ಮಾಯಿ ಮುಂಬಾಯಿ..

ವಿ ಎಸ್‌ ಶಾನಭಾಗ್‌ ‌

ಮಾಯಿ ಮುಂಬಾಯಿ

ಕಣ್ಣರೆಪ್ಪೆಯಲ್ಲಿ ಮನಸ್ಸುಗಳ
ಹಗಲ ನಿಲ್ಲಿಸಿ ಕನಸುಗಳ ಬೀದಿಯಲ್ಲಿ
ಮೊಗೆವ ಜೀವ ರೀತಿಗೆ ಹೆಸರು ಕೊಡಲು
ಓಡುತ್ತಾರೆ ಜನ ಗಣ ಮನ
ಧಾವಂತ ಉಸಿರು
ಬೆನ್ನ ಮೇಲೆ ಆಕ್ಸಿಜನ್ನ ಸಿಲಿಂಡರು
ಹೊತ್ತುದಿನಾಲು
ಮುಗಿಲು ಕರಗಿತೇ ಎನ್ನುವ ದಿಗಿಲು

ಮಧ್ಯೆ ಮಾಯಿ ಮುಂಬಯಿ ತಾಯಿ

ಅವನಿಗೆ
ಹೆರಿಗೆಗೆ ಹೋದವಳ ಆತಂಕ ಕಾಲು ಒಜ್ಜೆಯಲ್ಲಿ
ಬಾಣಂತಿ ಕೋಣೆ
ಕಾದು ಹಗಲು ಬೆಂದು ರಾತ್ರೆ
ಸಿದ್ದ ನಗು ಹೊತ್ತ ಮೊಗದಲ್ಲಿ ದಾದಿ
ಬಾಳೆ ಗೊನೆಯಂತೆ ಹೊಸ ಚಿಗುರು
ಹೊಸ ನೋವು
ಕುರುಡೂ ಒಂದೆ ಕತ್ತಲೂ ಒಂದೆ
ಆತಂಕದ ಕಣ್ಣಿನಲ್ಲಿ ಆನಂದದ ಒಡಲು
ಠಣ್ಣೆಂದು ಹಾರಿತು ನಾಣ್ಯ
ಹುಟ್ಟಿನಲ್ಲಿಯೇ ಶುರುಆಗುವ ಆಟ
ರಾಜನೋ ರಾಣಿಯೋ

ಆಕಾಶದ ಅಡಿಯಲ್ಲಿ ಮನೆಯ ಸೂರುಗಳು ನಕ್ಷತ್ರಗಳಹಾಗೆ
ಹುಡುಕಲು ಬೇಕು
ಬೆಳಕಿನ ಕೋಲು ಹಿಡಿದು ಹಣಕುವ ಸೂರ್ಯ
ನೆಲವ ಬಡಿವ ಕುರುಡು ನೆರಳು

ಮಾಯಿ ಕಾಯತ್ತಾಳೆ

ನಿರ್ಮೋಹಿ ಮಾಯಿ
ಸರಿಸಿ ಬಾಂದಳದ ಮೋಡ
ಕವಿದ ಅಂಗಳದ ದೀಪ
ರಂಗದ ಹೊರಗೆ ಪಾತ್ರಕ್ಕಾಗಿ
ಕಾಯುವ ಅದೆಷ್ಠೋ ಜನರ ಕಂಗಳ
ಸರದಿಗಾಗಿ ಸರಿದ ನಂಬರು ಯಾವಾಗ ಬರುವುದೋ
ಮಾಯಿ ಕಾಯುತ್ತಾಳೆ ಮಂದಿಯಲ್ಲಿ
ನಂದಿಯಂತ ಒಬ್ಬ ನಿಲ್ಲುತ್ತಾನೆ
ಅವರವರ ಆಕಾಶದಲ್ಲಿ ನಕ್ಷತ್ರಗಳ ಚೆಲ್ಲಿ

ಹಗಲು ರಾತ್ರೆ ಯ ಫರಕು ಇರದ
ಮಗುವಿನ ಮೊದಲ ನಗುವಿನಲ್ಲಿ
ಮಾಯಿ ಮುಂಬಾಯಿ ತುಂಬೆಲ್ಲ
ಜನ ಸಮುದ್ರಸುತ್ತಲೂ ಜಲಸಮುದ್ರ
ಕಣ್ಣಲ್ಲಿ ತೇಲಿ ಬರುವ ಕನಸಿನ ಹಡಗು
ತಾಯಿ ಮಗುವ ಸೇರುವಲ್ಲಿ
ಮಾಯಿ ಮುಂಬಯಿ ಇದ್ದಾಳೆ ಕೊನೆ ಇರದ ನಡುವಲ್ಲಿ
ಮಾಯಿ ಎಲ್ಲೂ ಇದ್ದಾಳೆ
ಮೈ ಕಣ್ಣಾಗಿಸಿ ಕಣ್ಣ ಮೈಯಾಗಿಸಿ
ಹಿಡಿದು ಕೋಲು
ಶಿಸ್ತಿಗೂ ಶಾಸ್ತಿಗೂ
ಮಾಯೀ
ಪೈಠಣಿಯ ಸೀರೆಯಲಿ ಕೈಕಟ್ಟಿ ಕಾಪಿಡುವ
ಮುಂಬಾ ಮಾಯಿ
ತಾಯಿ

ನೂಡಲ್ ಎರಡು ನಿಮಿಷ೧

ನೂಡಲ್ ಎಂದರೆ ಎರಡು ನಿಮಿಷ
ನಿಮ್ಮ ಆಯ್ಕೆಗೆ ಪರ್ಯಾಯ
ಬದುಕಿನ ಎರಡು ನಿಮಿಷದ ಕವಲು

ಒಂದಕ್ಕೊಂದು ಹೆಣೆದ ನೂಡಲು
ಗೊಜಲು ಸಂಬಂಧ ಗಳಿಗೆ ಸವಾಲು
ಆಕಾರ ಕಳೆದುಕೊಂಡರೂ ಭರವಸೆ
ಮುಟ್ಟುವ ಮುಂದಿನ ಮಜಲು,
ಹಸಿದ ತಾಟಿನ ಮುಂದೆ, ತುಂಬಿದ ಬಟ್ಟಲು
ಕುದುರೀತು ವ್ಯವಹಾರ, ಪರಿಹಾರಕ್ಕೆ ಹಾರ
ತೆರೆದೀತು ಬಾಗಿಲು

ಅಡಿಗೆ ಅಡಿಗಡಿಗೆ ದಿನಾ ಆಶಿಸುವ ಮಂದಿಗೆ
ಬಗೆ ಬಗೆಯಲ್ಲಿ ಈಗ ಬೆನ್ನು ಹತ್ತಿವೆ ದಾರಿಗಳು
ಹಕ್ಕಿಯಾಗಬೇಕು ಹೆಕ್ಕಿ ಹಾರಬೇಕು
ಕ್ಞಣಗಳ ಮುಟ್ಟುವ ಕಾತರದಲ್ಲಿ
ಮನಸು ಆತುರ, ಆಕಾಶ ಬರಿದು.
ಹೇಳಲಾಗದು ಮತ್ತೆ ಕರೆದು
ತಾಳಿ ಇದು ನೂಡಲ್ ಕ್ಷಣ
ಎರಡು ನಿಮಿಷದ ೧೨೦ ಸೆಕೆಂಡುಗಳ ಕ್ಷಣ
ಕ್ಷಣದ ಮರೆವಿನಲ್ಲಿ ಅಪಘಾತ, ಹುಡುಗಿಯ ಆತ್ಮಹತ್ಯೆ
ಹೃದಯ ಬಡಿತ, ಈ ಕ್ಷಣದ ಎಸಳಿನ ಪಯಣದಲ್ಲಿ
ಬದುಕು ಅನಾವರಣ
ಹೊಕ್ಕುಳ ಬಳ್ಳಿ ಕತ್ತರಿಸಿದ ದಿವದ ಕ್ಷಣಗಳು
ಈ ಎರಡುನಿಮಿಷದ ಗಡಿಗಳಲ್ಲಿ ಬದುಕಿನ
ನಿಗೂಡ, ನಿರ್ಮೋಹ ಅನಿತಯತಿ ಭ್ರಮಣಗಳಲ್ಲಿ
ಹೆಕ್ಕಿದೆ ಹಕ್ಕಿ ತನ್ನ ಕೊಕ್ಕಿನಲ್ಲಿ ಬೆಳಕ ಚೂರು
ಬೆಳಗುವುದೇ ಬೇರು ಕಾಂಡಕ್ಕೆ
ಟೊಂಗೆಗಳಲ್ಲಿ ಒಂದೊಂದು ಸೂರು

ಕಡ್ಡಿಕೀರಿದ ಕ್ಷಣ ನೆಲದಲ್ಲಿ ದೀವಳಿಗೆ

ದಿನವಿಡೀ ಓಡುವ ಬದುಕಿಗೆ ದಿವದ ಬಯಕೆ
ಆಕಾಶದಿಂದ ಬಿದ್ದ ಅಮೃತ ಗಂಗೆ ಯ ಬಿಂದು
ಸಂದಹಾಗೆ ಎರಡು ನಿಮಿಷ ದ ಕ್ಷಣಗಳು
ಎತ್ತ ಒಯ್ಯುವುದೋ ಗೊತ್ತೇಆಗದು
ಹೆಕ್ಕಲಾಗದ ಬಿದ್ದು ಹೋದ ಕಣಗಳು

ಎಲ್ಲರಿಗೂ ಮಂದೆಯಲಿ ನೂಡಲ್ ಒಂದೇ
ತಂದ ಎರಡು ನಿಮಿಷದ ತಾಳ್ಮೆ ಕೊಡುವ ಭರವಸೆ
ಹೃದಯದಲ್ಲಿ ನೋಡಿ, ಕಣ್ಣಿನಲ್ಲಿ ಯೋಚಿಸಿ ಮನಸ್ಸಿನಲ್ಲಿ ಕೇಳಿ
ಎರಡು ನಿಮಿಷದಲ್ಲಿ ಹೊಸ ಹೊಸ್ತಿಲು
ನೀವೇ ತೆರೆವ ಬಾಗಿಲು

ಆ ದಿನ

ನೀನು ಬರುವೆಯೆಂದು ನಾನು ಕಾದು ಕುಳಿತ್ದದ್ದು
ಹೆಣ್ಣಿಗಾಗಿ ಅಲ್ಲಸಂಗಾತಿ
ಮರಳಿ ಬರುವಳೆಂಬ ಖುಶಿಗೆ

ನಾನು ನಿನ್ನ ಪ್ರೀತಿಸುವೆ ಎಂದು
ನಾ ಹೇಳಲಾರೆ ಪ್ರೀತಿಯ ಪೂರ್ಣ ಚಂದ್ರನಂತೆ
ಕಾರಣ ಪ್ರೀತಿಸುವ ಚಂದ್ರನ ಮೇಲೂ
ಕಲೆಯಿದೆ.
ನೀನಿಲ್ಲದೇ ದಿನಗಳು ಸಾಗುವುದಿಲ್ಲ
ಎಂದು ನಾನು ಹೇಳುವುದಿಲ್ಲ
ನೀನಿಲ್ಲದ ರಾತ್ರಿ ದೊಡ್ಡದಾಗುವುದು ಖರೆ
ನನಗೆ ದಿನವೆಲ್ಲ ಹಿಂಸೆ

ನೀನಿಲ್ಲದೇ ನಾನಿರಲಾರೆ ಎನ್ನುವುದಿಲ್ಲ
ಏಕೆಂದರೆ ನೀನಿಲ್ಲದೆ ನಾವಿಲ್ಲ

ಎಂದು ಅಲ್ವೆ ನಾವು ಒಂದಾದದ್ದು?
ನಾವೇ ಬರೆದ ಕಥೆ ಇದೆ

ನಿನ್ನ ಸನಿಹದಲ್ಲಿ ಸಹನೆ ಇದೆ ಸ್ನೇಹ ವಿದೆ
ನಮ್ಮ ಒಟ್ಟಾಗಿಸಿದ ನಡೆ ಇದೆ ನುಡಿ ಇದೆ
ಆದರೂ ಏಕೆ ಲೈಲ ಮಜ್ನು ಹೀರ್‌ ರಾಂಜ ಕಥೆ
ಮರುಕಳಿಸುತ್ತದೆ?

ಹೌದು ನಿನ್ನ ಹೆಣ್ಣಿನ ಹೃದಯ ನನ್ನಲ್ಲಿ
ನನ್ನ ಪುರುಷ ಹೃದಯ ನಿನ್ನಲಿ
ನೀನು ಎಲ್ಲಿದ್ದರೂ ನನ್ನ ಹೊರುವ ನೀನು

ಕಾಯುತ್ತೇನೆ ನಿನಗಾಗಿ ಅಂಗಳದ ಹೂ ಗಿಡದಂತೆ
ಕಿಟಕಿಯಲ್ಲಿ ಕುಂತ ಪಾರಿವಾಳದಂತೆ
ಪಾಸಾಗುವ ಗಾಬರಿಗೆ ತನ್ನದೆ ಹೆಸರನ್ನು ಹುಡುಕುವ
ವಿದ್ಯಾರ್ಥಿಯಂತೆ
ಸರಿ ಇದ್ದರೂ ಪಲ್ಲನ್ನು ಸರಿಸಿ ಸರಿಸಿ ಕಸಿವಿಸಿಯಲ್ಲಿ ತರಗತಿಗೆ
ಮೊದಲ ದಿನ ಬಂದು ನಾಚಿದ ಹುಡುಗಿಯಂತೆ

ಕಳೆದ ದಿನಗಳು ಮೊದಲಾಗಲಿ ಬರುವುದು ಮತ್ತೊಮ್ಮೆ
ಹೂ ಮೊಗ್ಗುಗಳು ಅರಳಿ ಹೂವಾಗಲಿ ಮುಡಿಯಲ್ಲಿ
ಇಷ್ಟು ದಿನ ಸಲಹಿದ ನಮ್ಮಿಬ್ಬರನ್ನು ಬೆಸೆವ ಕವಿತೆಯಂತೆ ಇದು
ಕೊನೆಗೆ ನಾನು ಮತ್ತು ನೀನು ಕಾಣುವುದು ಆ ದಿನ
ನಮ್ಮ ಹಿಂದಿನ ಯೌವನ ಕಳೆದ ಕ್ಷಣ ಸದ್ದು ಮಾಡದ ಮೌನ
ಮತ್ತೆ ಕ್ಲಿಕ್ಕಿಸುವ ಕಣ್ಣ

ಮುಂಬಯಿಯ ಪ್ರಮುಖ ಕವಿ ವಿ.ಎಸ್.ಶಾನ್ ಭಾಗ್ ಬ್ಯಾಂಕ್ ಅಧಿಕಾರಿಯಾಗಿ ಸೇವಾ ನಿವೃತ್ತರು.ಆರು ಕವನಸಂಕಲನಗಳು , ‘ಮುಂಬೈ ಎಂಬ ಮಾನಸಿಕ ಪ್ರಕ್ರಿಯೆ’ ಲೇಖನಗಳು, ಹಾಗೂ ‘ ಹೂ ಬಿಡುವ ಕನಸಿನ ಹೊತ್ತು’ ವಿಮರ್ಶಾ ಕೃತಿ ಪ್ರಕಟಿಸಿದ್ದಾರೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: