ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…

ಮೂಲ : ಎರಿಕ್ ಫ಼್ರೀಡ್

ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

ಎರಿಕ್ ಫ಼್ರೀಡ್-ರು (ERICH FRIED) [1921-1988] ಆಸ್ಟ್ರಿಯಾ ದೇಶದ ಜರ್ಮನ್ ಭಾಷೆಯ ಪ್ರಖ್ಯಾತ ಕವಿ, ಲೇಖಕ, ಹಾಗೂ ಅನುವಾದಕರಾಗಿದ್ದರು.  ಆರಂಭದಲ್ಲಿ ಫ಼್ರೀಡ್-ರು ತಮ್ಮ ರಾಜಕೀಯ ಕವಿತೆಗಳಿಗಾಗಿ ಆಸ್ಟ್ರಿಯಾ ಮತ್ತು ಜರ್ಮನಿಯಲ್ಲಿ ಹೆಸರು ಪಡೆದರು.  ಆಮೇಲೆ ಅವರ ಪ್ರೇಮ ಕವಿತೆಗಳೂ ಜನಮೆಚ್ಚುಗೆ ಪಡೆದವು.  ಲೇಖಕರಾಗಿ ಅವರು ಹೆಚ್ಚಾಗಿ ನಾಟಕಗಳು ಹಾಗೂ ಕಿರುಗಾದಂಬರಿಗಳನ್ನು ಬರೆದರು.  ಅನುವಾದಕರಾಗಿ ಅವರು ಶೇಕ್ಸ್‌ಪಿಯರ್, ಟಿ. ಎಸ್. ಎಲಿಯಟ್, ಡಿಲನ್ ಟಾಮಸ್-ರ ಕೃತಿಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದರು.  

ಆಸ್ಟ್ರಿಯಾ ದೇಶದ ರಾಜಧಾನಿಯಾದ ವಿಯೆನಾದಲ್ಲಿ 1921-ರಲ್ಲಿ ಫ಼್ರೀಡ್-ರು ಜನಿಸಿದರು.  ಚಿಕ್ಕ ವಯಸ್ಸಿನಿಂದಲೇ ಅವರು ಪ್ರಬಲವಾದ ರಾಜಕೀಯ ಪ್ರಬಂಧಗಳು ಮತ್ತು ಕವನಗಳನ್ನು ಬರೆಯುತ್ತಿದ್ದರು.  1938ರಲ್ಲಿ ಆಸ್ಟ್ರಿಯಾ ದೇಶವನ್ನು ನಾಜಿ ಜರ್ಮನಿಯು ಆಕ್ರಮಿಸಿ ವಶಪಡಿಸಿಕೊಂಡಿತು.  ಈ ಆಕ್ರಮಣದಲ್ಲಿ ಫ಼್ರೀಡ್-ರ ತಂದೆಯವರನ್ನು ನಾಜಿ ಗುಪ್ತ ಪೋಲಿಸ್ ಪಡೆ ‘ಗೆಸ್ಟಪೋ’ದವರು ಕೊಲೆ ಮಾಡಿದ ಸಂದರ್ಭದಲ್ಲಿ ಫ಼್ರೀಡ್-ರು ಇಂಗ್ಲೆಂಡ್‌ಗೆ ಪಲಾಯನವಾದರು.  ಅಲ್ಲಿ ಅವರು ಲಂಡನ್ ನಗರದಲ್ಲಿ ನೆಲೆಸಿ, 1949ರಲ್ಲಿ ಬ್ರಿಟಿಶ್ ಪೌರತ್ವವನ್ನು ಪಡೆದರು. ಈ ಘಟನೆಯ ನಂತರ ಅವರು ವಿಯೆನಾಗೆ ಮತ್ತೆ ಮರಳಿದ್ದು 1962ರಲ್ಲೇ.    

ಎರಡನೆಯ ವಿಶ್ವಯುದ‌್ಧದ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಅವರು ಲೈಬ್ರರಿಗಳಲ್ಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಆಸ್ಟ್ರಿಯಾದ ಹಲವಾರು ಯಹೂದಿಗಳನ್ನು ಇಂಗ್ಲೆಂಡಿಗೆ ಬರಲು ಸಹಾಯ ಮಾಡಿದರು. ಇಂಗ್ಲೆಂಡಿನಲ್ಲಿ ಇರುವಾಗಲೇ ಅವರ ಮೊದಲ ಕವನ ಸಂಕಲನ 1944ರಲ್ಲಿ ಪ್ರಕಟವಾಯಿತು. 1952 ರಿಂದ 1968ರ ವರೆಗೆ ಅವರು ಬಿ.ಬಿ.ಸಿ. ಯ ಜರ್ಮನ್ ಸರ್ವಿಸ್-ನ ರಾಜಕೀಯ ವಿಮರ್ಶಕರಾಗಿ ಕೆಲಸ ಮಾಡಿದರು. 

ಇಂಗ್ಲೆಂಡಿನಲ್ಲಿ ಅವರು ಹಲವಾರು ಕಿರು-ಪ್ರಬಂಧಗಳು ಹಾಗೂ ಕವನಗಳನ್ನು ಪ್ರಕಟಿಸಿದರು. ಅವರಿಗೆ ಸಾಹಿತ್ಯಲೋಕದಲ್ಲಿ ಪ್ರಸಿದ್ಧಿ ತಂದ ಪ್ರೇಮ-ಕವನಗಳ ಸಂಕಲನ ‘ಲವ್ ಪೊಯೆಮ್ಸ್’ 1979ರಲ್ಲಿ ಪ್ರಕಟವಾಯಿತು ಹಾಗೂ ಇನ್ನೊಂದು ಮುಖ್ಯ ಕವನ ಸಂಕಲನ ‘ಇಟ್ ಇಜ಼್ ವಾಟ್ ಇಟ್ ಇಜ಼್’ 1983ರಲ್ಲಿ ಪ್ರಕಟವಾಯಿತು. ಅವರ ಬರಹಗಳು ಜರ್ಮನಿ-ಆಸ್ಟ್ರಿಯಾ ದೇಶಗಳ ಹೊರಗೇ ಹೆಚ್ಚಾಗಿ ಪ್ರಕಟವಾದವು.  1969ರಲ್ಲಿ ಅವರ ಕೆಲವು ಆಯ್ದ ಕವನಗಳ ಸಂಕಲನವನ್ನು ಈಸ್ಟ್-ಜರ್ಮನಿಯ ಕವಿತಾ ಮಾಲಿಕೆ ‘ಪೊಯೆಸಿ-ಆಲ್ಬಮ್’ನಲ್ಲಿ ಪ್ರಕಟವಾಯಿತು ಹಾಗೂ ಅದೇ ಮಾಲಿಕೆಯಲ್ಲಿ ಅವರು ಜರ್ಮನ್ ಭಾಷೆಗೆ ಅನುವಾದ ಮಾಡಿದ ಡಿಲನ್ ಟಾಮಸ್-ರ ಕವನಗಳ ಸಂಕಲನ 1974ರಲ್ಲಿ ಪ್ರಕಟವಾಯಿತು.      

ಜ಼ಯೊನಿಸಂ, ಅಂದರೆ ಯೆಹೂದ್ಯ ರಾಷ್ಟ್ರವಾದದ ವಿರುದ್ಧ ಅವರ ಹೇಳಿಕೆಗಳು ಮತ್ತು ಎಡಪಂಥೀಯ ಚಳುವಳಿಗಳಿಗೆ ಅವರು ನೀಡಿದ ಬೆಂಬಲ ಅವರನ್ನು ಒಬ್ಬ ವಿವಾದಾಸ್ಪದ ವ್ಯಕ್ತಿಯನ್ನಾಗಿ ಮಾಡಿದವು.  ವಿಯೆಟ್ನಾಮ್‌ನಲ್ಲಿ ಅಮೇರಿಕದ ಆಕ್ರಮಣ ಹಾಗೂ ಪ್ಯಾಲೆಸ್ಟೀನ್-ನಲ್ಲಿ ನಡೆಯುತ್ತಿದ್ದ ಇಸ್ರೇಲಿನ್ ದಬ್ಬಾಳಿಕೆಯನ್ನು ಕಟುವಾಗಿ ವಿರೋಧಿಸಿದರು.  ಅವರ ರಾಜಕೀಯ ದೃಷ್ಟಿಕೋನಗಳಿಗಾಗಿ ಫ಼್ರೀಡ್-ರು ಟೀಕೆಗೆ ಒಳಗಾದರೂ, ಸಾಹಿತ್ಯಲೋಕದಲ್ಲಿ ಅವರು ಅಪಾರ ಮೆಚ್ಚುಗೆ ಪಡೆದಿದ್ದರು.  ಅವರ ದಾರ್ಶನಿಕ ಮತ್ತು ಹೃದಯಸ್ಪರ್ಶಿ ಕಾವ್ಯದ ಮೂಲಕ ಎರಿಕ್ ಫ಼್ರೀಡ್-ರು ಎರಡನೆಯ ವಿಶ್ವಯುದ್ಧದ ನಂತರದ ಕಾಲದ ಯುರೋಪಿಯನ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದರು ಮತ್ತು ಇಂದಿನವರೆಗೂ ಪ್ರಮುಖ ಸಾಹಿತಿಯಾಗಿ ಉಳಿದಿದ್ದಾರೆ.

1. ನಿಶ್ಶಬ್ದ
ಮೂಲ: SILENCE

ಇಲ್ಲದ ಹಕ್ಕಿಗಳ
ಚಿಲಿಪಿಲಿಯೇ ನಿಶ್ಶಬ್ದ
ಬತ್ತಿದ ಸಾಗರದ ತೆರೆನೊರೆಗಳು
ಹಿಂದೆರೆಗಳೇ ನಿಶ್ಶಬ್ದ

ನನ್ನ ಕಣ್ಣ ಮುಂದೆ ಕತ್ತಲೆಯಲಿ
ಕಾಣುವ ಮಿಣುಕೇ ನಿಶ್ಶಬ್ದ
ನನ್ನ ಕಿವಿಯಲ್ಲಿ ನಾಟ್ಯದವರ
ತಾಳಮದ್ದಳೆಯೇ ನಿಶ್ಶಬ್ದ

ಯುದ್ಧಕಾಲದ ದಿನವೊಂದರ
ಮುಂಜಾವಿನಲ್ಲಿ
ಭಗ್ನಾವಶೇಷಗಳ
ಹೊಗೆಯ ಮಂಜಿನ ಕಂಪೇ ನಿಶ್ಶಬ್ದ

ನನ್ನ ಮತ್ತು ನನ್ನಜ್ಜಿಯ ನಡುವೆ
ಅವಳ ಶವಪೆಟ್ಟಿಗೆಯ ಬಗಲಿನಲ್ಲಿ
ಇದ್ದುದೇ ನಿಶ್ಶಬ್ದ
ನಿಶ್ಶಬ್ದ ಅವಳಾಗಿರಲಿಲ್ಲ

ಭಾಷಣಗಳ ಭರವಸೆಗಳ
ಪ್ರತಿಧ್ವನಿಯೇ ನಿಶ್ಶಬ್ದ
ಎಲ್ಲಾ ಪದಗಳ
ತಳಬಂಡೆಯೇ ನಿಶ್ಶಬ್ದ

ಚೀತ್ಕಾರಗಳ ನಂತರ
ಉಳಿದದ್ದೇ ನಿಶ್ಶಬ್ದ
ನಿಶ್ಶಬ್ದವೇ ನಿಶ್ಶಬ್ದ
ನಿಶ್ಶಬ್ದವೇ ನನ್ನ ಭವಿಷ್ಯ

2. ಇರುವುದೊಂದೇ ದಾರಿ
ಮೂಲ: THE ONLY WAY OUT

ಬಿರಿದ ಬಂಡೆಯೊಂದರೊಳಗೆ
ಮೊಟ್ಟಯೊಂದು

ಮೊಟ್ಟೆಯಿಂದ ಹಾರಿತು
ಹಕ್ಕಿಯೊಂದು

ಹಕ್ಕಿಯ ಕೊಕ್ಕಿನಿಂದ ಉದುರಿತು
ಬಂಡೆಯೊಂದು

ಬಂಡೆಯ ಒಡೆಯಬಲ್ಲವರು
ಅದರೊಳಗೆ ಕಾಣುವರು

ಏನೂ ಇಲ್ಲ

3. ಕಟ್ಟ ಕಡೆಯಲ್ಲಿ
ಮೂಲ: AT THE VERY END

ನಾನು ಚಿಕ್ಕವನಿದ್ದಾಗ ನನಗೆ ಗೊತ್ತಿದ್ದದ್ದು:
ನಾನು ರಕ್ಷಿಸುವ
ಪ್ರತಿಯೊಂದು ಚಿಟ್ಟೆ
ಪ್ರತಿಯೊಂದು ಬಸವನಹುಳು
ಪ್ರತಿಯೊಂದು ಜೇಡ
ಪ್ರತಿಯೊಂದು ಗುಂಗರೆ
ಪ್ರತಿಯೊಂದು ಗುಗ್ಗುರು
ಬರುವುದು ಅಳುವುದು
ನನ್ನನ್ನು ಸಮಾಧಿ ಮಾಡುವಾಗ

ಒಮ್ಮೆ ನನ್ನಿಂದ ರಕ್ಷಿಸಲ್ಪಟ್ಟಮೇಲೆ
ಇವು ಯಾವೂ ಇನ್ನೆಂದೂ ಸಾಯಬೇಕಿಲ್ಲ
ಅವೆಲ್ಲವೂ ಬರುವವು
ನನ್ನ ಸಂಸ್ಕಾರಕ್ಕೆ

ಆಮೇಲೆ ನಾನು ದೊಡ್ಡವನಾದ ಮೇಲೆ
ನಾನು ಅರಿತೆ:
ಇದೆಲ್ಲ ಬಕ್ವಾಸು
ಯಾರೂ ಬರಲ್ಲ
ನಾನು ಅವರನ್ನೆಲ್ಲಾ ಮೀರಿ ಬದುಕುವೆ

ಈಗ ಮುದಿವಯಸ್ಸಿನಲಿ
ನಾನು ಕೇಳುವೆ:
ನಾನು ಅವುಗಳನ್ನು ಕೊನೆಯವರೆಗೂ ರಕ್ಷಿಸುವುದಾದರೆ
ಎರಡೋ ಮೂರೋ ಕಡೆಗಾದರೂ ಬರುವವೋ?

4. ಪದಗಳು
ಮೂಲ: WORDS

ಸುಸ್ತಾದ ನನ್ನ ಪದಗಳು ಅಕ್ಷರಗಳನ್ನು ಕಳಕೊಂಡಾಗ
ನನ್ನ ಟೈಪ್‌ರೈಟರ್‌ನಲ್ಲಿ ಬೆಪ್ಪು ತಪ್ಪುಗಳು ಕಾಣತೊಡಗಿದಾಗ
ನನಗೆ ನಿದ್ದೆ ಮಾಡಬೇಕೆಂದು ಅನಿಸಿದಾಗ
ಈ ಪ್ರಪಂಚದಲ್ಲಿ ಜರಗುವ ಘಟನೆಗಳ,
ನನ್ನಿಂದ ತಡೆಯಲಾಗದ ವಿಷಯಗಳ ಬಗ್ಗೆ
ಆಗುವ ದಿನ ದಿನದ ದುಃಖದಿಂದಾಗಿ
ಇನ್ನೆಂದೂ ನಿದ್ದೆಯಿಂದ ಏಳಲು ಮನಸ್ಸಿಲ್ಲದಾಗ

ಆಗ ಅಲ್ಲೊಂದು ಪದ ಇಲ್ಲೊಂದು ಪದ
ಅಂದವಾಗಿ ತಯಾರಾಗಿ
ಮೆಲ್ಲನೆ ಝೇಂಕರಿಸಲಾರಂಭಿಸುತ್ತದೆ
ಅರೆವಿಚಾರವೊಂದು ತನ್ನನ್ನು ತೀಡಿಕೊಂಡು
ಏನನ್ನೋ ನುಂಗಲಾಗದೇ ಒಂದು ಗಳಿಗೆ
ಉಸಿರುಕಟ್ಟಿ ಹೋಗಿರುವ ಇನ್ನೊಂದನ್ನು ಹುಡುಕುತ್ತದೆ
ಸುತ್ತ ಮುತ್ತ ನೋಡುತ್ತದೆ
ಆ ಅರೆವಿಚಾರದ ಕೈ ಹಿಡಿದು ಹೇಳುತ್ತೆ: ಬಾ

ಅರೆ ಯಾ ಪೂರ್ಣ ವಿಚಾರಗಳನ್ನು
ಜತೆಸೇರಿಸಿ ಯಾ ಜತೆತೊರೆದು
ಸುಸ್ತಾಗಿದ್ದ ಕೆಲ ಪದಗಳು ಹಾರುತ್ತವೆ
ಕೆಲ ಟೈಪ್-ತಪ್ಪುಗಳು ತಮ್ಮತಮ್ಮಲ್ಲೇ
ತಮಾಷೆಯಾಡುತ್ತವೆ
ಲಂಡನ್ನಿನ ಸ್ಲಮ್ಮುಗಳಿಂದ ಹೊರಟು
ಕಡಲು ಬಯಲು ಬೆಟ್ಟಗಳ ಮೇಲೆ
ಆಚೆ ಈಚೆ ಹಾರುತ್ತಾ
ಮತ್ತೆ ಮತ್ತೆ ಅದೇ ತಾಣಕ್ಕೆ ಬರುತ್ತವೆ

ಮತ್ತೆ ಬೆಳಗ್ಗೆ ನೀನು ಮೆಟ್ಟಲಿಳಿದು
ನಿನ್ನ ಉದ್ಯಾನದಲ್ಲಿ ನಡೆಯುವಾಗ
ನೀನು ನಿಂತು ಗಮನಿಸುವೆ ಅವುಗಳನ್ನು, ನೋಡುವೆ
ಅವುಗಳು ವಿಶ್ರಾಂತಿಸುವುದನ್ನು ಕಾಣುವೆ
ಅವುಗಳ ಮಿಡಿತಗಳನ್ನು ಆಲಿಸುವೆ
ಅವುಗಳಿಗೆ ಸ್ವಲ್ಪ ಛಳಿಯಾಗುತ್ತಿದೆ
ಈಗಲೂ ಸ್ವಲ್ಪ ಸ್ಥಳತಪ್ಪಿದಂತೆ ಇದೆ
ಆದರೆ ನಿನ್ನ ಜತೆಯಲ್ಲಿದ್ದಾವೆಂದು
ನಿಜಕ್ಕೂ ಅನಂತಾನಂದದಲ್ಲಿದ್ದಾವೆ ಅವು.

5. ಅದೇನೋ
ಮೂಲ: WHAT IT IS

ಅದು ಅಪಲಾಪ
ಎನ್ನುತ್ತೆ ವಿವೇಕ
ಅದೇನೋ ಅದು ಅದೇ
ಎನ್ನುತ್ತೆ ಪ್ರೇಮ
ಅದು ದುರಂತ
ಎನ್ನುತ್ತೆ ಲೆಕ್ಕಾಚಾರ
ಅದು ನೋವು ಬಿಟ್ರೆ ಬೇರೇನಲ್ಲ
ಎನ್ನುತ್ತೆ ಭಯ
ಅದು ಕೆಲಸಕ್ಕೆ ಬಾರದ್ದು
ಎನ್ನುತ್ತೆ ತಿಳುವಳಿಕೆ
ಅದೇನೋ ಅದು ಅದೇ
ಎನ್ನುತ್ತೆ ಪ್ರೇಮ
ಅದು ಹಾಸ್ಯಾಸ್ಪದ
ಎನ್ನುತ್ತೆ ಅಹಮ್ಮು
ಅದು ಹುಚ್ಚುತನ
ಎನ್ನುತ್ತೆ ಎಚ್ಚರ
ಅದು ಅಸಾಧ್ಯ
ಎನ್ನುತ್ತೆ ಅನುಭವ
ಅದೇನೋ ಅದು ಅದೇ
ಎನ್ನುತ್ತೆ ಪ್ರೇಮ

6. ಕತೆಗಳು
ಮೂಲ: FABLES

ಒಮ್ಮೆ ಸೌಂದರ್ಯವು ವಿಕಾರತೆಯ ಅತಿಥಿಯಾಗಿ ಹೋಗಿತ್ತು
ಅಲ್ಲಿ ಅವಳಿಗೆ ತಾನೂ ವಿಕಾರವೆಂದನಿಸಿತು
ಏಕೆಂದರೆ ವಿಕಾರತೆಯನ್ನು ತನ್ನಂತೆಯೇ
ಸುಂದರವಾಗಿಸಲು ತನ್ನಿಂದ ಸಾಧ್ಯವಾಗಲಿಲ್ಲವೆಂದು

ಆದರೆ ಕೆಲವರು ಹೇಳುವರು:
ವಿಕಾರತೆಯು ಸೌಂದರ್ಯದ ಅತಿಥಿಯಾಗಿ ಹೋಗಿತ್ತು
ಅಲ್ಲಿ ಅವಳಿಗೆ ಎಷ್ಟು ಹಾಯಾಗನಿಸಿತೆಂದರೆ
ಅಂದಿನಿಂದ ತಾನು ವಿಕಾರವೆಂದು ಅನಿಸಲೇ ಇಲ್ಲ

ಈ ಎರಡೂ ಕತೆಗಳನ್ನು ನಾನು ಆವಾಗ ನಂಬುವೆ
ಯಾವಾಗ ಎಲ್ಲಾ ದೇಶಗಳಲ್ಲೂ
ಹಸಿವೆ ಸಮೃದ್ಧಿಯ ಅತಿಥಿಯಾಗಿ ಮತ್ತೆ ಮತ್ತೆ ಹೋಗುತ್ತಾ
ಹಸಿವೆ ಇನ್ನು ಇಲ್ಲವೆ ಇಲ್ಲದಂತೆ ಆದಾಗ

ಆದರೆ ಮಗುವೊಂದು ನನ್ನನ್ನು ಕೇಳಿತು:
ಹಾಗಾದ್ರೆ, ಸಮೃದ್ಧಿಯು ಹಸಿವಿನ ಹಸಿವನ್ನು ತಣಿಸುತ್ತದೆಯೋ
ಅಥವಾ ಹಸಿವನ್ನು ತಿಂದು ಬಿಡುತ್ತದೆಯೋ?

7. ಒಂದು ಗಂಟೆ
ಮೂಲ: ONE HOUR

ನಾ ಬರೆದ ಕವನವೊಂದನ್ನು
ತಿದ್ದುವುದರಲ್ಲಿ ನಾನು
ಕಳೆದೆ ಒಂದು ಗಂಟೆ.

ಒಂದು ಗಂಟೆ
ಅಂದರೆ: ಈ ಅವಧಿಯಲ್ಲಿ
1400 ಚಿಕ್ಕ ಮಕ್ಕಳು ಹಸಿವಿನಿಂದ ಸತ್ತರು
ಪ್ರತಿ ಎರಡೂವರೆ ಸೆಕೆಂಡು
ಐದು ವರ್ಷದ ಕೆಳಗಿನ ಮಗುವೊಂದು
ಹಸಿವಿನಿಂದ ಸಾಯುತ್ತೆ ನಮ್ಮ ಜಗತ್ತಿನಲ್ಲಿ

ಹಾಗೂ ಈ ಒಂದು ಗಂಟೆಯಲ್ಲಿ
ಶಸ್ತ್ರ ಸ್ಪರ್ಧೆ ಮುಂದುವರೆಯಿತು.
62 ಮಿಲ್ಯನ್ ಎಂಟುನೂರು ಸಾವಿರ ಡಾಲರಗಳನ್ನು
ಈ ಒಂದು ಗಂಟೆಯಲ್ಲಿ ಖರ್ಚುಮಾಡಲಾಯಿತು
ವಿವಿಧ ಶಕ್ತಿಶಾಲಿ ರಾಷ್ಟ್ರಗಳ
ಪರಸ್ಪರ ರಕ್ಷಣೆಗಾಗಿ,
ಈ ಹೊತ್ತಿನ ಅಂಕಿಅಂಶಗಳ ಪ್ರಕಾರ
ಈ ವಿಶ್ವದ ಮಿಲಿಟರಿ ಖರ್ಚು
550 ಬಿಲಿಯನ್ ಡಾಲರಗಳು ಪ್ರತಿ ವರ್ಷ.
ನಮ್ಮ ದೇಶವೂ ಕೂಡ
ತನ್ನಿಂದಾದಷ್ಟು ಕಾಣಿಕೆ ಸಲ್ಲಿಸುತ್ತೆ.

ಇಲ್ಲೊಂದು ಪ್ರಶ್ನೆ ಹುಟ್ಟುತ್ತೆ
ಪರಿಸ್ಥಿತಿ ಹೀಗಿರುವಾಗ
ಕವಿತೆ ಬರೆಯುವುದರಲ್ಲಿ
ಅರ್ಥವೇನಾದರೂ ಉಳಿದಿದೆಯಾ ಅಂತ.
ಈ ಮಾತು ನಿಜವೇ
ಕೆಲ ಕವಿತೆಗಳು ಮಿಲಿಟರಿ ಖರ್ಚುಗಳ ಹಾಗೂ
ಯುದ್ಧಗಳ ಹಾಗೂ ಹಸಿವಿನಿಂದ ಬಳಲುತ್ತಿರುವ
ಮಕ್ಕಳ ಬಗ್ಗೆ ಬರೆಯಲಾಗಿದೆ.
ಆದರೆ ಮತ್ತಿತರ ಕವಿತೆಗಳು
ಪ್ರೀತಿ, ವೃದ್ಧಾಪ್ಯ, ಹುಲ್ಲುಗಾವಲುಗಳು,
ಮರಗಳು, ಬೆಟ್ಟಗಳು, ಇವುಗಳ ಬಗ್ಗೆ ಬರೆದಿದ್ದಾರೆ,
ಕವಿತೆಗಳ ಬಗ್ಗೆ, ಚಿತ್ರಗಳ ಬಗ್ಗೆಯೂ ಬರೆದಿದ್ದಾರೆ.

ಒಂದು ವೇಳೆ ಇವೂ ಮತ್ತಿತರ
ವಿಷಯಗಳೂ ಇಲ್ಲದಿರುವುದಾದರೆ
ಯಾರಿಗೂ ಇನ್ನೆಂದೂ ಮಕ್ಕಳ ಬಗ್ಗೆ, ಶಾಂತಿಯ ಬಗ್ಗೆ
ನಿಜವಾಗಿಯೂ ಕಾಳಜಿಯಿಲ್ಲ ಎಂದಾಗುತ್ತದೆ.

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: