ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಗದ್ದುಗೆಗಾಗಿ..

ಪ್ರಕಾಶ್ ಪೊನ್ನಾಚಿ

ರಕ್ತಪಾತವಿದು ಏತಕೋ ಗೆಳೆಯ
ತೋಳಿಗೆ ತೋಳು ಕೂಡಬೇಕು
ಸಾಮ್ರಾಜ್ಯವೆ ಅಳಿದು ಮಣ್ಣಾದರೇನು
ಹೆಗಲಿಗೆ ಹೆಗಲು ಜೊತೆ ನಿಲ್ಲಬೇಕು

ಬಂದೂಕಿನ ನಳಿಕೆಗೆ ಬಣ್ಣವದೇಕೆ
ಕೊಲ್ಲಲು ಕಾರಣ ನೂರಿರಲಿ
ಕತ್ತಲೆಯಲಿ ಮುಳುಗಿದ ನಗರಿಗೆ
ಕಂದೀಲು ಹಚ್ಚುವ ಜನ ಸಿಗಲಿ

ಮಣ್ಣಾದರೆ ಕಟ್ಟಿದ ಗೋರಿಗಳೆಲ್ಲಾ
ಹೊಸದೊಂದು ಸ್ಮಶಾನ ಬೇಡ ಇಲ್ಲಿ
ಕೊಲ್ಲುವುದಾದರೆ ಎಲ್ಲರ ನೀವು
ಈ ಶಹರದ ತುಂಬಾ ಹೂವಿರಲಿ

ಬೆತ್ತಲೆಯಾದವು ರಾಜನಗರಿಗಳು
ನಿಮ್ಮದೆ ದ್ವೇಷದ ಗೂಡೊಳಗೆ
ಹೊದಿಸ ಬನ್ನಿರೋ ಜೋರು ದುಪ್ಪಟ
ಉದಯಿಸೋ ಮುನ್ನ ಹೊಸ ಘಳಿಗೆ

ನಗುತಲೆ ನಿಂತಿತು ಗಟಾರದ ಹೂ
ಸಾಮ್ರಾಜ್ಯವೆ ಅಳಿದ ನಾಡಿನಲಿ
ಹೊಸಕಬೇಡಿರೋ ಅರಳಿದ ದಳವದು
ನಗರದ ತುಂಬಾ ನಗುತಿರಲಿ

ಮುಚ್ಚಬನ್ನಿರಿ ಗುಂಡಿನ ಸಂತೆಯ
ಪರೀಕ್ಷಿಸಲೇಕೆ ಜನ ಸಹನೆ
ರೊಚ್ಚಿಗೆ ಎದ್ದರೆ ಮೊಗ್ಗೇ ಸುರಿವುದು
ಸಾಮ್ರಾಜ್ಯದ ತುಂಬ ಪಟಪಟನೆ

ತೆರೆದುಕೊಳ್ಳಿರಿ ನಿಮ್ಮದೇ ಹೃದಯವ
ಚಿಗುರಬೇಕಿದೆ ಹೊಸ ಗರಿಕೆ
ಮೆಟ್ಟಿದ ಕಾಲಿಗೆ ಶಪಿಸಬೇಡಿರೋ
ತಪ್ಪೇ ತಪ್ಪಿಗೆ ಮಾಡಲಿ ಕೋರಿಕೆ

ಇಲ್ಲಿ ಸೋತುಗೆದ್ದವರಾರು ಹೇಳಿ
ಅವಸಾನದ ಅಂಚಿನ ಊರಿನಲಿ
ಸೋತವರು ಗೆದ್ದು ಗೆದ್ದವರು ಸೋತರು
ಅಳಿದು ಉಳಿದ  ರಾಜಬೀದಿಯಲಿ

‍ಲೇಖಕರು Avadhi

19 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading