ಎಸ್ ಎಲ್ ಭೈರಪ್ಪ ಅವರ ಶುದ್ಧ ಸಾಹಿತ್ಯ ಹೇಳಿಕೆ..!

ಅರವಿಂದ ಮಾಲಗತ್ತಿ

ಶುದ್ಧ ಸಾಹಿತ್ಯ ಎಂಬುದು ಭುವಿಯಲ್ಲಿ ಹುಡುಕಿದರೂ ಸಿಗದು. ಅದರಲ್ಲೂ ಭಾರತ ದಂತಹ ದೇಶದಲ್ಲಿ ಹುಡುಕುವುದು ಇನ್ನೂ ಕಷ್ಟ. ಏಕೆಂದರೆ ಶುದ್ಧ ಸಾಹಿತ್ಯ ಇದೆ ಎನ್ನುವ ಹಾಗಿದ್ದರೆ ನಮ್ಮಲ್ಲಿ ಶುದ್ಧ ಮನುಷ್ಯರೂ ಇದ್ದಾರೆ ಎನ್ನುವುದನ್ನು ಮೊದಲು ಒಪ್ಪಬೇಕಾಗುತ್ತದೆ.

ಭಾರತದಂತಹ ದೇಶದಲ್ಲಿ ಧರ್ಮ, ಮತ, ಜಾತಿ, ವರ್ಣ, ಕುಲ, ಗೋತ್ರ, ಪಂಥ, ತತ್ತ್ವ, ಸಿದ್ಧಾಂತ, ವಾದ, ಪಕ್ಷ, ರಾಜಕೀಯ, ಸಾಮಾಜಿಕ, ಆರ್ಥಿಕ ಇವುಗಳಿಂದ ಹೊರತಾಗಿ ಯಾವ ಮನುಷ್ಯ ಉಸಿರಾಡುತ್ತಿದ್ದಾನೆ ? ಹಾಡು ಹಗಲಲ್ಲಿ ಉರಿವ ಸೂರ್ಯನ ಬೆಳಕಲ್ಲಿಯೇ ಅಂಥವರನ್ನು ದೀಪ ಹಚ್ಚಿ ಹುಡುಕಬೇಕಿದೆ. ಅಂಥವರು ಯಾರಾದರೂ ಇದ್ದರೆ ಎದೆಯ ಮೇಲೆ ಕೈಯಿಟ್ಟು ಅವರೇ ಹೇಳಿಕೊಳ್ಳಬೇಕು. ಹಾಗೆ ಹೇಳಿದರೆ ಅದು ನಗೆಗೆ ಕಾರಣ ಆಗಬಹುದೆೇನೋ. ಸನ್ಯಾಸಿಯೂ ಶುದ್ಧಾತ್ಮ ನಾಗಿರುವುದು ಕಷ್ಟ. ಆತನಿಗೂ ಯಾವುದೋ ಒಂದು ಗುರಿಯಿದೆ.

ಎಸ್ ಎಲ್ ಭೈರಪ್ಪನವರು ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಒಬ್ಬರು. ಅವರ ಸಾಹಿತ್ಯದ ಧೋರಣೆಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದಾಗಲೂ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ. ಆ ಗೌರವವನ್ನಿಟ್ಟುಕೊಂಡೂ ನಾನಿದನ್ನು ಬರೆಯುತ್ತಿದ್ದೇನೆ. ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಇವರ ಮಾತನ್ನು ಪರಿಶೀಲಿಸಿದರೆ, ಶುದ್ಧ ಸಾಹಿತ್ಯ ಎನ್ನುವ ಪರಿಕಲ್ಪನೆ ಕೇಳುವುದಕ್ಕೆ ಕಿವಿಗೆ ತುಂಬಾ ಇಂಪಾಗಿದೆ. ಆದರೆ ವರ್ತಮಾನದಲ್ಲಿ ಅದು ಹುಡುಕಲಾಗದು. ಅದೊಂದು ಕಾಗದದ ಹೂವಿಗೆ ಸುಗಂಧ ದ್ರವ್ಯವನ್ನು ಲೇಪಿಸಿಟ್ಟ ಆದರ್ಶ ವಿದ್ದಂತೆ. ಅದು ಧರೆಗಿಳಿಯಲು ನಾಚುತ್ತದೆ.

ಆದರ್ಶಗಳು ಮನುಷ್ಯನಿಗೆ ಅವಶ್ಯವಾಗಿ ಬೇಕು. ಅವು ಕಲ್ಪನೆಯ ತಾರೆಗಳಾಗದೆ ವಾಸ್ತವಕ್ಕೆ ಹತ್ತಿರವಿದ್ದಾಗ ಅಂಥ ಆದರ್ಶಗಳಿಗೂ ಬೆಲೆಯಿದೆ. ಇಲ್ಲದೆ ಹೋದರೆ ಪ್ರದರ್ಶನಕ್ಕಿಟ್ಟ ಗೊಂಬೆಗಳಾಗುತ್ತವೆ. ಇದು ನನ್ನ ವ್ಯಕ್ತಿಗತ ಅಭಿಪ್ರಾಯ ಇದನ್ನು ಯಾರ ಮೇಲೂ ಹೇರ ಬಯಸಲಾರೆ.

ಈ ಹಿಂದೆ ಶ್ರೇಷ್ಠ ಸಾಹಿತ್ಯದ ಬಗ್ಗೆಯೂ ದೊಡ್ಡ ಚರ್ಚೆಯೇ ನಡೆಯಿತು. ಶುದ್ಧ ಸಾಹಿತ್ಯ ಪರಿಕಲ್ಪನೆ ಇದಕ್ಕಿಂತಲೂ ಹೊರತಾದದ್ದು ಏನಲ್ಲ. ಆಗ ಶ್ರೀಯುತ ಕೆ ವಿ ಸುಬ್ಬಣ್ಣ ಅವರು ‘ಶ್ರೇಷ್ಠ ಸಾಹಿತ್ಯ ಎಂಬುದೊಂದು ವ್ಯಸನ’ ಎಂದು ಕರೆದರು. ಆ ಮೇಲೆ ಆ ಚರ್ಚೆ ಪೂರ್ಣ ವಿರಾಮದೆಡೆಗೆ ತಿರುಗಿತು. ಶ್ರೀಯುತ ಎಸ್ ಎಲ್ ಭೈರಪ್ಪನವರ ಆಶಯ ತಪ್ಪಲ್ಲ ಆದರೆ ಹುಸಿಯಾಸೆ ಬಿತ್ತುವುದು ಪ್ರಶ್ನಾರ್ಹ.

ಯಾವುದೇ ಒಂದು ಸಿದ್ಧಾಂತ ಅಥವಾ ವಾದದ ಮೇಲೆ ಸಾಹಿತ್ಯವನ್ನು ಬೆಳೆಸುವುದರಿಂದ ಸಮಗ್ರತೆ ಬರುವುದಿಲ್ಲ ಮಿತಿ ಬೀಳುತ್ತದೆ ಎನ್ನುವುದು ನಿಜ. ಆದರೆ ಅದು ಮೇಲ್ಪದರಿನ ಸತ್ಯವೇ ವಿನಃ ಅಂತರಂಗದ ಸತ್ಯವಲ್ಲ. ವಾದ ವಾಗ್ವಾದಗಳ ಮೂಲಕವೇ ಹೊಸ ಮಾರ್ಗಗಳು ತೆರೆಯುತ್ತವೆ. ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಮುಖಾಮುಖಿಯಾದಾಲೇ ದೀಪ ಬೆಳಗುತ್ತದೆ. ವಾದ ಸಿದ್ಧಾಂತಗಳ ನಿರೂಪಣೆ ಅಥವಾ ನಿರ್ವಹಣೆ ತಪ್ಪಲ್ಲ ಅದಕ್ಕೆ ಪ್ರತಿಕ್ರಿಯಾತ್ಮಕ ಶಕ್ತಿ ಅಥವಾ ಪರ್ಯಾಯ ಶಕ್ತಿಯಾಗಿ ಹೊಸ ವಾದ ಸಿದ್ಧಾಂತಗಳು ಎದ್ದುನಿಲ್ಲಬೇಕು. ಹಾಗೆ ಎದ್ದು ನಿಲ್ಲುವ ಸಾಮರ್ಥ್ಯ ಕಾಣದೇ ಹೋದಾಗ ಚಲನೆಯಲ್ಲಿರುವ ಯಾವುದೇ ಸಿದ್ಧಾಂತ ಅಥವಾ ವಾದ ಅರ್ಥಪೂರ್ಣವಾಗಿದೆ ಎಂದೇ ಅರ್ಥ. ಪ್ರತಿ ಸಿದ್ಧಾಂತ ಎದ್ದು ನಿಂತಾಗ ಆ ಚಲನೆಯ ಸಿದ್ಧಾಂತ ನಿಷ್ಕ್ರಿಯವಾಯಿತು ಎಂದರ್ಥ. ಹೀಗಾಗಿ ವಾದ ವಿವಾದದ ಸಂಘರ್ಷಗಳು ದೇಶದ, ನಾಡಿನ, ಸಮಾಜದ ಬೆಳವಣಿಗೆಯ ಪೂರಕ ಶಕ್ತಿಗಳೇ ವಿನಹ ಮಾರಕ ಶಕ್ತಿಗಳಲ್ಲ ಎನ್ನುವ ಧೋರಣೆಯನ್ನು ನಾವು ತಾಳಬೇಕಿದೆ. ಸಾಹಿತ್ಯವೂ ಕೂಡ ಈ ಸಿದ್ಧಾಂತಗಳ ಒಂದು ಭಾಗ ಮಾತ್ರ ಆಗಿರುತ್ತದೆಯೇ ವಿನಃ ಅದೇ ಸಿದ್ಧಾಂತ ವಾಗಿರುವುದಿಲ್ಲ.

‍ಲೇಖಕರು Admin

October 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: