ಒಂದಷ್ಟು ತತ್ವಜ್ಞಾನ ಮತ್ತು ಇತಿಹಾಸ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

‍ಡೇವಿಡ್ ಹೀಲರ್ ಪ್ರಕಾರ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಓಪನ್ (ಮುಕ್ತ) ಸೋರ್ಸ್ ತಂತ್ರಾಂಶ/ಸ್ವತಂತ್ರ (Free) ತಂತ್ರಾಂಶ ಯೋಜನೆಗಳು ತಮ್ಮ ಪರವಾನಗಿ/ಕೃತಿಸ್ವಾಮ್ಯಗಳ ಮೂಲಕ ಕಂಪ್ಯೂಟರ್‌ ಬಳಕೆದಾರರಿಗೆ ತಂತ್ರಾಂಶಗಳನ್ನು ಯಾವುದೇ ಕಾರ್ಯಗಳಿಗೆ ಬಳಸುವ, ಅದನ್ನು ಅಭ್ಯಸಿಸುವ, ಬದಲಾಯಿಸುವ ಮತ್ತು ಇತರರೊಡನೆ ಮೂಲ ರೂಪದಲ್ಲಿ ಅಥವಾ ಬದಲಾಯಿಸಿ ಹಂಚಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತವೆ (ಈ ಹಿಂದೆ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ ತಂತ್ರಜ್ಞರಿಗೆ ಯಾವುದೇ ರೀತಿಯ ಗೌರವ ಹಣ ನೀಡದೆ).

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ತತ್ವಜ್ಞಾನ:

ಇದು ಸ್ವತಂತ್ರ ತಂತ್ರಾಂಶ ಫೌಂಡೇಶನ್ (Free Software Foundation) ಮತ್ತು ಓಪನ್ ಸೋರ್ಸ್ ಇನಿಶಿಯೇಟೀವ್ (OSI) ತತ್ವಜ್ಞಾನಗಳೆಂಬ ನಾಣ್ಯದ ಎರಡು ಮುಖಗಳಿದ್ದಂತೆ.

ಸ್ವತಂತ್ರ ತಂತ್ರಾಂಶ ಫೌಂಡೇಶನ್‌ನ (FSF) ಫಿಲಾಸಫಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದರ ಇತಿಹಾಸವನ್ನು ಮುಂದಿನ ಭಾಗಗಳಲ್ಲಿ ವಿವರಿಸಲಾಗಿದ್ದು, ಚಳುವಳಿಯಲ್ಲಿ ಬಹುಮುಖ್ಯ ಪಾತ್ರವನ್ನು ಹೊಂದಿದೆ.

ಸ್ವತಂತ್ರ ತಂತ್ರಾಂಶ ತತ್ವಜ್ಞಾನ‍ (ಫಿಲಾಸಫಿ)

ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ಸ್ವತಂತ್ರ ಸಂವಾದ” ದಲ್ಲಿನ “ಸ್ವತಂತ್ರ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್” ನಲ್ಲಿನ “ಉಚಿತ” ವೆಂಬಂತಲ್ಲ.

ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವೃದ್ಧಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ:

  • ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೧).
  • ಪ್ರೊಗ್ರಾಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೨). ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
  • ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾಧ್ಯವಾಗುತ್ತದೆ (ಸ್ವಾತಂತ್ರ್ಯ ೩).
  • ತಂತ್ರಾಂಶಗಳನ್ನ ಅಭಿವೃದ್ಧಿ ಮಾಡುವ, ಮತ್ತು ಪರಿಷ್ಕರಿಸಿದ ಆವೃತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. (ಸ್ವಾತಂತ್ರ್ಯ ೪). ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.

Non-Free ಅಥವಾ ಸ್ವತಂತ್ರ ಸಾಫ್ಟ್ವೇರ್ ಅಲ್ಲದ ಖಾಸಗಿ ಕಂಪೆನಿಗಳಿಂದ ಸೃಷ್ಟಿಸಲ್ಪಟ್ಟ ತಂತ್ರಾಂಶಗಳು ಯಾವುದೇ ರೀತಿಯ ಸ್ವಾತಂತ್ರ್ಯವನ್ನು ತನ್ನ ಬಳಕೆದಾರರಿಗೆ ನೀಡುವುದಿಲ್ಲ ಮತ್ತು ಅದರ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಲೂ ಬಿಡುವುದಿಲ್ಲ. ಎಫ್.ಎಸ್.ಎಫ್ ಪ್ರಕಾರ ಇದು ನೈತಿಕವಲ್ಲ.

ಇದೆಲ್ಲದರ ಜೊತೆಗೆ ಸಾಫ್ಟ್‌ವೇರ್ ಪೇಟೆಂಟುಗಳನ್ನೂ ಮತ್ತು ಕಾಪಿರೈಟ್ ಕಾಯಿದೆಗಳಲ್ಲಿ ಹೇರಲ್ಪಡುವ ಇತರೆ ಅಧಿಕ ಮಿತಿಗಳನ್ನೂ ಎಫ್.ಎಸ್.ಎಫ್ ವಿರೋಧಿಸುತ್ತದೆ. ತಂತ್ರಾಂಶಗಳು ಏಕೆ ಮುಕ್ತವಾಗಿರಬೇಕು ಮತ್ತು ಸ್ವತಂತ್ರವಾಗಿರಬೇಕು ಹಾಗೂ ಮೇಲೆ ಹೇಳಿದ ಎಲ್ಲ ೪ ಸ್ವಾತಂತ್ರ್ಯಗಳನ್ನೂ ನೀಡಬೇಕು ಎಂಬುದನ್ನು http://www.fsf.org/philosophy/shouldbefree.html ನಲ್ಲಿ ವಿವರಿಸಲಾಗಿದೆ.

ಎಫ್.ಎಸ್.ಎಫ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯಲು ಈ ಜಾಲತಾಣಗಳನ್ನು ಜಾಲಾಡಿ. http://www.gnu.org  ಅಥವಾ http://www.fsf.org 

‍ಲಿನಕ್ಸ್ ಕರ್ನೆಲ್ – ಜಿಪಿಎಲ್ ಅಡಿ ಬಂದ ಬಗೆ

ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು.

ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಎಂಬ ಮುಕ್ತ ಲೈಸನ್ಸ್ ನಡಿ ಬಿಡುಗಡೆಯಾದಂತಹವು. ಲಿನಕ್ಸ್ ಕರ್ನೆಲ್ ನ ಆವೃತ್ತಿ Linux 0.01 ತನ್ನಲ್ಲಿ Gnu Bash Shell ನ ತಂತ್ರಾಂಶವನ್ನು ತನ್ನಲ್ಲಿ ಇರಿಸಿಕೊಂಡಿತ್ತು.

Linux 0.01 ಆವೃತ್ತಿಯ ಟಿಪ್ಪಣಿಯಲ್ಲಿ ಟೋರ್ವಾಲ್ಡ್ಸ್ ಲಿನಕ್ಸ್ ಗೆ ಅಗತ್ಯವಿರುವ ಗ್ನು ತಂತ್ರಾಂಶಗಳ ಬಗ್ಗೆ ಹೀಗೆ ಬರೆಯುತ್ತಾನೆ.

Sadly, a kernel by itself gets you nowhere. To get a working system you need a shell, compilers, a library etc. These are separate parts and may be under a stricter (or even looser) copyright. Most of the tools used with linux are GNU software and are under the GNU copyleft. These tools aren’t in the distribution – ask me (or GNU) for more info.

ಇದರ ಕನ್ನಡ ಅನುವಾದ ಇಂತಿದೆ.

ಕರ್ನೆಲ್ ತನ್ನಂತಾನೇ ಕಾರ್ಯನಿರ್ವಹಿಸಲಾರದು. shell, compiler, library ಇತ್ಯಾದಿ ತಂತ್ರಾಂಶಗಳು ನಿಮಗೆ ಕರ್ನೆಲ್ ನೊಡನೆ ಬೇಕಾಗುತ್ತವೆ. ಇವು ಬೇರೆಯದೇ ಭಾಗಗಳಾಗಿ, ಬೇರೆಯದೇ ಪರವಾನಗಿಗಳಡಿಯಲ್ಲಿ ದೊರೆಯುತ್ತವೆ. ಲಿನಕ್ಸ್ ಜೊತೆ ಉಪಯೋಗಿಸುವ ಅನೇಕ ಟೂಲ್ ಗಳು ಗ್ನು ತಂತ್ರಾಂಶಗಳು ಮತ್ತು ಇವು ಗ್ನು ಲೈಸೆನ್ಸ್ ನಡಿಯಲ್ಲಿವೆ. ಇವು ಈ ಲಿನಕ್ಸ್ ಆವೃತ್ತಿಯ ಜೊತೆಯಲ್ಲಿ ಸಿಗುವುದಿಲ್ಲ – ಹೆಚ್ಚಿನ ಮಾಹಿತಿಗಾಗಿ ನನ್ನನ್ನು (ಅಥವಾ ಗ್ನು ಅನ್ನು) ಸಂಪರ್ಕಿಸಿ.

ಮೂಲ:

Torvalds, Linus: Notes for linux release 0.01 kernel.org, 1991.

೧೯೯೨ ರಲ್ಲಿ ಲಿನುಸ್ ಕರ್ನೆಲ್ ಅನ್ನು GNU GPL ಲೈಸೆನ್ಸ್ ನಡಿಯಲ್ಲಿ ತರುವುದಾಗಿ ಘೋಷಿಸಿದ. ಇದು ಲಿನಕ್ಸ್ ನ ಆವೃತ್ತಿ 0.12 ನ ಟಿಪ್ಪಣಿಯಲ್ಲಿ ಮೊದಲು ನಮೂದಾಗಿದೆ. ೧೯೯೨, ಡಿಸೆಂಬರ್ ನ ಮಧ್ಯಭಾಗದಲ್ಲಿ ಬಿಡುಗಡೆಯಾದ ಲಿನಕ್ಸ್ ಆವೃತ್ತಿ ೦.೯೯ GNU GPL ನಡಿ ಬಂತು.

ಲಿನಕ್ಸ್ ಮತ್ತು ಗ್ನು ತಂತ್ರಜ್ಞರು ಗ್ನು ತಂತ್ರಾಂಶಗಳು ಮತ್ತು ಲಿನಕ್ಸ್ ಅನ್ನು ಜೊತೆಗೂಡಿಸಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವಂತಹ ಸ್ವತಂತ್ರವಾದ ಆಪರೇಟಿಂಗ್ ಸಿಸ್ಟಂ ತಂತ್ರಾಂಶ ರೂಪಿಸುವುದಕ್ಕೆ ಮುಂದಾದರು.

ಟೋರ್ವಾಲ್ಡ್ಸ್ ತನ್ನೊಂದು ಹೇಳಿಕೆಯಲ್ಲಿ ‘ ಲಿನಕ್ಸ್ ಅನ್ನು GPL ನಡಿ ತಂದಿದ್ದು ನಾ ಮಾಡಿದ ಅತ್ಯುತ್ತಮ ಕೆಲಸಗಳಲ್ಲೊಂದು” ಎಂದು ಹೇಳಿಕೊಂಡಿದ್ದಾನೆ.

ಒ.ಎಸ್.ಐ ತತ್ವಜ್ಞಾನ / ಓಪನ್ ಸೋರ್ಸ್ ಸಾಫ್ಟ್‌ವೇರ್ ಫಿಲಾಸಫಿ

(OSI / Open Source Initiative Philosophy)

ಇದು ಸ್ವತಂತ್ರ ತಂತ್ರಾಂಶ ಫಿಲಾಸಫಿಗಿಂತ ಸ್ವಲ್ಪ ಭಿನ್ನ. ಇದರ ಸಾಮಾನ್ಯ ಕಲ್ಪನೆ/ಉದ್ದೇಶ ಬಹಳ ಸುಲಭವಾದದ್ದು: ಪ್ರೋಗ್ರಾಮರ್‌ಗಳು ಯಾವುದೇ ತಂತ್ರಾಂಶದ ಮೂಲವನ್ನು (Source Code) ಓದಲು, ಹಂಚಿಕೊಳ್ಳಲು ಮತ್ತು ಮಾರ್ಪಡಿಸಲು ಸಾಧ್ಯವಾದಲ್ಲಿ, ತಂತ್ರಾಂಶ ಬೆಳೆಯುತ್ತದೆ. ಜನರು ಇವನ್ನು ಸುಧಾರಿಸುತ್ತಾರೆ, ತಮ್ಮ ಅವಶ್ಯಕತೆಗಳಿಗೆ ಅಳವಡಿಸಿಕೊಳ್ಳುತ್ತಾರೆ, ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುತ್ತಾರೆ. ಮತ್ತು ಇದೆಲ್ಲಾ ನೆಡೆಯುವ ವೇಗವನ್ನು ನೋಡಿದರೆ, ಸಾಂಪ್ರದಾಯಿಕ ತಂತ್ರಾಂಶ ಅಭಿವೃದ್ದಿಯ ನಿಧಾನಗತಿಯ ಬೆಳವಣಿಗೆಯ ವೇಗ ನಿಮ್ಮನ್ನು ಚಕಿತಗೊಳಿಸಬಹುದು.

ಓಪನ್‌ಸೋರ್ಸ್ ಇನಿಶಿಯೇಟಿವ್ (OSI) ತನ್ನ ಗಮನ‍ವನ್ನು ಶಕ್ತಿಶಾಲಿ, ನಂಬಿಕಾರ್ಹ ಮತ್ತು ಎಫ್.ಎಸ್.ಎಫ್ ಗಿಂತಲೂ ಹೆಚ್ಚು ಉದ್ಯಮ ಸ್ನೇಹಿಯಾದ ತಂತ್ರಾಂಶಗಳ ತಾಂತ್ರಿಕ ಮೌಲ್ಯಗಳ ಕಡೆಗೆ ಹರಿಸುತ್ತದೆ. ಸ್ವತಂತ್ರ ತಂತ್ರಾಂಶಗಳ ನೈತಿಕ ಸಮಸ್ಯೆಗಳ ಕಡೆ ಕಡಿಮೆ ಗಮನಹರಿಸಿ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಹಂಚಿದ/ಹರಡಿದ (distributed) ಅಭಿವೃದ್ದಿ ವಿಧಾನ ಪ್ರಾಯೋಗಿಕ ಉಪಯುಕ್ತತೆಯ ಕಡೆಗೆ ಹೆಚ್ಚು ಗಮನ ನೀಡುತ್ತದೆ.

ಈ ಎರಡೂ ಚಳುವಳಿಗಳ ಮೂಲ ತತ್ವಜ್ಞಾನಗಳು ಬೇರೆಯಾಗಿದ್ದರೂ, ಎಫ್.ಎಸ್.ಎಫ್ ಮತ್ತು ಓ.ಎಸ್.ಐ ಒಂದೇ ನೆಲೆಯನ್ನು ಹಂಚಿಕೊಂಡು ತಂತ್ರಾಂಶ ಅಭಿವೃದ್ದಿ, ಖಾಸಗೀ ತಂತ್ರಾಂಶಗಳ ವಿರುದ್ಧ ದನಿ ಎತ್ತುವಿಕೆ, ತಂತ್ರಾಂಶ ಹಕ್ಕುಸಾಮ್ಯಗಳು (patents) ಮುಂತಾದ ಪ್ರಾಯೋಗಿಕ ನೆಲೆಗಳ ಮೇಲೆ ರಿಚರ್ಡ್ ಸ್ಟಾಲ್‌ಮನ್ ಹೇಳುವಂತೆ ಒಂದೇ ಸಮುದಾಯದ ಎರಡು ರಾಜಕೀಯ ಪಕ್ಷಗಳಂತೆ ಕೆಲಸ ಮಾಡುತ್ತವೆ.

‍ಲೇಖಕರು ಓಂಶಿವಪ್ರಕಾಶ್

September 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: