ಬಾಸ್ಕೇಟ ಬಾಲಕಿ?..

ಶರಣಗೌಡ ಬಿ ಪಾಟೀಲ

ಅದು ಬೀದರ್  ಬೆಂಗಳೂರು  ಬಸ್  ಅವತ್ತು ನಾನು  ಅದೇ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ  ಒಂದು ಸೀಟು ಹೊರತು ಪಡಿಸಿ ಎಲ್ಲವೂ  ಭರ್ತಿಯಾಗಿದ್ದವು.  ಮೂರು ಜನ ಕೂಡುವ ಆ ಒಂದು   ಸೀಟಿಗೆ ಮಹಿಳೆಯೊಬ್ಬಳು ಕೂತಿದ್ದಳು. ಅವಳ ಪಕ್ಕದಲ್ಲಿ  ಒಂದು  ಬಾಸ್ಕೇಟ ಬ್ಯಾಗ ಕೂಡ ಇತ್ತು.  ಅದು ಪೂರ್ತಿ ಒಂದು ಸೀಟನ್ನೇ   ಆಕ್ರಮಿಸಿತ್ತು.   ಖಾಲಿ ಸೀಟು ನೋಡಿ  ಮೇಡಂ ಸ್ವಲ್ಪ ಆ ಕಡೆ ಕೂಳಿತುಕೊಳ್ಳಿ ಅಂತ ವಿನಮ್ರವಾಗಿ ಕೇಳಿದೆ.  ಆ ಮಹಿಳೆ   ತಕ್ಷಣ ಪ್ರತಿಕ್ರಿಯೆ ತೋರದೆ   ಕಿಟಕಿ ಕಡೆ ನನ್ನನ್ನೇ ಕೂತುಕೊಳ್ಳಲು ಸೂಚಿಸಿ  ಜಾಗ ಮಾಡಿ ಕೊಟ್ಟಳು. ಅವಳ ನಡೆ  ನನಗೆ ಒಂದು ರೀತಿ ಆಶ್ಚರ್ಯ ತರಿಸಿತು. ಕಿಟಕಿಯ ಸೀಟೆಂದರೆ ಸಹಜವಾಗಿ   ಎಲ್ಲರಿಗೂ ಇಷ್ಟ  ಯಾರೂ ಸುಲಭವಾಗಿ  ಬಿಟ್ಟು ಕೊಡುವದಿಲ್ಲ. ಕಿಟಕಿಗಾಗಿ ಅನೇಕ ಸಲ ತಂಟೆ ತಕರಾರು ನಡೆದದ್ದು ನಾನು  ನೋಡಿದ್ದೆ  ಆದರೆ ಇವಳು ನನಗೆ  ಕಿಟಕಿ ಬಿಟ್ಟು ಕೊಟ್ಟಳಲ್ಲ? ಇವತ್ತು   ನನ್ನ  ಅದೃಷ್ಟ ಛೊಲೊ ಇದೆ .ಇವಳು ಎಷ್ಟೊಂದು  ವಿಶಾಲ ಹೃದಯದವಳು  ಅಂತ ಯೋಚಿಸಿದೆ. 

 ಬಸ್  ಪ್ರಯಾಣದ  ಹಿಂದಿನ  ಕೆಲ ಘಟನೆ ನೆನಪಿಗೆ ಬಂದವು . ಹಿಂದೆ ಒಂದಿನ   ಬಸ್ ಪ್ರಯಾಣ ಮಾಡುವಾಗ  ಅದೃಷ್ಟಕ್ಕೆ  ಒಂದು  ಕಿಟಕಿ ಸೀಟು ಸಿಕ್ಕಿತ್ತು.  ನನ್ನ  ಪಕ್ಕ ಕುಳಿತ ಪ್ರಯಾಣಿಕನೊಬ್ಬ  ನನಗೆ  ವಾಂತಿ ಬರುವ ಸಾಧ್ಯತೆ ಇದೆ  ಕಿಟಕಿ ಬಿಟ್ಟು ಕೊಟ್ಟರೆ  ಪುಣ್ಯಾ ಬರುತ್ತದೆ ಅಂತ ಕೇಳಿಕೊಂಡಿದ್ದ  ನಾನು ಆಯಿತು ಅಂತ ಬಿಟ್ಟು ಕೊಟ್ಟೆ  ಆದರೆ ಆತ ತನ್ನ ಊರು ಬರುವ ತನಕ  ಅಲ್ಲೇ  ಕುಳಿತ. ಒಮ್ಮೆಯೂ ವಾಂತಿ ಮಾಡಿಕೊಳ್ಳಲಿಲ್ಲ  ಊರು ಬಂದ ಕೂಡಲೇ ಆತ  ಮುಗ್ಳನಗೆ ಬೀರಿ ಇಳಿದು ಹೋದ  ಆಗ ಅವನು ಬೇಕಂತಲೇ ಹೀಗೆ ಮಾಡಿದ್ದಾನೆ ಅಂತ ಗೊತ್ತಾಗಿ ಸುಮ್ಮನಾದೆ  ಆ ಸಂದರ್ಭ ಇನ್ನೂ   ನನ್ನ ನೆನಪಿನಂಗಳದಿಂದ ಮರೆಯಾಗಿರಲಿಲ್ಲ. 

ಬಸ್ ತನ್ನ ಪಾಡಿಗೆ ತಾನು ಡಾಂಬರ ರಸ್ತೆ ಸೀಳಿಕೊಂಡು ಚಲಿಸುತಿತ್ತು ಹೊತ್ತು ಏರುತಿದ್ದಂತೆ ಮಧ್ಯಾಹ್ನದ ಕಡು ಬಿಸಿಲು ಕಿಟಕಿಯಿಂದ ನುಗ್ಗಿ ಒಂದೇ ಸವನೆ ಮುಖಕ್ಕೆ ಚರಚರ ಬಡಿದು  ಒಂದು ರೀತಿಯ ಹಿಂಸೆ ನೀಡಿತು.  ಈ ಮಹಿಳೆ ಬೇಕಂತಲೇ ಈ ಕಿಟಕಿಯ ಸೀಟು  ಬಿಟ್ಟು ಕೊಟ್ಟಿರಬೇಕು ಅಂತ ಯೋಚಿಸಿದೆ. ನನ್ನ  ಗಮನ ಒಮ್ಮೆ   ಕಿಟಕಿಯ ಹೊರಗೆ ಮತ್ತೊಮ್ಮೆ ಪಕ್ಕದ  ಬಾಸ್ಕೇಟ ಕಡೆಗೆ  ಹರಿಯುತಿತ್ತು. ಬಣ್ಣ ಬಣ್ಣದ  ಬಟ್ಟೆ ಬರೆ ಬಾಸ್ಕೇಟ  ಸಂದಿನಿಂದ ಕಾಣುತಿದ್ದವು ಈ ಮಹಿಳೆಯರು ದೂರದ ಪ್ರಯಾಣ ಇದ್ದಿರಬಹುದು ಅಂತ ಯೋಚಿಸಿದೆ   ಮುಂದಿನ ಸ್ಟೇಜಿಗೆ ಬಸ್  ನಿಂತಾಗ ಅಲ್ಲಿಂದ  ಒಬ್ಬಿಬ್ಬರು ಪ್ರಯಾಣಿಕರು ಹತ್ತಿದರು. ಯಾರೋಬ್ಬರು ಇಳಿಯಲಿಲ್ಲ  ಅವರೂ ಕೂಡ  ಸೀಟಿಗಾಗಿ ಎಲ್ಲ ಕಡೆ  ಕಣ್ಣಾಡಿಸಿದರು. ನಮ್ಮದೊಂದು  ಸೀಟು  ಬಿಟ್ಟು ಯಾವದೂ  ಖಾಲಿ ಕಾಣಲಿಲ್ಲ. ಸೀಟಿನ ಮೇಲೆ ಬಾಸ್ಕೇಟ ಇರುವದು ನೋಡಿ ಯಾರೋಬ್ಬರೂ ತೆಗೆಯಲು ಹೇಳದೆ ಹಾಗೇ ನಿಂತುಕೊಂಡರು. ಈ ಮಹಿಳೆ  ಬಾಸ್ಕೇಟ ತೆಗೆದು ಅವರಿಗೆ ಜಾಗಾ ಮಾಡಿ ಕೊಡದೇ ಸುಮ್ಮನೆ ಕುಳಿತಳು  ಇವಳ  ವಯಸ್ಸು ನಲವತ್ತರ ಆಸುಪಾಸು ಇರಬಹುದು ಬೆಳ್ಳನೆಯ ಮೈಬಣ್ಣ  ದಷ್ಟ ಪುಷ್ಟ ಶರೀರ  ಕೋರಳು ಭಾರದ ಚಿನ್ನದ ಆಭರಣ,  ಮಿರಿಮಿರಿ ಮಿಂಚುವ ಬಳೆ, ಪೂರ್ಣಚಂದ್ರಾಕಾರದ ಅಗಲ  ಕುಂಕುಮ ಹಣೆಯ ಮೇಲೆ ರಾರಾಜಿಸುತ್ತಿತ್ತು. ಇಲಕಲ್ ರೇಷ್ಮೆ ಸೀರೆ ತಲೆತುಂಬಾ ಹೂ ಮುಡಿದಿದ್ದು  ಸಹಜವಾಗಿಯೇ ಎಲ್ಲರ  ಗಮನ ಸೆಳೆಯುತಿತ್ತು. 

ನಮ್ಮ  ಮುಂದಿನ ಸೀಟಿಗೆ ಮೂರು ಜನ ಗಂಡಸರು ಕೂತಿದ್ದರು  ಪಕ್ಕದ  ಸೀಟಿಗೆ ಇಬ್ಬರು  ಮಹಿಳೆಯರು  ಕೂತಿದ್ದರು  ಅವರು ಈ ಮಹಿಳೆಯ  ಕಡೆ ಆಗೊಮ್ಮೆ ಈಗೊಮ್ಮೆ  ದೃಷ್ಟಿ ಹರಿಸುತ್ತಾ   ಮಾತು ಕತೆಯಲ್ಲಿ  ನಿರತರಾಗಿದ್ದರು. ಒಂದೇ ಸೀಟಿಗೆ ಕುಳಿತ ಆ ಮಹಿಳೆಯರ  ಮಧ್ಯೆ ತಾತ್ಕಾಲಿಕ ಸ್ನೇಹವೂ  ಬೆಳೆದಿತ್ತು  ಯಾವೂರಿಗೆ ಹೋಗಬೇಕು? ಅಂತ ಒಬ್ಬಾಕಿ ಪ್ರಶ್ನಿಸಿದಳು. ಶಹಾಪೂರ ಹತ್ರಾ ಸಗರಿಗೆ ಹೋಗಬೇಕು ಅಂತ ಇನ್ನೊಬ್ಬ ಮಹಿಳೆ ಹೇಳಿದಳು ಒಬ್ಬಳೇ ಹೊಂಟಿಯಲ್ಲ ? ಗಂಡಸರು ಯಾರೂ ಬಂದಿಲ್ಲೇನು? ಅಂತ ಪ್ರಶ್ನಿಸಿದಳು.. ಮಗನ  ಜೊತಿನೇ  ಬಂದಿದ್ದೆ ಮನೀಗಿ ಸಂತೀ ಬೇಕಾಗಿತ್ತು  ಅಂವಾ   ಕಾಲೇಜಿಗೆ ಹೋಗಿ ಬರ್ತೀನಿ ನೀನು ಊರಿಗಿ ಹೋಗು ಅಂತ  ಬಸ್ಸಿನ್ಯಾಗ ಕೂಡಿಸಿ ಹೋದ  ಅಂತ ವಾಸ್ತವ ಹೇಳಿದಾಗ  ನಿನಗೆ  ಎಷ್ಟು ಜನ  ಮಕ್ಕಳು?  ಅಂತ ಪುನಃ  ಪ್ರಶ್ನಿಸಿದಳು   ಮಕ್ಕಳೇನು   ಬಹಳ ಜನಾ ಇದ್ದಾರೆ ನಾಲ್ಕು  ಗಂಡು ಒಬ್ಬಳೇ ಹೆಣ್ಣು   ಅವಳೂ ಕೊಟ್ಟ ಮನೀಗಿ ಹೋಗ್ಯಾಳ ಅವಳದೇನೂ ಚಿಂತಿ ಇಲ್ಲ ಅಂತ ಹೇಳಿದಳು.  ಮಕ್ಕಳ ಸಂಪತ್ತೇ ದೊಡ್ಡ ಸಂಪತ್ತು ಮಕ್ಕಳೇ ಇರದಿದ್ದರೆ ರೊಕ್ಕಾ ರುಪಾಯಿ ಗಳಸಿ ಏನು ಮಾಡೋದು?  ಬಡತನ ಸಿರಿತನ ಯಾವದೂ  ಶಾಶ್ವತವಲ್ಲ ಮಕ್ಕಳು   ಛೊಲೊ ಸಾಲಿ ಕಲ್ತು ತಮ್ಮ ಕಾಲಮ್ಯಾಲ  ನಿಂತರ ಅಷ್ಟೇ ಸಾಕು ಮನೆ ತುಂಬಾ ಮಕ್ಕಳ ತೊಗೊಂಡಾದರು  ಏನು ಮಾಡೋದು   ಅಂತ ಸಮಜಾಯಿಷಿ ನೀಡಲು ಮುಂದಾದಳು.    ನಮಗ  ಇರೋದು  ಎರಡೆಕರೆ  ಮಡ್ಡಿ ಹೊಲಾ ಅದು  ಬೆಳೆದರೆ ಬೆಳೀತು ಇಲ್ಲ ಅಂದರೆ ಇಲ್ಲ  ಕೂಲೀನೇ ಗತಿ   ಅವರಂಗ  ಬೆಳ್ಳಿ ಬಂಗಾರ  ಹಾಕೊಳ್ಳೋದು ಕನಸಿನ ಮಾತು ಅಂತ ಈ ಮಹಿಳೆಯ ಕಡೆ ಓರೆ ನೋಟ ಬೀರಿ ಹೇಳಿದಳು.  ಬೆಳ್ಳಿ ಬಂಗಾರ ತೊಗೊಂಡು ಏನು ಮಾಡತಿ ಬಂಗಾರದಂಥಾ ಮಕ್ಕಳಿದ್ದಾರೆ ಅವರೇ ನಮಗ ಆಭರಣ ಅಂತ ಇನೊಬ್ಬಳು  ಮಾತು ಮುಂದುವರೆಸಿದಳು. ಇಬ್ಬರ ಮಧ್ಯೆ ಚರ್ಚೆ ನಿರಂತರ  ಸಾಗಿತು ಆದರೆ  ನನ್ನ  ಪಕ್ಕ ಕುಳಿತ ಮಹಿಳೆ  ಮಾತ್ರ  ಅವರಿಬ್ಬರ ಮಾತಿನ  ಕಡೆ ಗಮನ ಹರಿಸದೆ ತನ್ನ  ಯೋಚನೆಯಲ್ಲೇ  ಮಗ್ನಳಾಗಿದ್ದಳು.

ಇವಳ  ಮುಖದಲ್ಲಿ ಅದೇನೊ   ಚಿಂತೆ ಮನೆಮಾಡಿತ್ತು. ಕಂಡಕ್ಟರ್ ಎಲ್ಲರಿಗೂ  ಟಿಕೆಟ್ ಕೊಡುತ್ತಾ ನಮ್ಮ ಹತ್ತಿರ  ಬಂದ ನಾನು ಹಣ ಕೊಟ್ಟು   ಟಿಕೆಟ್ ತೆಗೆದುಕೊಂಡೆ  ನೀವು ಟಿಕೆಟ್ ತೊಗೊಂಡ್ರಾ? ಅಮ್ಮಾ ಅಂತ ಈ  ಮಹಿಳೆಗೆ ಕೇಳಿದ ಇವಳು ತುಟಿ ಬಿಚ್ಚದೆ ಹ್ಞೂಂ ಅಂತ  ತಲೆಯಾಡಿಸಿದಳು.  ಆ ಇಬ್ಬರು ಮಹಿಳೆಯರಿಗೆ  ಕೇಳಿದಾಗ  ಅವರಲ್ಲಿ ಒಬ್ಬಳು ಸಿಂಧನೂರಿಗೆ ಹೋಗುವ ಟಿಕೆಟ್ ಪಡೆದಳು ಇನ್ನೊಬ್ಬಳು ಶಹಾಪೂರ ಟಿಕೆಟ್ ತೆಗೆದುಕೊಂಡಳು  ಬಸ್ ನಿರಾತಂಕವಾಗಿ  ಸಾಗಿ ಮುಂದಿನ  ನಿಲ್ದಾಣದಲ್ಲಿ ನಿಂತುಕೊಂಡಿತು ಇಳಿಯುವವರು ಯಾರೂ ಇರಲಿಲ್ಲ ಆದರೆ   ಒಬ್ಬ  ಇಳಿವಯಸ್ಸಿನ ಮುದುಕಿ ದಮ್ಮು ಬಿಡುತ್ತಾ  ಹತ್ತಿದಳು.  

 ಮುದುಕಿ  ಸೀಟಿಗಾಗಿ ಬಸ್ ತುಂಬಾ ಕಣ್ಣಾಡಿಸಿದಳು ಅವಳಿಗೂ ಇದೊಂದು ಸೀಟು ಹೊರತು ಪಡಿಸಿ ಯಾವ ಸೀಟು ಖಾಲಿ ಕಾಣಲಿಲ್ಲ ತನ್ನ  ಕೈಯಲ್ಲಿನ ಕೋಲು ಊರಿ ಖಟ್ ಖಟ್ ಸದ್ದು ಮಾಡುತ್ತಾ  ನಮ್ಮ ಕಡೆ  ಹೆಜ್ಜೆ ಹಾಕಿ ಸ್ವಲ್ಪ ಆ ಬ್ಯಾಗ ತೆಗೀರಿ ಮೊಳಕಾಲು ಬ್ಯಾನಿ ಅದಾ  ನಿಲ್ಲಾಕ ಆಗುವುದಿಲ್ಲ ಅಂತ  ದೈನ್ಯತೆಯಿಂದ ನನಗೆ  ಕೇಳಿದಳು   ಆ ಬಾಸ್ಕೇಟ ನನ್ನದಲ್ಲ ಇವರದು ಅಂತ  ಈ ಮಹಿಳೆಯ ಕಡೆ ನಾನು  ಕೈ ಸನ್ನೆ ಮಾಡಿದೆ.  ಮುದುಕಿ  ಈ ಮಹಿಳೆಯ ಕಡೆ ನೋಡಿ  ಅಮ್ಮ ಸ್ವಲ್ಪ ಆ ಬ್ಯಾಗ ತೆಗೆದು  ತೊಡಿಮ್ಯಾಲ ಇಟ್ಕೊ ತಾಯಿ ಕೂಡತೀನಿ ನಿಲ್ಲೋದಕ್ಕ ಆಗೋದಿಲ್ಲ  ಅಂತ ಕೇಳಿಕೊಂಡಳು. ಈ ಮಹಿಳೆ  ಮುದುಕಿ ಮಾತಿಗೆ ಕ್ಯಾರೇ ಅನ್ನದೇ ಹಾಗೇ ಕುಳಿತಾಗ   ಮುದುಕಿಗೆ ಸಹಜವಾಗಿಯೇ ಸಿಟ್ಟು ಬಂತು  ನಾವೂ ನಿಮ್ಮಂಗ ರೊಕ್ಕಾ ಕೊಡತೀವಿ ರೊಕ್ಕಾ ಬಿಟ್ಟು ಮತ್ತೇನಾದರೂ ಕೊಡತೀವೇನು? ಅಂತ ಸಿಟ್ಟು ಹೊರ ಹಾಕಿದಳು. ಆದರೂ ಈ ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ  ಆಗ ಮುದುಕಿ  ಸುಮ್ಮನಾಗದೆ ಓ ಕಂಡಕ್ಟರ್ ಸಾಹೆಬ್ರೆ ಸೀಟು ಖಾಲಿ ಇದ್ದರೂ ಈ ಅಮ್ಮ ಜಾಗಾ ಬಿಡ್ತಿಲ್ಲ ನೀವಾದ್ರು ಬಂದು ಹೇಳರಿ ಅಂತ ಕೂಗಿದಳು.

ಕಂಡಕ್ಟರ್ ಟಿಕೆಟ್ ಕೊಡುವ ಗಡಿಬಿಡಿಯಲ್ಲಿದ್ದ ಅವಳ ಮಾತು ಕೇಳಿಸಿಕೊಳ್ಳಲಿಲ್ಲ ಉಳಿದ ಪ್ರಯಾಣಿಕರ ಗಮನ ಇತ್ತ  ಕಡೆ ಹರಿಯಿತು ಪಾಪ ಹರೆಗೆಟ್ಟ ಮುದುಕಿ  ಎಷ್ಟಂತ ಹಂಗೇ  ನಿಲ್ಲಬೇಕು? ಜಾಗಾ ಇರದಿದ್ದರೂ ಎಷ್ಟೋ ಮಂದಿ ವಯಸ್ಸಾಗಿದೆ ಅಂತ ಇಂಥವರಿಗೆ  ಜಾಗಾ ಮಾಡಿ ಕೊಡ್ತಾರೆ ಜಾಗಾ ಇದ್ದರೂ ಕೊಡುತಿಲ್ಲ ನೋಡ್ರಿ  ಅಂತ ಕೆಲವರು  ಗುಸುಗುಸು ಚರ್ಚೆ ಆರಂಭಿಸಿದರು. 

ಬಾಸ್ಕೇಟ  ತೊಡಿಮ್ಯಾಲ ಇಟ್ಕೊಂಡು ಜಾಗಾ ಮಾಡಿಕೊಡು ಪಾಪ ವಯಸ್ಸಾದ ಮುದುಕಿ ನಿಲ್ಲಾಕ ಆಗುವುದಿಲ್ಲ  ಅಂತ ಪಕ್ಕದ ಸೀಟಿನ ಮಹಿಳೆ  ಜೋರು ದನಿಯಲ್ಲಿ  ಹೇಳಿದಾಗ  ಅದೆಲ್ಲಾ ನಿನಗ್ಯಾಕೆ ಬೇಕು?  ಇವಳೇನು ನಿನ್ನ ಸಂಬಂಧಿಕಳಾ? ನಿನ್ನ ಸೀಟೀಗಿ ನೀನು  ಕುಂತೀದಿ ಸುಮ್ಮನೆ  ಕೂಡು ಬೇಕಿದ್ದರೆ ನಿನ್ನ ಸೀಟು ಬಿಟ್ಟು ಕೊಡು ಯಾರು ಬ್ಯಾಡ ಅಂತಾರೆ  ಅಂತ ಅವಳ ಮೇಲೆ  ಸಿಟ್ಟು ಹೊರ ಹಾಕಿದಳು.   ನೋಡಲಿಕ್ಕೆ ದೊಡ್ಡ ಮನೆತನದವಳ ತರಹ  ಕಾಣಸ್ತೀದಿ  ಮಾತು ಹ್ಯಾಂಗ ಆಡ್ತಿಯಲ್ಲ? ಅಂತ ಒಬ್ಬಳು  ಮಾತಿನಲ್ಲೇ ತಿವಿದಳು.  ದೊಡ್ಡ ಮನಿ ಹೆಂಗಸಾದರೂ ಬುದ್ಧಿ ದೊಡ್ಡದಿರಬೇಕಲ್ಲ? ಸಣ್ಣ ಬುದ್ಧಿಗೆ ಏನು ಮಾಡೋದು  ಅವಳ ಜೊತೆ ಯಾಕೆ  ವಾದಾ ಮಾಡತಿ ಸುಮ್ಮನಿರು  ಅಂತ ಇನ್ನೊಬ್ಬಾಕಿ  ಸಮಾಧಾನಿಸಲು ಮುಂದಾದಳು.

 ಈ ಮಹಿಳೆ  ಅವರಿಬ್ಬರ ಮುಖ ಸಿಟ್ಟಿನಿಂದ  ನೋಡಿ ಮುಖ ತಿರುವಿ ಹಾಗೇ ಕುಳಿತಳು.    ಕಂಡಕ್ಟರ್ ಟಿಕೆಟ್ ಕೊಡುವದು ಬಿಟ್ಟು ಇತ್ತ ಕಡೆ ಬಂದ  ಏನಮ್ಮಾ ನಿಮ್ಮ ಸಲುವಾಗೇ ಬಸ್ಸಿನಲ್ಲಿ  ಈ ಎಲ್ಲಾ  ಗದ್ದಲ ನಡೀತಿದೆ ಬಾಸ್ಕೇಟ ತೆಗೆದು ಸೀಟು ಬಿಟ್ಟು ಕೊಟ್ಟಿದ್ದರೆ ಯಾವ ಸಮಸ್ಯೆಯೂ  ಆಗುತಿರಲಿಲ್ಲ ನೀವು ತಿಳಿದವರು ಹಿಂಗ ಮಾಡಿದರೆ ಹ್ಯಾಂಗ?  ಅವರೂ ನಿಮ್ಮಂಗ ರೊಕ್ಕಾ  ಕೊಟ್ಟಿರ್ತಾರೆ  ಸ್ವಂತ  ಗಾಡಿ ಮಾಡಿದಂಗ ಮಾಡ್ತೀರಲ್ಲ  ಅಂತ ಏರುಧನಿಯಲ್ಲಿ ಪ್ರಶ್ನಿಸಿದ.

 ಈ ಮಹಿಳೆ  ತನ್ನ ಪರ್ಸಿನಿಂದ ನೂರರ ನೋಟು ಹೊರ  ತೆಗೆದು  ಈ ಬಾಸ್ಕೇಟಿಗೆ ಇನ್ನೊಂದು  ಟಿಕೆಟ್ ಕೊಡ್ರಿ ಆದರೆ ಇದನ್ನು  ಮಾತ್ರ  ತೆಗೆಯುವದಿಲ್ಲ ಈಗಲಾದರು ಸಮಾಧಾನವೇ? ಅಂತ ಸಿಟ್ಟಿನಿಂದ ಪ್ರಶ್ನಿಸಿದಳು.   ಈ ಬಾಸ್ಕೇಟಿಗೆ ಹ್ಯಾಂಗ ಟಿಕೆಟ್ ಕೊಡತಾರೆ? ವಿಚಿತ್ರವಾಗಿ ಕೇಳತೀರಲ್ಲ? ಅಂತ  ಕಂಡಕ್ಟರ್ ಹೇಳಿದ.  ಇಬ್ಬರ ಮಧ್ಯೆ ಸಣ್ಣ ವಾಗ್ವಾದ ನಡೆಯಿತು.

 ಇದನ್ನು  ಕೇಳಿಸಿಕೊಂಡ   ಹಿಂದಿನ ಸೀಟಿನ ವ್ಯಕ್ತಿಯೊಬ್ಪ ತನ್ನ ಸೀಟಿನಿಂದ ಎದ್ದು  ಸುಮ್ಮನೆ  ಯಾಕೆ ತಕರಾರು  ನಾನು ಮುಂದಿನ ಸ್ಟೇಜಿಗೆ ಇಳೀತೀನಿ ಈ  ಅಜ್ಜಿ ನನ್ನ ಸೀಟಿಗೆ ಕುಳಿತುಕೊಳ್ಳಲಿ ಅಂತ ಹೇಳಿದಾಗ  ಸೀಟಿನ ಗೊಂದಲಕ್ಕೆ ತೆರೆಬಿತ್ತು. ಇವಳು  ಬಾಸ್ಕೇಟ ಮೇಲೆ ಎಷ್ಟು ಕಾಳಜಿ ಹೊಂದಿದ್ದಾಳೆ ಇದನ್ನು ತೆಗೆದು ಮೇಲ್ಗಡೆ ಜಾಲರಿಯಲ್ಲಿ ಇಟ್ಟಿದ್ದರೆ   ಏನಾಗುತಿತ್ತು ಅಂತ ನಾನು  ಯೋಚಿಸಿದೆ. 

 ಮುಂದಿನ  ಬಸ್ ನಿಲ್ದಾಣ ಇನ್ನೂ ಎರಡು ಕಿಲೋಮೀಟರ್ ಇರುವಾಗ ಒಂದು ಸ್ಟೇಜಿಗೆ ಬಸ್ ನಿಂತುಕೊಂಡಿತು   ಸುಮಾರು ಜನ ಇಳಿಯಲು ಹತ್ತಲು ಆತುರ ಪಡುತ್ತಿದ್ದರು ನಾನು ಕಿಟಕಿಯ ಹೊರಗೆ ದೃಷ್ಟಿ ಹಾಯಿಸಿದೆ ಹೊಲ ಗದ್ದೆಯಲ್ಲಿ ಹಚ್ಚ ಹಸುರಿನ ಪೈರು ನಳನಳಿಸುತಿತ್ತು ಇದೆಲ್ಲ ಯುಕೇಪಿ ಪ್ರಾಜೆಕ್ಟಿನ ಪ್ರಭಾವ ಅನ್ನುವದು ಮೇಲ್ನೋಟಕ್ಕೆ ಗೊತ್ತಾಗುತಿತ್ತು ರೈತರು ತಾವು  ಬೆಳೆದ ಮೆಣಸಿನಕಾಯಿ, ಹತ್ತಿ ಅಲ್ಲಲ್ಲಿ ಪೇರಿಸಿಟ್ಟಿದ್ದರು ಕೆಲವರು ಕೆಂಪು ಮೆಣಸಿನಕಾಯಿ ಒಣ ಹಾಕಿದ್ದರು  ಸುತ್ತಲೂ ಹರಡಿದ ಆ ಬೆಟ್ಟ ನಗರಕ್ಕೆ ರಕ್ಷಣಾ ಗೋಡೆಯಂತೆ ಕಾಣುತಿತ್ತು   ಅದರ ಮೇಲೆ ಬೆಳೆದ ಗಿಡಗಂಟಿ  ಹಸುರಿನ ಶಾಲು ಹೊದಿಸಿದಂತೆ ಭಾಸವಾಗುತಿತ್ತು  ಕಣ್ಣಿಗೆ   ಮನಮೋಹಕವಾದ ದೃಶ್ಯ ಇನ್ನೂ ನೋಡಬೇಕೆನಿಸುತಿತ್ತು  ಬಿಸಿಲು ನಾಡಿನ ನೀರಾವರಿಗೆ ಇದೊಂದು ತಾಜಾ ಉದಾಹರಣೆ ಅಂತಲೇ  ಹೇಳಬಹುದು  ಬೆಟ್ಟದ ಮೇಲೆ ಬುದ್ಧ ಮಲಗಿದಂತೆ ಕಾಣುವ ಆ ನೈಸರ್ಗಿಕ ದೃಶ್ಯ ಒಂದು ಅದ್ಭುತವೇ ಸರಿ ನನ್ನ ಕಣ್ಣು ಅದನ್ನು ಕುತೂಹಲದಿಂದ ನೋಡುವದರಲ್ಲಿ ತಲ್ಲೀನವಾದವು  ಬಸ್ ಮುಂದೆ ಸಾಗಿ  ನಿಲ್ದಾಣಕ್ಕೆ ಬಂದಾಗ ಬಸ್ಸಿನಲ್ಲಿನ ಅರ್ಧದಷ್ಟು ಜನ  ಆಗಲೇ ಇಳಿದು ಹೋದರು  ನಾನೂ  ಇಳಿಯಬೇಕೆಂದು ಸೀಟಿಂದ  ಎದ್ದಾಗ ಆ ಮಹಿಳೆಯ ಬಾಸ್ಕೇಟ ಸೀಟಿನ ಮೇಲಿರುವದು ಕಂಡು ಬಂತು  ಆದರೆ  ಮಹಿಳೆ ಕಾಣದೆ ಇವಳ ಜಾಗದಲ್ಲಿ ಆಗಲೇ  ಬೇರೊಬ್ಬಳು ಬಂದು ಕೂತಿದ್ದಳು ಅರೇ  ಬಾಸ್ಕೇಟ ಬಿಟ್ಟು ಈ ಮಹಿಳೆ ಎಲ್ಲಿ ಹೋದಳು? ಅಂತ ಗಾಬರಿಯಾಗಿ  ಯೋಚಿಸಿ ಅತ್ತ ಇತ್ತ ದೃಷ್ಟಿ ಹಾಯಿಸಿದೆ ಆದರೆ ಅವಳೆಲ್ಲೂ ಕಾಣಲಿಲ್ಲ ಈ ಸೀಟಿಗೆ ಕುಳಿತ ಮಹಿಳೆಗೆ ಕೇಳಿದಾಗ ನನಗೂ ಗೊತ್ತಿಲ್ಲ ನಾನು ಬಂದಾಗ ಇಲ್ಲಿ  ಯಾರೂ ಇರಲಿಲ್ಲ ಅಂತ ಹೇಳಿದಳು. 

ಸ್ವಲ್ಪ ಹೊತ್ತಿನ ನಂತರ   ಕಂಡಕ್ಟರ್ ಬಸ್ ಬಿಡಲು ಸೀಟಿ ಊದಿದ ತಡೀರಿ ಕಂಡಕ್ಟರ್ ಆ ಮಹಿಳೆ ಬಾಸ್ಕೇಟ ಬಿಟ್ಟು ಹೋಗಿದ್ದಾಳೆ ಅಂತ ಜೋರು ದನಿಯಲ್ಲಿ ಹೇಳಿದೆ ಯಾರು ಆ ತಕರಾರು ಮಾಡಿದ  ಮಹಿಳೆಯೇ?   ಅವಳೆಲ್ಲಿ ಬರ್ತಾಳೆ ಆಗಲೇ ಹಿಂದಿನ ಸ್ಟೇಜಿಗೆ ಇಳಿದು ಹೋದಳು ಅಂತ  ಹೇಳಿದ  ನನಗೆ  ಗಾಬರಿಯಾಯಿತು  ಎಂತಹ ಮಹಿಳೆ  ಇವಳು ಇದೇ ಬಾಸ್ಕೇಟ ಸಲುವಾಗಿ ತಕರಾರು ತೆಗೆದು  ಒಂದು ಸೀಟಿನ ರೊಕ್ಕಾ ಕೊಡಲು ತಯಾರಾಗಿದ್ದಳು  ಈಗ  ಬಾಸ್ಕೇಟ  ಬಿಟ್ಟು ಇಳಿದು ಹೋಗ್ಯಾಳಲ್ಲ ಅಂತ ಯೋಚಿಸಿದೆ ಎಲ್ಲರಿಗೂ  ವಿಷಯ ಗೊತ್ತಾಗಿ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿದರು  ಆ ಮಹಿಳೆ ಬಿಟ್ಟು ಹೋದ ಈ ಬಾಸ್ಕೇಟ ಏನು ಮಾಡತೀರಿ  ಅಂತ ಒಬ್ಬಾತ  ಕಂಡಕ್ಟರನಿಗೆ  ಪ್ರಶ್ನಿಸಿದ  ಅದನ್ನೇನು ಮಾಡೋದು?  ಇಲ್ಲಿಯೇ ಕಂಟ್ರೋಲರ್ ರೂಮಿನಲ್ಲಿ ಇಟ್ಟು ಹೋಗತೀನಿ ಬೇಕಾದರೆ  ಅವಳು  ತಾನೇ ಬಂದು ತೊಗೊಂಡು  ಹೋಗ್ತಾಳೆ ಅಂತ ಕಂಡಕ್ಟರ್   ಆ ಬಾಸ್ಕೇಟ ಕೈಗೆತ್ತಿಕೊಂಡಾಗ  ಚಟ್ಟನೆ ಚೀರುವ ಧನಿಯೊಂದು  ಬಾಸ್ಕೇಟಿನಿಂದ ಕೇಳಿ ಬಂತು ಪ್ರಯಾಣಿಕರು ಗಾಬರಿಯಾಗಿ ಇದೇನು ವಿಚಿತ್ರ ಬಾಸ್ಕೇಟ ಚೀರುತಿದೆಯೇ? ಅಂತ ಪ್ರಶ್ನಿಸಿದರು ಬಾಸ್ಕೇಟ ಹ್ಯಾಂಗ ಚೀರತಾದೆ ಅಂತ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು  ಕಂಡಕ್ಟರ್ ಬಾಸ್ಕೇಟ ಮುಚ್ಚಳಿಕೆ ತೆಗೆದು  ನೋಡಿದ  ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು ಅದರಲ್ಲಿ  ಹಸಿಗೂಸೊಂದು ಕೈ ಕಾಲು ಅಲುಗಾಡಿಸುತಿತ್ತು.   ತಲೆಯ ಮೇಲೆ ಎಣ್ಣೆ ಮೆತ್ತಿದ ಕೂದಲು ಪೂರ್ಣ ಚಂದ್ರಾಕಾರದ  ದುಂಡು ಮುಖ ಹಾಲಿನಂಥ ಮೈಬಣ್ಣ ಹಣೆಯ ಮೇಲೆ ಕಾಡಿಗೆಯ ಚುಕ್ಕೆ  ಎದ್ದು ಕಾಣುತಿತ್ತು    ಆ ಕೂಸನ್ನು ಒಬ್ಬರಾದ ಮೇಲೆ ಒಬ್ಬರು ಎತ್ತಿಕೊಂಡು ಎಂಥಹ ಮುದ್ದಾಗಿದೆ  ಅಂತ  ವರ್ಣಿಸಿದರು  

 ಹಿಂದಿನ ಸೀಟಿಗೆ ಕುಳಿತ ಮುದುಕಿ ಮೆಲ್ಲಗೆ  ಎದ್ದು ಬಂದು  ಆ ಕೂಸನ್ನು ಎತ್ತಿಕೊಂಡು  ಗಲ್ಲಕ್ಕೆ ಲೊಚಕ್ ಅಂತ ಮುದ್ದು ಕೊಟ್ಟು ನನ್ನ ಆಯಸ್ಸು ನಿನಗೂ ಸಿಗಲಿ ಎಂದಳು.   ಮುದುಕಿ  ಕೂಸಿಗಿ  ಮ್ಯಾಲ ಎಷ್ಟು  ಕಾಳಜಿ ಮಾಡ್ತಾಳೆ ನೋಡ್ರಿ ಕೂಸಿನ ತಾಯಿ ಸೀಟು ಕೊಡದಿದ್ದರೂ ಜರಾನೂ ಮನಸ್ಸಿಗೆ ಹಚಗೊಂಡಿಲ್ಲ   ಅಂತ ಪ್ರಯಾಣಿಕರು ಪರಸ್ಪರ    ಮಾತಾಡಿಕೊಂಡರು.  ಕೂಸಿನ ಅಮ್ಮ  ಇನ್ನೂ ಯಾಕ ಬರಲಿಲ್ಲ  ಯಾರಾದ್ರು   ನೆನಪು ಹೋಗಿ ಕೂಸಿಗೆ  ಬಿಟ್ಟು ಹೋಗ್ತಾರಾ?  ಅಂತ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿದರು  ಸ್ವಲ್ಪ ಸಮಯದ ನಂತರ ಅದು  ಹೆಣ್ಣು ಕೂಸು ಅಂತ ಗೊತ್ತಾಯಿತು ಇನ್ನೂ ಅವಳು ಬರೋದು ಗ್ಯಾರಂಟಿ ಇಲ್ಲ    ಬೇಕಂತಲೇ ಈ ಕೂಸಿಗೆ   ಬಿಟ್ಟು ಹೋಗಿರಬೆಕು  ಕನಿಕರ ಇಲ್ಲದ ಕಲ್ಲು ಮನಸ್ಸಿನವಳು ಅಂತ ಅವಳಿಗೆ  ಎಲ್ಲರೂ ಬೈಯತೊಡಗಿದರು. 

ಇಂಥಾ ಬಂಗಾರದಂಥಾ ಕೂಸಿಗೆ ಬಿಟ್ಟು ಹೋಗಲು ಅವಳ ಮನಸ್ಸಾದರೂ ಹ್ಯಾಂಗ ಬಂತು ಇದಕ್ಕೆ ಬ್ಯಾನಿ ತಿಂದು ಹಡೆದಿಲ್ಲೇನು?  ಅಂತ ಮುದುಕಿ ಹಿಡಿ   ಶಾಪ ಹಾಕಿ   ನನಗೆ ಕೊಟ್ಟರ ನಾನಾದರು ಸಾಕತೀನಿ ಎಂದಳು . ಮುದುಕಿಯ ಹೃದಯ ವೈಶಾಲ್ಯತೆಗೆ ಎಲ್ಲರೂ  ಭೇಷ್ ಅಂತ ಹೊಗಳಿದರು ಆದರೆ  ಕಂಡಕ್ಟರ್ ಅದನ್ನು ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿ ತನ್ನ ಕರ್ತವ್ಯ ಮುಗಿಸಿದ  ಎಂಥಹ ಕಾಲ ಬಂತು ನೋಡ್ರಿ ಅಂತ ಎಲ್ಲರೂ ಪರಸ್ಪರ ಚರ್ಚಿಸಿ ನಿಟ್ಟುಸಿರು ಬಿಟ್ಟರು  ಬಸ್ಸು  ತನ್ನ  ಪ್ರಯಾಣ ಮುಂದುವರೆಸಿತು . 

‍ಲೇಖಕರು Admin

October 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: