ವಿವಾಹಿತ ಬಾಲಕಿಯರ ಅಹವಾಲು ಆಲಿಸಿದ ಸರ್ಕಾರ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

| ಕಳೆದ ಸಂಚಿಕೆಯಿಂದ |

‘ವಿವಾಹಿತ ಬಾಲಕಿಯರ ಸಮಸ್ಯೆಗಳನ್ನ ನೀವು ನೇರವಾಗಿ ಕೇಳಬೇಕು ಸರ್’ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂದಿನ ಸರ್ಕಾರದ ಕಾರ್ಯದರ್ಶಿಗಳಾಗಿದ್ದ ರಾಖೇಶ್‌ ಸಿಂಗ್‌ ಅವರೆದುರು ಹೇಳುತ್ತಿದ್ದೆವು.

ʻಬಾಲ್ಯವಿವಾಹ ನನ್ನ ರಾಜ್ಯದ ಕತೆ. ನಿಮ್ಮಂತಾ ಅಭಿವೃದ್ಧಿ ಹೊಂದಿರುವ, ಶಿಕ್ಷಣದಲ್ಲಿ ಮುಂದುವರೆದಿರುವ ರಾಜ್ಯದಲ್ಲೂ ಇನ್ನೂ ನೀವು ಬಾಲ್ಯವಿವಾಹ ಇಟ್ಟುಕೊಂಡಿದ್ದೀರಲ್ಲ… ಇದು ಬಹಳ ಖೇದಕರ ವಿಚಾರʼ ಕಾರ್ಯದರ್ಶಿಗಳು ಸ್ವಲ್ಪ ಕಾಳಜಿ, ಸ್ವಲ್ಪ ವ್ಯಂಗ್ಯ, ಇನ್ನೊಂದಷ್ಟು ಚುಚ್ಚುವ ಉದ್ದೇಶಗಳನ್ನಿಟ್ಟುಕೊಂಡೇ ಪ್ರತಿಕ್ರಿಯಿಸಿದ್ದರು. ಉತ್ತರ ಭಾರತದಲ್ಲಿ ಮೂಲ ನೆಲೆಯಿರುವ ಐ.ಎ.ಎಸ್.‌ ಅಧಿಕಾರಿಗಳು ಹೇಳಿದುದರಲ್ಲಿ ಏನೂ ತಪ್ಪಿರಲಿಲ್ಲ. ನಾವೂ ಅದೇ ಭಾಷೆ, ಅದೇ ದನಿಯಲ್ಲಿ ಅವರೆದುರು ಅಹವಾಲು ತೆಗೆದುಕೊಂಡು ಹೋಗಿದ್ದೆವು (೨೦೧೮-೧೯). 

೨೦೧೫-೧೬ರಲ್ಲಿ ಆರಂಭವಾದ ಇಮೇಜ್‌ – ವಿವಾಹಿತ ಬಾಲಕಿಯರ ಸಶಕ್ತೀಕರಣ ಯೋಜನೆ ( IMAGE – Initiatives for Married Adolescent Girls’ Empowerment )ಯ ಕ್ಷೇತ್ರಕಾರ್ಯದಲ್ಲಿ ನಮ್ಮನ್ನು ಕಾಡುತ್ತಿದ್ದ ದೊಡ್ಡ ಪ್ರಶ್ನೆ ಇದೇ ಆಗಿತ್ತು. ಬಾಲ್ಯವಿವಾಹ ನಿಷೇಧ ಕಾಯಿದೆ, ಮಕ್ಕಳ ನ್ಯಾಯ ( ಮಕ್ಕಳ ಪೋಷಣೆ ಮತ್ತು ರಕ್ಷಣೆ ) ಕಾಯಿದೆ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಕಾಯಿದೆ ಹಾಗೂ ಮಾನವ ಕಳ್ಳ ಸಾಗಣೆ ತಡೆ ಕಾಯಿದೆಗಳು ಜಾರಿಯಲ್ಲಿದ್ದು, ಇವೆಲ್ಲವೂ ಮಕ್ಕಳನ್ನು ರಕ್ಷಿಸಲು ಕಟಿಬದ್ಧವಾಗಿದ್ದರೂ ಇನ್ನೂ ನಮ್ಮಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದೆಯಲ್ಲಾ… ಪ್ರತಿ ಗ್ರಾಮಪಂಚಾಯತಿಯಲ್ಲಿ ʻಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಸಮಿತಿʼಗಳ ಕಣ್ಗಾವಲು ಇದ್ದರೂ ಇಂತಹದು ನಡೆಯುತ್ತಲೇ ಇದೆಯಲ್ಲ… ಮೂಲೆ ಮೂಲೆಗಳಲ್ಲೂ ʻಬಾಲ್ಯವಿವಾಹ ನಿಷೇಧಾಧಿಕಾರಿಗಳುʼ ಇದ್ದರೂ ಬಾಲ್ಯವಿವಾಹಗಳಾಗುತ್ತಿವೆ. 

ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅನೇಕ ಸ್ವಯಂಸೇವಾ ಸಂಸ್ಥೆಗಳು ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ. ಮಕ್ಕಳು ದುಡಿಯಲು ಹೋಗುವುದನ್ನು ತಪ್ಪಿಸಿ ಶಿಕ್ಷಣದಲ್ಲಿ ತೊಡಗಿಸಲು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸಗಳಾಗುತ್ತಿವೆ. ಅದೇ ರೀತಿ ಬಾಲ್ಯವಿವಾಹಗಳು ಆಗದಂತೆ ತಡೆಗಟ್ಟುವ ಕೆಲಸಗಳೂ ನಡೆದಿವೆ. ಆದರೂ ವ್ಯವಸ್ಥೆಯ ಎಲ್ಲ ಕಣ್ಣುಗಳನ್ನು ತಪ್ಪಿಸಿ ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುವ ಕುಟುಂಬಗಳು, ಸಮುದಾಯಗಳು, ಅವರಿಗೆ ಬೆಂಬಲವಾಗಿ ನಿಲ್ಲುವವರ ಸಾಮರ್ಥ್ಯಕ್ಕೆ ನಾವೆಲ್ಲಾ ಬೆಕ್ಕಸ ಬೆರಗಾಗಿರುವುದಂತೂ ನಿಜ. 

ಇಂತಹದೊಂದು ಘಟ್ಟದಲ್ಲಿ ಅಂಕಿಸಂಖ್ಯೆಗಳಲ್ಲಿ ಕಂಡು ಬರುವ ಒಂದು ಚಮತ್ಕಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಅದು ೨೦೧೧ರ ಭಾರತ ಜನಗಣತಿ ವರದಿಯಲ್ಲಿನ ಒಂದು ಅಂಶ. ಭಾರತದಲ್ಲಿ ಲಿಂಗ ಅನುಪಾತ (Sex ratio) ಕುರಿತು ನೀವು ಸಾಕಷ್ಟು ಕೇಳಿರುತ್ತೀರಿ. ೨೦೧೧ರ ಜನಗಣತಿಯಂತೆ ಪ್ರತಿ ೧೦೦೦ ಗಂಡುಗಳೆದುರು ನಮ್ಮ ದೇಶದಲ್ಲಿ ಕೇವಲ ೯೪೩ ಹೆಣ್ಣುಗಳಿದ್ದಾರೆ. ( ಗ್ರಾಮೀಣ ೯೪೯ ಮತ್ತು ನಗರ ೯೨೯). ನಮ್ಮ ರಾಜ್ಯದಲ್ಲಿ ಇದು ಸ್ವಲ್ಪ ಉತ್ತಮವೆನ್ನಬಹುದು ( ಒಟ್ಟು ಲಿಂಗಾನುಪಾತ ೯೭೨, ಗ್ರಾಮೀಣ ೯೭೯ ಮತ್ತು ನಗರ ೯೬೨). 

೧೮ ವರ್ಷದೊಳಗಿನ ಮಕ್ಕಳ ಲಿಂಗಾನುಪಾತ ಆರಂಭದಿಂದಲೂ (೦-೬ ವರ್ಷದಿಂದ ಆರಂಭಿಸಿ) ಇಳಿಮೊಗದಲ್ಲೇ ಇರುತ್ತದೆ. ೭-೧೦ ವರ್ಷದವರಲ್ಲಿ ೯೧೪; ೧೧-೧೪ ವರ್ಷದವರಲ್ಲಿ ೯೧೬ ಮತ್ತು ೧೫-೧೮ ವರ್ಷದವರಲ್ಲಿ ೮೭೬ಕ್ಕೆ ಮುಟ್ಟಿದ್ದು (ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿ), ಮುಂದಿನ ಮೂರು ವರ್ಷದ (೧೯-೨೦ ವರ್ಷಗಳು) ಗುಂಪಿನ ಜನರಲ್ಲಿ ಲಿಂಗಾನುಪಾತ ದಿಢೀರ್‌ ಎಂದು ಸ್ವಲ್ಪ ಉತ್ತಮ ಎನ್ನುವ ೯೦೬ರ ಹಂತಕ್ಕೆ ಬಂದು ಬಿಡುತ್ತದೆ. ಅದರಲ್ಲೂ ಬಹಳ ವಿಚಿತ್ರವೆಂದರೆ ೧೮ ವರ್ಷದ ದಾಟಿದ ೧೯ನೇ ವರ್ಷದ ವಯೋಮಾನದ ಗುಂಪಿನ ಜನರಲ್ಲಿ ಲಿಂಗಾನುಪಾತ ೯೨೩ ಮತ್ತು ೨೦ನೇ ವರ್ಷದವರಲ್ಲಿ ೯೩೯!

ಕರ್ನಾಟಕದಲ್ಲೂ ಹೀಗೇ! ಜೊತೆಗೆ ಇನ್ನೂ ಉತ್ತಮ… ೧೫ರಿಂದ ೧೮ ವರ್ಷದ ಜನರ ಗುಂಪಿನಲ್ಲಿ ಲಿಂಗಾನುಪಾತ ೯೦೪ಕ್ಕೆ ಕುಸಿದದ್ದು, ಮುಂದಿನ ೧೯ನೇ ವಯೋಮಾನದ ಗುಂಪಿನಲ್ಲಿ ೯೬೭ ಆಗಿ ೨೦ನೇ ವಯೋಮಾನದ ಗುಂಪಿನಲ್ಲಿ ೯೯೯! ಇದು ಯಾವ ಮಾಯಮಂತ್ರದ ದಂಡದಿಂದ ಆಗುವುದಲ್ಲ ಅಥವಾ ಪರಿಸ್ಥಿತಿ ಉತ್ತಮವಾಗಿರುವುದಲ್ಲ. 

ಇಷ್ಟೆಲ್ಲಾ ಅಂಕಿಸಂಖ್ಯೆಗಳನ್ನು ನಿಮಗೆ ಬಲವಂತವಾಗಿ ಉಣಬಡಿಸಲು ಕಾರಣ ʻನಮ್ಮ ಒಟ್ಟೂ ಸಮಾಜ ಜೊತೆಜೊತೆಯಾಗಿ ನಿಂತು ಸುಳ್ಳು ವಯಸ್ಸಿನ ಲೆಕ್ಕ ಕೊಟ್ಟು ಸತ್ಯದ ತಲೆಯ ಮೇಲೆ ಹೊಡೆಯುತ್ತಿದೆʼ. ೧೮ ವರ್ಷದೊಳಗಿನ ಹುಡುಗಿಯರಿಗೆ ಮದುವೆ ಮಾಡಿಬಿಟ್ಟ ತಕ್ಷಣ ಅವರೆಲ್ಲಾ ೧೮ ವರ್ಷ ದಾಟಿದ ವಯಸ್ಕರಾಗಿಬಿಡುತ್ತಾರೆ. ಎಲ್ಲ ಗಣತಿಯಲ್ಲೂ ೧೮ರೊಳಗಿನ ಲಿಂಗಾನುಪಾತ ಪಾತಾಳಕ್ಕೆ ಬಿದ್ದದ್ದು ೧೮ ದಾಟಿದ ಕೂಡಲೇ ಶಿಖರವೇರಿ ಕೂರುತ್ತದೆ!

ಹೆಚ್ಚಿಸಿದ ಸುಳ್ಳು ವಯಸ್ಸಿನ ಪ್ರಮಾಣ ಪತ್ರ ಕೊಟ್ಟು ಹುಡುಗಿಯರು ದಾಖಲೆಗಳಲ್ಲಿ ದೊಡ್ಡವರಾದರು… ಆದರೆ ಅನಾರೋಗ್ಯ, ಶಿಶು ಮರಣ, ರಕ್ತಹೀನತೆ, ಕಷ್ಟದ ಹೆರಿಗೆ, ಹೆರಿಗೆಯಲ್ಲಿ ತಾಯಂದಿರ ಮರಣ, ಜೊತೆಗೆ ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ಸ್ತ್ರೀಯರ ಹಿಂದುಳಿಯುವಿಕೆಗೆ, ಮೇಲಿಂದ ಮೇಲೆ ಹೆರಿಗೆಗಳು ಹಾಗೂ ಜನಸಂಖ್ಯೆಯ ಏರುಮುಖಕ್ಕೆ ಕಾರಣವಾಗುತ್ತಿದ್ದಾರೆ.  

‘ಕರ್ನಾಟಕದಲ್ಲಿ ಇನ್ನೂ ಬಾಲ್ಯವಿವಾಹಗಳು ನಡೆಯುತ್ತಿವೆ. ಅವರ ವಿವಾಹಗಳನ್ನು ನಿಲ್ಲಿಸದ ಕಾರಣ ವಿವಾಹಿತ ಬಾಲಕಿಯರ ಪಾಡು ಗಮನಿಸುವವರು ಇಲ್ಲ. ವಿವಾಹಿತ ಬಾಲಕಿಯರನ್ನು ಮಕ್ಕಳೆಂದು ಪರಿಗಣಿಸಿ ಅವರಿಗೆ ವಿಶೇಷ ಗಮನ ಕೊಡಬೇಕು, ಇಂತಹ ಬಾಲಕಿಯರು ಎಷ್ಟು ಮಂದಿ ಇದ್ದಾರೆ ಎಂದು ಲೆಕ್ಕ ಇಡಬೇಕು, ಅವರಿಗೆ ಶಿಕ್ಷಣ ಮುಂದುವರೆಸಲು ಅವಕಾಶ ಮಾಡಿಕೊಡಬೇಕು, ಈ ಬಾಲಕಿಯರಿಗಾಗಿ ವಿಶೇಷವಾದ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ನಡೆಸಬೇಕು. ಶಿಕ್ಷಣ ಸಾಧ್ಯವಾಗದಿದ್ದರೆ ವೃತ್ತಿ ತರಬೇತಿ ಕೊಡಿಸಬೇಕು…’ ಇದು ನಮ್ಮ ಕ್ಷೇತ್ರಾಧ್ಯಯನದಿಂದ ಹೊರಹೊಮ್ಮಿದ ವಿಚಾರವಾಗಿತ್ತು. 

ಆದರೆ ನಮ್ಮದೇ ಬೆಂಬಲ ಗುಂಪಿನಲ್ಲಿ ಈ ವಿಚಾರಗಳು ಬೇರೆಯೇ ಆಗಿ ಹರಡಿತು. ‘ಬಾಲ್ಯವಿವಾಹ ಬೇಡ ಅವನ್ನು ನಿಲ್ಲಿಸಿ ಎಂದು ಆಂದೋಲನ ನಡೆಸಿದ್ದರೆ, ಇಮೇಜ್‌ ಯೋಜನೆ ಬಾಲ್ಯವಿವಾಹಿತರಿಗೆ ಅನುಕೂಲಗಳನ್ನು ಮಾಡಿಕೊಡುವ ಮೂಲಕ ಬಾಲ್ಯವಿವಾಹಗಳನ್ನು ಪ್ರೇರೇಪಿಸುತ್ತಿದೆ!’ ಈ ವಾಸುಗೆ ಮತ್ತು ಅವರ ಗುಂಪಿಗೆ ಬುದ್ಧಿಯಿಲ್ಲ!

ಆಗ ಎದುರಾದದ್ದು ಸವಾಲು. ಇಂತಹ ಅಪಪ್ರಚಾರವನ್ನು ಹೇಗೆ ಎದುರಿಸಬೇಕು? ನಾವು ಈ ಋಣಾತ್ಮಕವಾದ ಮಾತನ್ನೇ ಎದುರಿಟ್ಟುಕೊಂಡು ವಾಸ್ತವ ಪರಿಸ್ಥಿತಿಗಳನ್ನು ವಿವರಿಸಲು ಶುರು ಮಾಡಿದೆವು. ಅದರ ಜಾಡು ಹಿಡಿದು ಹೊರಟಾಗಲೇ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ‘ಕರ್ನಾಟಕದಲ್ಲಿ ಬಾಲ್ಯವಿವಾಹಗಳು ಹೆಚ್ಚಿವೆ. ವಿವಾಹಿತ ಬಾಲಕಿಯರಿಗೆ ಜೀವನ ಸುಗಮ ಮಾಡಲು ಚಿಂತಿಸಬೇಕಿದೆ’ ಎಂಬ ಅಹವಾಲು ಕೊಡಲು ಸಾಧ್ಯವಾಯಿತು. 

ಸರ್ಕಾರದ ಮಟ್ಟದ ವಕೀಲಿಗಳೆಲ್ಲವೂ ಫಲ ಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಸಮರ್ಪಕವಾದ ಪ್ರಕರಣಾಧ್ಯಯನಗಳು, ಅಂಕಿ ಸಂಖ್ಯೆ, ವಾಸ್ತವ ಘಟನೆಗಳು, ಸಮಸ್ಯೆಗಳನ್ನು ಎದುರಿಟ್ಟರೆ ಕೆಲವಾದರೂ ಮನಸ್ಸುಗಳು ಕರಗುತ್ತವೆ, ಏನಾದರೂ ಮಾಡೋಣ, ಕನಿಷ್ಟ ಈ ವಿಚಾರವನ್ನು ಕುರಿತು ಸಭೆ ನಡೆಸೋಣ ಎಂದಾದರೂ ಹೇಳುತ್ತಾರೆ. ಇಲ್ಲೂ ಅದೇ ಆಗಿದ್ದು. ನಮ್ಮ ಪ್ರಯತ್ನಗಳು ೨೦೧೮ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಉಮಾ ಮಹದೇವನ್‌ ಅವರಿಂದ ಆರಂಭವಾಗಿತ್ತು. ಅವರ ಒಪ್ಪಿಗೆಯಂತೆ, ʻವಿವಾಹಿತ ಬಾಲಕಿಯರ ಪರಿಸ್ಥಿತಿಯ ಅಧ್ಯಯನಕ್ಕೆ ಸಮಿತಿ’ಯೊಂದನ್ನು ನೇಮಿಸಲು ಕೇಳಿಕೊಂಡಿದ್ದ ಅಹವಾಲು ಸಫಲವಾಗಿತ್ತು. ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯ. ಜೊತೆಗೆ ನೀನಾ ನಾಯಕ್‌, ಮೀನಾ ಜೈನ್‌, ರಾಘವೇಂದ್ರ ಹಾಗೂ ವಕೀಲರಾದ ಜೈನಾ ಕೊಥಾರಿ. ನಮ್ಮೊಂದಿಗೆ ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು. 

ಸಮಿತಿಯೇನೋ ಆಯಿತು. ಆದರೆ ಸಭೆಗಳು? ಅದಕ್ಕೆ ನೂರೆಂಟು ವಿಘ್ನಗಳು. ಅಂತೂ ಹೊಸ ಕಾರ್ಯದರ್ಶಿಗಳಾದ ರಾಖೇಶ್‌ ಸಿಂಗ್‌ ಅವರನ್ನು ಒಪ್ಪಿಸಿ, ಸಭೆ ನಡೆಸಲು ದಿನಾಂಕ ನಿರ್ಧಾರವಾಯಿತು (೨೦೧೯).  ಅಲ್ಲೊಂದು ದಿಢೀರ್‌ ಯೋಚನೆ ಬಂದಿತು. ಪ್ರಸ್ತಾಪಿಸಿದೆ. ‘ವಿವಾಹಿತ ಬಾಲಕಿಯರ ಪ್ರತಿನಿಧಿಗಳ ಒಂದು ಚಿಕ್ಕ ಗುಂಪು ಈ ಸಭೆಗೆ ಬಂದು ತಮ್ಮ ಅನುಭವ, ಕಷ್ಟ ಹೇಳಿಕೊಳ್ಳಲು ಅವಕಾಶ ಕೊಡಿ’. ಕಾರ್ಯದರ್ಶಿಗಳು ಬೇಡ, ಬೇಕು, ಅದು ಬಹಳ ಮುಜುಗರ ಆಗುತ್ತದೆ ಇತ್ಯಾದಿ ಹೇಳಿದರೂ, ಅವರನ್ನು ಒಪ್ಪಿಸಿ ಐವರು ವಿವಾಹಿತ ಬಾಲಕಿಯರನ್ನು ಸಭೆಗೆ ತರಲು ಒಪ್ಪಿಗೆ ಪಡೆದೇಬಿಟ್ಟೆ. 

ಮುಂದಾದದ್ದು ಅತ್ಯಂತ ಪರಿಣಾಮಕಾರಿಯಾದದ್ದು. 

ಕರ್ನಾಟಕದ ಐದು ಜಿಲ್ಲೆಗಳಿಂದ ( ಬೀದರ್‌, ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ) ಐದೈದು ವಿವಾಹಿತ ಬಾಲಕಿಯರು ಬಂದರು. ಕೆಲವರು ತಮ್ಮ ಸೇರು ಚಟಾಕು ಮಕ್ಕಳನ್ನೂ ಹೊತ್ತು ತಂದಿದ್ದರು. ಕೆಲವು ಬಾಲಕಿಯರು ಗರ್ಭಿಣಿಯರು. ಇಬ್ಬರು ಗಂಡಂದಿರೂ, ಒಬ್ಬ ಅತ್ತೆ ಮತ್ತು ಒಬ್ಬರು ಅಮ್ಮ ಮಕ್ಕಳನ್ನು ನೋಡಿಕೊಳ್ಳಲು ಮುಂದಾಗಿದ್ದರು. ೯ ಡಿಸೆಂಬರ್‌. ಇಪ್ಪತ್ತೈದು ವಿವಾಹಿತ ಬಾಲಕಿಯರು ಸೇರಿದರು. ಮಾತುಕತೆಯ ನಂತರ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವ ಐವರು ವಿವಾಹಿತ ಬಾಲಕಿಯರನ್ನು ಅವರೇ ಗುರುತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯುವ ‘ವಿವಾಹಿತ ಬಾಲಕಿಯರ ಪರಿಸ್ಥಿತಿ ಅಧ್ಯಯನ ಸಮಿತಿ’ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳೊಡನೆ ಮಾತುಕತೆಗೆ ಅವರು ಸಿದ್ಧರಾದರು.

೧೦ ಡಿಸೆಂಬರ್‌ ೨೦೧೯. ಆ ಹೊತ್ತು ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ಕಛೇರಿಯಲ್ಲಿ ಅಧಿಕಾರಿಗಳ ದಂಡು ಸೇರಿತ್ತು. ಕಛೇರಿಯೊಳಗೆ ಈ ಬಾಲಕಿಯರನ್ನು ಕರೆದೊಯ್ಯಲು ಹೊರಟಾಗ ಕಾವಲುಗಾರರು ಒಳಗೆ ಬಿಡಲು ಹಿಂದೆ ಮುಂದೆ ನೋಡಿದರು! ಒಬ್ಬ ಬಾಲಕಿಯ ಕಂಕುಳಲ್ಲೊಂದು ಎಳೆ ಮಗು. ಸರಿಯೆ? ಸರ್ಕಾರದ ಕಛೇರಿಯಲ್ಲಿ ಮಕ್ಕಳಿಗೇನು‌ ಕೆಲಸ. ಅವರು ಸಮಾಲೋಚನೆಗೆ ಬಂದಿದ್ದಾರೆ ಅಂದಾಗ ಭದ್ರತಾ ಅಧಿಕಾರಿಗಳಿಗೆ ಆಶ್ಚರ್ಯ.

ಸಭೆಗೆ ಬಂದಿದ್ದ ಆಹ್ವಾನಿತ ಸದಸ್ಯರು, ಸರ್ಕಾರದ ಅಧಿಕಾರಿಗಳೆಲ್ಲಾ ಮುಖ್ಯ ಕಾರ್ಯದರ್ಶಿಗಳ ಆಗಮನಕ್ಕೆ ಕಾಯುತ್ತಾ ಸಭಾಸದನದ ದುಂಡು ಮೇಜಿನ ಸುತ್ತ ಕುಳಿತಿದ್ದರು. ಮಕ್ಕಳೆಲ್ಲರೂ ಅವರ ಮಕ್ಕಳರೊಡನೆ ಸ್ವಲ್ಪ ದೂರದಲ್ಲಿ ಕುಳಿತರು. ಮಕ್ಕಳ ಪ್ರತಿನಿಧಿಗಳು ಬರುತ್ತಾರೆಂದು ಸಭೆಯ ಅಜೆಂಡಾದಲ್ಲಿ ಇರಲಿಲ್ಲ. ಅಷ್ಟು ಹೊತ್ತಿಗೆ ಸಭೆಗೆ ಬಂದ ಮುಖ್ಯ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂದಿನ ನಿರ್ದೇಶಕರಾದ ದಯಾನಂದ್‌, ಬಾಲ್ಯವಿವಾಹ ನಿಷೇಧ ಕೋಶದ ಅಧಿಕಾರ ರೇವತಿ, ಮತ್ತಿತರು ಬಂದರು.

ಕಾರ್ಯದರ್ಶಿಗಳು ಮಕ್ಕಳನ್ನು ನೋಡಿದ ಕೂಡಲೇ ಸ್ವಲ್ಪ ಅವಾಕ್ಕಾದರು. ಸಾವರಿಸಿಕೊಂಡು ತಮ್ಮ ಕುರ್ಚಿಯನ್ನು ಎಳೆದುಕೊಂಡು ಮಕ್ಕಳೆದುರೇ ಕುಳಿತರು. ಉಳಿದವರೆಲ್ಲಾ ಹಾಗೇ ಮಾಡಬೇಕಾಯಿತು. ಯಾವುದೇ ವಿಶೇಷವಾದ ಔಪಚಾರಿಕ ಮಾತುಗಳಿಲ್ಲದೆ ಮಾತುಕತೆ ಆರಂಭವಾಯಿತು. ರಾಖೇಶ್‌ ಸಿಂಗ್‌ ಅವರೇ ಕೇಳಿದರು, ‘ನೀವು ಬೆಂಗಳೂರಿನ ತನಕ ಬಂದಿದ್ದೀರಲ್ಲ. ನಿಮ್ಮ ಗಂಡಂದಿರು ಬಿಟ್ಟರೇನು… ಇಷ್ಟು ಚಿಕ್ಕ ವಯಸ್ಸಿಗೇ  ಮಕ್ಕಳಾಗಿದೆಯಲ್ಲ, ಯಾಕೆ ಹೀಗಾಯಿತು… ಮುಂದೇನು…ʼ

ಇಷ್ಟೇ ಸಾಕಾಯಿತು. ಸುಮಾರು ಎರಡು ವರ್ಷಗಳಿಂದ ಬಾಲ್ಯವಿವಾಹದ ತೊಂದರೆಗಳು, ಸಾಮಾಜಿಕ ಸಮಸ್ಯೆಗಳು ಮೊದಲಾದ ವಿಚಾರಗಳ ಬಗ್ಗೆ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ವಿವಾಹಿತ ಬಾಲಕಿಯರು ನಾಮುಂದು ತಾಮುಂದು ಎಂದು ಸಾಕಷ್ಟು ವಿಚಾರಗಳನ್ನು ತಾರ್ಕಿಕವಾಗಿ, ಉದಾಹರಣೆಗಳ ಸಹಿತ ಹೇಳುತ್ತಾ ಹೋದರು. ಜೊತೆಗೆ ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳು ಮತ್ತು ಸಲಹೆಗಳು. 

ಈ ಮಧ್ಯ ಫೋಟೋ ತೆಗೆಯಬಹುದೆ ಅಂತ ಯಾರೋ ಕೇಳಿದರು. ‘ಮುದ್ದಾಂ ತೆಗೀರಿ. ಈ ವಿಷಯ ಎಲ್ರಿಗೂ ಗೊತ್ತಾಗಬೇಕಲ್ರೀ. ಪೇಪರ್ನಲ್ಲೂ ನಮ್ಮ ಕತೆಗಳು ಬಂದಿವೆʼ ಎಂದು ಬಾಲಕಿಯರು ಭರವಸೆ ಮತ್ತು ತಾವೇ ಮುಂದಾಗಿ ಧೈರ್ಯ ನೀಡಿದರು. ( ಈ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇಲ್ಲ ಹಾಗೂ ತಮ್ಮ ಫೋಟೋಗಳನ್ನು ಬಳಸಲು ಬಾಲಕಿಯರು ಒಪ್ಪಿಗೆ ನೀಡಿದ್ದಾರೆ ).

ಬಾಲ್ಯವಿವಾಹ ನಿಷೇಧ ಕಾಯಿದೆ ಜಾರಿಯಲ್ಲಿದೆ ಎಂದರೂ, ಈಗಲೂ ಬಾಲ್ಯವಿವಾಹಗಳು ಆಗುತ್ತಿವೆ. ನಮಗೆ ಮದುವೆಯಾದಾಗ ಯಾರೂ ತಡೆಯಲು ಬರಲಿಲ್ಲ. ಬೇಡ ಎನ್ನಲಿಲ್ಲ. ನಮಗೂ ಆಗ ಈ ಬಗ್ಗೆ ಅರಿವಿರಲಿಲ್ಲ. ಮದುವೆಯಾದ ಮೇಲಾದರೂ, ನಮ್ಮನ್ನ ಈ ಕುರಿತು ಮಾತನಾಡಿಸಲು ಯಾರೂ ಬರಲಿಲ್ಲ. ಈಗಲೇ ಮಕ್ಕಳನ್ನು ಮಾಡಿಕೊಳ್ಳಬೇಡಿ ಎಂದು ಯಾರೂ ಹೇಳಲಿಲ್ಲ. ಬದಲಿಗೆ ಈ ಎಲ್ಲ ಹಂತಗಳಲ್ಲಿ ಸುಳ್ಳು ವಯಸ್ಸನ್ನು ಕೊಟ್ಟು ದೊಡ್ಡವರು (೧೮ ದಾಟಿದವರು) ಎಂದಾಗ ಎಲ್ಲರೂ ಒಪ್ಪಿಕೊಂಡರು. ನಮಗೂ ಇದೆಲ್ಲಾ ತಪ್ಪು ಎಂಬ ಪ್ರಜ್ಞೆಯೇ ಇರಲಿಲ್ಲ. ಇದಕ್ಕೆ ಯಾರು ಹೊಣೆ… ಮೊದಲು ನಾವು ಹೊಣೆ. ಒಪ್ಪೋಣ, ನಮ್ಮ ಕುಟುಂಬ, ಗ್ರಾಮ ಪಂಚಾಯತಿಯಾಗಲೀ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆ, ಪೊಲೀಸ್‌, ಶಾಲಾ ಶಿಕ್ಷಕ ವರ್ಗ ಯಾರೂ ಹೇಳಲಿಲ್ಲ. ಮದುವೆಯಾದ ಮೇಲೆ ಕೆಲವು ಬಾಲಕಿಯರು ಶಾಲಾ ಶಿಕ್ಷಣ ಮುಂದುವರೆಸಲು ಇಚ್ಛಿಸಿದಾಗ ಶಾಲೆಗಳು ಒಪ್ಪಲಿಲ್ಲ… 

ಸಾಕಷ್ಟು ಹೆಣ್ಣುಮಕ್ಕಳು ವಿಧವೆಯರು, ಗಂಡಂದಿರಿಂದ ತೊರೆಯಲ್ಪಟ್ಟವರು, ಕೆಲವರಿಗೆ ವಿಚ್ಛೇದನವೂ ಆಗಿದೆ, ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಕೆಲವರಿಗೆ ಎರಡು ಮೂರು ಮಕ್ಕಳು, ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವುದು, ಸಾಕಷ್ಟು ಗಂಡಂದಿರು ಕುಡುಕರು, ಮನೆಗೇನೂ ಕೊಡುವುದಿಲ್ಲ ಅವರ ಖರ್ಚು ನೋಡಿಕೊಳ್ಳಬೇಕು… ಒಂದೇ ಎರಡೇ? ಇಂತಹ ಅನರ್ಥಗಳಿಗೆ ಯಾರು ಜವಾಬುದಾರರು? ಸರ್ಕಾರದ ಪಾತ್ರವೇನು? ದಾಖಲೆಗಳಲ್ಲಿ ನಾವೀಗ ೧೮ ವರ್ಷ ದಾಟಿರುವ ಹೆಂಗಸರು, ತಾಯಂದಿರು! ಜೊತೆಗೆ ಹೆರಿಗೆಯಲ್ಲಿ ಸತ್ತ ಹುಡುಗಿಯರು, ಅತ್ತೆ ಮನೆಯಲ್ಲಿ ಹೊಡೆತ ಬಡಿತಕ್ಕೆ ಬಿದ್ದವರು, ಏನಾದರಾಗಲೀ ಅತ್ತೆ ಮನೆಯಲ್ಲಿ ಇರಬೇಕು ಎಂದು ತಳ್ಳುವ ತವರು ಮನೆ… ೧೮ ವರ್ಷದೊಳಗಿನವರು ಮಕ್ಕಳು ಎನ್ನುತ್ತೀರಿ… ಈಗ ನಮ್ಮ ಬಾಲ್ಯವನ್ನ ಹೇಗೆ ಖಾತರಿ ಮಾಡುತ್ತೀರಿ… ವಿಧವೆಯರಾದ, ವಿಚ್ಛೇದಿತರಾದ, ಮನೆಯಿಂದ ಹೊರದೂಡಲ್ಪಟ್ಟ ಬಾಲಕಿಯರ ಬದುಕು ಮುಂದೇನು?

‘ಈಗ ಇಮೇಜ್‌ ಯೋಜನೆಯವರು ಬಂದು ನಮ್ಮನ್ನು ಸಂಘಟಿಸಿ ಮಾತನಾಡಿಸಿದಾಗ, ಹೇಳಿದಾಗಲೇ ಈ ವಿಚಾರಗಳು ನಮಗೆ ಗೊತ್ತಾಗಲಿಕ್ಕೆ ಆರಂಭವಾಗಿದೆ. ಕೆಲವರಿಗೆ ಒಂದಷ್ಟು ತರಬೇತಿಗಳಾಗಿವೆ. ಕೆಲವರು ಹೊರ ವಿದ್ಯಾರ್ಥಿಗಳಾಗಿ ೧೦ನೇ ತರಗತಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಒಂದು ಕಾನೂನು ಬಂದಿದೆಯಂತೆ ಬಾಲ್ಯವಿವಾಹಗಳು ಮದುವೆಗಳೇ ಅಲ್ಲ. ಅಸಿಂಧು ಎಂದು. ಹಾಗಾದರೆ ೨೦೧೮ ಮಾರ್ಚ್‌ ನಂತರ ಮದುವೆಯಾದ ನಮ್ಮ ಅಕ್ಕತಂಗಿಯರ ಪಾಡೇನು…?’

ಶಿಕ್ಷಣ ಇಲಾಖೆಯ ಪ್ರತಿನಿಧಿ ಹೇಳಿದರು, ‘ನಮಗೆ ಈ ವಿಚಾರ ತಿಳಿದಿಲ್ಲ. ಇಲ್ಲಿಯವರೆಗೂ ಇಂತಹದೊಂದು ಅಹವಾಲು ನಮ್ಮ ತನಕ ಬಂದಿಲ್ಲ. ಮದುವೆಯಾದವರನ್ನು ಶಾಲೆಗೆ ಸೇರಿಸಬಾರದು ಎಂದು ಎಲ್ಲೂ ಇಲ್ಲ… ನಾವು ಕ್ರಮ ಕೈಗೊಳ್ಳುತ್ತೇವೆ. ಎಂಟರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿನಿಯರು ಶಾಲೆ ಬಿಟ್ಟಲ್ಲಿ ಆ ಕುರಿತು ಕಡ್ಡಾಯವಾಗಿ ಅನುಸರಣೆ ಮಾಡುವುದಕ್ಕೆ ತಳ ಮಟ್ಟದಲ್ಲಿ ನಿರ್ದೇಶನ ನೀಡುತ್ತೇವೆ.’

ಆರೋಗ್ಯ ಇಲಾಖೆಯವರು ಸಮಜಾಯಿಶಿ ಕೊಡಲು ಹೋದರು. ರಾಖೇಶ್‌ ಸಿಂಗ್‌ ಅವರು ಸಾಕಷ್ಟು ನಯವಾಗಿಯೇ ಇಲ್ಲಿ ಸಮಜಾಯಿಶಿ ಬೇಡ, ಏನು ಮಾಡಬಹುದು ಹೇಳಿ ಎಂದರು. ‘ವಯಸ್ಸಿನ ದೃಢೀಕರಣ ಪತ್ರವನ್ನು ಪಡೆಯುವುದನ್ನು ಕಡ್ಡಾಯ ಮಾಡುತ್ತೇವೆ, ೧೮ರೊಳಗಿನ ಗರ್ಭಿಣಿಯರ ನಿಜವಾದ ವಯಸ್ಸು ದಾಖಲಿಸಲು ಹೇಳುತ್ತೇವೆ, ಅವರಿಗೆ ಎಂದಿನಂತೆ ವಿಶೇಷ ಗಮನ ಕೊಡುತ್ತೇವೆ. ವಿವಾಹಿತ ಬಾಲಕಿಯರು ಮತ್ತು ಅವರ ಗಂಡಂದಿರಿಗೆ ಕುಟುಂಬ ಯೋಜನೆ ಕುರಿತು ಹೇಳುತ್ತೇವೆ’ ಎಂದರು. 

ಉಳಿದಂತೆ ಪೊಲೀಸ್‌ ಇಲಾಖೆಯ ಪ್ರತಿನಿಧಿಗಳು ಬಾಲ್ಯವಿವಾಹ ಪ್ರಕರಣಗಳು ತಮಗೆ ತಿಳಿದ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಖಾತರಿ ನೀಡಿದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ತಾವು ಹಿಂದುಳಿದ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಬಾಲ್ಯವಿವಾಹದ ವಿರುದ್ಧ ಪ್ರಚಾರ ಮಾಡುವುದಾಗಿಯೂ, ಶಿಕ್ಷಣ ಮುಂದುವರೆಸಲು ಸಹಾಯ ನೀಡುವುದಾಗಿ ಭರವಸೆ ನೀಡಿದರು. 

ಎಲ್ಲ ಮಾತುಗಳಲ್ಲಿ ಒಂದಷ್ಟು ಅಂಕಿಸಂಖ್ಯೆಗಳು, ಕಾನೂನಿನ ಕೆಲವು ಸೂಕ್ಷ್ಮಗಳು ಆಡಳಿತದ ಒಂದಷ್ಟು ಕಗ್ಗಂಟುಗಳು ಬಂದು ಹೋಗದಿರಲಿಲ್ಲ. ಆದರೂ ಸಾವಿರಾರು ವಿವಾಹಿತ ಬಾಲಕಿಯರ ಪರವಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ಸಭೆ ಯಶಸ್ವಿಯಾಯಿತು. 

ಸರ್ಕಾರ ಮೊತ್ತ ಮೊದಲ ಬಾರಿಗೆ ವಿವಾಹಿತ ಬಾಲಕಿಯರ ಮಾತನ್ನು ಆಲಿಸಿತು… ಮಕ್ಕಳ ಹಕ್ಕುಗಳಲ್ಲಿ ಮುಖ್ಯವಾದ ‘ಭಾಗವಹಿಸುವ ಹಕ್ಕು, ಕರ್ತವ್ಯಪಾಲಕರು ಮಕ್ಕಳ ಮಾತು ಆಲಿಸಬೇಕು ಎನ್ನುವುದು ಕೊಂಚಮಟ್ಟಿಗೆ ನಿಜವಾಗಿತ್ತು’. ಸರ್ಕಾರದೊಡನೆಯ ವಕೀಲಿ ನಿಧಾನವಾಗಿ ಫಲ ಸಿಗುವತ್ತ ನಡೆಯುತ್ತಿದೆ ಎಂಬ ಭರವಸೆ ಸಿಕ್ಕಿತು

‍ಲೇಖಕರು ವಾಸುದೇವ ಶರ್ಮ

March 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: