ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಎಸ್ ಶ್ರೀಧರ ಮೂರ್ತಿ ಕವಿತೆ-

ಎನ್ ಎಸ್ ಶ್ರೀಧರ ಮೂರ್ತಿ

ಚೆಲುವೆಗೆ
‘ಈಗ ಬಂದೆಯಾ.. ಕುಳಿತುಕೋ
ಇದೊಂದು ತುರ್ತು ಬರಹ
ಮುಗಿಸಿ ಬರುತ್ತೇನೆ ಮಾತಿಗೆ.

‘ನಿನ್ನೆ ಬರುತ್ತೇನೆ ಎಂದಿದ್ದೆ’
ಈ ಕ್ಷೇತ್ರವೇ ಹೀಗೆ
ಯಾರಿಗೂ ಕಾಯುವುದಿಲ್ಲ
ಕಥೆ ಚೆನ್ನಾಗಿತ್ತು-
ಅವರಿಗೆ ಅವಸರ
ಬೇರೆ ನಾಯಕಿಯನ್ನು ಆರಿಸಿ ಬಿಟ್ಟರಂತೆ

ಬೇಸರಿಸ ಬೇಡ-
ಗುಳಿ ಕೆನ್ನೆ ಚೆಲುವೆ ನೀನು
ತಿದ್ದಿ ಮಾಡಿಟ್ಟಂತಹ ಮೈಮಾಟ
ಬರೆದು ಕೊಟ್ಟಿದ್ದನ್ನು
ತಪ್ಪಿಲ್ಲದೆ ಹೇಳ ಬಲ್ಲ
ಜಾಣ್ಮೆಯೂ ನಿನಗಿದೆ
ಇಷ್ಟಿದ್ದರೆ ಸಾಕು
ಉಳಿದಿದ್ದು
ನನಗೆ ಬಿಡು
ಗುಟ್ಟಿನ ಅರಮನೆ
ಕೆಡಹಿ ಕೊಡುತ್ತೇನೆ
ರೆಪ್ಪೆಯಂತೆ ನಿನ್ನನ್ನು ಕಾಯುತ್ತೇನೆ.

ಹೇಳಿದ್ದೇನೆ
ಇನ್ನಿಬ್ಬರಿಗೆ
ಸಿಕ್ಕೇ ಸಿಕ್ಕುತ್ತದೆ ಅವಕಾಶ
ಶಾಶ್ವತವಲ್ಲವೀ ಚೆಲುವು
ಅಷ್ಟರಲ್ಲಿಯೇ ನೀನು ಗೆಲ್ಲಬೇಕು
ಇಲ್ಲಿ
ಸಲ್ಲ ಬೇಕು.

ಅದೇಕೆ ಕಣ್ಣಿನಲ್ಲಿ ನೀರು
ತುಸು ಹತ್ತಿರ ಬಾ
ಹೇಳ ಬೇಕು
ಒಂದು ಗುಟ್ಟಿನ ಮಾತು
ಬದುಕು ಎಂದರೆ
ಬರೀ ಅವಕಾಶ ಮಾತ್ರವಲ್ಲ
ಈ ಝಗಮಗಿಸುವ ದೀಪಗಳು
ಕಿವಿ ತುಂಬು ಚಪ್ಪಾಳೆ
ಎಲ್ಲವೂ ಭ್ರಮೆ..
ಸದಾ ಸಲ್ಲುವೆ ಗೆಲ್ಲುವೆ
ಎನ್ನುವ ಭ್ರಮೆ
ಎಲೆ
ನೀಳ ನಾಸಿಕದ ಚೆಲುವೆ
ಮೊದಲು ನೀನು
ಸೋಲಲು ಕಲಿಯ ಬೇಕು
ಅಮೇಲೆ..
ಬದುಕು
ನಿನ್ನ ಸಲಹುತ್ತದೆ.

ನಿನ್ನ
ಕಣ್ಣಿನಲಿ ತುಂಬಿದೆಯಲ್ಲ ಕನಸು
ಅದು
ಹೀಗೆ ಉಳಿಯ ಬೇಕಿದ್ದರೆ
ಕನಸಿಗೆ ದಾರಿಯನ್ನು
ನೀನು ಹುಡುಕ ಬೇಕು

ಅದಲ್ಲ ..ಸರಿ
ಮೇಜಿನ ಮೇಲಿದೆಯಲ್ಲ
ನನ್ನ ಕನ್ನಡಕ
ಅದನ್ನು ತೆಗೆದು ಕೊಂಡು ಬಾ-
ಹಾಗೆ
ಆ ಕಿಟುಕಿ ಬಾಗಿಲನ್ನೂ
ತುಸು ತೆಗೆ
ದೂರದ ಬೆಟ್ಟದ ಮೇಲೊಂದು
ಅಪರೂಪದ ಪುಷ್ಪ
ಅರಳುತ್ತದೆ..
ನಾನು ಅದನ್ನು ನೋಡ ಬೇಕು..

‍ಲೇಖಕರು Admin

29 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading