ಮಾತು ಸಂಬಂಧಗಳ ಬೆಸೆವ ಸೇತುವೆಯಾಗಲಿ..

ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ

ಮಾತಾಡುವ ಕ್ಷಮತೆ ಮಾನವನಿಗೆ ಮಾತ್ರ ದೊರೆತಿರುವುದು. ನಮ್ಮಷ್ಟು ಜಟಿಲವಾಗಿ ಉಚ್ಚರಿಸುವ ಶಕ್ತಿ ಪ್ರಾಣಿಗಳಿಗೆ ಇಲ್ಲ. ಮಾತು ಮುತ್ತೂ ಹೌದು, ಮೃತ್ಯುವೂ ಹೌದು. ಮಾತನಾಡುವಾಗ ಬಹಳ ಜಾಗ್ರತೆಯಿಂದ ಮಾಡಬೇಕು. ಅದಕ್ಕೆ ನಮ್ಮ ಹಿರಿಯರು ಹೇಳಿರೋದು `ಮಾತು ಬೆಳ್ಳಿ ಮೌನ ಬಂಗಾರ’ ಅಂತ.

ಕೆಲವೊಮ್ಮೆ ಬಾಯಿಗೆ ಬಂದಂತೆ ಮಾತನಾಡಿ ಇನ್ನೊಬ್ಬರನ್ನು ನೋಯಿಸುವುದಕ್ಕಿಂತ, ಅಥವಾ ಕೆಲವೊಮ್ಮೆ ನಮ್ಮ ಮಾತುಗಳಿಂದಲೇ ನಾವು ನಗೆಪಾಟಲಿಗೆ ಈಡಾಗುವುದಕ್ಕಿಂತ ಮೌನವಾಗಿರುವುದೇ ಲೇಸು. `ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು’ ಎಂಬ ಮಾತಿದೆ.

ಒಮ್ಮೆ ಬಾಯಿಂದ ಹೊರಬಂದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಎಲುಬಿಲ್ಲದ ನಾಲಿಗೆಯನ್ನು ಹೇಗೆ ಬೇಕೋ ಹಾಗೆ ಹರಿದಾಡಲು ಬಿಡಬಾರದು ಅಂತ ಹಿರಿಯರು ಹೇಳಿದ ಮಾತು ನೆನಪಾಗುತ್ತಿದೆ. ಆದ್ದರಿಂದ ಮಾತಿನ ಮಹಿಮೆಯನ್ನು ಅರಿತು ಆಡುವ ನುಡಿ ನಮ್ಮದಾಗಲಿ. ಈ ಕುರಿತು ಕೆಅವು ವಿಷಯಗಳನ್ನು ಅರಿತುಕೊಂಡರೆ ಉತ್ತಮ ನಾಗರಿಕರಾಗಲು ಸಹಕಾರಿಯಾದೀತು.  ನಾವಾಡುವ ಮಾತು ಸಂಬಂಧಗಳನ್ನು ಒಡೆಯದೇ ಬೆಸೆಯುವಂತಾಗಬೇಕು.

ಮಾತು ಆಡು ಭಾಷೆಯಲ್ಲಿರಲಿ:- ಎಲ್ಲಾ ಭಾರತೀಯ ಭಾಷೆಗಳಿಗೆ ಹೋಲಿಸಿದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಶಬ್ದಗಳ ಭಂಡಾರ ಕಡಿಮೆ ಇದೆ. ಶಬ್ಧಗಳ ಉಚ್ಚಾರ, ಶಬ್ಧ ಭಂಡಾರ ಕಡಿಮೆ ಇದ್ದಷ್ಟು ನಮ್ಮಲ್ಲಿ ವಾಕ್ ಶುದ್ದಿ ಕಡಿಮೆಯಿರತ್ತೆ. ಆದ್ದರಿಂದ ಆ ಕೊರತೆಯನ್ನು ಅರಿವು ಮತ್ತು ಸ್ವ ಇಚ್ಛೆಯಿಂದ ಸರಿ ಮಾಡಿಕೊಳ್ಳಬೇಕು. ಅದಕ್ಕೆ ನಾವು ನಮಗೆ ಸರಿಯಾಗಿ ಬರುವ ಭಾಷೆಯಲ್ಲಿಯೇ ಮಾತನಾಡಬೇಕು. ಕೆಲವೊಮ್ಮೆ ಅನಿವಾರ್ಯ ಅನಿಸಿದಾಗ ಇಂಗ್ಲಿಷ್ ಅಥವಾ ಬೇರೆ ಭಾಷೆಯಲ್ಲಿ ಮಾತನಾಡುವುದು ತಪ್ಪಲ್ಲ.

ಆದರೆ ಮಾತಿನಲ್ಲಿ ಕ್ರಿಯೆಯ ಇಂಗಿತ ಮುಖ್ಯವೇ ಹೊರತು ಭಾಷೆಯಲ್ಲ.  ಕರ್ಮದ ಪ್ರಕ್ರಿಯೆಯ ದೊಡ್ಡ ಭಾಗ ಇರುವುದು ನಮ್ಮ ಉದ್ದೇಶದಲ್ಲಿ. ನಾವು ಮಾತನಾಡುವಾಗ ಶಬ್ದಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಸಮಯ ಸಂದರ್ಭಕ್ಕನುಸಾರವಾಗು ಅದನ್ನು ಉಪಯೋಗಿಸಬೇಕು. ಇಲ್ಲವಾದರೆ ವಿಪರ್ಯಾಸವಾದೀತು. ಉಚ್ಛಾರ ಸ್ಪಷ್ಟವಾಗಿರಬೇಕು.

ಮಾತು ಮುತ್ತಿನಂತಿರಲಿ:- ನಮ್ಮ ಮಾತು ಮತ್ತು ಕೃತಿಗೂ ಸಾಮ್ಯವಿರಬೇಕು. ಮಾತನಾಡುವುದೂ ಒಂದು ಕಲೆ. ಎಲ್ಲರಿಗೆ ಈ ಕಲೆ ಸಿದ್ಧಿಸುವುದಿಲ್ಲ. ಮೊದಲು ನಾವು ಒಳ್ಳೆಯ ಕೇಳುಗರಾಗಬೇಕು. ಅದಕ್ಕೆ ತಾಳ್ಮೆ ಬೇಕು. ಪರಸ್ಪರ ಪ್ರೀತಿ ಭಾವನೆ ಅಂತರಾತ್ಮದಲ್ಲಿ ಮೂಡಬೇಕು. ಆಗ ತನ್ನಿಂದ ತಾನೇ ಮಾತು ಮೃದುವಾಗುತ್ತದೆ. ಅಂತಹ ಮಾತುಗಳು ಮನಸ್ಸಿಗೆ ಹಿತವಾಗುತ್ತವೆ.

ಅಧ್ಯಾತ್ಮ, ಸಾಹಿತ್ಯ ಅಥವಾ ಇನ್ನಿತರ ಸ್ಪೂರ್ತಿದಾಯಕ, ಪ್ರೇರಣಾತ್ಮಕ ಭಾಷಣ ಮಾಡುವವರ ಮಾತುಗಳು ಪರಿಣಾಮಕಾರಿಯಾಗಿದ್ದರೆ ಮಾತ್ರ ಕೇಳುಗರನ್ನು ತಲುಪುತ್ತದೆ.

ಅದಕ್ಕೆ ಅವರ ಮಾತಿನ ಶೈಲಿ, ವೈಖರಿಯೂ ಚೆನ್ನಾಗಿರಬೇಕು. ಕೆಲವರ ಮಾತುಗಳನ್ನು ಕೇಳುವುದಕ್ಕಾಗಿಯೇ ಜನರು ಮುಗಿಬೀಳುತ್ತಾರೆ. ಕೆಲವರ ಮಾತು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮಾತನಾಡುವ ವಿಷಯದಲ್ಲಿ ಹಿಡಿತವಿದ್ದಾಗ ಮಾತು ಆಕರ್ಷಕವಾಗುತ್ತದೆ.

ಹಿತಮಿತ ಮಾತು:- ಕೆಲವರು ಮಿತಭಾಷಿಗಳಾಗಿರುತ್ತಾರೆ. ಮಾತಿಗಿಂತ ಮೌನವೇ ಶ್ರೇಷ್ಠ ಎನ್ನುತ್ತಾರೆ. ಯಾಕೆಂದರೆ ನಾವು ಯಾವ ಕೆಟ್ಟ ಉದ್ದೇಶವಿಲ್ಲದೆ ಆಡುವ ಸಾಧಾರಣ ಮಾತುಗಳನ್ನು  ಅಪಾರ್ಥಮಾಡಿಕೊಂಡು ಗೊಂದಲವೇರ್ಪಡಿಸಬಹುದು. ಆಗ ಇಲ್ಲಸಲ್ಲದ ವಾದ ವಿವಾದ, ವಾಗ್ವಾದಗಳೂ ನಡೆಯಬಹುದು. ನಾವು ಮಾತನಾಡುವಾಗ ನಮ್ಮ ಎದುರಿನಲ್ಲಿರುವವರು ಹಿರಿಯರೋ, ಮಕ್ಕಳೋ, ಮಹಿಳೆಯೋ ಪುರುಷರೋ ಎಂಬುವುದು ಕೂಡಾ ಮುಖ್ಯವಾಗುತ್ತದೆ.

ಎಲ್ಲರಲ್ಲಿ ಗೌರವಪೂರ್ವಕವಾಗಿ ಮಾತನಾಡುವುದು ಹೆಚ್ಚು ಸೂಕ್ತ. ಪರಸ್ಪರ ಮಾತನಾಡುವಾಗ ಆರೋಗ್ಯಪೂರ್ಣ ಚರ್ಚೆ ಇದ್ದರೆ ಚೆನ್ನ. ಪ್ರೀತಿಯ ನುಡಿಗಳಿಂದ ನಿಮ್ಮ ಆತ್ಮೀಯರ ಮನಸ್ಸನ್ನು ಹೃದಯವನ್ನು ಗೆಲ್ಲಬಹುದು. ನಂಬಿಕೆ ಭರವಸೆಗಳಿಂದ ಸ್ನೇಹ ಸಂಪಾದನೆ ಮಾಡಬಹುದು. ಮೋಸ ವಂಚನೆಗಳ ನುಡಿಗಳು ನಿಮ್ಮನ್ನು ಏಕಾಂಗಿಯನ್ನಾಗಿಸಬಹುದು. ಆ ಕುರಿತು ಎಚ್ಚರವಿರಬೇಕು.

ಮಾತಿನಲ್ಲಿ ವಿನಯವಿರಲಿ:- ಮಾತಿನಲ್ಲೂ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾದುದು  ನೇರ ಮಾತು, ಕೊಂಕು ಮಾತು, ಚುಚ್ಚು ಮಾತು, ತೂಕ ಭರಿತ ಮಾತು, ಅಪಹಾಸ್ಯದ ಮಾತು, ತಿಳಿಹಾಸ್ಯದ ಮಾತು ಇತ್ಯಾದಿ. ನಾವಾಡುವ ಮಾತು ಸ್ಪಷ್ಟ, ನೇರ, ತೂಕಭರಿತವಾಗಿದ್ದರೆ ಚೆನ್ನ. ನಮ್ಮಲ್ಲಿ ಕೆಲವರು ತುಂಬಾ ಮಾತನಾಡುವವರು ಇರುತ್ತಾರೆ. ಇನ್ನು ಕೆಲವರು ಹಿತಮಿತವಾಗಿ ಮಾತನಾಡುವವರು.

ಹೆಚ್ಚು ಮಾತನಾಡುವವರ ಮಾತು ಕೇಳುಗರನ್ನು ಆಕರ್ಷಿಸುವಂತಿದ್ದರೆ ಪರವಾಗಿಲ್ಲ. ಇನ್ನು ಕೆಲವರ ಮಾತು ಎಷ್ಟು ಅತಿ ಎಂದರೆ ಅವರನ್ನು ಕಂಡರೇ ಕೆಲವರು ಮಾರುದ್ದ ಓಡಿ ಹೋಗುತ್ತಾರೆ. ಇನ್ನು ಕೆಲವರದ್ದು ಮಿತವಾದ ಮೃದು ಮಾತು ಕೇಳುಗರಿಗೆ ಹಿತವೆನಿಸುತ್ತದೆ. ಅಂತವರನ್ನು ಹೆಚ್ಚಿನವರು ತುಂಬಾ ಇಷ್ಟ ಪಟ್ಟರೆ ಮತ್ತೆ ಕೆಲವರು ಅವರನ್ನು ಬೋರಿಂಗ್ ಅಂತನೂ ಹೇಳುವವರಿರುತ್ತಾರೆ. ಹಾಗಂತ ಜನರಿಗೆ ಬೇಕಾದಂತೆ ಬದುಕುವುದು ಕಷ್ಟ ಬಿಡಿ.

ನಾವಾಡುವ ಮಾತಿನಲ್ಲಿ ವಿನಯತೆ ಇರಬೇಕು. ಬಸವಣ್ಣನ “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದಿದ್ದಾರೆ. ಅಹಂಕಾರದ ನಡೆ ನುಡಿಗೆ ಯಾರೂ ಬೆಲೆ ಕೊಡುವುದಿಲ್ಲ. ನಮ್ಮಲ್ಲಿ ವಿನಯ ಇದ್ದರೆ ಸುತ್ತಮುತ್ತಲಿನ ಜನರೂ ನಮ್ಮನ್ನು ಪ್ರೀತಿಸುತ್ತಾರೆ. ಆದರಿಸುತ್ತಾರೆ, ಗೌರವಿಸುತ್ತಾರೆ. ಕೆಲವರಿಗೆ ನೇರವಾಗಿ ಇದ್ದದ್ದನ್ನು ಇದ್ದಂತೆ ಹೇಳುವವ ಅಭ್ಯಾಸ. ಈಗಿನ ಕಾಲದಲ್ಲಿ ಅಂತವರಿಗೆ ದಿನವಿಲ್ಲ.

ಅವರು ನಿಷ್ಠುರವಾದಿಗಳಾಗುತ್ತಾರೆ. ಅದೇ ಮನಸ್ಸಿನಲ್ಲಿ ಹುಳುಕನ್ನು ಇಟ್ಟುಕೊಂಡು ಮುಖಕ್ಕೆ ತಕ್ಕಂತೆ ಮಾತನಾಡಿದವರು ಹೆಚ್ಚಿನವರಿಗೆ ಪ್ರಿಯರಾಗುತ್ತಾರೆ. ಆದರೆ ಅಂತವರು ನಂಬಿಕೆಗೆ ಅರ್ಹರಲ್ಲ ಎನ್ನುವುದನ್ನು ಮರೆಯಬಾರದು. ಅವರ ಮಾತಿಗೆ ಮರುಳಾಗಿ ಮೋಸ ಹೋಗಿದ್ದೇವೆ ಎಂದು ತಿಳಿಯುವಾಗ ತಡವಾಗುತ್ತದೆ.

ಹಾಗಂತ ಎಲ್ಲಿ ಏನನ್ನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳುವ ಜಾಯಮಾನವೇ ಯಾವತ್ತಿಗೂ ಒಳ್ಳೆಯದು. ಸಿಹಿಯಾಗಿ ಮಾತನಾಡಿ ಕಪಟ, ಮೋಸ ಮಾಡುವುದು ಸಹ್ಯವಲ್ಲ.

ಮಾತು ಮಧುರವಾಗಿರಲಿ:- ಮಾತನಾಡಲು ಬಾರದಿದ್ದರೆ ನಮ್ಮಲ್ಲಿನ ಯಾವ ಪಾಂಡಿತ್ಯವೂ ಪ್ರಯೋಜನವಿಲ್ಲದಂತಾಗುತ್ತದೆ. ಕೆಲವರು ಒಳ್ಳೆಯ ಪಾಂಡಿತ್ಯವುಳ್ಳವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಗೊತ್ತಿರದೇ ಸೋಲುತ್ತಾರೆ. ಅದೇ ಇನ್ನು ಕೆಲವರು ಅಲ್ಪ ಸ್ವಲ್ಪ ಪಾಂಡಿತ್ಯವಿದ್ದರೂ ತಮ್ಮ ಅಮೋಘ ಮಾತಿನ ಶೈಲಿಯಿಂದ ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ.

ನಮ್ಮ ಆಂತರ್ಯದಲ್ಲಿ ಅಡಗಿದ ಮಾತುಗಳೆಲ್ಲವೂ ಹರಿವ ತೊರೆಯಾಗುತ್ತವೆ. ಬತ್ತದ ಸಮುದ್ರವಾಗುತ್ತದೆ. ಆದ್ದರಿಂದಲೇ ಮಾತು ಮಧುರ. ಕೆಲವರು ಮಾತನಾಡುವಾಗ ಉಲಿಯುವ ಹಕ್ಕಿಯಂತೆ ಮೃದುವಾಗಿಯೂ ಮಧುವಿನಂತೆಯೂ ಇರುತ್ತದೆ. ಇನ್ನು ಕೆಲವರ ಮಾತೇ ಕರ್ಕಶ. ಅಬ್ಬ ಯಾವಾಗ ಮುಗಿಸುತ್ತಾರೋ ಅನಿಸದಿರದು. ಕವಿ ಡಾ.ದ.ರಾ ಬೇಂದ್ರೆ ಅವರು ಅಂದಂತೆ ಮಾತು ಮಾತು ಮಥಿಸಿ ಬಂದ ನಾದದ ನವನೀತವಾಗಬೇಕು.

ಮಾತಿನ ಮೌಲ್ಯ:- ಮಾತಿನ ಕುರಿತು ಸರ್ವಜ್ಞ ಬಹಳ ಸೊಗಸಾಗಿ ತನ್ನ ವಚನದಲ್ಲಿ ಹೇಳಿದ್ದಾನೆ.

“ಮಾತಿನಿಂ ನಗೆ ನುಡಿಯು
ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೇ ಮಾಣಿಕ್ಯವು ಸರ್ವಜ್ಞ

ಮಾತಿನ ಮೌಲ್ಯವನ್ನು ಅರಿಯಬೇಕಾದರೆ ಸ್ವಲ್ಪ ಹೊತ್ತು ಮೂಗರೊಂದಿಗೆ ಇರಬೇಕು. ಆಗ ಅರಿವಾಗುತ್ತದೆ ನಾವೆಷ್ಟು ಅದೃಷ್ಟವಂತರು ಎಂದು. ಕೆಲವರು ಹಾಸ್ಯದ ರೂಪದಲ್ಲಿ ಎದುರಿಗಿರುವವರನ್ನು ಅವಹೇಳನ ಮಾಡುವುದನ್ನು ನೋಡಬಹುದು. ಇದು ಸರ್ವಥಾ ಸಲ್ಲದು. ಕೆಲವರು ಸುಡುಸುಡು ಮುಖವನ್ನು ಹೊತ್ತು ಸದಾ ಅಸಹನೆಯಿಂದ ಗೊಣಗುತ್ತಿರುತ್ತಾರೆ. ಅಂತಹವರನ್ನು ಯಾರೂ ಇಷ್ಟ ಪಡುವುದಿಲ್ಲ.

ಕೆಲವರು ಬಾಯ್ದೆರೆದರೆ ಅಹಂಕಾರದ, ದರ್ಪದ ಮಾತುಗಳು. ಈಗಿನ ಕಾಲದಲ್ಲಿ ಅಂತವರನ್ನು ಕ್ಯಾರೇ ಅನ್ನುವವರಿಲ್ಲ ಎನ್ನುವುದು ಗಮನದಲ್ಲಿರಲಿ. ಮಾತು ಎರಡು ಸಂಬಂಧಗಳ ನಡುವಿನ ಸೇತುವೆಯಾಗಬೇಕು. ಕೊಂಕು ಮಾತನಾಡುವವರಿಂದ ದೂರವಿರುವುದೇ ಲೇಸು. ಒಂದು ಅತ್ಯುತ್ತಮವಾದ ಸಂವಹನ ಪ್ರಕ್ರಿಯೆ ಮಾತು. ಅದನ್ನರಿಯದವರೊಂದಿಗೆ ಮಾತು ಜಗಳಕ್ಕೆ ತಿರುಗಬಹುದು.

ಮಾತು ಭಾಂಧವ್ಯವನ್ನು ಬೆಸೆಯುತ್ತದೆ ಎನ್ನುವುದನ್ನು ನಾವು ಯಾವತ್ತೂ ಮರೆಯಬಾರದು. ಮಾತು ಸಂಬಂಧಗಳ ಬೆಸೆವ ಸಂವಹನ ಸೇತುವಾಗಲಿ. ಮನ ಮನಸ್ಸುಗಳನ್ನು ಬೆಸೆಯಲಿ. ಬದುಕನ್ನು ಹಸನುಗೊಳಿಸಲಿ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ‘ಮುಂಬಯಿ ಕನ್ನಡಿಗರ ಸಿದ್ಧಿ ಸಾಧನೆಗಳು ‘ ಸಂಶೋಧನಾ ಪ್ರಬಂಧಕ್ಕೆ ಪಿಎಚ್ ಡಿ ಪಡೆದಿರುವರು. ‘ಸ್ವೀಕೃತಿ’ ಇವರ ವಿಮರ್ಶಾ ಬರಹಗಳ ಸಂಕಲನ. ಉತ್ತಮ ನಿರೂಪಕಿಯಾಗಿಯೂ ಖ್ಯಾತರು.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: