ಕಂಬನಿಯೊಂದಿಗೆ ಅನುವಾದಿಸಿದ ಒಂದು ಗಪದ್ಯ

ಮೂಲ : ಝಹೇದಾ ಘನಿ

ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

ಇದು ನೆಟ್ ನಲ್ಲಿ ಆಕಸ್ಮಿಕವಾಗಿ ಸಿಕ್ಕ ಗಪದ್ಯ. ಅಂದರೆ ಪದ್ಯ ಹಾಗೂ ಗದ್ಯದಿಂದ ಕೂಡಿದ ಭಾವ. ಇದನ್ನು ಓದುತ್ತ ಹೋದಂತೆ ಕಣ್ಣೀರಾಗಿಬಿಟ್ಟೆ. ಕಣ್ಮುಂದೆಯೇ ಎಲ್ಲ ನಡೆದಂತೆಯೇ ಅನಿಸಿಬಿಟ್ಟಿತು. ನನಗೆ ತುಂಬ ಕಾಡಿದ ಗಪದ್ಯ ಇದು. ಇದನ್ನು ನಾನು ಸಮರ್ಥವಾಗಿ ಅನುವಾದಿಸಿದ್ದೇನೆ ಎನ್ನಲಾರೆ. ಆದರೆ ಅಲ್ಲಿಯ ಒಂದು ಚಿತ್ರವನ್ನು ಝಹೆದಾ ಘನಿ ಹೇಗೆ ಕಟ್ಟಿಕೊಟ್ಟಿದ್ದಾರೋ ಅದನ್ನು ಇಲ್ಲಿ ತರಲು ಯತ್ನಿಸಿದ್ದೆನೆ ಅನ್ನಬಹುದು. ಆ ಭಾವ ನಿಮ್ಮಲ್ಲೂ ಮೂಡಿದರೆ ಅಷ್ಟರ ಮಟ್ಟಿಗೆ ನಾನು ಅನುವಾದಿಸಿದ್ದು ಸರಿ ಎಂದುಕೊಳ್ಳುತ್ತೆನೆ.

ಇದನ್ನು ಬರೆದವರು ಅಫ್ಘಾನಿಸ್ತಾನ್ ದ ಝಹೆದಾ ಘನಿ. 1977ರಲ್ಲಿ ಅಫ್ಘಾನಿಸ್ತಾನ್ ದ ಹೆರತ್ ನಲ್ಲಿ ಜನಿಸಿದರು. ಭಾರತದಲ್ಲಿ ಹಾಗೂ ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಇವರು ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಸಿಡ್ನಿಯಲ್ಲಿ ಕ್ರೀಡಾ ನಿರ್ಮಾಪಕರಾಗಿ, ಆಕಾಶವಾಣಿಯ ವಾಣಿಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಡುವಿದ್ದಾಗಲೆಲ್ಲ ಆಧುನಿಕ ಹಾಗೂ ಪ್ರಾಚೀನ ಬರಹಗಾರರ ಜೀವನಚರಿತ್ರೆ ಓದುವುದು, ಕವಿತೆ ರಚನೆ, ಮೊದಲಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ದಿನ ತಮ್ಮ ಕವಿತೆಗಳನ್ನು ಸೇರಿಸಿ ಒಂದು ಕವನ ಸಂಕಲನ ಪ್ರಕಟಿಸಬೇಕೆಂಬ ಬಯಕೆಯನ್ನು ಇಟ್ಟುಕೊಂಡಿದ್ದಾರೆ.

ಇದನ್ನು ಯಾಕೆ ಬರೆದೆ ಎಂಬುದನ್ನು ಅವರೇ ಹೇಳುತ್ತಾರೆ. ಇವರು ಪದವಿ ಅಧ್ಯಯನ ಮಾಡುತ್ತಿರುವ ವೇಳೆಯಲ್ಲಿ ‘ವಿಭಜನೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಬರೆಯುವಾಗ ಇದನ್ನು ಬರೆದರಂತೆ. ಪ್ರಬಂಧವು ಗಡಿಭಾಗವನ್ನು ದಾಟುವ ಕುರಿತು, ಸ್ತ್ರೀವಾದಿ ವಿಷಯ ಕುರಿತು ಇತ್ತು. ಈ ಬರಹ ಇದೊಂದು ಸತ್ಯ ಘಟನೆ. ತಮ್ಮ ಬದುಕಿನಲ್ಲಿಯೇ ನಡೆದ ಘಟನೆಯಾಗಿದ್ದು, ತಮ್ಮ ನೆನಪಿನಲ್ಲಿರುವಂತೆ ಪ್ರತಿಯೊಂದೂ ನಡೆದ ಘಟನೆಯೇ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನ್

ಅದೊಂದು ಬೇಸಗೆಯ ದಿನ
ನಾನು ಗಾರ್ಡನ್ ನಲ್ಲಿದ್ದೆ
ಕರಪತ್ರವೊಂದು ಆಗಸದಿಂದ
ನಿಧಾನವಾಗಿ ನನ್ನ ಬಳಿ ಬಂದು ಬಿತ್ತು,
ನಾನಾಗ ಮೂರು ವರ್ಷದವಳು
ನನ್ನ ಬಾಲ್ಯವನ್ನು
ನಾನು ನೆನೆದದ್ದಕ್ಕಾಗಿ ನನ್ನ
ತಂದೆ ಅಚ್ಚರಿಗೊಂಡರು.
ನಾನು ಹೇಳಿದೆ; ಅಪ್ಪ
ನೆನಪುಗಳನ್ನು ಎಂದೂ
ಮರೆಯಲಾಗುವುದಿಲ್ಲ ಎಂದು

ಆಮೇಲಾಮೇಲೆ
ಕರಪತ್ರಗಳು ನಿರಂತರವಾಗಿ
ಬೀಳತೊಡಗಿದವು.
ನಮ್ಮ ಮೇಲೆ ಕಮ್ಯುನಿಸಂನ ಪ್ರಚಾರವು
ನಿರಂತರವಾಗಿ ಮಳೆಗರೆಯತೊಡಗಿತು
ಹೆಲಿಕ್ಟಾಪ್ಟರ್ ಗಳು ಭಾರಿ ಶಬ್ದವನ್ನು ಮಾಡುತ್ತ ಆಗಸದೆತ್ತರವಿರುತ್ತಿದ್ದವು
ನಾನು ಎಲ್ಲ ಕರಪತ್ರಗಳನ್ನು
ಹಿಡಿಯಲು ಯತ್ನಿಸುತ್ತಿದ್ದೆ

ಕರಪತ್ರಗಳು ಕರಪತ್ರಗಳು
ಎಲ್ಲಿ ನೋಡಿದರಲ್ಲಿ ಕರಪತ್ರಗಳೇ

ಇದಕ್ಕಿಂತ ಅವರು ನಮ್ಮ ಮೇಲೆ
ಗುಂಡಿನ ಮಳೆಗರೆಯಲು ನಿರ್ಧರಿಸುವುದೇ
ಒಳ್ಳೆಯದೇನೋ ಅನಿಸುತ್ತಿತ್ತು

ಅಮ್ಮಉದ್ಯೋಗಸ್ಥಳು
ಅವಳು ಶಾಲೆಯೊಂದರ ಶಿಕ್ಷಕಿ
ನೀವು ಹೊರಗೆ ಹೋದಾಗ ನೋಡಬಹುದು
ನಮ್ಮ ಅಜ್ಜಂದಿರ ಕಾಲದ
ಭಾರಿ ಗೋಡೆಗಳೇ ಇಲ್ಲಿವೆ

ಗೋಡೆಗಳು ದಪ್ಪನೆಯ ಹುಲ್ಲು ಹಾಗೂ
ಮಣ್ಣಿನಿಂದ ಕಟ್ಟಲ್ಪಟ್ಟಿದ್ದವು
ನಾನು ಆ ಗೋಡೆಗಳನ್ನು
ಈಗಲೂ ಗುರುತಿಸಬಲ್ಲೆ
ಅವುಗಳ ಎತ್ತರವೇ ನನಗೆ ರಕ್ಷಣೆಯೆಂಬ ಭಾವವಿತ್ತು
ನಾನು ಆಗ ಕಲ್ಪಿಸಿಕೊಳ್ಳುತ್ತಿದ್ದೆ
ಈ ಗೋಡೆಗಳು ರಾಕೆಟ್ ಗಳನ್ನು ಸಹ
ತಡೆಯಲು ಸಮರ್ಥವಾಗಿವೆ ಎಂದು

ನಾನು ಆಟವಾಡಲೆಂದೇ
ಮುಖ್ಯ ಅತಿಥಿ ಕೋಣೆಯ
ದೊಡ್ಡ ಕಪ್ಪು ಮಂಚದ ಹಿಂದೆ ಹೋಗುತ್ತಿದ್ದೆ
ಮಧ್ಯರಾತ್ರಿಯಲ್ಲಿ ಸೈರನ್ ಮೊಳಗತೊಡಗಿದೊಡನೆ
ಅದು ನಮಗೆಲ್ಲ ಅಡಗುವ ಸ್ಥಳವಾಗಿತ್ತು

ಒಂದು ದಿನ ರಾತ್ರಿ
ನಾವೇನಾದರೂ ಗುಂಡಿಗೆ
ಬಲಿಯಾಗಿ ಸಾವಿಗೀಡಾದರೆ
ಎಂದು ಆತಂಕದಿಂದ ನನ್ನ ಅಪ್ಪ
ನಮಗಾಗಿ ಪ್ರಾರ್ಥಿಸುತ್ತಿದ್ದ
ಅಂದಿನ ರಾತ್ರಿ ಅಪ್ಪ ನನ್ನನ್ನು
ಅಮ್ಮನನ್ನು ತಬ್ಬಿ ಹಿಡಿದಿದ್ದ
ಆತನ ನಡುಗುವಿಕೆ ನನಗೆ ಭಾಸವಾಗುತ್ತಿತ್ತು,
ಮತ್ತು ಅದನ್ನು ನಾನು
ಒಳಗೊಳಗೇ ಒಪ್ಪಿಕೊಂಡೂ ಇದ್ದೆ
ಆ ರೀತಿ ಹೆದರಿದ
ಅಪ್ಪನನ್ನು ನಾನು
ಹಿಂದೆಂದೂ ನೋಡಿರಲಿಲ್ಲ

ಒಂದು ವೇಳೆ ಆ ರೀತಿ
ನನಗೆ ನೆನಪಾದರೆ ಈಗ ನಾನು
ನನ್ನ ದೊಡ್ಡ ಕೆಂಪು ಗೊಂಬೆಯೊಡನೆ ಆಡುತ್ತೇನೆ

ನಾನು ದೊಡ್ಡದಾದ ಶಬ್ದವೊಂದನ್ನು ಕೇಳಿದೆ
ನನಗೆ ಗೊತ್ತು ಅದೊಂದು ಬಾಂಬ್ ಎಂದು
ತಕ್ಶಣ ನಾನು ಗಾರ್ಡನ್ ಗೆ ಓಡಿಹೋದೆ
ಏನೇ ಆಗಲಿ ನನ್ನ ಚಿಕ್ಕಮ್ಮನ ಕೈಯಲ್ಲಿ ನನ್ನ
ಕೈಯನ್ನು ಸೇರಿಸಲು ಹುಡುಕುತ್ತಿದ್ದೆ
ಮತ್ತು ಆಕೆಯ ಹಿಂದೆ ತಳ್ಳಲ್ಪಡುತ್ತೆನೆ ಎಂದೂ ಗೊತ್ತಿತ್ತು

ನನ್ನ ಪುಟ್ಟ ಪಾದಗಳು ಭಯದಿಂದ
ಉಳಿದುಕೊಳ್ಳಲು ಯತ್ನಿಸುತ್ತಿದ್ದವು

ಅಲ್ಲಿ ಎಲ್ಲರೂ ಹೊರಗೆ ಒಟ್ಟಾಗಿದ್ದರು
ಶಾಲೆಯ ದಿಕ್ಕಿನ ಬಳಿ ಹೊಗೆಯೇಳುತ್ತಿತ್ತು್
ನಾನು ನೋಡುತ್ತಲೇ ಇದ್ದೆ
ಅದು ಗೋಡೆಗಳ ಮೇಲೆಯೂ ಬರುತ್ತಿತ್ತು
ಎಲ್ಲಿ ಅಮ್ಮ ಇರುವಳೋ
ಅಲ್ಲಿ ಚೀರುವಿಕೆ, ಗೋಳಿಡುವಿಕೆ ಕೇಳಿಬರತೊಡಗಿತ್ತು
ಆ ದನಿಯು ನನ್ನ ಕಿವಿಯನ್ನು ಮರಗಟ್ಟಿಸುತ್ತಿತ್ತು

ನಾವು ಗೇಟಿನಿಂದ ಹೊರಗೆ
ಓಣಿಯಲಿ ಓಡುತ್ತಿದ್ದೆವು
ಹೆದರಿಕೆಯಿಂದ ಹಿಂಜರಿಯುತ್ತಿದ್ದೆವು
ನನಗಿಂತ ಮೊದಲೇ ಅಮ್ಮನ
ಛಿದ್ರಗೊಂಡ ದೇಹ ಬೀಳುವುದನ್ನು
ನನಗೆ ನೋಡಲಾಗುತ್ತಿರಲಿಲ್ಲ.
ಯಾಕೆಂದರೆ ಅಮ್ಮ
ಈಗ ಊಟಕ್ಕೆ ಮನೆಗೆ ಬರುವ ಸಮಯ

ನಾನು ನೋಡಿದ್ದೆಲ್ಲವೂ ಹೊಗೆಮಯ
ನನ್ನ ಎದೆಬಡಿತವೇ ನಿಂತಂತಾಗಿತ್ತು
ನನ್ನ ಮೊಳಕಾಲುಗಳು ನಡುಗತೊಡಗಿದ್ದವು,
ನನಗೆ ಗೊತ್ತು ನನ್ನ ಅಮ್ಮ ಇನ್ನಿಲ್ಲವೆಂದು
ಪ್ರತಿಯೊಬ್ಬರೂ ಅಳುತ್ತಿದ್ದರು
ನನ್ನ ಅಜ್ಜಿ ನನ್ನನ್ನು ಹಿಡಿದುಕೊಂಡಿದ್ದಳು
ನನ್ನ ತಲೆ ಅವಳ ಎದೆಯ ಬಳಿ ಇತ್ತು
ಮತ್ತು ನಾನು ಹೊಗೆಯನ್ನೇ ನೋಡುತ್ತಿದ್ದೆ
ನಾನು ಏನೊಂದೂ ಶಬ್ದವನ್ನು ಹೇಳಲಿಲ್ಲ
ನನಗೆ ಆಕೆಯನ್ನು ಆ ಹೊಗೆಯಿಂದ
ಹೊರಗೆ ಕರೆದುಕೊಂಡು ಹೋಗಬೇಕಿತ್ತು.
ನಾನು ನನ್ನ ಅಜ್ಜಿಯನ್ನು ಅಲ್ಲಿಂದ
ಮುಕ್ತಗೊಳಿಸುತ್ತೇನೆ
ನಾನು ಒಂಟಿಯಾಗಿ ನಿಲ್ಲುತ್ತೇನೆ
ನನಗಷ್ಟೇ ಬೇಕಾದದ್ದು
ಆದರೆ ನಾನು ಎಂದೂ ಅಳುವುದಿಲ್ಲ
ಎಂದು ನಿರ್ಧರಿಸಿದ್ದೆ
ಅದರ ನಂತರ ಏನು ನಡೆಯಿತೆಂಬುದು
ನನಗೆ ನೆನಪಿಲ್ಲ

ನಾನು ನನ್ನ ಅಮ್ಮನನ್ನು
ಈಗಲೂ ನೆನೆಯುತ್ತೇನೆ
ಹೊಗೆಯಿಂದಾಚೆ ಓಡಿಬಂದಂತೆ
ಅವಳ ಕೈಗಳಲ್ಲಿ ನಾನು ಸೇರಿಕೊಂಡಂತೆ
ನಾನು ಅವಳನ್ನು ಮೂಸಿದಂತೆ
ಎಷ್ಟು ಚಂದದ ಅಮ್ಮನ ವಾಸನೆ
ಅವಳು ನನ್ನನ್ನು ಬಿಗಿಯಾಗಿ ತಬ್ಬಿದಂತೆ
ಮತ್ತು ಅವಳು ಅಳುತ್ತಾ
‘ನಾವು ಇಲ್ಲಿಂದ ಹೊರಡೋಣ’
ಎಂದು ಪಿಸುಗುಟ್ಟಿದಂತೆ

ಉಫ್ ಸಾಕಿನ್ನು
ನನ್ನ ಬಾಯೊಣಗುತ್ತಿದೆ

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: