ದಕ್ಲ ಕಥಾ ದೇವಿ ಕಾವ್ಯ – ವಿಶಿಷ್ಟ ರಂಗಾನುಭವ…

ಅಶೋಕ ವದ೯ನ

ದಕ್ಲಕಥಾ ದೇವಿಕಾವ್ಯ ಎಂಬ ಇನ್ನೊಂದೇ ‘ನಾಟಕ’ವನ್ನು ನೋಡಲು ನಾನು ಎಂದಿನಂತೇ ಚರವಾಣಿಯನ್ನು ಮೌನಕ್ಕೆ ನೂಕಿ ಕಾದಿದ್ದೆ. (೨೩-೧-೨೩, ಸಂತ ಅಲೋಶಿಯಸ್ ಕಾಲೇಜ್) ನೇಪಥ್ಯದಿಂದ ಕಲಾವಿದರ ಸಮೂಹ ಪ್ರಾರ್ಥನೆಯೋ ಸ್ವರಾನುಸಂಧಾನದ ಬೊಬ್ಬೆಯೋ ಪ್ರೇಕ್ಷಕರಲ್ಲಿ ಮನವಿಯೋ ನಿಯತ ಅಂತರದಲ್ಲಿ ಮೂರು ಗಂಟಾನಾದವೋ ಕೇಳಲೇ ಇಲ್ಲ. ಪ್ರೇಕ್ಷಕರ ಗುಜುಗುಜು ಇದ್ದಂತೇ ಧ್ವನಿವರ್ಧಕದಲ್ಲಿ ಹಳೆಗಾಲದ ಸಿನಿಹಾಡು “ಶಿವಪ್ಪಾ ಕಾಯೋ ತಂದೆ…” ಶುರುವಾಯ್ತು, ಪೂರ್ಣ ಹರಿದುಬಂತು. “ಇದೇನು ಬಡವನ ಹೊಟ್ಟೆಯ ಕರೆ…” ಎಂದುಕೊಂಡೆ. ಅದರ ಬೆನ್ನಿಗೆ ರಂಗ ಒಂದಷ್ಟು ಹೊತ್ತು ಪೂರ್ಣ ಕತ್ತಲೆಗೆ ಜಾರಿತು. “ಇದ್ಯಾಕಪ್ಪಾ” ಅನಿಸಿತು.

ಧ್ವನಿವರ್ಧಕ ಇನ್ನೊಂದೇ ಹಳೆಗಾಲದ ಸಿನಿ-ಆರ್ತ ಗೀತೆ “ಈ ದೇಹದಿಂದ ದೂರನಾದೆ ಏಕೆ ಆತ್ಮನೇ…” ಎತ್ತಿಕೊಂಡಿತು. “ಹಸಿವಿಗೆ ನಿರಾಕರಣವೇ (ಕತ್ತಲು) ಉತ್ತರವಾದರೆ ಮರಣವೇ ಸರಿ…” ಎಂದಿರಬಹುದೇ ಎಂದು ಯೋಚನೆಗೆ ಬಿದ್ದೆ. ಹಾಡು ಮುಗಿಯುತ್ತಿದ್ದಂತೆ ಸುಮ್ಮನೇ ನಡೆದು ಬಂದೊಬ್ಬ ತಮಟೆಗಾರ ಮೊದಲು ಹಸಿವಿನಿಂದ ಸತ್ತ ಕಟುವಿಗೆ ಕನಲಿದಂತೆ ಒಂದಷ್ಟು ಕಿವಿಗಡಚಿಕ್ಕುವಂತೆ ಬಡಿದ. ಮತ್ತೆ “ಜೀವನ ನಿರಂತರ” ಎನ್ನುವ ಸತ್ಯ ತಿಳಿದವನಂತೆ ಬಡಿತದಲ್ಲಿ ಸಮಾಧಾನಿಯಾದ, ಸಣ್ಣ ಚಮತ್ಕಾರವನ್ನೂ ತೋರಿದ. ಅವಿದ್ಯೆ ಮತ್ತು ದಾರಿದ್ರ್ಯಗಳ ಮೇಲಾಟದಲ್ಲೂ ನಾವು ಬಳಲದಂತೆ ಉಡಾಳ ಮಾತುಗಳ ರಂಜನೆಯನ್ನೂ ಕೊಟ್ಟ. ಈ ಕೊನೆಯಲ್ಲಿ, “ಮೂರು ದಾರಿ ಸೇರುವಲ್ಲಿ”ಗೆ (ರಂಗದ ಹಿನ್ನೆಲೆಯಲ್ಲಿ) ಗಂಟು ಗದಡಿಗಳೊಡನೆ ನಿಧಾನಕ್ಕೆ ಬಂದು ತಂಗಿದ ‘ದಕ್ಲರ ಮೇಳ’, ನಾಟಕದ ಪ್ರಸ್ತಾಪ ಮಾಡಿತು!

ಬಂದದ್ದು ಮೇಳವೋ ಶಾಶ್ವತ ನೆಲೆಹೀನರ ಜೀವನ ಪುಟದ ಇನ್ನೊಂದೇ ದಿನಚರಿಯೋ ಎಂಬಂತೆ ಮಾತು, ವಿವಿಧ ಚಟುವಟಿಕೆಗಳು, ಹಾಡು, ಕುಣಿತ ಅನಾವರಣಗೊಳ್ಳುತ್ತಾ ಹೋಯಿತು. ಒಟ್ಟಾರೆ ಸುಮಾರು ಒಂದೂವರೆ ಗಂಟೆಯ ರಂಗಪ್ರಯೋಗ, ದಕ್ಲದೇವಿ ಎಂಬ ಅಗೋಚರ ಶಕ್ತಿಯ ಆರಾಧನೆಯಂತಿದ್ದರೂ ದಕ್ಲ ಸಮುದಾಯದ ವರ್ತಮಾನದ ದುಸ್ಥಿತಿಯ ವಿವರಣೆಯೂ ಆಗಿತ್ತು. ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ದಕ್ಲರದು ತೀರಾ ಅಲ್ಪಸಂಖ್ಯಾತ ಮತ್ತು ಅತ್ಯಂತ ದಮನಿತ ಸಮುದಾಯ. ಕೆಬಿ ಸಿದ್ಧಯ್ಯನವರ (೧೯೫೪-೨೦೧೯) ಆತ್ಮಕತೆ ಹಾಗೂ ಕಾವ್ಯಗಳು ದಕ್ಲ ಸಮುದಾಯದ ಅಧ್ಯಯನಾತ್ಮಕ ಕಥನವೇ ಆಗಿದೆ. ಅವನ್ನು ಕೆಪಿ ಲಕ್ಷ್ಮಣ್ ರಂಗರೂಪಕ್ಕಳವಡಿಸಿ, ಬೆಂಗಳೂರಿನ ‘ಜಂಗಮ್ ಕಲೆಕ್ಟಿವ್ ರಂಗ ತಂಡ’ಕ್ಕೆ ನಿರ್ದೇಶಿಸಿದ್ದಾರೆ. ಇದನ್ನು ರಂಗಭಾಷೆಯಲ್ಲಿ ಗುರುತಿಸುವ ಅಥವಾ ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ. ಆದರೆ ಪ್ರಯೋಗವನ್ನು ನೋಡುತ್ತಿದ್ದಂತೆ, ಇದುವರೆಗೆ ನಾನು ತಿಳಿದಂತೆ – ನಾಟಕವೆಂದರೆ ಜೀವನದ ಪರಿಷ್ಕೃತ ಪ್ರತಿಬಿಂಬ ಎನ್ನುವುದು ಹುಸಿಯೆನ್ನಿಸಿತು.

ಆ ನಾಟಕಗಳೆಲ್ಲ ನಿಂತ ನೀರಿಗೆ ಕಟ್ಟಿದ ಅಲಂಕಾರಗಳಂತೇ ತೋರಿದವು. ಅವು ಪ್ರದರ್ಶನಕ್ಕೆ ಬರುವ ಮೊದಲಿನ ಸೂಚನೆಗಳು “ಕಲಾವಿದರ ಭಾವಾವೇಶ ಕೆಡುವಂತೆ ಫೋಟೋಗ್ರಫಿ ಮಾಡಬೇಡಿ ಮತ್ತು ಪ್ರೇಕ್ಷಣೆಯ ಏಕಾಗ್ರತೆಗೆ ಭಂಗಬಾರದಂತೆ ಚರವಾಣಿಗಳನ್ನು ಮೌನಕ್ಕೆ ತಳ್ಳಿ ಅಥವಾ ಸ್ವಿಚ್ಚಾಫೇ ಮಾಡಿ….” ಇತ್ಯಾದಿ ಯಾಕೋ ಹುಸಿ ಅನ್ನಿಸಿತು! ಅಂಥಾ ಬಾಹ್ಯ ಹೇರಿಕೆಗಳೇನೇ ಇದ್ದರೂ ಮನೋವ್ಯಾಪಾರಕ್ಕೆ ತನ್ನದೇ ಆಯ್ಕೆಗಳಿರುತ್ತವೆ ಎನ್ನುವುದಕ್ಕೆ ನಾನಿಲ್ಲಿ ಸಣ್ಣ ಉಪಕತೆ ಹೇಳಬೇಕಾಗುತ್ತದೆ,….

ಕದ್ರಿ ಜಾತ್ರೆಯ ಅಂಗವಾಗಿ ವರ್ಷಂಪ್ರತಿ ಹಿರಿಯ ಕಲಾವಿದರುಗಳ ತಾಳಮದ್ದಳೆ ಕೂಟ ನಡೆಯುತ್ತದೆ, ನಾನು ಅನೇಕ ಕೇಳಿದ್ದೇನೆ, ಕುಶಿಯೂ ಪಟ್ಟಿದ್ದೇನೆ. ಅಲ್ಲಿ ತತ್ಕಾಲೀನ ವೇದಿಕೆಯನ್ನು ದೇವಳದ ಹೊರ ಅಂಗಳಕ್ಕೆ ಪ್ರವೇಶಿಸುವ ಗೇಟಿನ ಎಡ ಮಗ್ಗುಲಿನಲ್ಲಿ ಮಾಡುತ್ತಾರೆ. ಮತ್ತೆ ಅಂದಾಜಿನಲ್ಲಿ ಒಂದಷ್ಟಗಲ ದಾರಿಗೆಂದು ಬಿಟ್ಟು, ಗೇಟಿನ ಬಲ ಮಗ್ಗುಲಿನಲ್ಲಿ ಪ್ರೇಕ್ಷಾವರ್ಗದ ಕುರ್ಚಿಗಳು ಇಡುತ್ತಾರೆ. ಸಾಕಷ್ಟು ಕಲಾರಸಿಕರೂ ಬರುತ್ತಾರೆ. ತಮಾಷೆ ಎಂದರೆ, ರಂಗ ಕಲಾಪ ನಡೆದಿದ್ದಂತೆಯೇ ನಡುವಿನ ದಾರಿಯಲ್ಲಿ ಕೇವಲ ದೇವಳದ ಭಕ್ತಜನ, ಕೆಲವೊಮ್ಮೆ ಪಿಕ್ಕಪ್ಪು, ಲಾರಿಯೂ ಹಾದು ಹೋಗುತ್ತಿರುತ್ತದೆ.

ರಂಗಮಂಚದ ಹಿಂದೆಯೇ ದೇವಳದ ಉಗ್ರಾಣವೋ ಅಡುಗೆ ಕೋಣೆಯೋ ಇದೆ. ಅಲ್ಲಿನ ದಡಬಡ ಸದ್ದಂತೂ ತಪ್ಪಿದ್ದೇ ಇಲ್ಲ. ಹೊರ ಮಗ್ಗುಲಿನ ಜಾತ್ರೆ ಗದ್ದಲ, ವಾಹನಗಳ ಚೀಂ ಪೀಂ ನಡೆದೇ ಇರುತ್ತದೆ. ಇವೆಲ್ಲಕ್ಕೂ ಕಳಶಪ್ರಾಯವಾಗಿ ಒಂದು ಹಂತದಲ್ಲಿ ಬ್ಯಾಂಡು, ಗರ್ನಾಲುಗಳೊಡನೆ ಉತ್ಸವ ದೇವರ ಹೊರಾಂಗಣ ಪ್ರದಕ್ಷಿಣೆ ಶುರುವಾಗುತ್ತದೆ. ಅದು ತೀರಾ ಸಮೀಪಿದಾಗ, ಪಾತ್ರಧಾರಿಗಳಿಗೆ ಪರಸ್ಪರ ಮಾತು ಕೇಳದಾದಾಗ ಮಾತ್ರ ಸಂವಾದ ತುಸು ತಡವರಿಸುವುದಿದೆ. ಉಳಿದಂತೆ ತಾಳ ಮದ್ದಳೆಯ ಓಘ ತುಂಡಾದದ್ದೇ ಇಲ್ಲ. ಕೂಟ ತನ್ನ ಪೌರಾಣಿಕ ಚೌಕಟ್ಟನ್ನು, ಭಾಷಾ ಮರ್ಯಾದೆಯನ್ನು ಮೀರಿದ್ದೂ ಇಲ್ಲ, ಪ್ರೇಕ್ಷಾಭಿಮಾನಿಗಳು ಆಭಾಸ ಎಂದು ಮೂಗು ಮುರಿದದ್ದೂ ಇಲ್ಲ….

ಆ ಕದ್ರಿಕೂಟದ ಅವಿಚಲಿತ ನಡೆ ಇಲ್ಲಿ ದಕ್ಲಕಥಾದ ರಂಗಪ್ರಸ್ತುತಿಯಲ್ಲಿತ್ತು. ಅಷ್ಟೇ ಅಲ್ಲ, ಇಲ್ಲಿ ದಕ್ಲದೇವಿ, ಗಂಗಾಮಾತೆಯರಿಂದ ತೊಡಗಿ ಕಂಪ್ಯೂಟರ್ ಫೇಸ್ ಬುಕ್ಕಿನವರೆಗೆ ಅನುಭವ ಪ್ರಪಂಚದ ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇತ್ತು. ರಾಮ (ಬಸುರಿಯನ್ನು ಕಾಡಿಗಟ್ಟಿದವ), ಗಾಂಧಿ (ಮೋ….ಕ…ಗಾಂಚೀದೀ), ಅಂಬೇಡ್ಕರರನ್ನೂ (ಓದಪ್ಪ) ನಿಸ್ಸಂಕೋಚವಾಗಿ ಒಡನಾಡಿಗರಂತೆ ಬಳಸಿಕೊಳ್ಳುವ ಸಹಜತೆ ಇತ್ತು. ಲಿಂಗ, ಭಾಷೆ, ಪರಿಕರಗಳೆಲ್ಲದರಲ್ಲೂ ಕೈಗೆಟಕಿದ್ದನ್ನು ಬಳಸಿಯೂ ಅಲೌಕಿಕವಾದ್ದನ್ನು ಸಾಧಿಸುವ ಸಾಮರ್ಥ್ಯ ಇತ್ತು. ಗಂಗಾಮಾತೆ, ಶಪಥದನುಡಿ, ಗಾಯನದ ಗುಂಜನ, ನೃತ್ಯದ ಬಿಡುಗಡೆ, ದೈವಾವೇಶ, ವರ, ಶಾಪವೇ ಮೊದಲಾದ ‘ಪವಿತ್ರ ಪರಿಕಲ್ಪನೆ’ಗಳನ್ನು ಬಳಸಿಯೂ ಕಳಚಿಕೊಳ್ಳುವ ದಿಟ್ಟತನ ಇತ್ತು.

ಶಿಷ್ಟ ಸಮಾಜ ಸಂಸ್ಕಾರದ ಭ್ರಮೆಯಲ್ಲಿ, ಅತಿರಂಜಿತ ಆಚರಣೆಗಳನ್ನು ಮಾಡಿ, ಫಲರೂಪದಲ್ಲಿ ಸಾಂಕೇತಿಕ ತೀರ್ಥ ಪ್ರಸಾದಗಳನ್ನು ಪಡೆಯುತ್ತವೆ. ದಕ್ಲರು ಅಂಥವನ್ನು (ಅಣಕಕ್ಕಲ್ಲ) ಸಹಜವೆನ್ನುವಂತೇ ಅಳವಡಿಸಿಕೊಂಡರೂ ನಿಜ ಅಗತ್ಯಗಳನ್ನೇ (ಹೆಂಡ, ಬಾಡು) ಸಾಕ್ಷಾತ್ಕರಿಸಿಕೊಳ್ಳುವ ಛಲ ತೋರಿದ್ದು ಕಣ್ಣು ತೆರೆಸುವಂತೇ ಇತ್ತು. ಅವರ ನಿಜ ಜೀವನದ ಆಶಯಗಳೇ ನೇರ ಆರಾಧನಾ ರೂಪ ಪಡೆದಂತಿತ್ತು.

‘ದೇವಿ’ಗೆ ನಡೆಮಡಿಯಾಗುವ ಬಟ್ಟೆ – ಅಮ್ಮನ ಸೀರೆಯ ಘಮಲನ್ನು ಮರೆಸಲಿಲ್ಲ, ದೇವಿ ವ್ಯವಾಹಾರಕ್ಕಿಳಿದಾಗ ಹುಸಿ ನುಡಿ ಕೊಡುವಲ್ಲಿ ಅಂಜಿಕೆಯಿರಲಿಲ್ಲ, ವರ ಕೊಟ್ಟಾಗ ಹೆಂಡದ ಹೊಳೆ ಬಾಡಿನ ದಂಡೆಯನ್ನು ಕೇಳುವಲ್ಲಿ ಸಂಕೋಚವೂ ಇರಲಿಲ್ಲ, ಇದುವರೆಗೆ ನಾಟಕಗಳು ಜೀವನದ ಪ್ರತಿಬಿಂಬವೆಂದು ರೂಢಿಸಿದ್ದ ನನ್ನ ಮನಸ್ಸಿಗೆ ಇಲ್ಲಿ ಬಿಂಬ ಪ್ರತಿಬಿಂಬಗಳ ನಡುವಣ ಗೆರೆಯೇ ಕಳೆದುಹೋದಂತನ್ನಿಸಿತು. ಪ್ರಸಂಗಗಳು ಬಂದಂತೆ ಸ್ವೀಕರಿಸುವ, ಬಾರದವುಗಳ ಕೊರಗುಳಿಯದಂತೆ ಕನಸುವ ನಿರ್ಲಿಪ್ತಿ ಈ ಪ್ರಸ್ತುತಿಯಲ್ಲಿತ್ತು. ಮಗನನ್ನು ವಿದ್ಯಾವಂತನನ್ನಾಗಿಸುವ ಹಂಬಲದಲ್ಲಿ ತಾಯಿ ‘ದೊಡ್ಡವರಲ್ಲಿ’ ನಾಲ್ಕಾಣೆ ಕೇಳಿ ಸೋತದ್ದು, ಕಾರಂತರ ಚೋಮ ಧಣಿಯರಲ್ಲಿ ತುಂಡು ನೆಲ ಕೇಳಿದ್ದನ್ನೇ ನೆನಪಿಸಿತು, ದಕ್ಲರ ಆರಾಧನೆ ಸಮುದಾಯದ ಕನಿಷ್ಠ ಆವಶ್ಯಕತೆಗಳನ್ನು ಆಶಿಸುವುರಲ್ಲೇ ತೃಪ್ತವಿತ್ತು!!

ಈಚೆಗೆ ಮಠೀಯ ಪ್ರಭಾವದ ವಿಪರೀತದಿಂದ ಅಸಂಖ್ಯ ಲಲಿತ ಕಲಾ ಪ್ರಕಾರಗಳು ತಮ್ಮ ಮೂಲವನ್ನು ದೇವತಾರಾಧನೆಯಲ್ಲಿ ಗುರುತಿಸಿಕೊಳ್ಳತೊಡಗಿವೆ. ಕಲಾಮೌಲ್ಯಗಳನ್ನು ಸಾಮುದಾಯಿಕ ಒರೆಗಲ್ಲಿನ ಮೇಲೆ ಬಲಿಗೊಡುವುದು ಕಾಣುತ್ತಿದ್ದೇವೆ. ಮಾನವಧರ್ಮದ ಚಲನಶೀಲತೆಯನ್ನು ಬಿಂಬಿಸುವ ಕಲೆ ಮಡಿ ಮೈಲಿಗೆಗಳಲ್ಲಿ ಕಳೆದುಹೋಗುತ್ತಿದೆ. ಅಂಥಾ ಮಠಗಳ ತಬ್ಬುಗೆಯಿಂದ ಹೊರಗಿರುವವರು ದಕ್ಲರು. ವರ್ತಮಾನದ ಸಾಮಾಜಿಕ ವರ್ಗೀಕರಣ ದಕ್ಲರನ್ನು ಅಂತ್ಯಜರನ್ನಾಗಿ ಕಾಣುವುದು ನಿಜ, ಸಹಜವಾಗಿ ಆರ್ಥಿಕ ಮತ್ತು ಆಧುನಿಕ ಸವಲತ್ತುಗಳಿಂದ ಅವರು ಗರಿಷ್ಠ ವಂಚಿತರಾಗಿರುವುದೂ ನಿಜ. ಆ ನಿಜದ ಪೂರ್ಣ ಅರಿವಿನೊಡನೆ ‘ನಾಟಕ’ದ ತಮಟೆಗಾರ ಕೊನೆಯಲ್ಲಿ ಹೇಳಿದ ಮಾತು ನನಗಿನ್ನೂ ಅರಗಿಸಿಕೊಳ್ಳಲಾಗಿಯೇ ಇಲ್ಲ. ಹಾಗಾಗಿ ಆ ಅದ್ಭುತ ಪ್ರಸ್ತುತಿಯ ಕುರಿತು ಏನಾದರೂ ಬರೆಯುವಲ್ಲೂ ಇಷ್ಟು ವಿಳಂಬಿಸಿದೆ, ಕ್ಷಮಿಸಿ.

‍ಲೇಖಕರು Admin

January 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: