ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಮಧ್ಯಾಹ್ನ ಫೇರಿವಾಲಾ

ಜಯಂತ ಕಾಯ್ಕಿಣಿ

ಮಧ್ಯಾಹ್ನ ಗಂಡಸರ ಎರಡನೇ ಶಿಫ್ಟಿಗೆ ತರುವ
ಉರಿವ ತಗಡಿನ ಬಸ್ಸು
ಬಟ್ಟೆಯಂಗಡಿ ಪಕ್ಕ ಹಾಯುವಾಗ ಆಗಷ್ಟೆ
ಆರುತ್ತದೆ ಮಣಿಬೇನಳ ವಿವಿಧ ಭಾರತಿ.
ನಂತರ ಉದ್ದಿಗ್ನ ಶಾಂತಿ. ನಿದ್ದೆಯ ಅಂಚಿನಲ್ಲಿ
ಚೆಂಡಾಡುವ ಮಕ್ಕಳು. ಮೇಲಿನ ಮಜಲಿನ ದರ್ಜಿ.
ತಿರುತಿರುವಿ ಚೂಪಾಗಿಯೂ ಸೂಜಿ ಹೊಗದ ದಾರದಂತೆ
ಕೂಗಿಯೇ ಕೂಗುತ್ತಾನೆ ಫೇರಿವಾಲಾ
ಏನನ್ನೂ ಏನಕ್ಕೂ ಕೊಡಕೊಳ್ಳುವ ಫೇರಿವಾಲಾ

ಮಣಿಬೇನ್ ಅರಸುವಳು ಮನೆತುಂಬ ಬಿಚ್ಚಿಗಂಟು
ಏನ ಕೊಡಲಿ ಏನಕೊಡಲಿ
ತೆರೆದು ಬೂರಸು ಕಪಾಟು.
ನಾಶಿಕದ ನಾದಿನಿ ಕೊಟ್ಟ ಅಗ್ಗದ ಸೀರೆಗೆ
ಸಿಗಬಹುದು ಮೂರು ಪಾವು ಬಳ್ಳೊಳ್ಳಿ
ಅತ್ತೆಯ ಅಲ್ಯುಮಿನಿ ಪಾತ್ರೆ ಕಿವಿಯಿರದ ಕಪ್ಪು ಬಸಿಗೆ
ಝರಿದಡಿಯ ಸಣ್ಣ ಪರ್ಸು
ಮದುವೆಯ ಜಂಗು ಗುಲಾಬದಾನಿಗೆ ಪ್ಲಾಸ್ಟಿಕ್ ಮಗ್ಗು

ಚಿಂದಿನಿದ್ದೆಯ ಹೊರಗೆ ಪೇಟೆ ಬೆಳಕಿನ ಗದ್ದಲ
ಮನೆ ಒರೆಸಲೆಂದೆ ಚಿಕ್ಕ ಚೌಕಗಳಾಗಿ ಕತ್ತರಿಸಿ
ಅಂಚು ಹೊಲೆದಿಟ್ಟ ಅತ್ತೆಯ ಕಂದು ಸೀರೆ
ಅತ್ತೆಯ ಮಗ ಗುಟ್ಟಾಗಿ ತಿಂತಿದ್ದ ಮಾತ್ರೆಗಳ ಶೀಷೆ
ಹೊಳಪು ಸವೆದ ಬಿರಡೆಯ ಪುಟ್ಟ ಮೂಕ ರೇಡಿಯೋ

ಕಿತ್ತು ಕಿತ್ತು ಎಸೆದ ಬೂರಸು ಮನೆತನವನ್ನೆ
ತೂಗಿಕೊಂಡು ಇಳಿದುಹೋದ ಫೇರಿವಾಲಾ
ರಸ್ತೆಯಲ್ಲಿ ಕಣ್ಮರೆಯಾಗುವವರೆಗು ನಿಂತಳು ಮಣಿಬೇನ್
ಹೊಸಬಳಾಗಿ.

। ನೀಲಿಮಳೆ ।

‍ಲೇಖಕರು Avadhi

11 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading