ಐವೊರಿ ಕೋಸ್ಟಿನ ಕೋಳಿಗಳು ಮಧ್ಯರಾತ್ರಿಯಿಂದಲೇ ಕೂಗಲು ತೊಡಗುತ್ತವೆ.

ಐವೊರಿ ಕೋಸ್ಟಿನಲ್ಲಿಷ್ಟು ದಿನ

ನೀಲಕಂಠ ಕುಲಕರ್ಣಿ

ಈ ಹಾಳಾದ ಐವೊರಿ ಕೋಸ್ಟಿನ ಕೋಳಿಗಳು ಮಧ್ಯರಾತ್ರಿಯಿಂದಲೇ ಕೂಗಲು ತೊಡಗುತ್ತವೆ. ಇವಕ್ಕೇನು ಹೊತ್ತು ಗೊತ್ತು ಇಲ್ಲವೇ ಇಲ್ಲವೇ? ಮುಂಜಾವದಲ್ಲಿ ಮಾತ್ರ ಕೂಗಬೇಕು ಎಂಬ ನಿಯಮಕ್ಕೆ ಬಾಹಿರವೇ ಆಫ್ರಿಕಾ ಖಂಡದ ಕೋಳಿಗಳು?!

ಊರಲ್ಲಿದ್ದಾಗ ಕೋಳಿ ಕೂಗಿದರೇನು, ಸೂರ್ಯನೇ ಬಂದು ಜಿಗಿದಾಡಿ ರಾಣಾರಂಪ ಮಾಡಿದರೂ ಏಳಲು ಜಪ್ಪಯ್ಯ ಅನ್ನದ ನಾನು ಇಲ್ಲಿ ಸರುರಾತ್ರಿಯಿಂದ ಆವಾಗಾವಾಗ ಕೂಗುತ್ತಲೇ ಇರುವ ಕೋಳಿಗಳ ಧ್ವನಿಗೆ ಹೋ ಬೆಳಗಾಯಿತು ಎಂದು ಎಚ್ಚರಗೊಂಡು ಸಮಯ ನೋಡಿಕೊಂಡಿದ್ದೇ ಕೊಂಡಿದ್ದು.

ಅದರಿಂದ ನಿದ್ದೆಯನ್ನೇನೂ ಕೊಂಡಿದ್ದಾಗಲಿಲ್ಲ. ಈ ಜುಜುಬಿ ಕೋಳಿಗಳ ಕೂಗಿಗೇಕಿಷ್ಟು ಗಾಬರಿಪಟ್ಟು ಎಚ್ಚರವಾದದ್ದೆಂದರೆ ಬಹುಶಃ ಬೆಳಗಾಗೆದ್ದು ನಮ್ಮ ಕ್ಲೈಂಟ್ ಜೊತೆ ಹೆಣಗಾಡಬೇಕಾದ ತಳಮಳಕ್ಕೆ. ಆ ನಿನ್ನ ಅಂತರಂಗದ ತಳಮಳವೇ ಕೋಳಿಗಳ ಕೂಗಿನಂತೆ ನಿನ್ನನ್ನು ಎಚ್ಚರಿಸುತ್ತಿದ್ದದ್ದು ಎಂದು ಮನಶ್ಶಾಸ್ತ್ರಜ್ಞರೂ ವೇದಾಂತಿಗಳೂ ಮಾಯಾವಾದಿಗಳೂ ಕೂಗಿ ಕೂಗಿ ವಾದಿಸಬಹುದಾದರೂ ನನಗದು ಕೋಳಿಗಳ ಕೂಗೇ ಎಂಬುದು ಸಾಪೇಕ್ಷ ಸತ್ಯದ ಚೌಕಟ್ಟಿನಲ್ಲಿ ವೇದ್ಯವಾದ ನಿತ್ಯವಾಸ್ತವದ ಬೋಧ.

ಅದಕ್ಕೆ ಪ್ರಮಾಣವಾಗಿ, ಮುಂಜಾನೆ ಎದ್ದಾಗ ಸ್ನಾನ ಮಾಡಲು ಬಿಸಿನೀರಿನ ವ್ಯವಸ್ಥೆಯ ಬಗೆಗೆ ಕೇಳಲು – ಅಥವಾ ಮನಗಾಣಿಸಲು, ಏಕೆಂದರೆ ಇಲ್ಲಿಯ ಎಲ್ಲರೂ ಫ್ರೆಂಚ್ ಮಾತ್ರ ಮಾತಾಡುತ್ತಾರಾದ್ದರಿಂದ, ನನಗೆ ಫ್ರೆಂಚ್ ಬಾರದ್ದರಿಂದ ಹೇಳುವುದು ಕೇಳುವುದು ಸಲ್ಲದು; ಅಭಿನಯ ಮಾತ್ರದಿಂದ ಮನಗಾಣಿಸಬೇಕಷ್ಟೇ – ಬಾಡಿಗೆ ಮನೆ ಮಳಿಗೆಯ ಕೇರ್-ಟೇಕರನ ಬಳಿಗೆ ಬಂದಾಗ ಹೊರಗೆ ಗೂಡಿನ ಸುತ್ತ ಮುತ್ತ ಕೋಳಿಗಳನ್ನು ಕಂಡದ್ದೂ ಇದೆ.

ಇರಲಿ… ಊರೇನೋ ಬಲು ಚೆಂದಾಗಿದೆ, ನಮ್ಮ ಕೇರಳದ ಸಮುದ್ರತಟದ ಊರುಗಳಂತೆ. ಆದರೆ ಆ ಸೊಬಗನ್ನು ಅನುಭವಿಸಲು ಎರಡು ದಿನಗಳೇ ಬೇಕಾದವು. ಕಣ್ಣು ಕಿವಿಗಳಿಗೆಲ್ಲ ಆನಂದ ಕೊಡುವ ಸೊಬಗು, ಸಂಗೀತ ಎಷ್ಟಿದ್ದರೇನು, ಹೊಟ್ಟೆ ನೆಟ್ಟಗೆ ಭರ್ತಿಯಾಗದಿದ್ದರೆ ಉಳಿದೆಲ್ಲ ಇಂದ್ರಿಯಗಳೂ ವಿಷಯವಸ್ತುಗಳನ್ನು ಥೂ ಎಂದು ಉಗಿದುಹಾಕುತ್ತವೆ.

ಇಲ್ಲಿಗೆ ಬರುವ ದಿನವೂ, ಬಂದ ಮೇಲೊಂದು ದಿನವೂ ಕಣ್ಣು ಬಾಯಿ ಬಿಟ್ಟುಕೊಂಡು ಬರಿ ಒಣ ಒಣ ಭಣ ಭಣ ಬಿಸ್ಕೀಟು ರಸ್ಕು ಬ್ರೆಡ್ಡುಗಳನ್ನು ಮಾತ್ರ ತಿಂದು ಜೀವ ಹಿಡಿದುಕೊಳ್ಳುವುದಾಯಿತು. ಅಕಸ್ಮಾತ್ತಾಗಿ ರಸ್ತೆಯಲ್ಲೊಬ್ಬ ಭಾರತೀಯ ಗುಜರಾತೀ  ಪಟೇಲನೊಬ್ಬ ದಕ್ಕಿ ಮನೆಗೆ ಕರೆದೊಯ್ದು ಹುರಿಗಡಲೆ ಚಹಾ ಸತ್ಕಾರ ಮಾಡಿ, ಇಲ್ಲಿಯೇ ನೆಲೆಸಿರುವ ತಮಿಳು ಮಹಿಳೆಯೋರ್ವಳ ನಂಬರವನ್ನು ಕೊಟ್ಟು, ಅವಳು ಭಾರತೀಯ ಅಡುಗೆ ಮಾಡಿ ಕೊಡುತ್ತಾಳೆ ಎಂದು ಸೂಚಿಸಿದಾಗ, ಅವಳಿಗೆ ಫೋನ ಮಾಡಿದರೆ ಅವಳು ಈಗ ತುಂಬ ಹೊತ್ತಾಯಿತು, ನಾಳೆ ಕೊಡುವೆ  ಎಂದದ್ದು ಉಗುಳು ನುಂಗಿಕೊಳ್ಳುವಂತಾಯಿತು.

ಆದರೇನು, ಎರಡು ದಿನ ನಡೆಸಿದ ಉಪವಾಸ ವನವಾಸದ ವ್ರತಕ್ಕೊಲಿದ ಅನ್ನಪೂರ್ಣೇಶ್ವರಿಯಂತೆ ಮರುದಿನ ಆಕೆ ಥೇಟ್ ನಮ್ಮ ತಮಿಳುನಾಡಿನ (ಹೌದು, ಆಫ್ರಿಕಾದಿಂದ ನೋಡಿದಾಗ ತಮಿಳುನಾಡು ನಮ್ಮದೇ ಆಗುತ್ತದೆ) ಅನ್ನ ಸಾಂಬಾರು ರಸಂ ಉಪ್ಪಿನಕಾಯಿ ಚಟ್ಣಿ ತಂದುಕೊಟ್ಟಾಗ ಬತ್ತಿಹೋದ ಜೀವದ ಸೆಲೆ ಮಾರ್ಪುಟಿದು ಕಾರಂಜಿಯಂತಾಯಿತು. ಸಿಗಲಾರದ್ದು ಸಿಕ್ಕಾಗ ಚೆನ್ನ ಎಂದು ಔಪಚಾರಿಕವಾಗಷ್ಟೇ ಅಲ್ಲ, ನಿರಪೇಕ್ಷವಾಗಿಯೂ ಸುರುಚಿರ ಪಾಕ ಆಕೆಯ ಕೈಯ ಕುಶಲತೆಯದು.

ನಿರಿನಿರಿಯ ಹಸುರು ಬೆಳೆಬೆಳೆದು ಮಳಿಗೆ ಮಳಿಗೆಗಳ ನಡುವೆ ನುಸುನುಸುಳಿ ಮೇಲೆದ್ದು ನೇಸರಿನ ಮಿಸುನಿಯೆಸಕವನು ನೋಡಲೆಂಬಂತೆ ಹರಡಿರುವ ಚೆಲುವ ನೋಟ. ಕಡುಗೆಂಪು, ಅಚ್ಚಗೆಂಪು, ಬಿಳಿಗೆಂಪು, ಕೇಸರಿಯ ಕೆಂಪು, ನೇರಳೆಗೆಂಪಿನ ಹೂಗೊಂಚಲುಗಳ ಮುಡಿಪುಗಳ ನಡುವೆ ಕೆಂಪು ಹಂಚಿನ ಮನೆಗಳು. ಅವುಗಳಿಕ್ಕೆಲಗಳಲ್ಲಿ ಧಿಗ್ಗನೇ ಮೈವೊತ್ತು ನಿಂತ ತೆಂಗಿನ ಮರಗಳು. ಅಲ್ಲಲ್ಲಿ ಈ ಚೆಲುವು ಮಾರ್ಪೊಳೆಯಲೆಂಬಂತೆ ಮೈಚಾಚಿಕೊಂಡಿರುವ ವಾರಿಧಿಯ ಹಿನ್ನೀರ ಸರಸ್ಸು.

ಈ ಸೊಬಗನ್ನು ಸವಿದು ಮನಸ್ಸು ಇದು ನಮ್ಮ ದೇಶವಲ್ಲ ಎಂದು ನಿಶ್ಚಯ ಮಾಡಿಕೊಳ್ಳಲು ಕ್ರಮವಾಗಿ ಸಹ್ಯಾದ್ರಿಯ ಸಾಲು, ಅರಬ್ಬೀ ಸಮುದ್ರ, ಅರೇಬಿಯಾ, ಈಜಿಪ್ತ, ಈಥಿಯೋಪಿಯಾ ದೇಶಗಳ ವ್ಯಾಪ್ತಿಯನ್ನೂ ಅವೆಲ್ಲವನ್ನೂ ದಾಟಿ ಸುಮಾರು ಹನ್ನೆರಡು ತಾಸು ಮಾಡಿದ ವಿಮಾನಪ್ರಯಾಣವನ್ನೂ ನೆನೆಸಿಕೊಂಡಿತು.

ವಿಮಾನ ಪ್ರಯಾಣ ನನಗೆ ಆಸ್ವಾದನಾಸ್ಪದವೇ ಆಗಿರುತ್ತದೆ. ಕಿಟಕಿಯ ಕಡೆಯ ಜಾಗ ಸಿಗಬೇಕಷ್ಟೇ. ದಿಗಂತರೇಖಾಸೀಮಿತ ವಸುಂಧರಾಸಾಮ್ರಾಜ್ಞಿಯ ವಿಶಾಲ ಐಶ್ವರ್ಯದ ಭೂಮತೆಯನ್ನು ಎಷ್ಟು ಕಾಲವಾದರೂ ನೋಡುತ್ತ ಮೈಮರೆಯಬಹುದು. ಅವಳ ಆಳ್ವಿಕೆಗೆ ಎತ್ತಿ ಹಿಡಿದಿರುವ ಬೆಳ್ಗೊಡೆಗಳಂತೆ ನೀಹಾರಗುಂಫನಗಳ ಗಂಭೀರ ಧೀರಮಯ ದೃಶ್ಯ, ರಾಜದಂಡದಂತೆದ್ದು ಮೆರೆವ ನೇಸರಿನ ಹೊಂಬಣ್ಣದ ಹರಹಿನ ಹೊಳಹು, ಗಡಿಯೆಡೆಗಳಲ್ಲಿ ದಿಗ್ದಂತಿಗಳ ಭದ್ರವಾದ ಕಾವಲು; ಈ ಇಳೆನಾಡಿನಲ್ಲಿ ಇರುವಿಕೆಗೆ ಕೊಂಕಿಲ್ಲ ಕೊಸರಿಲ್ಲ ತಡೆಯಿಲ್ಲ ಕಡೆಯಿಲ್ಲ ಎಂಬಂತೆ ಸಾಗಿರುವ ನಮ್ಮ ಆಕಾಶಯಾನ… ಹೌದು, ಎಲ್ಲ ತಂತ್ರವೂ ಸುಭಗವಾಗಿರುವಾಗ ಇದೆಲ್ಲ ಕಾವ್ಯ. ಏನಾದರೂ ಅತಂತ್ರವಾಗಿ ಹದಗೆಟ್ಟರೆ ದುರ್ಭರತೆಯ ಕರಾಳ ದರ್ಶನ.

ಬೆಳ್ಮೋಡಗಳ ನಡುನಡುವೆ ಮೈದೋರಿ ನಲಿವ ಹರಿದ್ಗಹನಕಾಂತಾರತನುಶ್ರೀಯುತಶೈಲಶ್ರೇಣಿವನಿತಾಲಾವಣ್ಯವನ್ನು ಆಸ್ವಾದಿಸುತ್ತಿರುವಾಗ ಲಾಗೋಸಿನಿಂದ ಉಡ್ಡಯಿಸುತ್ತಿದ್ದ ನಮ್ಮ ವಿಮಾನ  ಐವರಿಕೋಷ್ಟಿನ ನಿಲುದಾಣಕ್ಕಿಳಿಯಲು ಸ್ವಲ್ಪ ಕೆಳಕ್ಕೆ ಜಾರುತ್ತಿದ್ದಂತಯೇ ಭೋರೆಂದು ಮಂಜಿನಬ್ಬರದ ಸೇನೆ ಸುತ್ತುವರಿದು ಕಂಗೆಡಿಸಿತು. ಬೆಳ್ಪಿನ ಆವರಣವಷ್ಟೇ ವೇದ್ಯ. ಅದರಲ್ಲಿ ತರತಮತೆ ಇಲ್ಲ, ಚಲನವಿಲ್ಲ, ವಲನವಿಲ್ಲ. ಶ್ವೇತಸಾತತ್ಯದ ಭೂಮಸಾಕ್ಷಾತ್ಕಾರ. ತಮ ಆಸೀತ್ ತಮಸಾ ಗೂಢಮಗ್ರೇ ಎಂಬ ಹಾಗೆ ಬೆಳ್ಪಿನೊಳಹೊಗುವ ಬೆಳ್ಪಿನಂತೆ ಮಂಜಿನ ಕಣಗಳು ರಭಸವಾಗಿ ನುಗ್ಗಿ ಮಂಜಿನ ರಾಶಿಯಲ್ಲಿ ಮಾಯವಾಗತೊಡಗಿದವು. ಮನಸ್ಸು ಭಯಾನಕತೆಯ ಸೂಚನೆವಡೆದು ವ್ಯಾಕುಲವಾಗುತ್ತಿದ್ದಂತೆಯೇ ವಿಮಾನವಿಹಂಗಮದ ರೆಕ್ಕೆ ಅಲ್ಲಲ್ಲಿ ಅದುರತೊಡಗಿ ಗುಡುಗುಡು ಶಬ್ದವಾಗುತ್ತಿರುವಾಗ ಜಾರುಗಲ್ಲಂತೆ ಯಾನ ಮೇಲಕ್ಕೆ ಕೆಳಕ್ಕೆ ಹೊಟ್ಟೆ ತೊಳಸುವಂತೆ ತೂಗತೊಡಗಿತು.

ಅದೇನು ಒದ್ದಾಡುತ್ತಿದ್ದನೋ ಚಾಲಕ? ಅವನಿಗೆ ಆ ಹೊತ್ತಲ್ಲಿ ಏನು ನಡೆಯುತ್ತಿದೆ ಎಂದು ತಿಳಿಸುವುದಕ್ಕೂ ಆಗಲಿಲ್ಲವೇನೋ… ಮೂಕಭಯದ ನಡುವೆಯೇ “ಪದಕುಸಿಯೆ ನೆಲವಿಹುದೊ ಮಂಕುತಿಮ್ಮ” ಎಂಬುದಕ್ಕೂ ಅರ್ಥವಿರದೇ – ನೆಲ ಸಿಗುವ ಹೊತ್ತಿಗೆ ಜೀವವಿರದ ಕಲೇವರಕ್ಕೆ ನೆಲದಿಂದೇನು ಜಲದಿಂದೇನು – ಕೆಳಗೂ ಏನೂ ಕಾಣದ, ಮೇಲೆತ್ತಿ ಉದ್ಧರಿಪ ಭಗವಂತನ ಪದಕಮಲಯುಗ್ಮವಾದರೂ ಸಿಕ್ಕೀತೆಂದರೆ ಮೇಲೂ ಏನೂ ಕಾಣದ ನಿಸ್ತಂತ್ರಪರಿಸ್ಥಿತಿಯಲ್ಲಿ ತಲ್ಲಣಿಸುತ್ತಿರುವಾಗ ಕೆಳಗೇನೋ ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಿಡಮರಗಳ ಹಸುರು ಛಾವಣಿಯಂತೆ ಕಾಣಿಸುತ್ತಿದ್ದದ್ದು ಆಹಾ ನೆಲವಾದರೂ ಕಂಡಿತಲ್ಲ ಎಂದು ಸಮಾಧಾನ ಕೊಡುವಷ್ಟರಲ್ಲಿ ಕೆಳಗೆ ಹರಡಿದ್ದ ಮಂಜಿನ ಹೊದಿಕೆ ಸರಿದಾಗ ಕಂಡದ್ದು ಬೇರೆಯೇ.

ಈ ಇಬ್ಬನಿಯ ಉರ್ಬಟೆಗೆ ತತ್ತರಿಸಿ ನಡುಗುತ್ತ ಹಾರುತ್ತಿರುವ ಬೆಳ್ಳಕ್ಕಿ ಬೀಳುವುದನ್ನೇ ಇದಿರು ನೋಡುತ್ತಾ ನುಂಗಿ ನೊಣೆಯುವ ಹುನ್ನಾರದಿಂದ ಬಾಯ್ದೆರೆದು ಬಿದ್ದಿರುವ ಮೊಸಳೆಗಳ ರಾಶಿಯಂತೆಸೆವ ಹೆದ್ದೆರೆಗಳ ಗಡಣದಿಂದ ಮೈದುಂಬಿಕೊಂಡಿರುವ ಕಡಲಿನೊಡಲು! ಮೈ ಮರಗಟ್ಟಿತು. ಪ್ರಾಣಭೀತಿಯ ಪರಿಚಯವಾಯಿತು. ಬೆಂಗಳೂರಿನ ಜಯನಗರದ ಈಜುಗೊಳದಲ್ಲಿ ಒಂದು ತಿಂಗಳು ತರಬೇತಿ ಪಡೆದದ್ದಂತೂ ಇಲ್ಲಿ ಏತಕ್ಕೂ ಎಟುಕದು. ಅಪಘಾತದ ಸಮಯದಲ್ಲಿ ಏನು ಮಾಡಬೇಕೆಂದು ಗಗನಸಖಿಯರು ತಿಳಿಯಪಡಿಸುವ ಕ್ರಮಗಳ ಬಗ್ಗೆ ನನಗಾವತ್ತೂ ಬುದ್ಧಿಪೂರ್ವಕವಾದ ಅರಿಮೆಯೂ ಇಲ್ಲ, ಹೃತ್ಪೂರ್ವಕವಾದ ನಂಬಿಕೆಯೂ ಇಲ್ಲ. ಭಯದ ಜೊತೆಗೆ ವಿಮಾನದ ತುಯ್ದಾಟಕ್ಕೆ ಹೊಟ್ಟೆ ತೊಳಸುವಿಕೆಯೂ ಕೂಡಿಕೊಂಡು ವಿಪರೀತ ಸಂಕಟವಾಯಿತು.

ಕಣ್ಣು ಮಂಜಾದಂತಾಗಿ ಎದುರಿನ ಸೀಟಿಗೆ ಕೈಗೊಟ್ಟು, ಕೈಗೆ ತಲೆಯಾನಿಸಿಕೊಂಡು ಕಣ್ಣುಮುಚ್ಚಿಕೊಂಡೆ. ಸ್ವಲ್ಪ ಸಮಯದ ಅನಂತರ ವಿಮಾನ ಮತ್ತೆ ಮೇಲೇರಲು ಶುರುವಾಯಿತು. ಮಂಜಿನ ದಟ್ಟ ಹೊದಿಕೆಯಿಂದ ಬಿಡಿಸಿಕೊಂಡೀಗ ನಿರಾತಂಕವಾದ ಅವಕಾಶದಲ್ಲಿ ಸಾಗುತ್ತಿರುವಾಗ ನನಗೂ ಉಸಿರೆತ್ತಲು ಅವಕಾಶವಾಯಿತು. ಚಾಲಕನೂ ಉಸಿರೆತ್ತಿ ಉಸುರಿದ, “ಹವಾಮಾನದ ವೈಪರೀತ್ಯದಿಂದ ನಿಲ್ದಾಣಕ್ಕೆ ಇಳಿಯಲಾಗಲಿಲ್ಲ. ಬದಲಿಗೆ ಪಕ್ಕದ ದೇಶದ ಅಕ್ರಾದಲ್ಲಿಳಿದು ಕೆಲಹೊತ್ತು ಅನುಕೂಲ ವಾತಾವರಣಕ್ಕೆ ಕಾದು ಮರಳುವ. ಅನನುಕೂಲತೆಗಾಗಿ ಕ್ಷಮೆಯಿರಲಿ”.

ಅಕ್ರಾ ನಿಲ್ದಾಣ ಈ ಆಕಸ್ಮಿಕ ಆಗಂತುಕನಿಗೆ ಒಂದೂವರೆ ತಾಸು ಸ್ಥಳಾವಕಾಶ ಕೊಟ್ಟಿತ್ತು. ನಮಗಾರಿಗೂ ವಿಮಾನದಿಂದ ಕೆಳಗಿಳಿಯಲು ಅವಕಾಶ ನೀಡಲಿಲ್ಲವಾದರೂ, ಅಲ್ಲಿಯ ಒಬ್ಬಾಕೆ ನೌಕರಾಣಿ ಏರಿಬಂದು ಬಾಗಿಲಲ್ಲಿ ನಿಂತು ನಮ್ಮ ಗಗನಸಖಿಯೋರ್ವಳನ್ನು ಆಲಿಂಗಿಸಿ ಆಶ್ಚರ್ಯ ಪ್ರೀತಿ ಸಂತೋಷಗಳಿಂದ ಅರ್ಧತಾಸು ಮಾತನಾಡಿಸಿದ್ದನ್ನು ಕಂಡು ಈ ಸಖಿಯರ ಬಹುದಿನದ ಮೇಲಣದ ಮಿಲನಕ್ಕೋಸ್ಕರವೇ ಹವಾಮಾನ ತೊಂದರೆ ಕೊಟ್ಟಿತೇನೋ ಎಂದು ಮನಸ್ಸು ಮುದಗೊಂಡಿತು.

ಮರಳಿ ಬಂದಿಳಿವಾಗ ಐವೊರಿಕೋಸ್ಟಿನ ಲಲಿತಸೌಂದರ್ಯದ ವಿಹಂಗಮದೃಶ್ಯ ಮನೋಮೋಹಗೊಳಿಸಿ ಹಿಂದಣದ ಭೀತಿಯನ್ನು ಮರೆಸಿತ್ತು.

ಅದೆ ತಾನೆ ಸುರಿದ ಮಳೆಯ ಹಸಿಹಸಿ ನೆಲಹಾಸು, ಪಸೆಯಾರದ ರಸ್ತೆಗಳ ಓಟ, ಕೆಂಪೇರಿದ ಹೆಂಚಿನ ಮನೆಗಳ ಛಾವಣಿ, ಹನಿಯಿಕ್ಕುವೆಲೆಗಳ ತೂಗಿನ ಮರಗಳ ಸಾಲು ಸಾಲಿನಲ್ಲಿ ಸುಳಿವೆಲರ ತಂಪು, ಚಿಲಿಪಿಲಿಯಿಂದ ಮನುಷ್ಯರ ಸದ್ದುಗದ್ದಲವನ್ನು ಅಡಗಿಸಿರುವ ಹಕ್ಕಿಗಳ ಹಾರಾಟ… ಇದೊಂದು ಫ್ರೆಂಚ್ ದೇಶ. ಜೀವನದಲ್ಲಿ ಇಲ್ಲೀತನಕ ಇಂಗ್ಲಿಷ್ ದೇಶಗಳನ್ನೇ – ನಮ್ಮದನ್ನೂ ಸೇರಿ – ಕಂಡಿದ್ದೆ. ಇಂಗ್ಲಿಷ್ ಮಾತ್ರವೇ ಜಗತ್ತಿನಲ್ಲಿ ಸರ್ವಮಾನ್ಯವೆಂದು ಬಗೆದಿದ್ದೆ.

ಇಲ್ಲಿಯ ಸಾಮಾನ್ಯವಾಗಿ ಯಾರಿಗೂ ಇಂಗ್ಲಿಷಿನ ಗಂಧವಿಲ್ಲ. ನಮ್ಮಂಥ ಘನತಾಂತ್ರಿಕ ವರ್ಗದ ಜನರು ಮಾತ್ರ ಇಂಗ್ಲಿಷ್ ಸ್ವಲ್ಪ ಕಲಿತಿರುತ್ತಾರೆ, ಅದೂ ನಿಧಾನಗತಿಯ ಪದಗಳನ್ನು ಹೆಕ್ಕಿ ಹೆಕ್ಕಿ ಕಟ್ಟಿ ಮಾತಾಡುವ ಇಂಗ್ಲೀಷ್. ಆದರದು ಶುದ್ಧ, ವ್ಯಾಕರಣಬದ್ಧ. ಸುಮ್ಮನೇ ಇಂಗ್ಲೀಷ್ ಎಂಬಂತಲ್ಲ. ಅದು ಪ್ರಶಂಸನೀಯ. ನಮ್ಮ ಕಚೇರಿಯ ಮೀಟಿಂಗಿನಲ್ಲಿಯೂ ಏನೋ ತಿಳಿಯಪಡಿಸುತ್ತಾ ಮಧ್ಯದಲ್ಲಿ ತಡೆದು ಪಕ್ಕದಲ್ಲಿರುವಾತನಿಗೆ ಈ ಪದಕ್ಕೆ ಇಂಗ್ಲೀಷ್ ಸಮಾನಾರ್ಥಕ ಪದ ಏನು ಎಂದು ಕೇಳಿ, ತಿಳಿದುಕೊಂಡು ಮಾತು ಮುಂದುವರಿಸುವುದು ಇವರ ಪ್ರಾಮಾಣಿಕವಾದ ರೀತಿನೀತಿ, ಕೆಲಸದ ಬಗೆಗಿನ ಪ್ರೀತಿಗಳ ಅನುಭವವಾಯಿತು. ನಮ್ಮ ಅನೇಕರಂತೆ ಇಂಗ್ಲಿಷ್ ಸರಿಯಾಗಿ ಬಾರದಿದ್ದರೆ ಮೂಲೆ ಹಿಡಿದು ಕೂತು, ಇಂಗ್ಲಿಷ್ ಮಾತಾಡುವುದೇ ನಿಜವಾದ ಜ್ಞಾನ ಎಂದುಕೊಂಡವರನ್ನು ಕಾಣಲಿಲ್ಲ.

ಇವರ ಕಡುಗಪ್ಪು ಬಣ್ಣ, ನಮಗಿಂತ ಬೇರೆಯಾದ  ಮೈಮಾಟ, ಮುಖಚರ್ಯೆ, ಆಕಾರ ಗಾತ್ರ, ಇವೆಲ್ಲವುಗಳನ್ನು ಗಮನಿಸಿ ಇವರಾರು, ಇವರ ಜಾತಿ ಧರ್ಮಗಳೇನು, ಇವರ ಸಂಸ್ಕೃತಿ ನಾಗರಿಕತೆಗಳ ಮೂಲವೇನು ಎಂದು ಸ್ವಲ್ಪ ಹೊತ್ತು ಮನಸ್ಸು ಕೆದಕಿ ಕೇಳುತ್ತಿದ್ದದ್ದಂತೆ, ಆ ಕೇಳಿಕೆಯೇ ಆ ಪ್ರಶ್ನೆಗಳಿಗೆ ಅರ್ಥವಿಲ್ಲ ಎಂಬುದರ ಅರಿವನ್ನೂ ಕೊಟ್ಟಿತು. ನನ್ನ ಜಾತಿ ಧರ್ಮಗಳಿಗೆ ಏನು ಅರ್ಥ ಏನು ಸಮರ್ಥನೆ?! ಬದಲಿಗೆ ನಮ್ಮ ತಳಿಯೇನು ಇವರ ತಳಿಯೇನು ಎಂಬುದು ಹೆಚ್ಚು ಸೂಕ್ತವಾದ ಪ್ರಶ್ನೆಯೆನ್ನಿಸಿತು.

ಮರಳುವಾಗ ವಿಮಾನನಿಲ್ದಾಣದಲ್ಲಿ ಎಮಿಗ್ರೇಶನ್ ತಪಾಸಣೆ ಮಾಡುವ ಅಧಿಕಾರಿಣಿ ತಪಾಸಣೆ ಮುಗಿಸಿ ವೀಸಾ ಪುಟದ ಮೇಲೆ ಸೀಲ್ ಒತ್ತಿ, ಕೈಸನ್ನೆ ಮಾಡಿ ಬಾಯೆಡೆಗೆ ತೋರಿ ಏನಾದರೂ ಕೊಡಿ ಎಂದಳು. ಸಹೋದ್ಯೋಗಿಗಳು ತಿಳಿಸಿದ್ದರು, ಇವರೆಲ್ಲ ಹೀಗೆಯೇ, ಏನೂ ಕೊಡಬೇಡ, ಇಲ್ಲಿ ಬಡತನ ಜಾಸ್ತಿ, ಹೀಗೆಯೇ ಕಿತ್ತುಕೊಳ್ಳುತ್ತಾರೆ ಎಂದು ದೂಷಿಸಿದ್ದರು.

ಬಡತನವೋ ದುಡ್ಡಿನ ಆಸೆಯೋ, ಅವಳು ಕೇಳಿದ್ದರಲ್ಲಿ ನಮ್ಮಲ್ಲಿಯವರು ಕೇಳುವ ಲಂಚದ ಧೂರ್ತತನ ಕಂಡುಬರಲಲಿಲ್ಲ. ಕೊಡಬೇಕೆನ್ನಿಸಿತು, ೫೦೦ ಸೀಫಾ ಕೊಟ್ಟೆ. ಸಂತಸಪಟ್ಟಳು. ಎಲ್ಲೆಡೆಗೂ ಆನಂದವೊಂದೇ ಸಮಾನಧರ್ಮವೆನಿಸುತ್ತದಲ್ಲವೇ?! ಮಾರ್ಗವೇನಿದ್ದರೇನು! ನರೇಂದ್ರನಾಥನ ತಂದೆ ವಿಶ್ವನಾಥ ದತ್ತ ಮಗನಿಗೆ ಹೇಳಿದ್ದು ನೆನಪಾಯಿತು, “ಜಗತ್ತಿನ ಜನರ ಕಷ್ಟ ನಿನಗೇನು ಗೊತ್ತು? ಸ್ವಲ್ಪ ಕುಡಿತದಿಂದಲೋ ಜೂಜಿನಿಂದಲೋ ಅವರಿಗೆ ಅದರಿಂದ ಕಿಂಚಿತ್ತಾದರೂ ಸಮಾಧಾನವಾಗುವಂತಿದ್ದರೆ ಯಾಕಾಗಬಾರದು?!”. ಅದೇ ಅಕಾರಣಮೂಲದಲ್ಲಿಯೆಂಬಂತೆ ಮನಸ್ಸು ಎಲ್ಲ ಮರೆತು ಬರಿ ಆನಂದದ ಸ್ತರದಲ್ಲಿ ತೇಲಿಕೊಂಡಿರುತ್ತಿವಂತೆ, ರನ್-ವೇದತ್ತ ವಿಮಾನವು ತೆರಳುತ್ತಿದ್ದಾಗ ಕೆಲಬಲದ ಸೈನ್ ಬೋರ್ಡ್ ತಾಣಗಳಲ್ಲಿ ಕೆಲಸಮಾಡುತ್ತಿದ್ದ ಆಳುಗಳು ನಮ್ಮ ಯಾನದೆಡೆಗೆ, ಹೋಗಿ ಬನ್ನಿ ಎಂಬಂತೆ ಕೈಬೀಸುತ್ತಿದ್ದರು.

ನಮ್ಮ ಹಳ್ಳಿಯ ಹುಡುಗರು ಬಸ್ಸು, ರೈಲುಗಳತ್ತ ಕೈಬೀಸುತ್ತಿದ್ದುದು ನೆನಪಾಯಿತು. ನಾನೆಂದೂ ಹಾಗೆ ಹುಡುಗಾಟ ಮಾಡಿದ್ದು ನೆನಪಿಲ್ಲ. ಈಗ ಅವರತ್ತ ನಾನೂ ಕೈಯೆತ್ತಿ ಬೀಸಿದೆ. ಅದನ್ನವರು ಕಂಡರೋ? ಅವರ ಆ ಕ್ಷಣದ ಸಂತಸದ ಸಹೃದಯತೆಯ ಹಾರೈಕೆಯೆಂಬಂತೆ ವಿಮಾನ ಪೂರ್ವದಿಶೆಯತ್ತ ಹಾರಿತು.

ಸುಮಾರು ಆರೆಂಟು ಗಂಟೆಗಳ ಹೊತ್ತಿಗೆ ಮುಂಜಾವದಲ್ಲಿ ನನ್ನ ಕೈಗಡಿಯಾರ ಭಾರತದ ಕಾಲಗಣನಗತಿಗೆ ಹೊಂದಿಕೊಂಡು ಹೆಜ್ಜೆ ಹಾಕುತ್ತಿತ್ತಾದರೂ ನನ್ನ ಶಾರೀರಿಕವಾದ ಗಡಿಯಾರ ಇನ್ನೂ ಇದಕ್ಕೆ ಹೊಂದಿಕೊಂಡಿರಲಿಲ್ಲ. ಮನೆಗೆ ಬಂದು ನಿದ್ದೆಮಾಡಿ ಸ್ನಾನಮಾಡಿ, ಗಾಯತ್ರಿ ಜಪಿಸಿ,  ಅನಂತರ, ಸಮುದ್ರದಾಟಿ ಜಾತಿಗೆಡಿಸಿಕೊಂಡಿದ್ದಕ್ಕೆ ಹಚ್ಚಿದವಲಕ್ಕಿ, ಹಸಿ ಮೆಣಸಿನಕಾಯಿ, ಹಸಿ ಈರುಳ್ಳಿ, ಚಹಾಗಳ ಸೇವನೆ-ಆಪೋಶನಗಳಿಂದ ಪ್ರಾಯಶ್ಚಿತ್ತ ಮಾಡಿಕೊಂಡು ನನ್ನ ಬ್ರಾಹ್ಮಣ್ಯವನ್ನು ಮರಳಿಸಿಕೊಂಡೆ.

 

‍ಲೇಖಕರು avadhi

July 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಕಾವ್ಯಮಯವಾದ ಅನುಭವ. ತುಂಬಾ ಖುಷಿಯಾಯಿತು.

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಅತ್ಯುತ್ತಮ ಬರಹ..ಇನ್ನೂ ಓದುವ ಹಂಬಲ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: