ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ

-ನೀಲತ್ತಹಳ್ಳಿ ಕಸ್ತೂರಿ

ಇತರರ ಬಗ್ಗೆ ಒಂದು ಚೌಕಟ್ಟು, ಒಂದು ಅಚ್ಚು ಸಿಗುತ್ತದೆ. ಇವರು ಕಾದಂಬರಿಕಾರ, ನಾಟಕಕಾರ, ಇವರು ರಾಜಕಾರಣಿ, ಇವರು ಇಂಥವರು, ಅಂಥವರು ಇತ್ಯಾದಿ ಗುರುತು, ಚೆಕ್ಕುಬಂದಿ ಸಿಗುತ್ತದೆ.

ಕೃಷ್ಣಶರ್ಮರು ರಾಜಕೀಯದಲ್ಲಿ ಬೇಕಾದಷ್ಟು ಓಡಾಡಿದರು. ಕೈ ಆಡಿಸಿದರು. ಆದರೆ ತಮ್ಮ ಕೈಯನ್ನಾಗಲಿ, ಕಾಲನ್ನಾಗಲಿ ಕೆಸರು ಮಾಡಿಕೊಳ್ಳಲಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಅಂದು ಬೀಸಿ ಬಂದು ರಾಷ್ಟ್ರೀಯತೆಯ ಗಾಳಿಗೆ ಸಿಕ್ಕಿ ಕಾಲೇಜು, ವ್ಯಾಸಂಗವನ್ನು ಬಿಟ್ಟು ಬಂದರು. ದೇಶ ಸೇವೆಗೆ ಸೇರಿದರು, ಗಾಂಧಿ ದರ್ಶನ ಮಾಡಿದರು. ಗಾಂಧಿ ದೀಕ್ಷೆ ತೊಟ್ಟರು. ಹೈದರಾಬಾದಿಗೆ ಹೋದವರು, ಅಲ್ಲಿನ ಜನಜಾಗೃತಿಯ ಮಹಾಸಾಗರದಲ್ಲಿ ಮುಳುಗಿದರು. ಆ ಕಗ್ಗತ್ತಲ ಗೊಂಡಾರಣ್ಯದಲ್ಲಿ ರಾಷ್ಟ್ರೀಯ ಭಾವನೆ, ದೇಶ ಪ್ರೇಮ, ನಾಡು-ನುಡಿಗಳ ಬಗ್ಗೆ ಅಭಿಮಾನ ಮೂಡಿಸುವುದರಲ್ಲಿ ತಲ್ಲೀನರಾದರು. ಎಷ್ಟೋ ಸಲ ಪ್ರಾಣಾಪಾಯದ ಸಂದರ್ಭವನ್ನೂ ಇದಿರಿಸಬೇಕಾಯಿತು. ಹೊಟ್ಟೆ ಪಾಡಿನ ಮಾಸ್ತರಿಕೆ ಕೆಲಸ ಹೋಯಿತು. ಬಾಳು ಗಾಳಿಗೆ ಇಟ್ಟ ದೀಪವಾಯಿತು.
ಅಂಥಾ ಸ್ಥಿತಿಯಲ್ಲೂ ಅವರು ಆ ನಿಜಾಮರ ನಾಡಿನಲ್ಲಿ ರಾಜಕೀಯ ಜಾಗೃತಿ, ಭಾಷಾಕಾರ್ಯ, ಸಮಾಜ ಸೇವೆ, ದೀನ ದಲಿತ ಹೆಣ್ಣು ಮಕ್ಕಳ ಸಮಸ್ಯೆ ಮುಂತಾದ ಹಲವು ಹತ್ತು ಬಾಬುಗಳಲ್ಲಿ ದುಡಿದರು. ಯಾವುದಕ್ಕೂ ಅಂಟಿಕೊಳ್ಳಲಿಲ್ಲ. ಹೈದರಾಬಾದಿನಿಂದ ಗಡಿಪಾರಾಗಿ ಬಿಟ್ಟು ಬರುವಾಗ (೧೯೩೮) ನಿಸೂರಾಗಿ ಬಂದುಬಿಟ್ಟರು.

ಮುಂದೆ ೧೯೪೭ರಲ್ಲಿ ಹೈದರಾಬಾದು ರಜಾಕಾರರ ಹಾವಳಿಗೆ ಸಿಕ್ಕಿ ನರಳುತ್ತಿದ್ದಾಗ, ಅಲ್ಲಿನ ಬಗ್ಗೆ ವಿಷಯ ಸಂಗ್ರಹಿಸಿ, ಜರಡಿ ಆಡಿ, ಭಾರತ ಸರ್ಕಾರಕ್ಕೆ ಒದಗಿಸಿ, (ಖುದ್ದು ಸರದಾರ ಪಟೇಲರಿಗೆ) ಅಲ್ಲಿಂದ ಆ ಮಾಹಿತಿಯ ಸಾಕ್ಷ್ಯವನ್ನು, ವಿಶ್ವ ಸಂಸ್ಥೆಯಲ್ಲಿ ವಿಜಯಲಕ್ಷ್ಮಿ ಪಂಡಿತರ ವಾದ ಮಂಡನೆಗೆ ಒದಗಿಸುತ್ತಿದ್ದುದರಲ್ಲಿ ಶರ್ಮಾಜಿಯದೂ ಮುಖ್ಯ ಪಾತ್ರ. ತಮ್ಮ ಖಾಸಾ ಗೆಳೆಯ ಬಿ. ರಾಮಕೃಷ್ಣರಾಯರೇ ಮುಖ್ಯಮಂತ್ರಿ ಆದಾಗ, ತಮಗೆ ಬಂದ ಉನ್ನತ ಹುದ್ದೆಗಳ ಆಕರ್ಷಣೆಯನ್ನು ನಿರಾಕರಿಸಿ, ತಾವು ತಾವಾಗಿಯೇ ಉಳಿದರು.

ಪತ್ರಿಕಾ ರಂಗದಲ್ಲಿ ಶರ್ಮಾಜಿ ದೊಡ್ಡ ಹೆಸರು. ಅವರಿಗೆ ಅದು ಬಂದುದು ಸಹಜವಾಗಿ. ಯಾವ ಕಲಿಕೆಯಿಂದಲೂ ಅಲ್ಲ. ಮುಂದೆ “ವಿಶ್ವ ಕರ್ನಾಟಕ” ಗಾಂಧೀ ಪತ್ರಿಕೆ ಆಯಿತು. ಸಾವಿರಾರು ಓದುಗರಿಗೆ ರಾಷ್ಟ್ರಪ್ರೇಮದ ದೀಕ್ಷೆಯಿತ್ತಿತು. ಹತ್ತಾರು ಪತ್ರಕರ್ತರಿಗೆ ತೊಟ್ಟಿಲಾಯಿತು. ಶರ್ಮಾಜಿ ಅಲ್ಲೂ ಅಂಟಿಕೊಳ್ಳಲಿಲ್ಲ. ತನ್ನ ಕರ್ತವ್ಯ ಆಯಿತೊ ಇಲ್ಲವೊ ಅಲ್ಲಿಂದ ಕಾಲು ತೆಗೆಯುವುದೇ.

ಸಹಕಾರ ಬ್ಯಾಂಕು, ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ, ಸೇವಾದಳ, ಯುವಜನ ಸಂಘಟನೆ, ನಾಟಕ, ಅಖಿಲ ಭಾರತ ಸಂಸ್ಥಾನ ಪ್ರಜಾ ಪರಿಷತ್ತು, ಶಿಕ್ಷಣ, ಹಲವು ಹತ್ತು ರಂಗಗಳಲ್ಲಿ ಶರ್ಮಾಜಿ ಸೇವೆ ಮಾಡಿದರು. ಮಾರ್ಗದರ್ಶನವಿತ್ತರು. ತನ್ಮಯರಾಗಿ ದುಡಿದರು. ಕರ್ತವ್ಯ ಪಾಲಿಸಿದರು. ಎಲ್ಲೂ ಸ್ಥಾನಕ್ಕೆ ಆಶಿಸಲಿಲ್ಲ. ಎಲ್ಲೂ ಅಂಟಿಕೊಳ್ಳಲಿಲ್ಲ. ಯಾವ ಲಾಭಕ್ಕೂ ಮನ ತೆರಯಲಿಲ್ಲ. ಯಾವ ಕಾಲಕ್ಕೆ ವಿಧಿ ಎಲ್ಲಿ ಇರಿಸುವುದೊ, ಅಲ್ಲಿ ಮನಃಪೂರ್ವಕವಾಗಿ ದುಡಿಯುವುದು, ಕೆಲಸ ಆದೊಡನೆ ಏನೂ ಆಗಿಲ್ಲ ಎನ್ನುವಂತೆಯೇ ನಿರ್ಗಮಿಸುವುದು.

‍ಲೇಖಕರು Admin

5 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading