‘ತಹ ತಹ’ವೆಂಬ ಜ್ವಾಲಾಮುಖಿ !

ದಿನೇಶ್ ಕುಕ್ಕುಜಡ್ಕ

ಸಮಾಜದ ಕೆಲವೊಂದು ಒಪ್ಪಿತ ಮೌಲ್ಯಗಳನ್ನು ಸ್ವೀಕರಿಸುವುದಕ್ಕೆ ಮತ್ತು ಇತರರು ಗ್ರಹಿಸುವಂತೆ ಮಾಡುವುದಕ್ಕೆ ಅಂಥ ವಿಶೇಷವಾದ ಪ್ರಯತ್ನವನ್ನೇನೂ ಪಡಬೇಕಾಗಿಲ್ಲ. ಹೆಚ್ಚೆಂದರೆ ಒಂದಿಷ್ಟು ಆಕರ್ಷಣೀಯ ಧಾಟಿಯಲ್ಲಿ ತೇಲಿಸಿಬಿಟ್ಟರೆ ಸಾಕು. ಅದು ಮುಟ್ಟಬೇಕಾದಲ್ಲಿಗೆ ಮುಟ್ಟುವುದಂತೂ ಸರಳ ಸತ್ಯ. ಆದರೆ ‘ಸಂಗತಿ’ಯೊಂದನ್ನು ತನ್ನದಲ್ಲದ ಬಾಹ್ಯ ಒತ್ತಡಗಳ ಮೂಲಕ ಇಳಿಸಿಕೊಳ್ಳುವುದಾಗಲೀ, ಇತರರಿಗೆ ಉಣಬಡಿಸುವುದಾಗಲೀ ಹಾಗಲ್ಲ. ಅದೊಂದು ಅತ್ಯಂತ ಜಟಿಲವಾದ ಕ್ರಿಯೆ. ಉದಾಹರಣೆಗೆ ನಾನಿಲ್ಲಿ ಹೇಳಹೊರಟಿರುವ ರಂಗಪ್ರಯೋಗವನ್ನೇ ತೆಗೆದುಕೊಳ್ಳಿ. ಇದರ ವಸ್ತು ಸಾರ್ವತ್ರಿಕವಾಗಿ ಅಷ್ಟು ಒಪ್ಪಿತವಲ್ಲದ, ಹೇವರಿಕೆಗೊಳಪಟ್ಟ ‘ಸಲಿಂಗ ಪ್ರೇಮ ಮತ್ತು ಕಾಮ’.

NARTA ( ದಿ ನೈಟಿಂಗೇಲ್ ಅಚಿಡ್ ದ ರೋಸ್ ಥಿಯೇಟರ್ ಅಸೋಸಿಯೇಷನ್ )ಮತ್ತು ಮೈಸೂರಿನ ‘ನಾಟ್ಯಲೇಖ’ ರಂಗಸಮೂಹದ ಹೊಸ ಪ್ರಯೋಗವಾದ ‘ತಹತಹ’ವನ್ನು ನೋಡಿ ನನಗಿಷ್ಟು ಹೇಳಬೇಕೆನಿಸಿತು. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿದ್ದ ಬರೆಹಗಾರ ಆಸ್ಕರ್‌ವೈಲ್ಡ್ ತನ್ನ ಪ್ರಿಯಕರನಿಗೆ ಬರೆದ ಪ್ರೇಮಪತ್ರಗಳು ಹಾಗೂ ಹೆನ್ರಿಕ್ ಇಬ್ಸೆನ್ ನ ‘ಘೋಸ್ಟ್’ ನಾಟಕವನ್ನು ಆಧರಿಸಿದ ರಂಗಕೃತಿಯಿದು.

ಇದೊಂದು- ಯಾರೊಡನೆಯೂ ಹೇಳಲಾಗದ, ‘ಸುಖದ ಸಂಕಟವನ್ನು’ ಹೊರಹಾಕುವ ಅತ್ಯಂತ ಸೂಕ್ಷ್ಮ ಹಾಗೂ ಕಠಿಣ ಪ್ರಕ್ರಿಯೆ! ಇದರ ಕೇಂದ್ರ ವ್ಯಕ್ತಿಯೆನಿಸಿದ ಬರೆಹಗಾರ ಹಾಗೂ ಸಲಿಂಗ ಪ್ರೇಮಿ ಆಸ್ಕರ್‌ವೈಲ್ಡ್ ಬಹುಶಃ ತನ್ನ ಬದುಕಿನುದ್ದಕ್ಕೂ ಉಂಡ ಅಖಂಡ ‘ತಹತಹಿಕೆ’ಯ ತೊಳಲಾಟದ ಪ್ರಾಮಾಣಿಕ ಅಭಿವ್ಯಕ್ತಿಯಿದು ಅನಿಸುತ್ತದೆ. ಇಲ್ಲಿ ಈ ರಂಗದ ಮಟ್ಟಿಗೆ ಅರವತ್ತೈದು ನಿಮಿಷಗಳ ಸುಮನೋಹರ ನೋವು-ಕಾವಿನ ಆಲಾಪವೇ ಸರಿ.!

ಈ ನಡುವೆ ತನ್ನೆಲ್ಲಾ ಪೂರ್ವಾಗ್ರಹಗಳನ್ನು ಬಿಟ್ಟು ಅಂತರಂಗವನ್ನು ಖಾಲಿಗೊಳಿಸಿ ಕೂತ ಪ್ರೇಕ್ಷಕನೊಳಗೆ ಮಾತ್ರ ನೀವು ಏನನ್ನಾದರೂ ತುಂಬಲು ಸಾಧ್ಯವಷ್ಟೆ. ಅದರಲ್ಲೂ ಅತ್ಯಂತ ಸಂಕೀರ್ಣವಾದ ವಿಷಯವೊಂದನ್ನು ಆತ ಸೂಕ್ಷ್ಮವಾಗಿ ಮತ್ತು ಸಮಗ್ರವಾಗಿ ಒಳಗೊಳ್ಳುವ ರೀತಿಯಲ್ಲಿ ದಾಟಿಸುವುದಂತೂ ತೀರಾ ಸವಾಲಿನ ಕೆಲಸ.

ಇನ್ನು ಗಂಡು-ಗಂಡಿನ ಅಥವಾ ಹೆಣ್ಣು- ಹೆಣ್ಣಿನ ನಡುವಿನ ಪ್ರೇಮ, ಕಾಮ, ತಾಪ, ತಳಮಳಗಳನ್ನೆಲ್ಲ ದಾಟಿಸುವುದಕ್ಕೆ ಈ ಸಮಾಜ ನಮ್ಮನ್ನು ಮೊದಲೇ ಸಿದ್ಧಗೊಳಿಸಿದ ರೀತಿಯೇ ಬಹುದೊಡ್ಡ ತೊಡಕು. ಹಾಗಂತ ಆ ಜಟಿಲ ಆವರಣವನ್ನು ಹೆಚ್ಚು ಘಾಸಿಗೊಳ್ಳದಂತೆ ನಾಜೂಕಾಗಿ ಭೇದಿಸಿ ಈ ಅಸಂಗತ ಸಂಗತಿಯನ್ನು ಒಂದೊಂದೇ ಗುಟುಕು ಒಳಸೇರಿಸುವುದಿದೆಯಲ್ಲ- ಈ ರಿಸ್ಕೀ ಕೆಲಸಕ್ಕೆ ಕೈಹಾಕಿದ ನಿರ್ದೇಶಕ ಅಮಿತ್ ಜೆ. ರೆಡ್ಡಿಯವರಿಗೆ ನನ್ನದೊಂದು ಮೆಚ್ಚುಗೆಯ ಸಲಾಮು.

ಇಬ್ಬರು ಪ್ರೇಮಿಗಳ ಪಾತ್ರಧಾರಿಗಳು ( ನಂದಕುಮಾರ್ ಹೂವಿನಹಡಗಲಿ ಹಾಗೂ ಶರತ್ ಬೋಪಣ್ಣ ) ಅದ್ಭುತ ದೇಹಭಾಷೆಯ ಅಮೋಘ ಸಂರಚನೆ ಒಂದೆಡೆ. ಅವರ ಭಾವನೆಗಳ ಪ್ರತೀ ಪಲುಕುಗಳನ್ನೂ ತಾನೇ ಅನುಭವಿಸಿ ಹದವಾದ ಹಿತವಾದ- ಕೆಲವೊಮ್ಮೆ ಉತ್ಕಂಠದಿಂದ ಭಾವತುಂದಿಲನಾಗಿ ವೇದಿಕೆಯ ನಟ್ಟ ನಡುವೆಯೇ ಸಂಗೀತ ಪರಿಕರಗಳೊಂದಿಗೆ ಹಾಡುವ ಸ್ವರಮೋಡಿ ಸಂಗೀತಗಾರ ಅನುಷ್ ಎ. ಶೆಟ್ಟಿ ಇನ್ನೊಂದೆಡೆ. ಇವರನ್ನು ಬಿಟ್ಟರೆ ಈ ಮೂವರ ಪ್ರತೀ ಉಸಿರನ್ನೂ ಹಿಂಬಾಲಿಸುವ ಪ್ರೇಕ್ಷಕನದ್ದೇ ನಿಜವಾದ ನಿರ್ವಹಣೆ ಇಲ್ಲಿ!

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಪೈಕಿ ಅತೀ ಶ್ರದ್ಧೆಯನ್ನು ಬೇಡುವ ಒಂದು ಬಹುಮುಖ್ಯ ಪಾತ್ರವೆಂದರೆ ಅದು ಪ್ರೇಕ್ಷಕನದ್ದೇ! ಈ ಪ್ರಯೋಗದ ಮಟ್ಟಿಗೆ ಹೇಳುವುದಿದ್ದರೆ ನೋಡುಗನನ್ನು ನಿರ್ದೇಶಕ ಕೈ ಹಿಡಿದು ತನ್ನೊಂದಿಗೆ ಕರೆದೊಯ್ಯುವುದಿಲ್ಲ. ಬದಲಾಗಿ ತುಸುವೂ ಹೆಜ್ಜೆ ತಪ್ಪದಂತೆ ಒತ್ತೊತ್ತಿ ಹಿಂಬಾಲಿಸಲು ಪ್ರತೀ ಹಂತದಲ್ಲೂ ಆಮಿಷವೊಡ್ಡುತ್ತಾನೆ. ಆ ವಿಶೇಷ ಆಮಿಷಗಳೆಂದರೆ- ಒಂದು ಬೆಳಕು: ಇನ್ನೊಂದು ಸಂಗೀತ!

ಅನುಷ್ ಎ. ಶೆಟ್ಟಿಯವರ ಸಂಗೀತ ಹಾಗೂ ಮಹೇಶ್ ಕಲ್ಲತ್ತಿ-ಮಂಜುನಾಥ್ ಹಿರೇಮಠ್ ಜೋಡಿಯ ಬೆಳಕಿನ ಮೋಡಿ ಇಡೀ ನಾಟಕದ ಜೀವಾಳ. ಈ ಪ್ರಯೋಗದ ವಿವಿಧ ಮಜಲುಗಳಲ್ಲಿ ಪರಿಶ್ರಮಿಸಿದ ಆಯಾ ವಿಭಾಗದ ತಂತ್ರಜ್ಞರು- ಆ ಇಬ್ಬರು ಪ್ರೇಮಿ ಪಾತ್ರಧಾರಿಗಳನ್ನು ಎಷ್ಟೊಂದು ಹದಗೊಳಿಸಿದ್ದಾರೆಂದರೆ, ನೀವು ಅಲ್ಲಿನ ಪ್ರತೀ ಚಲನೆಯ ವಿನ್ಯಾಸಗಳನ್ನು ಸುಖಿಸುವುದೊಂದೇ ನಿಮಗಿರುವ ಪರಮ ದಾರಿ!
ಸ್ವತಃ ಸಲಿಂಗಕಾಮಿಯಾಗಿದ್ದ ಬರೆಹಗಾರ ಆಸ್ಕರ್‌ವೈಲ್ಡ್ ಆ ದಿನಗಳಲ್ಲಿ ಅನುಭವಿಸಿರಬಹುದಾದ ಭಾವನೆಗಳ ತುಮುಲಗಳನ್ನು ಹಿಂಬಾಲಿಸುವುದಕ್ಕೆ ಒಂದೋ ಆ ಕ್ಷಣದ ಮಟ್ಟಿಗೆ ನೀವು ಅವನಾಗಬೇಕು. ಅಥವಾ ಅವನನ್ನು ಈ ಜಗತ್ತಿಗೆ ತೇಲಿಸಿಬಿಟ್ಟ ಈ ಸೃಷ್ಟಿಯ ಒಂದು ಪೂರ್ವಗ್ರಹರಹಿತ ಕಣವಾಗಿರಬೇಕು. ಇಲ್ಲವೆಂದಾದರೆ ನಿಮ್ಮದೇ ಆಲೋಚನೆಗಳ ಕೊಂಡಿಗಳು ಅಲ್ಲಿನ ಯಾವ ನವಿರು ಹರಿವನ್ನೂ ಇಳಿಯಗೊಡದ ಹಾಗೆ ಬಂಧಿಸಿಬಿಡುವ ಅಪಾಯವಂತೂ ಇದ್ದೇ ಇದೆ.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಆಸ್ಕರ್‌ವೈಲ್ಡ್ ತನ್ನ ಪ್ರಿಯಕರನಿಗೆ ಬರೆದಿದ್ದನೆನ್ನಲಾದ ಪ್ರೇಮಪತ್ರಗಳು ಬಹಿರಂಗಗೊಂಡಾಗ ಇಂಗ್ಲೆಂಡ್ ಸರಕಾರ ಆತನನ್ನು ಜೈಲಿಗೂ ತಳ್ಳಿತ್ತು. ಆ ಕಾಲದ ಆ ಸಮಾಜದ ಮಟ್ಟಿಗೆ ಅದು ಅಪರಾಧ. ಬಹುಶಃ ಅಷ್ಟಿಷ್ಟು ಕಾನೂನಿನ ವಿಶಾಲತೆ, ಮತ್ತು ಗೋಜಲುಗಳ ನಡುವೆಯೂ ಈಗಲೂ ಅದೊಂದು ಅಪರಾಧವೆಂಬ ಭಾವವೇ ಸಾರ್ವತ್ರಿಕವಾಗಿದೆ. ಆದರೆ ಒಲವೆಂಬ ಹೂರಾಶಿಯನ್ನೇ ತನ್ನ ಮಡಿಲಲ್ಲಿ ಹೊತ್ತಿರುವ ಪ್ರಕೃತಿಯು ಈ ಸಾರ್ವತ್ರಿಕ ಒಲವು ನಿಲುವುಗಳನ್ನೂ ದಾಟಿ ಧುಮ್ಮಿಕ್ಕುವ-ಮೊರೆಯುವ ಪ್ರೇಮದ/ಕಾಮದ ಇನ್ನೊಂದು ಮಗುಚು ಮಗ್ಗುಲನ್ನೂ ಕೊಟ್ಟಿದೆಯಲ್ಲ? ಅದಕ್ಕೇನು ಮಾಡೋಣ?

ಹೀಗೆ ಒಂದು ಆದರ್ಶದ ಚೌಕಟ್ಟಿನೊಳಗೆ ರೂಪುಗೊಂಡ ಸಮಾಜ ಮತ್ತು ಅದು ತನ್ನ ನಂಬಿಕೆಗಳ ರಕ್ಷಣೆಗಾಗಿ ರೂಪಿಸಿಕೊಂಡ ಕಟ್ಟಳೆಗಳ ಬೇಲಿ ಇವುಗಳ ನಡುವೆಯೇ ಮೊರೆಯುವ ಈ ಸಲಿಂಗ ಆಕರ್ಷಣೆಯೆಂಬ ನಿಸರ್ಗವಿನ್ಯಾಸ… ಇವಿಷ್ಟನ್ನೂ ಒಂದೇ ವೇದಿಕೆಯಲ್ಲಿ ಗಂಟು ಬಿಡಿಸಿ ಹರಹುವುದಕ್ಕೆ ಈ ಕೃತಿ ಬೇಡುವುದು ಅಪಾರವಾದ ಒಂದು ಸೃಜನಶೀಲ ಧ್ಯಾನವನ್ನು. ಅಲ್ಲಲ್ಲಿ ಇಂಗ್ಲೀಷ್ ಕಾವ್ಯಗಳು, ಕನ್ನಡದ ಭಾವಗೀತೆಗಳು, ನವಿರಾದ ಸುಸ್ವರ ಆಲಾಪ, ಸಂಗೀತ ಪರಿಕರಗಳ ತನನ ಧಿನನಗಳ ನಡುವೆ ಹೊಮ್ಮಿದ್ದೊಂದು ಸಂಕೀರ್ಣ ದೃಶ್ಯ ಕಾವ್ಯ!

ನೆರಳು ಬೆಳಕಿನ ವಿವಿಧ ವರ್ಣವಿಭಿನ್ನತೆಯ ಹೊನಲಲ್ಲಿ ಮೀಯುವ-ಬೇಯುವ-ನಲುಗುವ-ತಹತಹಿಸುವ ಗಂಡುಪ್ರೇಮಿಗಳ ಅತ್ಯಂತ ಖಾಸಗಿ ಭಾವಸುಧೆಯನ್ನು ತೀರಾ ಆಪ್ತವಾಗಿ ದಾಟಿಸಿಬಿಡುವ ತೀರಾ ನಿಷ್ಠೆಯ ಪ್ರಯತ್ನವಿದಾಗಿತ್ತು. ತುಸುವೇ ಹದಮೀರಿದರೂ ಅಶ್ಲೀಲವಾಗಿಯೋ, ಅಪರಾಧವಾಗಿಯೋ, ಅನೈತಿಕವಾಗಿಯೋ, ಅಸಹಜವಾಗಿಯೋ ಕಾಣುವ ಸಾಧ್ಯತೆಯಿರುವುದರಿಂದಲೇ ಒಂದರ್ಥದಲ್ಲಿ ಈ ತಂಡದ್ದು ಕತ್ತಿ ಮೇಲಿನ ಆಟ. ಕೊನೇ ಪಕ್ಷ ಜೀವಂತಿಕೆಯ ಹರಿವಿಲ್ಲದೆ ಹೋದರೆ ಇಡೀ ಪ್ರಯೋಗ ಜಾರಿಹೋಗುವ ಅಪಾಯವನ್ನಂತೂ ಮೈಮೇಲಿರಿಸಿಕೊಂಡೇ ಹೊರಟಂತಿತ್ತು ಈ ಒಟ್ಟು ವ್ಯವಹಾರ!

‍ಲೇಖಕರು Avadhi

March 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr Prashantha Naik

    An excellent review. The play is something unique and worth watching it.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: