ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್

ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು, ಚಳಿಗಾಲದಲ್ಲಿ ಸರಾಸರಿಗಿಂತ ವಿಪರೀತವಾದ ಚಳಿ, ಬೇಸಿಗೆಯಲ್ಲಂತೂ ಸಹಿಸಲಸಾಧ್ಯವಾದ ಬಿಸಿಲಿನ ತಾಪ ಏರುವುದು ಇವೆಲ್ಲ ಹವಾಮಾನ ತಜ್ಞರಿಗೆ ಅಷ್ಟೇ ಅಲ್ಲ; ಜನಸಾಮಾನ್ಯರಿಗೂ ಅನುಭವಕ್ಕೆ ಬರುತ್ತಿರುವ ವಿದ್ಯಮಾನಗಳಾಗಿವೆ. ಭೂಗ್ರಹದ ವಿಶಿಷ್ಟ ಲಕ್ಷಣಗಳುಳ್ಳ ಪ್ರದೇಶಗಳು ತಮ್ಮ ಗುಣಲಕ್ಷಣಗಳ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತಿವೆ. ಉದಾಹರಣೆಗೆ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಮಳೆ ಕೊರತೆ, ಬಿಸಿಲ ತಾಪ ಏರಿಕೆಯಂತಹ ಸಂಗತಿಗಳು ಸಾಮಾನ್ಯವೆಂಬಂತೆ ಘಟಿಸುತ್ತಿವೆ.

ಈ ಹವಾಮಾನ ವೈಪರೀತ್ಯಗಳಿಗೆ “ಪರಿಸರ ಮಾಲಿನ್ಯ”ವೇ ಕಾರಣ ಎಂದು ಸಂಯುಕ್ತ ರಾಷ್ಟ್ರಸಂಘದ ಅಡಿಯಲ್ಲಿ ನಡೆದ “ಹವಾಮಾನ ವೈಪರೀತ್ಯ ಕಾರ್ಯಚಟುವಟಿಕೆಗಳ ಅಂತರ ರಾಷ್ಟ್ರೀಯ ಸಮಾವೇಶ” (United Nations framework convention on climate change) ಅಭಿಪ್ರಾಯಪಡುತ್ತದೆ. ಪರಿಸರ ಮಾಲಿನ್ಯದಿಂದ ಭೂತಾಪ ಏರುವ, ಹಸಿರು ಮನೆ ಪರಿಣಾಮ ಉಂಟಾಗುವ, ಹಿಮಗಡ್ಡೆ ಕರಗಿ ಪ್ರವಾಹಗಳು ಉಂಟಾಗುವ ಸಂಗತಿಗಳಂತೂ ಇಂದಿನ ಶಾಲಾ ಬಾಲಕರಿಗೂ ಗೊತ್ತಿರುವಂತದ್ದೇ.

ಆದರೆ ಇಂಥ ಸಂಗತಿಗಳ ಕುರಿತು ಜನಸಾಮಾನ್ಯರು ತಲೆ ಕೆಡಿಸಿಕೊಳ್ಳುವುದಿಲ್ಲ. ಇವು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಬಂದು ಎರಗಿದಾಗ ಅವರಿಗೆ ಇವುಗಳ ಬಗ್ಗೆ ತಿಳಿಯುವ ದರ್ದು ಉಂಟಾಗುತ್ತದೆ. 2020ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಉಂಟಾದ ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಇಂತಹುದೇ ಅನುಭವವನ್ನು ಜನ-ಜಾನುವಾರುಗಳಿಗೆ ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು.

ಕಲ್ಯಾಣ ಕರ್ನಾಟಕವೆಂದು ಕರೆಸಿಕೊಳ್ಳುವ ಬೀದರ್, ಯಾದಗಿರಿ, ಕಲಬುರ್ಗಿ, ರಾಯಚೂರು ಜಿಲ್ಲೆಗಳು ಮತ್ತು ವಿಜಯಪುರ ಜಿಲ್ಲೆಯು ಈ ಭೀಕರ ಪ್ರವಾಹದ ಹೊಡೆತಕ್ಕೆ ಸಿಕ್ಕು ನಲುಗಿದವು. ಸದಾಕಾಲ ಅನಾವೃಷ್ಟಿಯಿಂದ ಕುಡಿಯುವುದಕ್ಕೆ, ನೀರಾವರಿ ಬೆಳೆಗಳಿಗೆ, ಜಾನುವಾರುಗಳಿಗೆ, ಅಷ್ಟೇ ಏಕೆ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಬಟ್ಟೆ ತೊಳೆಯುವುದಕ್ಕೂ ನೀರಿಲ್ಲದೆ ಪ್ರತಿವರ್ಷ ತಾಪತ್ರಯ ಪಡುತ್ತಿದ್ದ ಈ ಜಿಲ್ಲೆಗಳ ಜನರು ಐದಾರು ವರ್ಷಗಳಿಗೊಮ್ಮೆ ಪೂರ್ಣಪ್ರಮಾಣದ ವಾಡಿಕೆಯ ಮಳೆಯ ಮುಖ ಕಾಣುತ್ತಿದ್ದರು.

ಈ ಜಿಲ್ಲೆಗಳಲ್ಲಿ ಹರಿಯುವುದು ಕರ್ನಾಟಕದಲ್ಲಿ ಅತಿ ಉದ್ದವಾದ ಕೃಷ್ಣಾ ನದಿ ಮತ್ತು ಭೀಮಾ ನದಿಗಳು. ಈ ಪ್ರವಾಹದಿಂದ ಪೀಡಿತರಾದವರಲ್ಲಿ ಹೆಚ್ಚಿನವರು ಭೀಮಾ ನದಿಯ ಎಡ ಮತ್ತು ಬಲ ದಂಡೆಯ ಹಳ್ಳಿಗಳ ಜನರು. ಭೀಮಾ ನದಿಗೆ ಇರುವ ಪ್ರಮುಖ ಉಪನದಿಗಳಾದ ಮುಲ್ಲಾಮಾರಿ, ಬೆಣ್ಣೆ ತೊರಾ, ಅಮರ್ಜಾ, ಬೋರಿ ಸೇರಿದಂತೆ ಇನ್ನೂ ಕೆಲವು ಸಣ್ಣ ಪುಟ್ಟ ನದಿಗಳು ಪ್ರವಾಹದಿಂದ ಉಕ್ಕಿ ಹರಿದವು.

ಕಲಬುರ್ಗಿ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 600 ಮಿಲಿಮೀಟರ್. ಆದರೆ ಮುಂಗಾರು ಆರಂಭದಿಂದ ಸೆಪ್ಟೆಂಬರ್ 2020 ರ ವರೆಗೆ 1070 ಮಿಲಿಮೀಟರ್ ಮಳೆಯಾಗಿದೆ. ನಂತರ ಅಕ್ಟೋಬರ್ ಮೂರನೇ ವಾರದಲ್ಲಿ ಇದಕ್ಕೂ ಹೆಚ್ಚಿನ ಪ್ರಮಾಣದ ಮಳೆ ಸುರಿಯಿತು. ಇದು ನೈಸರ್ಗಿಕವಾದ ಅತಿವೃಷ್ಟಿ ಆದ್ದರಿಂದ ಇದಕ್ಕೆ ಯಾವುದಾದರೂ ಕಾರಣ ಇರಲೇಬೇಕು. ಎನ್ನುವುದಾದರೆ; ಕರ್ನಾಟಕದಲ್ಲಿ ಮಳೆಗಾಲ ಆರಂಭಿಸುವ ನೈರುತ್ಯ ಮಾರುತಗಳು ಉತ್ತರ ಕರ್ನಾಟಕದ ನಿಜವಾದ ಮಳೆ ಮಾರುತಗಳು.

ಇವು ಜೂನ್ ತಿಂಗಳ 7 ಅಥವಾ 8 ನೇ ದಿನಾಂಕದಂದು ಆರಂಭವಾಗುತ್ತವೆ. ನೈರುತ್ಯ ಮಾರುತಗಳು ಮಳೆಗಾಲದ ನಾಲ್ಕು ತಿಂಗಳು ಭಾರತದ ಉತ್ತರ ಭಾಗಕ್ಕೆ ಏರುತ್ತಾ ಹೋಗಿ ಮಳೆಗಾಲದ ಕೊನೆಯ ತಿಂಗಳಲ್ಲಿ ಉತ್ತರ ಭಾರತ ದಿಂದ ಈಶಾನ್ಯ ದಿಕ್ಕಿಗೆ ಮುಖ ಮಾಡಿದಾಗ ಸಾಮಾನ್ಯವಾಗಿ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತದಿಂದ ಚಂಡಮಾರುತಗಳು ಏಳುತ್ತವೆ. ಈ ಚಂಡಮಾರುತಗಳು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಇದುವರೆಗೆ ಅಷ್ಟೊಂದು ಬಾಧಿಸಿರಲಿಲ್ಲ.

ಆದರೆ ಈ ವರ್ಷ ಕರ್ನಾಟಕದ ಜಿಲ್ಲೆಗಳಲ್ಲದೆ ಹೈದರಾಬಾದ್  ನಗರದ ವರೆಗೆ ಚಂಡಮಾರುತಗಳ ಆರ್ಭಟ ತೀವ್ರವಾಗಿತ್ತು.ಇದು ನೈಸರ್ಗಿಕ ಕಾರಣವಾದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಭೀಮಾಶಂಕರ ಪರ್ವತದಲ್ಲಿ ಉಗಮವಾದ ಭೀಮಾನದಿಗೆ ಮಹಾರಾಷ್ಟ್ರದ ವೀರ್ ಮತ್ತು ಉಜನಿ ಎಂಬಲ್ಲಿ ಕಟ್ಟಲಾದ ಜಲಾಶಯ ಗಳಿಂದಲೂ ನೀರು ಬಿಡಲಾಗುತ್ತದೆ.

5 ಲಕ್ಷ ಕ್ಯೂಸೆಕ್ಸ್ ನೀರು ಬಿಡುತ್ತಿರುವುದಾಗಿ ಸಂದೇಶ ಕಳಿಸಿದ ಮಹಾರಾಷ್ಟ್ರ ಸರಕಾರ ಮುನ್ಸೂಚನೆ ಕೊಡದೇ 8.5 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿತು. ಅಂದರೆ 3.5 ಲಕ್ಷ ಕ್ಯೂಸೆಕ್ಸ್ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದು ಈ ಭಾಗದ ನದಿ ದಡದ ಜನರ ಸಂಕಟಗಳಿಗೆ ತನ್ನ ಕೊಡುಗೆಯನ್ನು ನೀಡಿತು.

ಹೀಗಾಗಿ ವಿಜಯಪುರ ಜಿಲ್ಲೆಯ ಎರಡು ತಾಲೂಕುಗಳು ಸೇರಿದಂತೆ ಕಲಬುರಗಿ, ಯಾದಗಿರಿ,  ಜಿಲ್ಲೆಗಳ ಒಟ್ಟು 14 ತಾಲೂಕುಗಳ 150 ಹಳ್ಳಿಗಳಲ್ಲಿರುವ 4782 ಹೆಚ್ಚು ಜನರು ಪ್ರವಾಹ ಪರಿಸ್ಥಿತಿಯಿಂದ ತೊಂದರೆಗೆ ಈಡಾದರು. ಐದು ನೂರಕ್ಕೂ ಹೆಚ್ಚು ಪ್ರಾಣಿಗಳು ಪ್ರವಾಹದಿಂದ ಪ್ರಾಣವನ್ನು ಕಳೆದುಕೊಂಡವು.

ಭೀಮಾ ನದಿ ದಡದಲ್ಲಿರುವ ಇಂಡಿ, ಸಿಂದಗಿ, ಜೇವರ್ಗಿ, ಅಫ್ಜಲ್ಪುರ, ಚಿತ್ತಾಪುರ ಮತ್ತು ಯಾದಗಿರಿ ಜಿಲ್ಲೆಯ ಒಂದೆರಡು ತಾಲೂಕುಗಳು ಪ್ರವಾಹದಿಂದಾಗಿ ತೀವ್ರ ತೊಂದರೆಗೆ ಒಳಗಾಗಿವೆ. ಕಲ್ಯಾಣ ಕರ್ನಾಟಕದ ಸುಮಾರು 59 ಹಳ್ಳಿಗಳು ತೀವ್ರವಾದ ಸಂಕಟದಲ್ಲಿ ಇವೆ. ಅಫಜಲಪುರ ತಾಲ್ಲೂಕು ಒಂದರಲ್ಲಿಯೇ 70 ಸಾವಿರ ಎಕರೆ ಬೆಳೆ ಹಾನಿಯಾಗಿದ್ದು 2000ಕ್ಕೂ ಹೆಚ್ಚಿನ ಮನೆಗಳು ಸಂಪೂರ್ಣ ಕುಸಿದಿವೆ.

ಕೇಂದ್ರ ಸರಕಾರದ ಎನ್ ಡಿಆರ್ ಎಫ್, ಅರೆ ಮಿಲಿಟರಿ ಪಡೆಗಳು ಸ್ವಲ್ಪ ತಡವಾಗಿ ಆಗಮಿಸಿದರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಜನರ ಪ್ರಾಣ ಹಾನಿಯನ್ನು ತಪ್ಪಿಸಿವೆ. ತೊಟ್ಟ ಬಟ್ಟೆಯ ಲ್ಲೇ ಜನ ಕಾಳಜಿ ಕೇಂದ್ರಗಳಿಗೆ ಆಗಮಿಸಿ ವಾಸಿಸುತ್ತಿದ್ದಾರೆ. ಅವರ ನೆರವಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಕೈಜೋಡಿಸಿ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಲೇಬೇಕು. 

ಆದರೆ ಕುಸಿದ ಮನೆಗಳು, ಪ್ರಾಣಬಿಟ್ಟ ತಮ್ಮ ಸಾಕುಪ್ರಾಣಿಗಳು, ಮತ್ತು ಹೂವು ಕಾಯಿ ಬಿಟ್ಟಿದ್ದ ಹತ್ತಿ, ತೊಗರಿ, ಶೇಂಗಾ, ಕಬ್ಬು ಹಲವಾರು ಫಸಲುಗಳು ನೀರಿನಲ್ಲಿ ಮುಳುಗಿ ಬೇರು ಕೊಳೆತು ಹೋಗಿರುವುದನ್ನು ಕಂಡು  ಕಣ್ಣೀರಾಗಿ ದ್ದಾರೆ.

ಮುಖ್ಯ ಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಿರುವುದನ್ನು ಬಿಟ್ಟರೆ ಇನ್ನಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವುದು ಕಂಡು ಬಂದಿಲ್ಲ.ಈ ಜನರ ಸಹಾಯಕ್ಕೆ ಸರಕಾರಗಳು ಧಾವಿಸುತ್ತವೆಯೆ? ಎಂಬುದನ್ನು ಎಲ್ಲರೂ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ.

‍ಲೇಖಕರು Avadhi

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: