ಒಂದು ಅಂಗುಲ ಮುಂದೆ ಸಾಗಲು ಒಂದು ಯೋಜನ ಹಿಂದಕ್ಕೆ..

“ಭ್ರಷ್ಟಾಚಾರ್”, “ಆತಂಕವಾದ್”, “ಕಾಲೇಧನ್”, “ಜಾಲೀನೋಟ್”, “ಹವಾಲಾ” – ಈ ಪಂಚಪಾತಕಗಳಿಂದ ಮುಕ್ತಿ ಹೊಂದಿ 500ದಿನಗಳನ್ನು ಕಳೆದಿರುವ “ಸ್ವಚ್ಛ” ಭಾರತಕ್ಕೆ ತಮಗೆಲ್ಲರಿಗೂ ಸ್ವಾಗತ!

ಅಂದಹಾಗೆ, ಮಾರ್ಚ್ 23ಕ್ಕೆ ನೋಟು ರದ್ಧತಿ 500ದಿನಗಳನ್ನು ಪೂರೈಸಲಿದೆ.

ಪುಣ್ಯಕ್ಕೆ, ಸ್ವತಃ ನರೇಂದ್ರ ಮೋದಿಯವರು ಮಾತ್ರವಲ್ಲದೇ ಹಣಕಾಸು ಸಚಿವ ಅರುಣ್ ಜೇಟ್ಲಿ, ರಿಸರ್ವ್ ಬ್ಯಾಂಕಿನ ಗವರ್ನರ್ ಊರ್ಜಿತ ಪಟೇಲ್  –  ಈ ಮೂರೂ ಮಂದಿ ತಾವು ಆರಂಭಿಸಿದ “ಶುಚಿತ್ವದ ಮಹಾಯಜ್ನ”ದ ಕಾರಣದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮಗಳು ಆಗಿರುವುದನ್ನು ಬೇರೆ ಬೇರೆ ಹಂತಗಳಲ್ಲಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೂ ಒಂದು ಹೆಜ್ಜೆ ಮುಂದೆಹೋಗಿ, ಭಾರತವನ್ನು “ಡಿಜಿಟಲ್” ಮತ್ತು “ ಲೆಸ್ ಕ್ಯಾಷ್” ಆರ್ಥಿಕತೆ ಮಾಡುವ ಉದ್ದೇಶವೂ ನೋಟುರದ್ಧತಿಗಿತ್ತು ಎಂಬ ಸಮಜಾಯಿಷಿ ನೀಡಿ ಗೋಲ್ ಪೋಸ್ಟನ್ನೇ ಬದಲಾಯಿಸಿದ್ದೂ ಆಗಿದೆ.

ಈ ನಡುವೆ ಸುಪ್ರೀಂ ಕೋರ್ಟು ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದೆ ಎಂದು ಬೊಟ್ಟುಮಾಡಿ ರಚಿಸಿದ್ದ ನ್ಯಾಯಮೂರ್ತಿ ಎಂ. ಬಿ. ಷಾ ನೇತ್ರತ್ವದ ವಿಶೇಷ ತನಿಖಾ ತಂಡವು, ಮೂರು ಲಕ್ಷಕ್ಕಿಂತ ಹೆಚ್ಚು ನಗದು ಕೊಡು-ಕೊಳ್ಳುವಿಕೆ ಮತ್ತು 15ಲಕ್ಷಕ್ಕಿಂತ ಹೆಚ್ಚಿನ ನಗದು ಹೊಂದಿರುವುದು ಅಪರಾಧ ಎಂದು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿ ಕೈ ತೊಳೆದುಕೊಂಡಿದೆ.

ಪಾಂಡೆಮಿಕ್ (PANDEMIC) ಪಂಚಮಹಾಪಾತಕಗಳು ಭಾರತದಲ್ಲಿ ಮೊದಲೆಲ್ಲ ಎಪಿಡೆಮಿಕ್(EPIDEMIC) ಆಗಿದ್ದದ್ದು, ಪ್ರಧಾನಮಂತ್ರಿಗಳು 8/11ರಂದು ನೋಟುರದ್ಧತಿಯ ಚಿಕಿತ್ಸೆ ಪ್ರಕಟಿಸಿದ ಬಳಿಕ ಎಂಡೆಮಿಕ್ (ENDEMIC) ಆಗಿ

 

ಬದಲಾಗಿರುವುದು ಕಳೆದ ಐನೂರು ದಿನಗಳಲ್ಲಿ ಬಹಳ ಸ್ಪಷ್ಟವಾಗಿ ಗೋಚರಕ್ಕೆ ಬಂದಿದೆ.  ಈಗ   ಹಾಗಾಗಿ ಬೇರೇನಿಲ್ಲವಾದರೂ ದೇಶ “ಲೆಸ್ ಕ್ಯಾಶ್” ಆರ್ಥಿಕತೆಯಾದರೂ ಆಯಿತೇ ಎಂಬುದನ್ನು ನೋಡುವುದಷ್ಟೇ ಈಗ ಉಳಿದಿರುವ ಕುತೂಹಲ.

ದೇಶ “ಲೆಸ್ ಕ್ಯಾಶ್” ಆಗಿದೆಯೇ?

ದೇಶದ ಆರ್ಥಿಕ ವಹಿವಾಟುಗಳು “ಲೆಸ್ ಕ್ಯಾಶ್” ಆರ್ಥಿಕತೆಯತ್ತ ಸಾಗಿವೆಯೇ ಎಂಬ ಬಗ್ಗೆ ಇದೇ ಜನವರಿಯಲ್ಲಿ ಲೋಕಸಭೆಯಲ್ಲಿ ಹಣಕಾಸು ಸ್ಥಾಯೀ ಸಮಿತಿ ಸಲ್ಲಿಸಿರುವ 56ನೇ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನೊಂದು ಚೂರು ಗಮನಿಸಿದರೆ, ಅಂತಿಮವಾಗಿ “ನೋಟುರದ್ಧತಿ” ಎಂಬುದು ದೊಡ್ಡದೊಂದು “ಮೂರ್ಖತನ” ಬಿಟ್ಟರೆ ಬೇರೇನೂ ಆಗಿರಲಿಲ್ಲ ಎಂಬುದು ಖಚಿತವಾಗುತ್ತದೆ. ಹಣಕಾಸು ಸ್ಥಾಯೀ ಸಮಿತಿಯ ತನ್ನ ವರದಿಯಲ್ಲಿ ಗುರುತಿಸಿರುವ ಸಂಗತಿಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.

* ಆರ್ಥಿಕತೆಯನ್ನು ಡಿಜಿಟಲೈಸ್ ಮಾಡುವ ಪ್ರಯತ್ನಗಳು ಬಯಸಿದ್ದಕ್ಕಿಂತ ತುಂಬಾ ನಿಧಾನವಾಗಿ ನಡೆಯುತ್ತಿವೆ. ನೋಟು ರದ್ಧತಿ ಆದ ತಕ್ಷಣ ನಗದು ಕೊರತೆಯ ಕಾರಣದಿಂದಾಗಿ  ಡಿಜಿಟಲ್ ಲೇವಾದೇವಿಯಲ್ಲಿ ಏರಿಕೆ ಕಂಡುಬಂತಾದರೂ ನಗದು ಹರಿವು ಹೆಚ್ಚಾದ ಬಳಿಕ ಪರಿಸ್ಥಿತಿ ಮೊದಲಿನಂತೆಯೇ ಉಳಿದಿದೆ. ಲೇವಾದೇವಿಗಳ ಸಂಖ್ಯೆ ಹೆಚ್ಚಾಯಿತೇ ಹೊರತೂ ಮೌಲ್ಯ ಗಮನಾರ್ಹವಾಗಿ ಹೆಚ್ಚಲಿಲ್ಲ.

* ಸರ್ಕಾರ ಡಿಜಿಟಲ್ ಯುಗಕ್ಕೆ ತಕ್ಕಂತಹ ಐಟಿ ಕಾಯಿದೆ ತರಬೇಕು, ಡಿಜಿಟಲ್ ಪಾವತಿಗಳಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಡಿಜಿಟಲ್ ಲೇವಾದೇವಿಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಡಿಜಿಟಲ್ ಸಾಕ್ಷರತೆಗೆ ಒತ್ತು ಕೋಡಬೇಕು.

* ಸ್ಥಾಯೀ ಸಮಿತಿಯ ವರದಿಯಲ್ಲಿರುವಂತೆ,  ಆರ್ಥಿಕತೆ ಡಿಜಿಟಲೈಸ್ ಆಗಲು ಇರುವ ಪ್ರಮುಖ ಸವಾಲುಗಳೆಂದರೆ:

೧.  ಡಿಜಿಟಲ್ ವಹಿವಾಟುಗಳಿಗೆ ಬ್ಯಾಂಕುಗಳು ವಿಧಿಸುವಅತಿಯಾದ  ಶುಲ್ಕ,

೨.  ಕೇಂದ್ರ-ರಾಜ್ಯ ಸರಕಾರಗಳ ನಡುವೆ ಡಿಜಿಟಲ್ ಮೂಲಸೌಕರ್ಯಗಳಿಗೆ ಸಂಬಂಧಿಸಿ ಹೊಂದಾಣಿಕೆ ಇಲ್ಲದಿರುವುದು

೩. ದೇಶದಲ್ಲಿ ಇನ್ನೂ ನಗರಗಳ 17 ಕೋಟಿ ಮತ್ತು ಹಳ್ಳಿಗಳ 75ಕೋಟಿ ಜನರಿಗೆ ಇಂಟರ್ನೆಟ್-ಮೊಬೈಲ್ ಕನೆಕ್ಟಿವಿಟಿ ಇಲ್ಲದಿರುವುದು.

೪. ಇಂಟರ್ನೆಟ್ ಸಂಪರ್ಕದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಭಾರತವು APAC ಪ್ರದೇಶದಲ್ಲಿ ಕೊನೆಯಿಂದ ಎರಡನೇಸ್ಥಾನದಲ್ಲಿರುವ ಕಳಪೆ ಸ್ಥಿತಿಯಲ್ಲಿರುವುದು.

ಕೊನೆಯಿಲ್ಲದ ವ್ಯಥೆ

ಒಟ್ಟಿನಲ್ಲಿ ನೋಟು ರದ್ಧತಿಯ ಬಳಿಕ ದೇಶದ ಆರ್ಥಿಕ ಚಟುವಟಿಕೆಗಳು ರಸಾತಳವನ್ನು ಕಂಡಿರುವುದಲ್ಲದೇ ಉದ್ಯಮಿಗಳೂ ಸರತಿ ಸಾಲಿನಲ್ಲಿ ನಿಂತು ದಿವಾಳಿ ಅರ್ಜಿ ಸಲ್ಲಿಸುತ್ತಿರುವುದು, ಸಾಲ ಮರುಪಾವತಿ ಮಾಡಲಾಗದೇ ದೇಶಬಿಟ್ಟು ಪರಾರಿ ಆಗುತ್ತಿರುವುದು ಟ್ರೆಂಡ್ ಒಂದನ್ನು ಹುಟ್ಟುಹಾಕುತ್ತಿದೆ ಎಂಬುದು ಬಹಳ ಆತಂಕಕಾರಿ ಸ್ಥಿತಿ.

ಸರ್ಕಾರದ ಹಲವು ಪ್ರಯತ್ನಗಳ ಹೊರತಾಗಿಯೂ ರಿಯಲ್ ಎಸ್ಟೇಟ್, ಮೂಲ ಸೌಕರ್ಯ ಕ್ಷೇತ್ರಗಳು, ಉದ್ಯೋಗಾವಕಾಶಗಳು ಚೇತರಿಸಿಕೊಳ್ಳುತ್ತಿಲ್ಲ.  ಆದರೆ ಇದೇ ವೇಳೆ ಸರಕಾರದ ಕ್ರೋನಿ ಕಾರ್ಪೋರೇಟ್ ಗಳು ತಮ್ಮ ಗಾತ್ರದಲ್ಲಿ ಅಸಹಜವಾಗಿ ಬೆಳೆಯುತ್ತಿರುವುದು ಕೂಡ ಸುಳ್ಳಲ್ಲ. ಹಾಗಾಗಿ ಜನರಲ್ಲಿ ಪ್ರಭುತ್ವದ ಕುರಿತು ಒಂದು ಸಣ್ಣ ಸಂಶಯ ಮತ್ತು ಪರಿಸ್ಥಿತಿ ಏನೇ ಆದರೂ ಸುಧಾರಿಸುವುದಿಲ್ಲ ಎಂಬ ಹತಾಶೆಯತ್ತ ಮಗ್ಗುಲು ಬದಲಾಯಿಸತೊಗಿದೆ ಎಂಬುದು ಆತಂಕದ ಸಂಗತಿ.

ದೇಶವನ್ನು ಸ್ವಚ್ಛಗೊಳಿಸುವ ಒಂದಂಗುಲ ಮುನ್ನಡೆಗಾಗಿ ಕೈಗೊಂಡ ಮೂರ್ಖ ನಿರ್ಧಾರವೊಂದು ದೇಶವನ್ನು ಒಂದು ಯೋಜನ ಹಿಮ್ಮುಖವಾಗಿ ದೂಡಿರುವುದು ಈಗ ಎಲ್ಲರ ಗಮನಕ್ಕೂ ಬರತೊಡಗಿದೆ. ಹಾಗಾಗಿ ಸರಕಾರದ ಸಾಮರ್ಥ್ಯದ ಕುರಿತು ಅಪನಂಬಿಕೆ, ಅಸಹನೆ ಮೂಡತೊಡಗಿದೆ. ವರ್ಷವೊಪ್ಪತ್ತಿನಲ್ಲಿ ಮತ್ತೆ ಜನಮತ ಕೇಳಬೇಕಾಗಿರುವ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ ಮತಯಂತ್ರ ಬಳಕೆಯ ಕುರಿತಾದ ಒತ್ತಾಯದ ಕುರಿತು ಜನರಲ್ಲಿ ಮೂಡುತ್ತಿರುವ ಆಕ್ರೋಷವನ್ನೂ ಇದೇ ಕೋನದಿಂದ ನೋಡಬೇಕಾಗುತ್ತದೆ.

ತನ್ನ ಆಡಳಿತದ ಅಸಾಮರ್ಥ್ಯಗಳನ್ನು ಮುಚ್ಚಿಡಲು, ಜನರನ್ನು ಅವರ ವಾಸ್ತವ ಸಮಸ್ಯೆಗಳಿಂದ ದೂರ ಸೆಳೆದು ವರ್ಚುವಲ್ ಸಮಸ್ಯೆಗಳನ್ನು ಸ್ರಷ್ಟಿಸುವುದು, ಮಾತಿನ ಚಾತುರ್ಯದಲ್ಲೇ ಎಲ್ಲರನ್ನೂ ಸಮಾಧಾನಪಡಿಸುವ ನಾಟಕೀಯತೆ, ಸಾರ್ವಜನಿಕ ಬದುಕಿನಲ್ಲಿ ಅಸಹನೆ, ಹಿಂಸೆಗಳಿಗೆ ಅವಕಾಶ ತೆರೆದುಕೊಡುವುದು, ಒಡಕು ಮೂಡಿಸುವುದು – ಇಂತಹ ಬುತ್ತಿಕಟ್ಟಿಕೊಡುವ ತಂತ್ರಗಾರಿಕೆಗಳು ಬಹಳ ದಿನ ನಡೆಯಲಾರವು ಎಂಬುದೂ ಸಾಬೀತಾಗತೊಡಗಿದೆ. ಕಟ್ಟಿಕೊಟ್ಟ ಬುತ್ತಿ ಖಾಲಿ ಆದ ಬಳಿಕದ ದಿನಗಳನ್ನು ನೆನೆದು ಆತಂಕವಾಗುತ್ತದೆ.

ಹೆಚ್ಚುವರಿ ಓದಿಗಾಗಿ:

ನೋಟು ರದ್ಧತಿ ಪ್ರಕಟಿಸಿದ ನವೆಂಬರ್ 8, 2016ರ ಮೋದಿ ಭಾಷಣ: https://www.youtube.com/watch? v=z_bg5ZPdQ8Y )

‍ಲೇಖಕರು Avadhi GK

March 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Venky

    I also read somewhere that there are more cash in transaction now compared to pre demonetization ( I am not sure how it will impact digital India or is it good or bad).

    ಪ್ರತಿಕ್ರಿಯೆ
  2. D S PRAKASH

    ಒಂದು ಅಂಗುಲ ಮುಂದೆ ಸಾಗಲು ಒಂದು ಯೋಜನ ಹಿಂದಕ್ಕೆ ಎಂಬ ಲೇಖನ ಓದಿದಾಗ ( ನುಣ್ಣನ್ನ ಬೆಟ್ಟ – ರಾಜಾರಾಂ ತಲ್ಲೂರು ) ಈ ಲೇಖಕರಿಗೆ ಹಾಗೂ ಈ ಅಂಕಣಕ್ಕೆ ಮೋದಿಯವರ ಕೇಂದ್ರ ಸರ್ಕಾರವನ್ನು ತೆಗಳುವುದಕ್ಕೆ ಇರುವ ಒಂದಂಶದ ಅಂಕಣ ಎಂದು ಖಂಡಿತವಾಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು.
    ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವ, ಪ್ರಪಂಚದಾದ್ಯಂತ ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಿರುವ ಹೆಮ್ಮೆಯ ಭಾರತದ ಬಗ್ಗೆ ನಿವೇಕೆ ಲೇಖನಿಸುವುದಿಲ್ಲ ?
    ರಾಹುಲ್ ಗಾಂಧಿಯವರು ಇತ್ತೀಚೆಗೆ ನಡೆದ ತಮ್ಮ ಪಕ್ಷದ ಮಹಾಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ” ದೇಶವನ್ನು ರಕ್ಷಿಸಬೇಕಿದೆ ” ಎಂದು ಹೇಳಿ, ಎಂದಿನ ರಿತಿಯಲ್ಲಿಯೇ ತಮ್ಮ ಆಪಕ್ವ ನಿಲುವನ್ನು ಪ್ರತಿಪಾದಿಸಿದ್ದಾರೆ.
    ಹೌದು ನಮ್ಮ ದೇಶವನ್ನು ಸುಮಾರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸರ್ಕಾರ ದೇಶದೊಳಗಿನ ಶತ್ರುಗಳನ್ನು ಪರೋಕ್ಷವಾಗಿ ಬೆಳೆಸಿತು. ಸಾಮೂಹಿಕವಾಗಿ ಹಾಗೂ ಅಕ್ರಮವಾಗಿ ದೇಶವನ್ನು ಪ್ರವೇಶಿಸಿರುವ ರೋಹಿಂಗ್ಯಾ ಮುಸ್ಲಿಮರನ್ನು ಬೆಂಬಲಿಸುವ ಈ ಪಕ್ಷದವರು ದೇಶದ ಬೆರಿಗೆ ಗೆದ್ದಲು ಹತ್ತುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ ದೇಶವನ್ನು ಲೂಟಿಮಾಡಿದ್ದಲ್ಲದೆ, ಸಾಲದ ಶೃಂಖಲೆಗೆ ದೂಡಿದ್ದಾರೆ.
    ಇದೆಲ್ಲವನ್ನೂ ರಿಪೇರಿ ಮಾಡುವುದರಲ್ಲಿಯೇ ಈಗಿನ ಸರ್ಕಾರ ತನ್ನ ಯತ್ನ ಮುಂದುವರೆಸಿದೆ.
    ಇನ್ನು 1000 ಹಾಗೂ 500 ರೂಪಾಯಿಗಳ ಅಮಾನ್ಯಿಕರಣದಿಂದ ಏನೋ ಅನಾಹುತ ಆಗಿಹೋಗಿದೆ ಎಂದು ಆಗಾಗ ಹೇಳುತ್ತಲೇ ಇರುತ್ತಿರಿ. ದೇಶವಾಸಿ ಸಾಮಾನ್ಯನ ಅನಿಸಿಕೆ ಬೇರೆಯೇ ಇದೆ. ಇದು ಆಗಲೇ ಬೇಕಾಗಿದ್ದ ಒಂದು ಪ್ರಯೋಗ. ಆರಂಭದ ಕೆಲವೇ ಕೆಲವು ದಿನಗಳು ಬಿಟ್ಟರೆ ಸ್ವಲ್ಪ ದಿನಗಳಲ್ಲಿಯೇ ಮಾಮೂಲಿನಂತೆ ವ್ಯಾಪಾರ,ವ್ಯವಹಾರ ನಡೆಯುತ್ತಿದೆ. ಹಣದ ಪೂರೈಕೆಯ ಬಗ್ಗೆ ಏನೂ ಪುಕಾರುಗಳು ಇರುವುದಿಲ್ಲ. ಇದ್ದರೆ ಅವು ಪತ್ರಿಕೆಗಳ, ಮಾಧ್ಯಮಗಳ ಮತ್ತು ನಿಮ್ಮಂತಹ ಅಂಕಣಕಾರರ ಸೃಷ್ಗಿ ಮಾತ್ರ!
    ನೀವು ಏಕೆ ಕರ್ನಾಟಕ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬರೆಯುವುದಿಲ್ಲ? ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಜಾಹೀರಾತಿನ ಸರ್ಕಾರ ಇದಾಗಿದೆ.
    ದಿನವೂ ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಪುಟಗಟ್ಟಲೆ ಪ್ರಚಾರ ಮಾಡುವ ವಿದ್ಯುತ್ ಇಲಾಖೆಯ ಮಂತ್ರಿಗಳ ಗಮನಕ್ಕೆ ದಿನದಲ್ಲಿ ಕಡಿಮೆ ಎಂದರೂ ಐದಾರುಬಾರಿ ವಿದ್ಯುತ್ ಕಡಿತವಾಗುವುದು ಗಮನಕ್ಕೆ ಬರುವುದಿಲ್ಲವೇ ?
    ಈ ಎಲ್ಲಾ ನ್ಯೂನತೆಗಳನ್ನು ವಿಷಧಿಕರಿಸಿ ನೀವೇಕೆ ಬೆಳಕು ಚೆಲ್ಲುವುದಿಲ್ಲಾ ?

    ಬೇಲೂರು ದ ಶಂ ಪ್ರಕಾಶ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: