ಇಸ್ಮಾಯಿಲ್ ತಳಕಲ್ ಓದಿದ ‘ಭೂಮಿಯ ಋಣ’

ಇಸ್ಮಾಯಿಲ್ ತಳಕಲ್

ಅಮ್ಮ ಬಳಿಯಲ್ಲಿ ಕುಳಿತು ಉಸಿರಿದಂತಹ ಕತೆಗಳುಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬವನ್ನು ನಿರ್ವಹಿಸುತ್ತಾ ಬಂದಿರುವಲ್ಲಿ ಮಹಿಳೆ ಪ್ರಮುಖವಾಗಿ ನಿಲ್ಲುತ್ತಾಳೆ. ಸಮಾಜ ಮಹಿಳೆಯನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಾ ಬಂದಿದೆಯಾದರು ಪ್ರತ್ಯಕ್ಷವೋ ಪರೋಕ್ಷವೋ ಕೌಟುಂಬಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಕುಟುಂಬ ಇಲ್ಲಿ ಸಕುಂಚಿತವೂ ಅಲ್ಲ, ಸರಳವೂ ಅಲ್ಲ. ಅದು ವಿಶಾಲ ವ್ಯಾಪ್ತಿಯನ್ನು ಹೊಂದಿರುವಂತೆ ಸಂಕೀರ್ಣವೂ ಹೌದು. ಗ್ರಾಮಗಳಲ್ಲಿಯ ಕೌಟುಂಬಿಕ ವ್ಯವಸ್ಥೆಯೇ ಒಂದು ಸುಂದರ ಅನುಭವ. ಅಲ್ಲಿ ಮಾನವೀಯ ಸಂಬಂಧಗಳಿಗೆ ಗಟ್ಟಿ ಬಂಧವೇರ್ಪಟ್ಟಿರುತ್ತದೆ. ಪ್ರತಿ ಬಂಧಗಳಿಗೆ ಹೆಣ್ಣಿನ ಬೆಸುಗೆ ಬೆಸೆದುಕೊಂಡಿರುತ್ತದೆ. ಅವಳು ಪ್ರತಿ ಆಗು ಹೋಗುಗಳಿಗೆ ಖುಷಿ ಪಡುತ್ತಾಳೆ, ಮರಗುತ್ತಾಳೆ, ಚಡಪಡಿಸುತ್ತಾಳೆ, ಕುಟುಂಬದ ನೌಕೆಗೆ ನಾವಿಕಳಾಗುತ್ತಾಳೆ. ಅವಳ ಈ ಎಲ್ಲಾ ತುಮುಲಗಳನ್ನು ಶೋಭಾ ಗುನ್ನಾಪೂರ ಅಮ್ಮನವರ ‘ಭೂಮಿಯ ಋಣ’ ಕತೆಗಳಲ್ಲಿ ಕಾಣುತ್ತೇವೆ.

ಶೋಭಾ ಗುನ್ನಾಪೂರರವರು ಗ್ರಾಮೀಣ ಕುಟುಂಬದ ಹಿನ್ನಲೆಯವರಾಗಿದ್ದರಿಂದ ತಮ್ಮದೇ ಅನುಭಗಳನ್ನು ಕಥೆಯಾಗಿಸಿದ್ದಾರೆ. ಇಲ್ಲಿಯ ಯಾವ ಕತೆಗಳೂ ಕೃತಕ ಅಂತನಿಸದೆ ಅವರು ಕಂಡುಂಡ ಭರ್ತಿ ಅನುಭವಗಳ ರಾಶಿ ಈ ‘ಭೂಮಿಯ ಋಣ’. ಕತೆಗಳನ್ನು ಕುಟುಂಬದೊಳಗಿನ ಕತೆಗಳು ಮತ್ತು ಕುಟುಂಬವು ಸಮಾಜದೊಂದಿಗೆ ಬೆಸೆದುಕೊಂಡಿರುವ ಕತೆಗಳು ಎಂದು ವಿಭಾಗಿಸಬಹುದೇನೋ!? ಯಾಕೆಂದೆರೆ ಯಾವುದೇ ದೇಶದ, ಭಾಷೆಯ, ಕಾಲದ ಕತೆಗಳು ಕುಟುಂಬರಹಿತವಾಗಿರಲು ಸಾಧ್ಯವಿಲ್ಲ ಅನಿಸುತ್ತದೆ. ‘ಭೂಮಿಯ ಋಣ’ ಸಂಕಲನದ ಕತೆಗಳು ಮೊದಲ ಕೆಟಗೆರಿಗೆ ಸೇರುತ್ತವೆ. ಇಲ್ಲಿಯ ಪ್ರತಿ ಕತೆಗಳಲ್ಲಿ ಶೋಭಾ ಗುನ್ನಾಪುರರವರೆ ಪಾತ್ರವಾಗಿ ಕಾಣುತ್ತಾರೆ, ಕಾಡುತ್ತಾರೆ.

ನೇರವಾಗಿ, ಸರಳವಾಗಿ ಬಿಚ್ಚಿಕೊಳ್ಳುವ ಇಲ್ಲಿಯ ಅಷ್ಟೂ ಕತೆಗಳಿಗೆ ಯಾವ ಪ್ಲ್ಯಾಶ್‌ಬ್ಯಾಕ್ ತಂತ್ರವಿಲ್ಲದ್ದು ಗಮನಾರ್ಹ. ರಂಗೋಲಿಯ ಚುಕ್ಕಿಗಳನ್ನು ಇಡುತ್ತಾ ಹೋಗುವಂತೆ ಒಂದು ಬಿಂದುವಿನಿಂದ ಸಹಜವಾಗಿ ಪ್ರಾರಂಭವಾಗುತ್ತಾ ಹೋಗಿ ಅಲ್ಲಿಯ ಘಟನೆಗಳು ಒಂದಕ್ಕೊಂದು ಬೆಸೆದುಕೊಂಡು ಯಾವುದೋ ಗಂಭೀರ ಘಟನೆಯೊಂದಿಗೆ, ಸಾವಿನೊಂದಿಗೆ ಕೊನೆಗೊಳ್ಳುತ್ತವೆ. ರಂಗೋಲಿ ಪೂರ್ಣಗೊಂಡಾಗ ಅಲ್ಲಿ ಕಾಣುವ ಸಂಕೀರ್ಣತೆ ಈ ಕತೆಗಳಲ್ಲಿಯೂ ಪ್ರತಿಫಲಿಸುತ್ತದೆ. ಎರಡಕ್ಕೂ ಬಣ್ಣಗಳಿಲ್ಲದಿರುವುದು ಸಕರಾತ್ಮಕ ಅಂಶ. ಶೋಭಾ ಅಮ್ಮನವರಿಗೆ ಸಾವು ತುಂಬಾ ಕಾಡಿರಬೇಕು. ಅಥವಾ ಸಾವಿನ ನೋವುಗಳನ್ನು ಹತ್ತಿರದಿಂದ ಕಂಡಿರಬೇಕು. ಅದಕ್ಕೆ ಇಲ್ಲಿಯ ಬಳಷ್ಟು ಕತೆಗಳು ಕುಟುಂಬದ ಪ್ರಮುಖ ಪಾತ್ರಗಳ ಸಾವಿನೊಂದಿಗೆ ಕೊನೆಗೊಳ್ಳುತ್ತವೆ. ಹಾಗೆ ಕೊನೆಗೊಳ್ಳುವಾಗ ಅತಿ ಭಾವುಕತನಕ್ಕೆ ಅಥವಾ ಸಿನಿಕತನಕ್ಕೆ ಜೋತು ಬೀಳದೆ ಸಹಜವೆಂಬಂತೆ ಅದನ್ನು ದಾಟಿಸುವಲ್ಲಿ ಕತೆಗಾರ್ತಿಯರು ಯಶಸ್ವಿಯಾಗಿದ್ದಾರೆ. ಇಲ್ಲಿಯ ಯಾವ ಕತೆ, ಪಾತ್ರ, ಸನ್ನಿವೇಶಗಳೂ ಆಡಂಬರಕ್ಕೊಳಗಾಗಿಲ್ಲ, ಯಾವುದ್ಯಾವುದೋ ಬಣ್ಣಗಳನ್ನು ಮೆತ್ತಿಕೊಂಡಿಲ್ಲ. ನಿರಾಭರಣ ಸುಂದರಿಯಂತೆ ಕಾಡುತ್ತವೆ, ತಳಮಳಿಸುತ್ತವೆ. ‘ನೋಡಿ, ಹಿಂಗೆಲ್ಲ ಆಗಿ ಹೋಯ್ತು’ ಎಂದು ಶೋಭಾ ಅಮ್ಮನವರು ನಮ್ಮ ಬಳಿಯಲ್ಲಿ ಕುಳಿತುಕೊಂಡು ನಮ್ಮ ಕಿವಿಯಲ್ಲಿ ಉಸುರಿದಂತಿವೆ ಕತೆಗಳು. ಇಲ್ಲಿಯ ಯಾವ ಕತೆಗಳೂ ಅದರೊಳಗಿನ ಯಾವ ಹೆಣ್ಣು ಪಾತ್ರಗಳೂ ತಮ್ಮ ಶೋಷಣೆ ಬಗ್ಗೆ ಮಾತನಾಡುವುದಿಲ್ಲ. ಯಾರನ್ನೋ ದ್ವೇಷಿಸುವುದಿಲ್ಲ. ಬಂಡಾಯವೆದ್ದು ಕೂಡುವದಿಲ್ಲ. ಅಳಲನ್ನು ತೊಡಿಕೊಳ್ಳುವುದಿಲ್ಲ. ತಮ್ಮ ಜೀವನದಲ್ಲಿ ಎಲ್ಲವೂ ಸಹಜವಾಗಿ ನಡೆದು ಹೋಯಿತು ಎಂಬಂತೆ ಪ್ರತಿ ಪಾತ್ರಗಳು ಕತೆ ಹೇಳುತ್ತವೆ.

‘ಬೇಗೆ’ ಕತೆಯ ದುಂಡವ್ವ, ಜೀಜಾಬಾಯಿ, ‘ಎಕ್ಕಲಗೆ ಜೋಗ’ ಕತೆಯ ಶರಣವ್ವ, ರೇಣವ್ವ, ‘ಬಂಗಾರದಂತ ಸಂಸಾರ’ ಕತೆಯ ನೀಲವ್ವ ಬೇರೆ ಬೇರೆ ಕತೆಯ ಇನ್ನಷ್ಟು ಮಹಿಳಾ ಪಾತ್ರಗಳು ಬದುಕಿನ ಹೊಡೆತಕ್ಕೆ ಸಿಕ್ಕು ಸಂಘರ್ಷಗಳಿಗೆ ತಮ್ಮನ್ನು ಒಡ್ಡಿಕೊಂಡು ಧೈರ್ಯವಾಗಿ ಬದುಕಲು ಹವಣಿಸುತ್ತವೆ. ಕೆಲವೊಂದು ಯಶಸ್ವಿಯಾದರೆ ಮತ್ತೊಂದಿಷ್ಟು ಸೋಲುತ್ತವೆ. ಆದರೆ ಬದುಕುವ ಛಲವಂತೂ ಅವು ಎಂದೂ ಬಿಡುವುದಿಲ್ಲ. ಮುತ್ತು ಕಟ್ಟಿಸಿಕೊಳ್ಳುವ ಅಂದರೆ ಹುಡುಗಿರನ್ನು ದೇವದಾಸಿಯರನ್ನಾಗಿಸುವ ಪದ್ಧತಿ ಇನ್ನೂ ಕೆಲವೊಂದು ಕಡೆ ಚಾಲ್ತಿಯಲ್ಲಿದೆ. ಅದರ ಧಾರುಣ ಸ್ಥಿತಿಯನ್ನು ‘ಎಕ್ಕಲಗೆ ಜೋಗ’ ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ.

ಗ್ರಾಮೀಣ ಜನರ ಸಂಭ್ರಮ ಹಾಗೂ ಸೌಂದರ್ಯಗಳಿರುವುದೇ ಜಾತ್ರೆ ಹಬ್ಬಗಳಲ್ಲಿ, ಮದುವೆ ಮುಂಜಿಗಳಲ್ಲಿ. ‘ನಮ್ಮೂರ ಗೊಲ್ಲಾಳ’ ಹಾಗೂ ‘ಆಟಬೋಟಾ ಬೇಕಾ? ಸಾಕಾ?’ ಕತೆಗಳಲ್ಲಿ ಈ ಸಂಭ್ರಮ ಕಾಣಬಹುದು. ಉತ್ತರ ಕರ್ನಾಟಕದ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಒಡಪು ಹಾಕಿ ಗಂಡನ ಹೆಸರು ಹೇಳುವುದು ಒಂದು ಪದ್ಧತಿ. ಅದು ಈ ನೆಲದ ಸಂಸ್ಕೃತಿಯೂ ಹೌದು. ಅದನ್ನು ‘ಆಟಬೋಟಾ ಬೇಕಾ? ಸಾಕಾ?’ ಕತೆಯಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಕತೆಗಾರ್ತಿಯವರು. ಆದರೆ ಈ ಕತೆಗಳಲ್ಲಿಯೂ ದುರಂತ ಅಂತ್ಯವಿದೆ, ಸಾವುಗಳಿವೆ. ಮತ್ತು ಅವು ಓದುಗನೆದೆಯಲ್ಲಿ ತಳಮಳವನ್ನೂ ಉಂಟು ಮಾಡುತ್ತವೆ.

‘ಅಕ್ಕನ ಮಗು’ ಹಾಗೂ ‘ತಿರುವು’ ಕತೆಗಳಲ್ಲಿ ಗಂಡ ಹೆಂಡತಿಯ ಸಾಂಸಾರಿಕ ತಾಪತ್ರಯಗಳಿದ್ದರೂ ಎರಡೂ ಕತೆಯ ಪಾತ್ರಗಳು ಬದುಕುವ ಛಲವನ್ನು ಬಿಡುವುದಿಲ್ಲ. ಹುಡುಗಿಯ ಅಭಿಪ್ರಾಯ ಕೇಳದೇ ಗಡಿಬಿಡಿಯಲ್ಲಿ ಮದುವೆ ಮಾಡಿಬಿಟ್ಟಾಗ ಆಗುವ ತೊಂದರೆ, ಜಟಿಲತೆಯನ್ನು ‘ತಿರುವು’ ಕತೆ ನಿರೂಪಿಸುತ್ತದೆ.
ವಿಜಾಪೂರದ ಸ್ಥಳೀಯ ಭಾಷೆ ಇಲ್ಲಿಯ ಗ್ರಾಮೀಣ ಕತೆಗಳಲ್ಲಿ ಹದವಾಗಿ ಬೆರೆತುಕೊಂಡಿದೆ. ಗ್ರಾಮೀಣ ಬದುಕು ಇಲ್ಲಿಯ ಅಷ್ಟೂ ಕತೆಗಳ ಹೂರಣ. ಬೇರೆನನ್ನೂ ಯೋಚಿಸದೇ ಕೇವಲ ಕತೆಗಳನ್ನು ಮಾತ್ರ ಹೇಳುವ ಶೋಭಾ ಗುನ್ನಾಪುರರವರ ಶೈಲಿ ಇಷ್ಟವಾಯ್ತು. ಅಷ್ಟೂ ಕತೆಗಳನ್ನು ನಮ್ಮದೇ ಮನೆಯ ಕತೆಗಳಂತೆ ಸಹಜವಾಗಿ ಕಟ್ಟುಕೊಟ್ಟಿದ್ದಾರೆ. ಕುಟುಂಬದ ಪ್ರತಿ ಘಟನೆಗಳನ್ನು ಗ್ರಹಿಸುವ ಶಕ್ತಿ ಅವರಲ್ಲಿದೆ. ಅವರೊಳಗೆ ಭರ್ತಿ ಜೀವನಾನುಭವವಿದ್ದು ಓದಿನ ವಿಸ್ತಾರವೂ ಹರವಿಕೊಂಡಿದೆ. ಮುಂದೆಯೂ ಶೋಭಾ ಅಮ್ಮನವರಿಂದ ಒಳ್ಳೆಯ ಕತೆಗಳನ್ನು ನಿರೀಕ್ಷಿಸುವವರಲ್ಲಿ ನಾನೂ ಒಬ್ಬ.

‍ಲೇಖಕರು Admin

January 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: