ಜಿ ಎನ್ ನಾಗರಾಜ್ ಅಂಕಣ- ಈಜಿಪ್ಟಿನಲ್ಲಿ ದೇವರ ಮುಂಬಡ್ತಿ ಹಿಂಬಡ್ತಿ ರಾಜಕೀಯ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

29

ಈಜಿಪ್ಟ್ ಸಾಮ್ರಾಜ್ಯ ಜಗತ್ತಿನ ಅತಿ ಪ್ರಾಚೀನ ಸಾಮ್ರಾಜ್ಯಗಳಲ್ಲೊಂದು. ಭಾರತದ ಸಾಮ್ರಾಜ್ಯಗಳಿಗಿಂತ ಮೂರು ಸಾವಿರ ವರ್ಷಗಳಷ್ಟು ಹಳೆಯದು. ‌ಭಾರತದಲ್ಲಿ ವಿವಿಧ ದೇವರುಗಳ ಉಗಮ ಮತ್ತು‌ ಅವುಗಳ ಪುರಾಣಗಳನ್ನು ಅಧ್ಯಯನ ಮಾಡುವುದಕ್ಕೆ ಈ ದೇಶದ ದೇವರುಗಳು ಮತ್ತು ಪುರಾಣಗಳು ಸಹಾಯ ಮಾಡುತ್ತವೆ.

ಈಜಿಪ್ಟ್‌ ದೇಶದಲ್ಲಿ ರಾ, ಪ್ಟಾ, ಹೋರಸ್, ಒಸೈರಿಸ್, ಐಸಿಸ್, ನೆಫ್ಥಿಸ್, ಸೆಥ್, ಆಟುಮ್, ಅಮುನ್, ನಟ್, ನನ್ ಮೊದಲಾದ ಅನೇಕ ಬುಡಕಟ್ಟು ದೈವಗಳು ವಿವಿಧ ಬುಡಕಟ್ಟುಗಳಿಂದ ಆದಿಯಿಂದ ಪೂಜಿತವಾಗಿದ್ದವು. ಇವುಗಳಲ್ಲಿ ರಾ,ಆಟುಮ್, ಹೋರಸ್ ಸೂರ್ಯನ ರೂಪಿನ ದೈವಗಳು, ಐಸಿಸ್ ಒಸೈರಿಸ್ ಮೊದಲಾದವು ಕೃಷಿಯನ್ನು ಕಂಡು ಹಿಡಿದ ದೈವಗಳು. ಅರ್ಧ ಟಗರು ದೇಹದ ಅಮುನ್ ಕುರಿಗಾಹಿಗಳ ದೈವ. ಮೇಲಿನ ಕೆಲ ದೈವಗಳು ಗಿಡುಗ,  ಹೋರಿ, ಸಿಂಹ, ನರಿಗಳೊಂದಿಗೆ ಸಮೀಕರಿಸಲ್ಪಟ್ಟಿದ್ದವು.

ಮುಂದೆ ಈಜಿಪ್ಟ್  40 ಕುಲಾಧಿಪತ್ಯಗಳಾಗಿ, ರಾಜ್ಯಗಳಾಗಿ ಆಳಲ್ಪಟ್ಟ ಕಾಲದಲ್ಲಿ ಈ ದೈವಗಳು ಈ ಅಧಿಪತ್ಯಗಳ ಮತ್ತು ಅವುಗಳ ರಾಜಧಾನಿ ನಗರಗಳ ದೇವತೆಗಳಾಗಿ ಪೂಜಿತವಾದವು.

ಈ ಕುಲಾಧಿಪತ್ಯಗಳನ್ನು, ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯಗಳಾಗಿ ಆಳಲ್ಪಟ್ಟಾಗ ಕೆಲವು ದೈವ, ದೇವತೆಗಳ ಅದೃಷ್ಟ ಖುಲಾಯಿಸಿತು.

ಹೊಸ ಪುರಾಣಗಳ ಸೃಷ್ಟಿ :

ದಕ್ಷಿಣ ಈಜಿಪ್ಟ್ ರಾಜ್ಯ ಉತ್ತರ ಈಜಿಪ್ಟ್ ರಾಜ್ಯವನ್ನು ಗೆದ್ದು ಏಕೀಕೃತ ಸಾಮ್ರಾಜ್ಯ ಸ್ಥಾಪನೆ ಮಾಡಿದ ಮೇಲೆ ಮೆಂಫಿಸ್ ನಗರ ಸಾಮ್ರಾಜ್ಯದ  ರಾಜಧಾನಿಯಾಯಿತು. ಆಗ ಮೆಂಫಿಸ್ ನಗರದ ಮುಖ್ಯ ದೇವತೆಯಾಗಿದ್ದ ಪ್ಟಾ ದೇವತೆ ಇಡೀ ಸಾಮ್ರಾಜ್ಯದ ದೇವತೆಯಾಯಿತು.  ಬೇರೆ ದೇವರುಗಳ, ಗ್ರಾಮ,ನಗರಗಳ,ಜನರ, ದೇವಾಲಯಗಳ ಸೃಷ್ಟಿಕರ್ತನೆಂದು ಪ್ರಸಿದ್ಧನಾದ ಈ ದೇವರು ಮಾತು,ಮಂತ್ರಗಳ ಉಚ್ಚಾರಣೆ, ಹಾಡುಗಳಿಗೆ ಪ್ರಸಿದ್ಧ. ಶಿಲ್ಪ ಕಲೆಗೆ ಕೂಡಾ ಪ್ರಸಿದ್ಧ.

ಆದರೆ ಮೆಂಫಿಸ್‌ನಿಂದ ರಾಜಧಾನಿಯನ್ನು ಬದಲಾಯಿಸಿದ ಕೂಡಲೇ ಈ ದೇವರ ಪ್ರಾಮುಖ್ಯತೆ ಇಳಿಮುಖವಾಯಿತು. ಮೆಂಫಿಸ್ ನಗರದ ಮತ್ತೊಂದು ದೇವತೆಯಾದ ಸೊಕಾರ್‌ ಜೊತೆ ಕೂಡಿಸಿ ಪ್ಟಾ-ಸೊಕಾರ್ ಎಂದು ಪೂಜಿಸಲಾಯಿತು.

ಹೀಲಿಯೋಪೋಲಿಸ್ ಎಂಬುದು ಬಹುಕಾಲ ಈಜಿಪ್ಟಿನ ರಾಜಧಾನಿಯಾಗಿದ್ದ ನಗರ.  ಸೂರ್ಯಾರಾಧನೆಯ ಪಂಥಕ್ಕೆ ಸೇರಿದ ಆಟುಮ್ ಈ ನಗರದ ಅಧಿದೇವತೆಯಾಯಿತು. ಈಜಿಪ್ಟಿನ ಬಹು ಮುಖ್ಯ ದೇವರುಗಳಾದ  ಒಸೈರಿಸ್ ಮತ್ತು ಸೆಥ್ ಎಂಬ ಗಂಡು ದೇವತೆಗಳು ಮತ್ತು ಅವರ ಸೋದರಿಯರು ಮತ್ತು ಹೆಂಡತಿಯರಾದ ಐಸಿಸ್ ಮತ್ತು ನೆಫ್ಥಿಸ್ ಆಟುಮ್ ದೇವರ ಮರಿಮಕ್ಕಳು. ಹೀಗೆ ಆಟುಮ್‌ ದೇವರೇ ಎಲ್ಲರಿಗಿಂತ ಶ್ರೇಷ್ಟ ಎಂದು ತೋರಿಸಲು ಈಜಿಪ್ಟಿನ ದೇವರುಗಳೆಲ್ಲ ಆಟುಮ್‌ಗಿಂತ ಕೆಳಗೆ ಎಂದು ತೋರಿಸುವ ಎನಿಯಡ್ ಎಂಬ ಪುರಾಣವನ್ನು ಹೆಣೆಯಲಾಗಿದೆ.

ಈಜಿಪ್ಟಿನ ಸಾಮ್ರಾಟರಾದ ಫೆರೋಗಳು ಹೋರಸ್ ಎಂಬ ಸೂರ್ಯಾರಾಧನೆಯ ಮತ್ತೊಂದು ರೂಪದ ಅಂಶ ಎಂದು ಘೋಷಿಸಿಕೊಳ್ಳಲಾಗಿದೆ. ಹೋರಸ್ ಉದಯ ಸೂರ್ಯನ ರೂಪವಂತೆ. ಆದ್ದರಿಂದ ಬೆಳಗುವ,ಬೆಳೆಯುವ ಸೂರ್ಯನ ಇವನ ರೂಪ ಫೆರೋಗಳ ಸಾಮ್ರಾಜ್ಯದ ಮತ್ತು ಅವರ ಅಧಿಕಾರದ  ವಿಸ್ತರಣೆಯ ಸಂಕೇತವಾಯಿತು. ಈ ದೇವತೆ ಬಹಳ ಪ್ರಾಚೀನ ದೇವತೆ.

ಸೂರ್ಯ ದೇವನಿಗೂ ವಯಸ್ಸಾಯಿತು :
ಆದರೆ ಹೋರಸ್‌ನನ್ನು ರಾ ಎಂಬ ಮತ್ತೊಬ್ಬ ಸೂರ್ಯ ದೇವತೆಯ ಉದಯ ಕಾಲದ ರೂಪ, ಅವನ ಪುತ್ರ ಎಂದು ಭಾವಿಸಲಾಯಿತು. ಆದರೆ ಸಾಮ್ರಾಟರುಗಳು,ಅವರ ರಾಜಧಾನಿಗಳು ಬದಲಾದಂತೆ ಈ ಪುರಾಣವೂ ಬದಲಾಯಿತು.

ರಾ ಎಂಬ ಸೂರ್ಯ ದೇವತೆಗೆ ವಯಸ್ಸಾದಾಗ (!!!) ತನ್ನ ಹೆಂಡತಿ ಐಸಿಸ್  ಶೋಧಿಸಿದ ಗೋಧಿ,ಬಾರ್ಲಿಗಳನ್ನು ಬೇಸಾಯ ಮಾಡುವುದು ಹೇಗೆ,ದ್ರಾಕ್ಷಿಗೆ ಚಪ್ಪರ ಕಟ್ಟುವುದು ಹೇಗೆ ಎಂದು ಹೇಳಿಕೊಟ್ಟ ಒಸೈರಿಸ್ ರಾ ದೇವತೆಯ ಸಿಂಹಾಸನದಲ್ಲಿ ವಿರಾಜ ಮಾನವಾಯಿತು. ಮೇಲೆ ಹೇಳಿದಂತೆ ಒಸೈರಿಸ್,ಐಸಿಸ್ ಇಬ್ಬರೂ ಆಟುಮ್ ದೇವತೆಯ ಮರಿ ಮಕ್ಕಳು, ಆಕಾಶ ಮತ್ತು ಭೂಮಿ ದೇವತೆಗಳ ಮಕ್ಕಳು ಎಂದು, ಒಸೈರಿಸ್ ತನ್ನ ಸೋದರಿ ಐಸಿಸ್ ಅನ್ನೇ ಮದುವೆಯಾಗಿ ಹುಟ್ಟಿದ ಮಗ ಹೋರಸ್ ಎಂದು ಬಿಂಬಿಸಲಾಯಿತು.

ಫೆರೋ ಸಾಮ್ರಾಟ ಹೋರಸ್‌ನ ರೂಪ ಎಂಬುದು ಮಾತ್ರ ಬದಲಾಗಲಿಲ್ಲ.  ಫೇರೋ ಎಂಬ ಉದಯ ಸೂರ್ಯ, ಸರ್ವ ಸೃಷ್ಟಿಕರ್ತ ಆಟುಮ್‌ನ ಮರಿಮಗನ ಮಗನಾಗಿ, ಕೃಷಿ ದೇವತೆಗಳಾದ ಒಸೈರಿಸ್,ಐಸಿಸ್‌ಗಳ ಮಗನಾಗಿ ಈ ಎಲ್ಲ ಗೌರವಾನ್ವಿತ ದೇವತೆಗಳನ್ನೂ ಪ್ರತಿನಿಧಿಸುವಂತೆ ಪುರಾಣಗಳನ್ನು ಸೃಷ್ಟಿಸಲಾಯಿತು. ಹೀಗೆ  ಜನಪ್ರಿಯವಾಗಿದ್ದ ವಿವಿಧ ಬುಡಕಟ್ಟು ದೈವಗಳನ್ನು ಒಟ್ಟು ಸೇರಿಸಿ ಒಂದು ಕುಟುಂಬ, ಒಂದು ವಂಶ ವೃಕ್ಷವನ್ನೇ ಸೃಷ್ಟಿಸಲಾಗಿದೆ.

ರಾಕ್ಷಸೀಕರಣಗೊಂಡ ದೇವತೆಯ ತಮ್ಮ :

ಸೆಥ್ , ಇದೇ ಆಟಮ್ ದೇವತೆಯ ವಂಶಕ್ಕೆ ಸೇರಿದವನು. ಒಸೈರಿಸ್,ಐಸಿಸ್,ನೆಪ್ಥಿಸ್ ದೇವತೆಗಳ ಸೋದರ. ಆದರೆ ಈ ದೇವತೆಯನ್ನು ಈಜಿಪ್ಟನ್ನು ಆಕ್ರಮಣ ಮಾಡಿದ ನೆರೆಯ ರಾಜ್ಯವೊಂದು ತನ್ನ ರಾಜಧಾನಿಯ ದೇವತೆಯೆಂದು ಸೆಥ್‌ನನ್ನು ಪೂಜಿಸಿತೊಡಗಿದರು. ನಂತರದ ಒಬ್ಬ ಫೆರೋ ಈ ರಾಜ್ಯದ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಂಡ.

ಆ ನಂತರ ಸೆಥ್‌ನನ್ನು ಮರುಭೂಮಿಯ ದೇವತೆ, ಚಂಡಮಾರುತದ ದೇವತೆ, ಯುದ್ಧದ ದೇವತೆ, ಕುತಂತ್ರಗಳ ದೇವತೆ, ಅರಾಜಕತೆಯನ್ನುಂಟು ಮಾಡುವ ದೇವತೆ. ತನ್ನ ಅಣ್ಣ ಒಸೈರಿಸ್‌ನನ್ನು ಕೊಂದು,ಅವನ ದೇಹವನ್ನು ತುಂಡು ತುಂಡು ಮಾಡಿ ಎಸೆದವನು ಎಂದು ರಾಕ್ಷಸೀಕರಿಸಲಾಗಿದೆ.

ಕೆಲವರು ಇವನನ್ನು ದೇವರು ಎಂದೇ ಪೂಜಿಸಿದರೆ ಮತ್ತೆ ಕೆಲವರು ಇವನನ್ನು ರಾಕ್ಷಸ (demon ) ಎಂದು ಪರಿಗಣಿಸುತ್ತಾರೆ.

ಹೊಸ ದೇವತೆಯ ಸೃಷ್ಟಿ :
ಮುಂದೊಂದು ಕಾಲದಲ್ಲಿ ಮತ್ತೊಬ್ಬ ಫೆರೋನ ಕಾಲದಲ್ಲಿ  ಟಗರು ರೂಪದ ಅಮುನ್ ಸಾಮ್ರಾಜ್ಯದ ದೇವತೆಯಾದ.  ಸಾಮ್ರಾಟನ ರಾಣಿ ಟಗರು ರೂಪದ ಅಮುನ್‌ನೊಡನೆ ಸಂಭೋಗ ಮಾಡಿ ಮಕ್ಕಳನ್ನು ಪಡೆಯುತ್ತಾಳೆಂಬ ಪುರಾಣ ಈಜಿಪ್ಟಿನ ದೇವಾಲಯದ ಗೋಡೆಗಳ ಭಿತ್ತಿ ಶಿಲ್ಪವಾಗಿದೆ. ಇದರಂತೆ ಅಮುನ್ ಆರಾಧಕ ಫೆರೋಗಳು ಅಮುನ್‌ನ ನೇರ ಮಕ್ಕಳೇ  ಆಗಬಿಡುತ್ತಾರೆ. ( ನಮ್ಮ ದೇಶದ ಅಶ್ವಮೇಧ ಯಾಗದಲ್ಲಿ ಯಾಗದ ಯಜಮಾನನಾದ ರಾಜನ ರಾಣಿ ಅಶ್ವಮೇಧದ ಕುದುರೆಯೊಂದಿಗೆ ಸಂಭೋಗ ಮಾಡುವಳೆಂಬ ಪ್ರಸಂಗ ಋಗ್ವೇದ, ಯಜುರ್ವೇದ ಮತ್ತು ಬ್ರಾಹ್ಮಣಗಳಲ್ಲಿ ದಾಖಲಾಗಿದೆ ಎಂಬುದನ್ನು  ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.)

ಮುಂದೆ  ಅಮುನ್‌ ಪೂಜಕ ಫೆರೋನೊಬ್ಬನ ರಾಣಿಯೊಂದಿಗೆ ಪಂಥದ ಪುರೋಹಿತರು ಸಂಚು ಮಾಡಿ ಅವಳೇ ರಾಜ್ಯಭಾರ ಮಾಡುವಂತೆ ಸಹಕರಿಸುತ್ತಾರೆ ಮತ್ತು ಅವಳ ಮಲಮಗನಿಗೆ ರಾಜ್ಯಾಧಿಕಾರ ತಪ್ಪಿಸುತ್ತಾರೆ. ಈ ಕಾರಣಕ್ಕೆ ಮುಂದಿನ ಫೆರೊಗಳು ಅಮುನ್‌ನ ಪುರೋಹಿತರಿಗೆ ಎದುರಾಳಿಗಳಾದ ರಾ ದೇವತೆಯ ಪಂಥದ ಪುರೋಹಿತರನ್ನು ಪ್ರೋತ್ಸಾಹಿಸಿದರು. ಹೊಸ ಹೋರಸ್ ಎಂಬ ದೇವತೆಯನ್ನೇ ರೂಪಿಸಿ, ಅವನಿಗೆ ದೇವಾಲಯ ಕಟ್ಟಿದ್ದೂ ಅಲ್ಲದೆ  ಫೆರೋ ತನ್ನ ಹೆಸರನ್ನೇ ಈ ದೇವತೆಯ ಹೆಸರಿಗೆ ಬದಲಾಯಿಸಿಕೊಂಡನಂತೆ. ಈ ದೇವತೆಯನ್ನು ಹೊರತುಪಡಿಸಿ ಬೇರಾವ ದೇವತೆಯನ್ನೂ ಪೂಜಿಸಬಾರದೆಂದು ಕಟ್ಟಾಜ್ಞೆ ಹೊರಡಿಸಿದನಂತೆ.

ದಕ್ಷಿಣ ಅಮೇರಿಕದ ಇಂಕಾ ಸಾಮ್ರಾಜ್ಯದಲ್ಲಿ :
ಈಜಿಪ್ಟ್ ಜಗತ್ತಿನ ಅತ್ಯಂತ ಪ್ರಾಚೀನ ಸಾಮ್ರಾಜ್ಯಗಳಲ್ಲೊಂದಾದರೆ ಇಂಕಾ ಮತ್ತು ಮಾಯಾ ಸಾಮ್ರಾಜ್ಯಗಳು ಜಗತ್ತಿನ ಇತ್ತೀಚಿನ ಸಾಮ್ರಾಜ್ಯಗಳು. ಈ ಸಾಮ್ರಾಜ್ಯಗಳೂ ವಿವಿಧ ಕುಲಾಧಿಪತ್ಯಗಳಿಂದ ಉದಯಿಸಿದವು. ಯಾವ ಕುಲ ಬೇರೆಲ್ಲರನ್ನು ಸೋಲಿಸುತ್ತದೋ ಆ ಕುಲದ ಅಧಿ ದೇವತೆ ಸಾಮ್ರಾಜ್ಯದ ಅಧಿ ದೇವತೆಯಾಗುತ್ತಿತ್ತು. ಹೀಗೆ ವಿವಿಧ ಸಾಮ್ರಾಟರುಗಳ ಕಾಲದಲ್ಲಿ ವಿವಿಧ ದೇವತೆಗಳ ಅದೃಷ್ಟ ಖುಲಾಯಿಸುತ್ತಿತ್ತು. ಅಂತಹ ದೇವತೆಗಳಿಗೆ ಮುಂಬಡ್ತಿ ದೊರೆಯುತ್ತಿತ್ತು.

ಯುರೋಪಿನಲ್ಲಿ : ಕ್ರಿಸ್ತ ಧರ್ಮ ಹರಡುವುದಕ್ಕೆ ಮೊದಲು ವಿವಿಧ ರೋಮ್ ಸಾಮ್ರಾಟರು,ಗ್ರೀಕ್ ನಗರ ರಾಜ್ಯಗಳು, ಬ್ರಿಟನ್, ಸ್ಕಾಟ್ಲೆಂಡ್, ಐರ್ಲೆಂಡ್, ಜರ್ಮಾನಿಕ್ ಮತ್ತಿತರ  ದೇಶಗಳಲ್ಲಿ ರಾಜ ವಂಶದ ದೇವಿ,ದೇವತೆಗಳೆಂಬ ಪದ್ಧತಿಯಿತ್ತು. ಆಯಾ ರಾಜ ವಂಶ ಆಡಳಿತ ಮಾಡುವಾಗ ಆ ದೇವತೆಯ ಆರಾಧನೆಗೆ ಪ್ರಾಮುಖ್ಯತೆ ದಕ್ಕುತ್ತಿತ್ತು. ಅದಕ್ಕೆ ಸಂಬಂಧಿಸಿದ ದೇವಾಲಯಗಳು  ಕಟ್ಟಲ್ಪಡುತ್ತಿದ್ದವು.

ಕ್ರಿಸ್ತ ಧರ್ಮ ಹರಡಿದ ಮೇಲೆ ಈ ಎಲ್ಲ ಸೃಷ್ಟಿಕರ್ತ ದೇವರನ್ನು ಪಾಗನ್ ದೈವಗಳೆಂದು ಕರೆದು ಪಕ್ಕಕ್ಕೆ ದೂಡಿದ್ದು ಒಂದು ದೊಡ್ಡ ಬದಲಾವಣೆ. ಈ ದೇವರುಗಳನ್ನು ಪೂಜಿಸಿದವರಿಗೆ ಶಿಕ್ಷೆ, ಅದರ ಪೂಜಾರಿಗಳಿಗೆ, ಅದರಲ್ಲೂ ಮಹಿಳಾ ಪೂಜಾರಿಣಿಯರಿಗೆ ಬಹಿರಂಗವಾಗಿ ಸುಡುವುದು ಮತ್ತಿತರ ಹತ್ಯೆಗಳು ಕಾದಿರುತ್ತಿತ್ತು.

ಭಾರತದಲ್ಲಿಯೂ ವಿವಿಧ ಪ್ರದೇಶಗಳಲ್ಲಿ ಸ್ಥಾಪಿತವಾದ ರಾಜ್ಯ ,ಸಾಮ್ರಾಜ್ಯಗಳಲ್ಲಿ ಆಯಾ  ಕುಲ ದೇವತೆಗಳ ಪೂಜೆ ಮಾಡುವುದು ಸಾಮಾನ್ಯವಾಗಿತ್ತು. ಒಂದೇ ರಾಜ್ಯದಲ್ಲಿಯೂ ರಾಜ ವಂಶಗಳು ಬದಲಾದಂತೆ ದೇವರುಗಳ ಬದಲಾವಣೆಯನ್ನು  ಅಥವಾ ಪ್ರಾಮುಖ್ಯತೆಯ ಬದಲಾವಣೆಯನ್ನು ಕಾಣಬಹುದು. ಮುಂದಿನ ಸಂಚಿಕೆಗಳಲ್ಲಿ ಭಾರತದ ವಿಶಿಷ್ಟತೆಯ ಬಗ್ಗೆ ತಿಳಿದುಕೊಳ್ಳೋಣ.

ಹೀಗೆ ದೇವರುಗಳ ಮುಂಬಡ್ತಿ,ಹಿಂಬಡ್ತಿ ಎಂಬ  ಬೆಳವಣಿಗೆಗಳು ಕೇವಲ ಭಾರತಕ್ಕೆ ಸೀಮಿತವಾದ ಪ್ರಕ್ರಿಯೆಯಲ್ಲ.  ವಿಶ್ವಾದ್ಯಂತ ಇತಿಹಾಸದುದ್ದಕ್ಕೂ ನಡೆದಿದೆ. ಹಲವು ಹತ್ತು ಸಾವಿರ ವರ್ಷಗಳ ಕಾಲದ ಬುಡಕಟ್ಟು ಜೀವನದಲ್ಲಿ ಬುಡಕಟ್ಟುಗಳ ಬದುಕಿನ ಪರಿಸ್ಥಿತಿ ಮತ್ತು ಸಾಮಾಜಿಕ ಬೆಳವಣಿಗೆಗಳ ಮೇಲೆ ದೈವಗಳು ರೂಪಗೊಳ್ಳುವ ಪ್ರಕ್ರಿಯೆ ಅವಲಂಬಿಸಿತ್ತು. ಜನ ಸಮುದಾಯ ಇಡಿಯಾಗಿ ತಾವು ನಂಬುವ, ಪೂಜಿಸುವ ದೈವಗಳನ್ನು ಆಯಾ ಸಮುದಾಯಗಳ ಒಳಗಿನಿಂದಲೇ ರೂಪಿಸಿಕೊಳ್ಳುತ್ತಿದ್ದರು. ಅಮ್ಮ ದೈವಗಳು ಪಕ್ಕಕ್ಕೆ ಸರಿದು ಪುರುಷ ದೈವಗಳು ಅಸ್ತಿತ್ವಕ್ಕೆ ಬಂದಾಗಲೂ ಕೂಡಾ ಅದು ಸಾಮುದಾಯಿಕ ಪ್ರಕ್ರಿಯೆಯಲ್ಲಿ ಆಯಾ ಸಮುದಾಯದೊಳಗಿಂದಲೇ ದೈವಗಳು ರೂಪುಗೊಂಡಿದ್ದವು.

ಆದರೆ ರಾಜ ಪ್ರಭುತ್ವಗಳು ಉದಯಿಸಿದ ಮೇಲೆ ಅವರುಗಳ ಅವಶ್ಯಕತೆಗೆ ತಕ್ಕಂತೆ ಬುಡಕಟ್ಟು, ಕುಲಗಳ ಪರಿಧಿಯನ್ನು ಮೀರಿ ಜನರೆಲ್ಲ ಪೂಜಿಸುವಂತಹ ಹೊಸ ಸಾರ್ವತ್ರಿಕ ದೇವರುಗಳ ಉಗಮವಾಯಿತು. ಇಂತಹ ಸಾರ್ವತ್ರಿಕ ದೇವರುಗಳ ಆಯ್ಕೆ,ಅವರ ಆರಾಧನೆ, ಅವರುಗಳಿಗೆ ದೇವಾಲಯಗಳ ನಿರ್ಮಾಣ  ರಾಜ್ಯಾಡಳಿತದ ಅಂಗವಾದವು. ಈ ಹೊಸ ಪರಿಸ್ಥಿತಿಯಲ್ಲಿ ರಾಜರುಗಳ ರಾಜಕೀಯಕ್ಕೆ ತಕ್ಕಂತೆ ದೇವರುಗಳ ಹಿಂಬಡ್ತಿ,ಮುಂಬಡ್ತಿಗಳಾಗತೊಡಗಿದವು. ಪ್ರತಿಯೊಬ್ಬ ದೇವರನ್ನೂ ಸರ್ವ ಸೃಷ್ಟಿಕರ್ತನೆಂದೇ ಆಯಾ ಪ್ರದೇಶಗಳಲ್ಲಿ ನಂಬಲಾಗಿತ್ತು. ಆದರೆ ರಾಜ ರಾಜರುಗಳ ರಾಜ್ಯಾಡಳಿತವನ್ನು ಉಳಿಸಿಕೊಳ್ಳುವ, ಹೊಸ ಪ್ರದೇಶಗಳನ್ನು ಗೆಲ್ಲುವ , ಜನ ಸಾಮಾನ್ಯರ ವಿಧೇಯತೆಯನ್ನು ಪಡೆಯುವ ಅವಶ್ಯಕತೆಗೆ ತಕ್ಕಂತೆ ಈ ಸರ್ವ ಸೃಷ್ಟಿಕರ್ತರೂ ಬೇರೆಯಾಗುತ್ತಿದ್ದುದು ಧಾರ್ಮಿಕ ಇತಿಹಾಸದ ಒಂದು ಚೋದ್ಯ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: