ಜೀವನದ ವಾಸ್ತವಗಳ 'ಏಪ್ರಿಲ್ ಡಾಟರ್'

ಮ ಶ್ರೀ ಮುರಳಿ ಕೃಷ್ಣ
ಕೆಲವು ಚಲನಚಿತ್ರಗಳನ್ನು ವೀಕ್ಷಿಸುತ್ತಿರುವಾಗ, ಅವುಗಳಲ್ಲಿನ ನಿರ್ದಿಷ್ಟ ಪಾತ್ರಪೋಷಣೆಯ ಬಗೆಗೆ “ಅಯ್ಯೋ”, “ಛೇ…ಛೇ”, “ಅಸಹ್ಯ” ಎಂಬಂತಹ ಉದ್ಗಾರಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಆದರೆ ಅಂತಹ ಪಾತ್ರದ ಬಗೆಗೆ ಪುನಃ ಅವಲೋಕಿಸಿದಾಗ, ನಮ್ಮಲ್ಲಿ ಭಿನ್ನ ಭಾವಗಳು ಮೂಡಬಹುದು.
ಅಂದರೆ ನಾವು ಚಲನಚಿತ್ರಗಳನ್ನು ವೀಕ್ಷಿಸುವಾಗ ತೆಗೆದುಕೊಂಡ ನಿಲುವಿಗೂ, ನಂತರದ್ದಕ್ಕೂ ವ್ಯತ್ಯಾಸಗಳಿರಬಹುದು. ಇತ್ತೀಚೆಗೆ ಜರುಗಿದ 10ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೆಕ್ಸಿಕೊ ದೇಶದ ‘ಏಪ್ರಿಲ್ಸ್ ಡಾಟರ್’ ಎಂಬ ಚಲನಚಿತ್ರ ಕುರಿತಂತೆ ಮೇಲೆ ಪ್ರಸ್ತಾಪಿಸಿರುವ ಮಿಶ್ರ ಭಾವಗಳಿಗೆ ಪಾತ್ರರಾದರು ನನ್ನ ಕೆಲವು ಗೆಳೆಯರು!
ಕುಟುಂಬದ ಕಡಲ ಕಿನಾರೆಯ ಮನೆಯಲ್ಲಿ ಇಬ್ಬರು ಸಹೋದರಿಯರು ವಾಸ ಮಾಡುತ್ತಿರುತ್ತಾರೆ. ದೊಡ್ಡವಳಾದ ಕ್ಲಾರ(ನಟಿ ಜೋನ್ನಾ ಲರೇಕ್ವಿ) ಮತ್ತು ಚಿಕ್ಕವಳಾದ ವಲೇರಿಂ(ನಟಿ ಆನಾ ವಲೇರಿಯ ಬೆಸಿರಿಲ್) ತಮ್ಮದೇ ಆದ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿರುತ್ತಾರೆ. ಕಿಶೋರಿಯಾದ ವಲೇರಿಯ ತನ್ನ ಸ್ನೇಹಿತ ಮಟಿಯೊ(ನಟ ಎನ್‍ರಿಖ್ ಅರ್ರಿಝಾನ್)ನಿಂದ ಗರ್ಭ ಧರಿಸಿರುತ್ತಾಳೆ. ಈ ವಿಷಯವನ್ನು ಆಕೆ ತನ್ನ ತಾಯಿಯಾದ ಏಪ್ರಿಲ್(ನಟಿ ಎಮ್ಮ ಸ್ವೂರೆಝ್)ಗೆ ತಿಳಿಸಿರುವುದಿಲ್ಲ. ಕ್ಲಾರಳಿಂದ ಮಾಹಿತಿ ದೊರೆತ ಏಪ್ರಿಲ್ ಮಗಳ ಮನೆಗೆ ಬರುತ್ತಾಳೆ.
ಆಕೆಯ ಆಗಮನ ವಲೇರಿಯಾಗೆ ಇಷ್ಟವಾಗುವುದಿಲ್ಲ. ನಂತರ ತಾಯಿ ಮಗಳಿಬ್ಬರೂ ಪರಸ್ಪರ ಪ್ರೀತಿಯನ್ನು ಹರಿಸುತ್ತಾರೆ! ಚಿಕ್ಕ ವಯಸ್ಸಿನಲ್ಲೇ ತಂದೆಯಾಗುವ ಮಟಿಯೊ ತನ್ನ ಪುಟ್ಟ ಸಂಸಾರವನ್ನು ನಡೆಸಲು ತನ್ನ ತಂದೆಯ ಹೋಟೆಲ್‍ನಲ್ಲೇ ಕೆಲಸವನ್ನು ಮಾಡುತ್ತಾನೆ. ತಂದೆ ಕೆಲಸದಿಂದ ಹೊರಹಾಕಿದಾಗ, ಏಪ್ರಿಲ್ ಗುಪ್ತವಾಗಿ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮಗುವನ್ನು ದತ್ತು ತೆಗೆದುಕೊಳ್ಳುತ್ತಾಳೆ! ವಲೇರಿಯಾಳ ಕಣ್ತಪ್ಪಿಸಿ ಮಗುವನ್ನು ಹಾರಿಸಿಕೊಂಡು ಹೋಗುತ್ತಾಳೆ. ಮೆಕ್ಸಿಕೊದಲ್ಲಿ ಮೊದಲು ತನ್ನ ಪರಿಚಯದವರ ಮನೆಯಲ್ಲಿ ಮೊಮ್ಮಗಳನ್ನು ಬಿಡುತ್ತಾಳೆ.
ತರುವಾಯ ತಾನೇ ಒಂದು ಮನೆಯನ್ನು ಹುಡುಕಿ ತನ್ನ ಅಳಿಯನನ್ನು ಕರೆತರುತ್ತಾಳೆ. ಆತನ ಜೊತೆ ದೇಹ ಸಂಬಂಧವನ್ನು ಬೆಳೆಸುತ್ತಾಳೆ! ತನ್ನ ವಶದಲ್ಲೇ ಇಟ್ಟುಕೊಳ್ಳುತ್ತಾಳೆ! ಕಡಲ ಕಿನಾರೆಯ ಮನೆಯನ್ನು ಆಕೆ ಮಾರಾಟಕ್ಕಿಟ್ಟಾಗ ವಲೇರಿಯ ತನ್ನ ತಾಯಿ ಮೆಕ್ಸಿಕೊದಲ್ಲಿರುವುದು ತಿಳಿಯುತ್ತದೆ. ಆಕೆ ತನ್ನ ತಾಯಿಯನ್ನು ಹುಡುಕಲು ಹರಸಾಹಸ ಪಡುತ್ತಾಳೆ. ನಂತರ ಸಫಲಳಾಗುತ್ತಾಳೆ. ಆದರೆ ಇದರ ವಾಸನೆ ತಿಳಿದ ಏಪ್ರಿಲ್ ಮಗುವನ್ನು ಹೋಟೆಲ್‍ವೊಂದರಲ್ಲಿ ಬಿಟ್ಟು ಪರಾರಿಯಾಗುತ್ತಾಳೆ! ವಲೇರಿಯ ತನ್ನ ಮಗುವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆಯಲು ಚಾಲ್ತಿಯಲ್ಲಿರುವ ನಿಬಂಧನೆಗಳ ಅನ್ವಯ ಗಂಡನ ಸಹಾಯ ಬೇಕಾಗುತ್ತದೆ. ನಂತರ ತಮ್ಮ ಊರಿಗೆ ಹಿಂದಿರುಗಲು ಬಸ್ ಸ್ಟ್ಯಾಂಡ್‍ಗೆ ಬರುತ್ತಾರೆ. ಅಲ್ಲಿ ಮಟಿಯೊನನ್ನು ತೊರೆದು, ಮಗುವಿನ ಜೊತೆ ಮುಂದಿನ ತನ್ನ ಜೀವನ ಪಯಣಕ್ಕೆ ಸಜ್ಜಾಗುತ್ತಾಳೆ! ಇದು ಈ ಚಲನಚಿತ್ರದ ಕಥೆಯ ಹಂದರ.
ಇದು ಮೆಕ್ಸಿಕೊದ ಚಲನಚಿತ್ರ ನಿರ್ದೇಶಕ ಮಿಶೆಲ್ ಫ್ರಾಂಕೋವಿನ ಐದನೇ ಸಿನಿಮಾ. ಇವರೇ ಚಿತ್ರಕಥೆಯನ್ನು ಬರೆದಿದ್ದಾರೆ. ಮಹಿಳಾ ಪಾತ್ರಗಳೇ ಈ ಚಲನಚಿತ್ರದ ಜೀವಾಳ. ಆದರೆ ಈತ ಚಲನಚಿತ್ರದುದ್ದಕ್ಕೂ ಹೆಣ್ಣನ್ನು ಕಪ್ಪು-ಬಿಳುಪು ಎಂಬ ಬೈನರಿ ನೆಲೆಯಿಂದ ಕಾಣುವುದಿಲ್ಲ. ಕಂದು ಬಣ್ಣದ ಕಟ್ಟೊಣಕ್ಕೆ ಪ್ರಾಶಸ್ತ್ಯವನ್ನು ನೀಡಿದ್ದಾನೆ. ಎಲ್ಲೂ ತನ್ನ ಪಾತ್ರಗಳ ಬಗೆಗೆ ಜಡ್ಜ್‍ಮೆಂಟಲ್ ಆಗಿಲ್ಲ. ಮೊದಲು ತಾಯಿಯ ವಾತ್ಸಲ್ಯ ಹರಿಸುತ್ತ, ಹಂತ ಹಂತವಾಗಿ ಸ್ವಕೇಂದ್ರಿತ ವರ್ತನೆಯನ್ನು ಅತಿರೇಕ ಎಂದು ಪರಿಗಣಿಸಲ್ಪಡಬಹುದಾದ ರೀತಿಯಲ್ಲಿ ಏಪ್ರಿಲ್ ಪಾತ್ರ ಬೆಳೆಯುತ್ತದೆ!
ಅಚ್ಚರಿ ಹುಟ್ಟಿಸುವ ಆಕೆಯ ಕೆಟ್ಟ ನಡವಳಿಕೆ, ಭವಿಷ್ಯದ ಬಗೆಗೆ ಯೋಚಿಸದೆ ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯಾಗುವ ವಲೇರಿಯಾಳ ಅತಂತ್ರ ಸ್ಥಿತಿ, ವಲೇರಿಯಾಳ ಪರಿಸ್ಥಿತಿಯನ್ನು ತಿಳಿದೂ ಆಕೆಗೆ ಸಹಾಯ ಹಸ್ತವನ್ನು ಚಾಚದ ತಂದೆ(ಏಪ್ರಿಲ್‍ನಿಂದ ಬೇರ್ಪಟ್ಟ), ಮಟಿಯೊನ ನೈತಿಕ ಬಲಹೀನತೆ ಇತ್ಯಾದಿಗಳನ್ನು ನಿರ್ದೇಶಕ ‘ಜೀವನದ ವಾಸ್ತವಗಳು’ ಎಂಬ ರೀತಿಯಲ್ಲಿ ಸಹಜವಾಗಿ ಬಿಂಬಿಸಿದ್ದಾರೆ! ಈ ನಿಲುವಿಗೆ ಸಮರ್ಥ ಸಾಥ್ ನೀಡಿದೆ ಕ್ಯಾಮರಾ ಕೆಲಸ. ಅಂದರೆ ದೂರದಿಂದ ವೀಕ್ಷಿಸುವ ರೀತಿಯಲ್ಲಿ ಅದನ್ನು ಬಳಸಲಾಗಿದೆ. ಭಾವನೆಗಳನ್ನು ಬಿಂಬಿಸಲು ತೀರ ವಿರಳವಾಗಿ ಕ್ಲೋಸಪ್ ಶಾಟ್‍ಗಳನ್ನು ಬಳಸಲಾಗಿದೆ. ಸಂಗೀತವೂ ಗೌಣವಾಗಿದೆ. ರಿಯಲಿಸ್ಟ್ ಸಿನಿಮಾದ ಪರಿಯಲ್ಲೇ ಇವೆಲ್ಲವನ್ನೂ ಪಾಲಿಸಲಾಗಿದೆ ಎಂದೆನಿಸುತ್ತದೆ!
ಹೀಗೆ ಇದೊಂದು ಮಿನಿಮಲಿಸ್ಟ್ ಚಲನಚಿತ್ರವೆನ್ನಬಹುದು. ಈ ಶೈಲಿ ಆಸ್ಟ್ರೀಯಾದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮೈಖೆಲ್ ಹನೆಕೆಯ ಕೆಲವು ಚಲನಚಿತ್ರಗಳನ್ನು ನೆನೆಪಿಸುತ್ತದೆ!
ಎಲ್ಲ ಕಲಾ ಪ್ರಕಾರಗಳಂತೆ ಸಿನಿಮಾದಲ್ಲೂ ಸಾಮಾಜಿಕ ವಾಸ್ತವತೆಯೆಂಬುದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರತಿಫಲನಗೊಳ್ಳುತ್ತಿರುತ್ತದೆ. ಅಭಿವೃದ್ಧಿಶೀಲ ಮೆಕ್ಸಿಕೊ ದೇಶ ಕೂಡ ಅನೇಕ ಸ್ಥಿತ್ಯಂತರಗಳನ್ನು ಕಾಣುತ್ತಿದೆ. ಅವುಗಳಲ್ಲಿ ಕುಟುಂಬ ಜೀವನವೂ ಒಂದು. ನಮ್ಮಲ್ಲಿರುವಂತೆ ಅಲ್ಲಿಯೂ ಸಂಪ್ರದಾಯಶರಣತೆಯಿದೆ; ನವೀನ ಆಲೋಚನೆಗಳ ಹರಹುಗಳೂ ಇವೆ. ಇವೆಲ್ಲದರ ಛಾಯೆ ಈ ಚಲನಚಿತ್ರದಲ್ಲಿದೆ. ಮುಂದುವರೆದ ಸಮಾಜಗಳನ್ನು ಒಳಗೊಂಡು ಎಲ್ಲ ಸಮಾಜಗಳಲ್ಲೂ ಕುಟುಂಬದಲ್ಲಿನ ಮಹಿಳೆಯ ಜವಾಬ್ದಾರಿಗಳ ಬಗೆಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಅವುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲೇ ಆಕೆ ತನ್ನ ಜೀವನಪರ್ಯಂತ ಹೆಣಗುತ್ತಿರುತ್ತಾಳೆ. ಆಕೆ ಸ್ವಲ್ಪ ಎಡವಿದರೂ, ದೂಷಣೆಗಳನ್ನು ಎದುರಿಸಬೇಕಾಗುತ್ತದೆ. ಈ ಚಲನಚಿತ್ರವನ್ನು ವೀಕ್ಷಿಸಿದ ತರುವಾಯ ನನ್ನಲ್ಲಿ ಮೇಲೆ ಉಲ್ಲೇಖಿಸಿರುವ ಆಲೋಚನೆಗಳು ಸುಳಿದವು.
ಎಪ್ರಿಲ್‍ನ ಪಾತ್ರ ಸಂಕೀರ್ಣವಾದದ್ದು. ಅದಕ್ಕೆ ತಮ್ಮ ಅಭಿನಯದ ಮೂಲಕ ನ್ಯಾಯವನ್ನು ಒದಗಿಸಿದ್ದಾರೆ ಸ್ಪೈನ್‍ನ ಖ್ಯಾತ ನಟಿ ಎಮ್ಮ ಸೂರ್ವೆಝ್. ವಲೇರಿಯ ಕೂಡ ಸಮರ್ಥವಾಗಿ ನಟಿಸಿದ್ದಾರೆ. ಏಪ್ರಿಲ್ ಯೋಗ ಕ್ಲಾಸ್‍ಗಳನ್ನು ಹಾಗೂ ಸಂಬಂಧಿತ ಚಟುವಟಿಕೆಗಳನ್ನು ನಡೆಸಿದರೂ, ಮೆಕ್ಸಿಕೊ ನಗರದಲ್ಲಿ ಮನೆ ಮಾಡುವಷ್ಟು ಹಣ ಎಲ್ಲಿಂದ ಬಂದಿತು?, ಮಟಿಯೊ ಅಷ್ಟು ಸುಲಭವಾಗಿ ತನ್ನನ್ನು ಏಪ್ರಿಲ್‍ಗೆ ಒಪ್ಪಿಸಿಕೊಂಡುಬಿಡುತಾನಾÀ? ಎಂಬಿತ್ಯಾದಿ ಪ್ರಶ್ನೆಗಳು ಏಳುತ್ತವೆ. ಈ ತೆರೆನಾದ ಚಲನಚಿತ್ರಗಳು ಸಾಮಾನ್ಯವಾಗಿ ಓಪನ್-ಎಂಡೆಡ್ ಆಗಿರುತ್ತವೆ. ಏಪ್ರಿಲ್ ಡಾಟರ್ ಕೂಡ ಇದಕ್ಕೆ ಹೊರತಾಗಿಲ್ಲ.
2017ರ ಕಾನ್ ಚಲನಚಿತ್ರೋತ್ಸವದ ‘ಅನ್ ಸರ್ಟನ್ ರಿಗಾರ್ಡ್’ ವಿಭಾಗದಲ್ಲಿ ಪ್ರದರ್ಶಿತಗೊಂಡ, 103 ನಿಮಿಷಗಳ ಈ ಚಲನಚಿತ್ರ ಆ ವಿಭಾಗದ ಜ್ಯೂರಿ ಪ್ರಶಸ್ತಿಯನ್ನು ಪಡೆದುಕೊಂಡಿತು.
*********************
 
 
 
 
 
 

‍ಲೇಖಕರು Avadhi GK

March 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: