ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ಕಾದಂಬರಿ

ವಿವೇಕ ಶಾನಭಾಗ ಕಾದಂಬರಿ ‘ಸಕೀನಾಳ ಮುತ್ತು’

ಅಕ್ಷರ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಅವರ ವಿಮರ್ಶೆ ಇಲ್ಲಿದೆ.

-ಉದಯಕುಮಾರ್ ಹಬ್ಬು

ವಿವೇಕ ಶಾನಭಾಗ ಕನ್ನಡದ ಕಾದಂಬರಿ ಪರಂಪರೆಯ ಒಂದು ಬಲಿಷ್ಠ ಕೊಂಡಿ. ಅವರ “ಒಂದು ಬದಿ ಕಡಲು” ಘಾಚರ್ ಘೋಚರ್” ನಂತರ ಬಂದ ಈ ಕಾದಂಬರಿ “ಸಕೀನಾಳ ಮುತ್ತು” ಹೊಸ ಕಥಾನಕದೊಂದಿಗೆ, ಹೊಸ. ಪ್ರಶ್ನೆಗಳೊಂದಿಗೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ. ಒಂದೆಡೆ ಕಾರ್ಪೋರೇಟ್ ಪ್ರಪಂಚದ ವಿದ್ಯಮಾನ, ಅದರ ಚೌಕಟ್ಟಿನೊಳಗೆ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆ, ಭೂಗತ ಜಗತ್ತಿನ ವಿದ್ಯಮಾನ, ಭ್ರಷ್ಟವಾಗುತ್ತಿರುವ ರಾಜಕೀಯ, ಸಾಮಾಜಿಕ ಅರಾಜಕತೆ ಅಥವಾ ಅವ್ಯವಸ್ಥೆ, ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಿ ನ್ಯಾಯವನ್ನು ಒದಗಿಸುವ ಆದರ್ಶವನ್ನು ಹೊತ್ತ ಯುವಜನತೆ, ಈ ಹದಿಹರೆದವರನ್ನು ಬ್ರೈನ್ ವಾಶ್ ಮಾಡಿ ಆದರ್ಶಗಳಿಗೆ ನೇತು ಹಾಕುವ ಕೆಲ ಸಮಾಜ ಸುಧಾರಕ ಹೋರಾಟಗಾರರ ಕುಮ್ಮಕ್ಕು, ವೋಟ್ ರಾಜಕೀಯ ಕುಟುಂಬದ ಸಾಮರಸ್ಯವನ್ನು ಕೆಡಿಸುವ ಪರಿ, ಇವೆಲ್ಲವುಗಳನ್ನು ಗುಡ್ಡೆ ಹಾಕಿಕೊಂಡು ನಲುಗುವ ಹೆತ್ತವರು, ಹೀಗೆ ಬದುಕಿನ ಹೋರಾಟದ ಹಿಂದಿರುವ ಕಾಪಟ್ಯ, ಲಾಲಸೆ, ಆಸೆ, ಆಕಾಂಕ್ಷೆಗಳು ಇವೆಲ್ಲ ಸಾವಿನೊಂದಿಗೆ ಮುಗಿದು ಹೋಗುವ ಯುದ್ಧ. ಲೈಫ್ ಅಂದರೆ ಇಷ್ಟೇನೆ! ಎಂದು ಮೇಲುಸಿರು ಬಿಡುವ ಅಸಹಾಯಕ ಆಧುನಿಕ ಮನುಷ್ಯ! ಇಲ್ಲಿ ಹದಿಹರೆಯದ ಮಕ್ಕಳ ಉದ್ವಿಗ್ನ ಮನೋಸ್ಥಿತಿಯು ಹೆತ್ತವರ ಮನೋಸ್ಥಿತಿಯೊಂದಿಗೆ ಮುಖಾಮುಖಿಯಾದಾಗ ಹೆತ್ತವರು ಅಸಹಾಯಕರಾಗಿ  ಮಕ್ಕಳ ಕುರಿತು ದಿಗಿಲುಗೊಂಡು ಕಂಗಾಲಾಗುವ ಸ್ಥಿತಿ.  ಹಾಗಾದರೆ ಈ ಕಾದಂಬರಿ ನಮಗೆ ಈ ಎಲ್ಲ ಸವಾಲುಗಳನ್ನು ಒಡ್ಡಿ ಮುಂದೇನು ಎಂಬ ಕುರಿತು ಚಿಂತನೆಗೆ ಹಚ್ಚುತ್ತದೆ. ಯುವಕರು ಈ ಭ್ರಷ್ಟ ವ್ಯವಸ್ಥೆಯಿಂದ ರೋಸಿ ಹೋಗಿ ಸಮಾಜದಲ್ಲಿ ನ್ಯಾಯ, ಪ್ರಾಮಾಣಿಕ ಆಡಳಿತ, ಭ್ರಷ್ಟರಹಿತ ರಾಜಕಾರಣ ಈ ದೇಶದಲ್ಲಿ ತರಬೇಕಿದ್ದರೆ ಯುವಕರು ನಕ್ಸಲ್ ಗಳಾಗಬೇಕೆ?

ಈ ಕಾದಂಬರಿಯ ವಿಶಿಷ್ಟತೆ ಓದಿಸಿಕೊಂಡು ಹೋಗುವ ಜನಪ್ರಿಯ ಕಾದಂಬರಿಯಂತೆ ಕಂಡುಬಂದರೂ ಅದು ಇನ್ನೇನೋ ಘನವಾದ್ದನ್ನು ಬದುಕಿನ ಸಂಕೀರ್ಣತೆಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಕಥಾನಕದಿಂದಾಗಿ ಸೆರೆ ಹಿಡಿಯುತ್ತದೆ‌

ಇಲ್ಲಿ ಬರುವ ಪಾತ್ರಗಳು ನಿರೂಪಕ, ಅವನ ಹೆಂಡತಿ ವಿಜಿ, ಮಗಳು ರೇಖಾ, ಒಂದೆಡೆಯಾದರೆ, ನಿರೂಪಕನ ಮೂಲ ಮನೆಯಲ್ಲಿ ಇದ್ದ ಅಪ್ಪ- ಅಮ್ಮ ಮತ್ತು ಮನೆಯ ತೋಟದ ಇಡಿ ಆಡಳಿತದ ನಿಯಂತ್ರಣ ಹೊಂದಿದ ಚಿಕ್ಕಪ್ಪ ಅನಂತು. ಈ ಚಿಕ್ಕಪ್ಪನಿಗೆ ಅಪ್ಪನ ಮೇಲೆ ಸಂಪೂರ್ಣ ನಿಯಂತ್ರಣ. ನಿರೂಪಕನ ಅಮ್ಮನನ್ನೂ ಕೂಡ ಅಪ್ಪನಿಗಿಂತ ಚಿಕ್ಕಪ್ಪನೆ ಹದ್ದುಬಸ್ತಿನಲ್ಲಿಟ್ಟುಕೊಂಡು ಆಳುವವನು. ಅಮ್ಮನ ತಮ್ಮ ರಮಣ. ಅವನು ನಕ್ಸಲ್ ಆಗಿ ಭೂಗತನಾಗಿ ಪೋಲಿಸ್ ಕಣ್ಣಿನಿಂದ ತಪ್ಪಿಸಿಕೊಂಡು ಪೋಲಿಸ್ ಒಬ್ಬನ ಮನೆಗೆ ನುಗ್ಗಿ ಅವನ ಹೆಂಡತಿ ಮಕ್ಕಳನ್ನು ಕೊಂದ ಆರೋಪವನ್ನು ಹೊತ್ತ ರಮಣ. ರಮಣನು ನಿರೂಪಕನ ಮಾವ ಅಂದರೆ ತಾಯಿಯ ತಮ್ಮ. ಇಲ್ಲಿ ಅಂತಣ್ಣ ಎಂಬ ನಿರೂಪಕನ ಚಿಕ್ಕಪ್ಪ ರಮಣ ಸಣ್ಣ ಹುಡುಗನೆಂದು ಅವನ ಪಾಲಿನ ಪಿತ್ರಾರ್ಜಿತ ಆಸ್ತಿಯ ದೇಖರೇಖಿ ಮಾಡುತ್ತ ಅದನ್ನು ನಿರೂಪಕನ ಅಪ್ಪ ತನ್ನ ಹೆಸರಿಗೆ ಮಾಡಿಕೊಂಡಿರುತ್ತಾನೆ. ಅಮ್ಮನಿಗೆ ತನ್ನ ತಮ್ಮನ ಮೇಲೆ ಅಪಾರ ಪ್ರೀತಿ ಮತ್ತು ಅನುಕಂಪ. ತನ್ನ ಗಂಡ ಮತ್ತು ಅವನ ತಮ್ಮ ತನ್ನ ತಮ್ಮನ ಆಸ್ತಿಯನ್ನು ನುಂಗಿ ಹಾಕಿದ್ದರ ಬಗ್ಗೆ ಆಕ್ರೋಶ.ಅದೆ ವ್ಯಥೆಯಲ್ಲಿಯೆ ಅಮ್ಮ ಸತ್ತಳು ಎಂದು ನಿರೂಪಕನ ಅನಿಸಿಕೆ.

ಹೀಗೆ ಈ ನಿರೂಪಕ ದಂಪತಿಗಳ ಮಗಳು ರೇಖಾ ತನ್ನ ಅಪ್ಪನ ಮೂಲ ಮನೆ ಇರುವ ಕಾಡು ಮಲೆನಾಡಿನ ಹಳ್ಳಿಗೆ ಬರುತ್ತಾಳೆ. ಅಲ್ಲಿ ಅಂತಣ್ಣ ರೇಖಾಳನ್ನು ತುಂಬ ಪ್ರೀತಿಸುತ್ತಿರುತ್ತಾನೆ‌ ಹಾಗಾಗಿ ರಜಾ ದಿನಗಳಲ್ಲಿ ರೇಖಾ ಹಳ್ಳಿ ಮನೆಯಲ್ಲಿಯೆ ಕಳೆಯಲು ಇಷ್ಟಪಡುತ್ತಾಳೆ. ರೇಖಾ ಹಳ್ಳಿ ಮನೆಗೆ ಹೋದಾಗ ಕಾಲೇಜು ಹುಡುಗರಿಬ್ಬರು ನಿರೂಪಕನ ಮನೆಗೆ ಬಂದು ರೇಖಾಳ ಬಗ್ಗೆ ವಿಚಾರಿಸಿ ಅರ್ಜೆಂಟಾಗಿ ಅವಳನ್ನು ಕಾಣಬೇಕಿತ್ತು ಎಂದು ಹೇಳುತ್ತಾರೆ. ನಿರೂಪಕ ಮಗಳು ಹಳ್ಳಿಗೆ ಹೋಗಿದ್ದಾಳೆ. ಅಲ್ಲಿ ಫೋನ್ ಸಂಪರ್ಕಕೂಡ ಇಲ್ಲ. ಎಂದು ತನ್ನ ಅಸಹಸಯಕತೆಯನ್ನು ಹೇಳುತ್ತಾನೆ. ಮಾರನೆಯ ದಿನ ಪುಡಿ ರೌಡಿ ಗ್ಯಾಂಗಿನವನು ಕೂಡ ರೇಖಾಳನ್ನು ಕೇಳಿಕೊಂಡು ಬಂದು ರೇಖಾ ನಮ್ಮ ಹುಡುಗನ ಜೊತೆ ಮಾತಾಡದಂತೆ ಇನ್ನೊಬ್ಬ ಹುಡುಗ ಧಮಕಿ ಹಾಕ್ತಿದಾನೆ. ನೀವು ಒಂದು ಪೋಲಿಸ್ ಕಂಪ್ಲೇಂಟ್ ಕೊಡಿ. ನಾವು ನಿಮ್ನ ಡಾಟರನ್ನು ರಕ್ಷಿಸುಸುತ್ತೇವೆ‌ ಎಂದೆಲ್ಲಾ ಹೇಳುತ್ತಾನೆ. ಒಂದು ದಿನ ಹಳ್ಳಿ ಮನೆಯಿಂದ ರೇಖಾ ನಾಪತ್ತೆಯಾಗುತ್ತಾಳೆ. ನಿರೂಪಕ ಮತ್ತು ಅವನ ಹೆಂಡತಿ ಕಂಗಾಲಾಗಿ ಹಳ್ಳಿಗೆ ಬರುತ್ತಾರೆ. ಅಲ್ಲಿ ಅಂತಣ್ಣ ರೇಖಾ ಬೆಂಗಳೂರು ಬಸ್ಸಿಗೆ ಹೊರಟಿದ್ದಾಳೆ ಎನ್ನುತ್ತಾನೆ. ಆದರೆ ಅವಳು ಬೆಂಗಳೂರು ತಲುಪಿರುವುದಿಲ್ಲ. ಅವಳ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ರೇಖಾಳು ಬೆಂಗಳೂರಿಗೆ ಹೋಗುವಾಗ ಸುರೇಶ್ ಎಂಬ ಪತ್ರಕರ್ತ ಬೆಂಗಳೂರಿಗೆ ಹೋಗುತ್ತಿರುವುದರಿಂದ ಅಂತಣ್ಣ ಬಸ್ ಸ್ಡ್ಯಾಂಡಿಗೆ ಹೋಗದೆ ನಡು ದಾರಿಯಲ್ಲಿ ಹಿಂದೆ ಬಂದಿರುತ್ತಾನೆ. ಈಗ ಸುರೇಶ್ ನ ಹಿಡಿದು ಕೇಳಿದರೆ ಎಲ್ಲ ಗೊತ್ತಾಗುತ್ತೆ. ರೇಖಾಳನ್ನು ನಾಪತ್ತೆ ಮಾಡಿದವನೆ ಸುರೆಶ್ ಎಂದಾಗಿ ಅವನನ್ನು ವಿಚಾರಿಸುತ್ತಾರೆ. ಆಗ ಸುರೇಶ್ ರೇಖಾಳನ್ನು ಯಾವುದೋ ನಿಗೂಢ ಸ್ಥಳಕ್ಕೆ ಪತ್ತೆದಾರಿ ಮಾಡಲು ಕಳಿಸಿರುವ ವಿಷಯ ಹೊರಬರುತ್ತದೆ‌ ಸಂಜೆಯಾಗುವಾಗ ನಿಮ್ಮ ಮಗಳು ಬರ್ತಾಳೆ ಎಂದು ಸುರೇಶ್ ಹೇಳುತ್ತಾನೆ. ರೇಖಾ ಹೋಗಿದ್ದೆಲ್ಲಿಗೆ? ರಮಣನ ಪ್ರೇಯಸಿ ನೀಲಾ ಎಂಬ ನಕ್ಸಲ್ ಳ ಬಳಿ ಸುರೇಶ್ ರೇಖಾಳನ್ನು ಕಳಿಸಿರುತ್ತಾನೆಯೆ? ಮತ್ತೆ ಸಂಜೆ ರೇಖಾ ಹಳ್ಳಿಗೆ ವಾಪಸ್ ಬರುತ್ತಾಳೆ. ಮೂವರೂ ಅದೆ ರಾತ್ರಿ ನಿರೂಪಕ, ಅವನ ಹೆಂಡತಿ ವಿಜಿ ಮಗಲು ರೇಖಾ ಬೆಂಗಳೂರಿಗೆ ವಾಪಸು ಹೊರಟು ಮನೆ ತಲುಪಿದಾಗ ಮನೆ ಒಳಗಿನಿಂದ ಚಿಲಕ ಹಾಕಿದಂತಿದ್ದು ಮನೆಯ ಬಾಗಿಲನ್ನು ತೆರೆಯಲಾಗದೆ, ಹಾರೆಯಿಂದ ನೆರೆಯವನು ಬಾಗಿಲನ್ನು ಒಡೆದು ತೆಗೆಯುತ್ತಾನೆ. ಕಳ್ಳರು ರಾತ್ರಿ ಬಚ್ಚಲ ಮನೆಯ ಕಿಟಕಿ ಗ್ಲಾಸ್ ನ್ನು ಒಡೆದು ಹಗ್ಗ ಕಟ್ಟಿ ಮನೆಯೊಳಗೆ ಪ್ರವೇಶ ಮಾಡಿ ಹೊರಟು ಹೋಗಿರುತ್ತಾರೆ‌‌ ನಿರೂಪಕ ಪೋಲಿಸ್ ದೂರು ಕೊಡುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಕಾದಂಬರಿಯ ಕೊನೆಯ ಭಾಗದಲ್ಲಿ ನಿರೂಪಕನ ಮಾತುಗಳು ಹೀಗಿವೆ:” ಮನುಷ್ಯನ ಇಡಿಯ ಬಾಳನ್ನು ಎರಡು ಗಂಟೆಯ ಸಿನೆಮಾದಲ್ಲಿ ತೋರಿಸಿದ ಹಾಗೆ ಬೀರುವನ್ನು ಓರಣವಾಗಿಡುವ ಕ್ರಿಯೆಯ ಮೂಲಕ ನನ್ನ ಜೀವನ ತೋರಿಸಬಹುದೆಂದೆನಿಸಿತು. ಫ್ಲ್ಯಾಶ್ ಬ್ಯಾಕ್ ನ ಸ್ವಿಚ್ಚೊತ್ತಲು ಬೇಕಾದದ್ದೆಲ್ಲವೂ ಇದೆ. ಡಿಗ್ರಿ ಸರ್ಟಿಫಿಕೇಟ್, ತಾಳಿ, ಅಪ್ಪ-ಅಮ್ಮನ ಫೋಟೋ, ನೀಲಾಳ ಪತ್ರ,ವೋಟರ್ ಕಾರ್ಡುಗಳು, ಕಥಾನಕವನ್ನು ಪುಷ್ಟಿಗೊಳಿಸುವ ಮುಖ್ಯದೃಶ್ಯಗಳಲ್ಲಿ. ಮೊದಲನೆಯದು ತಾಳಿ ಭಾಗ್ಯ, ಆ ಮೇಲೆ ರೆಖಾಳನ್ನು ಹುಡುಕಿ ಹೊರಟಿದ್ದು, ನಂತರ ಮತದಾನದ ಇಂಟರ್ವಲ್, ಮೊದಲು ರೋಚಕವಾದ ಯಾವುದನ್ನು ತೋರಿಬಹುದು? ರಮಣನನ್ನು ಎಲ್ಲಿ ಕೂರಿಸುವುದು? ದೈ‌ನಿಕದೊಳಗೆ ಸದ್ದಿರದೆ ಸುಳಿಯುವ ನಿತ್ಯ ಕರ್ಮಗಳ ಬದಿಯಲ್ಲೇ ಅದೃಶ್ಯವಾಗಿ ಸದಾ ಹಾಜರಿರುವ ದುರಂತದ ಸನ್ನೆಗಳನ್ನು ಹಿಡಿಯಬೇಕು. ಅದನ್ನು ಸರಿಯಾಗಿ ಗ್ರಹಿಸಲಾಗದ ಅಸಹಾಯಕತೆಯನ್ನೂ, ಅಜ್ಞಾತ ಭಯವನ್ನೂ ಬಿತ್ತಿದ ರಾಜಕೀಯವನ್ನು ಹೇಗೆ ಚಿತ್ರಿಸುವುದು? ರೇಖಾ ಮಾಯವಾಗಿ ಹೋಗಿದ್ದೆಲ್ಲಿ ಎಂಬುದನ್ನೂ ಬಗೆಹರಿಸಬೇಕಲ್ಲ‌. ಊಹಾತೀತವಾದ ಸಾಧ್ಯತೆಯು ರೋಚಕ ತಿರುವನ್ನು ಕೊಡಬಲ್ಲದು. ನೀಲಾಳ ಪತ್ರವು ರೇಖಾಳ ಕೈಗೆ ಸಿಕ್ಕು ಅವಳು ನೀಲಾಳನ್ನು ಹುಡುಕಿ ಹೋಗಿದ್ದರೆ? ಮೊದಲಲ್ಲಿ ಇದೊಂದು ಅಸಾಧ್ಯವಾದ ಸಂಗತಿಯೆನಿಸಿದರೂ ದೃಶ್ಯಗಳನ್ನು ಊಹಿಸುತ್ತ ಹೋದ ಹಾಗೆ ಅಸಂಭವನೀಯವೆನಿಸಲಿಲ್ಲ. ಇದರ ಮುಂದಿನ ತಾರ್ಕಿಕ ಹೆಜ್ಜೆ ಮಾತ್ರ ಊಹೆಗೆ ನಿಲುಕಲಿಲ್ಲ.” ಪುಟ ಸಂಖ್ಯೆ ೧೪೩.

ಇಷ್ಟಲ್ಲದೆ ಮನುಷ್ಯ ನಿಕಟವಾದಷ್ಟು ಜಿಗುಪ್ಸೆಗೊಳಗಾಗುತ್ತಾನೆ. ಅದು ಹೆಂಡತಿಯೂ ಆಗಿರಲೊಲ್ಲಳೇಕೆ? ಪರಸ್ಪರ ಹೊಂದಾಣಿಕೆಗೂ ಒಂದು ಮಿತಿ ಇದೆ. ಇಂತಹ ಕೆಲವು ಬದುಕಿನ ಕುರಿತಾದ ವಿಮರ್ಶೆಗಳು ಹೊಸ ಬೆಳಕನ್ನು ನೀಡುತ್ತವೆ‌

ಬೆನ್ನುಡಿಯ ಮಾತುಗಳು:” ಯಾವ ಅನುಭವವೂ ಪ್ರಾಂಜಲವಲ್ಲದ, ಎಲ್ಲ ಬಗೆಯ ಗ್ರಹಿಕೆಗಳೂ ಕಲುಷಿತಗೊಂಡ ಈ ಸತ್ಯೋತ್ತರ ಕಾಲದಲ್ಲಿ,ಕತೆಯನ್ನು ನಂಬು ಕತೆಗಾರನನ್ನಲ್ಲ ಎಂಬ ಪ್ರಸಿದ್ಧೋಕ್ತಿಯನ್ನು ತುಸು ಬದಲಿಸಿ ಕಥನವನ್ನು ನಂಬು ಕಥೆಯನ್ನಲ್ಲ ಎಂದೂ ಹೇಳಬಹುದೇನೋ. ಈ ಕಾದಂಬರಿ ಅಂಥ ಸೂಚನೆ ಕೊಡುವಂತಿದೆ- “

ಶೀರ್ಷಿಕೆ “ಸಕೀನಾಳ ಮುತ್ತು” ಸ್ವಾರಸ್ಯಕರವಾಗಿದೆ. ರಮಣ ಎಂಬ ನಿರೂಪಕನ ಮಾವ ಭೂಗತನಾದ ಮೇಲೆ ಅವನು ನಿರೂಪಕನ ಅಮ್ಮನಿಗೆ ಅಂದರೆ ಅವನ ಅಕ್ಕನಿಗೆ ಪತ್ರಗಳನ್ನು ಬರೆಯುತ್ತಿದ್ದ. ಅವನ ಅಕ್ಷರಗಳು ಬ್ರಹ್ಮಲಿಪಿ. ಯಾರಿಗೂ ಓದಲು ಆಗುತ್ತಿರಲಿಲ್ಲ. ಅವನ ಒಂದು ಪತ್ರದಲ್ಲಿ ಬರೆದಿದ್ದ, ಪೋಲಿಸರ ಕೈಗೆ ಸಿಕ್ಕಿಬೀಳುವುದಕ್ಕಿಂತ ಸಾಯುವುದು ಮೇಲು.” ಇದರ ಅಕ್ಷರಗಳನ್ನು ಒಬ್ಬ ಹೀಗೆ ಓದಿದ್ದ. ಸಕೀನಾಳ ಮುತ್ತು ಬಹುಶಃ ಸಾಂಕೇತಿಕವಾಗಿ ಈ ಶೀರ್ಷಿಕೆ ಕುತೂಹಲಕಾರಿಯಾಗಿದೆ. 

‍ಲೇಖಕರು Admin

18 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading