ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ರವಿಕುಮಾರ್ ಕವಿತೆ- ಗಾಂಧಿಗೆ…

ಎನ್ ರವಿಕುಮಾರ್

ಈ ಪುಡುಬಟ್ಟೆ ಉಟ್ಟ ಬಡಕಲು
ಮೈಯ ಮುದುಕು
ಹಾಗೆಯೇ ನನ್ನೂರಿನ ದಾರಿಯಲ್ಲಿ
ಕೋಲು ಊರೂತ್ತಾ ನಡೆದು ಹೋದ

ಹೋದ ಕಡೆಗೆಲ್ಲಾ ಜನರನ್ನು ಮಾತಾಡಿಸಿ
ತಾನೂ ಮಾತಾಡಿ
ಧ್ಯಾನಸ್ಥನಾಗಿ ಬಿಡುತ್ತಿದ್ದ
ಥೇಟ್ ಪಟದಲ್ಲಿನ ಚಿತ್ರದಂತೆ

ಜನರೋ…ಹುಚ್ಚರಂತೆ ಹಿಂಬಾಲಿಸಿದರು
ಇದ್ದ ಬದ್ದ ಕಸುಬು ಬಿಟ್ಟು
ಹೆಂಡತಿ ಬಿಟ್ಟ ಗಂಡ
ಗಂಡನ ಬಿಟ್ಟು ಹೆಂಡತಿ
ಮಕ್ಕಳು ಮರಿ ಬಿಟ್ಟ ಅಪ್ಪ- ಅವ್ವ
ಅಪ್ಪ- ಅವ್ವನ ಬಿಟ್ಟ ಮಕ್ಕಳು
ಶಾಲೆ ಬಿಟ್ಟ ಮೇಸ್ಟ್ರು
ಪಾಠ ಬಿಟ್ಟ ವಿದ್ಯಾರ್ಥಿಗಳು
ನೌಕರಿ- ಚಾಕರಿ ಬಿಟ್ಟ ಆಳುಗಳು
ಪ್ರೇಮಿಗಳು, ವಿರಹಿಗಳು
ವಿಧವೆ ವಿದುರರು..
ಮನೆ ಮಠ ಬಿಟ್ಟವರು…ಅವರು..
ಇವರು ಎಲ್ಲರೂ………
ಈ ಮುದುಕನ ನೆರಳ ನೆಚ್ಚಿ ನಡೆದರು

ಇರುಳಿಗೊಂದು ದೀಪ ಹಚ್ಚಿ
ಇದೇ ಸತ್ಯವೆಂದೂ
ಅನ್ನ ನೀರು ಬಿಟ್ಟು ಕುಳಿತು
ಇದೇ ಅಸ್ತ್ರವೆಂದೂ
ಅಹಿಂಸೆಯ ಆದಿಯೂ ಎಂದ

ದೇಶವೆಂದರೆ ಬರೀ ಮಣ್ಣಲ್ಲ
ಉಪ್ಪು ಕೂಡ
ಸ್ವಾಭಿಮಾನ,ಸ್ವಾತಂತ್ರ್ಯ ವೆಂದರೆ
ಚರಕದ ನೂಲು ತಿರುಗುವ ಗಾಣ ಕೂಡ
ಏನಂದ ? ಏನಿಲ್ಲ?
ಬಿಳಿತೊಗಲ ಸಾಮ್ರಾಜ್ಯವ
ಬಿಡದಂತೆ ಕಾಡಿದ
ಪಟ್ಟುಗಾರ ಮುದುಕ ಆಖಾಡದಲ್ಲಿ
ಗೆಲ್ಲುತ್ತಲೆ ಹೋದ
ಅರಿವ ಬಿತ್ತುತ್ತಲೆ ಹೋದ

ಹಗೆಯ ಬಗೆದು
ಶಿವನನ್ನು ಅಲ್ಹಾಃ ಎಂದೂ
ಅಲ್ಹಾಃ ನನ್ನು ಶಿವನೆಂದೂ
ಮಡಿ ಮೈಲಿಗೆಯ ಹುತ್ತ ಬಡಿದು
ಬೆಸುಗೆ ಬೆಸದ
ಪಶ್ಚಾತಾಪಗಳಿಗೆ ಪ್ರಾರ್ಥನೆಯ
ಮೊರೆ ಹೋದ

ಹತ್ಯೆಗೊಂಡರೂ ಅಳಿಯದೆ
ಬದುಕಿದ್ದಾನೆ
ಕೊಂದವರೂ ಕೂಡ
ಕೊಂಡಾಡದೆ ಬಿಡದಂತೆ

‍ಲೇಖಕರು Admin

15 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading