ಕಟಿಂಗ್ ಶಾಪಿನ ಗುಂಗಿನಲ್ಲಿ…

ಗೀತಾ ಡಿ ಸಿ

ಸ್ವಾತಂತ್ತ್ರ್ಯಾನಂತರದ ಭಾರತ ಅನೇಕ ಏರಿಳಿತಗಳನ್ನು ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿಯ ಮನಸ್ಥಿತಿ ತೊಲಗಿ, ಯಾರ ಹಂಗಿಲ್ಲದೆ ಸ್ವತಂತ್ರವಾಗಿ ದುಡಿದುಣ್ಣಲು ಇಲ್ಲಿನ ಕಟ್ಟಕಡೆಯವನಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗ, ಆರೋಗ್ಯಗಳಂತಹ ಮೂಲಭೂತ ಸೌಲಭ್ಯಗಳು ದಕ್ಕಬೇಕು, ಅಂತಹ ವಾತಾವರಣವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರಗಳು ಸುಷ್ಟಿಸಿಕೊಡಬೇಕೆಂಬೆಲ್ಲ ಕನಸುಗಳಿದ್ದವು. (ಹನ್ನೆರಡನೆಯ ಶತಮಾನದಲ್ಲಿಯೇ ನಮ್ಮ ಕನ್ನಡದ ವಚನಕಾರರು ಇಂತಹ ಕನಸುಗಳನ್ನು ಇಲ್ಲಿ ಬಿತ್ತಿದ್ದರೆಂಬುದನ್ನು ಮರೆಯುವಂತಿಲ್ಲ.) ಈ ಕನಸುಗಳು ಸಾಕಾರಗೊಳ್ಳಲು ಸ್ವಾತಂತ್ರ್ಯಾನಂತರವೂ ಅನೇಕ ಜನಪರ ಚಳುವಳಿಗಳಾದವು.

ಈ 75 ವರ್ಷಗಳಲ್ಲಿ ಭಾರತ ಹಿಂದೆಂದೂ ಕಾಣದ, ನಮ್ಮ ಊಹೆಗೂ ನಿಲುಕದ ಅತಿ ದೊಡ್ಡ ಬದಲಾವಣೆ ಕಳೆದ ಹತ್ತು ವರ್ಷಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಂಡಿದೆ! ಈ ಬದಲಾವಣೆ ಸಾಮಾನ್ಯ ಜನರ ಬವಣೆಗಳನ್ನು ಕೆಲಮಟ್ಟಿಗಾದರೂ ನೀಗಿಸಿವೆ ಎಂಬುದು ಸುಳ್ಳೇನಲ್ಲ. ಜಗತ್ತಿನ ಗಡಿಗೆರೆಗಳು ಮಾಯವಾಗಿ, ಆಹಾರ, ಬಟ್ಟೆ ಉತ್ಪಾದನೆಗಳು ಬಡತನದ ಕೊರತೆಗಳನ್ನು ನೀಗಿಸಿವೆ. ಮೊಬೈಲೆಂಬ ಮಾಯಾಜಾಲದ ಮೂಲಕ ಅನೇಕ ಸೌಲಭ್ಯಗಳು, ಅನುಕೂಲಗಳು ಸೃಷ್ಟಿಗೊಂಡು ಹಳ್ಳಿಗಳ ಮೂಲೆಮೂಲೆಗಳನ್ನೂ ತಲುಪಿರುವುದರ ಜೊತೆಗೆ ಬದುಕುಗಳು ತಡಬಡಾಯಿಸಿಯೂ ಇವೆ. ಒಟ್ಟಾರೆ ಹೊಸ ಬದಲಾವಣೆ ಹೊಸದೇ ಬದುಕುಗಳಿಗೆ ನಾಂದಿ ಹಾಡಿದೆ.

ಬದಲಾಗುವ ಕಾಲಕ್ಕನುಗುಣವಾಗಿ ಸಮಾಜದ ಎಷ್ಟೋ ಆಲೋಚನಾಕ್ರಮಗಳೊಂದಿಗೆ ಇಲ್ಲಿನ ಸಮಸ್ಯೆಗಳೂ ರೂಪಾಂತಗೊಳ್ಳುತ್ತಿರುತ್ತವೆ. ತಮ್ಮೊಳಗಿನ ಸಮಸ್ಯೆಗಳಿಗೆ ಕಾಲಕಾಲಕ್ಕೆ ನಾಡಿನ ಅನೇಕ ಹಿರಿಯ ಚಿಂತಕರೊಂದಿಗೆ, ಸೂಕ್ಷ್ಮವಾಗಿ ಗಮನಿಸುವ ಕಿರಿಯ ಮನಸ್ಸುಗಳೂ ಲೇಖನಗಳ ಮೂಲಕ, ಸೃಜನಶೀಲ ಬರಹಗಳ ಮೂಲಕ, ರಂಗಭೂಮಿ ಹಾಗೂ ಚಲನಚಿತ್ರಗಳ ಮೂಲಕ, ತಮ್ಮೊಳಗೆ ಹುಟ್ಟುವ ಅನೇಕ ಪ್ರಶ್ನೆಗಳನ್ನು, ಆತಂಕಗಳನ್ನು, ಆಲೋಚನೆಗಳನ್ನು ತಮ್ಮದೇ ಆದ ರೀತಿಯಲ್ಲಿ ಸಮಾಜದ ಹಾಗೂ ನಮ್ಮನ್ನಾಳುವ ಸರ್ಕಾರದ ಗಮನಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತವೆ. ಇದನ್ನು ಹೇಳುವಾಗ ಈ ಕ್ಷಣಕ್ಕೆ ಥಟ್ಟನೆ ನೆನಪಾಗುತ್ತಿರುವುದು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಕಾಸರಗೋಡು ಸಿನೆಮಾ ಹಾಗೂ ಸ್ವೀಡನ್ನಿನ ವಿದ್ಯಾರ್ಥಿ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್.

ಗಡಿನಾಡಿನ ಕನ್ನಡ ಶಾಲೆಗಳು ಎದುರಿಸಬೇಕಾಗಿರುವ ಸಂಕಷ್ಟಗಳ ಬಗೆಗೆ ನಿರ್ದೇಶಕ ರಿಷಬ್ ಶೆಟ್ಟಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಹಾಗೆಯೇ ಆಗಸ್ಟ್ 2018 ರಲ್ಲಿ ಥನ್‌ಬರ್ಗ್ ತನ್ನ 15 ನೇ ವಯಸ್ಸಿನಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ/ನಿಯಂತ್ರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಲಾ ಮುಷ್ಕರವನ್ನು ಆರಂಭಿಸಿ ಜಗತ್ತಿನ ಗಮನ ಸೆಳೆಯುತ್ತಾಳೆ. ಇವಳೊಂದಿಗೆ ಅನೇಕ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆಗೆ ಜೊತೆಗೂಡುತ್ತಾರೆ.

ಇದು ಸುದ್ದಿಯಾಗಿ, ಸರ್ಕಾರದ ಗಮನಸೆಳೆದದ್ದು ಮಾತ್ರವಲ್ಲದೆ, ಥನ್‌ಬರ್ಗಳಿಗೆ 2018 ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವ ಅವಕಾಶವೊದಗಿಬರುತ್ತದೆ. ಅಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು, ಪರಿಸರವನ್ನು ಹಾಳುಗೆಡವುತ್ತಿರುವುದಕ್ಕೆ ಕಾರಣರಾದ ರಾಷ್ಟ್ರನಾಯಕರನ್ನು ಪ್ರಶ್ನಿಸುವ ದಿಟ್ಟತನ ತೋರುತ್ತಾಳೆ. ಇದರ ಪರಿಣಾಮವಾಗಿ ರಾಷ್ಟ್ರನಾಯಕರು ಎಚ್ಚೆತ್ತುಕೊಂಡರೆ? ಅವಳ ಪ್ರತಿಭಟನೆಗೆ ಪರಿಹಾರ ಸಿಕ್ಕಿತೇ? ಎನ್ನುವ ಪ್ರಶ್ನೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಯಾಕೆಂದರೆ ಇದು ಸಿನೆಮಾ ಅಲ್ಲ! ಆದರೂ ಇಲ್ಲಿ ಗಮನಿಸಬೇಕಾದುದು, 15ರ ವಯಸ್ಸಿನ ವಿದ್ಯಾರ್ಥಿಯೊಬ್ಬಳು ವ್ಯವಸ್ಥೆಯ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸಿದಳಲ್ಲ ಎನ್ನುವುದು. ಜೊತೆಗೆ ಇವಳ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನವನ್ನು ಅಲ್ಲಿನ ನಾಯಕರು ತೋರಿದರಲ್ಲ ಎನ್ನುವುದು. ಅದೇ ಪ್ರತಿಭಟನೆ ಇಲ್ಲಿ ಅಂದರೆ, ಭಾರತದಲ್ಲಿ ನಡೆದಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವ, ಪ್ರತಿಭಟಿಸುವವರನ್ನೇ ಇಲ್ಲವಾಗಿಸುವ ಅವಾಂತರಗಳೆಲ್ಲ ಜರುಗಿಬಿಡುತ್ತಿತ್ತೇನೋ…? ಪರಸ್ಪರ ಸೌಹಾರ್ದಯುತವಾಗಿ ಬದುಕಬೇಕೆಂದ ಬುದ್ಧ, ಬಸವ, ಕನಕ-ಪುರಂದರ, ವಿವೇಕಾನಂದ, ಗಾಂಧಿಯಂಥವರು ನಡೆದಾಡಿದ ನಾಡಿನಲ್ಲಿ ಏನೆಲ್ಲಾ ಜರುಗುತ್ತಿವೆ ಎಂದರೆ, ಏನು ಹೇಳುವುದು?

ಭಾರತದ ಸ್ವಾತಂತ್ರ್ಯಕ್ಕಾಗಿ, ಇಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ, ಅವರೆಲ್ಲರ ಉತ್ತಮ ಬದುಕು, ಭವಿಷ್ಯಕ್ಕಾಗಿ ನಿಸ್ವಾರ್ಥವಾಗಿ ಜಾತಿ, ಮತ, ಲಿಂಗಭೇದವಿಲ್ಲದೆ ಜೀವತೆತ್ತವರು, ಕುಟುಂಬಗಳನ್ನು ತೊರೆದು ಹೋರಾಟಗಳಲ್ಲಿ ಭಾಗಿಯಾದವರು, ತಮ್ಮ ಬದುಕುಗಳನ್ನೇ ಕಳೆದುಕೊಂಡವರು, ಕಾಲಕಾಲಕ್ಕೆ ಉಣ್ಣದೆ, ಉಡದೆ, ನಿದ್ದೆಯಿಲ್ಲದೆ, ಯಾವ ಸುಖವನ್ನೂ ಸುರಿದುಕೊಳ್ಳದೆ ಬಡಿದಾಡಿದವರೆಷ್ಟೋ!! ಈಗ್ಗೆ ನೂರು ವರ್ಷಗಳ ಹಿಂದೆ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಏನೇನನ್ನು ಕಲಿಸಬೇಕೆಂಬ, ಆ ಮೂಲಕ ನಮ್ಮ ಭಾಷೆಯ ಉಳುವಿಗೆ ಹೇಗೆ ಒತ್ತು ಕೊಡಬೇಕೆಂಬ ಚರ್ಚೆಗಳು ನಡೆದಿರುವುದು ಬಿಎಂಶ್ರೀ, ಡಿವಿಜಿ, ಕುವೆಂಪು, ಬೇಂದ್ರೆ ಮುಂತಾದವರ ಬರಹಗಳಲ್ಲಿ ಕಾಣಸಿಗುತ್ತವೆ. ಇಂಥವರ ಪರಿಶ್ರಮವನ್ನೆಲ್ಲಾ ಗಾಳಿಗೆ ತೂರಿ, ಈಗ ನಾವೆತ್ತ ಸಾಗುತ್ತಿದ್ದೇವೆ? ಎನ್ನುವ ಪ್ರಶ್ನೆ ಮೌನವಾಗಿ ಅನೇಕರಲ್ಲಿ ಅಸಹಾಯಕವಾಗಿ ಹರಿದಾಡುತ್ತಿದೆ!

ಇದೀಗ ಕರ್ನಾಟಕದಲ್ಲಿ ಪಠ್ಯಪುಸ್ತಕಗಳ ಬಗೆಗೆ ದೊಡ್ಡ ಅವಾಂತರವೆದ್ದಿದೆ. ಸ್ವಾತಂತ್ರ್ಯಾನಂತರದ ಈ 75 ವರ್ಷಗಳಲ್ಲಿ ಇನ್ನೂ ನಮ್ಮ ಮಕ್ಕಳಿಗೆ ಬದಲಾದ ಕಾಲಮಾನಕ್ಕನುಗುಣವಾಗಿ ಯಾವ ಯಾವ ವಯಸ್ಸಿನಲ್ಲಿ ಏನೇನು ಕಲಿಸಬೇಕೆಂಬುದರ ಸ್ಪಷ್ಟತೆಯೇ ನಮಗಿಲ್ಲವಾಗಿದೆ! ಮಾರುಕಟ್ಟೆಯಲ್ಲಿ ಲಾಭದಾಯಕ ವ್ಯವಹಾರದಲ್ಲಿ ಸ್ಪರ್ಧೆಗೆ ಬಿದ್ದಂತೆ, ಉಳ್ಳವರಿಗೊಂದು, ಇರದವರಿಗೊಂದು, ಕಾಸಿಗೊಂದು, ಕೊಸರಿಗೊಂದೆಂಬಂತೆ ಮನಸೋ ಇಚ್ಛೆ ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಶಾಲಾ ಕಾಲೇಜುಗಳಲ್ಲಿ ಅವರವರಿಗೆ ತೋಚಿದಂತೆ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಮಕ್ಕಳಿಗೆ ಅದೇನೇನನ್ನು ತಲುಪಿಸುತ್ತಿದ್ದಾರೋ?! ಇದನ್ನು ಗಮನಿಸಿದಾಗ ಯಾವ ಮಕ್ಕಳು ಓದುವ, ಯಾವ ಪಠ್ಯ ಪುಸ್ತಕದ ಬಗೆಗೆ ಚರ್ಚೆಯಾಗುತ್ತಿದೆ? ಎಂದೆನಿಸುವುದಿಲ್ಲವೆ? ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ, ನಿಜವಾಗಿಯೂ ಪೆಟ್ಟು ಬೀಳುತ್ತಿರುವುದು ಮಕ್ಕಳ ಮನೋಲೋಕಕ್ಕೆ; ಅವರ ಬೆಳವಣಿಗೆಗೆ. ದೊಡ್ಡವರ ರಾಡಿತನವನ್ನು ಮಕ್ಕಳು ಗಮನಿಸುತ್ತಿರುತ್ತಾರೆಂಬ ವಿವೇಚನೆ, ಸಂಕೋಚವೂ ಇರದಂತೆ ವರ್ತಿಸುತ್ತಿರುವುದು ವಿಪರ್ಯಾಸವಲ್ಲದೆ ಮತ್ತೇನು?

ಈ ಎಲ್ಲ ಅವಾಂತರಗಳ ನಡುವೆ ಅಂಗೈಯಲ್ಲಿ ಮೊಬೈಲು ಹಿಡಿದು ಇದ್ದಲ್ಲೇ ಜಗತ್ತನ್ನು ಸುತ್ತುವಂತಿರುವ ಬದಲಾಗಿರುವ ಕಾಲದಲ್ಲಿ ಮಕ್ಕಳ/ ವಿದ್ಯಾರ್ಥಿಗಳ ಮನೋಲೋಕದಲ್ಲಿ ಓಡುತ್ತಿರುವುದಾದರೂ ಏನು? ಒಮ್ಮೆಯಾದರೂ ಯೋಚಿಸಿದ್ದೇವೆಯೇ?

ಇಷ್ಟೆಲ್ಲಾ ಅನಿಸಲು ಕಾರಣವಾಗಿದ್ದು ಇತ್ತೀಚೆಗೆ ನೋಡಿದ ಹೊಸಬರೇ ಸೇರಿ ನಿರ್ಮಿಸಿರುವ, ತೆರೆಯ ಹಿಂದೆ ಕೆಲಸ ಮಾಡುವ ಸಂಕಲನಕಾರನಾಗಬೇಕೆಂಬ ಕನಸನ್ನು ಹೊತ್ತು, ಅದನ್ನು ಸಾಕಾರಗೊಳಿಸಿಕೊಳ್ಳುವಾಗಿನ ವಿದ್ಯಾರ್ಥಿಯೊಬ್ಬನ ಬದುಕಿನ ಬವಣೆಗಳನ್ನು ಕಾಣಿಸುವ ಪವನ್ ಭಟ್ ನಿರ್ದೇಶನದ ಕಟಿಂಗ್ ಶಾಪ್ ಎನ್ನುವ ಕನ್ನಡ ಸಿನೆಮಾ! ಮೇಲ್ನೋಟಕ್ಕೆ ಇದೊಂದು ನವಿರು ಹಾಸ್ಯವುಳ್ಳ ಸಾಧಾರಣ ಚಿತ್ರವೆನಿಸಿದರೂ, ಕನ್ನಡದಲ್ಲಿ ಮೊದಲ ಬಾರಿಗೆ ಪ್ರೇಕ್ಷಕರ ಅರಿವಿಗೇ ಬಾರದಂತೆ ತೆರೆಯ ಹಿಂದೆ ಉಳಿದುಬಿಡುವ, ಒಂದು ಸಿನೆಮಾದಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಕತ್ತರಿಸಬೇಕೆಂದು ನಿರ್ಧರಿಸುವ, ತಾಂತ್ರಿಕವಾಗಿ ಅತ್ಯಂತ ಕ್ಲಿಷ್ಟಕರ ಕೆಲಸವನ್ನು ನಿಭಾಯಿಸಿ ಅಚ್ಚುಕಟ್ಟಾಗಿ ಒಂದು ಸಿನಿಮಾ ಹೊರಬರುವಂತೆ ಮಾಡುವ ಸಂಕಲನಕಾರನ ಕತೆಯನ್ನು ವಸ್ತುವಾಗಿರಿಸಿಕೊಂಡ ಚಿತ್ರವಿದು. ಇದಿಷ್ಟೇ ಅಲ್ಲದೆ, ಯುವ ಪೀಳಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಭರದಲ್ಲಿ, ಅದರಲ್ಲೂ ವಿದ್ಯಾರ್ಥಿಗಳಲ್ಲಿ ಬೇರೂರುತ್ತಿರುವ ಕುಟುಂಬದ ಹಿರಿಯರ ಬಗೆಗೆ ಮತ್ತವರ ಪರಿಶ್ರಮದ ಕೆಲಸದ ಬಗೆಗಿನ ಉಡಾಫೆ ಮನೋಭಾವ, ಕೆಲ ಅಧ್ಯಾಪಕರಲ್ಲಿರಬಹುದಾದ ಮನೋದೌರ್ಬಲ್ಯಗಳು, ಶಿಕ್ಷಣ ಸಂಸ್ಥೆಗಳಲ್ಲಿರಬಹುದಾದ ಅವ್ಯವಸ್ಥೆಗಳನ್ನು ಕಾಣಿಸುತ್ತದೆ.

ಸಿದ್ಧಮಾದರಿಗಿಂತ ಕೊಂಚ ಭಿನ್ನವಾಗಿ ಆಲೋಚಿಸುವ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನ್ನ ಕನಸುಗಳನ್ನು ಕಟ್ಟಿಟ್ಟು, ಮನೆಯವರ ಆಸೆಗಳಿಗನುಗುಣವಾಗಿ ತನಗಿಷ್ಟವಿರದಿದ್ದರೂ ಓದಿ ಹೆಚ್ಚಿನ ಅಂಕಗಳಿಸಬೇಕಾದ ಅನಿವಾರ್ಯತೆಯನ್ನು ಮೀರಿ ಸಂಕಲನಕಾರನಾಗುವ ಕನಸು ಹೊತ್ತು, ಕಾಲೇಜಿನಿಂದ ಮಾತ್ರವಲ್ಲ, ಮನೆಯಿಂದಲೂ ಹೊರಬೀಳಬೇಕಾದ ಪರಿಸ್ಥಿತಿ ಎದುರಾಗುವುದನ್ನು, ತನ್ನ ದುಡಿಮೆಯನ್ನೇ ನಿಕೃಷ್ಟವಾಗಿ, ಕೀಳಾಗಿ ಕಂಡಿದ್ದರೂ, ಕಷ್ಟದಲ್ಲಿ ಜೊತೆಗೆ ನಿಲ್ಲುವ ಸೋದರಮಾವನೆಂಬ ಸಂಬಂಧದ ನಂಟನ್ನು, ಅಮ್ಮ ಗುಟ್ಟಾಗಿ ನೀಡುವ ಆರ್ಥಿಕ ನೆರವು, ಭಾವುಕತನದ ಹಾರೈಕೆ, ಬೆಂಬಲ, ಕಡುಕಷ್ಟದಲ್ಲೂ ಜೊತೆಗಿರುವ ಗೆಳೆತನ, ಸಂಕಲನಕಾರನ ಪ್ರಾಮಾಣಿಕ ಪ್ರಯತ್ನವನ್ನು ಮತ್ತೊಬ್ಬರು ಬಳಸಿಕೊಂಡು ಹೊಸಬರೆಂದೋ, ಚಿಕ್ಕವರೆಂದೋ ತುಳಿದುಬಿಡುವ ಚಿತ್ರರಂಗದೊಳಗಿನ ಸಣ್ಣತನಗಳನ್ನು, (ಇದು ಎಲ್ಲೆಡೆಯೂ ಇರುವುದೆನ್ನುವುದನ್ನು ಧ್ವನಿಸುತ್ತದೆ), ತುತ್ತು ಅನ್ನಕ್ಕೂ ಪರದಾಡಿ, ಬದುಕೆಂದರೆ ಉಡಾಫೆಯಲ್ಲವೆಂಬುದನ್ನು ಅರ್ಥ ಮಾಡಿಸುವ, ಸಾಧನೆಯ ಹಾದಿ ಸುಲಭದ್ದಲ್ಲವೆಂಬುದನ್ನು ಮನಗಾಣಿಸುವ, ತಾನಂದುಕೊಂಡಿದ್ದನ್ನು ಸಾಧಿಸಲೇಬೇಕೆನ್ನುವ ಅದಮ್ಯ ಬಯಕೆ, ಚಲವುಳ್ಳ ಮನಸ್ಸಿನ ಚಿತ್ರಣಗಳನ್ನು ಸಿನಿಮಾ ತನ್ನೊಡಲಲ್ಲಿಟ್ಟುಕೊಂಡಿದೆ. ಅನಗತ್ಯವಾದುದನ್ನು ತುರುಕದೆ, ಸಹಜ ಸಂಭಾಷಣೆಯೊಂದಿಗೆ ಪ್ರೇಕ್ಷಕರಿಗೆ ಪ್ರಿಯವಾಗುವಂತಿರುವ ‘ಕಟಿಂಗ್ ಶಾಪ್’ ನಮ್ಮ ಸುತ್ತಲೂ ಇರುವ ಯಾವೆಲ್ಲ ಅವ್ಯವಸ್ಥೆಗಳನ್ನು ಸಿನೆಮಾದ ಸಂಕಲನಕಾರನಂತೆ ಕತ್ತರಿಸಿ ಚೆನ್ನಾಗಿರುವುದನ್ನು ಮಾತ್ರ ಜೋಡಿಸಿಟ್ಟುಕೊಳ್ಳುವಂತಿದ್ದರೆ ಅದೆಷ್ಟು ಚೆನ್ನಿತ್ತು ಎಂದೂ ಅನಿಸುವಂತಿದೆ. ಇದರಲ್ಲಿನ ಸರಳತೆಯೇ ಒಟ್ಟು ಸಿನೆಮಾದ ಸೌಂದರ್ಯವನ್ನು ಹೆಚ್ಚಿಸಿದೆ; ಇಂದಿನ ಸಮಾಜದ ಎಷ್ಟೋ ಅವ್ಯವಸ್ಥೆಗಳಿಗೆ ರೂಪಕದಂತಿದೆ.

ಕೋಟಿಗಟ್ಟಲೆ ಹಣ ಸುರಿದು ಹೀರೋ ಪ್ರಧಾನವಾದ, ಅತಿದೊಡ್ಡ ಸದ್ದಿನೊಂದಿಗೆ ಬಿಡುಗಡೆಗೊಳ್ಳುವ ಚಿತ್ರಗಳ ನಡುವೆ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ಉದ್ಯೋಗಗಳನ್ನು ಸೃಷ್ಟಿಸುವ, ಪ್ರತಿಭೆಗೆ ಹಿರಿ–ಕಿರಿದೆಂದು ಭೇದವೆಣಿಸಬಾರದೆಂಬುದನ್ನು ಹೇಳುತ್ತಲೇ ಶ್ರಮಪಟ್ಟು, ಶ್ರದ್ಧೆಯಿಂದ ಮಾಡುವ ಎಲ್ಲಾ ಕೆಲಸಗಳಿಗೂ ಮನ್ನಣೆ, ಗೌರವಾದರದಿಂದ ಕಾಣಬೇಕೆಂಬುದನ್ನು, ಯಾವ ಕೆಲಸವೂ ದೊಡ್ಡದಲ್ಲ, ಯಾವ ಕೆಲಸ ಚಿಕ್ಕದೂ ಅಲ್ಲವೆಂಬುದನ್ನು, ವ್ಯವಸ್ಥೆಯೊಳಗಿನ ‘ದೊಡ್ಡವರ’ ಸಣ್ಣತನಗಳನ್ನು, ಹುಂಬತನಗಳನ್ನು ಗ್ರೇಟಾ ಥನ್‌ಬರ್ಗಳಂತೆ ನೇರವಾಗಿ ಹೇಳಲಾಗದಿದ್ದರೂ ಕನ್ನಡದ ನೆಲದಲ್ಲಿ ಸಿನಿಮಾ ಮೂಲಕ ಕಾಣಿಸಲು ಪ್ರಯತ್ನಪಟ್ಟಿರುವ ಕಟಿಂಗ್ ಶಾಪ್ ಚಿತ್ರತಂಡದವರ ಸಾಹಸ ವಿಶೇಷ ಧ್ವನಿಯಂತಿದೆ.

ನಿಜವಾಗಿಯೂ ಮಕ್ಕಳ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ, ಅದಾವ ಶಿಕ್ಷಣದ ಮೂಲಕ ಅದೇನೆನನ್ನು ಅವರೊಳಗೆ ನಾವು ಬಿತ್ತುತ್ತಿದ್ದೇವೆ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳುವ ಕಾಲ ಎಂದಾದರೂ ಬಂದೀತೆ?

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: