ಪಾರ್ವತಿ ಜಿ ಐತಾಳ್ ಓದಿದ ‘ಮುಳ್ಳುಬೇಲಿಯ ಹೂಬಳ್ಳಿ’

ಆತ್ಮ ಕಥನದ ಧಾಟಿಯ ಲಲಿತ ಪ್ರಬಂಧಗಳು ‘ ಮುಳ್ಳು ಬೇಲಿಯ ಹೂಬಳ್ಳಿ ‘

ಪಾರ್ವತಿ ಜಿ ಐತಾಳ್

‘ಮುಳ್ಳು ಬೇಲಿಯ ಹೂಬಳ್ಳಿ’ ಕೆ.ಆರ್.ಉಮಾದೇವಿ ಉರಾಳ್ ಅವರು ಬರೆದ ಹೃದ್ಯ ಪ್ರಬಂಧಗಳ ಸಂಕಲನ. ಇಲ್ಲಿನ ೧೫ ಪ್ರಬಂಧಗಳಲ್ಲಿ ಹೆಚ್ಚಿನವುಗಳು ಆತ್ಮ ಕಥನದ ಧಾಟಿಯಲ್ಲಿವೆ. ಲೇಖಕಿ ತಮ್ಮ ಗತದ ಬದುಕಿಗೆ ಸಂಬಂಧಿಸಿದ ನೂರಾರು ನೆನಪುಗಳನ್ನು ಅತ್ಯಂತ ಆಪ್ತ ಶೈಲಿಯಲ್ಲಿ ಇಲ್ಲಿ ಬಿಚ್ಚಿಡುತ್ತಾರೆ. ತಮ್ಮ ಸರಳ ನಿರಾಡಂಬರ  ಶೈಲಿಯಿಂದ ಓದುಗರನ್ನು ಹಿಡಿದಿಡುವ ಶಕ್ತಿ ಈ ಪ್ರಬಂಧಗಳಿಗಿದೆ.

ಮೊದಲ ಪ್ರಬಂಧ ‘ ಕರುಬುವವರಿರಬೇಕು ‘ ನಮ್ಮ ಅರಿ ಷಡ್ವರ್ಗಗಳಲ್ಲಿ ಒಂದಾದ ಅಸೂಯೆಯ ವಿವಿಧ ಮುಖಗಳನ್ನು  ಸೋದಾಹರಣಭ್ಯವಾಗಿ  ಚರ್ಚಿಸುತ್ತದೆ. ಒಂದಿಲ್ಲೊಂದು ರೀತಿಯಲ್ಲಿ  ಪ್ರತಿಯೊಬ್ಬ ಮನುಷ್ಯನಲ್ಲೂ ಸುಪ್ತವಾಗಿರುವ ಈ ದೌರ್ಬಲ್ಯದಿಂದ ಯಾರಿಗೂ ಬಿಡುಗಡೆಯಿಲ್ಲವಾದರೂ, ಇನ್ನೊಬ್ಬರಿಗೆ ಕೆಟ್ಟದಾಗುವಂತೆ ಮಾಡುವ ಅಸೂಯೆಗಿಂತ ತನಗೆ ಒಳ್ಳೆಯದಾಗಿ ಪರಿಣಮಿಸುವ ಅಸೂಯೆ ಸಹ್ಯ ಎನ್ನುತ್ತಾರೆ ಲೇಖಕಿ.

‘ ಗ್ರಾಮ ಗ್ರಾಮಗಳ ಪರಸಂಗವಿದೆಕೋ’ ಗ್ರಾಮಗಳ ಕ್ಷೇತ್ರ ಕಾರ್ಯಕ್ಕೆ ಹೋದ ನೆಪದಲ್ಲಿ  ಅಲ್ಲಿನ  ಸುಂದರ ನಿಸರ್ಗದ ಸೊಬಗು,  ಅಲ್ಲಿ ಭೇಟಿಯಾಧ  ಜನರ ಸೌಜನ್ಯ ,  ಅವರ ಅದಮ್ಯ ಉತ್ಸಾಹ,  ಸುಸಂಸ್ಕೃತ-ಸ್ನೇಹಮಯ ನಡವಳಿಕೆ, ಉಪಕಾರ ಮಾಡುವ ಮನೋಭಾವಗಳನ್ನು  ವರ್ಣಿಸುತ್ತದೆ. ಕೊನೆಯಲ್ಲಿ  ಆಧುನಿಕತೆಯಿಂದಾಗಿ ಹಸುರು ಪ್ರಕೃತಿಗೆ ಉಂಟಾದ ಹಾನಿಯ ಬಗ್ಗೆ ವಿಷಾದ ವ್ಯಕ್ತ ಪಡಿಸಲು ಮರೆಯುವುದಿಲ್ಲ.

ಮನುಷ್ಯ- ಮನುಷ್ಯರ ನಡುವೆ ಸಂಬಂಧಗಳನ್ನು ಬೆಚ್ಚಗಾಗಿಡುವ  ಪತ್ರ ಬರೆಯುವ  ಹವ್ಯಾಸವು  ಆಧುನಿಕತೆಯ ಭರಾಟೆಯ ಮಧ್ಯೆ ಕಳೆದು ಹೋಗಿದ್ದರ ಬಗ್ಗೆ  ಲೇಖಕಿಯ ವಿಷಾದವು ” ಕಾಗದವೆಲ್ಲಿದೆ ಕಾಗದ?’ ಎಂಬ ಪ್ರಬಂಧದಲ್ಲಿ ವ್ಮಕ್ತವಾಗಿದೆ.  ಅದರ ಜತೆಗೆ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ಬಂಧುಗಳು ಮತ್ತು ಮಿತ್ರರುಗಳ ನಡುವೆ ನಡೆಯುತ್ತಿದ್ದ ಉಭಯ ಕುಶಲೋಪರಿಯ ಪತ್ರ ವಿನಿಮಯ, ಮತ್ತು ಅಂಚೆಯವನ ಬರುವಿಕೆಗಳು ಸೃಷ್ಟಿಸುತ್ತಿದ್ದ ಸಂಭ್ರಮದ ವಾತಾವರಣವನ್ನು ಲೇಖಕಿ ನೆನಪಿಸಿಕೊಳ್ಳುತ್ತಾರೆ.

ಊರಿನ ಜನಪ್ರಿಯ ಮಿಡ್ ವೈಫ್ ಆಗ್ನೆಸ್ ಬಾಯಿಯ ಮಗಳು ಅಬೋಲಿನ ತನ್ನ ಗುಣ  ನಡತೆ, ಸ್ನೇಹ ಪೂರ್ಣ ವ್ಯಕ್ತಿತ್ವ, ಮಕ್ಕಳ ಜತೆಗೆ ಮಕ್ಕಳಾಗಿ ಬೆರೆಯುವ ಗುಣಗಳಿಂದಾಗಿ ಆಕೆ ಭೌತಿಕವಾಗಿ ಅಳಿದ ನಂತರವೂ ಮಕ್ಕಳ ಮನಸ್ಸಿನಲ್ಲಿ ಸದಾ ಉಳಿಯುವ ಪರಿಯನ್ನು  ‘ಅಬೋಲಿನ ಮತ್ತು ಹಲಸಿನ ಮರ ‘ ಚಿತ್ರಿಸುತ್ತದೆ.

‘ಬೇವೆಂದೆಣಿಸಿದ್ದು ಬೆಲ್ಲವಾದಾಗ’ ಲೇಖಕಿಯ ಒಂದು ಅನಿರೀಕ್ಷಿತ ಅನುಭವದ ಅಂದವಾದ ಚಿತ್ರಣ. ತಾನು ಅಸೌಖ್ಯಕ್ಕೆ ಗುರಿಯಾದರೆ ಮನೆಯವರೆಲ್ಲರೂ ಉಪಚಾರ ಮಾಡುತ್ತಾರೆಂದು ಹುಂಬಳಂತೆ ಕನಸು ಕಾಣುವ ಲೇಖಕಿ ಅಪಘಾತಕ್ಕೆ ಗುರಿಯಾಗಿ ವಾರಗಟ್ಟಲೆ ಹಾಸಿಗೆಯಲ್ಲೇ ಮಲಗುವಂತಾದಾಗ ಪೆಚ್ಚೆನಿಸಿದರೂ ಅಧ್ಯಾಪಕಿಯಾಗಿ  ಗಳಿಸಿದ ನೂರಾರು ಮಂದಿಯ ಪ್ರೀತಿ ಸಾಕಾರಗೊಂಡಾಗ ಇಮ್ಮಡಿ ಸಂತೋಷವಾಗುತ್ತದೆ.

‘ಮುಳ್ಳು ಬೇಲಿಯ ಹೂಬಳ್ಳಿ’  ಬಹಳ ಸೊಗಸಾದ ಒಂದು ವ್ಯಕ್ತಿ ಚಿತ್ರಣ. ಲೇಖಕಿಯ ತಂದೆಯ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಅವರ ಮನೆಯ ಸದಸ್ಯನೇ ಆಗಿ ಬಿಟ್ಟ ರಮೇಶನ ಪ್ರಾಮಾಣಿಕತೆ, ಪರಿಶ್ರಮ ಪಡುವ ಬುದ್ಧಿ, ಎಲ್ಲವನ್ನೂ ಬೇಗನೆ ಕಲಿತುಕೊಳ್ಳುವ ಅದ್ಭುತ ಸಾಮರ್ಥ್ಯ, ಜೀವನ್ಮುಖತೆಗಳು  ಬೆರಗು ಹುಟ್ಟಿಸುತ್ತವೆ.  ಕಷ್ಟಗಳ ಮುಳ್ಳು ಬೇಲಿಯನ್ನು ಯಶಸ್ವಿಯಾಗಿ ದಾಟಿ ಬಂದು ಒಂದು ಸುಂದರ ಹೂಬಳ್ಳಿಯಾಗಿ ಅವನು ಬೆಳೆಯುವ ಪರಿಯನ್ನುಲೇಖಕಿ ಮನಮುಟ್ಟುವಂತೆ ವರ್ಣಿಸೀದ್ದಾರೆ.

‘ಬನ್ನಿ ಕಾಫಿ ತಗೊಳ್ಳಿ’ ಕಾಫಿ ಕೊಡುವ ಸುಖವನ್ನು ವೈಭವೀಕರಿಸುತ್ತ ಆರಂಭವಾದರೂ ಮುಂದೆ ಮನುಷ್ಯ ಸಂಬಂಧಗಳನ್ನು ಬೆಸೆಯುವಲ್ಲಿ ಒಂದು ಕಪ್ ಕಾಫಿಯ ಪಾತ್ರ,  ಮಲೆನಾಡಿನ ಕಾಫಿ ಸಂಸ್ಕೃತಿ, ಲೇಖಕಿಯ ಕಾಫಿಯೊಂದಿಗಿನ ಬಿಟ್ಟೂ ಬಿಡಲಾಗದ ಬಂಧ – ಮೊದಲಾದ  ವಿಷಯಗಳ ಕುರಿತು  ವಿವರಣೆ ನೀಡುತ್ತಾರೆ. ‘ಬಾವಿಯೊಳಕ್ಕಿಳಿಯುತಾ .. ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಬಾವಿಗಿದ್ದ ಮಹತ್ವದ ಕುರಿತು ಹೇಳುತ್ತ ಆಧುನಿಕತೆ ಕೊರೆದ ಬೋರ್ ವೆಲ್ ಗಳಿಂದಾಗುವ ಅವಾಂತರಗಳು, ಪರಿಸರ ಹಾನಿ, ಅಂತರ್ಜಲ ನಾಶಗಳ ಕುರಿತು ದುಃಖ ವ್ಯಕ್ತ ಪಡಿಸುತ್ತದೆ. ‘ಬೆಕ್ಕಮ್ಮನ ಬಾಣಂತನ ‘ ಮತ್ತು ‘ನಡುವೆ ಸುತ್ತಿ ಸುಳಿವ ಮಾಯೆ’ ಎರಡೂ ಲೇಖಕಿ ಇಷ್ಟಪಟ್ಟು  ಬೆಕ್ಕು ಸಾಕಿದ  ಅನುಭವಗಳನ್ನು ಹೇಳುತ್ತವೆ.’ ದುಪ್ಪಟ್ಟು ಫಲಾನುಭವಿ’ಯಲ್ಲಿ ಲೇಖಕಿ  ಮಧ್ಯವಯಸ್ಸಿನ ನಂತರ ಎಲ್ಲಿ ದಪ್ಪಗಾಗಿ ಬಿಡುತ್ತೇನೋ ಎಂಬ ಭಯದಿಂದ ಆರಂಭಿಸಿದ ವಾಕಿಂಗ್ ಹವ್ಯಾಸವು ಮುಂದೆ ವಯಸ್ಸಾದಾಗ  ಆರೋಗ್ಯವನ್ನುಳಿಸಿಕೊಳ್ಳುವ ದಾರಿಯಾಗಿ ಬದಲಾಗುವುದನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.  ‘ಕಾಲನ ಜಾಲ’  ಪ್ರಬಂಧವು ಕಾಲ ಎಂಬ ಪರಿಕಲ್ಪನೆಯ ಕುರಿತಾದ ಜಿಜ್ಞಾಸೆಯ ಜತೆಗೆ  ಬಾಲ್ಯ ಕಾಲದ ನೆನಪುಗಳು,  ಕಾಲದ ವಿವಿಧ ಗುಣ ಸ್ವಭಾವಗಳ ಕುರಿತು  ಮಾತನಾಡುತ್ತ ಕಾಲವು ನಮ್ಮ ಬದುಕಿನಲ್ಲಿ ವಹಿಸುವ ಪಾತ್ರಗಳನ್ನು ಉಲ್ಲೇಖಿಸುತ್ತದೆ.

ಕೊನೆಯ ಪ್ರಬಂಧ ‘ ಪುಸ್ತಕ ಲೋಕ ‘ ಒಂದು ಗಂಭೀರ ಚಿಂತನೆ. ಮನುಷ್ಯನ ಬದುಕು ಅರ್ಥಪೂರ್ಣವಾಗಲು  ಸಾಹಿತ್ಯದ ಓದು ಎಷ್ಟು ಅಗತ್ಯವೆನ್ನುವುದನ್ನು ಹೇಳುತ್ತ ಇಂದಿನ ತಾಂತ್ರಿಕ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದರೂ ಅಲ್ಲೊಬ್ಬರು ಇಲ್ಲೊಬ್ಬರು ಪುಸ್ತಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯೋಗಗಳ ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸುತ್ತದೆ.

ಪ್ರಬಂಧದ ವಸ್ತು- ವಿಷಯಗಳು ಸಾಮಾನ್ಯವಾಗಿದ್ದರೂ  ಅವುಗಳ ಸುತ್ತು ಮುತ್ತ ಲೇಖಕಿ ನಮ್ಮನ್ನು ಸುತ್ತಾಡಿಸುವಾಗ ವಿಷಯಕ್ಕೆ ಸಂಬಂಧಿಸಿದ ನೂರು  ಇತರ ವಿಚಾರಗಳನ್ನು ಅವುಗಳಲ್ಲಿ ಆಸಕ್ತಿ ಹುಟ್ಟುವ ರೀತಿಯಲ್ಲಿ ಉಲ್ಲೇಖಿಸುತ್ತಾರೆ. ಲೇಖಕಿಯ ಸಾಮಾನ್ಯ ಜ್ಞಾನ ಬೆರಗು ಹುಟ್ಟಿಸುತ್ತದೆ.

ಉಮಾದೇವಿಯವರ  ಭಾಷೆ ಸ್ವಚ್ಛವಾಗಿದೆ. ಕನ್ನಡ ಕಾವ್ಯ, ಇಂಗ್ಲೀಷ್ ಸಾಹಿತ್ಯ, ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳಿಂದ ಆಯ್ದ ಉದಾಹರಣೆಗಳನ್ನು ಮತ್ತು ಸಾಂದರ್ಭಿಕ  ನುಡಿಮುತ್ತುಗಳ ಯಥೇಚ್ಛವಾದ  ಬಳಕೆ, ಪ್ರಕೃತಿ ಸೌಂದರ್ಯವನ್ನು ವರ್ಣಿಸುವಾಗ ಮತ್ತು ಮನುಷ್ಯರ ನಡುವಣ ಭಾವನಾತ್ಮಕ ಸಂಬಂಧಗಳ ಬಗ್ಗೆ ಮಾತನಾಡುವಾಗ ಅವರು ಬಳಸುವ ರಮ್ಯ ಶೈಲಿಗಳು ಪ್ರಬಂಧಗಳ ಆಕರ್ಷಣೆಯನ್ನು ಹೆಚ್ಚಿಸಿವೆ. ಕೆಲವೆಡೆ  ಹಾಸ್ಯವನ್ನೂ ಅವರು ಬಳಸುತ್ತಾರೆ. ಆ ಹಾಸ್ಯಕ್ಕೆ ಅವರು ತಮ್ಮನ್ನೇ ಗುರಿ ಮಾಡುವುದರ ಮೂಲಕ ತಮ್ಮ ಸೌಜನ್ಯವನ್ನು ಮೆರೆಯುತ್ತಾರೆ. ಪ್ರತಿಯೊಂದು ಪ್ರಬಂಧಕ್ಕೆ ಅವರು ಇಟ್ಠ ಶೀರ್ಷಿಕೆ  ವಿಶಿಷ್ಠವಾಗಿದ್ದು ಅವರ ಇಡೀ ಬರಹದ ಆತ್ಮೀಯ ಶೈಲಿಗೆ ಸೂಕ್ತವೆನ್ನಿಸುತ್ತದೆ.

‍ಲೇಖಕರು Admin

October 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: