ಬುಕ್ ಸ್ಟಾಲ್ ಮುಸಾಫಿರ್ ಕತೆ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

| ಕಳೆದ ಸಂಚಿಕೆಯಿಂದ |

ಅದು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಾಕ್ಷ್ಯಚಿತ್ರ ಎಂದನಿಸುತ್ತದೆ.

ಸಚಿನ್ ತಮ್ಮ ಕ್ರಿಕೆಟ್ ಕಿಟ್ ಬ್ಯಾಗ್ ಬಗ್ಗೆ ಮಾತನಾಡುತ್ತಾ ಒಂದು ಕಡೆ ಹೀಗೆ ಹೇಳುತ್ತಾರೆ: ‘ನನ್ನ ಕಿಟ್ ನನಗೆ ಎಲ್ಲವೂ ಹೌದು. ನಾನು ಬಳಸುವ ಬ್ಯಾಟ್, ಪ್ಯಾಡ್, ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಇಡುವುದು, ನಿರ್ಲಕ್ಷ್ಯದಿಂದ ಎಸೆಯುವುದು… ಇಂಥಾ ಬೇಜವಾಬ್ದಾರಿಯ ಕೆಲಸಗಳನ್ನು ನಾನು ಎಂದಿಗೂ ಮಾಡಲಾರೆ. ಏಕೆಂದರೆ ಅವುಗಳು ನನಗೆ ನಿರ್ಜೀವ ಜಡವಸ್ತುಗಳಲ್ಲ. ಅವುಗಳನ್ನು ನಾನು ಗೌರವಿಸುತ್ತೇನೆ.’

ವೃತ್ತಿಪರ ಕ್ರೀಡಾಪಟುವೊಬ್ಬನಿಗೆ ತನ್ನ ವೃತ್ತಿಯ ಬಗ್ಗೆ ಇರಲೇಬೇಕಾದ ಅದಮ್ಯ ಪ್ರೀತಿ, ಗೌರವ ಮತ್ತು ಆರಾಧನಾ ಭಾವಗಳಿವು. ಸಚಿನ್ ಓರ್ವ ಅಗಾಧ ಪ್ರತಿಭೆಯುಳ್ಳ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಚಿನ್ ಎಂಬ ಸಾಮಾನ್ಯ ಮುಂಬೈಕರ್ ಒಬ್ಬ ‘ದ ಗ್ರೇಟ್ ಸಚಿನ್ ತೆಂಡುಲ್ಕರ್’ ಆಗುವ ಹಿಂದೆ ಇಂಥಾ ಪುಟ್ಟ ಅಂಶಗಳೂ ತನ್ನದೇ ಆದ ರೀತಿಯಲ್ಲಿ ಕಾರಣವಾಗಿರುತ್ತವೆ. 

ಈವರೆಗಿನ ನನ್ನ ಪುಟ್ಟ ಪಯಣದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಬೆರಳೆಣಿಕೆಯ ಕೆಲ ಸಾಧಕರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಇನ್ನು ಕೆಲವರ ಬಗ್ಗೆ ಒಂದಷ್ಟು ಓದಿದ್ದೇನೆ ಕೂಡ. ಇವರೆಲ್ಲರಲ್ಲಿ ನನಗೆ ಕಂಡ ಸಾಮಾನ್ಯ ಅಂಶವೆಂದರೆ ಪರಿಶ್ರಮ, ಶಿಸ್ತು ಮತ್ತು ಜೀವನಮೌಲ್ಯಗಳು.

ನೂರು ಪ್ರತಿಶತ ಪರಿಶ್ರಮವನ್ನು ನೆಚ್ಚಿಕೊಂಡವನ ಹಿಂದೆ ಅದೃಷ್ಟವು ಒಂದಲ್ಲಾ ಒಂದು ದಿನ ಬರಲೇಬೇಕು. ಅದು ಬರುತ್ತದೆ ಕೂಡ! ಶಿಸ್ತು ಎಂಬುದು ಒಡ್ಡೊಡ್ಡಾಗಿರುವ ನಮ್ಮ ಜೀವನಕ್ಕೊಂದು ಸುಂದರವಾದ ರೂಪವನ್ನು ನೀಡಬಲ್ಲ ಅಂಶ. ಶಿಲ್ಪಿಯೊಬ್ಬನ ನಿರಂತರ ಉಳಿಪೆಟ್ಟಿನಿಂದಾಗಿ ಸಾಮಾನ್ಯ ಕಲ್ಲೂ ಸುಂದರ ವಿಗ್ರಹವಾಗಿ ಬದಲಾಗುವಂತೆ. ಇನ್ನು ನಾವು ಬದುಕಿನಲ್ಲಿ ದಾರಿ ತಪ್ಪಿದಾಗಲೆಲ್ಲಾ ನಮ್ಮನ್ನು ಮತ್ತೆ ಸರಿದಾರಿಯತ್ತ ಕೊಂಡೊಯ್ಯುವುದು ಜೀವನಮೌಲ್ಯಗಳು. ಅವುಗಳು ನಮ್ಮೊಳಗಿನ ದೈವಿಕ ದಿಕ್ಸೂಚಿಯೂ ಹೌದು.

ಚಾಪ್ಟರ್ ೧೦೧ ಪುಸ್ತಕದಂಗಡಿಯ ಕೌಂಟರಿನಲ್ಲಿ ಕೂತಿದ್ದ ದೀನನಾಥ ಮಾಂಝಿಯವರನ್ನು ಕಂಡಾಗ ನನಗೆ ಥಟ್ಟನೆ ನೆನಪಾಗಿದ್ದೇ ಸಚಿನ್ ತೆಂಡುಲ್ಕರ್. ಮಾಂಝಿಯವರಿಗೆ ಸುಂದರ ಕಪಾಟಿನಲ್ಲಿ ಮಟ್ಟಸವಾಗಿರಿಸಿದ ಪುಸ್ತಕಗಳ ಬಗ್ಗೆ ಪ್ರೀತಿಯಿದೆ. ಅವುಗಳನ್ನು ನಡೆಸಿಕೊಳ್ಳುವ ಬಗ್ಗೆ ಕಾಳಜಿಯಿದೆ. ಆಂಗ್ಲ ಭಾಷೆಯು ಅಷ್ಟಾಗಿ ತಿಳಿಯದಿದ್ದರೂ ಅಕ್ಷರ ರೂಪದಲ್ಲಿ ಅಚ್ಚಾಗಿರುವ ಜ್ಞಾನದ ಬಗ್ಗೆ ಅವರಿಗೆ ಅಪರಿಮಿತ ಗೌರವವಿದೆ. ಹಾಗೆ ನೋಡಿದರೆ ಚಾಪ್ಟರ್ ೧೦೧ ಸ್ಟಾಲಿನ ಪುಸ್ತಕಗಳು ಮಾಂಝಿಯವರ ಆರೈಕೆಯಲ್ಲಿರುವುದು ಒಂದು ರೀತಿಯಲ್ಲಿ ಪುಸ್ತಕಗಳದ್ದೇ ಭಾಗ್ಯ. 

ಪುಸ್ತಕಗಳ ವಿಚಾರದಲ್ಲಿ ಮಾಂಝಿಯವರ ಶಿಸ್ತು ಎಷ್ಟರ ಮಟ್ಟಿಗಿದೆಯೆಂದರೆ ಯಾವ ವಿಭಾಗದ ಪುಸ್ತಕವೂ ಅಪ್ಪಿತಪ್ಪಿ ಎಲ್ಲೆಲ್ಲೋ ಹೋಗಿ ಸೇರುವುದು ಸಾಧ್ಯವೇ ಇಲ್ಲ. ಅಂದಹಾಗೆ ಮಾಂಝಿ ಹೆಚ್ಚು ಓದಿದವರಲ್ಲ. ಫ್ಯಾನ್ಸಿ ಡಿಗ್ರಿಗಳನ್ನು ಪಡೆದವರಲ್ಲ. ಗ್ರಾಹಕರು ಉದ್ದುದ್ದ ಇಂಗ್ಲಿಷ್ ಮಾತಾಡಿದರೆ ತನಗೆ ಕೊಂಚ ಕಷ್ಟವಾಗುತ್ತದೆ ಎಂಬುದನ್ನು ನಿಸ್ಸಂಕೋಚವಾಗಿ ನನ್ನಲ್ಲಿ ಹೇಳುವ ಮಾಂಝಿ, ಇಂಗ್ಲಿಷ್ ಗೊತ್ತಿರುವುದಕ್ಕೂ ಜ್ಞಾನಕ್ಕೂ ಎತ್ತಣಿಂದೆತ್ತಣ ಸಂಬಂಧವಪ್ಪಾ ಎಂದು ಸೌಮ್ಯವಾಗಿ ಕೇಳುತ್ತಾರೆ. ನಾನು ಅವರ ಮಾತಿಗೆ ಒಪ್ಪುವಂತೆ ಸುಮ್ಮನೆ ಮುಗುಳ್ನಗುತ್ತೇನೆ.

ಮಾಂಝಿಯವರು ಸಾಂಪ್ರದಾಯಿಕ ಶೈಲಿಯ ಶಿಕ್ಷಣ ವ್ಯವಸ್ಥೆಯ ಹಾದಿಯಲ್ಲಿ ಹೆಚ್ಚು ಓದಿಲ್ಲದಿರಬಹುದು. ಆದರೆ ಅವರಿಗೆ ಸಾಕ್ರೆಟಿಸ್ ಗೊತ್ತು, ಕಿಸ್ಸಿಂಗರ್ ಕೂಡ ಗೊತ್ತು. ಆನ್ ರಾಂಡ್, ಬರ್ನಾರ್ಡ್ ಶಾ, ಕೀಟ್ಸ್, ಶೆಲ್ಲಿಯವರ ಕೃತಿಗಳು ಅವರಿಗೆ ಚಿರಪರಿಚಿತ. ಎಮ್. ಎಫ್. ಹುಸೇನ್ ಬಗ್ಗೆ ಅವರಿಗೆ ಎಷ್ಟು ಗೊತ್ತಿದೆಯೋ, ಪಿಂಕ್ ಫ್ಲಾಯ್ಡ್-ಬೀಟಲ್ಸ್ ಗಳ ಬಗೆಯೂ ಅಷ್ಟೇ ವಿವರವಾಗಿ ಗೊತ್ತಿದೆ. ಸಂಗೀತಲೋಕದ ಮಹಾಸಾಧಕ ಡೇವಿಡ್ ಬೋವಿ ಬರೆದಿರುವ, ತಾನು ಕಲಿತ ಜೀವನ ಪಾಠಗಳ ಬಗೆಗಿನ ಪುಸ್ತಕವೊಂದನ್ನು ನಾನು ಎತ್ತಿಕೊಂಡರೆ ‘ಒಳ್ಳೇ ಪುಸ್ತಕ ಸಾರ್, ನಿಮ್ಮ ಬಳಿ ಇದು ಇರಲೇಬೇಕು’ ಎಂದು ಅಧಿಕಾರಯುತವಾಗಿ ಹೇಳುವಷ್ಟು ಜ್ಞಾನ ಮತ್ತು ಅನುಭವವು ಅವರಿಗಿದೆ. ಏಕೆಂದರೆ ಅವರಿಗೆ ಬ್ರಿಟನ್ ಮೂಲದ ಡೇವಿಡ್ ಬೋವಿಯ ಬಗ್ಗೆಯೂ ಗೊತ್ತು, ಚೀನಾ ಮೂಲದ ‘ತಾವೋ’ ಬಗ್ಗೆಯೂ ಗೊತ್ತು.

‘ರಾಜು ಸಿಂಗ್ ಅವರ ಪುಸ್ತಕ ಸಂಗ್ರಹವನ್ನು ಬಹುಷಃ ನಿಮಗಿಂತ ಯಶಸ್ವಿಯಾಗಿ ಯಾರೂ ನಿಭಾಯಿಸಲಾರರು’, ಎಂದು ನಾನು ಪ್ರಶಂಸೆಯ ಮಾತುಗಳನ್ನಾಡಿದರೆ ಮಿತಭಾಷಿಯಾಗಿರುವ ದೀನನಾಥ ಮಾಂಝಿ ನಾಚಿಕೊಳ್ಳುತ್ತಾರೆ. ‘ಈ ಕೆಲಸವನ್ನು ಕಾಟಾಚಾರಕ್ಕೆಂದು ಮಾಡದೆ, ಅದೆಷ್ಟು ಪ್ರೀತಿಯಿಂದ, ಅರ್ಪಣಾ ಮನೋಭಾವದ ಸಹಿತವಾಗಿ ಮಾಡುತ್ತೀರಿ…’, ಎಂದು ಯಾರಾದರೂ ಹೇಳಿದರೆ ಅವರ ಕಣ್ಣುಗಳಲ್ಲಿ ಕಾಣುವ ಆತ್ಮಸಂತೃಪ್ತಿ ಮತ್ತು ಸಾರ್ಥಕತೆಯ ಭಾವವು ಪದಗಳಿಗೆ ನಿಲುಕದ್ದು.

ಪುಸ್ತಕಗಳೇ ನನ್ನ ಬದುಕು ಎನ್ನುವ ಮಾಂಝಿಯವರ ಮಾತುಗಳಲ್ಲಿರುವ ಪ್ರಾಮಾಣಿಕತೆಯನ್ನು ಚಾಪ್ಟರ್ ೧೦೧ ನಲ್ಲಿಟ್ಟಿರುವ ಪ್ರತಿಯೊಂದು ಪುಸ್ತಕದಲ್ಲೂ ನಾನು ಕಂಡಿದ್ದೆ. ಸಂಗ್ರಹದಲ್ಲಿರುವ ಒಂದೊಂದು ಪುಸ್ತಕವನ್ನೂ ‘ಪರ್ಫೆಕ್ಟ್ ಎನ್ನುವಂತೆ ಮಟ್ಟಸವಾಗಿ ಬೈಂಡ್ ಮಾಡಿರುವ ರೀತಿ, ಪುಸ್ತಕದ ಪುಟವೊಂದು ಸಣ್ಣಗೆ ಮಡಚಿಹೋಗಿದ್ದರೂ ಅವರಿಗಾಗುವ ತಳಮಳ, ಅಂಗಡಿಯ ಸಂಗ್ರಹವನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಅವರು ಮಾಡುವ ಕಸರತ್ತುಗಳು…

ಪುಸ್ತಕಗಳ ಬಗ್ಗೆ ಅವರಿಗಿರುವ ಒಲವನ್ನು ನಮಗೆ ಮಾತಿನ ಹಂಗಿಲ್ಲದೆಯೇ ಧಾರಾಳವಾಗಿ ಹೇಳುತ್ತದೆ. ಒಲಿಂಪಿಯನ್ ಕ್ರೀಡಾಪಟುವೊಬ್ಬ ತನ್ನ ಕ್ರೀಡೆಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ರೀತಿಯಲ್ಲೇ ಮಾಂಝಿ ಇಲ್ಲಿರುವ ಪುಸ್ತಕಗಳ ಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ. ಚಾಪ್ಟರ್ ೧೦೧ ರ ಮಾಲೀಕರಾಗಿರುವ ರಾಜು ಸಿಂಗ್ ರವರ ಕನಸಿಗೆ ತನ್ನದೇ ಆದ ರೀತಿಯಲ್ಲಿ ಬಣ್ಣಗಳನ್ನು ತುಂಬುತ್ತಿದ್ದಾರೆ.

ಬಿಹಾರ ಮೂಲದ ದೀನನಾಥ ಮಾಂಝಿಯವರ ಬದುಕಿಗೂ, ಪುಸ್ತಕಗಳಿಗೂ ಇರುವ ನಂಟು ಬಹಳ ಹತ್ತಿರದ್ದು. ೧೯೯೩ ರಲ್ಲಿ ಹೊಟ್ಟೆಪಾಡಿಗೆಂದು ಬಿಹಾರದಿಂದ ದಿಲ್ಲಿಗೆ ಬಂದ ದೀನನಾಥ ಮಾಂಝಿಯವರು ತಾನು ಪುಸ್ತಕಗಳ ಲೋಕದಲ್ಲಿ ಇಷ್ಟು ಗಟ್ಟಿಯಾಗಿ ಬೇರೂರುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲವಂತೆ. ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ಸೂಟ್ ಕೇಸ್ ಮಾರುವ ಸ್ಟೋರ್ ಒಂದರಲ್ಲಿ ಸಹಾಯಕನಾಗಿ ದುಡಿದ ಮಾಂಝಿ, ಸಂಸ್ಥೆಯೊಂದರ ಡೆಲಿವರಿ ಬಾಯ್ ಆಗಿಯೂ, ಸಿ.ಎ ಒಬ್ಬರ ಕಾರ್ಯಾಲಯದಲ್ಲಿ ಗುಮಾಸ್ತನಾಗಿಯೂ ದುಡಿದಿದ್ದರು.

ನಂತರ ಪುಸ್ತಕಗಳ ಅಂಗಡಿಯೊಂದರಲ್ಲಿ ಮೇಲ್ವಿಚಾರಕನಾಗಿ ದುಡಿಯುವ ಅವಕಾಶವೊಂದು ಆಕಸ್ಮಿಕವಾಗಿ ಅವರಿಗೆ ಒದಗಿಬಂದಿತ್ತು. ಅರ್ಥಪೂರ್ಣ ಬದುಕಿಗೆ ಅವಶ್ಯವಾಗಿರುವ ನಿರಂತರ ಕಲಿಕೆಯ ಬಗ್ಗೆ ನಂಬಿಕೆ ಮತ್ತು ಅಪಾರ ಆಸಕ್ತಿಯುಳ್ಳ ಮಾಂಝಿಯವರಿಗೆ ಇದೊಂದು ವರವಾಗಿದ್ದು ಸತ್ಯ.

ದಿಲ್ಲಿಯ ಪ್ರತಿಷ್ಠಿತ ಮತ್ತು ಲಕ್ಷುರಿ ಪುಸ್ತಕ ಮಳಿಗೆಗಳಲ್ಲೊಂದಾದ ಟೈಮ್ ಲೆಸ್ ಆರ್ಟ್ ಬುಕ್ ಸ್ಟುಡಿಯೋದಲ್ಲಿ ಸಾಮಾನ್ಯ ಮೇಲ್ವಿಚಾರಕನಾಗಿ ಸೇರಿಕೊಂಡ ದೀನನಾಥ ಮಾಂಝಿ ಸುಮಾರು ಇಪ್ಪತ್ತೈದು ವರ್ಷಗಳ ಅಲ್ಲಿ ನಿರಂತರವಾಗಿ ದುಡಿದವರು. ದೇಶವಿದೇಶಗಳಿಂದ ತರಿಸಲಾಗುತ್ತಿದ್ದ ಅಪರೂಪದ ಪುಸ್ತಕಗಳ ರಾಶಿಯೇ ಅಲ್ಲಿದ್ದರಿಂದಾಗಿ ಅವುಗಳ ವರ್ಗೀಕರಣದಿಂದ ಹಿಡಿದು, ಪುಸ್ತಕೋದ್ಯಮ ಲೋಕದ ಬಹುತೇಕ ಎಲ್ಲಾ ಬಗೆಯ ಸಂಗತಿಗಳ ಆಯಾಮಗಳನ್ನು ಅರಿತು ತನಗೊಪ್ಪಿಸಿದ ಜವಾಬ್ದಾರಿಯಲ್ಲಿ ಸೈ ಎನಿಸಿಕೊಂಡರು.

ಹೀಗೆ ತನ್ನ ವಿಶಿಷ್ಟ ಪುಸ್ತಕಪ್ರೀತಿ ಮತ್ತು ಕರ್ತವ್ಯಪರತೆಯಿಂದಾಗಿ ಮುಂದೆ ಟೈಮ್ ಲೆಸ್ ಆರ್ಟ್ ಬುಕ್ ಸ್ಟುಡಿಯೋದ ಮಾಲೀಕರ ಖಾಸಾ ಆಗಿಯೂ ಮಾಂಝಿ ಗುರುತಿಸಿಕೊಂಡರು. ಅವರೇ ಹೇಳುವಂತೆ ಎರಡೂವರೆ ದಶಕಗಳ ಕಾಲ ಟೈಮ್ ಲೆಸ್ ಸ್ಟುಡಿಯೋ ಅವರಿಗೆ ನೀಡಿದ್ದು ಅನ್ನವಷ್ಟೇ ಅಲ್ಲ, ಅಪಾರ ತಿಳುವಳಿಕೆ ಮತ್ತು ಅನುಭವವನ್ನೂ ಕೂಡ! 

ಕಂಪ್ಯೂಟರ್ ತಂತ್ರಜ್ಞಾನವು ಇನ್ನೂ ಬಂದಿರದಿದ್ದ ಕಾಲದಲ್ಲಿ ಯಾವ ಲೇಖಕನ, ಯಾವ ಬಗೆಯ, ಯಾವ ಪುಸ್ತಕವು ಎಲ್ಲಿದೆ ಎಂಬುದನ್ನು ಮಾಂಝಿ ಕ್ಷಣಾರ್ಧದಲ್ಲಿ ಹೇಳುತ್ತಿದ್ದರಂತೆ. ಅದೂ ಕೂಡ ದೇಶವಿದೇಶಗಳ ಸಾವಿರಾರು ಪುಸ್ತಕಗಳ ದೈತ್ಯಸಂಗ್ರಹದ ರಾಶಿಯಲ್ಲಿ! ಹೀಗಾಗಿ ಮಾಂಝಿ ಒಂದು ದಿನ ರಜೆ ಹಾಕಿದರೂ ಟೈಮ್ ಲೆಸ್ ಸ್ಟುಡಿಯೋದ ಬಂಡಿಯು ಕೊಂಚ ನಿಧಾನವಾಗುತ್ತಿತ್ತು. ದಿಲ್ಲಿಯ ಸೌತ್ ಎಕ್ಸ್ಟೆನ್ಷನ್ ನಲ್ಲಿರುವ ಟೈಮ್ ಲೆಸ್ ಸ್ಟುಡಿಯೋ ತನ್ನಲ್ಲಿರುವ ಲಕ್ಷುರಿ ಹಾರ್ಡ್ ಬೌಂಡ್ ಪುಸ್ತಕಗಳ ಅಪೂರ್ವ ಸಂಗ್ರಹದಿಂದಾಗಿ ಇಂದಿಗೂ ಪ್ರಸಿದ್ಧ.

ಹೀಗೆ ಟೈಮ್ ಲೆಸ್ ಆರ್ಟ್ ಬುಕ್ ಸ್ಟುಡಿಯೋದಲ್ಲಿ ಗಳಿಸಿದ ಒಳ್ಳೆಯ ಹೆಸರು ಮತ್ತು ಅಪಾರ ಅನುಭವವು ಮಾಂಝಿಯವರನ್ನು ಚಾಪ್ಟರ್ ೧೦೧ ರವರೆಗೂ ಕರೆತಂದಿದೆ.  ಪುಸ್ತಕಗಳ ಬಗ್ಗೆ ತನಗಿಂತಲೂ ಈತನಿಗೆ ಒಂದು ಪಟ್ಟು ಹಚ್ಚೇ ಪ್ರೀತಿಯಿದೆ ಎಂಬುದನ್ನು ಅರಿತುಕೊಂಡಿರುವ ಮಾಲೀಕ ರಾಜು ಸಿಂಗ್, ಮಾಂಝಿಯವರ ಸುರಕ್ಷಿತ ಕೈಗಳಲ್ಲಿ ಪುಸ್ತಕದಂಗಡಿಯ ದೈನಂದಿನ ಮೇಲ್ವಿಚಾರಿಕೆಯನ್ನು ಒಪ್ಪಿಸಿ ನಿರಾಳರಾಗಿದ್ದಾರೆ. ಸಿಂಗ್ ಮಾಲೀಕತ್ವದ ಚಾಪ್ಟರ್ ೧೦೧ ಈಗ ನಾಲ್ಕು ವರ್ಷದ ಶಿಶು. ಇತ್ತ ಮಾಂಝಿವರಿಗೂ ಸೆಕೆಂಡ್ ಇನ್ನಿಂಗ್ಸ್ ಲೆಕ್ಕದಲ್ಲಿ, ಚಾಪ್ಟರ್ ೧೦೧ ಪುಸ್ತಕದಂಗಡಿಯಲ್ಲಿ ನಾಲ್ಕು ವರ್ಷಗಳ ಯಶಸ್ವಿ ಪಯಣ. 

ಕೆನಡಾ ಸೇರಿದಂತೆ ಹಲವು ದೇಶಗಳಿಗೆ ಆಗಾಗ ಪ್ರಯಾಣ ಮಾಡುವ ರಾಜು ಸಿಂಗ್ ಹೋದಲ್ಲಿಂದೆಲ್ಲಾ ಸಂಗ್ರಹಯೋಗ್ಯ ಪುಸ್ತಕಗಳನ್ನು ತಂದು ತಮ್ಮ ಅಪರೂಪದ ಸಂಗ್ರಹಕ್ಕೆ ಸೇರಿಸುವವರು. ಸಿಂಗ್ ಇತರ ದೇಶಗಳಿಗೆ ಹೋಗಿ ಮಾಡುವ ಈ ಕೆಲಸವನ್ನು ದೀನನಾಥ ಮಾಂಝಿ ಸ್ವತಃ ದಿಲ್ಲಿಯಲ್ಲಿ ಮಾಡುತ್ತಾರೆ. ಮಾಂಝಿಯವರು ದಿಲ್ಲಿಯ ದರಿಯಾಗಂಜಿನಲ್ಲಿರುವ ಪುಸ್ತಕಸಮುದ್ರಕ್ಕೆ ಆಗಾಗ ಭೇಟಿ ನೀಡುತ್ತಾರಂತೆ.

ಮಹಾನಗರಿಯಲ್ಲಿರುವ ಇತರೆ ಪ್ರಕಾಶನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕವೂ ಅವರಿಗಿದೆ. ದಿಲ್ಲಿಯ ‘ಪುಸ್ತಕಕಾಶಿ’ಯಾದ ದರಿಯಾಗಂಜ್ ಪ್ರದೇಶದಲ್ಲಿ ಸಮೋಸದಂತೆ ಬಿಕರಿಯಾಗುವ ಅಪರೂಪದ ಪುಸ್ತಕಗಳು ಮಾಂಝಿಯವರ ಅನುಭವಿ ಕಣ್ಣುಗಳಿಂದ ತಪ್ಪಿ ಹೋಗುವುದು ಬಹುತೇಕ ಅಸಾಧ್ಯವೇ ಸರಿ. ಹಾಗಂತ ಎಲ್ಲಾ ಹಳೆಯ ಪುಸ್ತಕಗಳೂ ಸಂಗ್ರಹಯೋಗ್ಯವಾಗಿರುವುದಿಲ್ಲ. ಆದರೆ ಇಲ್ಲಿ ಕಾಳು-ಜೊಳ್ಳುಗಳನ್ನು ಪ್ರತ್ಯೇಕಿಸುವುದು ಮಾಂಝಿಯವರಂತಹ ಪಕ್ಕಾ ಪುಸ್ತಕಪ್ರೇಮಿಗೆ ಚಿಟಿಕೆ ಹೊಡೆದಷ್ಟೇ ಸುಲಭ.  

ಮಾಂಝಿಯವರೊಂದಿಗೆ ಹರಟುತ್ತಿದ್ದ ನಾನು ದರಿಯಾಗಂಜಿನಲ್ಲಿ ಅಪರೂಪದ ಪುಸ್ತಕಗಳನ್ನು ಕೊಂಡ ನನ್ನದೇ ಅನುಭವಗಳನ್ನು ಹಂಚಿಕೊಂಡೆ. ಅದು ಕಲ್ಲು, ಮಣ್ಣು, ಧೂಳುಗಳ ಮಧ್ಯೆ ಕಳೆದುಹೋಗಿರುವ ವಜ್ರಗಳನ್ನು ಹೆಕ್ಕಿದಂತೆ ಎಂದು ನಾವಿಬ್ಬರೂ ನಗುತ್ತಾ ಒಪ್ಪಿಕೊಂಡೆವು. ದಿಲ್ಲಿಯಲ್ಲಿ ನೆಲೆಸಿರುವ ಪುಸ್ತಕಪ್ರೇಮಿಯೊಬ್ಬ ದರಿಯಾಗಂಜ್ ಪ್ರದೇಶದಲ್ಲಿ ಹಾಕಲಾಗುವ ವಾರಾಂತ್ಯದ ಪುಸ್ತಕ ಮಾರಾಟಕ್ಕೆ ಒಮ್ಮೆಯಾದರೂ ಹೋಗಿಯೇ ಇರುತ್ತಾನೆ. ಜೊತೆಗೇ ಅಲ್ಲಿ ಹತ್ತಿಪ್ಪತ್ತು ರೂಪಾಯಿಗಳಿಗೆ ಸಿಗುವ ಬೆಲೆಬಾಳುವ ಪುಸ್ತಕಗಳನ್ನು ಕಂಡು ಬೆರಗನ್ನೂ ಅಪ್ಪಿಕೊಂಡಿರುತ್ತಾನೆ. ಹೀಗಾಗಿ ದರಿಯಾಗಂಜಿನಲ್ಲಿ ಒಳ್ಳೆಯ ಪುಸ್ತಕಗಳನ್ನು ಆರಿಸಲು ವ್ಯಯಿಸುವ ತಾಸುಗಟ್ಟಲೆ ಸಮಯವು, ಪುಸ್ತಕಪ್ರೇಮಿಯೊಬ್ಬನಿಗೆ ‘ಶ್ರಮ’ದಂತೆ ಕಾಣದೆ ಸೊಗಸೆಂಬಂತೆ ಕಾಣುವ ಲಾಜಿಕ್ಕನ್ನು ನಾನು ಬಲ್ಲೆ.

ಹೀಗೆ ಚಾಪ್ಟರ್ ೧೦೧ ಬುಕ್ ಸ್ಟಾಲಿಗೆ ಬರುವ ಆಸಕ್ತ ಓದುಗನೊಬ್ಬ ದೀನನಾಥ ಮಾಂಝಿಯವರ ಪುಸ್ತಕಪ್ರೀತಿಗೆ ಮರುಳಾಗದಿರುವುದು ಕಷ್ಟ. ಏಕೆಂದರೆ ಈ ವಿಶಿಷ್ಟ ಪುಸ್ತಕದಂಗಡಿಯ ಕೌಂಟರಿನಲ್ಲಿ ಕೂತಿರುವ ಮಾಂಝಿಯವರಿಗೆ ಅದು ಉದ್ಯೋಗವಷ್ಟೇ ಅಲ್ಲ. ಪುಸ್ತಕಗಳು ಅವರ ಬದುಕಿನ ನರನಾಡಿಯೂ ಹೌದು. ಹಿಂದೂಸ್ತಾನ್ ಟೈಮ್ಸ್ ನಲ್ಲಿ ವರದಿಗಾರರಾಗಿರುವ ಯುವ ಪತ್ರಕರ್ತ ಮಯಾಂಕ್ ಆಸ್ಟಿನ್ ಸೂಫಿಯವರು, ಎರಡು ವರ್ಷಗಳ ಹಿಂದೆ ‘ಗುರುಗ್ರಾಮ್ ವಾಲೇ’ ವಿಭಾಗದಲ್ಲಿ ಚಿತ್ರಸಹಿತ ಲೇಖನವೊಂದನ್ನು ಬರೆದು ಮಾಂಝಿಯವರನ್ನು ಪತ್ರಿಕೆಯ ಓದುಗರಿಗೆ ಪರಿಚಯಿಸಿದ್ದರು. ಈ ಬಗೆಯ ಹಿತವಾದ ಅನಿರೀಕ್ಷಿತ ಘಟನಾವಳಿಗಳು ಮಾಂಝಿಯವರ ಪಾಲಿಗೆ ಹೆಮ್ಮೆಯದ್ದೂ, ಸಾರ್ಥಕತೆಯನ್ನು ತರುವಂಥದ್ದೂ ಹೌದು.

ಮಾಂಝಿಯವರ ಬಗ್ಗೆ ಬರೆಯುವ ಮಯಾಂಕ್ ಸೂಫಿ ಲೇಖನವನ್ನು ಆರಂಭಿಸುವುದೇ ಹೀಗೆ: ‘ಮಾಂಝಿಯ ಮೃದುವಾದ ಧ್ವನಿಯು ಪುಸ್ತಕಗಳಿಂದ ತುಂಬಿರುವ ಆ ಕೋಣೆಯುದ್ದಕ್ಕೂ ತಂಗಾಳಿಯಂತೆ ಹಿತವಾಗಿ ಬೀಸುತ್ತದೆ. ಸ್ವಭಾವತಃ ಆತ ಶಾಂತಮೂರ್ತಿ. ಜನರು ಚೈನಾ ಪಾತ್ರೆಯೊಂದನ್ನು ಎಚ್ಚರಿಕೆಯಿಂದ ಸ್ಪರ್ಶಿಸುವಂತೆ ಆತ ಪುಸ್ತಕಗಳನ್ನು ಸ್ಪರ್ಶಿಸುತ್ತಾನೆ. ಕೊಂಚ ಬಿಗಿಯಾಗಿ ಹಿಡಿದರೆ ಆ ಹಾರ್ಡ್ ಬೌಂಡ್ ಪುಸ್ತಕಗಳು ಅಸಂಖ್ಯಾತ ಚೂರುಗಳಾಗಿ ಸಿಡಿದುಹೋಗುತ್ತವೇನೋ ಎಂಬಂತೆ!’. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಆ ಹಾಳೆಯನ್ನು ತನ್ನ ಹಳೆಯ ಫೈಲೊಂದರಲ್ಲಿ ಮಾಂಝಿ ಜೋಪಾನವಾಗಿಟ್ಟಿದ್ದಾರೆ. ನಾನು ಮುಂದಿನ ಬಾರಿ ಬರುವಾಗ ಇದಕ್ಕೊಂದು ಗಾಜಿನ ಫ್ರೇಮ್ ಹಾಕಿಸಿಟ್ಟಿರಬೇಕು ಎಂದು ಮಗನಂತೆ ಅವರಿಗೆ ಪ್ರೀತಿಪೂರ್ವಕ ಸಲಹೆಯೊಂದನ್ನು ಕೊಡಲು ನನಗೂ ಖುಷಿ. 

ಇಂಗ್ಲಿಷ್ ಭಾಷೆಯಲ್ಲಿರುವ ಆ ವರದಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವಷ್ಟು ಮಾಂಝಿ ಶಕ್ತರಲ್ಲ. ಹೀಗಾಗಿ ನಾನು ವರದಿಯ ಒಟ್ಟಾರೆ ಸಾರಾಂಶವನ್ನು ಹೇಳಿ ಅವರ ಸವಿನೆನಪುಗಳನ್ನು ಮತ್ತಷ್ಟು ತಾಜಾ ಮಾಡಿದೆ. ಯುವಲೇಖಕ ಮಯಾಂಕ್ ಸೂಫಿ ಕಾವ್ಯಮಯವಾಗಿ ಬರೆದಿದ್ದರೂ, ಸತ್ಯಕ್ಕೆ ಒಂದಷ್ಟೂ ಲೋಪವಾಗದಂತೆ ಬರೆದಿದ್ದಾರೆ ಎಂಬುದನ್ನೂ ಅವರಿಗೆ ತಿಳಿಸಿದೆ. ಎಂದಿನಂತೆ ಅವರ ಮೊಗದಲ್ಲಿ ಬುದ್ಧನ ನಗೆ, ಸಾರ್ಥಕತೆಯ ಭಾವ.

ದೀನನಾಥ ಮಾಂಝಿಯವರ ಜೊತೆ ಚಾಪ್ಟರ್ ೧೦೧ ಪುಸ್ತಕದಂಗಡಿಯನ್ನು ನೋಡಿಕೊಳ್ಳುತ್ತಿರುವವರಲ್ಲಿ ಯುವ ಲೇಖಕ, ಬ್ಲಾಗ್ ಬರಹಗಾರ ಮತ್ತು ಕಲಾವಿದರಾಗಿರುವ ರೋಹನ್ ದಹಿಯಾ ಕೂಡ ಇದ್ದಾರೆ. ಪುಸ್ತಕದಂಗಡಿಯ ವೆಬ್ ತಾಣದಲ್ಲಿ ಪುಸ್ತಕ ಮತ್ತು ಉದ್ಯಮದ ಬಗ್ಗೆ ಅವರ ಕೆಲ ಬರಹಗಳೂ ಕೂಡ ಓದಿಗೆ ಲಭ್ಯವಿದೆ. ಇನ್ನು ಬುಕ್ ಸ್ಟಾಲಿನಲ್ಲಿ ಗ್ರಾಹಕರಿಗಾಗಿಯೇ ಇಡಲಾಗಿರುವ ಟೀ, ಕಾಫಿ ಸವಿಯುತ್ತಾ ಇಲ್ಲಿ ಇಡಲಾದ ಚರ್ಮದ ಹೊದಿಕೆಯ ಪುಸ್ತಕಗಳಲ್ಲಿ ಕೈಯಾಡಿಸುವುದು ಮತ್ತು ತಮ್ಮಿಷ್ಟದ ಲೇಖಕರ ಬರಹಗಳನ್ನು ಅಷ್ಟಿಷ್ಟು ಓದುವುದು ದಿಲ್ಲಿಗೆ ಬರುವ ಪುಸ್ತಕಪ್ರಿಯರು ಮಿಸ್ ಮಾಡಲಾರದ, ಮಾಡಬಾರದ ಬೋನಸ್ ಅಂಶಗಳಲ್ಲೊಂದು. 

ಅಲಿಸ್ಟರ್ ಕ್ರೌಲೇ, ಗುಲಿರ್ಮೋ ಕ್ಯಾಸನೋವಾ, ಲಿಯೋನಾರ್ಡೋ ಡ ವಿಂಚಿ, ಈದಿ ಅಮೀನ್, ಜಾಕ್ ದ ರಿಪ್ಪರ್, ಎಡ್ಗರ್ ಹೂವರ್, ಹ್ಯಾರಿ ಹೌದಿನಿ, ಮಹರ್ಷಿ ಮಹೇಶ ಯೋಗಿ, ಫ್ರೀಡಾ ಕಾಹ್ಲೋ, ಫಿಡೆಲ್ ಕಾಸ್ಟ್ರೋ, ಇಕ್ಬಾಲ್… ಹೀಗೆ ಓದಲು ಇಚ್ಛಿಸಿದ್ದ ಹಲವರ ಜೀವನಕಥನಗಳ ಪಟ್ಟಿಯೊಂದು ಆಗಲೇ ನನ್ನ ಕೈಯಲ್ಲಿತ್ತು. ಇತ್ತ ಚಾಪ್ಟರ್ ೧೦೧ ಪುಸ್ತಕದಂಗಡಿಗೆ ಭೇಟಿ ಕೊಟ್ಟ ನಂತರ ನೆಪೋಲಿಯನ್, ಲಾವೋ ತ್ಸು, ಹೆನ್ರಿ ಕಿಸ್ಸಿಂಗರ್, ಅಲ್ ಸಾಲ್ವಡಾರ್ ಡಾಲಿ, ಅನಾಯಿಸ್ ನಿನ್, ಸಿಲ್ವಿಯಾ ಪ್ಲಾತ್, ಎಂ. ಎಫ್. ಹುಸೇನ್, ಬಲ್ಝಾಕ್, ನಾಮದೇವ್ ಧಸಲ್, ಓಮರ್ ಖಯ್ಯಾಮ್, ಆಮೀರ್ ಖುಸ್ರೋ, ಜಾನ್ ಏಲಿಯಾ, ಇಸ್ಮತ್ ಚುಗ್ತಾಯಿ… ಇತ್ಯಾದಿ ಹೆಸರುಗಳೊಂದಿಗೆ ಈಗಾಗಲೇ ಇರುವ ಪಟ್ಟಿಯು ಸದ್ಯ ಮತ್ತಷ್ಟು ಹಿರಿದಾಗಿದೆ.

ಒಟ್ಟಿನಲ್ಲಿ ಓದಿನ ಓಟವು ನಿಲ್ಲುವಂಥದ್ದಲ್ಲ!

April 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಭಾಗ್ಯವಂತರು ನೀವು, ಪ್ರಸಾದ್! ಎಂದಾದರೂ ನಿಮ್ಮೊಡನೆ ದರಿಯಾಗಂಜ್ ಗೆ ………. ನೀವು ಅರಗಿಸಿಕೊಳ್ಳುವ ಆ ಎಲ್ಲ ಆತ್ಮಕಥನ ಗಳ ಬಗ್ಗೆ ನಿಮ್ಮ ವಿಚಾರಗಳನ್ನು ಓದುವಾಶೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: