ಅಂತೂ ‘ಕಾಂತಾರ’ವನ್ನು‌ ನೋಡಿಬಂದೆವು…

ಪ್ರಸಾದ್ ರಕ್ಷಿದಿ

ಕಾಂತಾರ ನಮ್ಮೂರಿಗೂ ಬಂದಿದೆ. ನಮ್ಮ ಸೋಮಾರಿ ಕಟ್ಟೆಗಳಲ್ಲಿ, ಟೀ ಅಂಗಡಿಗಳಲ್ಲಿ, ಹಾದಿ ಬೀದಿಯಲ್ಲಿ ಕಾಂತಾರದ ಮಾತು ಚರ್ಚೆ ನಡೆದಿದೆ.

ಒಮ್ಮೆ ನೋಡಿ ಎಂದು ಹಲವರ ಒತ್ತಾಯ.. ಹಲವು ವಿಮರ್ಶೆಗಳು, ದೈವಗಳ “ಕಾರ್ಣಿಕ”ದ ಬಗ್ಗೆ ಜನರ ಬಾಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಲವಾರು ಕತೆಗಳು. ಎಲ್ಲವನ್ನೂ ‌ನೋಡಿ ಕೇಳಿ… ಅಂತೂ ಕಾಂತಾರವನ್ನು‌ ನೋಡಿಬಂದೆವು.

ಆಧುನಿಕ ರಂಗಭೂಮಿಯ ಆಚಾರ್ಯರುಗಳಲ್ಲಿ Stanislavsky ಬಹಳ ಮುಖ್ಯನಾದವನು. ಈತನ An actor prepares ಆಧುನಿಕ ರಂಗಭೂಮಿಗೆ ಬರೆದ ಬಾಷ್ಯವೆಂದೇ ಕರೆಯಲಾಗುತ್ತಿತ್ತು. ನಂತರ ರಂಗಭೂಮಿಯಲ್ಲಿ ಹಲವು ಹುಡುಕಾಟಗಳು, ದಾರಿಗಳು ಮೂಡಿದವು.

ಆದರೆ Stanislavsky ಯ ರಂಗ ಸಿದ್ಧಾಂತ ನಂತರ ಬಹಳವಾಗಿ ಬಳಕೆಯಾದದ್ದು ಹಾಲಿವುಡ್ ಸಿನಿಮಾಗಳಲ್ಲಿ.
An actor prepares ನಲ್ಲಿ ಒಂದು ಸಂಗತಿ ಬರುತ್ತದೆ.

ಅದು ಹೀಗಿದೆ.
“ಒಂದು ದೊಡ್ಡ ತುಂಡು ಒಣ ಮಾಂಸವನ್ನು ತೆಗೆದುಕೊಳ್ಳಿ. (ಅದು ಒಂದು ರಂಗ ದೃಶ್ಯ ಅಂದುಕೊಳ್ಳಿ)
ಅದನ್ನು ಸಣ್ಣ ತುಂಡು‌ಮಾಡಿ, ಒಂದಷ್ಟು ಮಸಾಲೆ ಸೇರಿಸಿ, ಉಪ್ಪು ಕಾರ ಹುಳಿ ಸೇರಿಸಿ…( ಸಂಗೀತ, ಇತರ ಪರಿಕರಗಳು,ವಸ್ತ್ರಾಲಂಕಾರ ಹೀಗೆ) ಹದವಾಗಿ ಬೇಯಿಸಿ ( ಭಾವನೆಗಳನ್ನು ತುಂಬಿ,) ಸೊಗದಾದ ತಟ್ಟೆಯಲ್ಲಿ ಇಡಿ..
……
ಹೀಗೆ ಮಾಡಿದರೆ ಬೂಟಿನ ಚಕ್ಕಳದ ತುಂಡೂ ರುಚಿಯಾದೀತು.” (ಇದು Stanislavsky ಯ ಬರಹದ ಒಂದು ಸಣ್ಣ ತುಣುಕು, ನಾನು ಅಷ್ಟನ್ನು ಮಾತ್ರ ಉದಾಹರಣೆಗೆ ಬಳಸಿದ್ದೇನೆ) Hollywood ಇದನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿತು. ಅದಕ್ಕೆ ಬೇಕಾದ ತಾಂತ್ರಿಕ ಪರಿಣತಿಯನ್ನೂ ಸಾಧಿಸಿದವು. ನೂರಾರು ಸಿನಿಮಾಗಳು. ಪ್ರಪಂಚಾದ್ಯಂತ ಹಣ ಸೂರೆ ಮಾಡಿದವು.

ಭಾರತದ ಆ ಬಗೆಯ ತಾಂತ್ರಿಕತೆ ಯನ್ನು ಗಳಿಸಲು ಬಹಳ ಕಾಲ ಬೇಕಾಯಿತು.. ಆದರೆ ಜನಪರವೆಂದು ತೋರಿಸಿಕೊಳ್ಳುತ್ತಲೇ, ಯಾರನ್ನೂ ವಿರೋಧಿಸದ, ವ್ಯವಸ್ಥೆಯ ವಿರುದ್ಧ ಎನ್ನುವ ಒಂದೆರಡು ಡೈಲಾಗುಗಳನ್ನು ಉದುರಿಸಿ ಉದ್ದೇಕಿಸಿ ಶಾಂತಗೊಳಿಸಿ ಮತ್ತೆ ಇನ್ನೊಂದು ರೀತಿಯಲ್ಲಿ ಜನವಿರೋಧಿ ವ್ಯವಸ್ಥೆ ಯನ್ನೇ ಸಮರ್ಥಿಸುವ,ನೂರಾರು ಜನಪ್ರಿಯ ಸಿನಿಮಾಗಳು ನಮ್ಮಲ್ಲೂ ಬಂದಿವೆ.

ಆದರೆ ಅವುಗಳಿಗೆ ಹಾಲಿವುಡ್ ನ ತಾಂತ್ರಿಕ ಪರಿಣತಿಯಾಗಲೀ ಸೂಕ್ಷ್ಮ ನಾಜೂಕುತನವಾಗಲೀ ಸಿದ್ದಿ ಸಿರಲಿಲ್ಲ.
ರಿಷಬ್ ಶೆಟ್ಟಿ ತಮ್ಮ ಕಾಂತಾರದಲ್ಲಿ ಅವೆಲ್ಲವನ್ನೂ ಸಾಧಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಮತ್ತೆ ಅಬ್ಬರಿಸಿದೆ.
ಇಲ್ಲಿ ಒಳ್ಳೆಯ ರಂಗ ತಂತ್ರ ಬಳಕೆಯಾಗಿದೆ. ಭೂತ ಕೋಲದ ಸಂದರ್ಭಗಳು, ಶಿವ ಧನಿಯ ಮನೆಯೊಳಗೆ ಬಂದು ಕುರ್ಚಿಯೆಳೆದು ಕೂತು ಊಟ ಮಾಡುವ ದೃಶ್ಯ ಹೀಗೆ ಹಲವಾರು ಇವೆ.

ನಾನು ಮೊದಲಿನಿಂದ ಈ ಕಾಡಿನಲ್ಲಿ ಇದ್ದವರು.. ನೀವು ನಮ್ಮ ಅನುಮತಿ ಪಡೆದಿದ್ದೀರಾ ? ಎನ್ನುವ ಪ್ರಶ್ನೆ ಕೂಡಾ ಇಲ್ಲಿ ರಂಜನೀಯ ಗುಣವಾಗಿ ಮಾರ್ಪಡುವುದನ್ನು ಗಮನಿಸಿ.. ಚಿತ್ರದಲ್ಲಿ ಕೊನೆಯವರಗೂ ಆ ಪ್ರಶ್ನೆ ಯಾವುದೇ ಗಾಂಭೀರ್ಯ ವನ್ನು ಪಡೆಯುವುದಿಲ್ಲ.. ಉತ್ತರಿಸುವ ಪ್ರಯತ್ನವನ್ನೂ ಮಾಡುವುದಿಲ್ಲ.

ಇಡೀ ಚಿತ್ರದಲ್ಲಿ ಸುಂದರ ದೃಶ್ಯ ವೈಭವ ಇದೆ. ಬೇಕಾದಷ್ಟು ಫೈಟ್ಸ್ ಇದೆ. ಪ್ರೀತಿ ಪ್ರಣಯ ಇದೆ.. ಸರ್ಕಾರದ ವಿರುದ್ಧ ಸವಾಲು ಹಾಕುವ ಹೀರೋ ಇದ್ದಾನೆ..

ತಮಾಷೆಯ ಪ್ರಸಂಗಗಳಿವೆ, ತುಳುನಾಡಿನ ಸಾಂಸ್ಕೃತಿಕ ಸಮೃದ್ಧಿಯನ್ನು ಸಾರುವ ಸಂಗತಿಗಳಿವೆ..
ದುಷ್ಟ ಭೂಮಾಲಕನ ಒಳ್ಳೆಯ ಹೆಂಡತಿ ಇದ್ದಾಳೆ.

ಭೂಮಾಲಕನನ್ನು ದೈವವೇ ಶಿಕ್ಷಿಸುತ್ತಿದೆ. (ಭೂಮಾಲಕನ ಬುದ್ದಿ ಮಾಂದ್ಯ ಮಗುವಿನ ಮೂಲಕ ಅತ್ಯಂತ ಕ್ರೂಡ್ ಆಗಿ ಇದನ್ನು ತೋರಿಸಲಾಗಿದೆ) ಸಾಮಾನ್ಯ ಜನರನ್ನು ಭಯ.ವಿಸ್ಮಯ ಗೊಳಿಸಬಲ್ಲ ಪಂಜುರ್ಲಿ ದೈವ ಇದೆ..
ಉತ್ತಮ‌ ಕ್ಯಾಮರಾ ಚಳಕವಿದೆ.. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ..

Stanislavsky ಯ ಸಿದ್ದಾಂತ ವ್ಯಾಪಾರೀ‌ ಬಳಕೆಯಂತೆ ಎಲ್ಲವನ್ನೂ ಪಾಕ ಮಾಡಿ ರುಚಿಕರವಾಗಿ ಬಡಿಸಲಾಗಿದೆ..
Silvester Stallone ಸಿನಿಮಾ ನೋಡಿದಂತೆ ಕಾಂತಾರವನ್ನು ಸಕಲೇಶಪುರ ದ ತೇಜಸ್ವಿ ಚಿತ್ರಮಂದಿರದಲ್ಲಿ ನೂರು ರೂಪಾಯಿ ಕೊಟ್ಟು ನೋಡಿ ಬಂದೆವು.

ಈ ಚಿತ್ರ ಮಂದಿರದಲ್ಲಿ ಕಿವಿ ತೂತು ಬೀಳುವಂತೆ ಅಬ್ಬರ ಸೌಂಡ್ ಯಾಕೆ ಕೊಡುತ್ತಾರೋ ತಿಳಿಯದು. ನಾನು ಕಿವಿ‌ಮುಚ್ಚಿಕೊಂಡು ( ಆಗ ಡೈಲಾಗ್ ಅರ್ಥವಾಗುತ್ತಿತ್ತು) ಸಿನಿಮಾ ನೋಡಿದೆ.

‍ಲೇಖಕರು Admin

October 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: