಗಜಲ್ ಸಂಕಲನ ‘ಕಣ್ಣ ಬೊಗಸೆಯಲ್ಲಿ’
ಈ ಕುರಿತ ಪ್ರಕಾಶ ಬುದ್ದಿನ್ನಿ ಅವರ ಬರಹ ಇಲ್ಲಿದೆ.
–ಪ್ರಕಾಶ ಬುದ್ದಿನ್ನಿ
” ಜಗತ್ತಿನಲ್ಲಿ ನಾನೇಕೆ ಬಡವ ಆ ನಿನ್ನ ಒಲುಮೆ ಇರುವ ತನಕ
ನಿನ್ನ ಸಾಂಗತ್ಯ ಒಂದು ಸಾಕು ಸದಾ ಕುಣಿವೆ ಬದುಕಿರುವತನಕ “
ಶರೀಫ್ ಹಸಮಕಲ್ ಅವರ ಕಣ್ಣ ಬೊಗಸೆಯಲ್ಲಿ ಗಜಲ್ ಸಂಕಲನ ಗಜಲ್ ಒಂದರ ಸಾಲುಗಳಿವು.
ಪ್ರೀತಿಯೊಂದಿದ್ದರೆ ಬದುಕಿನಲ್ಲಿ ಏನೆಲ್ಲವನ್ನೂ ಗೆಲ್ಲಬಹುದು; ಬದುಕನ್ನು ಸುಂದರವಾಗಿಸಿಕೊಳ್ಳಬಹುದು ಎಂಬ ಆಶಯವನ್ನು ಈ ಸಾಲುಗಳು ಸಾರುತ್ತವೆ. ಪ್ರೀತಿಯಿರುವಾಗ ಬಡತನವೂ ಗೌಣವಾಗುತ್ತದೆ. ಪ್ರೀತಿಯ ಸಾಂಗತ್ಯ ಬದುಕಿಗೆ ಹೊಸ ಚೈತನ್ಯವನ್ನು ತುಂಬುತ್ತದೆ. ಬದುಕಿನ ಸಂಕಷ್ಟಗಳ ನಡುವೆಯೂ ಪ್ರೀತಿಯ ಬೆಳಕಿನಲ್ಲಿ ಸಂತೋಷವನ್ನು ಕಂಡುಕೊಳ್ಳಬಹುದು ಎಂಬ ಭಾವ ಈ ಸಾಲುಗಳಲ್ಲಿ ಮಿಡಿಯುತ್ತದೆ. ಇಂತಹ ಅರ್ಥಪೂರ್ಣ ಹಾಗೂ ವಿಶಿಷ್ಟ ಸಾಲುಗಳನ್ನು ನೀಡಿರುವವರು ಕವಿ ಶರೀಫ್ ಹಸಮಕಲ್.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದವರಾದ ಶರೀಫ್ ಹಸಮಕಲ್ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ರಿಯಾಶೀಲ ಬರಹಗಾರರು. ‘ಇತ್ತೀಚಿನ ಕನ್ನಡ ಕಾವ್ಯ: ತಾತ್ವಿಕ ನೆಲೆಗಳು’ ಎಂಬ ವಿಷಯದ ಕುರಿತು ಸಂಶೋಧನೆ ಕೈಗೊಂಡು ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕಾವ್ಯಾಸಕ್ತರಾದ ಇವರು ‘ಚಿಲ್ಲರೆಗೆ ಕದಲದ ಜಾಗ’ ಎಂಬ ಕವನ ಸಂಕಲನವನ್ನು ಹಾಗೂ ‘ಅಕ್ಷರದ ಅರಿವು’ ಎಂಬ ಮಕ್ಕಳ ನಾಟಕವನ್ನು ರಚಿಸಿದ್ದಾರೆ. ಈ ನಾಟಕವು ನಾಟಕ ಅಕಾಡೆಮಿಯ ವತಿಯಿಂದ ರಾಯಚೂರು ಜಿಲ್ಲೆಯಾದ್ಯಂತ ಪ್ರದರ್ಶನಗೊಂಡಿದೆ. ಇವರ ಸಾಹಿತ್ಯಿಕ ಸಾಧನೆಗೆ ಸಂಚಯ ಕಾವ್ಯ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಹಂಪಮ್ಮ ಶರಣೆಗೌಡ ವಿರುಪಾಪುರ ದತ್ತಿ ಪ್ರಶಸ್ತಿ ಸಂದಿವೆ. ಪ್ರಸ್ತುತ ಸಿಂಧನೂರಿನ ವಿಜ್ಡಮ್ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧ್ಯಾಪನ, ಆಡಳಿತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಶರೀಫ್ ಹಸಮಕಲ್ ಅವರು ‘ಕಣ್ಣ ಬೊಗಸೆಯಲ್ಲಿ’ ಎಂಬ ಗಜಲ್ ಸಂಕಲನದ ಮೂಲಕ ಗಜಲ್ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದ್ದಾರೆ. 2022ರಲ್ಲಿ ದಾದಾಜಿ ಪ್ರಕಾಶನದ ಮೂಲಕ ಪ್ರಕಟಗೊಂಡಿರುವ ಈ ಸಂಕಲನವು ಒಟ್ಟು 52 ಗಜಲ್ಗಳನ್ನು ಒಳಗೊಂಡಿದೆ. ಇಲ್ಲಿನ ಪ್ರತಿಯೊಂದು ಗಜಲ್ ಕೂಡ ತನ್ನದೇ ಆದ ವಸ್ತು, ವಿಷಯ,ಆಶಯ ಮತ್ತು ಅಭಿವ್ಯಕ್ತಿಯಿಂದ ಗಮನ ಸೆಳೆಯುತ್ತದೆ. ಗಜಲ್ನ ಛಂದೋವಿನ್ಯಾಸವನ್ನು ಅಳವಡಿಸಿಕೊಂಡು ರಚಿಸಿರುವ ಈ ಗಜಲ್ಗಳು ವೈವಿಧ್ಯಮಯ ಅನುಭವಗಳನ್ನು ಓದುಗರ ಮುಂದಿಡುತ್ತವೆ.
ಈ ಸಂಕಲನದ ಗಜಲ್ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನೋವು, ಯಾತನೆ ಮತ್ತು ಸಂಕಟಗಳಂತಹ ವೈಯಕ್ತಿಕ ಭಾವನೆಗಳ ಜೊತೆಗೆ ವರ್ತಮಾನದ ಬದುಕಿನಲ್ಲಿ ಉಂಟಾಗುತ್ತಿರುವ ಸಂಬಂಧಗಳಲ್ಲಿನ ಬಿರುಕುಗಳು, ಸೌಹಾರ್ದತೆ, ಸಹಬಾಳ್ವೆ, ವೈಚಾರಿಕತೆ ಹಾಗೂ ಸಾಮಾಜಿಕ ಕಾಳಜಿಗಳು ಅಭಿವ್ಯಕ್ತಿಗೊಂಡಿವೆ. ಒತ್ತಡದ ಬದುಕಿನಲ್ಲಿ ಮನುಷ್ಯ ಅನುಭವಿಸುವ ತಾಕಲಾಟಗಳು, ಸ್ತ್ರೀಪರ ಕಾಳಜಿ, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ಮುಂತಾದ ವಿಷಯಗಳನ್ನೂ ಕವಿ ತಮ್ಮ ಗಜಲ್ಗಳ ಮೂಲಕ ತೆರೆದಿಡುತ್ತಾರೆ. ಧರ್ಮಗಳು ಮನುಷ್ಯನ ನಡುವೆ ಗೋಡೆಗಳನ್ನು ನಿರ್ಮಿಸುವುದಕ್ಕಲ್ಲ; ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯನ್ನು ಕಲಿಸುವುದಕ್ಕಾಗಿ ಎಂಬ ಆಶಯ ಇಲ್ಲಿನ ಸಾಲುಗಳಲ್ಲಿ ವ್ಯಕ್ತವಾಗುತ್ತದೆ.
ಗಜಲ್ಗಳ ಮೂಲಕ ಕೇವಲ ಪ್ರೇಮದ ಭಾವನೆಗಳನ್ನು ಅಭಿವ್ಯಕ್ತಿಸುವುದಷ್ಟೇ ಅಲ್ಲ, ಸಮಾಜದ ವೈರುಧ್ಯಗಳನ್ನು ಪ್ರಶ್ನಿಸುವ ಹಾಗೂ ಮನುಷ್ಯನೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸುವ ಪ್ರಯತ್ನವನ್ನೂ ಕವಿ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಈ ಸಾಲುಗಳನ್ನು ಗಮನಿಸಬಹುದು:
“ಗಜಲ್ಗಳಿಗೆ ಘಲ್ ಎನ್ನುವುದಷ್ಟೇ ಅಲ್ಲ
ಗುಡುಗುವುದೂ ಗೊತ್ತಿದೆ
ಬಳೆಗಳಿಗೆ ಮಿಂಚುವುದಷ್ಟೇ ಅಲ್ಲ
ಮಿನುಗುವುದೂ ಗೊತ್ತಿದೆ”
ಈ ಸಾಲುಗಳಲ್ಲಿ ಕವಿಯ ಅಭಿವ್ಯಕ್ತಿಯ ವೈಶಿಷ್ಟ್ಯವನ್ನು ಗುರುತಿಸಬಹುದು. ಗಜಲ್ಗಳು ಕೇವಲ ಮೃದು ಭಾವನೆಗಳ ಅಭಿವ್ಯಕ್ತಿಗೆ ಸೀಮಿತವಾಗದೆ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಶಕ್ತಿಯನ್ನೂ ಹೊಂದಿವೆ. ಹಾಗೆಯೇ ಬಳೆಗಳು ಕೇವಲ ಅಲಂಕಾರದ ಸಂಕೇತಗಳಲ್ಲ; ಅವು ಮಹಿಳೆಯ ಅಸ್ತಿತ್ವ, ಆತ್ಮವಿಶ್ವಾಸ ಮತ್ತು ಒಳಶಕ್ತಿಯ ಪ್ರತೀಕಗಳಾಗಿಯೂ ಮಿನುಗಬಲ್ಲವು ಎಂಬ ಅರ್ಥವನ್ನು ಈ ಸಾಲುಗಳು ಧ್ವನಿಸುತ್ತವೆ.
ಧರ್ಮಗಳ ಹೆಸರಿನಲ್ಲಿ ಮನುಷ್ಯರ ನಡುವೆ ನಿರ್ಮಾಣವಾಗುವ ಭೇದಭಾವವನ್ನು ಪ್ರಶ್ನಿಸುವ ಕವಿಯ ಮಾನವೀಯ ನಿಲುವು ಮತ್ತೊಂದು ಗಜಲ್ನಲ್ಲಿ ಹೀಗೆ ವ್ಯಕ್ತವಾಗುತ್ತದೆ:
“ಗುಡಿ ಚರ್ಚು ಮಸೀದಿ ಕಟ್ಟುವ ಕಲ್ಲಿಗೆ ಭೇದವಿಲ್ಲ
ಗಾಳಿ ಬೆಳಕು ನೀರು ತಾಕುವ ಈ ಎದೆಗೆ ಭೇದವಿಲ್ಲ”
ಗುಡಿ, ಚರ್ಚು ಮತ್ತು ಮಸೀದಿಗಳು ವಿಭಿನ್ನ ಧರ್ಮಗಳ ಆರಾಧನಾ ಸ್ಥಳಗಳಾಗಿದ್ದರೂ ಅವುಗಳನ್ನು ಕಟ್ಟುವ ಕಲ್ಲುಗಳಿಗೆ ಯಾವುದೇ ಭೇದವಿಲ್ಲ. ಹಾಗೆಯೇ ಗಾಳಿ, ಬೆಳಕು ಮತ್ತು ನೀರು ಎಲ್ಲರಿಗೂ ಸಮಾನವಾಗಿ ದೊರೆಯುವ ಪ್ರಕೃತಿಯ ಕೊಡುಗೆಗಳು. ಇವೆಲ್ಲವನ್ನೂ ಅನುಭವಿಸುವ ಮನುಷ್ಯರ ನಡುವೆ ಮಾತ್ರ ಜಾತಿ, ಧರ್ಮ ಹಾಗೂ ಇತರ ಭೇದಗಳನ್ನು ಸೃಷ್ಟಿಸಿಕೊಳ್ಳುವುದು ಎಷ್ಟು ಅರ್ಥಹೀನ ಎಂಬುದನ್ನು ಕವಿ ಮನಮುಟ್ಟುವ ರೀತಿಯಲ್ಲಿ ಹೇಳುತ್ತಾರೆ. ಮನುಷ್ಯರನ್ನು ಬೆಸೆಯುವ ಮಾನವೀಯತೆ ದೊಡ್ಡದು ಎಂಬ ಸಂದೇಶ ಈ ಸಾಲುಗಳಲ್ಲಿದೆ.
ಒಟ್ಟಾರೆಯಾಗಿ, ‘ಕಣ್ಣ ಬೊಗಸೆಯಲ್ಲಿ’ ಸಂಕಲನದ ಗಜಲ್ಗಳು ಪ್ರೀತಿ, ನೋವು, ಬದುಕಿನ ತಲ್ಲಣ, ಸಾಮಾಜಿಕ ವೈರುಧ್ಯಗಳು ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿವೆ. ಬದುಕಿನ ಕತ್ತಲೆಯ ನಡುವೆ ಬೆಳಕನ್ನು ಹುಡುಕುವ ಹಾಗೂ ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಸಹಬಾಳ್ವೆಯ ಆಶಯಗಳನ್ನು ಬಿತ್ತುವ ಪ್ರಯತ್ನ ಇಲ್ಲಿನ ಗಜಲ್ಗಳಲ್ಲಿ ಕಾಣುತ್ತದೆ. ಕಣ್ಣಿನ ಬೊಗಸೆಯಲ್ಲಿ ಜೋಪಾನವಾಗಿ ಹಚ್ಚಿಟ್ಟ ಹಣತೆಯೊಂದು ಕತ್ತಲನ್ನು ದೂರಮಾಡಿ ಬೆಳಕನ್ನು ಪಸರಿಸುವಂತೆ, ಈ ಸಂಕಲನದ ಗಜಲ್ಗಳೂ ಓದುಗರ ಮನಸ್ಸಿನಲ್ಲಿ ಮಾನವೀಯತೆಯ ಬೆಳಕನ್ನು ಮೂಡಿಸುವ ಆಶಯವನ್ನು ಹೊಂದಿವೆ.
ಇಂತಹ ವಿಶಿಷ್ಟ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡಿದ ಕವಿಗೆ ಶುಭಾಶಯಗಳು ಇವರಿಂದ ಮತ್ತಷ್ಟು ಬರಹ ಮೂಡಲಿ ಎಂದು ಆಶಿಸುತ್ತೇನೆ.






0 Comments