ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ಕಥೆಗಳು

ಶ್ರೀನಿವಾಸ ಪಾ ನಾಯ್ಡು ಅವರ ‘ವಾಸ್ದೇವನ ಪಂಚಕಳಶ ಯಾತ್ರೆ’

‘ಸ್ನೇಹ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ದೀಕ್ಷಿತ್ ನಾಯರ್ ಅವರ ಒಂದು ಬರಹ ಇಲ್ಲಿದೆ.

– ದೀಕ್ಷಿತ್ ನಾಯರ್

ಶ್ರೀನಿವಾಸ ಪಾ ನಾಯ್ಡು ಅವರ ಕಥೆಗಳಲ್ಲಿ ವಿಶಿಷ್ಟ ಧ್ವನಿಯಿದೆ; ಅವರ ವಾಸ್ದೇವನ ಪಂಚ ಕಳಸ ಯಾತ್ರೆ ಕೃತಿ ಓದುತ್ತಾ ನನ್ನ ಅರಿವಿಗೆ ಬಂತು. ಮೆಲು ದನಿಯ ನಾಯ್ಡು ಅವರು ತಮ್ಮ ಕಥೆಗಳನ್ನೂ ಅತ್ಯಂತ ಮೆಲು ದನಿಯಲ್ಲಿಯೇ ಓದುಗರಿಗೆ ದಾಟಿಸಿದ್ದಾರೆ. ಈ ಕೃತಿಯಲ್ಲಿ ಹೊಚ್ಚಹೊಸ ಒಳನೋಟಗಳಿವೆ ಎಂಬುದೇ ವಿಶೇಷ. ಇಲ್ಲಿನ ಹನ್ನೆರಡು ಕಥೆಗಳೂ ಕಸುಬು ಗೊತ್ತಿರುವ ಕಥೆಗಾರನೊಬ್ಬನ ಪಕ್ಕಾ ಕುಸುರಿ ಕೆಲಸ. ಆಡು ಮಾತಿನ ಲಯದಲ್ಲೂ, ನಗರ ಜನರ ಆಡಂಬರದ ಭಾಷೆಯಲ್ಲಿಯೂ ಕಥೆಯ ಜೀವವನ್ನು ನಾಯ್ಡು ಹಿಡಿದಿಟ್ಟಿದ್ದಾರೆ. ಸೂಕ್ಷ್ಮ ವ್ಯಂಗ್ಯದ ಮೂಲಕವೂ  ಕಥೆಗಳನ್ನು ಕಟ್ಟಿರುವುದರಿಂದ ಶ್ರೀನಿವಾಸ ಅವರು ಪ್ರತಿಭಾವಂತ ಕಥೆಗಾರ ಎಂಬುದು ಸಾಬೀತಾಗಿದೆ. ನಯವಾದ ನಿರಾಡಂಬರ ಭಾಷೆ ಮತ್ತು ಸರಳ ನಿರೂಪಣೆಯಲ್ಲಿಯೇ ಕಥೆಗಳನ್ನು ಒಪ್ಪ ಓರಣವಾಗಿ ಒಪ್ಪಿಸಿದ್ದಾರೆ. ಪಾತ್ರಗಳಲ್ಲೇ ಜೀವಿಸಿದ್ದಾರೆ. ‘ಆಕ್ಸಿಡೆಂಟ್’ ಕಥೆಯಲ್ಲಿ ದಟ್ಟ ವಿಷಾದವಿದ್ದರೆ, ತಾಳ್ಮೆ ದೈವ ಕಥೆಯಲ್ಲಿ ಈ ಕಾಲದ ಕಥೆಯಿದೆ. ಹಾಗೆಯೇ ‘ ನನ್ನೊಳಗಿನ ಅವನು’ ಒಂದು ಪ್ರಯೋಗಾತ್ಮಕ ಕಥೆ ಎಂದು ನಾನು ಭಾವಿಸಿದ್ದೇನೆ.
—-

ಇನ್ನುಳಿದ ಕಥೆಗಳಲ್ಲಿ ಜೀವವಿದೆ ಆದರೆ ಮಿತಿಯಿಲ್ಲ. ಲೇಖಕನಿಗೆ ತನ್ನೊಳಗೆ ಹುಟ್ಟುವ ಕಥೆಯನ್ನು ಅಕ್ಷರರೂಪಕ್ಕೆ ಇಳಿಸಬೇಕು ಎಂಬ ಕಾತರತೆ ಇರುತ್ತದೆ. ಅದು ಸಹಜ ಕೂಡ . ಆದರೆ ಆ ಕಥೆಯನ್ನು ಒಳಗೇ ಬೆಳೆಯಲು ಬಿಡಬೇಕು. ಅದು ಮಾಗಲೂ ಬೇಕು. ಆ ಕಥೆ ಮತ್ತು ಅದರೊಳಗಿನ ಪಾತ್ರಗಳನ್ನು ನಯನಾಜೂಕಾಗಿ ನಿಭಾಯಿಸಬೇಕು. ‘ಕಥೆಗಾರನಿಗೆ ಬರೆಯುವ ಕಾತರತೆ ಇದ್ದರಷ್ಟೇ ಸಾಲದು. ಅವನು ಮಹತ್ತ್ವಕಾಂಕ್ಷಿಯೂ ಆಗಿರಬೇಕು’ ಇದು ಪಿ ಲಂಕೇಶರ ಮಾತು. ಕಥಾ ವಸ್ತು ಅದ್ಭುತವಾಗಿದ್ದರೆ ಆದೀತೆ? ಅದನ್ನು ನಿಭಾಯಿಸುವ ಸಾಮರ್ಥ್ಯವನ್ನೂ ಒಬ್ಬ ಕಥೆಗಾರ ಸಿದ್ಧಿಸಿಕೊಳ್ಳಬೇಕು. ನಾಯ್ಡು ಅವರ ಕೆಲವು ಕಥೆಗಳಲ್ಲಿ ಅಂತ ಸಾಧ್ಯತೆ ಇದೆ. ಇನ್ನೂ ಕೆಲವು ಕಥೆಗಳು ಅಪೂರ್ಣ ಅಂತಲೂ, ಅನವಶ್ಯಕವಾಗಿ ದಟ್ಟಗೊಳಿಸಲಾಗಿದೆ ಅಂತಲೂ ಅನಿಸುತ್ತದೆ. ಈ ಎಲ್ಲ ಸಣ್ಣಪುಟ್ಟ ಕೊರತೆಗಳ ನಡುವೆಯೂ ‘ವಾಸ್ದೇವನ ಪಂಚ ಕಳಸ ಯಾತ್ರೆ’ ಕಥೆಗಳು ಓದಿಸಿಕೊಳ್ಳುತ್ತವೆ. ಬಹುಕಾಲ ಕಾಡುತ್ತವೆ. ಪಾತ್ರಗಳು ಮಾತಿಗೆಳೆಯುತ್ತವೆ. ಮತ್ತೆಲ್ಲೋ ಎದುರಿಗೆ ಸಿಕ್ಕು ಸಣ್ಣಗೆ ನಗುತ್ತವೆ. ಶ್ರೀನಿವಾಸ ಪಾ ನಾಯ್ಡು ಅಪ್ಪಟ ಕಥೆಗಾರ ಎಂಬುದರಲ್ಲಿ ಸಂಶಯವೇ ಇಲ್ಲ. ಸಣ್ಣಕಥೆ ಪ್ರಾಕಾರದಲ್ಲಿ ಅವರದ್ದು ವಿನೂತನ ಪ್ರಯತ್ನ.

ಮುನ್ನುಡಿಯಲ್ಲಿ ಸದಾಶಿವ ಸೊರಟೂರು ಅವರು ಹೇಳಿದಂತೆ ‘ಕಥೆಯ ಭಾಷೆ ಮತ್ತು ಶೈಲಿಯ ಕಡೆ ಚೂರು ಕಾಳಜಿ ವಹಿಸಿ, ಧಾವಂತವಿಲ್ಲದೆ ಸಾವಧಾನವಾಗಿ ಕಥೆಯ ಪಾತ್ರಗಳನ್ನು ನಡೆಸಿಕೊಂಡರೆ ಶ್ರೀನಿವಾಸರು ಇದಕ್ಕಿಂತಲೂ ಉತ್ತಮ ಕಥೆಗಳನ್ನು ಬರೆಯಬಲ್ಲರು’ ಇದು ನನ್ನ ಮಾತೂ ಹೌದು..

ಇಲ್ಲಿನ ಕಥೆಗಳು ಭರವಸೆ ಮೂಡಿಸಿವೆ. ಕಥೆಗಳನ್ನು ಮುರಿದು ಕಟ್ಟುವ ಮತ್ತು ರಿಪೇರಿ ಮಾಡುವ ಕೆಲಸ ಶ್ರೀನಿವಾಸ ಪಾ ನಾಯ್ಡು ಅವರಿಂದ ನಿರಂತರವಾಗಿ ನಡೆಯುತ್ತಿರಲಿ. ಕನ್ನಡ ಕಥಾ ಜಗತ್ತಿಗೆ ಅವರಿಗೆ ಪ್ರೀತಿಯ ಸ್ವಾಗತ. ಕಥೆ ಅವರನ್ನು ಪೊರೆಯಲಿ. ಜಗತ್ತಿನ ಸಾವಿರಾರು ಕಥೆಗಳೊಂದಿಗೆ ನಾಯ್ಡು ಅವರು ಜೀವಿಸಲಿ.

ಶುಭಾಶಯಗಳು.

‍ಲೇಖಕರು Admin

5 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading