ಕಂಡ ಕನಸು ನನಸಾಗಿದೆ…

ಉದಯ ಇಟಗಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಫೆಸ್ಬುಕ್ ನಲ್ಲಿ ಲಕ್ಶ್ಮೀ ಚಂದ್ರಶೇಖರ್ ಅವರಿಗೊಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ನಾನು ಕಳಿಸಿ ಎಂಟು ದಿನಗೊಳಗಾಗಿ ಅವರದನ್ನು ಅಕ್ಸೆಪ್ಟ್ ಮಾಡಿದ್ದರು. ಅದಾಗಿ ನಾಲ್ಕೈದು ದಿನಗಳ ನಂತರ ನಾನು ಅವರಿಗೊಂದು ಮೆಸ್ಸೇಜ್ ಕಳಿಸಿದೆ ‘ಮೇಡಮ್, ಮಿಸೆಸ್ ಶೇಕ್ಸಪಿಯರ್’ ಅಂತಾ ಒಂದು ಒನ್ ಮ್ಯಾನ್ ಶೋ (ನಾಟಕವನ್ನು) ಬರೆದಿರುವೆ. ಅದನ್ನು ರಂಗದ ಮೇಲೆ ನಿಮ್ಮಿಂದ ತರಲು ಸಾಧ್ಯವಾ ನೋಡಿ?’ ಅದಕ್ಕೆ ಅವರು ತಕ್ಷಣ ‘ನಮಸ್ಕಾರ ಉದಯ್ ಅವರೇ, ನಿಮ್ಮ ನಾಟಕ ಓದಿ ನನಗೆ ಇಷ್ಟವಾಗಿ ಅದನ್ನು ಅಭಿನಯಿಸಲು ಸಾಧ್ಯವಾದರೆ ಖಂಡಿತ ಮಾಡುತ್ತೇನೆ.’ ಎನ್ನುವ ಉತ್ತರವನ್ನು ಕಳಿಸಿದರು.

ಜೊತೆಗೆ ಅವರ ಈ ಮೇಲ್ ಐಡಿ ಕೊಟ್ಟು ಅದಕ್ಕೆ ಕಳಿಸಲು ಹೇಳಿದರು. ಅದರಂತೆ ನಾನು ಅವರಿಗೆ ನನ್ನ ಸ್ಕ್ರಿಪ್ಟನ್ನು ಕಳಿಸಿಕೊಟ್ಟೆ. ಐದಾರು ದಿನಗಳ ಬಳಿಕ ಮತ್ತೆ ಅವರಿಂದ ಉತ್ತರ ಬಂತು ‘ನಿಮ್ಮ ನಾಟಕವನ್ನು ಓದಿದೆ. ತುಂಬಾ ಇಷ್ಯವಾಯಿತು. ನಾನಿದನ್ನು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಮಾಡಬಯಸುವೆ. You have really done a good job. Keep it up!’ ಹೀಗೆ ಶುರುವಾದ ನಮ್ಮ ಪರಿಚಯ ಮುಂದೆ ನಾಟಕ ಕಟ್ಟುವಲ್ಲಿಗೂ ಹೋಯಿತು.

ಈ ನಿರ್ಧಾರದ ಬಳಿಕ ನಾವು ಶೀಘ್ರವಾಗಿ ನಿರ್ದೇಶಕರನ್ನೂ ಹುಡುಕಿ ಎಲ್ಲರೂ ಝೂಮ್ ನಲ್ಲಿ ಒಂದು ಮಾತುಕತೆಯನ್ನು ನಡೆಸಿಯೇ ಬಿಟ್ಟೆವು. ಮೇಡಮ್, ಈ ನಾಟಕವನ್ನು ಮಾಡಲು ಎಷ್ಟೊಂದು ಉತ್ಸಾಹಭರಿತರಾಗಿದ್ದರೆಂದರೆ ಎಲ್ಲವೂ ತ್ವರಿತಗತಿಯಲ್ಲಿ ನಡೆದು ಹೋಯಿತು. ಇದೇ ತಿಂಗಳು (ಏಪ್ರೀಲ್) 23 ರಂದು ಶೇಕ್ಸಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನವಾಗಿದ್ದರಿಂದ ಶೇಕ್ಸಪಿಯರನಿಗೆ ಅರ್ಪಣೆಯ ರೂಪದಲ್ಲಿ ಅಂದೇ ನಾಟಕವನ್ನು ರಂಗದ ಮೇಲೆ ತರಲು ನಿರ್ಧರಿಸಿದೆವು.

ಆ ನಿಟ್ಟಿನಲ್ಲಿ ಮತ್ತೆರೆಡು ಮಾತುಕತೆಗಳಾಗಿ ಲೈಟಿಂಗ್, ಕಾಸ್ಟ್ಯೂಮ್ಸ್, ಮ್ಯೂಸಿಕ್, ಸ್ಟೇಜ್ ಡಿಸೈನ್ ಯಾರ್ಯಾರು ಮಾಡಬೇಕೆಂದು ಎಲ್ಲವೂ ಬೇಗಬೇಗನೆ ನಿರ್ಧಾರವಾಗಿ ಮೇಡಮ್ ಆಗಲೇ ರಿಹರ್ಸಲ್ ಆರಂಭಿಸಿಬಿಟ್ಟರು. ಮಾತ್ರವಲ್ಲ ಮೇಡಮ್ ’ರಂಗ ಶಂಕರ’ ವನ್ನು ಕೂಡಾ ಬುಕ್ ಮಾಡಿಯೇ ಬಿಟ್ಟರು. ಕೊರೋನಾ ಕಾಟವಿಲ್ಲದಿದ್ದರೆ ನಾಳಿದ್ದು ಏಪ್ರೀಲ್ 23 ರಂದು ರಂಗ ಶಂಕರದಲ್ಲಿ ಈ ನಾಟಕದ ಮೊದಲ ಶೋ ನಡೆದುಹೋಗುತ್ತಿತ್ತು. ಸಧ್ಯಕ್ಕೆ ಮುಂದೂಡಿದ್ದೇವೆ.

ನಾಟಕ ಕಟ್ಟುತ್ತಾ ಕಟ್ಟುತ್ತಾ ಮೇಡಮ್, ಅಲ್ಲಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲು ಹೇಳಿದರು. ಜೊತೆಗೆ ನಾಟಕದ ಟೈಟಲ್ ‘ಶೇಕ್ಸಪಿಯರನ ಶ್ರೀಮತಿ’ ಅಂತಾ ಇದ್ದರೆ ಚನ್ನಾಗಿರುತ್ತದೆ ಎಂದರು. ಅವರ ಸಲಹೆಯಂತೆ ಅದನ್ನು ಬದಲಾಯಿಸಿದೆ. ಇದಲ್ಲದೆ ಜರ್ಮನ್ ಗ್ರೇರನ ಪುಸ್ತಕದಿಂದ ಒಂದಿಷ್ಟು ಆಕರವನ್ನು ಆಯ್ದುಕೊಟ್ಟರು ಮತ್ತು ಶ್ರೀಮತಿ ಶೇಕ್ಸಪಿಯರನ ಪಾತ್ರ ಕಟ್ಟಲು ಅನುಕೂಲವಾಗುವಂತೆ ಬೈಬಲ್ ನಿಂದ ಒಂದಿಷ್ಟು ಪೂರಕ ಸಾಲುಗಳನ್ನು ಉಲ್ಲೇಖಿಸಿ ಇವನ್ನು ಸೇರಿಸಬಹುದಾ ನೋಡಿ ಎಂದು ಕಳಿಸಿಕೊಟ್ಟರು.

ಅಂತೂ ಎಲ್ಲ ಮುಗಿದು ನಾಟಕಕ್ಕೆ ಒಂದು ರೂಪ ಬಂದು ರಂಗದ ಮೇಲೆ ಬರಲು ತಯಾರಾಗಿತ್ತು. ಅಷ್ಟರಲ್ಲಿ ಹೀಗಾಗಿ ಹೋಯಿತು. ಇರಲಿ. ಕೊರೋನಾ ಕಾಟ ಕಳೆದ ತಕ್ಷಣ ಮೇಡಮ್ ನಿಮ್ಮ ಮುಂದೆ ಶೇಕ್ಸಪಿಯರನ ಶ್ರೀಮತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ನೋಡಿದರೆ 2002 ಮತ್ತು 2003 ರಲ್ಲಿಯೇ ನಾನು ಬೆಂಗಳೂರಿನಲ್ಲಿರಬೇಕಾದರೆ ಮೇಡಮ್ ಅವರ ‘ಸಿಗಾರವ್ವ ಮತ್ತು ಅರಮನೆ’ ಮತ್ತು ‘ಹೆಣ್ಣಲ್ಲವೇ?’ ಎಂಬ ಏಕವ್ಯಕ್ತಿ ನಾಟಕಗಳನ್ನು ನೋಡಿ ಮೆಚ್ಚಿಕೊಂಡವನು. ಅದಕ್ಕೂ ಮೊದಲು ಮಾಯಾಮೃಗದಲ್ಲಿನ ಅವರ ಸಹಜ ಅಭಿನಯವನ್ನು ನೋಡಿದ್ದೆ. ಮುಂದೆ ಗೃಹಭಂಗ, ಮಂಥನ, ಅತಿಥಿ ಮುಂತಾದವುಗಳನ್ನು ನೋಡಿ ಅವರ ಅಭಿನಯಕ್ಕೆ ಫಿದಾ ಆಗಿ ಹೋಗಿದ್ದೆ. ಆಗಲೇ ನನ್ನ ಮನಸ್ಸಿನೊಳಗೆ ‘ಮುಂದೆ ಎಂದಾದರೊಂದು ದಿನ ನಾನು ನಾಟಕವೊಂದನ್ನು ಬರೆದು ಅದರಲ್ಲಿ ಇವರು ಅಭಿನಯಿಸಿದರೆ ಹೇಗಿರುತ್ತದೆ?’ ಎಂದು ಯೋಚಿಸಿದ್ದೆ.

ಇದೀಗ ಆ ಆಸೆ ಕೈಗೂಡಿದೆ. ಜೊತೆಗೆ ನಾನು ಬೆಂಗಳೂರಿನ ಬಿ.ಎನ್.ಎಮ್ ಕಾಲೇಜಿನಲ್ಲಿ ಕೆಲಸ ಮಾಡುವಾಗ ಮೇಡಮ್ ಮನೆ ನಮ್ಮ ಕಾಲೇಜಿನ ಪಕ್ಕದಲ್ಲಿಯೇ ಇತ್ತು. ಇವರು ತಮ್ಮ ನಾಟಕದ ರಿಹರ್ಸಲ್ಗಾ ಗಿ ನಮ್ಮ ಕಾಲೇಜಿಗೆ ಸಾಯಂಕಾಲದ ಹೊತ್ತು ಬರುತ್ತಿದ್ದರು. ಆಗೊಮ್ಮೆ ಅವರನ್ನು ಕಂಡು ಮಾತನಾಡಿಸಿದ್ದು ಬಿಟ್ಟರೆ ನಾನು ಮುಂದೆ ಅವರನ್ನು ನೋಡಿದ್ದು ರಂಗ ಶಂಕರದಲ್ಲಿಯೇ. ರಂಗ ಶಂಕರ ಆಗಷ್ಟೇ ಆರಂಭವಾಗಿತ್ತು. ನಾನಾಗ ಅಲ್ಲಿ volunteer ಆಗಿ ಕೆಲಸ ಮಾಡುತ್ತಿದ್ದೆ.

ಮೇಡಮ್ ಅಲ್ಲಿಗೆ ನಾಟಕಗಳನ್ನು ನೋಡಲು ಬರುತ್ತಿದ್ದರು. ಆಗ ಅವರು ವಾರವಾರವೂ ‘ದಿ ಹಿಂದೂ’ ಪತ್ರಿಕೆಯಲ್ಲಿ ನಾಟಕಗಳ ಬಗ್ಗೆ ವಿಮರ್ಶೆ ಬರೆಯುತ್ತಿದ್ದರು ಮತ್ತು ನಾನದನ್ನು ತಪ್ಪದೇ ಓದುತ್ತಿದ್ದೆ. ಆಗ ಅವರು ಒಬ್ಬ ಶಿಕ್ಷಣ ಮಂತ್ರಿಯ ಹೆಂಡತಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ತೀರಾ ಸರಳ ರೀತಿಯಲ್ಲಿರುತ್ತಿದ್ದುದು ನನಗೆ ತುಂಬಾ ಇಷ್ಟವಾಗಿತ್ತು. ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ ‘ನನ್ನ ಈ ನಾಟಕವನ್ನು ಶೇಕ್ಸಪಿಯರನನ್ನು ಚನ್ನಾಗಿ ಅರ್ಥಮಾಡಿಕೊಂಡವರು ಅಥವಾ ಮಹಿಳಾ ಇಂಗ್ಲೀಷ್ ಪ್ರೊಫೆಸರ್ ಒಬ್ಬರು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆಂದು.’ ಇದೀಗ ಆ ಕನಸು ನನಸಾಗಿದೆ ಮತ್ತು ನನ್ನ ಖುಷಿ ನೂರ್ಮುಡಿಯಾಗಿದೆ.

ಇಷ್ಟೆಲ್ಲಾ ಯಾಕೆ ಬರೆದೆನೆಂದರೆ ಲಕ್ಷ್ಮೀ ಮೇಡಮ್ ಹುಟ್ಟಿದ ದಿನ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುವ ನೆಪದಲ್ಲಿ ಕೃತಜ್ಞಾಪೂರ್ವಕವಾಗಿ ಗೌರವ ಸಲ್ಲಿಸಲು ಇಷ್ಟೆಲ್ಲಾ ಬರೆಯಬೇಕಾಯಿತು. ಮೇಡಮ್, ಈಗಾಗಲೇ ನಿಮಗೆ ಫೋನಿನಲ್ಲಿ ಶುಭಾಶಯಗಳನ್ನು ತಿಳಿಸಿರುವೆ. ಆದರೂ ಇಲ್ಲಿ ಮತ್ತೊಮ್ಮೆ ತಿಳಿಸುವೆ. ನಿಮ್ಮಿಂದ ಮತ್ತಷ್ಟು, ಮಗದಷ್ಟು ನಾಟಕಗಳು ನಿರಂತರವಾಗಿ ಮೂಡಿ ಬರುತ್ತಿರಲಿ ಮತ್ತು ನೀವು ನೂರ್ಕಾಲ ರಂಗ ಸೇವೆ ಮಾಡುತ್ತಿರಲಿ ಎಂದು ಹಾರೈಸುವೆ.

‍ಲೇಖಕರು Avadhi

April 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: